26 Oct 2009

ನಿರ್ಭಾವುಕ

ಅಗೋ ವಸಂತದ ಎಳೆ ಚಿಗುರಿನ ಮೋಹಕ ಬಣ್ಣ

ಕೀಟಗಳನ್ನು ಸೆಳೆಯುವ ಈ ಹೂವಿನ ಘಮ

ಹರಿಯುವ ಇರುವೆಗಳ ಸೈನಿಕ ಶಿಸ್ತು

ಹಾರುವ ಜೇನುಹುಳುಗಳ ಸಾಂಘಿಕ ಜೀವನ

ಮರಿಗೆ ಗುಟುಕು ನೀಡುವ ಹಕ್ಕಿಗಳ ಮಮತೆ

ಹದಿಹರೆಯದ ಹುಡುಗನ ದನಿಯ ಒಡಕು

ತುಂಬು ಜವ್ವನೆಯ ನಸು ನಾಚಿಕೆ

ಪಾರ್ಕನ ಪ್ರೇಮಿಗಳ ಸಿಹಿ ಚುಂಬನ

ಗಂಡನ ಬೆತ್ತಲೆ ಬಾಹುಗಳ ಬಿಸಿಯಪ್ಪುಗೆ

ನಿದ್ರೆಗೆಟ್ಟು ಎಳೆಮಗುವಿನ ಲಾಲನೆಗೈಯುವ ತಾಯ ಪ್ರೀತಿ

ಅಬ್ಬಾ!! ಈ ಲೋಕ ಎಷ್ಟು ಸುಂದರ!!

ಕಿಟಕಿಯಾಚೆ ನೋಡುತ್ತಾ ಭಾವುಕತೆಯಿಂದ ಉದ್ಗರಿಸಿದಳು ಆಕೆ

ವೈಜ್ಞಾನಿಕ ಗ್ರಂಥವೊಂದರಲ್ಲಿ ಹುದುಗಿಸಿದ್ದ ತಲೆಎತ್ತದೆ ಉತ್ತರಿಸಿದ ಆತ

"ಇವೆಲ್ಲಕ್ಕೂ ಕಾರಣ ಕೇವಲ ಹಾರ್ಮೋನುಗಳು".