24 Jun 2009

ಜಲಪಾತ-ನಾ ಅರಿತಂತೆ

ಕನ್ನಡ ಸಾಹಿತ್ಯ ಪ್ರಪಂಚ ಕಂಡ ಅದ್ಬುತ ಬರಹಗಾರರಲ್ಲಿ ಒಬ್ಬರಾದ ಭೈರಪ್ಪನವರು ಸುಮಾರು ನಾಲ್ಕು ದಶಕಗಳ ಹಿಂದೆ ಬರೆದ ಕಾದಂಬರಿ 'ಜಲಪಾತ' . ಅವರ ಅತ್ಯುತ್ತಮವೆನ್ನಬಹುದಾದ ಗೃಹಭಂಗ, ಪರ್ವ, ದಾಟು, ಸಾರ್ಥ ಮುಂತಾದವುಗಳ ಎದುರು ಜಲಪಾತ ಸೇರದೆ ಇದ್ದರು ,ಅವರ ಸಮಗ್ರ ಸಾಹಿತ್ಯ ಸಾರವನ್ನು ವಿಶ್ಲೇಷಿಸುವುದಕ್ಕೆ ಇದು ಸಹಾಯಕವಾಗುತ್ತದೆ.
ಭೈರಪ್ಪನವರ ಅನೇಕ ಕಾದಂಬರಿಯ ಪಾತ್ರಗಳು ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ಜೀವನ ಎಂಬ ಉಕ್ತಿಗೆ ಅನುಗುಣವಾಗಿ ನಡೆಯುತ್ತವೆ. ಜಲಪಾತದಲ್ಲೂ ಇದನ್ನೇ ನಾವು ಕಾಣಬಹುದು. ನೆಮ್ಮದಿ ಸಾಧನೆಗೆ ಬೇಕಾದ ಏಕಾಗ್ರತೆಯನ್ನು ಹಳ್ಳಿಯಲ್ಲರಸಿ ಗಿಜಿಗುಡುವ ಮುಂಬೈನಿಂದ ಬರುವ ಕಲಾವಿದ ಶ್ರೀಪತಿ ಮತ್ತು ಹಾಡುಗಾರ್ತಿ ವಸು ಭ್ರಮನಿರಸನವಾಗಿ ಮತ್ತೆ ಮುಂಬೈಗೆ ತೆರಳುತ್ತಾರೆ. ನಾವಿರುವ ಸ್ಥಳವನ್ನೇ ಸ್ವರ್ಗವಾಗಿಸಿಕೊಳ್ಳುವುದು ಜಾಣತನ. ಸ್ವರ್ಗವನ್ನರಸಿ ಹೊರಟರೆ ಸಿಗುವುದು ಕಷ್ಟ ಎಂಬ ಸತ್ಯವನ್ನು ಇಲ್ಲಿ ಸೂಚಿಸುತ್ತಾರೆ.
ಸುಮಾರು ಅರವತ್ತರ ದಶಕದಲ್ಲಿ ಬರೆದಿರುವ ಈ ಕಾದಂಬರಿ ಇವತ್ತಿಗೆ ಹೆಚ್ಚು ಪ್ರಸ್ತುತವಾಗಿದೆ ಎಂದು ನನಗನ್ನಿಸುತ್ತದೆ. "ನಮ್ಮ ದೇಶವನ್ನೆಲ್ಲ ಮುಂಬೈ ಆವರಿಸಿದೆ. ಎಲ್ಲ ರೈಲುಗಳು ಮುಂಬೈಯಿಂದ ಹೊರಟುಮುಂಬೈಯನ್ನೇ ತಲುಪುತ್ತವೆ"ಎಂಬುದು ಜಲಪಾತದ ನಾಯಕನ ಅಭಿಪ್ರಾಯ. ದೊಡ್ದದೆನನ್ನೋ ಸಾಧಿಸುತ್ತೆನೆಂದು ಇರುವ ಹಳ್ಳಿಯನ್ನು ಬಿಟ್ಟು ಮಹಾನಗರಿಗೆ ಬಂದು ಬೀಳುವ ಯುವ ಜನಾಂಗ ,ನಗರದಲ್ಲಿ ಜೀವಿಸುತ್ತಾ ನಗರದ ಎಲ್ಲ ಸುಖ ಸೌಲಭ್ಯಗಳನ್ನು ಅನುಭವಿಸುತ್ತಾ ತಾವು ಬಾಲ್ಯದಲ್ಲಿ ಕಂಡ ಹಳ್ಳಿ ಬದುಕಿನ ಸೌಂದರ್ಯವನ್ನು ನೆನೆಸಿಕೊಂಡು ಈಗಿನ ಮಕ್ಕಳು ಅವುಗಳಿಂದ ವಂಚಿತರಾಗಿದ್ದಾರೆ ಎಂದು ಕಳವಳಗೊಲ್ಲುತ್ತ ಜೀವಿಸುವ ಮಧ್ಯವಯಸ್ಕರು ,ಎಲ್ಲಿಯೂ ಸಲ್ಲದೆ ಪರದಾಡುವ ವೃದ್ಧರು ಇದು ಈ ಕಾಲದ ದೊಡ್ಡ ಸಮಸ್ಯೆ. ಆದರೆ ನಾಲ್ಕು ದಶಕಗಳಷ್ಟು ಹಿಂದೆಯೇ ಈ ಸಮಸ್ಯೆಗಳನ್ನಿಟ್ಟುಕೊಂಡು ಭೈರಪ್ಪನವರು ಕಾದಂಬರಿ ರಚಿಸಿದ್ದಾರೆ.
'ಕಾಮ' ಇದೂ ಸಹ ಭೈರಪ್ಪನವರ ಕಾದಂಬರಿಗಳ ಮುಖ್ಯವಾದ ಒಳಸುಳಿ . 'ಮನುಷ್ಯನ ಜೀವನದಲ್ಲಿ ಕಾಮದ ಪಾತ್ರ' ಇದು ಭೈರಪ್ಪನವರ ಕಾದಂಬರಿಯ ಪಾತ್ರಗಳನ್ನು ತುಂಬ ಕಾಡುವ ವಿಚಾರ.
"ಸಂತಾನಾಪೆಕ್ಷೆ ,ವಂಶಾಭಿವ್ರುದ್ಧಿಗಳೇ ಕಾಮದ ಮೂಲ ಆಶಯವಾಗಿರಬೇಕು , ಲೈಂಗಿಕ ಅಪೇಕ್ಷೆ ಗೌಣ" ಎಂಬ ಈ ಕಾದಂಬರಿಯ ಆಶಯ ಇವತ್ತಿನ ಮಟ್ಟಿಗೆ ಅಪ್ರಸ್ತುತವೆನ್ನಿಸಬಹುದು . ಆದರೆ ನಾಲ್ಕು ದಶಕಗಳ ಹಿಂದೆ ಅದೇ ಸರಿಯೇನ್ನಿಸಿದ್ದಿರಬಹುದು . ಆದರೂ ಲೈಂಗಿಕ ಅಪೇಕ್ಷೆ ಕೂಡ ಒಂದು ಸಹಜ ಪ್ರಕ್ರಿಯೆ, ಅತಿ ನಿಗ್ರಹದಿಂದ ಜೀವನೋತ್ಸಾಹವೇ ಕಡಿಮೆಯಾಗುವ ಅಪಾಯವಿರುವಂತೆಯೇ ಅತಿ ಸ್ವಚ್ಚಂದತೆ ಓಕರಿಕೆ ಹುಟ್ಟಿಸಬಲ್ಲದು ಎಂಬುದನ್ನು ಲೇಖಕ ಸೂಚಿಸುತ್ತಾರೆ.
ಭೈರಪ್ಪನವರ ಕಾದಂಬರಿಗಳಲ್ಲಿ ತುಂಬ ಕಾಡುವ ಇನ್ನೊಂದು ಸಂಗತಿಯೆಂದರೆ ಹೆಣ್ಣು ಪಾತ್ರ ಚಿತ್ರಣ. ದೈಹಿಕವಾಗಿ ಗಂಡು ಗಟ್ಟಿಯಾದರೂ ಹೆಣ್ಣು ಮಾನಸಿಕವಾಗಿ ಗಟ್ಟಿ . ನೋವನ್ನು ಸಹಿಸುವ, ಸಂಕಷ್ಟಗಳನ್ನು ಎದುರಿಸುವ ಶಕ್ತಿ ಹೆಣ್ಣಿಗೆ ಹೆಚ್ಚು . ಪ್ರಕೃತಿಯ ಈ ಗುಟ್ಟನ್ನು ಚೆನ್ನಾಗಿ ಬಲ್ಲ ಭೈರಪ್ಪನವರ ಕಾದಂಬರಿಯ ಹೆಣ್ಣುಗಳು ಹೆಚ್ಚು ಪರಿಪಕ್ವರೂ ,ವಾಸ್ತವವಾದಿಗಳೂ,ಧೀರೆಯರೂ ಆಗಿ ಮನಸ್ಸನ್ನು ತಟ್ಟುತ್ತಾರೆ. ಆ ಮೂಲಕ ಹೆಣ್ಣಿನ ಮೂಲ ಗುಣಗಳನ್ನು ನೆನಪಿಸುತ್ತಾರೆ.

No comments:

Post a Comment