4 Jan 2010

ಕೊಡಚಾದ್ರಿ - ಪ್ರಕೃತಿಕಾವ್ಯ

ಕೊಡಚಾದ್ರಿ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಪಶ್ಚಿಮ ಘಟ್ಟಗಳ ನಡುವೆಯಿದೆ. ನನ್ನವರ ತವರೂರು ನಿಟ್ಟೂರಿಗೆ ಕೇವಲ ೧೫ ಕಿಮಿ ದೂರದಲ್ಲಿದ್ದರೂ ,ಮದುವೆಯಾಗಿ ೧೨ ವರ್ಷಗಳಾದರೂ ಕೊಡಚಾದ್ರಿಗೆ ಚಾರಣ ಮಾಡಬೇಕು ಎಂಬ ಆಸೆ ನೆರವೆರಿರಲಿಲ್ಲ . ಮೊನ್ನೆ ಅಂತೂ ಆ ಅಸೆ ನೆರವೇರಿತು.

ಕೊಡಚಾದ್ರಿಗೆ ಚಾರಣ ಮಾಡಬಯಸುವವರಿಗೆ ಎರಡುs ಮೂರು ದಾರಿಯಿದೆ . ನಾವು ನಾಗೂಡಿ ಗ್ರಾಮದb ಮೂಲಕ ಬೆಟ್ಟದ ಬುಡ ತಲುಪಿ ಅಲ್ಲಿಂದ ಚಾರಣ ಪ್ರಾರಂಭಿಸಿದೆವು. ಅದಲ್ಲದೆ ಜೀಪಿನಲ್ಲಿ ಕೂಡ ಕೊಡಚಾದ್ರಿ ತಲುಪಬಹುದು.

ಚಾರಣದ ಹಾದಿಯಲ್ಲಿ


ಕೆಲವೊಮ್ಮೆ ದಟ್ಟ್ಟ ಕಾಡು , ಕೆಲವೊಮ್ಮೆ ಹುಲ್ಲುಗಾವಲಿನಂತಹ ಬೆಟ್ಟಗಳ ನಡುವೆ ಸಾಗುವ ಕಾಲುದಾರಿಯಲ್ಲಿ ಸಾಗುವಾಗ ಆಗುವ ದಿವ್ಯ ಅನುಭೂತಿಯನ್ನು ಶಬ್ದಗಳಲ್ಲಿ ವಿವರಿಸುವುದು ಕಷ್ಟ . ಆಕಾಶಕ್ಕೆ ಚಾಚಿದಂತೆ ಇರುವ ಮರಗಳು , ಅವುಗಳನ್ನಶ್ರಯಿಸಿ ಬೆಳೆದಿರುವ ಪರಾವಲಂಬಿ ಸಸ್ಯಗಳು , ಸುಂದರ ಕಾಡು ಹೂಗಳು , ಪಕ್ಷಿಗಳ ಇಂಚರ , ಎಲ್ಲದರ ಜೊತೆಗೆ ಎಲ್ಲಾದರೂ ಕಾಡು ಪ್ರಾಣಿಗಳು ಎದುರಾದರೆ ಎಂಬ ಭಯ ......ಒಹ್ ಬಿಡಿ ......ಕುವೆಂಪು , ಕಾರಂತರ ..ಕಾಡಿನ ವರ್ಣನೆಯ ಸಾಕ್ಷಾತ್ಕಾರವಾಯಿತು .

ಪಶ್ಚಿಮ ಘಟ್ಟ ಸಾಲು

ಕೊಡಚಾದ್ರಿ ಸಮುದ್ರ ಮಟ್ಟದಿಂದ ಸುಮಾರು ೧೩೦೦ ಅಡಿಗಳಷ್ಟು ಎತ್ತರದಲ್ಲಿದೆ. ದಾರಿಯಲ್ಲಿ ಸಾಗುವಾಗ ೧೫ - ೨೦ ವರ್ಷಗಳ ಹಿಂದೆ ದಟ್ಟ್ಟ ಕಾಡು , ಪ್ರಾಣಿ ಪಕ್ಷಿಗಳು , ದಾರಿಯಲ್ಲೇ ಎದುರಾಗುತ್ತಿದ್ದ ನೀರಿನ ತೊರೆಗಳು ಈಗಿಲ್ಲವೆಂದು ನನ್ನವರು ಬೇಸರ ಪಟ್ಟುಕೊಂಡರು. ಪ್ರಪಂಚದ ಎಂಟು ಅತಿ ಮುಖ್ಯ ಜೈವಿಕ ಹಾಟ್ ಸ್ಪಾಟ್ ಗಳಲ್ಲಿ ಒಂದಾದ ಈ ಪಶ್ಚಿಮ ಘಟ್ಟಗಳ ಭವಿಷ್ಯ ಹೇಗಿದೆಯೋ?



ಕಾಡುಕೋಣ ಇಲ್ಲಿ ಕುಳಿತಿತ್ತೋ ಏನೋ!!!


ಚಾರಣದ ನಡುವೆ ವಿರಾಮ



ಕಾಡು ಕುಸುಮ



ಬೃಹದಾಕಾರದ ಮರಗಳು

ಸುಮಾರು ಎರಡು ಘಂಟೆಗಳ ಪ್ರಯಾಣದ ನಂತರ ನಾವು ಕೊಡಚಾದ್ರಿಯಾ ದೇವಸ್ಥಾನವನ್ನು ತಲುಪಿದೆವು. ಕೊಲ್ಲೂರು ಮೂಕಾಂಬಿಕೆಯ ಮೂಲ ಇದೆ ಎಂದು ಭಟ್ಟರು ಕೊಲ್ಲೂರಿನಿಂದ ಬಂದ ಭಕ್ತರಿಗೆ ಹೇಳುತ್ತಿದ್ದರು .

ಭಟ್ಟರ ಮನೆಯಲ್ಲಿ ಊಟ ಮುಗಿಸಿ 'ಸರ್ವಜ್ಞ ಪೀಠ' ನೋಡಲು ಹೊರಟೆವು.


ಸರ್ವಜ್ಞ ಪೀಠಕ್ಕೆ ದಾರಿ

ಪಕ್ಕದಲ್ಲಿ ಕಣ್ಣಿಗೆ ಕಾಣದಷ್ಟು ಆಳದ ಪ್ರಪಾತ , ಉರಿವ ಬಿಸಿಲಿನ ಜೊತೆ ಇಕ್ಕಟ್ಟಾದ ದಾರಿಯಲ್ಲಿ ಬೆಟ್ಟವನ್ನು ಏರುವಾಗ ಉಸಿರು ಸಿಕ್ಕಿಹಾಕಿಕೊಂಡ ಅನುಭವ. ಶಂಕರಾಚಾರ್ಯರು ಇಲ್ಲಿ ತಪಸ್ಸು ಮಾಡಿದ್ದರೆಂಬ ಪ್ರತೀತಿಯಿದೆ. ಸಾವಿರಾರು ವರ್ಷಗಳಷ್ಟು ಹಿಂದೆ ಈ ಗೊಂಡಾರಣ್ಯಕ್ಕೆ ಬಂದು ಇಂತಹ ದುರ್ಗಮವಾದ ಪ್ರದೇಶದಲ್ಲಿ ತಪಃ ಗೈದ ಅವರ ಧಿಶಕ್ತಿ ಎಂತದ್ದಿರಬೇಕು?


ಸರ್ವಜ್ಞ ಪೀಠದಿಂದ ಕಾಣುವ ದೃಶ್ಯ

ಇಲ್ಲಿ ಕಲ್ಲಿನ ಒಂದು ಮಂಟಪವಿದೆ. ಸೌತೆಕಾಯಿ, ಮಜ್ಜಿಗೆ , ಬಿಸ್ಕೆಟ್ ಮೊದಲಾದವುಗಳನ್ನು ಮಾರುವ ಅಂಗಡಿಗಳು ನಡುವೆ ಇವೆ. ದಿನಾ ಅವನ್ನೆಲ್ಲ ಹೊತ್ತು ಇಲ್ಲಿಯವರೆಗೆ ತರುವ ಅವರ ಮುಂದೆ ಖಾಲಿ ಕೈಯಲ್ಲಿ ಹತ್ತಿ ಎದುಸಿರುಬಿಡುವ ನಮ್ಮ ಬಗ್ಗೆ ನಾಚಿಕೆಯೆನಿಸಿತು .


ಸರ್ವಜ್ಞ ಪೀಠದ ಇರುವುದು ಈ ಬೆಟ್ಟದಲ್ಲಿ.

ಇಲ್ಲಿಂದ ಸುಮಾರು ಒಂದೂವೆರೆ ಕಿಮಿ ಇಳಿಜಾರಿನಲ್ಲಿ ಇಳಿದರೆ ಚಿತ್ರಮೂಲ. ಇಳಿಯುವಾಗ ನನಗೆ ತುಂಬ ಭಯವಾಯಿತು. ಜಾರಿದರೆ ಎಲುಬು ಪುದಿಯಾಗುವಷ್ಟು ಆಳದ ಪ್ರಪಾತ . ನಾನು ಕಷ್ಟಪಟ್ಟು ಇಳಿಯುತ್ತಿದ್ದರೆ , ಮಗಳು ಇಂಚರ, ಆರು ವರ್ಷದ ಸಿಂಚನ {ಸ್ನೇಹಿತರ ಮಗಳು} ಆರಾಮವಾಗಿ ಇಳಿದು ಹತ್ತಿದ್ದರು.


ಚಿತ್ರಮೂಲದ ದಾರಿಯಲ್ಲಿ

ಚಿತ್ರಮೂಲದ ಕಲ್ಲು ಬಂಡೆಯ ನಡುವೆ ಹನಿಯುವ ಸಿಹಿಯಾದ ನೀರು ಕುಡಿದು ಸುಧಾರಿಸಿಕೊಂಡು ಸರ್ವಜ್ಞ ಪೀಠಕ್ಕೆ ವಾಪಾಸಾಗುವ ವೇಳೆಗೆ ಬಾನಿನಲ್ಲಿ ಸೂರ್ಯಾಸ್ತದ ತಯಾರಿ ನಡೆಯುತ್ತಿತ್ತು.


ಚಿತ್ರಮೂಲ -ಇಲ್ಲಿ ಕುಳಿತು ತಪಸ್ಸು ಮಾಡುವವರಿದ್ದಾರೆ

ಮೋಡ ಮುಸುಕಿದ್ದರೂ ನೆರೆದವರನ್ನು ಪೂರ್ಣ ನಿರಾಸೆಗೊಳಿಸದೆ ಸೂರ್ಯ ಇಣುಕುತ್ತಿದ್ದ. ಯಾವುದೇ ಅವಸರವಿಲ್ಲದೆ ಎಲ್ಲರ ಕ್ಯಾಮರಕ್ಕೆ ಫೋಸ್ ಕೊಡುತ್ತ ಬಣ್ಣ ಬದಲಿಸುತ್ತ ಸೂರ್ಯ ಮುಳುಗುವುದನ್ನು ಕಣ್ತುಂಬಿಕೊಂಡು ವಾಪಾಸ್ ಭಟ್ಟರ ಮನೆಗೆ ಹೊರಟೆವು.


ಸೂರ್ಯಾಸ್ತ ಎಂಬ ನಾಟಕಕ್ಕೆ ಸಿಧ್ಧವಾದ ಬಾನಂಗಳ


ತೂರಿ ಬಾ ..... ಜಾರಿ ಬಾ .....



ಮೋಹಕ ಸೂರ್ಯಾಸ್ತ

ಇಲ್ಲಿಯ ದೇವಸ್ಥಾನದ ಪೂಜೆ ಮಾಡಿಕೊಂಡು ಪ್ರವಾಸಿಗರಿಗೆ ಊಟ ವಸತಿಯ ವ್ಯವಸ್ಥೆ ಮಾಡುವ ಭಟ್ಟರ ಮನೆಯವರದು ನಿಜಕ್ಕೂ ಹೋರಾಟದ ಬದುಕು."ಈಗ ಪ್ರವಾಸಿಗರ ಸಂಖ್ಯೆ ಹೆಚ್ಚಿರುವುದರಿಂದ , ಕೊಲ್ಲೂರು ಜಿಪುಗಳು ನಿರಂತರವಾಗಿ ಓಡಾಡುತ್ತವೆಯಾದರಿಂದ ಮೊದಲಿನ ಕಷ್ಟವಿಲ್ಲ. ಮೊದಲೆಲ್ಲ ತಲೆಹೊರೆಯ ಮೇಲೆ ದಿನಸಿ ಸಾಮಾನುಗಳನ್ನು ಹೊತ್ತು ಬೆಟ್ಟ ಹತ್ತುತ್ತಿದ್ದರು . ಘೋರ ಮಳೆಗಾಲ , ಮರಗಟ್ಟಿಸುವ ಚಳಿಗಾಲ ,ಸದಾ ಕಾಡು ಪ್ರಾಣಿಗಳ ಭಯ , ನೆರೆಹೊರೆ ಯಾರು ಇಲ್ಲದ ಒಂಟಿ ಮನೆ. ಅಬ್ಬ ನೆನೆಸಿಕೊಂಡರೆ ಭಯವಾಗುತ್ತದೆ "
೮೦ ವರ್ಷದ ನಮ್ಮೂರಿನ ರಾಮಜ್ಜ ನೆನಪಿಸಿಕೊಳ್ಳುತ್ತಾರೆ.


ಕಣ್ಣಾಮುಚ್ಚಾಲೆ

ರಾತ್ರಿ ಭಟ್ಟರ ಮನೆಯಲ್ಲಿ ಊಟ ಮಾಡಿ ಮಲಗಿ ಕಣ್ಣು ಮುಚ್ಚಿದರೆ ಪ್ರಪಾತಕ್ಕೆ ಕಾಲಿಟ್ಟಂತೆ ಭಾಸವಾಗಿ ನಿದ್ದೆಯೇ ಬರಲಿಲ್ಲ . ನಡೆದು ಕಾಲುಗಳು ಪದ ಹೇಳಲು ಪ್ರಾರಂಭಿಸಿದ್ದವು. ಅಂತೂ ಹೇಗೋ ರಾತ್ರಿ ಕಳೆದು ಬೆಳಗ್ಗೆ ೪.೩೦ ರ ನಸುಕಿನಲ್ಲಿ ಸೂರ್ಯೋದಯ ನೋಡಲು ಟಾರ್ಚ್ ಹಿಡಿದು ವೆಂಕತರಾಯನ ದುರ್ಗಕ್ಕೆ ಹೊರಟೆವು.(ಯಾರು ಹೇಳಿದ್ದು ಸೂರ್ಯನನ್ನು ನೋಡಲು ದೀಪ ಬೇಕೇ ಎಂದು!!!))




ವೆಂಕತರಾಯನ ದುರ್ಗಕ್ಕೆ ದಾರಿ

ಕತ್ತಲಲ್ಲಿ ಸುಲಭವಾಗಿ ಬೆಟ್ಟ ಹತ್ತಬಹುದಾದ ದಾರಿ ಬಿಟ್ಟು ದುರ್ಗಮವಾದ ದಾರಿಯಲ್ಲಿ ಅಕ್ಷರಶಃ ನಾಲ್ಕು ಕಾಲಿನಲ್ಲಿ ಹತ್ತಿದ ಥ್ರಿಲ್ ಚೆನ್ನಾಗಿತ್ತು. ಆದರೆ ಸೂರ್ಯ ಮುನಿಸಿಕೊಂಡಂತೆ ಮೋಡದ ನಡುವೆ ಮರೆಯಾಗಿದ್ದ. ಬೆಳಕಾಯಿತೆ ವಿನಃ ಸೂರ್ಯೋದಯದ ದೃಶ್ಯಗಳು ಕಾಣಲೇ ಇಲ್ಲ.




ಮುಂಜಾನೆಯ ಮಂಜಿನಲಿ ಪರ್ವತಶ್ರೇಣಿ

ಅಂತೂ ಇನ್ನು ಕಾಯುವುದು ವ್ಯರ್ಥವೆನ್ನಿಸಿದ ಮೇಲೆ ಕೆಳಗಿಳಿದೆವು . ನಡೆಯುವ ಉಮ್ಮೇದಿ ನನಗಂತೂ ಕಡಿಮೆಯಾಗಿತ್ತು. ಎಲ್ಲರೂ ಜೀಪಿನಲ್ಲಿ ಹೊರಟೆವು. ಜೀಪಿನ ಪ್ರಯಾಣ ಮಾಡಿದ ನಂತರ ನಡೆಯುವುದೇ ಹೆಚ್ಚು ಸುಲಭವೆಂದು ಅನಿಸಿತು. ಅಷ್ಟು ಕೆಟ್ಟ ರಸ್ತೆ ಊಹಿಸಿಕೊಳ್ಳುವುದೂ ಕಷ್ಟ



ಪ್ರಕೃತಿಗೆ ಮಾನವನ ಕೊಡುಗೆ - ಪ್ಲಾಸ್ಟಿಕ್ , ಕಸ , ಕೊಳಕು

ನೋವಿನ ಸಂಗತಿಯೆಂದರೆ ಹೆಚ್ಚು ಜನಪ್ರಿಯವಾಗುತ್ತಿರುವ ಈ ಸುಂದರ ಸ್ಥಳ ಮಾನವನಿಂದ ಕಸದ ಕೊಂಪೆಯಾಗುತ್ತಿದೆ. ಎಲ್ಲಿ ನೋಡಿದರೂ ಕುಡಿದು ಬಿಸಾಡಿದ ಬಾಟಲ್ ಗಳು, ಪ್ಲಾಸ್ಟಿಕ್ ಕವರ್ ಗಳು ಕಣ್ಣಿಗೆ ರಾಚುತ್ತವೆ. ನಮ್ಮ ಪರಿಸರದ ರಕ್ಷಣೆ ನಮ್ಮ ಹೊಣೆಯೆಂದು ಮಾನವರಿಗೆ ಅರಿವಾಗುವುದು ಯಾವಾಗಲೋ??
( ಹಾಂ ... ಅಂದ ಹಾಗೆ ಕೊಡಚಾದ್ರಿಯಲ್ಲಿ ನನಗೊಂದು ಸತ್ಯ ಸಕ್ಷಾತ್ಕಾರವಾಯ್ತು ನೋಡಿ . ನಾನು ದಪ್ಪ ಇದ್ದೇನೆ ಅಂತ ತಿಳಿದಿತ್ತು. ಆದರೆ ಎಷ್ಟು ಎನ್ನುವುದರ ಅರಿವು ಅಲ್ಲಾಯ್ತು. ಉತ್ತರ ಕರ್ನಾಟಕದ ಕಡೆಯವನೊಬ್ಬ ತನ್ನ ಹೆಂಡತಿಗೆ ನನ್ನನ್ನು ತೋರಿಸಿ ಹೇಳುತ್ತಿದ್ದ " ಲೇ ನೋಡು ಎಷ್ಟು ಫ್ಯಾಟ್ ಇದ್ದಾರ ಅದರೂ ಹೆಂಗ ನಡಿತಾರ !!! ನೀನೇನು ಹಿಂಗ ಕುಂತಿ ಏಳು ಲಗೂ ನಡೆ ...."
ಚಿತ್ರಮೂಲದಿಂದ ಮೇಲೇರುತ್ತಿದ್ದಾಗ ಸಿರಸಿಯ ಕಡೆಯ ಹುಡುಗರು " ಛೆ !! ಇದಕ್ಕೆ ಎಂತಕ್ಕೆ ಬೇಕಿತ್ತೋ ಮಾರಾಯ!!" ಎಂದು ಸಂತಾಪ ವ್ಯಕ್ತಪಡಿಸುತ್ತಿದ್ದರು.)