3 Nov 2009

ಮಹಾನ್ ಮೊಸಳೆ

ಮೊಸಳೆಗಳು ಅತ್ಯಂತ ಪುರಾತನ ಕಾಲದಿಂದ ಅಂದರೆ ಸುಮಾರು ಇನ್ನೂರು ಮಿಲಿಯನ್ ವರ್ಷಗಳಿಂದ ಭೂಮಿಯಲ್ಲಿ ವಾಸವಾಗಿವೆ. ಜೀವವಿಜ್ಞಾನಿಗಳು ಇವನ್ನು Reptile ಗಳ ಜಾತಿಗೆ ಸೇರಿಸುತ್ತಾರೆ. ಆ ಕಾಲದಲ್ಲಿ ಭೂಮಿಯಲ್ಲಿ ಹೆಚ್ಚಾಗಿ ವಾಸಿಸುತ್ತಿದ್ದ ದೈತ್ಯೋರಗಗಳು ಅರವತ್ತೈದು ಮಿಲಿಯನ್ ವರ್ಷಗಳ ಹಿಂದೆ ಕಾರಣಾಂತರಗಳಿಂದ ಸಾಮೂಹಿಕವಾಗಿ ನಾಶಹೊಂದಿದರೂ ಈ ಮೊಸಳೆಯ ಜಾತಿಗೆ ಸೇರಿದ ಜೀವಿಗಳು ಮಾತ್ರ ಇದುವರೆಗೂ ಉಳಿದಿವೆ.

ನದಿ, ಹೊಳೆ ,ಆಳವಾದ ಕೆರೆ ಮುಂತಾದ ಸಿಹಿನೀರಿಲ್ಲಿ ಮತ್ತು ಉಪ್ಪುನೀರಿರುವ ಜೌಗು ಪ್ರದೇಶದಲ್ಲಿ ವಾಸವಾಗಿರುವ ಇವು ನೆಲ ನೀರೆರಡರಲ್ಲೂ ವಾಸಿಸಬಲ್ಲ ಉಭಯವಾಸಿಗಳು.

ದೇಹವು ನೀರಿನಲ್ಲಿ ವಾಸಿಸಲು ಅನುಕೂಲಕರವಾದ ಎಲ್ಲ ಮಾರ್ಪಾಡುಗಳಿವೆ. ಈಜಲು ಅನುಕೂಲಕರವಾದ ಮೀನಿನಾಕಾರದ ದೇಹ, ನೀರಿನಲ್ಲಿ ವೇಗವಾಗಿ ತಿರುಗಲು ಸಹಾಯಕವಾದ ಜಾಲಪಾದಗಳು, ಶಕ್ತಿಶಾಲಿ ಬಾಲ, ನೀರುನಿರೋಧಕ ಪೊರೆಗಳಿರುವ ಕಣ್ಣು, ಇವುಗಳ ಸಹಾಯದಿಂದ ಇದು ನೀರುನಲ್ಲಿ ಈಜಬಲ್ಲದು,ಮುಳುಗಿ ನೆಲಕ್ಕೆ ಕಾಲನ್ನೂರಿ ನೆಡೆಯಬಲ್ಲದು.


ಇವುಗಳ ಹೊಟ್ಟೆಯ ಅಂದರೆ ಕೆಳಭಾಗದ ಚರ್ಮ ಮೃದುವಾಗಿದೆ. ಆದರೆ ಬೆನ್ನ ಚರ್ಮವು ಎಷ್ಟು ದಪ್ಪವೆಂದರೆ ಬಾಣ ,ಗುಂಡಗಳಿಂದ ಕೂಡ ಇದನ್ನು ಭೇಧಿಸುವುದು ಕಷ್ಟ.

ಮೊಸಳೆಗಳು ಬೇಟೆಯನ್ನು ಕಚ್ಚಿ ಹಿಡಿದು ಹರಿದು ತಿನ್ನುತ್ತವೆ . ಬೇಟೆ ಹಿಡಿಯಲು ಬೇಕಾದ ವೇಗವಾದ ಚಲನಾ ಸಾಮರ್ಥ್ಯ ಬಲವಾದ ಕಾಲಿನ ಸ್ನಾಯುಗಳಿಂದ ಲಭ್ಯ. ಮೊಸಳೆಗಳು ಬೇಟೆಯನ್ನು ಒಮ್ಮೆ ಕಚ್ಚಿ ಹಿಡಿದರೆ ಬಿಡಿಸುವುದು ತುಂಬಾ ಕಷ್ಟ. ನಮ್ಮ ಪುರಾಣಗಳಲ್ಲಿ ಬರುವ ಗಜೇಂದ್ರ ಮೋಕ್ಷದ ಕಥೆ ನೆನಪಿಸಿಕೊಳ್ಳಿ. ಆನೆಯಂತಹ ಶಕ್ತಿಶಾಲಿ ಪ್ರಾಣಿಗೂ ಬಿಡಿಸಿಕೊಳ್ಳಲು ಸಾಧ್ಯವಾಗದಷ್ಟು ಬಲವಾದ ಹಿಡಿತವದು. ಅದರ biting force 5000 pounds/sq inch ಗಳಿಗಿಂತಲೂ ಹೆಚ್ಚಂತೆ. ಇತರ ಶಕ್ತಿಶಾಲಿ ಬೇಟೆಗಾರರಾದ ಚಿರತೆ, ಹೈನಗಳಿಗಿರುವ ೧೦೦೦-೧೫೦೦ ಪೌಂಡ್ /ಸ್ಕೈರ‍್ ಇಂಚ್ ಸಾಮರ್ಥ್ಯಕ್ಕೆ ಹೋಲಿಸಿದರೆ ಇದು ಎಷ್ಟು ಹೆಚ್ಚೆಂದು ಅರಿವಾಗುತ್ತದೆ.

ಬಲವಾದ ದವಡೆಯ ಸ್ನಾಯುಗಳಿಂದ ಈ ಕಾರ್ಯ ಸಾದ್ಯವಾಗಿದೆ. ಆದರೆ ಅವು ಬಾಯಿತೆರೆಯಲು ಸಹಾಯಕವಾಗುವ ಸ್ನಾಯುಗಳು ತುಂಬ ದುರ್ಬಲವಾಗಿದೆ. ಆದ್ದರಿಂದಲೆ ಮೊಸಳೆಯನ್ನು ಹಿಡಿಯುವವರು ಅದರ ಬಾಯನ್ನು ದಪ್ಪ ರಬ್ಬರ‍್ ಬ್ಯಾಂಡ್ ನಿಂದ ಕಟ್ಟಿದರೂ ಸಾಕು ಅದು ಬಾಯಿ ತೆರೆಯಲಾರದು!

ಚಟುವಟಿಕೆ ಕಡಿಮೆಯಾದ್ದರಿಂದ ಆಹಾರದ ಅವಶ್ಯಕತೆಯೂ ಕಡಿಮೆ. ಸುಮಾರು ವಾರಕ್ಕೊಮ್ಮೆ ಆಹಾರದ ಬೇಟೆ. ಬೇಟೆಯಾಡುವಾಗ ಅದನ್ನು ಕಚ್ಚಿ ಹರಿಯುವಾಗ ಒಂದಕ್ಕೊಂದು ಸಹಾಯ ಮಾಡುವಷ್ಟು ಬುದ್ಧಿಯಿದೆ. ಬೇಟೆಯ ಮೂಳೆ ಚಿಪ್ಪು ಮುಂತಾದ ಗಟ್ಟಿವಸ್ತುಗಳನ್ನೂ ಜೀರ್ಣಸಿಕೊಳ್ಳುತ್ತದೆ. ಇದಕ್ಕೆ ಕಾರಣ ಅದರ ಅತಿ ಆಮ್ಲೀಯ ಜೀರ್ಣರಸಗಳು ಮತ್ತುಅದು ನುಂಗುವ ಕಲ್ಲು!!!. ಅದರ ಜಠರದಲ್ಲಿರುವ ಈ ಕಲ್ಲುಗಳು ಜೀರ್ಣಕ್ರಿಯಯಲ್ಲಷ್ಟೇ ಅಲ್ಲದೆ ದೆಹದ ಸಮತೋಲನ ಕಾಯ್ದುಕೊಳ್ಳಲೂ ಸಹಕಾರಿಯಾಗಿವೆ.

ಸಾಮಾನ್ಯವಗಿ ಹಕ್ಕಿಗಳನ್ನು ತಿನ್ನುತ್ತದೆ. ಅದರೆ egyption plover ಎಂಬ ಹಕ್ಕಿ ಮಾತ್ರ ಧೈರ್ಯವಾಗಿ ಅದರ ಬಾಯೊಳಗೇ ಹೋಗಿ ಹಲ್ಲುಗಳಲ್ಲಿ ಸಿಕ್ಕಿಕೊಂಡಿರುವ ಮಾಂಸದ ತುಣುಕನ್ನು ತಿನ್ನುತ್ತದೆ!. ಮೊಸಳೆಯ ದಂತವೈದ್ಯ ಈ ಹಕ್ಕಿ!!

ಶೀತರಕ್ತ ಪ್ರಾಣಿಯಾದ್ದರಿಂದ ದೇಹದ ಉಷ್ಣತೆ ವಾತಾವರಣವನ್ನು ಅವಲಂಬಿಸಿದೆ. ಬೆವರಿನ ಗ್ರಂಥಿಗಳಿಲ್ಲವಾದ್ದರಿಂದ ಅಧಿಕ ಉಷ್ಣತೆಯನ್ನು ಬಾಯಿಂದ ಹೊರಹಾಕುತ್ತದೆ.
ಇನ್ನೊಂದು ಆಸಕ್ತಿದಾಯಕ ವಿಷಯವೆಂದರೆ ಇವು ತಮ್ಮ ವಾಸಸ್ಥಾನವನ್ನು ನೆನಪಿಟ್ಟುಕೊಳ್ಳಬಲ್ಲವು . ದೂರ ಒಯ್ದು ಬಿಟ್ಟರೂ ಮತ್ತೆ ಮೂಲಸ್ಥಳಕ್ಕೇ ಹಿಂದಿರುಗುತ್ತವೆ.


ಇವುಗಳ ಆಯಸ್ಸು ಸುಮರು ಎಪ್ಪತ್ತು ವರ್ಷಗಳು. ಪ್ರಾಪ್ತ ವಯಸ್ಕ ಹೆಣ್ಣು ನೀರಿನ ದಡದಲ್ಲಿ ಕಸ ಕಡ್ಡಿ ಮಣ್ಣು ಮರಳುಗಳನ್ನು ಪೇರಿಸಿ ಒಮ್ಮೆಲೆ ೪೦ ರಿಂದ ೮೦ ಮೊಟ್ಟೆಗಳನ್ನಿಡುತ್ತದೆ. ಕೊಳೆಯುವ ಕಸ ಕಡ್ಡಿಗಳ ಶಾಖಕ್ಕೆ ಮೊಟ್ಟೆಗಳೊಡೆಯುತ್ತವೆ. ಒಡೆಯುವಾಗ ತಾಯಿ ಸಹಾಯ ಮಾಡುತ್ತದೆ. ಕೆಲವು ದಿನಗಳವರೆಗೆ ಮರಿಗಳನ್ನು ರಕ್ಷಿಸುತ್ತದೆ.
ಆಶ್ಚರ್ಯವೆಂದರೆ ಮೊಸಳೆಗಳಲ್ಲಿ ಮರಿಗಳ ಲಿಂಗ ನಿರ್ಧಾರವಾಗುವುದು ಅಲ್ಲಿಯ ಉಷ್ಣತೆಯನುಗುಣವಾಗಿ. ನಮ್ಮಂತೆ ಲಿಂಗ ನಿರ್ಧರಿಸುವ ವರ್ಣತಂತುಗಳು ಅವಕ್ಕಿಲ್ಲ. ಸುಮಾರು ಮುವತ್ತು ಡಿಗ್ರಿ ಉಷ್ಣತೆಯಿದ್ದರೆ ಮೊಟ್ಟೆಯೊಳಗಿನ ಮರಿ ಗಂಡಾಗುತ್ತದೆ. ಅದಕ್ಕಿಂತ ಕಡಿಮೆ ಅಥವಾ ಹೆಚ್ಚಿನ ಉಷ್ಣತೆಯಿದ್ದರೆ ಹೆಣ್ಣಾಗಿ ಬೆಳೆಯುತ್ತದೆ!!

ಈ ಬಲಿಷ್ಟದೇಹಿಗೆ ತೊಂದರೆ ಕೊಡುವ ವೈರಿ ಮಾನವನೇ ಹೊರತು ಬೇರಾರಿಲ್ಲ. ಜಾಕೆಟ್, ಪರ್ಸ್, ಶೂ, ಹ್ಯಾಟ್ ಮುಂತಾವುಗಳನ್ನು ಅದರ ಚರ್ಮದಿಂದ ತಯಾರಿಸಬಹುದು. ಅವುಗಳ ಮಾಂಸವನ್ನು ಕೆಲವು ದೇಶಗಳಲ್ಲಿ ಆಹಾರವಾಗಿ ಉಪಯೋಗಿಸುತ್ತಾರೆ. ಇವುಗಳ ಆಸೆಗಾಗಿ ಮಾನವ ಈ ಜೀವಿಗಳನ್ನು ಬೇಟೆಯಾಡುವುದು ನಿರಂತರವಾಗಿ ನಡೆಯುತ್ತಿದೆ.

{ಈ ಫೋಟೊಗಳನ್ನು ಚನ್ನೈಯಲ್ಲಿರುವ ಕ್ರೊಕೊಡೈಲ್ ಪಾರ್ಕನಲ್ಲಿ ತೆಗೆದದ್ದು. ಇದು ಏಷ್ಯಾದ ದೊಡ್ಡ ಮೊಸಳೆ ಸಂಶೋದನಾಕೇಂದ್ರಗಳಲ್ಲೊಂದು. ಅನೇಕ ಜಾತಿಯ ಮೊಸಳೆಗಳನ್ನು ಇಲ್ಲಿ ನೋಡಬಹುದು. ಅವರು ಕೊಡುವ ಮರಿ ಮೊಸಳೆಯನ್ನು, ಹಾವನ್ನು ಹಿಡಿದು ಸಂತಸ ಪಡಬಹುದು.}
Posted by Picasa

18 comments:

 1. ಸುಮಾ ಮೇಡಂ,
  ತುಂಬಾ ಧನ್ಯವಾದಗಳು... ಇಷ್ಟು ವಿವರಗಳನ್ನು ಒದಗಿಸಿದ್ದಕ್ಕೆ, ಮೊಸಳೆ ನೋಡಿದರೆ ನಂಗೆ ಭಯ..... ನಿಮ್ಮ ಫೋಟೋ ನೋಡಿ ಸ್ವಲ್ಪ ಭಯ ಕಡಿಮೆಯಾಗಿದೆ....

  ReplyDelete
 2. ಅಬ್ಬಾ ಮೊಸಳೆಯೇ!!. ತುಂಬಾ ಇನ್ಫಾರ್ಮಶನ್ ಸಿಕ್ಕಿತು. ಚೆನ್ನಾಗಿದೆ.
  ನಿಮ್ಮವ,
  ರಾಘು.

  ReplyDelete
 3. ಆತ್ಮೀಯ

  ಎರಡು ಮಾತಿಲ್ಲ, ಅತ್ಯುತ್ತಮ ವಿವರಣೆಯೊಂದಿಗೆ ಅಷ್ಟೇ ಉತ್ತಮ ಚಿತ್ರಗಳು.

  ಕ್ರೊಕೊಡೈಲ್ ಪಾರ್ಕನಲ್ಲಿ ಮೊಸಳೆ ಮರಿಗಳನ್ನ ಮಾರಾಟ ಮಾಡ್ತಾರ? ನಾವೂ ಕೂಡ ತಂದು ಸಾಕ್ಬೌದ? ಒಂದು ಮೊಸಳೆಗೆ ವಾರಕ್ಕೆ ಎಷ್ಟು ಖರ್ಚು ತಗಲುತ್ತೆ? ಅವಕ್ಕೆ ಏನು ರೋಗ ಬರಲ್ವಾ? ಪ್ರಶ್ನೆಗಳು ತುಂಬಾ ಜಾಸ್ತಿ ಇದಾವೆ. ಬೇಜಾರ್ ಮಾಡ್ಕೋ ಬೇಡಿ.

  ReplyDelete
 4. ದೊಡ್ಡ ಮೊಸಳೆಯಾಗಿದ್ದರೆ ನನಗೂ ಭಯವಾಗುತ್ತಿತ್ತೇನೊ ದಿನಕರ ಅವರೆ . ಇದು ಮರಿಯಾದ್ದರಿಂದ ಧೈರ್ಯವಾಗಿ ಹಿಡಿದಿದ್ದೇನೆ.
  ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು ದಿನಕರ ,ರಾಘು ಮತ್ತು ಲೋದ್ಯಾಶಿಯವರೆ.

  ಲೋದ್ಯಾಶಿಯವರೆ ನಿಮ್ಮ ಪ್ರಶ್ನೆಗಳಿಗೆ ನನಗೆ ತಿಳಿದ ಮಟ್ಟಿಗೆ ಉತ್ತರಿಸಲು ಪ್ರಯತ್ನಿಸುತ್ತೇನೆ.ಕ್ರೊಕೊಡೈಲ ಪಾರ್ಕನಲ್ಲಿ ಮೊಸಳೆಗಳನ್ನು ಮಾರುವರೋ ಎಂಬ ವಿಚಾರ ನನಗೆ ತಿಳಿಯದು. ಇನ್ನು ಅದನ್ನು ಸಾಕಲು ದೊಡ್ಡ ಆಳವಾದ ಕೆರೆ ಬೇಕು .ಹೆಚ್ಚಿನ ಖರ್ಚು ಬರಲಿಕ್ಕಿಲ್ಲ. ಅದು ಹೆಚ್ಚು ಆಹಾರವನ್ನೇನು ಸೇವಿಸುವುದಿಲ್ಲ. ಅದಕ್ಕೆ ರೋಗನಿರೋಧಕ ಶಕ್ತಿ ಹೆಚ್ಚಿರುತ್ತದೆ. ಬ್ಯಾಕ್ಟೀರಿಯಾ ಮುಂತಾದ ರೋಗಾಣುಗಳು ಹೆಚ್ಚಿರುವ ಜೌಗು ಪ್ರದೇಶದಲ್ಲೇ ಅದು ಹೆಚ್ಚಾಗಿ ವಾಸಿಸುವುದರಿಂದ ಸಹಜವಾಗೆ ಅದಕ್ಕೆ ಇಮ್ಯುನಿಟಿ ಜಾಸ್ತಿಯಿದೆ.

  ReplyDelete
 5. ಸುಮ...

  ಮೊಸಳೆ ಬಗೆಗೆ ಇಷ್ಟೆಲ್ಲ ವಿಷಯ ಗೊತ್ತಿಲ್ಲವಾಗಿತ್ತು...
  ಉಪಯುಕ್ತ ಮಾಹಿತಿಗಳು..

  ನಿಮ್ಮ ಧರ್ಯ ಮೆಚ್ಚಿದೆ...

  ಮೊಸಳೆಗೆ ಕಣ್ಣೀರು ಯಾವಾಗಲೂ ಬರುತ್ತಾ..?
  "ಮೊಸಳೆ ಕಣ್ಣೀರು" ಅಂತ ಯಾಕೆ ಹೇಳುತ್ತಾರೆ..?

  ಫೋಟೊ ಲೇಖನಕ್ಕೆ ಅಭಿನಂದನೆಗಳು..

  ನಿಮ್ಮ ಅಥವಾ ಸುಧಾಕಿರಣ್ ಅವರ ಈಮೇಲ್ ಕೊಡಿ..

  ನನ್ನದು...kash531@gmail.com

  ReplyDelete
 6. ಮೊಸಳೆ ಹಾವು ಹಿಡಿದರೆ ಸಂತೋಷವಾಗುತ್ತಾ!!! ನನಗೆ ಅವುಗಳ ಹೆಸರು ಕೇಳಿದರೇ ಭಯವಾಗುತ್ತೆ ಇನ್ನು ಕೈಲ್ಲಿಡಿದರೆ ಕೇಳುವಂತೆಯೇ ಇಲ್ಲ. ಆದರೆ ನಾನು ಚಿಕ್ಕವನಿದ್ದಾಗ ತೋಟದಲ್ಲಿ ಕನಿಷ್ಠ ಹತ್ತು ಹಾವುಗಳನ್ನಾದರೂ ಅಜ್ಞಾನದಿಂದ ಕೊಂದಿದ್ದೇನೆ. ಮೊಸಳೆ ಪಾರ್ಕ್ ಬಗ್ಗೆ ಕೇಳಿದ್ದೆ ಹೆಚ್ಚಿನ ಮಾಹಿತಿ ನಿಮ್ಮಿಂದ ದೊರೆಯಿತು

  ReplyDelete
 7. ಅತ್ಯುತ್ತಮ ವಿವರಣೆಯೊಂದಿಗೆ ಅಷ್ಟೇ ಉತ್ತಮ ಚಿತ್ರಗಳು.
  ಹೆಚ್ಚಿನ ಮಾಹಿತಿ ನಿಮ್ಮಿಂದ ದೊರೆಯಿತು.
  """ ಮೊಸಳೆಯನ್ನು, ಹಾವನ್ನು ಹಿಡಿದು ಸಂತಸ ಪಡಬಹುದು,,,,, ?????

  ReplyDelete
 8. ನೀವು ಕೊಟ್ಟ ವಿವರಣೆಗಳನ್ನು ಓದಿ ಖುಶಿಯಾಯಿತು. ಚಿತ್ರಗಳೂ ಸಹ ತುಂಬಾ ಚೆನ್ನಾಗಿವೆ. ಮೊಸಳೆ ಮರಿಯನ್ನು ಹಿಡಿದುಕೊಂಡ ಚಿತ್ರವನ್ನು ನೋಡಿ ಭಯವೂ ಆಯಿತು ಎಂದು ಹೇಳಲೇಬೇಕು!

  ReplyDelete
 9. ಸುಮಾ, ವಿಷಯಗಳನ್ನು ಮಾಹಿತಿಯನ್ನು ಅದರಲ್ಲೂ science ಗೆ ಸಂಬಂಧಿಸಿದ್ದನ್ನು ಕೆದಕದೇ ಸುಮ್ಮನಿರುವ ಜಾಯಮಾನ ನಿಮ್ಮದೂ ಅಲ್ಲವೆಂದು ತಿಳಿಯಿತು...ರೂಪಾಶ್ರೀ..ನನ್ನ ಬಳಿ ನನ್ನ ಪೋಸ್ಟನ ಬಗ್ಗೆ ಕೆದಕಿ ಮಾಹಿತಿ ಪಡೆಯುತ್ತಾಳೆ...ನಿಮ್ಮ ಆಸಕ್ತಿಗೆ...ಬಹುಪರಾಕ್....ನೀವು ಹೋಗಿದ್ದ crocodile park (Chennai) ಹತ್ತಿರವೇ, ಮುತ್ತುಕಾಡು ಬೋಟ್ ಕ್ಲಬ್ (ಕೋವಾಲಂ ಗೆ ಮೊದಲು) ನಾನು ಕೆಲಸ ಮಾಡಿದ Central Institute of Brackishwater Aquaculture field centre ಇರುವುದು, ಅಲ್ಲಿಗೂ ನೀವು ಭೇಟಿ ಕೊಡಬಹುದಿತ್ತು....
  ಒಳ್ಳೆಯ ಮಾಹಿತಿ ಮತ್ತು..ನೀವು ಬೋಲ್ಡ್ ಅಂತಾನೂ ತೋರಿಸಿದ್ದೀರಿ...ಮೊಸಳೇನ ಹಿಡಿದು(ಮೊಸಳೆ ಮರಿಯಾದರೇನು...ಹಿರಿಯಾದರೇನು..??!! ..ರಾಘವಾಂಕನ ಪಾಠದ ಕಹಿಸೋರೆ ಕುಡಿಯಾದರೇನು ಮಿಡಿಯಾದರೇನು...ನೆನೆಪಾಯ್ತು..ಹಹಹ).

  ReplyDelete
 10. ಪ್ರಕಾಶಣ್ಣ "ಮೊಸಳೆಯ ಕಣ್ಣೀರು" ಒಂದು ನುಡಿಗಟ್ಟಾಗಿ ಬಳಕೆಯಲ್ಲಿದೆ ."ಸರ‍್ ಮಾಂಡವಿಲ್ಲೆ "ಎಂಬ ೧೪ ನೇ ಶತಮಾನದ ನಾವಿಕ ತನ್ನ ಬರಹದಲ್ಲಿ ಇದನ್ನು ಮೊಟ್ಟಮೊದಲಬಾರಿಗೆ ಪ್ರಸ್ತಾಪಿಸಿದನಂತೆ. ನಂತರ ಅನೇಕ ಬರಹಗಾರರು ಇದನ್ನು ಉಪಯೋಗಿಸಿದ್ದಾರೆ. ಮೊಸಳೆ ಆಹಾರ ತಿನ್ನುವಾಗ ಅದರ ಕಣ್ಣಿನಿಂದ ಬರುವ ನೀರನ್ನು ನೋಡಿ ಈ ನುಡಿಗಟ್ಟು ಬಳಕೆಗೆ ಬಂದಿದೆ ಎಂದು ಕಂಡುಬರುತ್ತದೆ. ಆದರೆ ಇದೊಂದು ಮಿಥ್ಯೆ. ಮೊಸಳೆಯ ಕಣ್ಣಿನಿಂದ ನೀರಿನಂತಹ ದ್ರವ ಹೊರಬರುವುದು ನಿಜವಾದರು ಇದು ದುಖಃದ ಕಣ್ಣೀರಲ್ಲ. ಹೆಚ್ಚುಹೊತ್ತು ನೀರಿನಿಂದ ಹೊರಗಿದ್ದಾಗ ಆಹಾರ ತಿನ್ನುವಾಗ ಇದರ ಕಣ್ಣಲ್ಲಿ ನೀರು ಸುರಿಯುತ್ತದೆ. ಇದಕ್ಕೆ - ಕಣ್ಣಿನ ರಕ್ಷಣೆ, ಆಹಾರ ಸೇವಿಸುವಾಗ ಉಂಟಾಗುವ ಒತ್ತಡ ಮೊದಲಾದವು ಕಾರಣಗಳಾಗಿರಬಹುದೆಂದು ವಿಜ್ಞಾನಿಗಳು ಅಭಿಪ್ರಾಯ ಪಡುತ್ತಾರೆ.

  ReplyDelete
 11. ಮೊಸಳೆ, ಹಾವು ಇತ್ಯಾದಿ ಪ್ರಾಣಿಗಳನ್ನು ಮುಟ್ಟಿ ನೋಡಿ ಸಂತಸ ಪಡುವವರು ಅನೇಕರಿದ್ದಾರೆಂದು ನನಗೆ ಕ್ರೊಕೊಡೈಲ್ ಪಾರ್ಕ್ ನಲ್ಲಿ ತಿಳಿಯಿತು.
  ನಿಮ್ಮ ಪ್ರೋತ್ಸಾಹಕ್ಕಾಗಿ ಧನ್ಯವಾದಗಳು ಸತ್ಯನಾರಾಯಣ , ಇಸ್ಮಾಯಿಲ್ ಮತ್ತು ಸುನಾಥ ಸರ‍್.
  ಜಲನಯನ ಸರ‍್ ನೀವು ತಿಳಿಸಿದ ಸ್ಥಳದ ಬಗ್ಗೆ ಗೊತ್ತಿರಲಿಲ್ಲ.ಇನ್ನೊಮ್ಮೆ ಅಲ್ಲಿಗೂ ಹೋಗುತ್ತೇನೆ. ಲೇಖನ ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್.

  ReplyDelete
 12. namage mosale haagu haavina marigalu beda. dodda mosale haagu haavu hidkolake kodtara?:)

  ReplyDelete
 13. ಸುಮಾ ಮೇಡಂ,
  ತುಂಬಾ ಸುಂದರ ಬರಹ,
  ಮೊಸಳೆಯ ಬಗೆಗೆ ತುಂಬಾ ವಿವರವಾಗಿ ತಿಳಿಸಿದ್ದಿರಾ

  ReplyDelete
 14. ಸುಮ ಮೇಡಮ್

  ಮೊಸಳೆಯ ಬಗ್ಗೆ ಉಪಯುಕ್ತ ಮಾಹಿತಿಯನ್ನು ಕಲೆಹಾಕಿದ್ದೀರಿ. ಬಹುಶಃ ನಮ್ಮ ಓಣಿಯ ಮಕ್ಕಳು ಎಂದಾದರೂ ಮೊಸಳೆಯ ಬಗ್ಗೆ ಚಿತ್ರಸಹಿತ ಮಾಹಿತಿಯನ್ನು ಕೇಳಿದರೆ ಖಂಡಿತ ನಿಮ್ಮ ಬ್ಲಾಗನ್ನು ತೋರಿಸಿ ವಿವರಿಸಬಹುದು.
  ನನಗು ಅನೇಕ ವಿಚಾರಗಳು ಗೊತ್ತಿರಲಿಲ್ಲ. ಧನ್ಯವಾದಗಳು.

  ReplyDelete
 15. ಸುಮ ಅವರೆ,

  ಬಿ.ಎಸ್ಸಿ. ಓದುತ್ತಿರುವಾಗ ಮೊಸಳೆಗಳ ಕುರಿತು ಒಂದು ಪಠ್ಯವೇ ಇತ್ತು. ತುಂಬಾ ಆಸಕ್ತಿಕರ ವಿಷ್ಯ ಈ ಪ್ರಾಣಿಶಾಸ್ತ್ರ ಅಲ್ಲವೇ? ನಿಮ್ಮ ಈ ಸಚಿತ್ರ ಸುಂದರ ಲೇಖನ ನನ್ನ ಓದುವಿಕೆಯನ್ನು ಮತ್ತೆ ನೆನಪಿಸಿತು. ಧನ್ಯವಾದಗಳು.

  ಮೊಸಳೆಗಳು ಬಹುಕಾಲ ನೀರಿನಿಂದ ಮೇಲೆ ಇದ್ದಾಗ ಕಣ್ಣೀರ್ಗರೆಯುತ್ತವೆ. ಕಣ್ಣ ಪಾಪೆಗಳು ಒಣಗದಂತೆ ಮಾಡಲು ಗ್ರಂಥಿಗಳು ನೀರನ್ನು ಸುರಿಸುತ್ತವೆ. ಅದೇ ರೀತಿ ಮೊಸಳೆಗಳ ವಾಸನಾಗ್ರಹಣ ಶಕ್ತಿ, ದೂರದೃಷ್ಟಿ ಬಹಳ ಚೆನ್ನಾಗಿರುತ್ತವೆ ಎಂದೂ ಓದಿದ್ದೆ.

  ಉತ್ತಮ ಲೇಖನ. ಬರೆಯುತ್ತಿರಿ. ಓದಲು ಬರುತ್ತಿರುವೆ.

  ReplyDelete
 16. ಗುರುಮೂರ್ತಿ,ಶಿವು ಮತ್ತು ತೇಜಸ್ವಿನಿಯವರೆ ನಿಮ್ಮೆಲ್ಲರ ಪ್ರೋತ್ಸಾಹದ ನುಡಿಗಳಿಗಾಗಿ ಧನ್ಯವಾದಗಳು.

  ReplyDelete
 17. ಸುಮಾ,
  ಒಳ್ಳೆಯ informative ಲೇಖನ , ತುಂಬ ಚೆನ್ನಾಗಿ ವಿವರಿಸಿ ಬರೆದಿದ್ದೀರ.. ಮೊಸಳೆ ಬಗ್ಗೆ,,, ಮತ್ತಸ್ತು ಇದೆ ರೀತಿಯ ಲೇಖನಗಳು ಬರಲಿ...
  ಗುರು

  ReplyDelete
 18. ಸಚಿತ್ರ ಮಾಹಿತಿ ಪೂರ್ಣ ಲೇಖನ... ಹೀಗೆ ಒಳ್ಳೊಳ್ಳೆ ಲೇಖನಗಳನ್ನು ಬರೆಯುತ್ತಿರಿ

  ReplyDelete