- ಸುನಾಮಿ, ಭೂಕಂಪ, ನೆರೆ, ಬರ-ಸಾವಿರಾರು ಮುಗ್ಧ ಜೀವಗಳ ಬಲಿ-----ನೀನೆಲ್ಲಿದ್ದೀಯ?
ನೀನಿದ್ದೀಯೇನೋ
- ನಿನ್ನ ಹೆಸರಿನಲ್ಲೇ ನಡೆಯುವ ಕೊಲೆ ಸುಲಿಗೆ ಮಾರಣಹೋಮ-----ಉಹ್ಹೂ.... ನೀನಿಲ್ಲ ಬಿಡು
ಮತ್ತೆಲ್ಲೊ ನಿನ್ನ ಹೆಸರಿನಲ್ಲೆ ನಡೆಯುವ ಅನ್ನದಾನ, ವಿದ್ಯಾದಾನ, ನಿಸ್ವಾರ್ಥಸೇವೆ----ಹ್ಹೂ...ನೀನಿರಬಹುದೇನೋ
- ತಿನ್ನುವುದಕ್ಕಿಂತ ಚೆಲ್ಲುವುದನ್ನೇ ನಾಗರೀಕತೆಯೆಂದುಕೊಂಡಿರುವ ಶ್ರೀಮಂತರು - ಅವರೆಸೆಯುವ ಎಂಜಲೆಲೆಗಾಗಿ ಕಾಯುವ ಹಸಿದ ಮುಗ್ಧ ಕಣ್ಗಳು----ಛೇ... ನೀನಿಲ್ಲವೆ ಇಲ್ಲ
ಬೀದಿಯಲ್ಲೆಲ್ಲೊ ಹಸಿವಿನಿಂದ ಅಳುವ ಕಂದಮ್ಮನಿಗೆ ತನ್ನ ಕೈಲಿರುವ ರೊಟ್ಟಿಯನ್ನೆ ಕೊಟ್ಟುಬಿಡುವ ಚಿಕ್ಕ ಪೋರಿ----ನಿನ್ನಿಂದಲೇ ಎಲ್ಲ
- ಕುಡುಕರ ಅಮಲು, ಕಾಮುಕರ ತೆವಲು-ಬಲಿಯಾಗಿ ನರಳುವ ಬಾಲೆಯರು----ನೀನಿಲ್ಲವೇನೋ
ನೊಂದವರ ನೋವಿಗೆ ಹೆಗಲಾಗಿ, ಬಾಳಿಗೆ ಬೆಳಕಾಗುವವರು----ನೀನಿರಬಹುದೇನೋ
- ಭೂಮಿಯಲ್ಲಿರುವುದೆಲ್ಲವನ್ನು ತನ್ನ ಅನುಕೂಲಕ್ಕೆ ಬಳಸುವ, ಹಾಳುಗೆಡವುವ ತನಗೆ ಬೇಡದ್ದನ್ನು ನಾಶಪಡಿಸುವ ಮಾನವ----ಸಕಲ ಚರಾಚರ ರಕ್ಷಕ ನೀನಾ???
ಎಲ್ಲ ಅತ್ಯಾಚಾರವನ್ನು ಸಹಿಸಿ ಮನುಕುಲಕ್ಕೆ ಸಹಾಯವನ್ನೇ ಮಾಡುವ ಭೂತಾಯಿ, ಅಕೆಯನ್ನು ರಕ್ಷಿಸಲು ಪ್ರಾಮಾಣಿಕವಾಗಿ ದುಡಿಯುವವರು ------ನೀನಿದ್ದರೂ ಇರಬಹುದು.