ಆಮೀರ್ ಖಾನ್ ಸಿನೆಮಾ "ತ್ರೀ ಈಡಿಯಟ್ಸ್"....ಗಂಭೀರವಾದ ವಿಷಯವೊಂದನ್ನು ತಿಳಿಹಾಸ್ಯದೊಂದಿಗೆ ನಿರೂಪಿಸಿದೆ . ನಮ್ಮ ಶಿಕ್ಷಣವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಎತ್ತಿತೋರಿಸಿದೆ. ಇತ್ತೀಚೆಗೆ ಈ ಸಿನೆಮಾ ನೋಡುತ್ತಿದ್ದಾಗ , ನಾನು ದೂರಶಿಕ್ಷಣ(corespondence)ದಲ್ಲಿ ಎಮ್ ಎಸ್ಸಿ ಮಾಡುವಾಗ ಕಾಡಿದ ಕೆಲ ವಿಚಾರಗಳು ಪುನಃ ನೆನಪಾಯಿತು.
ಈಗ ಎಲ್ಲಾ ವಿಶ್ವವಿದ್ಯಾಲಯಗಳೂ ದೂರ-ಶಿಕ್ಷಣದ ಮುಖಾಂತರ ಅನೇಕ ವಿಧದ ಡಿಗ್ರಿ , ಡಿಪ್ಲೊಮಾ ಕೋರ್ಸ್ ನಡೆಸುತ್ತಿವೆ.
ಇದು ಅನೇಕರಿಗೆ ವರದಾನವಾಗಿದೆ. ಕೆಲಸ ಮಾಡುತ್ತಲೇ ಹೆಚ್ಚಿನ ವಿದ್ಯಾಭ್ಯಾಸ ಮಾಡಿ ಉನ್ನತ ಹುದ್ದೆ ಗಳಿಸಬಹುದು . ಕಾರಣಾಂತರಗಳಿಂದ ಮಧ್ಯದಲ್ಲೇ ಓದು ಬಿಟ್ಟವರು ಮುಂದುವರೆಸಿ , ಆತ್ಮವಿಶ್ವಾಸ ಉದ್ಯೋಗ ಗಳಿಸಿಕೊಳ್ಳಬಹುದು.
ಇವೆಲ್ಲ ದೂರ-ಶಿಕ್ಷಣದ ಒಂದು ಮುಖ . ಇನ್ನೊಂದು ಮುಖ ಆತಂಕ ಹುಟ್ಟಿಸುವಂತಿದೆ.
ಆರ್ಟ್ಸ್ , ಕಾಮರ್ಸ್ ನಂತಹ ವಿಷಯಗಳಾದರೆ ಪರವಾಗಿಲ್ಲ . ಆದರೆ ವಿಜ್ಞಾನದ ವಿಷಯಗಳಾದ ಭೌತಶಾಸ್ತ್ರ , ರಸಾಯನಶಾಸ್ತ್ರ , ಜೀವಶಾಸ್ತ್ರ, ಬಯೋಟೆಕ್ನಾಲಜಿ , ಮೊದಲಾದವುಗಳನ್ನು ದೂರಶಿಕ್ಷಣದ ಮುಖಾಂತರ ಕಲಿಯುವುದು , ಕಲಿಸುವುದು ಕಷ್ಟ. ಈ ವಿಷಯಗಳಿಗೆ ಥಿಯರಿಯಷ್ಟೇ ಅಲ್ಲ , ಪ್ರಾಕ್ಟಿಕಲ್ ಜ್ಞಾನವೂ ತುಂಬ ಮುಖ್ಯವಾದುದು. ವಿದ್ಯಾರ್ಥಿಗಳು ಪ್ರಯೋಗ ಮಾಡಿ ನೋಡಿಯೆ ಎಷ್ಟೋ ಥಿಯರಿಯನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ.
ಈ ದೂರ -ಶಿಕ್ಷಣ ಪದ್ದತಿಯಲ್ಲಿ ವಿಶ್ವವಿದ್ಯಾಲಯಕ್ಕೆ ನೇರವಾಗಿ ಅಥವಾ ಆಯಾ ಊರುಗಳಲ್ಲಿರುವ ಸ್ಟಡಿ ಸೆಂಟರ್ ಗಳ ಮೂಲಕ ಫೀಸ್ ಕಟ್ಟಿ , ಅವರು ಕಳಿಸುವ ಪುಸ್ತಕಗಳನ್ನು ಓದಿ ಪರೀಕ್ಷೆ ಬರೆಯಬೇಕು. ಸ್ಟಡಿ ಸೆಂಟರ್ ನವರು ವರ್ಷದ ಕೊನೆಯಲ್ಲಿ ನಡೆಸುವ ಕೆಲವೇ ಘಂಟೆಗಳ ಥಿಯರಿ ತರಗತಿಗಳಿಗೆ ಹಾಜರಾಗದಿದ್ದರೂ ನಡೆಯುತ್ತದೆ. ಪ್ರಾಕ್ಟಿಕಲ್ಸ್ ನಲ್ಲಿ ಸುಲಭಸಾಧ್ಯವಾದ ಕೆಲ ಪ್ರಯೋಗಗಳನ್ನಷ್ಟೇ ಮಾಡಿಸಿ , ನಂತರ ಅದನ್ನೇ ಪರೀಕ್ಷೆಗೂ ಕೊಟ್ಟು ಮುಗಿಸುತ್ತಾರೆ.
ಅನೇಕ ಶಿಕ್ಷಕರು ಪ್ರಮೋಶನ್ ಗಾಗಿ ಇಂತಹ ಪದವಿ ಪಡೆಯುತ್ತಾರೆ. ಹೆಚ್ಚಿನವರಿಗೆ ಪದವಿಪತ್ರ ಪಡೆಯುವುದಷ್ಟೇ ಗುರಿ . ಹೇಗೋ ೫೨% ನಷ್ಟು ಅಂಕ ಗಳಿಸಿದರೆ ಭಡ್ತಿ ಸಲೀಸು.
ಪರೀಕ್ಷೆಗಳು ನಡೆಯುವ ಚೆಂದ ನೋಡಬೇಕು . ಚೀಟಿಗಳು ಹರಿದಾಡುವುದು , ಉತ್ತರಪತ್ರಿಕೆಯೇ ಹರಿದಾಡುವುದು ಮಾಮೂಲು . ಕಷ್ಟಪಟ್ಟು ಓದಿ ಬರೆಯುವವರೇ ನಾಚಬೇಕು . ಅನೇಕ ಕೇಂದ್ರಗಳಲ್ಲಿ ಸ್ಟಡಿ ಸೆಂಟರ್ ನವರೆ ಸಾಮೂಹಿಕವಾಗಿ ನಕಲು ಮಾಡಿಸುತ್ತಾರಂತೆ. ನಾನು ಓದಿದ ಸೆಂಟರ್ ಹೀಗೆ ಮಾಡಿಸಲಿಲ್ಲವೆಂದು ಬೇಸರ ಪಟ್ಟುಕೊಂಡ ಶಿಕ್ಷಕರೊಬ್ಬರು ಮರುವರ್ಷ ಗುಲ್ಬರ್ಗದ ಯಾವುದೋ ಸೆಂಟರ್ ನಿಂದ ಎಮ್ ಎಸ್ಸಿಯ ಎರಡೂ ವರ್ಷದ ಪರೀಕ್ಷೆ ಒಟ್ಟಿಗೇ ಬರೆದು ಪಾಸಾದರು!!
ಹೀಗೆ ಬರೆದು ಪದವಿ ಗಳಿಸಿದ ಶಿಕ್ಷಕರು ತಮ್ಮ ವಿದ್ಯಾರ್ಥಿಗಳಿಗೆ ಹೇಗೆ ವಿಜ್ಞಾನದಲ್ಲಿ ಆಸಕ್ತಿ ಹುಟ್ಟಿಸಬಲ್ಲರು? ಕೇವಲ ಪರೀಕ್ಷಾದೃಷ್ಟಿಯಿಂದಷ್ಟೇ ಪಾಠ ಮಾಡಬಲ್ಲರು.
ಈಗಾಗಲೇ ನಮ್ಮ ಯುವಜನತೆಗೆ pure scince ನ ಬಗ್ಗೆ ಆಸಕ್ತಿ ಕುಂದಿದೆ. ವೃತ್ತಿಪರ ಕೋರ್ಸ್ ಗಳನ್ನು ಮಾಡಿ ಹೆಚ್ಚು ಹೆಚ್ಚು ದುಡಿಯುವುದಷ್ಟೇ ಮುಖ್ಯವಾಗುತ್ತಿದೆ.
ಇಂತಹ ಸಂದರ್ಭದಲ್ಲಿ ಶಿಕ್ಷಕರ ಪಾತ್ರ ತುಂಬ ಮಹತ್ವದ್ದಾಗಿದೆ. ವಿದ್ಯಾರ್ಥಿಗಳಲ್ಲಿ ಕುತೂಹಲ ಕೆರಳಿಸಿ ಹೆಚ್ಚಿನ ಸಾಧನೆಗೆ ಪ್ರೇರೇಪಿಸುವ ಹೊಣೆ ಶಿಕ್ಷಕರ ಮೇಲಿದೆ.
ಆದ್ದರಿಂದ ಶಿಕ್ಷಕರಾಗುವವರ ಶಿಕ್ಷಣದ ಗುಣಮಟ್ಟವೂ ಸರಿಯಾಗಿರುವುದು ತುಂಬ ಅವಶ್ಯಕ. ದುಡ್ಡಿಗಾಗಿ ಪದವಿ ಮಾರಿಕೊಳ್ಳುವ ಕೆಲಸವನ್ನು ವಿಶ್ವವಿದ್ಯಾಲಯಗಳು ನಿಲ್ಲಿಸಬೇಕಾಗಿದೆ.
ಹಾಗೆಂದು ನಾನು ದೂರಶಿಕ್ಷಣವೇ ಬೇಡವೆಂದು ಹೇಳುತ್ತಿಲ್ಲ . ಆದರೆ ವ್ಯವಸ್ಥೆಯನ್ನು ಸುಧಾರಿಸುವ ಅವಶ್ಯಕತೆಯಂತು ಖಂಡಿತಾ ಇದೆ. ಈ ನಿಟ್ಟಿನಲ್ಲಿ ಎಲ್ಲ ಶಿಕ್ಷಣತಜ್ಞರೂ ಯೋಚಿಸಬೇಕು.