ನಾಗರಿಕತೆ
ಪರಿಚಯದ ನಗು ಅರಳಿಸಿದ ಪಕ್ಕದಮನೆಯಾಕೆಯನ್ನು
ನೋಡಿಯು ನೋಡದಂತೆ ನಟಿಸಿ ಮನೆಯೊಳಸೇರಿ
ಅಂತರ್ಜಾಲದಲ್ಲಿ ಕಂಡರಿಯದವರಾರಿಗೋ
friend request ಕಳಿಸಿದೆ .
ನಿಯಮಗಳು
ನಮ್ಮ ಸ್ಕೂಲು ತುಂಬ ಸ್ಟ್ರಿಕ್ಟ್ !
ಕೈಬಳೆ, ಕಾಲ್ಚೈನು ಲೋಲಾಕ್
ಧರಿಸಿ ಬರುವಂತಿಲ್ಲ ಗೊತ್ತಿಲ್ಲವೇ ನಿನಗೆ??
ಮುಂಗೈನ ಬಳೆ ಸರಿಸುತ್ತ , ಲೋಲಾಕ್ಕು ಝಳಪಿಸುತ್ತ
ಗಾಢ ಕೆಂಪು ತುಟಿಗಳಿಂದ ಮಣಮಣಿಸಿ
ಹೈ-ಹೀಲ್ಡ್ ಅನ್ನು ಟಕಟಕಿಸುತ್ತ
ಮರೆಯಾದಳು ಮಿಸ್ ಮಾಯಾ !!
ನೈತಿಕತೆ
ಕಷ್ಟ ಪಟ್ಟು ತೆರಿಗೆ ಕದ್ದು ಉಳಿಸಿ
ಹಾಸಿಗೆಯೊಳಗೆ ಬಚ್ಚಿಟ್ಟಿದ್ದ ಹಣದಲ್ಲಿ
ಸಾವಿರ ಕಾಣದಾದಾಗ
ಕೆಲಸದಾಳನ್ನು ಮನಬಂದಂತೆ ಥಳಿಸಿ
ನೈತಿಕತೆಯ ಪಾಠ ಹೇಳಿದ
ಕೋಟ್ಯಾಧಿಪತಿ !
ಚಟ
'ಗೆಳೆಯರ ಜೊತೆ ಸೇರಿ ಕದ್ದು ಮುಚ್ಚಿ
ಸಿಗರೇಟು ಸೇದುತ್ತಿಯೇನೋ '
ಹದಿಹರೆಯದ ಮಗನನ್ನು
ತರಾಟೆಗೆ ತೆಗೆದುಕೊಳ್ಳುತ್ತಾ
ತನ್ನ ಸಿಗಾರಿಗೆ ಬೆಂಕಿ ಹಚ್ಚಿದ ತಂದೆ.