19-Jul-2021

ಬೀವರ್ (Beaver)

 


 


ಇತ್ತೀಚೆಗೆ ನಮ್ಮಲ್ಲಿ ಮಾನವ ನಿರ್ಮಿತ ಡ್ಯಾಮ್ ಒಂದು ಬಹಳ ಸುದ್ದಿಯಲ್ಲಿತ್ತು. ಹರಿಯುವ ಅಗಾಧ ಜಲರಾಶಿಯನ್ನು ತಡೆದು ನಿಲ್ಲಿಸಿ ನೀರನ್ನು ನಮಗೆ ಬೇಕಾದಂತೆ ಉಪಯೋಗಿಸಿಕೊಳ್ಳುವ ಮಾನವನ ಬೌದ್ಧಿಕ ಸಾಮರ್ಥ್ಯಕ್ಕೆ ಅತ್ಯುತ್ತಮ ಉದಾಹರಣೆಯಾಗಿಯೂ, ಹಾಗೆಯೇ ಪರಿಸರವನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಿಕೊಂಡು ಅದರ ಸ್ವಾಭಾವಿಕತೆಯನ್ನು ಹಾಳುಗೆಡವಿ, ಅಲ್ಲಿ ವಾಸಿಸುವ ಇನ್ನಿತರ ಜೀವಿಗಳಿಗೆ ಉಪದ್ರವಕಾರಿಯಾಗುವ ಅವನ ಕ್ರೌರ್ಯಕ್ಕೂ ಏಕಕಾಲಕ್ಕೆ ಉದಾಹರಣೆಯಾಗಿವೆ ಅಣೆಕಟ್ಟುಗಳು. ಆದರೆ ಈ ಒಂದು ಪ್ರಾಣಿಯನ್ನು ನೋಡಿದಾಗ, ಹೀಗೆ ಅಣೆಕಟ್ಟುಗಳನ್ನು ನಿರ್ಮಿಸುವ ಬೌದ್ಧಿಕ ಶಕ್ತಿ ನಮಗೆ ಮಾತ್ರವೇ ಎಂದು ಹೆಮ್ಮೆ ಡುವುದೂ ಕೂಡ ಅರ್ಥಹೀನ ಎನ್ನಿಸಿಬಿಡುತ್ತದೆ.  ಬೀವರ್ ಎಂಬ ಪುಟಾಣಿ ಜೀವಿಯೊಂದು ಹರಿವ ತೊರೆ, ಕೊಳ್ಳಗಳಿಗೆ ಅಣೆಕಟ್ಟನ್ನು ಕಟ್ಟಿ ತನಗೆ ಬೇಕಾದ ವಾತಾವರಣವನ್ನು ನಿರ್ಮಿಸಿಕೊಂಡು ಬದುಕುತ್ತದೆ. ಒಂದೇ ವ್ಯತ್ಯಾಸವೆಂದರೆ ಅದರ ಅಣೆಕಟ್ಟಿನಿಂದ ಪರಿಸರಕ್ಕೆ, ಉಳಿದ ಜೀವಿಗಳಿಗೆ ಉಪಕಾರವಾಗುತ್ತದೆಯೆ ಹೊರತು, ನಮ್ಮ ಅಣೆಕಟ್ಟಿನಂತೆ ಅಪಕಾರ ಆಗುವುದಿಲ್ಲ.

ನಮ್ಮ ಇಲಿ ಹೆಗ್ಗಣಗಳ ಹತ್ತಿರದ ಸಂಬಂಧಿ ಬೀವರ್. ಅಮೆರಿಕಾ, ಮತ್ತು ಯೂರೋಪ್ ಏಷಿಯಾ ಖಂಡಗಳಲ್ಲಿ ಕಂಡುಬರುತ್ತದೆ. ಕೆರೆ, ಕೊಳ, ನದಿ, ಹೊಳೆಗಳ ಬಳಿ ವಾಸಿಸುವ ಉಭಯಜೀವಿ. ದೇಹವು ಸಾಮಾನ್ಯ ಮೂಷಿಕಗಳಂತೆಯೆ ಕಾಣಿಸುತ್ತದೆಯಾದರೂ ನೀರಿನಲ್ಲಿ ವಾಸಿಸಲು ಅನುಕೂಲವಾಗುವಂತೆ ಕೆಲವೊಂದು ಮಾರ್ಪಾಟುಗಳಾಗಿವೆ. ಹಿಂಬದಿಯ ಕಾಲುಗಳಲ್ಲಿ ಜಾಲಪಾದಗಳಿವೆ, ಮುಂಬದಿಯ ಕಾಲುಗಳಲ್ಲಿ ನಮ್ಮ ಕೈಗಳಂತೆಯೆ ಐದು ಬೆರಳುಗಳಿದ್ದು, ಕಲ್ಲು, ಮರಗಳಂತಹ ವಸ್ತುಗಳನ್ನು ಹಿಡಿದುಕೊಳ್ಳಲು ಅನುಕೂಲಕರವಾಗಿದೆ. ಬಲವಾದ ದವಡೆಗಳು ಚೂಪಾದ ಬೆಳೆಯುತ್ತಲೇ ಇರುವ ಹಲ್ಲುಗಳು ಮರಗಳನ್ನು ಕೊರೆದು ಬೀಳಿಸಲು ಸಹಕಾರಿಯಾಗಿದೆ. ಬಾಲವು ಅಗಲವಾಗಿ ದೋಣಿಯ ಹುಟ್ಟಿನಂತಿದ್ದು, ನೀರಿನಲ್ಲಿ ವೇಗವಾಗಿ ಈಜಲು ಸಹಕರಿಸುತ್ತದೆ. ಇದು ನೀರಿನಲ್ಲಿ ಗಂಟೆಗೆ ಐದು ಮೈಲು ವೇಗದಲ್ಲಿ ಈಜಬಲ್ಲದು. ಮೈತುಂಬ ಇರುವ ರೋಮಗಳು, ಎಣ್ಣೆಯನ್ನು ಸ್ರವಿಸುವ ಗ್ರಂಥಿಗಳು ನೀರಿನಲ್ಲಿ ಚರ್ಮವು ಸುಸ್ಥಿತಿಯಲ್ಲಿರಲು ಸಹಕಾರಿ. ಕಣ್ಣುಗಳನ್ನು ಆವರಿಸಿರುವ ತೆಳುವಾದ ಪರದೆಯು ನೀರು ಒಳಹೋಗುವುದನ್ನು ತಡೆಯುತ್ತದೆ.

ಮರಗಿಡಗಳನ್ನು ತಿಂದು ಬದುಕುವ ಸಸ್ಯಾಹಾರಿ. ಜೀವಮಾನವನ್ನು ಒಂದು ಸಂಗಾತಿಯೊಂದಿಗೆ ಕಳೆಯುತ್ತವೆ. ಹೊಳೆ, ಕೆರಕೊಳ್ಳಗಳ ಅಂಚಿನಲ್ಲಿ ಮನೆಕಟ್ಟಿಕೊಂಡು ಮಕ್ಕಳುಮರಿಗಳೊಡನೆ ವಾಸಿಸುವ ಅಪ್ಪಟ ಕುಟುಂಬ ಜೀವಿ. ಹಿರಿಯ ಮಕ್ಕಳು ತಮ್ಮ ಹೊಸ ತಮ್ಮ ತಂಗಿಯರನ್ನು ಸಾಕಲು ಸಹಕರಿಸುತ್ತವೆ ಕೂಡ! ಹೀಗೆ ತಮ್ಮ ತಂಗಿಯರನ್ನು ಸಾಕಿದ ಅನುಭವದೊಂದಿಗೆ, ತಾಯಿತಂದೆಯರಿಂದ ದೂರವಾಗಿ ತಮ್ಮದೇ ಆದ ಮನೆಯನ್ನು ನಿರ್ಮಿಸಿಕೊಂಡು ಸಂಗಾತಿಯೊಂದಿಗೆ ಹೊಸಸಂಸಾರ ಪ್ರಾರಂಭಿಸುತ್ತವೆ.

ಬೇಸಿಗೆಯಲ್ಲಿ ನೀರು ಕಡಿಮೆಯಾಗುತ್ತಿದ್ದಂತೆ ಬೀವರ್ ಹರಿಯುವ ನೀರಿಗೆ ಅಡ್ಡಲಾಗಿ ಅಣೆಕಟ್ಟನ್ನು ನಿರ್ಮಿಸಲು ಪ್ರಾರಂಭಿಸುತ್ತದೆ. ದಡದಲ್ಲಿರುವ ಮರಗಿಡಗಳ ರೆಂಬೆಕೊಂಬೆಗಳನ್ನು ತನ್ನ ಚೂಪಾದ ಹಲ್ಲುಗಳಿಂದ 45 ಡಿಗ್ರಿ ಕೋನದಲ್ಲಿ ಕತ್ತರಿಸಿ ಎಳೆದು ತರುತ್ತದೆ. ಗಟ್ಟಿಯಾದ ದೊಡ್ಡ ಕಲ್ಲುಗಳನ್ನು ದವಡೆಯಲ್ಲಿ ಅಡಗಿಸಿಕೊಂಡು, ಇಲ್ಲವೇ ಮುಂಗಾಲುಗಳಲ್ಲಿ ಹಿಡಿದುಕೊಂಡು ತಂದು ಹರಿವ ನೀರಿಗೆ ಅಡ್ಡಲಾಗಿ ಹಾಕುತ್ತದೆ. ಅದರ ಮೇಲೆ ರೆಂಬೆ ಕೊಂಬೆಗಳನ್ನು ಚಿಕ್ಕಪುಟ್ಟ ಮರಗಳನ್ನು ತಂದು ಹಾಕುತ್ತದೆ. ದಡದಲ್ಲಿ ಮರಗಳು ಸಿಗದೆ. ಸ್ವಲ್ಪ ಒಳಭಾಗದಲ್ಲಿದ್ದರೆ, ಅದರವರೆಗೆ ಕಾಲುವೆಗಳನ್ನು ತೋಡಿಕೊಂಡು ಹೋಗುತ್ತದೆ. ನೀರಿನಲ್ಲಿ ಮರಗಳನ್ನು ಸಾಗಿಸುವುದು ಹಾಗೂ ವೈರಿಗಳಿಂದ ತಪ್ಪಿಸಿಕೊಳ್ಳುವುದು ಸುಲಭವಾಗುವುದರಿಂದ ಈ ಉಪಾಯ ಮಾಡುತ್ತದೆ.  ಹೀಗೆ ತಡೆದು ನಿಲ್ಲುವ ನೀರಿಗೆ ಹೊಂದಿಕೊಂಡಂತೆ ದಡದಲ್ಲಿ ಅಥವಾ ನೀರಿನಲ್ಲಿ ತನ್ನ ಮನೆಯನ್ನು ನಿರ್ಮಿಸಿಕೊಳ್ಳುತ್ತದೆ ಇದಕ್ಕೆ ಬೀವರ್ ಲಾಡ್ಜ್ ಎಂದು ಹೆಸರು. ಚಳಿಗಾಲ ಪ್ರಾರಂಭವಾಗುತ್ತಿದ್ದಂತೆಯೆ ಮೇಲಿನ ನೀರು ಹೆಪ್ಪುಗಟ್ಟಿದರೂ ಕೂಡ ಒಳಗಿರುವ ನೀರು ಹಾಗೆಯೆ ಉಳಿಯುತ್ತದೆ. ಅದರಿಂದಾಗಿ ಗೂಡಿಗೆ ರಕ್ಷಣೆ ಸಿಗುತ್ತದೆ, ಈಜಿ ಆಹಾರ ಹುಡುಕಿ ತಂದು ಮರಿಗಳನ್ನು ಬೆಳೆಸಲು ಸಹಾಯವಾಗುತ್ತದೆ.

ತನ್ನ ಅನುಕೂಲಕ್ಕಾಗಿ ಬೀವರ್ ನೀರಿಗೆ ಅಣೆಕಟ್ಟು ಕಟ್ಟುವುದರಿಂದಾಗಿ ಆ ಪ್ರದೇಶದಲ್ಲಿ ಸದಾ ನೀರು ಇರುವಂತಾಗಿ, ಇತರ ಅನೇಕ ಜೀವಿಗಳಿಗೆ ಉಪಯೋಗವಾಗುತ್ತದೆ. ಅಲ್ಲಿಯ ವಾತಾವರಣವೇ ಬದಲಾಗುತ್ತದೆ. ಸದಾ ಜೀವಿಗಳ ಚಟುವಟಿಕೆಯಿಂದಿರು ಆ ಸ್ಥಳವು ಚಳಿಗಾಲದಲ್ಲಿ ಆಹಾರದ ಕೊರತೆಯಿಂದ ಬಳಲುವ ಬೇಟೆಗಾರ ಪ್ರಾಣಿಗಳನ್ನು ಆಕರ್ಷಿಸುತ್ತದೆ. ಮರಗಿಡಗಳ ಬಳಿಗೆ ತಲುಪಲೆಂದು  ಬೀವರ್ ಕೊರೆಯುವ ಕಾಲುವೆಗಳಿಂದಾಗಿ ಆ ಪ್ರದೇಶದಲ್ಲೂ ನೀರು ಹರಿಯತೊಡಗುತ್ತದೆ. ಮರಗಿಡಗಳು ದಟ್ಟವಾಗಿ ಬೆಳೆಯಲು ಅನುಕೂಲವಾಗುತ್ತದೆ.   ಅನೇಕ ಪ್ರಾಣಿಗಳಿಗೆ ಕುಡಿಯಲು ನೀರು ಸಿಗುತ್ತದೆ, ಮೀನು ಮೊದಲಾದ ಜಲಚರಗಳಿಗೆ ಅನುಕೂಲವಾಗುತ್ತದೆ. ಹೀಗೆ ಒಂದಿಡೀ ಪ್ರದೇಶದ ವಾತಾವರಣದ ಮೇಲೆ, ಜೀವಿಗಳ ಮೇಲೆ ಪ್ರಭಾವ ಬೀರಬಲ್ಲ ಪ್ರಾಣಿಯಾದ್ದರಿಂದ ಬೀವರ್ ಎಂಬ ದಂಶಕವನ್ನು “ keystone species” ಎನ್ನಲಾಗುತ್ತದೆ. ಅಂದರೆ ಜೀವಜಗತ್ತಿನಲ್ಲಿ ಅತೀ ಪ್ರಾಮುಖ್ಯತೆಯಿರುವ ಜೀವಿ. ಒಂದು ವೇಳೆ ಇವುಗಳಿಗೇನಾದರೂ ತೊಂದರೆಯಾದರೆ ಅವುಗಳನ್ನು ಅವಲಂಬಿಸಿ ಬದುಕುವ ಅನೇಕ ಜೀವಿಗಳು ತೊಂದರೆಗೊಳಗಾಗುತ್ತವೆ.

ಈಗ ಸಧ್ಯದಲ್ಲಿ ಈ ಬೀವರ್ ಗಳು  ಅಳಿವಿನಂಚಿನಲ್ಲಿರುವ ಜೀವಿಗಳ ಪಟ್ಟಿಯಲ್ಲಿ ಇಲ್ಲ. ಅಂದರೆ ಸಂಖ್ಯೆ ಸಾಕಷ್ಟಿದೆ. ಆದರೆ ಅವುಗಳ ಚರ್ಮಕ್ಕಾಗಿ, ಮಾಂಸಕ್ಕಾಗಿ ಬೇಟೆಯಾಡುವುದು ದಿನೇದಿನೇ ಹೆಚ್ಚುತ್ತಿದೆಯಾದ್ದರಿಂದ ಬಹುಬೇಗ ಆ ಪಟ್ಟಿಯಲ್ಲಿ ಸ್ಥಾನ ಪಡೆಯಬಹುದೇನೋ ಎಂಬ ಅಭಿಪ್ರಾಯವೂ ಇದೆ.

ಇಷ್ಟು ಪುಟ್ಟ ಪ್ರಾಣಿಯೊಂದು, ತನಗಿಂತ ಎಷ್ಟೋ ದೊಡ್ಡ ಗಾತ್ರದ ಮರಗಿಡಗಳನ್ನು ಕೊರೆದು, ಎಳೆದು ತಂದು, ಹರಿಯುವ ಅಗಾಧ ಜಲರಾಶಿಯನ್ನು ತಡೆದು ನಿಲ್ಲಿಸಿ, ಅದೂ ಸಹ ಪರಿಸರಕ್ಕೆ ಯಾವುದೇ ಹಾನಿಯಾಗದಂತೆ ಇನ್ನಿತರ ಜೀವಿಗಳಿಗೂ ಅನುಕೂಲವಾಗುವಂತೆ ತನ್ನ ಮನೆಯನ್ನು ನಿರ್ಮಿಸಿಕೊಳ್ಳುವ ಕೌಶಲದೆದುರು, ಅತೀ ಬುದ್ಧಿವಂತ ಜೀವಿಗಳೆಂದು ನಮಗೆನಾವೇ ಕೊಟ್ಟುಕೊಂಡಿರುವ ಬಿರುದು ಮಂಕಾಗುತ್ತದೆ.

ಈ ಕೆಳಗೆ ಕೊಟ್ಟಿರುವ ಕೊಂಡಿಯಲ್ಲಿ ಇವುಗಳ ಬಗ್ಗೆ ಇರುವ ವಿಡಿಯೋ ನೋಡಬಹುದು.

https://www.youtube.com/watch?v=O67TNQrEq_w

https://www.youtube.com/watch?v=Ic3x8OVYe80

01-Mar-2020

ಮಾಯಾಲೋಕ{disclaimer - ಹೆಂಡಿಂಗ್ ನೋಡಿ  ತೇಜಸ್ವಿಯವರ "ಮಾಯಾಲೋಕ"ದ ಬಗ್ಗೆ ಏನೋ ಬರೆದಿರಬೇಕು ಎಂದುಕೊಳ್ಳಬೇಡಿ.  ಇದಕ್ಕೆ ಅದಕ್ಕಿಂತ ಸೂಕ್ತವಾದ ಹೆಸರು ದೊರಕಲಿಲ್ಲವಾದ್ದರಿಂದ ಈ ಹೆಸರು}

ಊರಿಗೆ ಹೋದಾಗಲೆಲ್ಲ ನಾನು ಹೆಚ್ಚಿನ ಸಮಯ ಕಳೆಯುವುದು ಅಂಗಳದಲ್ಲೇ. ಅಲ್ಲಿ ಅಕ್ಕ ಬೆಳೆಸಿರುವ ಒಂದಿಷ್ಟು ಸೇವಂತಿಗೆ, ದಾಸವಾಳ, ಕರಿಬೇವು, ಗುಲಾಬಿ ಗಿಡಗಳು, ಆ ಗಿಡಗಳನ್ನಾಶ್ರಯಿಸಿ ಬದುಕುವ ಹೆಸರು ಗೊತ್ತಿಲ್ಲದ ಅನೇಕಾನೇಕ ಕೀಟಗಳು ಇವನ್ನೆಲ್ಲಾ ಗಮನಿಸುತ್ತಾ ಕುಳಿತುಕೊಳ್ಳುವುದು ಸ್ವರ್ಗ.  ಎದುರಿನ  ರಸ್ತೆಯಲ್ಲಿ ಒಂದಿಷ್ಟು ದನಗಳು ಬಂದು ಕರೆಂಟ್ ಕಂಬಕ್ಕೆ ಮೈ ತಿಕ್ಕಿ ತುರಿಕೆ ಪರಿಹರಿಸಿಕೊಳ್ಳುವುದು, ಮಂಗಗಳು ತಮ್ಮ ಮರಿಗಳನ್ನು ಎದೆಗವಚಿಕೊಂಡು ತೆಂಗಿನಮರವನ್ನು ಸರಸರನೆ ಏರಿ ತೆಂಗಿನಕಾಯಿಯನ್ನು ಕಿತ್ತು ನೀರು ಕುಡಿದು ಎಸೆಯುವುದು, ಯಾರಾದರೂ ಮಾತನಾಡಿಸಿದರೆ ಕುಣಿಕುಣಿದು ಮೈಮೇಲೆ ಬರುವ ಸುಂದರಿ ಎಂಬ ಬೀದಿನಾಯಿಯ ನರ್ತನ ಎಲ್ಲವೂ ನನ್ನ ಪಾಲಿಗೆ ಎಷ್ಟುಬಾರಿ ನೋಡಿದರೂ ಬೇಸರವಾಗದ "ಮಲೆಗಳಲ್ಲಿ ಮದುಮಗಳು" ನಾಟಕದಂತೆ!!

ಇತ್ತೀಚೆಗೊಮ್ಮೆ ಊರಿಗೆ ಹೋದಾಗ ಹೀಗೆ ಒಂದು ಸೇವಂತಿಗೆ ಗಿಡವನ್ನು ನೋಡುತ್ತಾ ನಿಂತಿದ್ದೆ. ಹೂವುಗಳೆಲ್ಲಾ ಅರಳಿ ಬಾಡುವ ಹಂತದಲ್ಲಿದ್ದವು. ಗಿಡದ ಅನೇಕ ಎಲೆಗಳೂ ಬಾಡಿದ್ದವು. ಆಗ ಒಂದು ರೆಂಬೆಯಿಂದ ಇನ್ನೊಂದು ರೆಂಬೆಗೆ ತೆಳುವಾದ ಜೇಡರ ಬಲೆಯಂತಹ ದಾರ ಇರುವುದು ಕಾಣಿಸಿತು, ಹಾಗೆ ಅಲ್ಲಿ ಅನೇಕ ಜೇಡಗಳು ಬಲೆ ಕಟ್ಟಿಕೊಂಡಿರುವುದು ಅತೀ ಸಾಮಾನ್ಯ. ಆದರೆ ಈ ತೆಳುವಾದ ಎಳೆಯಲ್ಲಿ  ಒಣಗಿದ ಸೇವಂತಿಗೆ ಎಲೆಯಂತಿದ್ದ ಕಸವೊಂದಿತ್ತು. ಅದು ನಿಧಾನವಾಗಿ ಮುಂದೆ ಚಲಿಸುತ್ತಿತ್ತು!  ಗಾಳಿಯಿಂದಾಗಿ ಹಾಗೆ ಕಾಣಿಸುತ್ತಿದೆಯೇನೋ ಎಂದುಕೊಂಡರೂ ಸ್ವಲ್ಪ ಅನುಮಾನವಾಗಿ ಅದನ್ನೇ ಗಮನಿಸುತ್ತಿದ್ದೆ. ನಿಧಾನವಾಗಿ ಆ ಬಲೆಯ ಎಳೆಯ ಮೇಲೆ ಮುಂದೆ ಹೋದ ಆ ಕಸದಂತಹ ವಸ್ತು ಆ ಕಡೆಯಿದ್ದ ರೆಂಬೆಯ ಬಳಿ ಹೋಗುತ್ತಿದ್ದಂತೆಯೆ ಮುಂದೆ ಮೂರು ಕಾಲು, ಹಿಂದೆ ಮೂರುಕಾಲುಗಳನ್ನು ಒಂದು ಕ್ಷಣ ಅಗಲಿಸಿತು. ತಕ್ಷಣ ಇದ್ಯಾವುದೋ ಕೀಟ ಎಂಬ ಉತ್ಸಾಹದಲ್ಲಿ ನಾನು ಎಳೆಯ ಸಮೇತ ಕೈಗೆತ್ತಿಕೊಂಡೆ. ಒಂದು ನಿಮಿಷ ನನ್ನ ಕೈಯಲ್ಲೇ ಆಕಡೆ ಈಕಡೆ ಚಲಿಸುತ್ತಿದ್ದ ಆ ಕೀಟ ಮತ್ತೊಂದು ಕ್ಷಣದಲ್ಲಿ, ಥೇಟ್ ಜೇಡ ಬಲೆಯನ್ನು ಅಂಟಿಸಿ ಅದರ ಎಳೆಯನ್ನು ಹಿಡಿದು ತೇಲಿ ಹೋಗುವಂತೆಯೆ ನನ್ನ ಕೈಯಿಂದ ಇಳಿದು ತೇಲಿಕೊಂಡು ಹೋಗಿ ಸೇವಂತಿಗೆಯ ಗಿಡದ ಮೇಲೆ ಬಿತ್ತು, ನಂತರ ಎಷ್ಟೇ ಹುಡುಕಿದರೂ ಕಾಣಿಸಲೇ ಇಲ್ಲ.
ಒಣಗಿದ ಸೇವಂತಿಗೆ ಎಲೆ

ಒಣಗಿದ ಎಲೆಯಂತೆಯೆ ಕಾಣುವ ಕೀಟ
ಒಂದು ಕ್ಷಣಮಾತ್ರ ತನ್ನ ಇರುವನ್ನು ತೋರಿ ಕೊನೆಗೆ ನನ್ನ ಭ್ರಮೆಯೇನೋ ಎಂಬಂತೆ ಮಾಯವಾದ ಆ ಕೀಟ ಬಹುಶಃ ಸೇವಂತಿಗೆ ಗಿಡವನ್ನಷ್ಟೇ ತನ್ನ ವಾಸಸ್ಥಾನವನ್ನಾಗಿಸಿಕೊಂಡು ಬದುಕುತ್ತಿರುವ ಜೀವಿಯಾಗಿರಬಹುದೇ? ಅದಕ್ಕಾಗಿಯೇ ತನ್ನ ದೇಹವನ್ನು ಒಣಗಿದ ಸೇವಂತಿಗೆ ಎಲೆಯಂತಾಗಿಸಿಕೊಂಡಿದೆಯೇ ? ಇಂತಹ ಇನ್ನೆಷ್ಟು ಜೀವಿಗಳು ನಮಗೇ ಅರಿವಿಲ್ಲದಂತೆ ನಮ್ಮ ಸುತ್ತಮುತ್ತ ವಾಸಿಸುತ್ತಿವೆಯೋ ಬಲ್ಲವರಾರು?

ಆ ಕೀಟ ಕೊನೆಗೂ ಕಾಣಿಸಲೇ ಇಲ್ಲವೆಂಬ ನಿರಾಶೆಯಲ್ಲಿ, ಇನ್ನೇನಾದರೂ ನಾಟಕ ನೋಡಲು ಸಿಗಬಹುದಾ ಎಂದು ಪರೀಕ್ಷಿಸುತ್ತಿದ್ದವಳಿಗೆ ಮತ್ತೊಂದು ಗಿಡಕ್ಕೆ ಆಧಾರವಾಗಿ ನೆಟ್ಟಿದ್ದ ಕೋಲೊಂದರ ತುದಿಯಲ್ಲಿ ಪುಟ್ಟ ಜೇಡವೊಂದು ಕಾಣಿಸಿತು. ಅದರ ಬಣ್ಣ ಆ ಒಣಗಿದ ಕೋಲಿನ ಬಣ್ಣವನ್ನೇ ಹೋಲುತ್ತಿತ್ತು. ನಾನು ಅದರ ಒಂದು ಫೋಟೋ ತೆಗೆಯೋಣವೆಂದು ಮೊಬೈಲ್ ಹತ್ತಿರ ತೆಗೆದುಕೊಂಡು ಹೋದೆ, ಸರಕ್ಕನೆ ಕೋಲಿನ ಆಚೆ ದಿಕ್ಕಿಗೆ ಚಲಿಸಿತು. ನಾನು ಅಲ್ಲೇ ನನ್ನ ಕೈಚಾಚಿದೆ, ಈ ಬಾರಿ ಇನ್ನೊಂದು ದಿಕ್ಕಿಗೆ ತಿರುಗಿತು! ಹೀಗೇ ಅದು ಹೋದ ದಿಕ್ಕಿಗೆಲ್ಲ ನನ್ನ ಕೈ ಕೂಡಾ ಚಲಿಸಿದ್ದಷ್ಟೇ ಸಿಕ್ಕ ಭಾಗ್ಯ, ಫೋಟೋ ತೆಗೆಯುವಷ್ಟು ಸಮಯ ಅದು ಕೊಡಲೇ ಇಲ್ಲ. ನಾನು ಅದನ್ನು ಮುಟ್ಟಲಿಲ್ಲ, ಅದಿರುವ ಗಿಡವನ್ನೂ ಅಲುಗಾಡಿಸಲಿಲ್ಲ. ಕೇವಲ ಹತ್ತಿರ ಕೈ ಚಾಚಿದ್ದಷ್ಟೇ. ಆ ಪುಟಾಣಿ ಜೀವಿಗೆ ಕೂಡ  ತನ್ನ ಸುತ್ತಮುತ್ತ ನಡೆಯುವ ಅತೀ ಚಿಕ್ಕ ಬದಲಾವಣೆಯನ್ನೂ ಗ್ರಹಿಸುವ ಶಕ್ತಿ ಇದೆಯೆಂದಾಯ್ತಲ್ಲವೆ!

ಮನೆಯಂಗಳದ ಒಂದೆರಡು ಗಿಡಗಳಲ್ಲಿ ಇಷ್ಟೆಲ್ಲಾ ವೈವಿಧ್ಯಮಯ ನಾಟಕ ನಡೆಯುತ್ತಿರುತ್ತದೆಯಾದರೆ  ಇನ್ನು ಸಹಸ್ರಾರು ಗಿಡಮರಗಳುಳ್ಳ ಕಾಡಿನಲ್ಲಿನ್ನೆಷ್ಟು ನಾಟಕ ನಡೆಯುತ್ತದೋ ಎಂಬ ಕುತೂಹಲ ಮನದಲ್ಲಿ ಮೂಡಿತು. ನನಗೆ ಯಾವುದಾದರೂ ಕತೆ, ಕಾದಂಬರಿಗಳಲ್ಲಿ “ಕಾಡಿನ ನೀರವ ಮೌನದಲ್ಲಿ..ನಿಶ್ಚಲವಾಗಿದ್ದ ಕಾಡು...ಎಲೆ ಅಲುಗಿದ ಸದ್ದು.....” ಇತ್ಯಾದಿ ಸಾಲುಗಳನ್ನು ಓದಿದಾಗಲೆಲ್ಲಾ ಅನ್ನಿಸುತ್ತದೆ, ಕಾಡಿನಲ್ಲಿ ಅಷ್ಟೆಲ್ಲ ಜೀವಜಾಲ ಇರುವಾಗ ಮೌನ, ನಿಶ್ಚಲತೆ ಸಾಧ್ಯವೇ? ಪ್ರತೀಕ್ಷಣದಲ್ಲಿ ಅಲ್ಲೊಂದು ಜೈವಿಕಚಟುವಟಿಕೆ ನಡೆಯುತ್ತಿರಲೇಬೇಕು, ನಮ್ಮ ಕಿವಿಗೆ ಕೇಳಿಸದ, ಕಣ್ಣಿಗೆ ಕಾಣಿಸದ ಘಟನೆಗಳು ನಡೆಯುತ್ತಿರಲೇಬೇಕಲ್ಲವೆ?

20-Mar-2019

ವಿಚಿತ್ರ ಜೀವಿಗಳು ೪ - ನೀಲಿ ಸಮುದ್ರ ದೇವತೆಅನಿಮೇಷನ್ ಕಲಾವಿದನೊಬ್ಬ ಸೃಷ್ಟಿಸಿದ ಕಾಲ್ಪನಿಕ ಜೀವಿಯಂತೆ ಕಾಣುವ ಇದು ಹಿಸ್ಕು ಹುಳುವಿನ (ಸ್ಲಗ್) ವರ್ಗಕ್ಕೆ ಸೇರಿದ ಜೀವಿ. “ನೀಲಿ ದೇವತೆ”, ನೀಲಿ ಸಮುದ್ರ ದೇವತೆ, ನೀಲಿ ಡ್ರಾಗನ್ , ಇತ್ಯಾದಿ ಹೆಸರಿನಿಂದ ಕರೆಯಲ್ಪಡುವ ಇದರ ವೈಜ್ಞಾನಿಕ ನಾಮಧೇಯ Glaucus atlanticus .
ಮಲೆನಾಡಿಗರಿಗೆ ಹಿಸ್ಕನ ಹುಳ  ಎಂದರೆ ಮಳೆಗಾಲದಲ್ಲಿ ಮಾತ್ರ ಕಾಣಿಸಿಕೊಳ್ಳುವ ದಟ್ಟ ಹಸಿರು ಅಥವಾ ಕಪ್ಪು ಬಣ್ಣದ ಲೋಳೆ ಲೋಳೆಯಾದ ಜೀವಿಯ ನೆನಪು  ಬರುತ್ತದೆ. ನಿಧಾನವಾಗಿ ಚಲಿಸುವ ಬಸವನ ಹುಳುವಿನ ಸೋದರ ಸಂಬಂಧಿ ಹಿಸ್ಕನ ಹುಳ. ಬಸವನ ಹುಳುವಿಗೆ ಬೆನ್ನ ಮೇಲೆ ಚಿಪ್ಪಿರುತ್ತದೆ, ಹಿಸ್ಕನ ಹುಳುವಿಗೆ ಇರುವುದಿಲ್ಲ ಅಷ್ಟೇ.
ನಾವು ನೋಡುವ ಬಸವನ ಹುಳು ಅಥವಾ ಹಿಸ್ಕನ ಹುಳುಗಳೆಲ್ಲಾ ನೆಲವಾಸಿಗಳು. ಆದರೆ ಈ  “ನೀಲಿ ದೇವತೆ” ಸಮುದ್ರವಾಸಿ. ನೆಲವಾಸಿ ಸ್ಲಗ್ ಗಳಿಗಿಂತಲೂ ಅತ್ಯಧಿಕ ಸಂಖ್ಯೆಯಲ್ಲಿ ಸಮುದ್ರವಾಸಿ ಸ್ಲಗ್ ಗಳಿವೆ ಸುಮಾರು ಎರಡೂವರೆಯಿಂದ ಮೂರು ಸಾವಿರ ವಿವಿಧ ಪ್ರಭೇದದ ಸಮುದ್ರವಾಸಿ ಸ್ಲಗ್ ಗಳನ್ನು  ಜೀವವಿಜ್ಞಾನಿಗಳು ಗುರುತಿಸಿದ್ದಾರೆ. ವೈವಿಧ್ಯಮಯವಾದ ಹೊಳೆವ ಬಣ್ಣಗಳಲ್ಲಿ, ವಿವಿಧ ಆಕಾರಗಳಲ್ಲಿ ಸಮುದ್ರದಲ್ಲಿ ಇವು ಕಂಗೊಳಿಸುತ್ತವೆ.
ಈ ನೀಲಿ ಸಮುದ್ರ ಹಿಸ್ಕು ನೀರಿನಲ್ಲಿ ಅಂಗಾತನವಾಗಿ (ಅಂದರೆ ಬೆನ್ನು ಕೆಳಗೆ ಹೊಟ್ಟೆ ಮೇಲೆ) ತೇಲುತ್ತಿರುತ್ತದಂತೆ. ದೇಹದಲ್ಲಿರುವ ಗಾಳಿ ಚೀಲದ ಸಹಾಯದಿಂದ ಹೀಗೆ ತೇಲುವ ಸಾಮರ್ಥ್ಯ ಬರುತ್ತದೆ. ಅದರ ಹೊಟ್ಟೆಯ ಭಾಗದಲ್ಲಿ ಹೊಳೆವ ನೀಲಿ ಬಣ್ಣವೂ ಬೆನ್ನಿನ ಭಾಗದಲ್ಲಿ ಬೂದು ಬಣ್ಣವೂ ಇದೆ. ಕೆಳಗಿನಿಂದ ಮತ್ತು ಮೇಲೆನಿಂದ ನೋಡುವ ಭಕ್ಷಕಗಳಿಗೆ ಸುಳಿವು ಸಿಗದಂತೆ ನೀರಿನ ಬಣ್ಣದೊಂದಿಗೆ ಈ ಬಣ್ಣಗಳು ಮಿಳಿತಗೊಳ್ಳುತ್ತವೆ.
ಚಿಕ್ಕ ಪುಟ್ಟ ಜೀವಿಗಳನ್ನು ಕೊಂದು ತಿನ್ನುವ ಬೇಟೆಗಾರ ಇದು. ಆಶ್ಚರ್ಯಕರ ಸಂಗತಿಯೆಂದರೆ ತಾನು ಕೊಂದು ತಿನ್ನುವ ಕಂಟಕಚರ್ಮಿಗಳ ದೇಹದಲ್ಲಿರುವ ವಿಷಕೋಶವನ್ನು ತನ್ನ ದೇಹದಲ್ಲಿರುವ ಬೆರಳುಗಳಂತಹ ಅಂಗದಲ್ಲಿ ಶೇಖರಿಸಿಟ್ಟುಕೊಳ್ಳುವ ವಿಶಿಷ್ಟ ಕಲೆ ಇದಕ್ಕೆ ಸಿದ್ಧಿಸಿದೆ. ಹೀಗೆ ಶೇಖರಿಸಿಟ್ಟುಕೊಂಡ ವಿಷದಿಂದಾಗಿ ಭಕ್ಷಕಗಳು ಇದರ ಹತ್ತಿರ ಸುಳಿಯುವುದಿಲ್ಲ.
ಹೆಣ್ಣು ಗಂಡು ಎಂಬ ಬೇರೆ ಬೇರೆ ಜಾತಿ ಇವುಗಳಲ್ಲಿಲ್ಲ. ಒಂದೇ ದೇಹದಲ್ಲಿ ಎರಡೂ ರೀತಿಯ ಲೈಂಗಿಕಾಂಗಗಳಿವೆಯಾದ್ದರಿಂದ  ಬೇರೊಂದು ಜೀವಿಯೊಡನೆ  ವೀರ್ಯ ಬದಲಾಯಿಸಿಕೊಂಡು ಎರಡೂ ಏಕಕಾಲದಲ್ಲಿ ಮೊಟ್ಟೆಯಿಡುತ್ತವೆ.
ಈ ಸಮುದ್ರ ಸ್ಲಗ್ ಗಳು ಪ್ರಪಂಚದ ಎಲ್ಲಾ ಕಡೆಗಳಲ್ಲೂ ಕಂಡುಬರುತ್ತವೆ. ಆದರೆ ದಡಕ್ಕೆ ಬರುವುದು ಅಪರೂಪವಾದ್ದರಿಂದ ಜನಸಾಮಾನ್ಯರಿಗೆ ಕಾಣಿಸುವುದೂ ಕಡಿಮೆ. ಈ ರೀತಿಯ ಸಮುದ್ರಜೀವಿಗಳ ಬಗ್ಗೆ ವಿಜ್ಞಾನ ಪ್ರಪಂಚಕ್ಕೆ ತಿಳಿದಿರುವುದು ಅತ್ಯಲ್ಪ ಸಂಗತಿಗಳಷ್ಟೇ ಆಗಿರುವುದರಿಂದ, ಇನ್ನೂ ಇಂತಹ ಜೀವಿಗಳು ತಮ್ಮೊಡನೆ ಸೃಷ್ಟಿಯ ಅದೆಷ್ಟು ರಹಸ್ಯಗಳನ್ನು ಅಡಗಿಸಿಕೊಂಡಿವೆಯೋ . 

26-Jul-2018

ಲಕ್ಕಿ ಸೊಪ್ಪಿನ ಗಿಡ ಬೆಂಗಳೂರು ಮಹಾನಗರದ ಪಾರ್ಕೊಂದರಲ್ಲಿ  ಒಂದು ಚಿಕ್ಕ ಮರದ ಎಲೆಗಳನ್ನು ನೋಡಿದೊಡನೆ ಅರೆ ಇದು ಲಕ್ಕಿ ಸೊಪ್ಪಿನಂತಿದೆಯಲ್ಲಾ ಎಂದು ಯೋಚಿಸಿದೆ. ಒಂದು ಎಲೆಯನ್ನು ಕೀಳುತ್ತಿದ್ದಂತೆಯೆ ಚಿರಪರಿಚಿತವಾದ ಅದರ ವಾಸನೆ ಮೂಗಿಗಡರಿ ಮನಸ್ಸು ಬಾಲ್ಯಕ್ಕೆ ಜಾರಿತ್ತು.

ಮಲೆನಾಡಿನ ನಮ್ಮ ಊರಿನ ಮಣ್ಣುರಸ್ತೆಯ ಬದಿಯಲ್ಲಿ ಪೊದೆಯಂತೆ ಬೆಳೆವ ಸಸ್ಯ ಲಕ್ಕಿಗಿಡ. ಯಾರೂ ನೆಟ್ಟು ಬೆಳಸದ, ಯಾವುದೇ ಆರೈಕೆಯನ್ನೂ ಬೇಡದ, ತನ್ನ ಪಾಡಿಗೆ ತಾನು ಬೆಳೆದು ನಳನಳಿಸುವ ಈ ಗಿಡ ನಮಗೆ ಅನೇಕ ರೀತಿಯಲ್ಲಿ ಉಪಯೋಗವಾಗುತ್ತಿತ್ತು ಮತ್ತು ಕೆಲವೊಮ್ಮೆ ಅದರಿಂದ ಅಪಾಯವೂ ಎದುರಾಗುತ್ತಿತ್ತು.
ಈ ಗಿಡದ ಕಾಂಡಗಳು ತೆಳ್ಳಗಿರುತ್ತವೆ. ಗಾಳಿ, ಮಳೆಯ ಬಿರುಸನ್ನು ತಡೆದುಕೊಂಡು ನೆಟ್ಟಗೆ ನಿಲ್ಲುವ ಕಾಂಡವು ಸುಲಭವಾಗಿ ತುಂಡಾಗಂತೆ ಗಟ್ಟಿಮುಟ್ಟಾಗಿರುತ್ತವೆ. ಆದ್ದರಿಂದಲೇ ಈ ಸಸ್ಯದ ಕಾಂಡವು ಮಲೆನಾಡಿನ ಶಾಲೆಗಳ ಶಿಕ್ಷಕರುಗಳ ಅತ್ಯಂತ ಪ್ರೀತಿಯ ಆಯುಧವಾಗಿರುತ್ತಿತ್ತು. ತರಗತಿಯ “ಮಾನೀಟರ್’ ಗೆ ಮೇಷ್ಟ್ರು  “ಲಕ್ಕಿಬರಲು ತಗಂಬಾ ಹೋಗ್” ಎಂದು ಹೇಳಿದರೆಂದರೆ ಹೋಂ ವರ್ಕ್ ಮಾಡದವರಿಗೆ, ಪುಂಡ ಹುಡುಗರಿಗೆ ಕಾಲು ನಡುಗಲು ಪ್ರಾರಂಭವಾಗುತ್ತಿತ್ತು!! “ಲಕ್ಕಿಬರಲ” ಹೊಡೆತ ತಿಂದವರು ಅದರ ಉರಿಯನ್ನು ಅನೇಕ ದಿನಗಳವರೆಗೆ ಮರೆಯಲಾಗುತ್ತಿರಲಿಲ್ಲ!!  ತೀರಾ ತುಂಟ ಮಕ್ಕಳನ್ನು ದಾರಿಗೆ ತರಲು ಮನೆಗಳಲ್ಲೂ ಒಂದೆರಡಾದರೂ “ಲಕ್ಕಿ ಬರಲು” ಇದ್ದೇ ಇರುತ್ತಿತ್ತು. ಅಮ್ಮ ಅದನ್ನು ಇಟ್ಟ ಜಾಗವನ್ನು ನೋಡಿಕೊಂಡ, ಅಮ್ಮನಿಗೆ ಕಾಣದಂತೆ ಮುರಿದೆಸೆದು ಗೆದ್ದೆ ಎಂದು ಬೀಗುವ  ತುಂಟರಿಗೇನೂ ಕೊರತೆಯಿರಲಿಲ್ಲ. ಆದರೆ ಮನೆಯ ಅಕ್ಕಪಕ್ಕದಲ್ಲೋ ಎದುರಿನ ಬೀದಿಯಲ್ಲೋ ಲಕ್ಕಿಗಿಡದ ದೊಡ್ಡ ಪೊದೆಯೇ ಇರುತ್ತಿದ್ದುದರಿಂದ ಈ ಸಂತಸ ಹೆಚ್ಚುಹೊತ್ತು ಇರುತ್ತಿರಲಿಲ್ಲ ಅಷ್ಟೇ.

ಇನ್ನು “ಲಕ್ಕಿಸೊಪ್ಪು” ನಮಗೆ ಅನೇಕ ಆಟಕ್ಕೆ ಒದಗುತ್ತಿದ್ದ ಅತ್ಯಂತ ಪ್ರೀತಿಯ ವಸ್ತುವಾಗಿತ್ತು. ಅದೊಂದು ಪರಮ ಪವಿತ್ರವಾದ ಸೊಪ್ಪೆಂಬುದು ನಮ್ಮೆಲ್ಲರ ನಂಬಿಕೆಯಾಗಿದ್ದರಿಂದ ಪ್ರತೀ ದಿನ ಒಂದಿಷ್ಟು ಸೊಪ್ಪನ್ನು ಕೊಯ್ದು ಯೂನಿಫಾರಂ ಲಂಗದ ಸೀಕ್ರೆಟ್ ಜೇಬಿನಲ್ಲೋ ಅಥವಾ ಜಾಮಿಟ್ರಿ ಬಾಕ್ಸಿನಲ್ಲೋ ಇಟ್ಟುಕೊಂಡಿರುತ್ತಿದ್ದೆವು. ಹೀಗೆ ಸೊಪ್ಪನ್ನು ಇಟ್ಟುಕೊಂಡವರಿಗೆ ಸಗಣಿ ಮೆಟ್ಟುವುದರಿಂದಾಗಲೀ, “ಮುಚ್ಚಿಟ್ಟು” ಆದವರನ್ನು ಮುಟ್ಟಿದರಾಗಲೀ ಯಾವುದೇ ಮೈಲಿಗೆ(?) ಉಂಟಾಗುತ್ತಿರಲಿಲ್ಲ!! ಯಾರದರೂ ಹೀಗೆ ಸೊಪ್ಪು ಇಟ್ಟುಕೊಳ್ಳಲು ಮರೆತಿದ್ದರೆ ಅವರಿಗೆ ಹೇಗಾದರೂ ಸಗಣಿ ಮುಟ್ಟಿಸಿ ನೀನು ಮುಚ್ಚಿಟ್ಟು ದೂರ ಹೋಗು ಎಂದು ಅಣಕಿಸಿ ನಗುತ್ತಿದ್ದೆವು!!
ಇದೇ ಕಾನ್ಸೆಪ್ಟ್ ಇಟ್ಟುಕೊಂಡು ಒಂದು ಆಟವನ್ನು ಕೂಡಾ ಆಡುತ್ತಿದ್ದ ನೆನಪು. ಜೂಟಾಟದಂತೆಯೆ ಇದ್ದ ಈ ಆಟದಲ್ಲಿ ಲಕ್ಕಿ ಸೊಪ್ಪಿನ ಗಿಡವನ್ನು ಹಿಡಿದುಕೊಂಡವರನ್ನು ಕಳ್ಳ ಔಟ್ ಮಾಡುವಂತಿರಲಿಲ್ಲ!!
ಇನ್ನೊಂದು ವಿಚಿತ್ರ ಆಟದಲ್ಲಿ ಲಕ್ಕಿಸೊಪ್ಪನ್ನು ಕೈಯಲ್ಲಿ ಇಟ್ಟುಕೊಂಡವರು, ಅದಿಲ್ಲದವರ ಬೆನ್ನಿಗೆ “ಲಕ್ಕಿ ಸೊಪ್ಪಿನ ಗುದ್ದು” ಕೊಡುವುದು!! ಒಟ್ಟಿನಲ್ಲಿ ಹೊಡೆದಾಡಿಕೊಳ್ಳಲು ಒಂದು ನೆಪ!!
ಮನೆಕಟ್ಟುವ ಆಟದಲ್ಲಿ ಈ ಗಿಡದ ಹೆರೆಗಳನ್ನು  ಮನೆಯ ಮುಚ್ಚಿಗೆಗೆ ಬಳಸುತ್ತಿದ್ದೆವು. ಅಡಿಗೆ ಆಟದಲ್ಲಿ ಇದರ ಸೊಪ್ಪಿನ ಸಾರು ತಯಾರಾಗುತ್ತಿತ್ತು!!

ಹೀಗೆ ನಮ್ಮ ಬಾಲ್ಯದಲ್ಲಿ ನಮ್ಮ ದಿನನಿತ್ಯದ ಆಟದ ಸರಕಾಗಿದ್ದ ಲಕ್ಕಿಗಿಡ, ದಾರಿಯ ಬದಿಗಳಲ್ಲಿ ಪೊದೆಯಂತೆ  ಹೆಚ್ಚೆಂದರೆ ಏಳೆಂಟು ಅಡಿಗಳಷ್ಟು ಎತ್ತರಕ್ಕೆ ಬೆಳೆವ ಸಸ್ಯ. ಇಲ್ಲಿ ಬೆಂಗಳೂರಿನ ಪಾರ್ಕೊಂದರಲ್ಲಿ ಇದು ಸುಮಾರು ಹತ್ತು ಅಡಿಯ ಚಿಕ್ಕ ಮರದಷ್ಟು ಎತ್ತರಕ್ಕೆ ಬೆಳೆದಿದೆ.  ಹಾಗಾದರೆ ಇವು ಒಂದೇ ಕುಲಕ್ಕೆ ಸೇರಿದವುಗಳಾದರೂ ಬೇರೆ ಬೇರೆ ಪ್ರಭೇದವೇ? ಅಥವಾ ಗಾತ್ರವೊಂದು ಬಿಟ್ಟರೆ ಬೇರೆಲ್ಲ ಗುಣಲಕ್ಷಣಗಳೂ ಒಂದೇ ಆಗಿರುವುದರಿಂದ, ಹವಾಮಾನಕ್ಕೆ ತಕ್ಕಂತೆ  ಗಾತ್ರದಲ್ಲಿ ಬದಲಾವಣೆ ಸಸ್ಯಲೋಕದಲ್ಲಿ ಸಹಜವೂ ಆಗಿರುವುದರಿಂದ ಒಂದೇ ಪ್ರಭೇದವೇ ಸರಿಯಾಗಿ ನಿರ್ಧರಿಸಲಾಗಲಿಲ್ಲ.  

ಸಸ್ಯಶಾಸ್ತ್ರೀಯವಾಗಿ Vitex negundo(Nirgundi) ಎಂದು ಕರೆಸಿಕೊಳ್ಳುವ ಈ ಸಸ್ಯ ಏಷಿಯಾಖಂಡದ ಹೆಚ್ಚಿನ ದೇಶಗಳಲ್ಲಿ, ಆಫ್ರಿಕಾದಲ್ಲಿ ಸಹಜವಾಗಿ ಬೆಳೆಯುತ್ತದೆ. ಕನ್ನಡದಲ್ಲಿ ಲಕ್ಕಿಗಿಡ, ಬಿಳಿನೆಕ್ಕಿ ಎಂಬ ಹೆಸರಿದೆ. ಸಂಸ್ಕೃತದಲ್ಲಿ ಸಿಂಧುವಾರ, ನಿರ್ಗುಂದಿ, ಸುರಸ, ನೀಲಮಂಜರಿ, ಸಿಂಧುಕ ಇತ್ಯಾದಿ ಹೆಸರುಗಳಿವೆ.

ಗಿಡವು ಆರರಿಂದ ಹನ್ನೆರಡು ಅಡಿಗಳವರೆಗೆ ಬೆಳೆಯುತ್ತದೆ. ಗಿಡದ ಕಾಂಡವು ಸಪೂರವಾಗಿದ್ದರೂ ಸದೃಡವಾಗಿರುತ್ತವೆ. ಐದು ಎಲೆಗಳ ಗುಚ್ಛವು ಒಂದೇ ಎಲೆಯಂತೆ ತೋರುತ್ತದೆ. ಹೂಗುಚ್ಛವು ಎರಡು-ಮೂರು ಇಂಚು ಉದ್ದವಾಗಿದ್ದು ತೆಳುನೀಲಿ ಅಥವಾ ನೀಲಿ ಬಣ್ಣದ ಸಣ್ಣ ಹೂವುಗಳಿವೆ. 

ಬಿಳಿಲಕ್ಕಿ ಮತ್ತು ಕರೇಲಕ್ಕಿ ಎಂಬ ವಿಧಗಳಿದ್ದು, ಕರೀಲಕ್ಕಿ ಗಿಡದ ಕಾಂಡ ಮತ್ತು ಎಲೆಗಳು ಸ್ವಲ್ಪ ಕಡುಬಣ್ಣ ಹೊಂದಿರುತ್ತದೆ. ಅಲ್ಲದೇ ಹೂವುಗಳ ಬಣ್ಣದಲ್ಲೂ ಸ್ವಲ್ಪ ವ್ಯತ್ಯಾಸ ಇರುತ್ತದೆ.

ಸಸ್ಯದ ಬೇರು, ಎಲೆಗಳು, ಬೀಜಗಳು ಅತ್ಯಂತ ಔಷಧೀಯ ಗುಣವುಳ್ಳದ್ದಾಗಿರುವುದರಿಂದ ಆಯುರ್ವೇದ, ಯುನಾನಿ, ಹೋಮಿಯೋಪತಿ, ಮನೆಮದ್ದು ಇತ್ಯಾದಿ ವೈದ್ಯಪದ್ಧತಿಯಲ್ಲಿ ಅನೇಕ ರೋಗಗಳಿಗೆ ಇದನ್ನು ಉಪಯೋಗಿಸುತ್ತಾರೆ.

ಆಯುರ್ವೇದ ವೈದ್ಯಪದ್ಧತಿಯಲ್ಲಿ ಈ ಗಿಡದ ಬೇರು, ಎಲೆ, ಬೀಜಗಳಿಂದ ತಯಾರಿಸಿದ ಔಷಧಿಗಳನ್ನು ಅಸ್ತಮಾ, ಕಫ, ಕೆಮ್ಮು ಮುಂತಾದ ರೋಗಗಳಿಗೆ, ಹೊಟ್ಟೆಹುಳುನಾಶಕವಾಗಿ, ಉರಿಯೂತವಿನಾಶಕವಾಗಿ, ವಿಷನಿವಾರಕವಾಗಿ, ಉಪಯೋಗಿಸುತ್ತಾರೆ. 
ಇದಲ್ಲದೇ ಇನ್ನೂ ಅನೇಕ ಔಷಧೀಯ ಗುಣಗಳನ್ನು ಹೊಂದಿದೆ.  ಸ್ತ್ರೀಯರಲ್ಲಿ ಋತುಚಕ್ರಕ್ಕೆ ಸಂಭಂದಿಸಿದ ದೋಷಗಳನ್ನು ನಿವಾರಿಸುತ್ತದೆ, ಉತ್ತಮ ಜೀರ್ಣಕಾರಿ, ಉತ್ತಮ ನೋವುನಿವಾರಕ, ಕೀಟನಾಶಕ ಕೂಡಾ.

ರೋಮನ್ನರ ನಂಬಿಕೆಯಂತೆ ಇದರ ಎಲೆಗಳು ಲೈಂಗಿಕಾಪೇಕ್ಷೆಯನ್ನು ಕಡಿಮೆಗೊಳಿಸುತ್ತವೆಯಂತೆ. ಆದ್ದರಿಂದಲೇ ಇದಕ್ಕೆ “ chaste tree” (ಶುಧ್ಧವಾದ, ಪವಿತ್ರವಾದ ಮರ) ಎಂಬ ಹೆಸರೂ ಇದೆ.


ಈಗೆಲ್ಲಾ ಮಾತೆತ್ತಿದರೆ ಲ್ಯಾಬ್ ಟೆಸ್ಟ್, ಸ್ಕ್ಯಾನಿಂಗ್, ಎಕ್ಸ್ ರೇ ಎಂಬ ಕಾಲವಾಗಿರುವುದರಿಂದ ಇಂತಹ ಔಷಧೀಯ ಸಸ್ಯಗಳ ಬಗ್ಗೆ ಅರಿವಿರುವವರು, ಮನೆಯಲ್ಲೇ  ಔಷಧಿ ತಯಾರಿಸಿ ಉಪಯೋಗಿಸುವವರ ಸಂಖ್ಯೆ ತೀರಾ ಕಡಿಮೆಯಾಗಿರುವುದು ವಿಷಾದನೀಯ.

ನಿಜಕ್ಕೂ ಇದರ ಔಷಧೀಯ ಗುಣಗಳ ಬಗ್ಗೆ ಅರಿತಾಗ ಇದೊಂದು ಪವಿತ್ರವಾದ ಮರವೇ ಎಂಬುದು ಅರಿವಾಗುತ್ತದೆ. ಬಾಲ್ಯದಲ್ಲಿ ಇದ್ಯಾವುದರ ಅರಿವಿಲ್ಲದೆಯೂ ಇದೊಂದು ಶುದ್ಧೀಕರಿಸುವ ಗಿಡವೆಂದು ನಂಬಿದ್ದೆವು!! ಹಿರಿಯರು ಕಿರಿಯರಿಗೆ ಇದು ಉಪಯುಕ್ತ ಸಸ್ಯ ಎಂಬ ಅರಿವನ್ನು ಇಂತಹ ನಂಬಿಕೆಗಳನ್ನು ಬಿತ್ತುವುದರ ಮೂಲಕವೇ ದಾಟಿಸುತ್ತಿದ್ದರೇನೋ ಅಲ್ಲವೇ?

(ಜೂನ್ ತಿಂಗಳ "ಹಸಿರುವಾಸಿ" ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ )


20-May-2018

ಅಮ್ಮನೂ ಮತ್ತು ಧುಪ್ಪು ಎಂಬ ಅವಳ ಮಗನೂ


"ಅಮ್ಮಾ ಎಲ್ಲಾ ಅರಾಮಿದ್ದೀರಾ"..ಪ್ರತೀ ದಿನ ಫೋನ್ ಮಾಡುತ್ತಿದ್ದಂತೆ ಕೇಳುವ ವಾಡಿಕೆ. ಸಾಮಾನ್ಯವಾಗಿ ಇದಕ್ಕೆ ಉತ್ತರ ಬರೋದು "ಥೋ ಸುಮ್ನಿರಾ...ಮಾರಾಯ" ಎಂದೇ!!  ನೀವು ತಪ್ಪು ತಿಳಿಯಬೇಡಿ ಮಾರಾಯ್ರೇ... ಅಮ್ಮ ಹೀಗೆ ಹೇಳೋದು ನನಗಲ್ಲ.  ತನ್ನದೇ ಹಕ್ಕೆಂಬಂತೆ ಕುರ್ಚಿಯ ಮೇಲೆ ನೆಮ್ಮದಿಯಿಂದ ಮಲಗಿ ನಿದ್ರಿಸಿದ್ದ ತನ್ನನ್ನು ಎಬ್ಬಿಸಿ,ಅಲ್ಲಿ ಕುಳಿತು ಫೋನ್ ಕೈಗೆತ್ತಿಕೊಂಡಿರುವ ತನ್ನ ಮೇಲೆ ಕೋಪಗೊಂಡು ಜಡೆಯನ್ನು ಹಿಡಿದು ಎಳೆಯುತ್ತಿರುವ ತನ್ನ ಮುದ್ದಿನ ಮಗ "ಧುಪ್ಪು" ಗೆ ಹೇಳುವುದದು.

 ಸೊಂಪಾದ ನಿದ್ರೆ

ಅಷ್ಟರಲ್ಲಿ ನಾನು ರೇಗಿ, ಅವನನ್ನು ಓಡಿಸು ಅಲ್ಲಿಂದ, ನನ್ನ ಹತ್ತಿರ ಮಾತನಾಡು ಎನ್ನುವುದೂ, ಅಮ್ಮ ಸರಿ ಮಾರಾಯ್ತಿ ಯಾಕೆ ಬೇಜಾರು ಮಾಡಿಕೊಳ್ಳುವುದು ನಿನ್ನ ಹತ್ತಿರವೇ ಮಾತಾಡ್ತಿದ್ದೀನಲ್ಲಾ ಎನ್ನುವುದೂ, ಆದರೂ ಮಧ್ಯೆ ಮಧ್ಯೆ ಕಾಟ ಕೊಡುವ ಅವನನ್ನು ಗದರಿಸುವುದೂ ದಿನಚರಿಯೇ ಆಗಿಬಿಟ್ಟಿದೆ. ತಂಗಿಯೂ ಒಮ್ಮೊಮ್ಮೆ ಈ ಅಮ್ಮನ ಮುದ್ದಿನ ಮಗನ ಕಾಟದಿಂದ ಬೇಸತ್ತು ನನಗೆ ಫೋನ್ ಮಾಡಿ ಕಷ್ಟ ಹೇಳಿಕೊಳ್ಳುವುದುಂಟು.
ಪ್ರತೀ ಬಾರಿ ಊರಿಗೆ ಹೋದಾಗಲೂ ಒಂದು ಸುತ್ತು ಗುಂಡಗಾಗಿರುವ ಅವನನ್ನು ಕಂಡು ನಾನು "ಅಯ್ಯೋ ಧುಪ್ಪು ಮತ್ತೂ ದಪ್ಪ ಆಗಿದ್ದೀಯಲ್ಲೋ" ಎಂದರೆ ಅಮ್ಮ ಜಗತ್ತಿನ ಎಲ್ಲ ತಾಯಂದಿರಂತೆಯೇ, “ಛೇ ಪಾಪದ್ದು ಕಣೇ ನಾಲ್ಕು ದಿನದಿಂದ ಊಟನೇ ಸರಿಯಾಗಿ ಮಾಡ್ತಿಲ್ಲ, ಯಾರ ಕಣ್ಣು ಬಿದ್ದಿದೆಯೋ ಏನೋ... ಸೋತು ಹೋಗಿದೆ ಪಾಪ! ಎಂದು ಲೊಚಗುಡುತ್ತಾಳೆ!!  ಅವನೋ ಅಲ್ಲಿ ನಮ್ಮ ಕಣ್ಣೆದುರಿನಲ್ಲೇ ಒಂದು ಬಟ್ಟಲು ಹಾಲನ್ನು ಒಂದೇ ಉಸಿರಿಗೆ ಗುಟುಕರಿಸಿ, ಮೀಸೆಗಂಟಿದ ಒಂದೆರಡು ಹನಿಯನ್ನೂ ಬಿಡದೆ  ನೆಕ್ಕಿ, ಘನಗಾಂಬೀರ್ಯದಿಂದ ಸೋಫಾ ಮೇಲೆ ಪವಡಿಸುತ್ತಾನೆ. ತಕ್ಷಣವೇ ಅಮ್ಮ ಅಥವಾ ಅಪ್ಪ ಇಬ್ಬರಲ್ಲೊಬ್ಬರು ಅವನಿಗೆ ಚಳಿಗಿಳಿ ಆದೀತೆಂದು ಸೋಫಾ ಬ್ಯಾಕ್ ಮೇಲಿರುವ ಕವರ್ ತೆಗೆದು ಹೊದಿಸಿ ಪ್ರೀತಿಯಿಂದ ತಟ್ಟುತ್ತಾರೆ. ನಾವು ಮಕ್ಕಳಿಬ್ಬರೂ ದೂರದ ಊರುಗಳಲ್ಲಿರುವುದರಿಂದ ಅಪ್ಪ ಅಮ್ಮ ಇಬ್ಬರಿಗೂ ಕಾಡುವ ಒಂಟಿತನವನ್ನು ಕಿಂಚಿತ್ತಾದರೂ ಕಡಿಮೆ ಮಾಡಿರುವುದಕ್ಕಾಗಿ “ಧುಪ್ಪು” ಎಂಬ ಈ ಮಾರ್ಜಾಲದ ಮೇಲೆ ನಮಗೂ ಪ್ರೀತಿಯಿದೆ. ಅಲ್ಲದೇ ಮನೆಗೆ ಬಂದ ಯಾರನ್ನೇ ಆದರೂ ಹತ್ತಿರ ಬಂದು ಮೂಸಿ, ಕಾಲಿಗೆ ತನ್ನ ಮೈಸವರುವ, ಸೋಪಾದಲ್ಲೋ ಕುರ್ಚಿಯಲ್ಲೋ ಕುಳಿತರೆ ತಾನೂ ಹತ್ತಿ ಪಕ್ಕದಲ್ಲಿ ಒತ್ತಿಕೊಂಡು ನಿಶ್ಚಿಂತನಾಗಿ ನಿದ್ರಾವಶನಾಗುವ ಪರಿಗೆ ಎಂತವರಿಗೂ ಅವನನ್ನು ದ್ವೇಷಿಸಲು ಸಾಧ್ಯವಾಗುವುದೂ ಇಲ್ಲ.

ಮುದ್ದಾದ ಈ ಬೆಕ್ಕಿನ ಮರಿಯನ್ನು ನನ್ನ ಅಮ್ಮನ ಮಡಿಲು ಸೇರಿಸಿದ್ದು ಅದರ ತಾಯಿ.  ಆ ತಾಯಿ ಬೆಕ್ಕು ನಮ್ಮ ಚಿಕ್ಕಪ್ಪನ ಮನೆಯಲ್ಲಿತ್ತು.  ಆದರೆ ಅದರ ಹಿಂದಿನ ಸಂತಾನವೂ ಅಲ್ಲೇ ಇದ್ದದ್ದರಿಂದ ಈ ಬಾರಿ ಮರಿ ಹಾಕಲು  ಅಪ್ಪನ ಮನೆಯ ಅಟ್ಟದ ರಹಸ್ಯ ಸ್ಥಳವನ್ನು ಅದು ಆಯ್ದುಕೊಂಡಿತ್ತು. ಮರಿಗಳು ಹುಟ್ಟಿ ಕೆಲವಾರಗಳ ನಂತರ ಅವನ್ನು ಎತ್ತಿಕೊಂಡು ಹೋಗಿ ಪಕ್ಕದ ಮನೆಯಲ್ಲಿಟ್ಟಿತ್ತು.  ಆದರೆ ಅಷ್ಟರಲ್ಲಿ ಈ ಮರಿಗೆ ಈ ಅಪ್ಪ ಅಮ್ಮ ಇಷ್ಟವಾಗಿಬಿಟ್ಟಿದ್ದರಿಂದ ಇದು ಮಾತ್ರ ಒಂದೆರಡು ದಿನಗಳಲ್ಲಿ ಇಲ್ಲಿಗೇ ವಾಪಾಸ್ ಬಂದಿತ್ತು.   ಕೆಲವೊಮ್ಮೆ ಮನೆ ಬೀಗವನ್ನು ಹಾಕಿ ವಾರಗಟ್ಟಲೇ ನಾಪತ್ತೆಯಾಗುವ ಈ ಅಪ್ಪಾಮ್ಮನ  ಬಗ್ಗೆ ಅದಕ್ಕೆ ಹೇಗೆ ಗೊತ್ತಾಯ್ತೋ ಏನೋ, ಸಮಯಕ್ಕೆ ಬೇಕಾಗುತ್ತದೆ ಎಂದು ಯೋಚಿಸಿ, ಆ ಮನೆಗೂ ಆಗಾಗ ಭೇಟಿ ಕೊಟ್ಟು, ಅವರ ಬಳಿ ಹಾಲು ಬಿಸ್ಕೇಟ್ ಗಳಿಸುವಷ್ಟು ವಿಶ್ವಾಸ ಇಟ್ಟುಕೊಂಡಿತು.  

ಹೀಗೆ ಬಂದು ಸೇರಿದ ಈ ಮುದ್ದು ಮರಿ, ಸಕಲಜೀವಗಳನ್ನೂ ಹುಟ್ಟಿದ ಮಕ್ಕಳಂತೆಯೆ ಪ್ರೀತಿಸುವ ಅಮ್ಮನ ವಿಶ್ವಾಸ ಗೆಲ್ಲಲು ಹೆಚ್ಚು ಕಷ್ಟವೇನೂ ಪಡಬೇಕಾಗಿರಲಿಲ್ಲ. ಆದರೆ ಕೆಲವೇ ದಿನಗಳಲ್ಲಿ ಅಪ್ಪನೂ ಇವನ ಆಜ್ಞಾನುವರ್ತಿಯಾಗಿದ್ದು ಮಾತ್ರ ಆಶ್ಚರ್ಯಕರ.

ಅಪ್ಪನ ಕಾಲಿನಿಂದ ಮಸಾಜ್ !

ಈ ಮರಿಗೆ ಅಪ್ಪ ಇಟ್ಟ ಹೆಸರು “ಧುಪ್ಪು”.  ಮನೆ ಜನರ ಕಾಲು ಕಂಡೊಡನೆಯೆ  ಕತ್ತು ಚಾಚಿ “ಧುಪ್” ಎಂದು ಮಲಗಿ ಕಾಲಿನಿಂದ ತನ್ನ ಮೈಯನ್ನೆಲ್ಲ ಸವರು ಎನ್ನುವ, ಹಾಗೆ ಸವರುತ್ತಿದ್ದರೆ ಸುಮ್ಮನೇ ಕಣ್ಣುಮುಚ್ಚಿ ಎಷ್ಟು ಹೊತ್ತಾದರೂ ಮಲಗಿಬಿಡುವುದರಿಂದಲೇ ಅವನಿಗೆ ಅದೇ ಹೆಸರು ಎಂಬುದು ಅಪ್ಪನ ವಿವರಣೆ. ಅಮ್ಮ ಇನ್ನೂ ಅವನಿಗೆ ಇಡಲು ಒಳ್ಳೆಯ ಹೆಸರೊಂದನ್ನು ಹುಡುಕುತ್ತಿದ್ದಾರೆ!!

ಬೇಟೆ

 ದಿನದ ಹೆಚ್ಚಿನ ಸಮಯ ಸೋಫಾದ ಮೇಲೆ ಮಲಗಿ ನಿದ್ರಿಸುವ ಧುಪ್ಪು ಸಾಯಂಕಾಲವಾಗುತ್ತಿದ್ದಂತೆ ಹೊರಗೋಡುತ್ತಾನೆ. ಅವನು ಬೇಟೆಯಾಡುವ ಸಮಯವದು. ಏನನ್ನಾದರೂ ಬೇಟೆಯಾಡಿ ಅಲ್ಲಿಯೇ ತಿಂದು ಮುಗಿಸಿದರೆ ತನ್ನ ಶೌರ್ಯ  ಮನೆ ಜನರಿಗೆ ತಿಳಿಯುವುದಿಲ್ಲವಲ್ಲಾ  ...ಹಾಗಾಗಿ ಅದನ್ನು ತಂದು ಜಂಬದಿಂದ ನಮ್ಮೆದುರು ಹಾಕುತ್ತಾನೆ. ಬದುಕಿದೆಯಾ ಬಡಜೀವವೇ ಎಂಬಂತೆ ಅದು ಹಾರಿ ಓಡುವಾಗ  ಹಿಂದಿನಿಂದ ಓಡಿ ಹಿಡಿಯುತ್ತಾನೆ. ಇದೇ ಆಟ ಆ ಬಲಿ ಪ್ರಾಣಿ ಸುಸ್ತಾಗಿ ಸಾಯುವವರೆಗೂ ನಡೆಯುತ್ತದೆ. ಒಮ್ಮೊಮ್ಮೆ ಹೀಗೆ ಅವನು ಸೊಂಡಿಲಿಯನ್ನೋ, ಓತಿಕ್ಯಾತವನ್ನೋ ನಮ್ಮೆದುರಲ್ಲೇ ಆಟವಾಡಿಸುವಾಗ, ಬೆದರಿದ ಅವು ಓಡಿಬಂದು ನಮ್ಮ ಕಾಲನ್ನೇ ಏರಿ, ಆ ಗಾಬರಿಗೆ ನಾವು ಹಾರಿ ಬಿದ್ದು ನಂತರ ಅವನನ್ನು ಬಯ್ದುಕೊಳ್ಳುತ್ತಾ ಏಳುವುದೂ ಉಂಟು!!    ಜಿರಲೆ, ಪತಂಗ, ಚಿಟ್ಟೆ. ಹಲ್ಲಿ, ಅಳಿಲು ಇಲಿ ಓತಿಕ್ಯಾತ ಹಾವುರಾಣಿ ಹೀಗೆ ಅವನ ಆಹಾರದ ಪಟ್ಟಿಯಲ್ಲಿರುವ ಜೀವಿಗಳು ಅನೇಕ. ಅದು ಹೀಗೆ ವಿವಿಧ ರೀತಿಯ ನಾನ್ವೆಜ್ ತಿಂದಾಗೆಲ್ಲ ಅಮ್ಮ  “ಹಾಳುಮೂಳು ಎಲ್ಲಾ  ತಿನ್ನತ್ತೆ ಕಣೇ ಅದಕ್ಕೆ ಹೊಟ್ಟೆ ಸರಿ ಇರೋದಿಲ್ಲ ಪಾಪ” ಎನ್ನುತ್ತಾರೆ!! ಅವೆಲ್ಲಾ ಅದರ ಆಹಾರ, ಅವನ್ನೆಲ್ಲಾ ತಿನ್ನೋದರಿಂದ ಅಲ್ಲಮ್ಮಾ ಅದಕ್ಕೆ ಹೊಟ್ಟೆ ಕೆಡೋದು, ನೀವು ಪ್ರೀತಿಯಿಂದ ತಿನ್ನಿಸ್ತೀರಲ್ಲಾ ಬಿಸ್ಕೇಟು, ಬೇಕರಿ ತಿಂಡಿಗಳು, ಸ್ವೀಟು ಅಂತೆಲ್ಲಾ...ಅದರಿಂದ ಹೊಟ್ಟೆ ಕೆಡೋದು ಅಂತ ನಾನು ಹೇಳೋದನ್ನ ಅಮ್ಮ ಯಾವತ್ತೂ ನಂಬಲಿಲ್ಲ ಬಿಡಿ. 

ಬಿಸ್ಕೇಟ್ ತಿನ್ನುವ ವಿಧಾನ!


ಎಲ್ಲಾ ಪ್ರಾಣಿ, ಪಕ್ಷಿ, ಕೀಟಗಳನ್ನೂ ಪ್ರೀತಿಸುವ ಅಮ್ಮ ಜಿರಲೆಯನ್ನು ಕಂಡರೆ ಮಾತ್ರ ರಣಚಂಡಿ ಅವತಾರ ತಾಳುತ್ತಾರೆ. ಪೊರಕೆಯನ್ನು ತಂದು ಅದನ್ನು ಶತಾಯ ಗತಾಯ ಬೇಟೆಯಾಡಿ,  ಧುಪ್ಪುಗೆ ಕೊಡುತ್ತಾರೆ (ಅದು ಹೀಗೆ ಹಾಳುಮೂಳು(?) ತಿನ್ನುವುದು ಇಷ್ಟವಿಲ್ಲದಿದ್ದರೂ). ಅದೇ ಅಪ್ಪಿತಪ್ಪಿ ಮನೆಯೊಳಗೆ ಪತಂಗವೊಂದು ಬಂದರೆ ಬೇಗ ಹೋಗು ಮಾರಾಯ ಧುಪ್ಪು ನೋಡಿದ್ರೆ ತಿಂದು ಬಿಡ್ತಾನೆ ಎನ್ನುತ್ತಾ ಹೊರಗೆ ಹಾರಿಸುತ್ತಾರೆ!!    

ಗೋಡೆಯ ಮೇಲಿರುವ ಹಲ್ಲಿಯನ್ನು ಹಾರಿ ಹಾರಿ ಹಿಡಿಯಲು ಪ್ರಯತ್ನಿಸುವ ಧುಪ್ಪು ತನ್ನಿಂದ ಆಗದು ಎನ್ನಿಸಿದಾಗ ಮ್ಯಾಂ ಎನ್ನುತ್ತಾ ಅಪ್ಪನ ಕಾಲು ಸುತ್ತುತ್ತಾನೆ. ಅದನ್ನು ಹಿಡಿಯಲು ಸಹಾಯ ಮಾಡಿ ಎಂದು ಕೇಳುವ ವಿಧಾನವಂತೆ ಅದು. ಅಪ್ಪ ಪೊರಕೆಯಲ್ಲಿ ಆ ಹಲ್ಲಿಯನ್ನು ಕೆಳಗೆ ಹಾಕಿದರೆ ಇವನು ತಿಂದು ತೇಗುತ್ತಾನೆ!!
 ಮಕ್ಕಳು ತಂದೆತಾಯಿಯರ ಮಧ್ಯೆ ಬಾಂಧ್ಯವ್ಯವನ್ನು ಗಟ್ಟಿಗೊಳಿಸುವಂತೆಯೇ ನನ್ನ ಅಪ್ಪ ಅಮ್ಮನ ನಡುವೆ ಮಾತುಕತೆಗೊಂದು ವಿಷಯವಾಗಿರುವ,  ಮೊಮ್ಮಕ್ಕಳು ಕತ್ತಿಗೆ ಜೋತು ಬಿದ್ದು ಮುದ್ದು ಮಾಡಿಸಿಕೊಳ್ಳುವಷ್ಟೇ ಪ್ರೀತಿಯಿಂದ ಮುದ್ದು ಮಾಡಿಸಿಕೊಳ್ಳಲು ಕೊರಳೊಡ್ಡುವ, ಪುಟ್ಟ ಮಕ್ಕಳಂತೆಯೆ ಹಿಂದೆಮುಂದೆ ಸುಳಿಯುತ್ತಾ  ಹಠ ಮಾಡುತ್ತಾ ತಿಂಡಿತಿನಿಸು ಬೇಡುವ, ತನ್ನ ತುಂಟತನ ಆಟಗಳಿಂದ ಅವರಿಬ್ಬರ ಮೊಗದಲ್ಲಿ ನಗು ತರಿಸುವ, ಒಂಟಿತನ ಹೆಚ್ಚು ಕಾಡುವ ಸಾಯಂಕಾಲಗಳಲ್ಲಿ ತನ್ನ ಬೇಟೆಯ ಶೌರ್ಯಗಳನ್ನು ಪ್ರದರ್ಶಿಸಿ ಅವರನ್ನು ಮುದಗೊಳಿಸುವ, ಒಟ್ಟಿನಲ್ಲಿ ಮನೆಯಲ್ಲಿ ಸ್ವಲ್ಪ ಹೊತ್ತು ಧುಪ್ಪು ಕಾಣದಿದ್ದರೂ ಧುಪ್ಪು ಎಲ್ಲಿ ಹೋಯ್ತೇನಪಾ ಎನ್ನುತ್ತಾ ಹುಡುಕಾಡುವ ಮಟ್ಟಿಗೆ ಅಪ್ಪ, ಅಮ್ಮನನ್ನು ಆವರಿಸಿರುವ ಈ ಮಾರ್ಜಾಲರಾಯನಂತದ್ದೊಂದು ಜೀವ ಈಗಿನ ಕಾಲದ ಮೈಕ್ರೋ, ಮಿನಿ ಕುಟುಂಬಗಳಿಗೆ ಅಗತ್ಯವಾಗಿ ಬೇಕೆನ್ನಿಸುವುದಿಲ್ಲವೆ?

10-Apr-2018

ಮಳೆಮರ (rain tree)


ನಮ್ಮ ಬೆಂಗಳೂರು ಈಗೀಗ ಕಾಂಕ್ರೀಟ್ ಕಾಡು ಎಂದು ಹೆಸರುಪಡೆದುಕೊಂಡಿದ್ದರೂ, ಒಂದಾನೊಂದು ಕಾಲದಲ್ಲಿ ಗಾರ್ಡನ್ ಸಿಟಿ ಆಗಿತ್ತಲ್ಲವೇ.. ಹಾಗಾಗಿಯೇ ಕೆಲವು ಹಳೆಯ ಏರಿಯಾಗಳಲ್ಲಿ  ಇನ್ನೂ ಒಂದಿಷ್ಟು ಮರಗಳು ಉಳಿದುಕೊಂಡಿವೆ. ಕೆಲವು ರಸ್ತೆಯ ಇಕ್ಕೆಲಗಳಲ್ಲಿ ಹೆಮ್ಮರವಾಗಿ ಬೆಳೆದು ನಿಂತ ಮರಗಳು ಆಗಿನ ಕಾಲದ ವೈಭವದ ಪಳೆಯುಳಿಕೆಗಳಂತೆ ತೋರುತ್ತವೆ.
ಮಳೆಮರವೆಂಬ (Samanea saman) ಹೆಸರಿನ ದೈತ್ಯಾಕಾರದ ಈ ಮರವೂ ಬೆಂಗಳೂರಿನ ಅನೇಕ  ರಸ್ತೆಯ ಬದಿಗಳಲ್ಲಿ, ಪಾರ್ಕ್ ಗಳಲ್ಲಿ ಕಂಡುಬರುತ್ತದೆ. ೧೫-೨೦ ಅಡಿ ಎತ್ತರಕ್ಕೆ ಬೆಳೆವ ಮರದಲ್ಲಿ ಅಗಲವಾಗಿ ಕೊಡೆಯಾಕಾರದಲ್ಲಿ ಚಾಚಿಕೊಂಡಿರುವ ರೆಂಬೆಕೊಂಬೆಗಳು, ಪ್ರೇಮಿಗಳ ಕಣ್ಣಾಮುಚ್ಚಾಲೆಗೆ ಹೇಳಿಮಾಡಿಸಿದಷ್ಟು ದಪ್ಪನಾದ ಮರದ ಕಾಂಡ!!, ಗುಲಾಬಿ ಬಣ್ಣದ ಸುಂದರ ಹೂವುಗಳು, ಹುಣಸೆ ಕಾಯಿಗಳಂತೆಯೆ ಕಾಣಿಸುವ ಕಾಯಿಗಳು ಇವೆ. 
ಮೂಲತಃ  ಮಧ್ಯ ಅಮೇರಿಕಾದ ವಾಸಿಯಾದ ಈ ಮರವನ್ನು ಈಗ  ಏಷಿಯಾ ಆಫ್ರಿಕಾ ಖಂಡಗಳ ಅನೇಕ ದೇಶಗಳಲ್ಲಿ ಬೆಳೆಸಲಾಗುತ್ತಿದೆ.  

ತುಂಬಾ ಚಳಿಯಿರುವ ಪ್ರದೇಶಗಳನ್ನು ಬಿಟ್ಟು ಉಳಿದ ಹವಾಮಾನಕ್ಕೆ, ಮಣ್ಣಿಗೆ ಹೊಂದಿಕೊಂಡು ಬೆಳೆವ ಸಾಮರ್ಥ್ಯ ಈ ಮರಕ್ಕಿದೆ.
ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲಿ  ತನ್ನ ಬೇರುಗಳನ್ನ ಭೂಮಿಯಲ್ಲಿ ತುಂಬ ಆಳದವರೆಗೂ ಚಾಚಿ ನೀರನ್ನು ಪಡೆದು, ಚೆನ್ನಾಗಿ ಬೆಳೆಯುವಂತೆಯೇ ಹೆಚ್ಚು ಮಳೆ ಬೀಳುವ ಪ್ರದೇಶದಲ್ಲಿ ಬೇರುಗಳನ್ನು ಭೂಮಿಯ ಮೇಲ್ಮೈಯಲ್ಲೇ ಹರಡಿಕೊಂಡು ಬೆಳೆಯುತ್ತದೆ.


ಎಲೆಗಳ ರಚನೆ ಸಂಕೀರ್ಣವಾಗಿದ್ದು, ಒಂದು ಅಗಲವಾದ ಎಲೆಯು ಅನೇಕ ಚಿಕ್ಕ ಎಲೆಗಳಿಂದಾಗಿದೆ.  ಬಿಸಿಲು ಬೀಳುವಾಗ ಅಗಲವಾಗಿ ತೆರೆದುಕೊಂಡು ನಳನಳಿಸುತ್ತಾ ದ್ಯುತಿಸಂಶ್ಲೇಷಣೆ ನಡೆಸುವ ಎಲೆಗಳು, ಸಾಯಂಕಾಲವಾಗುತ್ತಿದ್ದಂತೆಯೇ ಮುದುಡಿಕೊಳ್ಳುತ್ತವೆ. ಮಳೆಬರುವಾಗ, ಬೇರಾವುದೇ ನೆರಳು ಆವರಿಸಿದಾಗಲೂ ಎಲೆಗಳು ಹೀಗೆ ಮುದುಡಿಕೊಳ್ಳುತ್ತವೆ. ಮಳೆಬಂದಾಗ ಅಥವಾ ರಾತ್ರಿಗಳಲ್ಲಿ ಎಲೆಗಳು ಹೀಗೆ ಮುದುಡುವುದರಿಂದಾಗಿ ನೀರು ಅಥವಾ ಇಬ್ಬನಿ  ಮರದ ಬುಡದಲ್ಲಿಯೂ ಬೀಳುತ್ತದೆ. ಆದ್ದರಿಂದಲೇ ಈ ಮರದ ಬುಡದಲ್ಲಿ ಸದಾ ಹಸಿರಿನಿಂದ ಕೂಡಿದ ಹುಲ್ಲುಗಳೂ ಬೆಳೆಯುತ್ತವೆ. ಆದ್ದರಿಂದಲೇ ಇದಕ್ಕೆ ಮಳೆಮರ(rain tree) ಎಂಬ ಹೆಸರಿದೆ.ಎಪ್ರಿಲ್-ಸೆಪ್ಟೆಂಬರ್ ವರೆಗೂ ಕಾಣಿಸುವ ಗುಲಾಬಿ ಬಣ್ಣದ  ಹೂಗುಚ್ಛಗಳು ಹಸಿರುಮರದ ಮಧ್ಯೆ ಮಧ್ಯೆ ಪೌಡರ್ ಫಫ್ ಇರಿಸಿದಂತೆ ಕಾಣಿಸುತ್ತವೆ. ಒಂದು ಹೂಗುಚ್ಛದಲ್ಲಿ ಅನೇಕ ಪುಟ್ಟಪುಟ್ಟ ಹೂವುಗಳಿವೆ. ಹೂವುಗಳ ದಳಗಳು ಚಿಕ್ಕದಾಗಿದ್ದು ಸರಿಯಾಗಿ ಗೋಚರವಾಗುವುದಿಲ್ಲ. ತೆಳ್ಳನೆಯ ಉದ್ದನೆಯ ಗುಲಾಬಿ ಬಣ್ಣದ ರೇಷ್ಮೆ ಎಳೆಗಳಂತಹ ಕೇಸರಗಳು ಹೂವಿಗೆ ಆಕರ್ಷಕ ರೂಪ ಒದಗಿಸಿವೆ. ಕೀಟಗಳಿಂದ ಪರಾಗಸ್ಪರ್ಶಕ್ರಿಯೆ ನಡೆಯುತ್ತದೆ.


ಎಳೆಯ ಕಾಯಿಯು ಹಸಿರುಬಣ್ಣವಿರುತ್ತದೆ, ಬಲಿತಂತೆಲ್ಲ ಕಂದು ಬಣ್ಣಕ್ಕೆ ತಿರುಗುತ್ತದೆ. ಒಂದು ಉದ್ದನೆಯ ಕಾಯಿಯಲ್ಲಿ ಐದಾರು ತೆಳ್ಳನೆಯ ಬೀಜಗಳಿರುತ್ತವೆ. ಇದರ ಕಾಯಿಯೊಳಗಿರುವ ತಿರುಳಿನಲ್ಲಿ ಸಿಹಿ ಅಂಶವಿದ್ದು ಪೌಷ್ಟಿಕವಾಗಿರುವುದರಿಂದ ಮಂಗ, ಜಾನುವಾರುಗಳು, ಆಳಿಲು ಕುದುರೆ ಮೊದಲಾದ ಜೀವಿಗಳಿಗೆ ಉತ್ತಮ ಆಹಾರವಾಗಿದೆ. ಬೀಜಪ್ರಸಾರವೂ ಹೀಗೆ ಪ್ರಾಣಿಗಳಿಂದ ನಡೆಯುತ್ತದೆ.

ಈ ಮರವು ಹಲವು ರೀತಿಯಲ್ಲಿ ಉಪಯುಕ್ತವಾಗಿದೆ.
ಹಂದರವು ಅಗಲವಾಗಿ ಹರಡಿಕೊಳ್ಳುವುದರಿಂದ ನೆರಳಿಗಾಗಿ ಬೀದಿಬದಿಯಲ್ಲಿ ಬೆಳೆಸುತ್ತಾರೆ.
ಹಸಿರು ಎಲೆಗಳು, ಗುಲಾಬಿ ಹೂವುಗಳು, ಕೊಡೆಯಾಕಾರ ಈ ಮರಕ್ಕೊಂದು ಆಕರ್ಷಕ ರೂಪ ಒದಗಿಸಿರುವುದರಿಂದ ಉದ್ಯಾನವನಗಳಲ್ಲಿ ಅಲಂಕಾರಿಕ ಮರವಾಗಿ ಬೆಳೆಸುತ್ತಾರೆ.
ಮರದ ಕಾಂಡವು ಗಟ್ಟಿಮುಟ್ಟಾಗಿರುವುದರಿಂದ ಪೀಠೋಪಕರಣಗಳ ತಯಾರಿಕೆಯಲ್ಲಿ ಬಳಕೆಯಾಗುತ್ತದೆ. ಮಧ್ಯ ಅಮೇರಿಕಾದಲ್ಲಿ ಈ ಮರದ ಕಾಂಡದಿಂದ ಕೈಗಾಡಿಗಳನ್ನು ಮಾಡುತ್ತಾರೆ. ಅಲ್ಲದೆ ಉರುವಲಾಗಿಯೂ ಬಳಸುತ್ತಾರೆ.
ಸಿಹಿಯಾದ ತಿರುಳಿರುವ, ಪ್ರೋಟೀನ್ ಅಂಶ ಹೆಚ್ಚಿರುವ ಕಾಯಿ ಅನೇಕ ಪ್ರಾಣಿಗಳಿಗೆ ಆಹಾರ. ಇದರ ಸ್ವಾಭಾವಿಕ ವಾಸಸ್ಥಾನವಾದ ಮಧ್ಯಾಮೇರಿಕಾದ ದೇಶಗಳಲ್ಲಿ ಇದರ ಬೀಜಗಳನ್ನು ಮಂಗಗಳು ಇಷ್ಟಪಟ್ಟು ತಿನ್ನುತ್ತವೆಯಾದ್ದರಿಂದ ಇದರ ಬೀಜಕ್ಕೆ “Monkey pod” ಎಂದೇ ಹೆಸರಿದೆ. ಹೂವಿನ ಮಕರಂದವೂ ಅನೇಕ ಕೀಟಗಳಿಗೆ ಆಹಾರವಾಗಿದೆ.
ಬೀಜಗಳು, ಮರದ ಎಲೆ, ಬೇರು ಔಷಧೀಯ ಗುಣ ಹೊಂದಿದೆ. ಗಂಟಲು ಕೆರೆತಕ್ಕೆ, ಟಿಬಿ ಬ್ಯಾಕ್ಟೀರಿಯಾ ನಿವಾರಕವಾಗಿ ಬೀಜಗಳನ್ನು ಉಪಯೋಗಿಸುತ್ತಾರೆ.

02-Apr-2018

ವಿಚಿತ್ರ ಜೀವಿಗಳು ೩ - ತುರಾಯಿ ಜಿಂಕೆ

ಜಿಂಕೆ ಎಂದೊಡನೆ ನಮ್ಮ ಕಣ್ಣಿಗೆ ಕಾಣುವುದು ಆಕರ್ಷಕ ಬಣ್ಣಗಳ, ಸೌಮ್ಯ ಮುಖದ ಸುಂದರವಾದ ಪ್ರಾಣಿ. ನಮ್ಮ ಕವಿಗಳಂತೂ  ಚಿಕ್ಕ ಶಬ್ದಕ್ಕೂ ಬೆದರುವ, ಅಸಹಾಯಕತೆಯೇ ಮೂರ್ತಿವೆತ್ತಂತಹ, ಸೌಮ್ಯ ಸ್ವಾಭಾವ, ಸಾತ್ವಿಕ ಗುಣಗಳಿಗೆ ರೂಪಕವಾಗಿ ಜಿಂಕೆಯನ್ನು ಬಳಸುತ್ತಾರೆ.
"ಕೋರೆಹಲ್ಲುಗಳು" ಎಂದೊಡನೆ ನಮಗೆ ಕಲ್ಪನೆ ಬರುವುದು ಬೇಟೆಯಾಡಿ ಬೇರೆ ಪ್ರಾಣಿಗಳನ್ನು ಭಕ್ಷಿಸುವ ಮಾಂಸಾಹಾರಿ ಪ್ರಾಣಿಗಳು, ಅಥವಾ ತನ್ನ ಕೋರೆಹಲ್ಲು ಕಿರಿದು ಬೆದರಿಸುವ ದುಷ್ಟ ರಾಕ್ಷಸ,ದೆವ್ವ ಭೂತ  ಮೊದಲಾದವುಗಳು. ಅಂದರೆ ಕ್ರೂರತನಕ್ಕೆ ರೂಪಕವಾಗಿ ಕೋರೆಹಲ್ಲುಗಳನ್ನು ಕಲ್ಪಿಸಿಕೊಳ್ಳಬಹುದು.

ಆದರೆ ಒಂದು ಜಿಂಕೆಗೆ ಕೋರೆಹಲ್ಲುಗಳನ್ನು ಕಲ್ಪಿಸಿಕೊಳ್ಳಲು ಸಾಧ್ಯವೆ? ಕಲ್ಪಿಸಿಕೊಳ್ಳಬೇಕಾಗಿಲ್ಲ ಇಂತಹುದೊಂದು ಪ್ರಾಣಿ ನಿಜವಾಗಿಯೂ ಇದೆ. "ತುರಾಯಿ ಜಿಂಕೆ"( tufted deer) ಎಂಬ ಹೆಸರಿನ ಈ ಜಿಂಕೆಗೆ ಉದ್ದನೆಯ ಕೋರೆಹಲ್ಲುಗಳಿವೆ!! ನಮ್ಮ ಮಾಮೂಲಿ ಜಿಂಕೆಯಷ್ಟು ಸುಂದರವಾಗಿಲ್ಲದಿದ್ದರೂ ಇದು ಅದೇ ಜಾತಿಗೆ ಸೇರಿದೆ!!


ಗಂಡು ತುರಾಯಿ-ಜಿಂಕೆ
ಚಿತ್ರಕೃಪೆ - ವಿಕಿಪಿಡಿಯಾ

ತುರಾಯಿ ಜಿಂಕೆ ಅಥವಾ ಜುಟ್ಟು ಜಿಂಕೆಯು ಮ್ಯಾನ್ಮಾರ್ ಮತ್ತು ದಕ್ಷಿಣ ಮತ್ತು ಮಧ್ಯ ಚೀನಾ ದೇಶಗಳಲ್ಲಿ ಕಂಡುಬರುತ್ತದೆ.  ನಾಲ್ಕು ಸಾವಿರ ಮೀಟರ್ ಎತ್ತರದ ಪರ್ವತ ಪ್ರದೇಶಗಳ ದಟ್ಟ ಕಾಡುಗಳಲ್ಲಿ ವಾಸ. ಸಂತಾನೋತ್ಪತ್ತಿ ಸಮಯದಲ್ಲಿ ಜೋಡಿಯಾಗಿರುವುದು ಬಿಟ್ಟರೆ ಬೇರೆ ಸಮಯದಲ್ಲಿ ಒಂಟಿಯಾಗಿರುತ್ತವೆ. ಪ್ರತಿಯೊಂದೂ ಜಿಂಕೆಯೂ ತನ್ನದೇ ಆದ ವಾಸಸ್ಥಾನವನ್ನು ಗುರುತಿಸಿಕೊಂಡು , ಕಾಪಾಡಿಕೊಳ್ಳುತ್ತದೆ. 


ಹೆಣ್ಣು ತುರಾಯಿ-ಜಿಂಕೆ
ಚಿತ್ರಕೃಪೆ - ವಿಕಿಪಿಡಿಯಾ

ನಾವು ಮಾಮೂಲಿಯಾಗಿ ನೋಡುವ ಜಿಂಕೆಗಿಂತ ಸಣ್ಣ ಗಾತ್ರ, ತುರಾಯಿ ಜಿಂಕೆಯದ್ದು. ಬೂದು ಮಿಶ್ರಿತ ಕಂದು ಮೈಬಣ್ಣವಿದೆ. ಹಣೆಯ ಮೇಲ್ಭಾಗದಲ್ಲಿ ತುರಾಯಿಯಂತೆ ಕಾಣುವ ಕಂದು ಮಿಶ್ರಿತ ಕಪ್ಪು ಬಣ್ಣದ ದಟ್ಟ ಕೂದಲುಗಳ ಗುಚ್ಛವಿದೆ. ಆದ್ದರಿಂದಲೇ ಇದಕ್ಕೆ ತುರಾಯಿ ಜಿಂಕೆ ಎಂಬ ಹೆಸರು. ಗಂಡು ತುರಾಯಿ ಜಿಂಕೆಗಳಿಗೆ ಚಿಕ್ಕ ಕೊಂಬು ಕೂಡ ಇರುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಗಂಡಿಗೆ ಮೇಲ್ಭಾಗದ ಕೋರೆಹಲ್ಲುಗಳು ಉದ್ದವಾಗಿದ್ದು ಬಾಯಿಯಿಂದ ಹೊರಚಾಚಿಕೊಂಡಿವೆ. ಹುಲ್ಲು, ಚಿಗುರು ಸೊಪ್ಪುಗಳನ್ನು ತಿನ್ನುವ ಈ ಜಿಂಕೆಗೆ ಇಷ್ಟುದ್ದದ ಕೋರೆಹಲ್ಲುಗಳ ಅವಶ್ಯಕತೆ ಏನಿರಬಹುದು? ಸಂತಾನೋತ್ಪತ್ತಿ ಸಮಯದಲ್ಲಿ ಬೇರೆ ಗಂಡುಗಳೊಡನೆ ಪೈಪೋಟಿಗಿಳಿಯಲು ಇವು ಸಹಾಯಕವಾಗಿವೆ. 

ಸೆಪ್ಟೆಂಬರ್ ನಿಂದ ಡಿಸೆಂಬರ್ ವರೆಗೆ ಇವುಗಳ ಸಂತಾನೋತ್ಪತ್ತಿ ಕಾಲ. ಈ ಕಾಲದಲ್ಲಿ ಗಂಡುಗಳ ದೊಡ್ಡ ಧ್ವನಿಯಲ್ಲಿ ಕೂಗುತ್ತವೆ! ಆರು ತಿಂಗಳ ಕಾಲ ಮರಿಗಳನ್ನು ಹೊರುವ ಹೆಣ್ಣು ಜಿಂಕೆ ಒಂದು ಬಾರಿಗೆ ಒಂದು ಅಥವಾ ಎರಡು ಮರಿಗಳನ್ನು ಹೆರುತ್ತದೆ. 

ಎತ್ತರದ ಪರ್ವತಪ್ರದೇಶಗಳ ದಟ್ಟ ಕಾಡುಗಳಲ್ಲಿ ವಾಸಿಸುವ ಈ ಜಿಂಕೆ ಮಾನವನ ಕಣ್ಣಿಗೆ ಬೀಳುವುದು ಅಪರೂಪವಾದ್ದರಿಂದ ಇದರ ಜೀವನಕ್ರಮದ ಬಗ್ಗೆ ಇನ್ನೂ ಸರಿಯಾಗಿ ತಿಳಿಯಲಾಗಿಲ್ಲವಂತೆ! ಆದರೆ ವಾಸಸ್ಥಾನಗಳು ಕಣ್ಮರೆಯಾಗುತ್ತಿರುವುದು, ವಿಪರೀತವಾಗಿ ಬೇಟೆಗೆ ಬಲಿಯಾಗಿರುವುದು ಇತ್ಯಾದಿ ಕಾರಣಗಳಿಂದ ಅಳಿವಿನಂಚಿನಲ್ಲಿದೆಯಂತೆ ಈ ಪ್ರಾಣಿ.


27-Mar-2018

ಬಾಲ್ಕನಿಯ ಗಿಡಗಳಿಗೆ ಹನಿ ನೀರಾವರಿ ಸಾಧನ

ಬೇಸಿಗೆ ರಜಾ ಪ್ರಾರಂಭವಾಗುವುದರಲ್ಲಿದೆ. ಮಕ್ಕಳಿಗೆ ಊರಿಗೋ ಅಥವಾ ಪ್ರವಾಸಕ್ಕೋ ಹೋಗುವ ಸಂಭ್ರಮ. ಮನೆಯಲ್ಲಿ ಎಲ್ಲರೂ ನಾಲ್ಕಾರು ದಿನಗಳ ಮಟ್ಟಿಗೆ ಹೊರಗೆ ಹೋಗಬೇಕೆಂದರೆ ಎದುರಾಗುವ ಸಮಸ್ಯೆಗಳು ಹಲವು. ಈ ನಗರದ ಪುಟ್ಟಪುಟ್ಟ ಮನೆಗಳಲ್ಲಿ ಮನ ತಣಿಸಲೆಂದೇ ಕುಂಡದಲ್ಲಿ ತುಳಸಿ, ಕರಿಬೇವು, ಬಸಲೆ, ಸೇವಂತಿಗೆ ಇತ್ಯಾದಿ ಗಿಡಗಳನ್ನು ಬೆಳೆಸಿರುತ್ತೇವೆ. ಈ ಬೇಸಗೆಯ ಝಳಕ್ಕೆ ನಾಲ್ಕಾರು ದಿನಗಳವರೆಗೆ ನೀರು ಹಾಕದಿದ್ದರೆ ಎಲ್ಲವೂ ಒಣಗಿ ಕರಕಲಾಗಿರುತ್ತವೆ. ಇದಕ್ಕೊಂದು ಉಪಾಯ ಸರಳವಾಗಿ ನಾವೇ ಮಾಡಿಕೊಳ್ಳಬಹುದಾದ ಹನಿ ನೀರಾವರಿ ಸಾಧನ.


 ಮುಚ್ಚಳವಿರುವ ಬಕೆಟ್ ತೆಗೆದುಕೊಂಡು ಕೆಳಭಾಗದಲ್ಲಿ ಒಂದು ಫಿಟಿಂಗ್ ಪೈಪ್ ತೂರಬಹುದಾದಷ್ಟು ದೊಡ್ಡದಾಗಿ ಕೊರೆದು  ಫಿಟ್ಟಿಂಗ್ ಪೈಪ್ ತೂರಿಸಿ ಎಂಸೀಲ್ ನಿಂದ ಅಂಟಿಸುವುದು. ನಂತರ ಇದಕ್ಕೆ ಪ್ಲಾಸ್ಟಿಕ್ ಟ್ಯೂಬ್ ಅನ್ನು ಜೋಡಿಸಿಕೊಳ್ಳಬೇಕು. ಬಕೆಟ್ ಸ್ವಲ್ಪ ಮೇಲ್ಭಾಗದಲ್ಲಿರಿಸಿ ಕೆಳಗೆ ನೀರಿನ ಅವಶ್ಯಕತೆ ತೀರಾ ಹೆಚ್ಚಿರುವ ಗಿಡಗಳಿರುವ ಕುಂಡಗಳನ್ನು ಸಾಲಾಗಿ ಇರಿಸಬೇಕು. ನೀರಿನ ಟ್ಯೂಬ್ ಅನ್ನು ಕುಂಡಗಳ ಮೇಲೆ ಇರಿಸಿ ಪ್ರತೀ ಗಿಡಗಳಿಗೂ ನೀರು ತಾಗುವಂತೆ ಟ್ಯೂಬಿನಲ್ಲಿ ಚಿಕ್ಕ ತೂತೊಂದನ್ನು ಕೊರೆಯಬೇಕು. ಟ್ಯೂಬಿನ ತುದಿಯನ್ನು ಲಂಬವಾಗಿ ನಿಲ್ಲಿಸಿದ ಕೋಲೊಂದಕ್ಕೆ ಬಿಗಿಯಾಗಿ ಕಟ್ಟಬೇಕು. ಬಕೆಟ್ ತುಂಬಾ ನೀರು ತುಂಬಿಸಿದೊಡನೆ ಟ್ಯೂಬ್ ಗಳಲ್ಲಿ ನೀರು ಹರಿಯುತ್ತದೆ. ಅದರಲ್ಲಿನ ಚಿಕ್ಕ ತೂತಿನ ಮೂಲಕ ಗಿಡಕ್ಕೆ ಹನಿಹನಿಯಾಗಿ ನೀರು ತಲುಪುತ್ತದೆ.  ಈ ತೂತುಗಳಲ್ಲಿ ಚಿಕ್ಕದೊಂದು ಕಡ್ಡಿಯನ್ನು ತೂರಿಸುವುದರ ಮೂಲಕ ಬೇಕಾದ ಪ್ರಮಾಣದ ಹನಿಯನ್ನು ಪಡೆಯಬಹುದು.(ಊರಿನಲ್ಲಿ ನಿಮಿಷ ಬಿಡುವಿಲ್ಲದೆ ತೋಟದ ಕೆಲಸದಲ್ಲಿ ಮುಳುಗುವ ಅಪ್ಪನಿಗೆ, ಈ ಬೆಂಗಳೂರಿನ ನಮ್ಮ ಮನೆಗೆ ಬಂದಾಗೆಲ್ಲ ಹೊತ್ತು ಕಳೆಯುವುದೇ ಕಷ್ಟವಾಗಿಬಿಡುತ್ತದೆ. ಹೊತ್ತು ಕಳೆಯಲು ಸಿಕ್ಕಾಪಟ್ಟೆ ಕ್ರಿಯೇಟಿವ್ ಆಗಿ ಏನನ್ನಾದರೂ ಮಾಡುವ ಅಭ್ಯಾಸವಿರುವ ಅಪ್ಪ ಈ ಬಾರಿ ಬಂದಾಗ ಈ ಮಿನಿ ಹನಿ ನೀರಾವರಿ ಸಾಧನವನ್ನ ಮಾಡಿಕೊಟ್ಟಿದ್ದಾರೆ.)  

20-Mar-2018

ನಾನೇನೂ “ಸ್ಲಾತ್” ಅಲ್ಲ!

Sloth (ಚಿತ್ರಕೃಪೆ -ಅಂತರ್ಜಾಲ)

"ಏ ಡುಮ್ಮೂಸ್  ಬಾ ಇಲ್ಲಿ ನಿನ್ನ ವಂಶದವರು ಟಿವಿಯಲ್ಲಿ ಬರ್ತಾ ಇದ್ದಾರೆ ನೋಡು" ಟಿವಿ ಎದುರು ಕುಳಿತಿದ್ದ ಗಂಡ ಕೂಗಿಕೊಂಡರು.  ನನಗೆ ಸಖೇದಾಶ್ಚರ್ಯವಾಗಿಬಿಟ್ಟಿತು. ಪಕ್ಕಾ ಕಲಹಪ್ರಿಯರಾದ ನನ್ನ ಗಂಡ ಟಿವಿ ಹಚ್ಚಿದಾಕ್ಷಣ ನೋಡೋದು ನ್ಯೂಸ್ ಚಾನಲ್‍ಗಳನ್ನ ಮಾತ್ರ. ಅದರಲ್ಲೂ ಚರ್ಚೆಯೆಂಬ ಹೆಸರಿನಲ್ಲಿ ಯಾರಾದ್ರೂ ನಾಲ್ಕು ಜನ ಕುಳಿತು ಒಬ್ಬರ ಮಾತೂ ಕೇಳದಂತೆ ಕೂಗಾಡುವ ಕಾರ್ಯಕ್ರಮಗಳು ಮತ್ತು "ನಾಲ್ಕು ದಿನಗಳ ಹಿಂದೆ ಅಕಾರಾಂತನು ಇಕಾರಾಂತನಿಗೆ ಮಧ್ಯರಾತ್ರಿಯಲ್ಲಿ ಹೊಡೆದದ್ದಕ್ಕೆ ಕಾರಣವೇನು ಗೊತ್ತಾ" ಎಂಬ ಒಂದೇ ಸಾಲಿನ ಸುದ್ದಿಯನ್ನು ಅರ್ಧಗಂಟೆಯವರೆಗೂ ವಿಚಿತ್ರ ಶೈಲಿಯಲ್ಲಿ ನಿರೂಪಿಸುವಂತಹ ಕಾರ್ಯಕ್ರಮಗಳೆಂದರೆ ತನ್ನನ್ನೇ ಮರೆತು ನೋಡುವ ಸ್ವಭಾವ ಅವರದು.  
 ಯಾರಾದ್ರೂ ಸ್ವಲ್ಪ ದೊಡ್ಡದಾಗಿ ಮಾತನಾಡುತ್ತಿದ್ದಾರೆಂದರೆ ಆ ಕಡೆ ತಲೆ ಹಾಕಿಯೂ ಮಲಗದ ನನ್ನ ತವರುಮನೆಯವರು ಇಂತಹ ಕಾರ್ಯಕ್ರಮಗಳಲ್ಲಿ ಬರುವಂತದ್ದೇನನ್ನು ಮಾಡಿರಬಹುದೆಂಬ ಗಾಭರಿಯಲ್ಲಿ ಹಾಲ್‍ಗೆ ಓಡಿಬಂದೆ.
ಕೆಲವೊಮ್ಮೆ ಎಲ್ಲಾ ನ್ಯೂಸ್ ಚಾನಲ್‍ಗಳೂ ಸಾಂಕ್ರಾಮಿಕವೆಂಬಂತೆ  "ಸಿನೆಮಾ ಸ್ಟಾರ್ ರಾಕೇಶ್ ಕುಮಾರ್ ಬೆಳಿಗ್ಗೆ ಉಪ್ಪಿಟ್ಟು ತಿಂದದ್ದು ಯಾಕೆ" ಎಂಬ ಬಗ್ಗೆ ಚರ್ಚೆಯಲ್ಲಿ ಮುಳುಗುವುದುಂಟಲ್ಲ! ಆಗ ನನ್ನ ಗಂಡನಿಗೆ ಅವುಗಳ ಮೇಲೆ ವೈರಾಗ್ಯ ಉಂಟಾಗಿ ಅನಿಮಲ್ ಪ್ಲಾನೆಟ್ ಅಥವಾ ಡಿಸ್ಕವರಿ ಹಾಕುವ ಅಭ್ಯಾಸವಿದೆ. ಪಾಪ ಇಂದು ಹಾಗೆಯೇ ಏನೋ ಆಗಿರಬೇಕು ಆದ್ದರಿಂದ ಅನಿಮಲ್ ಪ್ಲಾನೆಟ್ ಹಾಕಿದ್ದಾರೆ. ಆ ಚಾನಲ್‍ನಲ್ಲಿ ಸ್ಲಾಥ್ ಬಗ್ಗೆ ತೋರಿಸುತ್ತಿದ್ದಾರೆ. ದಕ್ಷಿಣ ಮತ್ತು ಮಧ್ಯ ಅಮೇರಿಕಾದ ಮಳೆಕಾಡುಗಳಲ್ಲಿ ವಾಸಿಸುವ ಈ ವಿಶಿಷ್ಟ ಜೀವಿ ನಿಧಾನವಾಗಿ ಚಲಿಸುವುದರಲ್ಲಿ ಬಸವನಹುಳುವಿಗೇ ಸ್ಫರ್ಧೆಯೊಡ್ಡಬಲ್ಲದು.  ತನ್ನ ಉದ್ದನೆಯ ಕೈಗಳಿಂದ ಮರದ ಕೊಂಬೆಯನ್ನು ಹಿಡಿದುಕೊಂಡು ಸ್ಲೋ ಮೋಷನ್ನಲ್ಲಿ ಇದು ಮರವೇರುವುದನ್ನು ನೋಡುವಾಗ ನಾವೇ ಅದನ್ನ ಎತ್ತಿ ಮರದ ಮೇಲೆ ಬಿಟ್ಟುಬಿಡೋಣ ಎನ್ನಿಸಿಬಿಡುತ್ತದೆ.   ಇದನ್ನು ನೋಡಿ ನನ್ನವರಿಗೆ ನನ್ನನ್ನೇ ಟಿವಿಯಲ್ಲಿ ನೋಡಿದಷ್ಟು ಖುಷಿಯಾಗಿಬಿಟ್ಟಿದೆ. ಎಲ್ಲಾ ಕೆಲಸಗಳನ್ನು ಸ್ವಲ್ಪ ನಿಧಾನಗತಿಯಲ್ಲೇ ಮಾಡುವ ನನ್ನನ್ನು ಇಷ್ಟು ದಿನ ಕೇವಲ ಬಸವನಹುಳುವಿಗಷ್ಟೇ ಹೋಲಿಸುತ್ತಿದ್ದರು, ಈಗ ಇನ್ನೊಂದು ಅದಕ್ಕಿಂತ ಸಶಕ್ತವಾದ ಉದಾಹರಣೆ ಸಿಕ್ಕಿಬಿಟ್ಟಿತ್ತು, ಈ ಸ್ಲಾತ್ ನಿಧಾನವಷ್ಟೇ ಅಲ್ಲ ದಿನದಲ್ಲಿ ಹೆಚ್ಚಿನ ಸಮಯ ಮರದ ಕೊಂಬೆಯಲ್ಲಿ ಬೇತಾಳನಂತೆ ಉಲ್ಟಾ ಜೋತಾಡುತ್ತಾ ನಿದ್ರಿಸುತ್ತಿರುತ್ತದೆ.

ಏನೋ ನಾನು ಸ್ವಲ್ಪ ನಿಧಾನವಾಗಿ ಕೆಲಸಕಾರ್ಯಗಳನ್ನ ಮಾಡುತ್ತೇನೆ, ಅಲ್ಪ ಸ್ವಲ್ಪ ಸೋಮಾರಿತನವೂ ಇದೆ ಎಂದ ಮಾತ್ರಕ್ಕೆ ಹೀಗೆ ಇದಕ್ಕೆ ಹೋಲಿಸುವುದೇ? ಅದೂ ಅಲ್ಲದೆ ಹೀಗೆ ವಂಶದ ಸುದ್ದಿಗೆಲ್ಲಾ ಬಂದಾಗ ಸುಮ್ಮನಿರಲಾಗುತ್ತದೆಯೇ! ಶುರುವಾಯ್ತು ಮಹಾಭಾರತ. "ಹೂಂ ನಿಜ ಕಣ್ರೀ ಇದು ನಾನೇ ಅಂದ್ಕೊಳ್ಳಿ, ಸುಮ್ಮನೇ ಗಡಿಬಿಡಿ, ಗಾಭರಿ ಮಾಡಿಕೊಂಡು ನಮ್ಮ ಶಕ್ತಿ ಖಾಲಿಮಾಡಿಕೊಂಡು ಕೆಲಸವನ್ನೂ ಹಾಳು ಮಾಡಿಕೊಳ್ಳುವುದರ ಬದಲು ಇದರಂತೆ ಬುದ್ಧಿವಂತಿಕೆಯಿಂದ ಬೇಕಾದಷ್ಟೇ ಶಕ್ತಿ ಉಪಯೋಗಿಸೋದು ಒಳ್ಳೆಯದು. ನನ್ನ ವಂಶದ ಸುದ್ದಿ ಬೇಡ ಇಷ್ಟಕ್ಕೂ ನನ್ನ ಮನೆಯವರ್ಯಾರು ಇಷ್ಟು ಸ್ಲೋ ಇಲ್ಲ ಗೊತ್ತಾ! ನನ್ನ ಅಜ್ಜ ನಿಮ್ಮಂತೆಯೇ ಹತ್ತು ಗಂಟೆಯ ಬಸ್ಸಿಗೆಂದು ಎಂಟು ಗಂಟೆಗೇ ಬಸ್ ಸ್ಟಾಂಡ್‍ಗೆ ಹೋಗಿ ಕಾಯುವ ಜಾತಿ...ವಂಶದ ಸುದ್ದಿಗೆ ಬರಬೇಡಿ"
“ನಾವೇನಾದ್ರೂ ಮಾತನಾಡಿದರೆ ನೀನು ಹಾಂ, ಹೂಂ ಎನ್ನಲೂ ಅರ್ಧ ದಿನ ತೆಗೆದುಕೊಳ್ಳುತ್ತೀ” ಎಂಬುದು ನನ್ನ ಮೇಲಿರುವ ಇನ್ನೊಂದು ಅಪವಾದವಾದರೂ ಯಾವ ಸಮಯಕ್ಕೆ ಎಲ್ಲಿ ಎಷ್ಟು ಚುರುಕಾಗಿ ಏಟು ಕೊಡಬೇಕೆಂಬುದು ನಮಗೆ ಅಂದರೆ ಹೆಣ್ಣುಜಾತಿಗೆ ಜನ್ಮಜಾತ ವಿದ್ಯೆಯಾಗಿರುತ್ತದೆ ನೋಡಿ ಹಾಗಾಗಿ ರಾಯರು ಗಪ್‍ಚಿಪ್.

ಪ್ರತೀ ಬಾರಿ ರಾತ್ರಿ ಬಸ್‍ನಲ್ಲಿ ಊರಿಗೆ ಹೊರಡುವಾಗಲೂ, ಟ್ರಾಫಿಕ್ ಕಾರಣ ಕೊಟ್ಟು ಕನಿಷ್ಟ ಎರಡು ತಾಸು ಮೊದಲು  ಬಸ್ ಸ್ಟ್ಯಾಂಡ್‍ ತಲುಪುವಂತೆ ಮಾಡಿ ಅಲ್ಲಿ ಸೊಳ್ಳೆ ಹೊಡೆಯುವ ಕೆಲಸ ಕೊಡುತ್ತಾರಲ್ಲ ಹಾಗಾಗಿ ಈ ಶರಣಾಗತಿ.

"ಹಾ ಹಾ ಗೊತ್ತು ಮಾರಾಯ್ತಿ ಸುಮ್ಮನೇ ತಮಾಷೆಗೆ ಹೇಳಿದ್ನಪ್ಪಾ" ಕಲಹಪ್ರಿಯರ ಧ್ವನಿ ರಾಜೀಸೂಚಕವಾಗಿದ್ದರಿಂದ ಕದನವಿರಾಮ ಬಿತ್ತು.

 ನಾನು ಸ್ವಲ್ಪ ನಿಧಾನ ಎನ್ನಿಸೋದಿಕ್ಕೆ ನನ್ನ ಸುತ್ತಮುತ್ತ ಇರುವವರೆಲ್ಲಾ ತೀರಾ ಗಡಿಬಿಡಿಯ ಮನುಷ್ಯರಾಗಿರೋದು ಕಾರಣವೇ ಹೊರತು ನಾನು ಸರಿಯಾಗೇ ಇದ್ದೀನಿ ಎಂಬುದು ನನ್ನ ಬಲವಾದ ಪ್ರತಿಪಾದನೆ.

ಮೊಟ್ಟಮೊದಲು ನಾನು ಸ್ವಲ್ಪ ನಿಧಾನ ಎಂಬ ಹೆಸರು ಬರಲು ಕಾರಣ ನನ್ನ ತಂಗಿ. ನಾನು ಒಂದು ಮಾತನಾಡುವಷ್ಟರಲ್ಲಿ ಅವಳು ನಾಲ್ಕು ಮಾತು ಆಡಿರುತ್ತಿದ್ದಳು. ವಾಲಿಸುಗ್ರೀವರ ಫೀಮೇಲ್ ವರ್ಷನ್ ತರಹ ಇದ್ದ ನಾವು ಜಗಳ ಆಡುವಾಗಲೂ ಸಹ, ನಾನು ಒಂದು ಹೊಡೆದರೆ ಅವಳು ತಿರುಗಿ ನಾಲ್ಕು ಕೊಟ್ಟು ನಾನಿನ್ನೇನು ಅಳಬೇಕೆಂದು ಯೋಚಿಸುವಷ್ಟರಲ್ಲಿ ತಾನು ಜೋರಾಗಿ ಅತ್ತು ದೊಡ್ಡವರೆದುರು ನನ್ನನ್ನು ಕೆಟ್ಟವಳನ್ನಾಗಿಸುತ್ತಿದ್ದಳು.  ಎಲ್ಲದಕ್ಕೂ ಕಲಶವಿಟ್ಟಂತೆ ಪ್ರತೀದಿನ ನಾನಿನ್ನೂ ಸ್ನಾನ ಮಾಡುತ್ತಿರುವಾಗಲೇ ಅವಳು ಸ್ಕೂಲಿಗೆ ಹೊರಟುಬಿಡುತ್ತಿದ್ದಳು. ಇದರಿಂದ ಮನೆಯಲ್ಲಿ ಎಲ್ಲರೂ ನಾನು ಸ್ಲೋ ಎಂಬ ತೀರ್ಮಾನಕ್ಕೆ ಬಂದುಬಿಡುತ್ತಿದ್ದರು.  ಆದರೆ ನಾನು ಸ್ನಾನ ಮುಗಿಸಿ, ತಿಂಡಿ ತಿಂದು, ತಲೆಬಾಚಿಕೊಂಡು, ಹೊರಟು ಒಂದು ಕಿಮೀ ದೂರದಲ್ಲಿದ್ದ ಬಸ್ ಸ್ಟ್ಯಾಂಡ್ ತಲುಪುವ ಎರಡು ನಿಮಿಷ ಮೊದಲಷ್ಟೇ ಅವಳು ಅಲ್ಲಿ ತಲುಪಿರುತ್ತಿದ್ದಳು.  ಎರಡು ತಿಂಗಳಿಂದ ಹಿಡಿದು ಎಂಬತ್ತು ವರ್ಷದವರೆಗಿನ ವಯೋಮಾನದ ಊರಿನ ಜನರನ್ನೆಲ್ಲಾ ಮಾತನಾಡಿಸಿಕೊಂಡು ಜಗಳಗಿಗಳ ಮುಗಿಸಿ ಬರಬೇಕಿದ್ದುದರಿಂದ ಅವಳು ಬೇಗ ಹೊರಡುತ್ತಿದ್ದಳಷ್ಟೇ. ಇದನ್ನ ಹೇಳಿದರೂ ಮನೆಯಲ್ಲಿ ನಾನು ನಿಧಾನಿ ಎಂಬ ಪಟ್ಟ ತಪ್ಪಿಸಲಾಗಲಿಲ್ಲ.
ಚಿನಕುರಳಿ ಪಟಾಕಿಯಂತೆ ಪಟಪಟ ಮಾತನಾಡುತ್ತಾ ಅಲ್ಲಿಂದಿಲ್ಲಿಗೆ ಓಡಾಡುತ್ತಾ ಇರುತ್ತಿದ್ದ ತಂಗಿಯನ್ನೂ, ಎಲ್ಲಾದರೊಂದು ಮೂಲೆಯಲ್ಲಿ ಕೈಯಲ್ಲೊಂದು ಪುಸ್ತಕ ಹಿಡಿದೋ ಅಥವಾ ಕಟ್ಟಿದ ಜೇಡರ ಬಲೆಯನ್ನೋ ಹರಿಯುತ್ತಿದ್ದ ಇರುವೆಯನ್ನೋ ನೋಡುತ್ತಾ ಗಂಟೆಗಟ್ಟಲೇ ಕೂರುತ್ತಿದ್ದ ನನ್ನನ್ನೂ ನೋಡಿ ಕೆಲವರು “ಎರಡನೆಯವಳು ಇಷ್ಟು ಚುರುಕು, ಮೊದಲನೆಯವಳ್ಯಾಕೆ ಹಾಗಿದ್ದಾಳೆ?” ಅಂತ ಅಮ್ಮನಲ್ಲಿ ಕೇಳುವುದಿತ್ತು!!

ಕೂಡು ಕುಟುಂಬದಲ್ಲಿದ್ದ ನಮ್ಮ ಮನೆಯಲ್ಲಿ ಮೊದಲು ಉಳಿದವರಿಗೆಲ್ಲಾ ಬಡಿಸಿ ನಂತರ ಅಮ್ಮ, ಚಿಕ್ಕಮ್ಮ, ಅಜ್ಜಿ ಊಟಕ್ಕೆ ಕೂರುತ್ತಿದ್ದರು. ನಾನು ಊಟಕ್ಕೆ ಕೂರುತ್ತಿದ್ದುದು ಮೊದಲ ಪಂಕ್ತಿಯಲ್ಲಿ ಅಜ್ಜನ ಜೊತೆಗೆ ಆದರೆ ಏಳುತ್ತಿದ್ದುದು ಮಾತ್ರ ಎರಡನೆಯ ಪಂಕ್ತಿಯ ಅಜ್ಜಿಯ ಜೊತೆಗೆ. ಇದು ನಾನು ಸ್ವಲ್ಪ ಸ್ಲೋ ಎಂಬ ತಪ್ಪು ಕಲ್ಪನೆ ಬರಲು ಇನ್ನೊಂದು ದೊಡ್ಡ ಕಾರಣ. ಆದರೆ ಅಜ್ಜ ಕಲೆಸಿಕೊಡುವ ಉಪ್ಪಿನಕಾಯಿ ಅನ್ನದ ಜೊತೆಗೆ ಅಜ್ಜಿ ಕಲೆಸಿಕೊಡುವ ಮೊಸರನ್ನವನ್ನು ಸವಿಯುವ ಆಸೆಗಾಗಿಯಷ್ಟೇ ನಾನು ಅಷ್ಟು ನಿಧಾನ ಊಟಮಾಡುತ್ತಿದ್ದು ಎಂಬುದನ್ನು ಯಾರೂ ಗಮನಿಸಲಿಲ್ಲ.

ಕೂಡು ಕುಟುಂಬದಲ್ಲಿದ್ದುದು, ಅಜ್ಜಿಯ ಮುದ್ದಿನ ಮೊಮ್ಮಗಳಾಗಿದ್ದುದು ಮನೆಯಲ್ಲಿ ಯಾವುದೇ ಕೆಲಸಗಳನ್ನು ಮಾಡದೇ ಬೆಳೆಯಲು ಕಾರಣವಾಯ್ತೇ ಹೊರತು ನನ್ನ ಸೋಮಾರಿತನದಿಂದಲ್ಲವೇ ಅಲ್ಲ.

ಊರಿನಲ್ಲಿ ನನ್ನ ಓರಗೆಯ ಗೆಳತಿಯರೂ ಅದೇನೋ ಚುರುಕುತನದ ಗುಳಿಗೆ ನುಂಗಿಯೇ ಹುಟ್ಟಿದವರಂತಿದ್ದರು. ಊರೊಟ್ಟಿನ ಕಾರ್ಯಕ್ರಮಗಳಲ್ಲಿ ರಂಗೋಲಿ ಬಿಡಿಸುವುದರಿಂದ ಹಿಡಿದು, ಊಟ ಬಡಿಸುವವರೆಗೆ ಮುನ್ನುಗ್ಗಿ ಎಲ್ಲಾ ಕೆಲಸ ಮಾಡುತ್ತಿದ್ದರು. ಮನೆಯಲ್ಲೇ ಒಂದೂ ಕೆಲಸ ಮಾಡದ ನಾನು ಇನ್ನು ಬೇರೆ ಕಡೆ ಮಾಡುವುದುಂಟೆ, ಹಾಗಾಗಿ ಇಂತಹ ಸಮಯದಲ್ಲೆಲ್ಲಾ ನಾನು ಮತ್ತು ನನ್ನಷ್ಟೇ ಸೋಮಾರಿಯಾದ ಇನ್ನೊಬ್ಬ ಗೆಳತಿಯೂ ಭೂಗತರಾಗಿಬಿಡುತ್ತಿದ್ದೆವು.
ಅವರೆಲ್ಲಾ ಹಾಡು ಡ್ಯಾನ್ಸ್ ಎಂದು ಹಲವುಹತ್ತು ಹವ್ಯಾಸಗಳನ್ನೂ ರೂಢಿಸಿಕೊಂಡು ನೋಡುವವರ ಎದುರು ಸಿಕ್ಕಾಪಟ್ಟೆ ಚುರುಕು ಹುಡುಗಿಯರು ಎನ್ನಿಸಿಕೊಂಡಿದ್ದರೆ, ನಾನು ನನ್ನ ಹವ್ಯಾಸವನ್ನೂ ಎಚ್ಚರಿಕೆಯಿಂದ ರೂಢಿಸಿಕೊಂಡಿದ್ದೆ. ಯಾವುದೇ ರೀತಿಯಲ್ಲಿ ಮೈಕೈ ನೋವಾಗುವ ಪ್ರಮೇಯವೇ ಇಲ್ಲದಂತದ್ದು ಈ ಹವ್ಯಾಸ. ಕೈಯಲ್ಲೊಂದು ಪುಸ್ತಕ ಹಿಡಿದು ಸುಮ್ಮನೇ ಒಂದು ಕಡೆ ಕುಳಿತುಕೊಂಡರಾಯಿತು. ನೋಡುವವರಿಗೆ ಇವಳು ಸಿಕ್ಕಾಪಟ್ಟೆ “ಇಂಟೆಲೆಕ್ಚುಯಲ್”  ಎಂಬ ಭ್ರಮೆಯನ್ನೂ ಉಂಟುಮಾಡಬಹುದು. ಹಾಂ ಕೆಲವರು ಇದನ್ನ ಸೋಮಾರಿತನ ಎಂದು ಹೇಳಬಹುದು; ಅದಕ್ಕೆ ಕಿವಿಗೊಡದಿದ್ದರಾಯಿತು ಅಷ್ಟೇ!


ಊರಿನಲ್ಲಿ ಗಡಿಬಿಡಿಯ ಮನೆತನವೆಂದೇ ಹೆಸರಾಗಿದ್ದ ಮನೆಯಲ್ಲಿ ಹುಟ್ಟಿದ ನಾನು ಸೇರಿದ್ದು ಕೂಡ ಇಂತಹದ್ದೇ ಇನ್ನೊಂದು ಮನೆಗೆ.
ನೋಡಿದೊಡನೆಯೆ ಒಪ್ಪಿಯಾಯ್ತು, ಒಂದೇ ವಾರದಲ್ಲಿ ವರನ ಮನೆಗೆ ಹೋಗಿ ಬಂದದ್ದಾಯ್ತು, ತಿಂಗಳೊಳಗೆ ನಿಶ್ಚಿತಾರ್ಥ, ಇನ್ನೊಂದು ತಿಂಗಳೊಳಗೆ ಮದುವೆಯೂ ನಡೆದಾಯ್ತು.
ಎರಡೂ ಕಡೆಯವರಿಗೂ ಗಡಿಬಿಡಿ, ಮದುವೆ ದಿನವಂತೂ ಇವರುಗಳ ಗಡಿಬಿಡಿಗೆ ಪುರೋಹಿತರೇ ಸುಸ್ತುಹೊಡೆದರು, ಒಂಬತ್ತು ಗಂಟೆಯ ಮುಹೂರ್ಥಕ್ಕೆ ಆರು ಗಂಟೆಗೇ ವಧೂವರರು ಸಿದ್ಧರಾಗಿ ಕುಳಿತಿದ್ದೆವು ಎಂಬಲ್ಲಿಗೆ ಉಳಿದುದನ್ನು ಊಹಿಸಿಕೊಳ್ಳಿ. (ಅಂದು ನನ್ನನ್ನೂ ಬೇಗನೇ ಎಬ್ಬಿಸಿ ಸಿದ್ಧಪಡಿಸುವ ಜವಾಬ್ದಾರಿ ಅಮ್ಮನದೇ ಆಗಿತ್ತಾದ್ದರಿಂದ ನನ್ನ ಬಣ್ಣ ಬಯಲಾಗುವ ಪ್ರಸಂಗ ಇರಲಿಲ್ಲ)

ಬೆಳಗ್ಗೆ ಏಳೂವರೆ-ಎಂಟು ಗಂಟೆಗೆ ತಿಂಡಿ ತಿನ್ನುವ ಅಭ್ಯಾಸ ಗಂಡನ ಮನೆಯವರದ್ದು. ಬೆಳಿಗ್ಗೆ ಏಳುಗಂಟೆಯ ಒಳಗೆ ಎದ್ದು ಅಭ್ಯಾಸವೇ ಇರದಿದ್ದ ನಾನು ಕಷ್ಟಪಟ್ಟು ಆರೂವರೆಗೇ ಎದ್ದು ಏನಾದರೂ ಸ್ವಲ್ಪ ಕೆಲಸ ಮಾಡೋಣವೆಂದು ನೋಡಿದರೆ ಅಷ್ಟರಲ್ಲಿ ಚಟ್ನಿ ಪಲ್ಯ ಎಲ್ಲವನ್ನೂ ರೆಡಿ ಮಾಡಿ ದೋಸೆ ಎರೆಯಲು ಕಾವಲಿಯನ್ನೂ ಸಿದ್ಧಪಡಿಸಿ ಇಟ್ಟಿರುತ್ತಿದ್ದರು ಅತ್ತೆ.  ಇನ್ನು ಅಡಿಗೆಗೆಂದು ನಾನು ತರಕಾರಿ ಹೆಚ್ಚುವಷ್ಟರಲ್ಲಿ ಅತ್ತೆಗೆ ಮಸಾಲೆಗೆಲ್ಲಾ ಸಿದ್ಧಪಡಿಸಿ, ಕಾಯಿ ತುರಿದು, ಮಿಕ್ಸಿ ಹಾಕಿ ಎಲ್ಲವನ್ನೂ ತಯಾರಿಸಿ ಆಗುತ್ತಿತ್ತು.  ನೋಡಿದವರಿಗೆ ನಾನು ನಿಧಾನ ಎನ್ನಿಸಿಬಿಡಲು ಇಷ್ಟು ಸಾಕಲ್ಲವೇ? 
ಮಾವನವರು ನೋಡಲು ನಿಧಾನಿಯಂತೆ ಕಾಣಿಸಿದರೂ ಗಡಿಬಿಡಿಗೇನೂ ಕೊರತೆಯಿರಲಿಲ್ಲ. ಯಾವುದಾದರೂ ವಿಷಯ ತಲೆಗೆ ಬಂತೆಂದರೆ ತಕ್ಷಣದಲ್ಲಿ ಕಾರ್ಯಪ್ರವೃತ್ತರಾಗುವ ಸ್ವಭಾವ ಅವರದು. 

ಇನ್ನು ನನ್ನ ಗಂಡನಂತೂ  ಗಾಳಿವೇಗದ ಸರದಾರ ಅಂತೇನೋ ಹೇಳುತ್ತಾರಲ್ಲ ಅಂತಹ ಜನ. ನಾವಿಬ್ಬರೂ ಒಟ್ಟಿಗೇ  ವಾಕಿಂಗ್ ಹೋಗುವುದುಂಟು. ಅವರು ತೀರಾ ಕಷ್ಟಪಟ್ಟು ನಿಧಾನವಾಗಿ ನಡೆಯುವ ವೇಗ ನನ್ನ  ಓಡುವ ವೇಗಕ್ಕೆ ಸಮನಾಗಿರುತ್ತದೆ ಎಂದರೆ ನಾವಿಬ್ಬರೂ ಹೋಗುವಾಗ ಹೇಗೆ ಕಾಣುತ್ತೇವೆಂಬುದನ್ನು ವಿವರಿಸಬೇಕಾದ ಅಗತ್ಯವಿಲ್ಲ ಅಲ್ಲವೇ?   ರಸ್ತೆಯಲ್ಲಿ ಜನ ನಿಂತು ನೋಡಿ ಬಾಯಿಗೆ ಕೈ ಅಡ್ದ ಇಟ್ಟು ನಗುವುದಕ್ಕೆಲ್ಲಾ ನಾವು ತಲೆಕೆಡಿಸಿಕೊಂಡಿಲ್ಲ ಬಿಡಿ.

ಬರ್ಥ್‍ಡೇ, ಆರತಾಕ್ಷತೆ ಇತ್ಯಾದಿ ಫಕ್ಷನ್‍ಗಳಿಗೆ ಹೋಗುವಾಗ ನನ್ನ ಮಗಳೂ ನಾನೂ ಇಬ್ಬರೂ ಒಂದು ಪುಸ್ತಕ ಜೊತೆಗೊಯ್ದುಬಿಡುತ್ತೇವೆ. ನಾವು ಹೋಗುವ ವೇಳೆಗೆ ಎಷ್ಟೋ ಕಡೆ ಇನ್ನೂ ಆ ಕಾರ್ಯಕ್ರಮ ನಡೆಸಲಿರುವ ಮನೆಯ ಜನರೇ ಬಂದಿರುವುದಿಲ್ಲವಲ್ಲ, ಆಗ ಓದುತ್ತಾ ಕುಳಿತುಕೊಳ್ಳಲು ಈ ವ್ಯವಸ್ಥೆ.

ಯಜಮಾನರು ಕವಿಯಾಗಿರುವುದರಿಂದ ಕೆಲವು ಸಮಾರಂಭಗಳಿಗೆ ಅಧ್ಯಕ್ಷರಾಗಲು ಕರೆಯುತ್ತಾರೆ. ಇವರು ಕಾರ್ಯಕ್ರಮಕ್ಕೆ ಎಷ್ಟು ಬೇಗ ಹೋಗಿಬಿಡುತ್ತಾರೆಂದರೆ ಇವರು ಹೋಗುವ ವೇಳೆಗಿನ್ನೂ ಸಂಘಟಕರು ಕುರ್ಚಿಗಳನ್ನು ಹಾಕಿಸುತ್ತಿರುತ್ತಾರೆ. ಅಷ್ಟು ಬೇಗ ಬಂದ ಈ ಅಧ್ಯಕ್ಷರನ್ನು ನೋಡಿ ಸಂಘಟಕರು ಗೊಂದಲಕ್ಕೊಳಗಾಗಿ ಬಿಡುತ್ತಾರೆ. ಒಮ್ಮೆ ಒಬ್ಬ ಸಂಘಟಕರು “ಸರ್ ಸಭೆ ಪ್ರಾರಂಭವಾಗಲು ಇನ್ನೂ ಎರಡು ತಾಸು ಸಮಯವಿದೆ, ನಿಮಗೆಲ್ಲೋ ನಾನು ತಪ್ಪಿ ಸಮಯ ಹೇಳಿಬಿಟ್ಟಿರಬೇಕು ಸಾರಿ ಸರ್” ಎಂದು ಕ್ಷಮೆ ಕೂಡ ಕೇಳಿಬಿಟ್ಟಿದ್ದರು ಪಾಪ!!   ಅಧ್ಯಕ್ಷರೆಂದರೆ ಸ್ವಲ್ಪವಾದರೂ ಮರ್ಯಾದೆ ಬೇಡವೆ? “ತೀರಾ ಅಷ್ಟು ಬೇಗ ಹೋದರೆ ಸುಮ್ಮನೇ ಕೆಲಸವಿಲ್ಲದೇ ಖಾಲಿ ಇದ್ದೀರಿ ಎಂದುಕೊಳ್ಳುತ್ತಾರೆ ಸಮಯಕ್ಕೆ ಸರಿಯಾಗಿ ಹೋಗಿ” ಎಂಬ ನನ್ನ ಮಾತನ್ನು ಇವರು ಕೇಳುವುದೇ ಇಲ್ಲ. ಇಂತಹ ಗಂಡನೆದುರು ನಾನು ಸ್ಲೋ ಅನ್ನಿಸೋದು ಸಹಜ ಅಲ್ವಾ?

ಆಫೀಸ್‍ನಲ್ಲಿಯೂ ನನ್ನ ಬಾಸ್ ಆಗಾಗ ನನಗೆ “ನೀವು ತುಂಬಾ ಸ್ಲೋ ಮೇಡಂ ಹೀಗಾದರೆ ಹೇಗೆ? ಚುರುಕಾಗಬೇಕು” ಎಂದು  ಕ್ಲಾಸ್ ತೆಗೆದುಕೊಳ್ಳುವುದುಂಟು. ಕೆಲಸಗಾರದ ಅತೀ ಚಿಕ್ಕ ತಪ್ಪನ್ನೂ ಭೂತಕನ್ನಡಿಯಿಟ್ಟು ಎತ್ತಿ ತೋರಿಸದಿದ್ದಲ್ಲಿ ಆತ “ಬಾಸ್”  ಆಗಲು ಸಾಧ್ಯವೆ? ಹಾಗಾಗಿ ನಾನು ಹೆಚ್ಚು ತಲೆ ಕೆಡಿಸಿಕೊಳ್ಳದೆ ಆಯ್ತು ಬಿಡಿ ಸರ್ ಆಗ್ತೇನೆ ಎಂದುಬಿಡುವೆ.

ಒಟ್ಟಾರೆ ಈ ಮೂಲಕ ನಾನು ಸ್ಪಷ್ಟ ಪಡಿಸುವುದೇನೆಂದರೆ ನನ್ನ ಗಂಡ ಹೇಳಿದಂತೆ ನಾನೇನು ಸ್ಲಾತ್ ಎಂಬ ಪ್ರಾಣಿಯಷ್ಟು ನಿಧಾನವೂ ಅಲ್ಲ, ಸೋಮಾರಿಯೂ ಅಲ್ಲ. 
ತಮ್ಮ ಚುರುಕುತನದಿಂದ ನನ್ನಲ್ಲಿ ಅನಾವಶ್ಯಕವಾದ ಕೀಳರಿಮೆ ಹುಟ್ಟುಹಾಕುವ ಈ ನಶ್ವರ ಪ್ರಪಂಚದಲ್ಲಿ ನನ್ನ ಮಗಳೊಬ್ಬಳು ಥೇಟ್ ನನ್ನನ್ನೇ ಹೋಲುವ ಮೂಲಕ ನನಗೆ ಸಾಂತ್ವಾನ ನೀಡುತ್ತಿದ್ದಾಳೆ.