'ಸ್ವಲ್ಪ ಚುರುಕಾಗಿ ಕೆಲಸ ಮುಗಿಸು ರುಕ್ಕಮ್ಮ ಲೇಟಾಗಿದೆ ' ಬೀದಿಯಲ್ಲಿಯ ಎಲ್ಲ ಮನೆಗಳ ಸುದ್ದಿ ಹೇಳುತ್ತಾ ಸ್ಲೋಮೊಶನ್ ನಲ್ಲಿ ಕಸ ಗುಡಿಸುತ್ತಿದ್ದ ಕೆಲಸದವಳಿಗೆ ನಾನು ಹೇಳಿದೆ. 'ಈ ಟೈಮ್ ಹೋಗಿದ್ದೆ ಗೊತ್ತಾಗಲ್ಲ ನೋಡು ಗಡಿಯಾರದ ಮುಳ್ಳು ಎಷ್ಟು ಬೇಗ ಬೇಗ ಓಡತ್ತೆ ' ಎಂದವಳನ್ನು, ಛೇಡಿಸುತ್ತ 'ಸರಿ ಅದು ಓಡದೆ ಇರುವಂತೆ ಕಟ್ಟಿ ನಿಲ್ಲಿಸೋಣ ಬಿಡು' ಎಂದೆ. ಅವಳೋ ನನಗಿಂತ ಬಲ 'ಬೇಡಕ್ಕ ನಾವು ಸೂರ್ಯನ್ನೇ ಕಟ್ಟಿ ಹಾಕೋಣ ಅವನು ಓಡಿದರೆ ತಾನೆ ಗಡಿಯಾರವು ಓಡುವುದು ಅದಕ್ಕೆ ರಾತ್ರಿ ಸೂರ್ಯ ಭೂಮಿಯೋಳಗಿರುತ್ತಾನಲ್ಲ ಆಗ ಅವನನ್ನು ಹಿಡಿದು ಕಟ್ಟಿಹಾಕೋಣ 'ಎಂದಳು . ಸರಿ ಬಿಡು ಹಾಗೆ ಮಾಡೋಣ ಎಂದರೂ, ನನಗೆ ಇವಳು ನಿಜವಾಗಿಯು ಸೂರ್ಯ ರಾತ್ರಿ ಭೂಮಿಯೊಳಗೆ ಇರುತ್ತಾನೆ ಎಂದು ತಿಳಿದಿರಬಹುದೇ! ಎಂದು ಅನ್ನಿಸಿತು ಅವಳನ್ನು ಕೇಳಿದಾಗ ನಿಜಕ್ಕೂ ನನಗೆ ಬೇಸರವಾಯಿತು . ಅನಕ್ಷರಸ್ತೆಯಾದರು ಬುದ್ದಿವಂತಳಾದ, ತುಂಬ ಕಾಮನ್ ಸೆನ್ಸ್ ಇರುವ ೨೫-೨೬ ರ ವಯಸ್ಸಿನ ಅವಳು ಸೂರ್ಯ ದಿನಾ ಭೂಮಿ ಸುತ್ತಲು ಸುತ್ತುತ್ತ ರಾತ್ರಿಯಾದೊಡನೆ ಭೂಮಿಯೊಳಗೆ ಸೇರಿಕೊಳ್ಳುತ್ತಾನೆ ಎಂದು ತಿಳಿದಿದ್ದಳು. ಎಲ್ಲ ಹಾಗೆ ಹೇಳುತ್ತರಲ್ಲಕ್ಕ ಎಂದ ಅವಳಿಗೆ ಸೌರಮಂಡಲದ ಬಗ್ಗೆ ತಿಳಿಸಿ ಹೇಳಿ ಅರ್ಥ ಮಾಡಿಸುವಾಗ ನಾನು ಸುಸ್ತಾಗಿದ್ದೆ.
ಪ್ರಾಯಶಃ ಇದು ಅವಳೊಬ್ಬಳ ಕಥೆಯಲ್ಲ . ಇನ್ನು ಕೂಡ ಎಷ್ಟೋ ಜನ ಇಂತಹ ಮುಗ್ದತೆಯಲ್ಲೇ ಜೀವಿಸುತ್ತಾರೆ . ಇವರಲ್ಲೆಲ್ಲ ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸುವ ಬಗೆಯೆಂತು? ಈಗ ಇಂತಹ ಅನಕ್ಷರಸ್ತರನ್ನು ಸುಲಭವಾಗಿ ತಲುಪಬಲ್ಲ ಮಾಧ್ಯಮವೆಂದರೆ ದೂರದರ್ಶನ. ಆದರೆ ದೂರದರ್ಶನ ವಾಹಿನಿಗಳೇ ಹೊಸಹೊಸ ಮೂಢ ನಂಬಿಕೆಯನ್ನು ಬೆಳೆಸುತ್ತಿವೆ . ಬೆಳಗ್ಗೆ ಯಾವುದೇ ವಾಹಿನಿಯನ್ನು ನೋಡಿದರೂ ಎಲ್ಲ ಬೆರಳುಗಳಿಗೆ ತರಹೇವಾರಿ ಉಂಗುರಗಳನ್ನು ತೊಟ್ಟು ರುದ್ರಾಕ್ಷಿ, ತಿಲಕಗಳಿಂದ ಅಲಂಕೃತವಾಗಿ ಸರ್ವಾಧಿಕಾರಿಯ ಗತ್ತಿನಲ್ಲಿ ಮುಗ್ಧ ಕೇಳುಗರಿಗೆ ಸಲಹೆ ನೀಡುವ ಬಾಬಾಗಳನ್ನು ನೋಡಬಹುದು. ಇನ್ನು ನಂತರ ಸಿನೆಮ ಹಾಡುಗಳು ,ಗೋಳು ಸುರಿಸುವ ಧಾರಾವಾಹಿಗಳು ,ಅರ್ಥಹೀನ ರಿಯಾಲಿಟಿ ಶೋಗಳು ....ಉಫ್ ಎಲ್ಲಿದೆ ಅವುಗಳಿಗೆ ವೈಜ್ಞಾನಿಕ ಕಾರ್ಯಕ್ರಮಗಳಿಗೆ ಸಮಯ?
ವಿದ್ಯಾವಂತರು ಎನ್ನಿಸಿಕೊಳ್ಳುವ ಅನೇಕರು ಕೂಡ ಮೂಢ ನಂಬಿಕೆಗಳಿಂದ ಮುಕ್ತವಾಗಿಲ್ಲ . ಅಕ್ಷರಸ್ತರನ್ನು ತಲುಪುವ ಮಾಧ್ಯಮವಾದ ಪತ್ರಿಕೆಗಳಿಗೆ ಸೆಲೆಬ್ರಿಟಿಗಳು ಕೆಮ್ಮಿದ್ದು , ಆಕಳಿಸುವುದು ಮುಖ್ಯ ಸುದ್ದಿಯೇ ಹೊರತು ವೈಜ್ಞಾನಿಕ ಬರಹಗಳನ್ನು ಪ್ರಕಟಿಸುವ ,ಓದುಗರನ್ನು ಬೌದ್ದಿಕವಾಗಿ ಬೆಳೆಸುವ ಜವಾಬ್ದಾರಿ ಅವು ತೋರುವುದು ತುಂಬ ಕಡಿಮೆ.
ಇದಕ್ಕೆ ಪರಿಹಾರ ಜನಸಾಮಾನ್ಯರೇ ಕಂಡುಕೊಳ್ಳಬೇಕಿದೆ. ತಿಳಿದವರು ತಮ್ಮ ಸುತ್ತಮುತ್ತಲಿನವರಿಗೆ ತಿಳಿಸಿ ಹೇಳುವುದು ,ಹೆಚ್ಚಾಗಿ ಮಕ್ಕಳಲ್ಲಿ ವೈಜ್ಞಾನಿಕ ದೃಷ್ಟಿಕೋನವನ್ನು ಬೆಳೆಸುವುದು ತುಂಬಾ ಮುಖ್ಯವಾಗುತ್ತದೆ.