ಚಿಗಳಿ ಕಚ್ಚುವುದರ ಅನುಭವವಿಲ್ಲದ ಇವಳು ... "ಏ ಹೋಗೊ ಸಾಕು , ಆ ಇರುವೆಗೆ ಹೆದರ‍್ತ್ಯಲೋ .. ಸುಮ್ನೆ ಹತ್ತಿ ಪುನ್ನೇರಲ ಹಣ್ಣು ಕೊಯ್ಯಿ.." ಎಂದು ದಬಾಯಿಸುತ್ತಿದ್ದಳು.
ಅವನೇನೂ ಸುಮ್ಮನಿರುವ ಅಸಾಮಿಯೇನಲ್ಲ "ಹೆದರದು ಯಾಕೆ ತೋರಿಸ್ತಿ ತಡಿ " ಎಂದು ಇರುವೆಗಳಿದ್ದ ಎಲೆಯನ್ನು ಕಿತ್ತು ಅವಳ ಮೈಮೇಲೆಸೆದ . ಕೊಡವಿಕೊಂಡಳಾದರೂ ಉಳಿದ ಒಂದೆರಡು ಇರುವೆಗಳು ಕಚ್ಚಿದಾಗ ಮಗಳು ಅಲ್ಲೇ ಇದ್ದ ನನ್ನ ಬಳಿ ಓಡಿ ಬಂದಳು . " ಇದೆಂತಾ ಉರಿ ಅಮ್ಮಾ ಅದು ಹ್ಯಾಗೆ ಇಷ್ಟು ಉರಿಯಾಗುವ ಹಾಗೆ ಕಚ್ಚುತ್ತೆ? ....’ ಅವಳ ತನಿಖೆ ಪ್ರಾರಂಭವಾಯಿತು.
ಬೇರೆ ಇರುವೆಗಳಂತೆ ಈ ಕೆಂಜಿರುವೆ ಅಥವ ಚಿಗಳಿಗೆ ಸ್ಟಿಂಗ್ ಇರುವುದಿಲ್ಲ . ಅದು ಕಚ್ಚಿದ ಜಾಗದಲ್ಲಿ "ಫಾರ್ಮಿಕ್ ಆಸಿಡ್ " ಸ್ರವಿಸುವುದರಿಂದ ಹೆಚ್ಚಿನ ಉರಿಯಾಗುತ್ತದೆ.
ಅವಳಿಗೆ ಅಲ್ಲೇ ಬಳಿಯಲ್ಲಿದ್ದ ಆ ಇರುವೆಯ ಗೂಡನ್ನು ತೋರಿಸಿದೆ . ಅದನ್ನು ನೋಡಿ ತನ್ನ ದೊಡ್ಡ ಕಣ್ಣುಗಳನ್ನು ಇನ್ನಷ್ಟು ದೊಡ್ಡದು ಮಾಡಿಕೊಂಡು "ಈ ಚಿಕ್ಕ ಜೀವಿ ಹ್ಯಾಗೆ ಇಷ್ಟು ದೊಡ್ಡ ಗೂಡು ಕಟ್ಟುತ್ತಮ್ಮ? ನಾವಿಷ್ಟು ದೊಡ್ಡ ಇದ್ದರು ನಮಗೆ ಆಟ ಆಡಲು ಮನೆ ಕಟ್ಟೋಣವೆಂದರೆ ಬರಲಿಲ್ಲವಲ್ಲ?" ಎಂದಳು.
ಟೈಲರ್ ಅಥವಾ ವೀವರ್ ಇರುವೆ ಎಂಬ ಅನ್ವರ್ಥನಾಮವಿರುವ ಈ ಇರುವೆಗಳು ಹನ್ನೆರಡುಸಾವಿರಕ್ಕೂ ಹೆಚ್ಚಿರುವ ಇರುವೆಗಳ ಜಾತಿಯಲ್ಲೆ ಬೇರಾವ ಇರುವೆಗಳೂ ರಚಿಸದ ಅತೀ ವಿಶಿಷ್ಟವಾದ ಗೂಡನ್ನು ನಿರ್ಮಿಸುತ್ತವೆ.
ಎಲ್ಲ ಇರುವೆಗಳಂತೆಯೆ ಸಂಘಜೀವಿಗಳಾದ ಈ ಚಿಗಳಿಗಳ ಒಂದು ಗುಂಪಿನಲ್ಲಿ - ಒಂದೆರಡು ರಾಣಿ ಯರು , ಕೆಲವು ಗಂಡು ಮತ್ತು ಲಕ್ಷಗಟ್ಟಲೆ ಹಿರಿ ,ಕಿರಿಯ ಕೆಲಸಗಾರ ಇರುವೆಗಳಿರುತ್ತವೆ.
ಮೊಟ್ಟೇಯಿಡುವುದಷ್ಟೇ ರಾಣಿಯ ಕೆಲಸ.
ಗೂಡು ಕಟ್ಟುವುದು , ಆಹಾರ ತರುವುದು , ವೈರಿಗಳಿಂದ ಗೂಡನ್ನು ರಕ್ಷಿಸುವುದು ಮೊದಲಾದ ಕೆಲಸಗಳು ಹಿರಿಯ ಕೆಲಸಗಾರರದು.
ಮೊಟ್ಟೆಗಳು ,ಮರಿಗಳನ್ನು ಪೋಷಿಸುವುದು ರಾಣಿಗೆ ಆಹಾರ ನೀಡುವುದು , ಗೂಡನ್ನು ಸ್ವಚ್ಛಗೊಳಿಸುವುದು ಮೊದಲಾದ ಕೆಲಸಗಳು ಕಿರಿಯ ಕೆಲಸಗಾರ ಇರುವೆಗಳದು.
ಹೆಚ್ಚಾಗಿ ಮರ ಗಿಡಗಳ ಮೇಲೆ ವಾಸಿಸುವ ಇವುಗಳ ಆಹಾರ ಸಸ್ಯಗಳು ಮತ್ತು ಕೆಲ ಕೀಟಗಳು ಸ್ರವಿಸುವ ಸಿಹಿದ್ರವ , ಚಿಕ್ಕ ಪುಟ್ಟ ಕೀಟಗಳು ಇತ್ಯಾದಿ.
ಸಾವಿರಾರು ಇರುವೆಗಳು ಕೂಡಿ ಜೀವಂತ ಎಲೆಗಳಿಂದ ಗೂಡು ಕಟ್ಟುವ ಪರಿ ನಿಜಕ್ಕೂ ಅನನ್ಯ. ದೃಡವಾದ ಎಲೆಗಳನ್ನು ಆಯ್ದುಕೊಂಡು ಅವುಗಳನ್ನು ಸೇರಿಸಿ ಗೂಡು ಕಟ್ಟುತ್ತವೆ.
ಮೊದಲಿಗೆ ಎಲೆಯ ಅಂಚಿನುದ್ದಕ್ಕೂ ಸಾಲಾಗಿ ಸೇರುವ ಇರುವೆಗಳು ತಮ್ಮ ಶಕ್ತಿಯನ್ನು ಪ್ರಯೋಗಿಸಿ ಆ ಎಲೆಯನ್ನು ಬೇಕಾದ ಹಾಗೆ ಬಾಗಿಸುತ್ತವೆ. ಒಂದು ಇರುವೆ ಮರಿ(ಲಾರ್ವ)ಯನ್ನು ಹಿಡಿದು ಮೃದುವಾಗಿ ತಟ್ಟುತ್ತದೆ ಆಗ ಆ ಮರಿ ಸ್ರವಿಸುವ ಸಿಲ್ಕ್ ನಿಂದ ಎರಡು ಎಲೆಗಳ ಅಂಚನ್ನು ಜೋಡಿಸುತ್ತವೆ. ಹೀಗೆ ಅನೇಕ ಎಲೆಗಳನ್ನು ಬಳಸಿ ದೊಡ್ದ ಗೂಡನ್ನು ಸಹ ನಿರ್ಮಿಸಬಲ್ಲವು.
ಲಾರ್ವ್ ಸ್ರವಿಸುವ ಸಿಲ್ಕ್ ನಿಂದ ಎಲೆಗಳನ್ನು ಜೋಡಿಸಿರುವುದು
ಈ ರೀತಿಯ ಕ್ಲಿಷ್ಟ ಕಾರ್ಯವನ್ನು ಕರಾರುವಕ್ಕಾಗಿ ಸಾಂಘಿಕವಾಗಿ ನಿರ್ವಹಿಸಲು ಸಾಧ್ಯವಾಗುವುದು ಕೆಮಿಕಲ್ ಮೆಸೆಂಜರ್ ಗಳಾದ ಹಾರ್ಮೋನ್ ಗಳಿಂದ. ಇವುಗಳ ಈ ಗುಣವೀಗ ರೊಬೊಟಿಕ್ ವಿಜ್ಞಾನಿಗಳ ಗಮನ ಸೆಳೆದಿದೆ , ಇದೇ ತತ್ವವನ್ನಾಧರಿಸಿ ಹೆಚ್ಚು ಕಾರ್ಯಕ್ಷಮತೆಯುಳ್ಳ ರೊಬೊಟ್ ರಚಿಸುವದರಲ್ಲಿದ್ದಾರಂತೆ
"ಅಮ್ಮ ಅದೆಲ್ಲಾ ಸರಿ ಆದರೆ ಈ ಮರಕ್ಕೆ ಅದರಿಂದ ತೊಂದರೆಯಲ್ವಾ" ಮಗಳ ಪ್ರಶ್ನೆ ತಾಯಾರಿತ್ತು.
ಹಾಗನ್ನಿಸುತ್ತದೆ ನಿಜ ಆದರೆ ಅದರಿಂದ ಉಪಯೋಗವೇ ಹೆಚ್ಚು. ಸಸ್ಯಗಳನ್ನು ಬಾಧಿಸುವ ಕೆಲ ಕೀಟಗಳನ್ನು ಇದು ತಿನ್ನುತ್ತದೆ. ಅಲ್ಲದೆ ಇವುಗಳ ಭಯದಿಂದ ಸೊಪ್ಪು ತಿನ್ನುವ ಸಸ್ತನಿಗಳೂ ಇವಿರುವ ಮರಗಿಡಗಳ ಬಳಿ ಸುಳಿಯುವುದಿಲ್ಲ.
ಆದ್ದರಿಂದಲೇ ಪುರಾತನ ಚೀನೀಯರು ತಮ್ಮ ತೋಟದಲ್ಲಿ ಈ ಇರುವಗೆಳ ಬೆಳವಣಿಗೆಗೆ ಸಹಕರಿಸುತ್ತಿದ್ದರಂತೆ. ಈಗಲೂ ಸಹ ಕೆಲವು ಕಡೆ ಇವುಗಳನ್ನು ನೈಸರ್ಗಿಕ ಕೀಟನಾಶಕಗಳಂತೆ ಬಳಸುತ್ತಾರಂತೆ.
ಅನೇಕ ಕಡೆಗಳಲ್ಲಿ ಈ ಇರುವೆ ಮತ್ತು ಇವುಗಳ ಮೊಟ್ಟೆಗಳಾನ್ನು ಆಹಾರವಾಗಿಯೂ ಬಳಸುತ್ತಾರೆ.
ಆದರೆ ಕೆಲವು ಸಸ್ಯಗಳಿಗೆ ಇವು ಮಾರಕವೂ ಹೌದು. "ಎಪಿಡ್ " ಎಂಬ ಸಸ್ಯರಸವನ್ನು ಹೀರುವ ಪರಾವಲಂಬಿ ಕೀಟಗಳೊಡನೆ ಈ ಟೈಲರ್ ಇರುವೆಗಳಿಗೆ ಗೆಳೆತನವಿದೆ. ಎಪಿಡ್ ಗಳು ಸ್ರವಿಸುವ ಸಿಹಿದ್ರವ ಇವುಗಳಿಗೆ ತುಂಬ ಪ್ರಿಯವಾದ ಸತ್ವಯುತ ಆಹಾರ. ಬದಲಿಗೆ ಇವು ಆ ಕೀಟಗಳನ್ನು ಅವುಗಳ ನೈಸರ್ಗಿಕ ವೈರಿಗಳಿಂದ ರಕ್ಷಿಸಿ ಅವುಗಳ ಸಂಖ್ಯೆ ಹೆಚ್ಚಿಸುತ್ತವೆ. ಇದು ಆ ಸಸ್ಯಕ್ಕೆ ಮಾರಕವಾಗುತ್ತದೆ.
ಇರುವೆ , ಜೇನುಹುಳು , ಗೆದ್ದಲು ಮುಂತಾದ ಕೀಟಗಳ ಸಾಂಘಿಕ ಜೀವನಕ್ರಮ ,ಶಿಸ್ತು , ಸಾಮುದಾಯಿಕ ಹಿತಚಿಂತನೆ , ಗೂಡು ನಿರ್ಮಿಸುವ ಕೌಶಲ , ಮರಿಗಳ ಪೋಷಣೆಯಲ್ಲಿ ತೋರುವ ಜವಾಬ್ದಾರಿ - ನಾವೇ ದೊಡ್ಡ ಸಂಘಜೀವಿಗಳು, ನಾಗರೀಕರು ಎಂದು ಜಂಬ ಪಡುವ ಮಾನವರಿಗೆ ಬುದ್ಧಿಹೇಳುವಂತಿದೆ.