19 Aug 2009

ಭೂಮಿಯೊಳಗೆ ಸೂರ್ಯ!!!

'ಸ್ವಲ್ಪ ಚುರುಕಾಗಿ ಕೆಲಸ ಮುಗಿಸು ರುಕ್ಕಮ್ಮ ಲೇಟಾಗಿದೆ ' ಬೀದಿಯಲ್ಲಿಯ ಎಲ್ಲ ಮನೆಗಳ ಸುದ್ದಿ ಹೇಳುತ್ತಾ ಸ್ಲೋಮೊಶನ್ ನಲ್ಲಿ ಕಸ ಗುಡಿಸುತ್ತಿದ್ದ ಕೆಲಸದವಳಿಗೆ ನಾನು ಹೇಳಿದೆ. 'ಈ ಟೈಮ್ ಹೋಗಿದ್ದೆ ಗೊತ್ತಾಗಲ್ಲ ನೋಡು ಗಡಿಯಾರದ ಮುಳ್ಳು ಎಷ್ಟು ಬೇಗ ಬೇಗ ಓಡತ್ತೆ ' ಎಂದವಳನ್ನು, ಛೇಡಿಸುತ್ತ 'ಸರಿ ಅದು ಓಡದೆ ಇರುವಂತೆ ಕಟ್ಟಿ ನಿಲ್ಲಿಸೋಣ ಬಿಡು' ಎಂದೆ. ಅವಳೋ ನನಗಿಂತ ಬಲ 'ಬೇಡಕ್ಕ ನಾವು ಸೂರ್ಯನ್ನೇ ಕಟ್ಟಿ ಹಾಕೋಣ ಅವನು ಓಡಿದರೆ ತಾನೆ ಗಡಿಯಾರವು ಓಡುವುದು ಅದಕ್ಕೆ ರಾತ್ರಿ ಸೂರ್ಯ ಭೂಮಿಯೋಳಗಿರುತ್ತಾನಲ್ಲ ಆಗ ಅವನನ್ನು ಹಿಡಿದು ಕಟ್ಟಿಹಾಕೋಣ 'ಎಂದಳು . ಸರಿ ಬಿಡು ಹಾಗೆ ಮಾಡೋಣ ಎಂದರೂ, ನನಗೆ ಇವಳು ನಿಜವಾಗಿಯು ಸೂರ್ಯ ರಾತ್ರಿ ಭೂಮಿಯೊಳಗೆ ಇರುತ್ತಾನೆ ಎಂದು ತಿಳಿದಿರಬಹುದೇ! ಎಂದು ಅನ್ನಿಸಿತು ಅವಳನ್ನು ಕೇಳಿದಾಗ ನಿಜಕ್ಕೂ ನನಗೆ ಬೇಸರವಾಯಿತು . ಅನಕ್ಷರಸ್ತೆಯಾದರು ಬುದ್ದಿವಂತಳಾದ, ತುಂಬ ಕಾಮನ್ ಸೆನ್ಸ್ ಇರುವ ೨೫-೨೬ ರ ವಯಸ್ಸಿನ ಅವಳು ಸೂರ್ಯ ದಿನಾ ಭೂಮಿ ಸುತ್ತಲು ಸುತ್ತುತ್ತ ರಾತ್ರಿಯಾದೊಡನೆ ಭೂಮಿಯೊಳಗೆ ಸೇರಿಕೊಳ್ಳುತ್ತಾನೆ ಎಂದು ತಿಳಿದಿದ್ದಳು. ಎಲ್ಲ ಹಾಗೆ ಹೇಳುತ್ತರಲ್ಲಕ್ಕ ಎಂದ ಅವಳಿಗೆ ಸೌರಮಂಡಲದ ಬಗ್ಗೆ ತಿಳಿಸಿ ಹೇಳಿ ಅರ್ಥ ಮಾಡಿಸುವಾಗ ನಾನು ಸುಸ್ತಾಗಿದ್ದೆ.
ಪ್ರಾಯಶಃ ಇದು ಅವಳೊಬ್ಬಳ ಕಥೆಯಲ್ಲ . ಇನ್ನು ಕೂಡ ಎಷ್ಟೋ ಜನ ಇಂತಹ ಮುಗ್ದತೆಯಲ್ಲೇ ಜೀವಿಸುತ್ತಾರೆ . ಇವರಲ್ಲೆಲ್ಲ ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸುವ ಬಗೆಯೆಂತು? ಈಗ ಇಂತಹ ಅನಕ್ಷರಸ್ತರನ್ನು ಸುಲಭವಾಗಿ ತಲುಪಬಲ್ಲ ಮಾಧ್ಯಮವೆಂದರೆ ದೂರದರ್ಶನ. ಆದರೆ ದೂರದರ್ಶನ ವಾಹಿನಿಗಳೇ ಹೊಸಹೊಸ ಮೂಢ ನಂಬಿಕೆಯನ್ನು ಬೆಳೆಸುತ್ತಿವೆ . ಬೆಳಗ್ಗೆ ಯಾವುದೇ ವಾಹಿನಿಯನ್ನು ನೋಡಿದರೂ ಎಲ್ಲ ಬೆರಳುಗಳಿಗೆ ತರಹೇವಾರಿ ಉಂಗುರಗಳನ್ನು ತೊಟ್ಟು ರುದ್ರಾಕ್ಷಿ, ತಿಲಕಗಳಿಂದ ಅಲಂಕೃತವಾಗಿ ಸರ್ವಾಧಿಕಾರಿಯ ಗತ್ತಿನಲ್ಲಿ ಮುಗ್ಧ ಕೇಳುಗರಿಗೆ ಸಲಹೆ ನೀಡುವ ಬಾಬಾಗಳನ್ನು ನೋಡಬಹುದು. ಇನ್ನು ನಂತರ ಸಿನೆಮ ಹಾಡುಗಳು ,ಗೋಳು ಸುರಿಸುವ ಧಾರಾವಾಹಿಗಳು ,ಅರ್ಥಹೀನ ರಿಯಾಲಿಟಿ ಶೋಗಳು ....ಉಫ್ ಎಲ್ಲಿದೆ ಅವುಗಳಿಗೆ ವೈಜ್ಞಾನಿಕ ಕಾರ್ಯಕ್ರಮಗಳಿಗೆ ಸಮಯ?
ವಿದ್ಯಾವಂತರು ಎನ್ನಿಸಿಕೊಳ್ಳುವ ಅನೇಕರು ಕೂಡ ಮೂಢ ನಂಬಿಕೆಗಳಿಂದ ಮುಕ್ತವಾಗಿಲ್ಲ . ಅಕ್ಷರಸ್ತರನ್ನು ತಲುಪುವ ಮಾಧ್ಯಮವಾದ ಪತ್ರಿಕೆಗಳಿಗೆ ಸೆಲೆಬ್ರಿಟಿಗಳು ಕೆಮ್ಮಿದ್ದು , ಆಕಳಿಸುವುದು ಮುಖ್ಯ ಸುದ್ದಿಯೇ ಹೊರತು ವೈಜ್ಞಾನಿಕ ಬರಹಗಳನ್ನು ಪ್ರಕಟಿಸುವ ,ಓದುಗರನ್ನು ಬೌದ್ದಿಕವಾಗಿ ಬೆಳೆಸುವ ಜವಾಬ್ದಾರಿ ಅವು ತೋರುವುದು ತುಂಬ ಕಡಿಮೆ.
ಇದಕ್ಕೆ ಪರಿಹಾರ ಜನಸಾಮಾನ್ಯರೇ ಕಂಡುಕೊಳ್ಳಬೇಕಿದೆ. ತಿಳಿದವರು ತಮ್ಮ ಸುತ್ತಮುತ್ತಲಿನವರಿಗೆ ತಿಳಿಸಿ ಹೇಳುವುದು ,ಹೆಚ್ಚಾಗಿ ಮಕ್ಕಳಲ್ಲಿ ವೈಜ್ಞಾನಿಕ ದೃಷ್ಟಿಕೋನವನ್ನು ಬೆಳೆಸುವುದು ತುಂಬಾ ಮುಖ್ಯವಾಗುತ್ತದೆ.

8 comments:

  1. ಸುಮ ಮೇಡಮ್,

    ನಿಮ್ಮ ಬರಹ ವಿಚಾರ ಸರಳವಾಗಿದ್ದರೂ ಒಮ್ಮೆ ಯೋಚಿಸಿದಾಗ ಎಷ್ಟೊಂದು ನಿಜವೆನಿಸುತ್ತೆ. ನಮ್ಮ ಮನೆಯ ಓನರ್ ಬೆಳಿಗ್ಗೆಯಿಂದ ೧೦ಗಂಟೆಯವರೆಗೆ ಟಿ.ವಿ ಯಲ್ಲಿ ಜ್ಯೋತಿಷ್ಯಗಳನ್ನು ನೋಡುವುದರಲ್ಲಿ ಮುಳುಗಿರುತ್ತಾರೆ. ಅದೌ ಬಿಟ್ಟು ಕೆಲಸ ಸರಳ ವಿಜ್ಞಾನವನ್ನು ತಿಳಿದುಕೊಳ್ಳುವ ಪ್ರಯತ್ನವನ್ನೇ ಮಾಡುವುದಿಲ್ಲ. ಮತ್ತು ಅವರ ಮನೆಯ ದಿನಪತ್ರಿಕೆಯನ್ನು ಕೇವಲ ಅವರ ಹಿರಿಯಜ್ಜ ಮಾತ್ರ ಓದುತ್ತಾರೆ ಬಿಟ್ಟರೆ ಇನ್ಯಾರು ಓದುವುದಿಲ್ಲ. ಇದು ಸದ್ಯದ ಪರಿಸ್ಥಿತಿ. ಇದನ್ನು ಪರಿಹಾರವೇನು....

    ReplyDelete
  2. ಸುಮಾ ಅವ್ರೆ,
    ಒಂದು ಗಂಭೀರ ವಿಷಯವನ್ನು ಎತ್ತಿದ್ದೀರಿ. ಆದರೆ ಒಂದು ವಿಷಯವೆಂದರೆ, ತಿಳಿದುಕೊಳ್ಳುವ ಹಂಬಲ ಕೇಳುವವರಿಗೂ ಇರಬೇಕು ಅಲ್ವ? ಇನ್ನು ನೀವು ಹೇಳಿದ ಟಿವಿ ವಾಹಿನಿಗಳ ವಿಚಾರ ನೂರಕ್ಕೆ ನೂರು ಸತ್ಯ.. ಸಾಮಾಜಿಕ ಜವಾಬ್ದಾರಿ ಯಾವ ವಾಹಿನಿಯಲ್ಲೂ ನಾ ಕಾಣೆ.

    ReplyDelete
  3. ಸುಮಾರವರೇ, ತಮ್ಮ ಚಿ೦ತನೆ ನಿಜವಾದುದೇ. ಯಾವ ಟೀವಿ ಗಳಲ್ಲು ವೈಜ್ನಾನಿಕ ಚಿತ್ರಣಗಳು ಕಾಣುತಿಲ್ಲ. ನ್ಯಾಶನಲ್ ಜೀಯೊಗ್ರಾಫ಼ಿಕ್ ನಲ್ಲಿ ಇದೆ. ಕನ್ನಡದಲ್ಲಿ ಇನ್ನು ಬರಬೇಕಷ್ಟೇ.

    ReplyDelete
  4. ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು .

    ಶಿವು ಸರ‍್ ಇದಕ್ಕೆ ಪರಿಹಾರ ನಾವುಗಳೆ ಕಂಡುಕೊಳ್ಳಬೇಕಿದೆ. ಮುಖ್ಯವಾಗಿ ಹೆಣ್ಣುಮಕ್ಕಳು ವೈಜ್ನಾನಿಕ ಮನೋಭಾವ ಬೆಳೆಸಿಕೊಳ್ಳಬೇಕು. ಅವಳ ಮೂಲಕ ಇಡೀ ಕುಟುಂಬ, ಮಕ್ಕಳು ,ಕಲಿಯುತ್ತಾರಲ್ಲವೆ?

    ಎಲ್ಲರಿಗೂ ಹೇಳುತ್ತಾ ಹೋಗುವುದು ಸಾಧ್ಯವಿಲ್ಲ ಶರತ್, ಆದರೆ ಆಸಕ್ತಿ ಇರುವವರಿಗೆ ತಿಳಿದವರು ಹೇಳಬಹುದೆನ್ನಿಸುತ್ತದೆ.

    ಸೀತಾರಂ ಸರ‍್ ಇದ್ದುದರಲ್ಲಿ ಚಂದನ ವಾಹಿನಿಯಲ್ಲಿ ಕೆಲವು ಉತ್ತಮ ಕಾರ್ಯಕ್ರಮಗಳು ಪ್ರಸಾರವಾಗುತ್ತವೆ.

    ReplyDelete
  5. ಸುಮ ನಿಮ್ಮ ಮಾತು ಅಕ್ಷರಶಃ ನಿಜ. ನಮ್ಮಲ್ಲಿ ಎಷ್ಟು ಜನ ತಮ್ಮ ದಿನನಿತ್ಯ ಜೀವನದ scientific ಹಿನ್ನೆಲೆಯನ್ನು ಬಲ್ಲವರು ಹೇಳಿ?
    ನನ್ನ ಬ್ಲಾಗ್ಗೆ ಬಂದಿರಿ ಆದ್ರೆ ಪ್ರತಿಕ್ರಿಯಿಸಿಲ್ಲ, ನನ್ನ ಇತರ ಬ್ಲಾಗ್ ಗಳನ್ನು ನೋಡಿ, ನನ್ನ science & Share ನಲ್ಲಿ ಹೆಚ್ಚು ಒತ್ತು ಸೈನ್ಸ್ ಗೇ ಅಂತ ನಿಮಗೆ ಗೊತ್ತಾಗಿರಬೇಕು.

    ReplyDelete
  6. ಒಳ್ಳೆಯ ವಿಚಾರ, ಆದ್ರೆ ಇದನ್ನು ನಮ್ಮ ಚಾನಲ್ಲುಗಳಿಗೆ ಹೇಳೊರು ಯಾರು, ನಮ್ಮ ಮುಖ್ಯಮಂತ್ರಿಗಳು, ಅವರ ಮಂತ್ರಿಗಳು ತಮ್ಮ ಅಂಡು ಉರೊ ಜಾಗಗಳಿಗೆ ಮೂಹುರ್ತವಿಟ್ಟು ಪೂಜಿಸುವ ಈ ದಿನಗಳಲ್ಲಿ ನಾವು ಹೇಳಿದ್ರು ಚಾನಲಗಳು ಕೇಳಿಯಾವೆ?

    -ಶೆಟ್ಟರು

    ReplyDelete
  7. ಮೇಡಂ,
    ನಿಮ್ಮ ಮಾತು ನಿಜ. ಯಾವುದು ಮುಖ್ಯವೋ ಅದು ಅಮುಖ್ಯವಾಗಿ ಬೇಡದಿರುವುದಕ್ಕೆ ಪ್ರಾಮುಖ್ಯತೆ ಪಡೆಯುತ್ತಾ ವೈಜ್ಞಾನಿಕ ಮನೋಧರ್ಮ ಕುಸಿಯುತ್ತಿದೆ. ಎಲ್ಲರೂ ಎಚ್ಚೆತ್ತುಕೊಳ್ಳಬೇಕಿದೆ.

    ReplyDelete
  8. ನಿಮ್ಮ ಮಾತು ನಿಜ,ಎಲ್ಲರೂ ಎಚ್ಚೆತ್ತುಕೊಳ್ಳಬೇಕಿದೆ, ಆಗ ಬದಲಾವಣೆ ಖಂಡಿತ ಸಾಧ್ಯಾ

    ReplyDelete