ನಾವು ಮನುಜರು ನಮ್ಮ ಸುತ್ತಮುತ್ತ ವಾಸಿಸುವ ಪ್ರಾಣೀ ಪಕ್ಷಿಗಳ ಬಗ್ಗೆ ಅನೇಕ ರೀತಿಯ ನಂಬಿಕೆ ಅಪನಂಬಿಕೆಗಳನ್ನು ಬೆಳೆಸಿಕೊಂಡುಬಿಟ್ಟಿರುತ್ತೇವೆ. ಕಾಗೆ ಕೂಗಿದರೆ ನೆಂಟರು ಬರುತ್ತಾರೆ, ಕೆಂಭೂತ ಕಾಣಿಸಿದರೆ ಸಿಹಿ ಸಿಗುತ್ತದೆ ಮುಂತಾದವು ಸಕಾರಾತ್ಮಕ ನಂಬಿಕೆಗಳಾದರೆ ನಾಯಿ ಊಳಿಟ್ಟರೆ, ಬೆಕ್ಕು ಅಡ್ದ ಹಾಯ್ದರೆ, ಹಲ್ಲಿ ಲೊಚಗುಟ್ಟಿದರೆ ಅಪಶಕುನ,ಕೆಡುಕು ಎಂಬ ಭ್ರಮೆಯೂ ನಮ್ಮ ಸಮಾಜದಲ್ಲಿ ಹಾಸುಹೊಕ್ಕಾಗಿದೆ.
ಬಹುಶ: ಇವುಗಳಲೆಲ್ಲ ಅತ್ಯಂತ ಅವಜ್ಞೆಗೆ ಗುರಿಯಾದ ಪಕ್ಷಿ ಗೂಬೆ. ಅದು ಕೂಗಿದರೆ, ಮನೆಯ ಬಳಿ ಬಂದರೆ ಕೊನೆಗೆ ಕಾಣಿಸಿಕೊಂಡರೂ ಅಪಶಕುನವೆಂದು ತಿಳಿಯುವವರಿದ್ದಾರೆ.[ಮಾನ್ಯ ಮುಖ್ಯಮಂತ್ರಿಗಳ ನಿವಾಸದ ಬಳಿ ವಾಸಿಸುತ್ತಿರುವ ಗೂಬೆಯಿಂದ ಅವರಿಗೆ ತೊಂದರೆಯಿದೆಯೆಂದು ಇತ್ತೀಚೆಗೆ ಖ್ಯಾತ ಜ್ಯೋತಿಷಿಯೊಬ್ಬರು ವಿಜಯ ಕರ್ನಾಟಕದಲ್ಲಿ ಹೇಳಿಕೆಯಿತ್ತಿದ್ದಾರೆ.]
ವಿಚಿತ್ರವೆಂದರೆ ಕೆಲವು ಕಡೆ ಇವು ಅದೃಷ್ಟದ ಸಂಕೇತವೆಂದು ಪೂಜಿಸಲ್ಪಡುತ್ತವೆ. ಗ್ರೀಕರ ನಂಬಿಕೆಯ ಪ್ರಕಾರ ಗೂಬೆಗಳು ಅದೃಷ್ಟ ಮತ್ತು ಬುದ್ದಿವಂತಿಕೆಯ ಸಂಕೇತ.ಆದರೆ ನಮ್ಮಲ್ಲಿ ಪೆದ್ದರಿಗೆ ಗೂಬೆಯೆಂದೆ ಅಣಕಿಸುವವರಿದ್ದಾರೆ.
ವೈಜ್ಞಾನಿಕವಾಗಿ ಉಳಿದೆಲ್ಲ ಮಾಂಸಾಹಾರಿ ಪಕ್ಷಿಗಳಂತೆಯೆ ಇರುವ ಗೂಬೆ ತನ್ನ ನಿಶಾಚರ ಚಟುವಟಿಕೆಯಿಂದಾಗಿ ಈರೀತಿಯ ಅಪಖ್ಯಾತಿಗೆ ಒಳಗಾಗಿರಬಹುದು.
ಈ ನಿಶಾಚರಿಗಳ ಜೀವನಕ್ರಮವು ಕೌತುಕಮಯವಾಗಿದೆ. ನಿಶಾಚರ ಜೀವನ ನಡೆಸಲು ಅಗತ್ಯವಾದ ಅನೇಕ adoptationಗಳನ್ನು ಇದು ಹೊಂದಿದೆ.
- ಕಣ್ಣಿನಲ್ಲಿ ಮಸುಕು ಬೆಳಕು ಗುರಿತಿಸುವ ’ರಾಡ್” ಗಳ ಸಂಖ್ಯೆ ಹೆಚ್ಚಿದೆ-ಇದು ಸಾಯಂಕಾಲದ ಮಸುಕು ಬೆಳಕಿನಲ್ಲಿ ಇದು ಚಟುವಟಿಕೆಯಿಂದಿರಲು ಸಹಾಯಕ.
- ಅತ್ಯುತ್ತಮ ಶ್ರವಣಸಾಮರ್ಥ್ಯದಿಂದ ಬೇಟೆಯ ದಿಕ್ಕು ಸುಲಭವಾಗಿ ತಿಳಿಯುತ್ತದೆ.
- ರೆಕ್ಕೆಗಳ ನಡುವೆ fringeಗಳಿರುವುದರಿಂದ ಅದು ಹಾರುವಾಗ ಸ್ವಲ್ಪವೂ ಶಬ್ದವಾಗುವುದಿಲ್ಲ. ಆದ್ದರಿಂದ ಬೇಟೆಗೆ ಇದು ಹತ್ತಿರ ಬಂದದ್ದು ತಿಳಿಯುವುದಿಲ್ಲ.
ಇವೆಲ್ಲ ಕಾರಣದಿಂದ ಗೂಬೆಗಳು ರಾತ್ರಿ ಚಟುವಟಿಕೆಯಿಂದಿದ್ದು ಹಗಲು ಯಾವುದೊ ಮರದ ಪೊಟರೆಯಲ್ಲೊ ನಿದ್ರಿಸುತ್ತಿರುತ್ತವೆ.
ಒಂದೇ ಸಂಗಾತಿಯೊಡನೆ ವಾಸಿಸುವ ಇವುಗಳು ಗೂಡು ಕಟ್ಟುವುದಿಲ್ಲ. ಬೇರೆ ಹಕ್ಕಿಯ ಖಾಲಿ ಗೂಡುಗಳಲ್ಲಿ,ಮರದ ಪೊಟರೆಗಳಲ್ಲಿ,ಕೆಲವು ಗೂಬೆಗಳು ಸಸ್ತನಿಗಳ ಖಾಲಿ ಬಿಲದಲ್ಲಿ ಕೂಡ ಮೊಟ್ಟೆಯಿಡುತ್ತವೆ.ಹೆಣ್ಣುಹಕ್ಕಿಗೆ ಕಾವು ಕೊಡುವ ಕೆಲಸವಾದರೆ ಗಂಡಿಗೆ ಅದಕ್ಕೆ ಮತ್ತು ಮರಿಗಳಿಗೆ ಆಹಾರ ಪೂರೈಸುವ ಕೆಲಸ. ನೋಡಿ ಹೇಗಿದೆ ಸಹಬಾಳ್ವೆ.
ಇನ್ನು ವೈಜ್ಞಾನಿಕವಾಗಿ ಹೇಳುವುದಾದರೆ ಇವುಗಳಿಂದ ಮಾನವರಿಗೆ ಉಪಯೋಗವೆ ಇದೆ.
- ರೈತರೆ ಬೆಳೆಗೆ ಕಂಟಕವಾಗುವ ಇಲಿ,ಹೆಗ್ಗಣ,ಅಳಿಲು,ಅನೇಕ ಕೀಟಗಳು,ಚಿಕ್ಕ ಪುಟ್ಟ ಪಕ್ಷಿಗಳು ಗೂಬೆಯ ಆಹಾರ. ಆದ್ದರಿಂದಲೆ ಇದು ರೈತರಿಗೆ ಉಪಕಾರಿ.
- ಗೂಬೆಗಳು ತಮ್ಮ ಆಹಾರವನ್ನು ಅವುಗಳ ಕೂದಲು,ರೆಕ್ಕೆ ಪುಕ್ಕಗಳು,ಎಲುಬು ಮೂಳೆಗಳ ಸಮೇತ ನುಂಗುತ್ತವೆ.ಅವುಗಳ ಜಠರದಲ್ಲಿರುವ "gizzard"ಎಂಬ ಭಾಗದಲ್ಲಿ ಇವೆಲ್ಲ ಶೋಧಿಸಲ್ಪಟ್ಟು ಗಟ್ಟಿಯಾದ ಕುರುಳೆಗಳಗುತ್ತವೆ. ತನ್ನ ಬಾಯಿಯ ಮೂಲಕ "owl pellet"ಗಳೆಂದು ಕರೆಯುವ ಈ ಕುರುಳೆಗಳನ್ನು ಗೂಬೆ ವಿಸರ್ಜಿಸುತ್ತದೆ. ಈ owl pellet ಗಳು ಪ್ರಾಣಿಶಾಸ್ತ್ರಜ್ಞರಿಗೆ ಅತ್ಯಮೂಲ್ಯ ವಸ್ತುಗಳು. ಇದರಲ್ಲಿ ಅವರಿಗೆ ಆ ಪ್ರದೇಶದ ಜೀವವೈವಿಧ್ಯದ ಸುಳಿವು ದೊರೆಯುತ್ತದೆ.
ಗೂಬೆ ಮಾನವರಿಗೆ ಕಾಣಿಸಿಕೊಂಡರೆ ಅದಕ್ಕಂತು ನಿಜವಾಗಿಯು ತೊಂದರೆಯೆ. ಕಲ್ಲು ಹೊಡೆಯುವುದು, ಸಾಯಿಸುವುದು ,ವಾಸಸ್ಥಾನವಾದ ಮರಗಳನ್ನು ಕಡಿಯುವುದು ಮುಂತಾಗಿ ಕಾಟ ಕೊಟ್ಟು ಅವುಗಳ ಸಂತತಿಯನ್ನು ವಿನಾಶದ ಅಂಚಿಗೆ ತಂದು ನಿಲ್ಲಿಸಿರುವುದು ಮಾನವನೇ.