11 Dec 2009

ಹೆಣ್ಣಿಗಿರುವ ಆಯ್ಕೆಯ ಅವಕಾಶ!!

ಮೊನ್ನೆ ಊರಿಗೆ ಹೋದಾಗ ಅಕ್ಕ ಪಕ್ಕದ ಮನೆಯ ಕೆಲ ಹುಡುಗರು ಬಂದಿದ್ದರು . " ಏನ್ರೋ ಈ ವರ್ಷನಾದ್ರೂ ಮದುವೆ ಮಾಡಿಕೊಂಡು ಸಿಹಿ ಊಟ ಹಾಕಿಸ್ತೀರ " ಅವರನ್ನ ಛೇಡಿಸಿದೆ. ಶುರುವಾಯ್ತು ನೋಡಿ ವಾಕ್ ಪ್ರವಾಹ , ಒಬ್ಬೊಬ್ಬರು ಎಳೆ ಎಳೆಯಾಗಿ ತಮ್ಮ ಸಮಸ್ಯೆಗಳನ್ನು ಹೆಳಲು ಪ್ರಾರಂಭಿಸಿದರು .ಅದನ್ನೆಲ್ಲ ಬರೆದರೆ ದೊಡ್ಡ ಕಾದಂಬರಿಯಾದೀತು . ಆದ್ದರಿಂದ ಮುಖ್ಯಾಂಶವನ್ನಷ್ಟೇ ಹೇಳಿ ಮುಂದುವರೆಯುತ್ತೇನೆ.

ಇತ್ತೀಚೆಗೆ ನಮ್ಮ ಊರ ಕಡೇ ಯಾರನ್ನು ಕೇಳಿದರೂ ಹೇಳುವ ಸುದ್ದಿಯೆಂದರೆ "ನಮ್ಮನೆ ಮಾಣಿಗೊಂದು ಹೆಣ್ಣು ಸಿಕ್ತಲ್ಲೆ" . ಹಾಗೆಂದು ಹೆಣ್ಣುಮಕ್ಕಳೇ ಇಲ್ಲವೆಂದೇನೂ ಅಲ್ಲ. ಆದರೆ ಇರುವ ಹುಡುಗಿಯರು ಹೆಚ್ಚು ಹೆಚ್ಚು ಚೂಸಿಯಾಗಿದ್ದಾರೆ. ಗಂಡು ಸಿಕ್ಕರೆ ಸಾಕು , ಹೇಗಿದ್ದರೂ ಹೊಂದಿಕೊಳ್ಳಬಲ್ಲೆ ಎಂಬ ಮನಸ್ಥಿತಿಯಿಂದ ಹೊರಬಂದಿದ್ದಾರೆ. ಹೆಚ್ಚಿನ ಹೆಣ್ಣುಮಕ್ಕಳೀಗ ಸುಶಿಕ್ಷಿತರು . ಅಪ್ಪ ತೋರಿಸಿದ ಗಂಡಿನ ತಾಳಿಗೆ ಕೊರಳೊಡ್ಡಲು ಆಕೆಯೀಗ ತಯಾರಿಲ್ಲ. ಆಕೆಯ ಬೇಡಿಕೆಗಳ ಪಟ್ಟಿಯೀಗ ದೊಡ್ಡದಿದೆ.
ಗಂಡು ಕೆಲಸದಲ್ಲಿರಬೇಕು(ಬೆಂಗಳೂರಿನಲ್ಲಿದ್ದರೆ ಪ್ರಾಶಸ್ತ್ಯ!)
ಊರಲ್ಲಿ ಅಡಕೆ ತೋಟ ಇರಬೇಕು (ರಜೆ ಕಳೆಯಲು ಫಾರ್ಮ್ ಹೌಸ್ ಬೇಡವೆ?)
ಅಪ್ಪ ,ಅಮ್ಮ ಇದ್ದರೂ ಊರಿನಲ್ಲಿರಬೇಕು (ಮಕ್ಕಳಾದ ಮೇಲೆ ನೋಡಿಕೊಳ್ಳಲು ಬರಬಹುದು)
ಅಕ್ಕ ತಂಗಿಯರಿದ್ದರೆ ಮದುವೆಯಾಗಿರಬೇಕು (ಯಾಕೆ ತಲೆನೋವು!!)
ತನ್ನ ಸ್ವಾತಂತ್ರ್ಯಕ್ಕೆ ಅಡ್ಡಿಪಡಿಸಬಾರದು
ಎಲ್ಲ ಕೆಲಸಗಳಲ್ಲಿ ಸಹಕರಿಸಬೇಕು, ..................ಹೀಗೆ ಪಟ್ಟಿ ಮುಂದುವರೆಯುತ್ತದೆ.

ಸರಿ , ನಾನು ಹೆಣ್ಣಾಗಿ ಅವರ ವ್ಯಂಗವನ್ನು ಸಹಿಸಬಲ್ಲೆನೆ? ನನ್ನ ಕೊರೆತ ಪ್ರಾರಂಭಿಸಿದೆ.
" ಹೌದು ಅದರಲ್ಲೇನು ತಪ್ಪು? ಹೆಣ್ಣಿಗೆ ತನಗೆ ಬೇಕಾದ ಗಂಡನ್ನು ಆರಿಸಿಕೊಳ್ಳುವ ಅವಕಾಶವನ್ನು ಪ್ರಕೃತಿಯೇ ನೀಡಿದೆ ಗೊತ್ತೇ. ಇಷ್ಟೆಲ್ಲ ವರ್ಷ ಅವಳ ಆ ಹಕ್ಕನ್ನು ನೀವು ಕಸಿದುಕೊಂಡಿದ್ದಿರಿ , ಈಗ ಅವಳಿಗೆ ಅದರ ಅರಿವಾಗಿದೆ. ಅವಳು ಪ್ರಕೃತಿಯ ನಿಯಮದಂತೆ ನಡೆಯುತ್ತಿದ್ದಾಳಷ್ಟೇ ಎಂದೆ."
"ಅಕ್ಕಾ ಅದೇನು ಹೇಳಬೇಕೂಂತಿದ್ದಿ ಸ್ವಲ್ಪ ಬಿಡಿಸಿ ಹೇಳೆ " ಬೇಸರದಿಂದ ನುಡಿದನೊಬ್ಬ.
"ನೋಡಿ ಹೆಚ್ಚಿನ ಪ್ರಾಣಿಗಳಲ್ಲಿ ಆಯ್ಕೆಯ ಅವಕಾಶವಿರುವುದು ಹೆಣ್ಣಿಗೇ. ಅವಳನ್ನು ಒಲಿಸಿಕೊಳ್ಳಲು ಗಂಡು ಕಷ್ಟಪಡಲೇಬೇಕು. ಕೆಲವು ಉದಾಹರಣೆ ಹೇಳುತ್ತೇನೆ ಕೇಳಿ.
  • ನವಿಲು ಮುಂತಾದ ಪಕ್ಷಿಗಳಲ್ಲಿ breeding season ಪ್ರಾರಂಭವಾಗುತ್ತಿದ್ದಂತೆ ಬಣ್ಣಬಣ್ಣದ ಗರಿಗಳಿಂದ ಗಂಡು ಅಲಕೃತವಾಗುತ್ತದೆ . ತನ್ನ ಸೌಂದರ್ಯವನ್ನು ಹೆಣ್ಣಿನ ಮುಂದೆ ನೃತ್ಯದ ಮೂಲಕವೋ ಹಾಗೇ ಸುಳಿದಾಡಿಯೊ ಪ್ರದರ್ಶಿಸುತ್ತದೆ . ಹೆಣ್ಣಿಗೆ ಅದರ ಸೌಂದರ್ಯ ಮೆಚ್ಚಿಗೆಯಾದರೆ ಮಾತ್ರ ಒಲಿಯುತ್ತದೆ.
  • ಕೋಗಿಲೆಯಂತಹ ಪಕ್ಷಿಗಳು ತಮ್ಮ ಇಂಪಾದ ಧ್ವನಿಯಿಂದ ಹೆಣ್ಣನ್ನು ಒಲಿಸಿಕೊಳ್ಳುತ್ತವೆ.
  • ಗೀಜಗ (wearver bird) ಸುರಕ್ಷಿತವಾದ ಸ್ಥಳದಲ್ಲಿ ಗೂಡನ್ನು ಅರ್ಧ ನಿರ್ಮಿಸಿ ಹೆಣ್ಣಿಗೆ ತೋರಿಸುತ್ತದೆ. ಆಕೆಗೆ ಇಷ್ಟವಾದರೆ ಮಾತ್ರ ಒಪ್ಪಿಗೆ ಸೂಚಿಸುತ್ತದೆ ,ಮತ್ತು ಗೂಡನ್ನು ಪೂರ್ಣಗೊಳಿಸಲು ಸಹಕರಿಸುತ್ತದೆ. ಗೂಡು ಸುರಕ್ಷಿತ ಜಾಗದಲ್ಲಿಲ್ಲದಿದ್ದರೆ , ಸರಿಯಾಗಿ ನಿರ್ಮಿಸದಿದ್ದರೆ ಗಂಡನ್ನೇ ತಿರಸ್ಕರಿಸುತ್ತದೆ.
  • ಕೆಲವು ಜಾತಿಯ ಮೀನುಗಳು ಗೂಡನ್ನು ನಿರ್ಮಿಸಿ ಹೆಣ್ಣನ್ನು ಆಕರ್ಷಿಸುತ್ತವೆ.
  • ಜಿಂಕೆಯಂತಹ ಕೆಲ ಸಸ್ತನಿಗಳಲ್ಲೂ ಗಂಡು ತನ್ನ ಸುಂದರವಾದ ಕೋಡುಗಳಿಂದ ಹೆಣ್ಣನ್ನು ಆಕರ್ಷಿಸುತ್ತದೆ. ಹೆಣ್ಣನ್ನು ಒಲಿಸಿಕೊಳ್ಳುವುದಕ್ಕಾಗೇ ಎರಡು ಗಂಡುಗಳ ಮಧ್ಯೆ ಬಲಪ್ರದರ್ಶನ , ಹೋರಾಟಗಳೂ ನಡೆಯುತ್ತವೆ. ಗೆದ್ದ ಶಕ್ತಿಶಾಲಿಗಷ್ಟೇ ಹೆಣ್ಣು ಒಲಿಯುತ್ತದೆ.
  • ಇನ್ನು ಕೀಟಪ್ರಪಂಚದಲ್ಲಂತೂ ಹೆಣ್ಣೇ ಸಾರ್ವಭೌಮಿಣಿ. ಹೆಚ್ಚಿನ ಗಂಡುಕೀಟಗಳು ಪ್ರಥಮ ಮಿಲನದ ನಂತರ ಪ್ರಾಣವನ್ನೇ ಬಿಡುತ್ತವೆ. ಜೇನುಹುಳುಗಳು , ಗೆದ್ದಲು ಮೊದಲಾದ ಕೀಟಗಳಲ್ಲಿ ಹೆಚ್ಚು ವೇಗವಾಗಿ ಹಾರುವ ಗಂಡಿಗೆ ಹೆಣ್ಣು ಒಲಿಯುತ್ತದೆ .
  • ಕೆಲವು ಜಾತಿಯ ಜೇಡಗಳಲ್ಲಿ ಗಂಡು ಬೇಟೆಯನ್ನು ಹಿಡಿದು ತನ್ನ ಸಿಲ್ಕಿನಲ್ಲಿ ಸುತ್ತಿ ಹೆಣ್ಣಿಗೆ ಗಿಫ್ಟ್ ಕೊಟ್ಟು ಒಲಿಸಿಕೊಳ್ಳುತ್ತದೆ. ಹೆಣ್ಣಿಗೆ ಒಪ್ಪಿಯಾದರೆ ಸರಿ , ಇಲ್ಲವಾದರೆ ಅದನ್ನು ತಿಂದುಬಿಡುವ ಸಾಧ್ಯತೆಯೂ ಉಂಟು.

ಹೀಗೆ ಪ್ರಕೃತಿ ಹೆಣ್ಣಿಗೇ ಆಯ್ಕೆಯ ಅವಕಾಶ ನೀಡಿರುವುದು . ಅದನ್ನು ಈಗ ಅವಳು ಉಪಯೋಗಿಸುತ್ತಿದ್ದಾಳಷ್ಟೇ."

ನನ್ನ ದೀರ್ಘ ಭಾಷಣ ಮುಗಿದಾಗ ಅವರೆಲ್ಲ ಎದ್ದು ಅಲ್ಲಿಂದ ಓಡಿದ್ದರು ನಾನು ಇನ್ನೆಲ್ಲಿ ಮತ್ತೆ ಕೊರೆಯಲು ಪ್ರಾರಂಭಿಸುತ್ತೇನೊ ಎಂದು.

(ಮುಂದುವರಿದ ಪ್ರಾಣಿಗಳೆನಿಸಿಕೊಳ್ಳುವ ಸಸ್ತನಿಗಳಲ್ಲಿ ,ಅದರಲ್ಲೂ ಮನುಷ್ಯನನ್ನು ಒಳಗೊಂಡಿರುವ ಪ್ರೈಮೇಟ್ ಗಳಲ್ಲಿ ಗಂಡೇ ಡಾಮಿನೆಂಟ್ ಅನ್ನುವ ವಿಚಾರವನ್ನು ಮಾತ್ರ ನಾನು ಉದ್ದೇಶಪೂರ್ವಕವಾಗಿ ಮರೆತೆ.)