ನಂತರ ಶ್ರವಣಬೆಳಗೊಳದ ಹೆಬ್ಬಂಡೆಯನ್ನೇರಿ ಗೊಮ್ಮಟನ ಭವ್ಯಮೂರ್ತಿಯನ್ನು ನೋಡಿ, ಕೊನೆಯೆ ಇಲ್ಲವೇನೊ ಎಂಬಂತಿರುವ ಮೆಟ್ಟಿಲುಗಳನ್ನು ಸ್ಲೋಮೋಶನ್ ನಲ್ಲಿ ಇಳಿಯುತ್ತಿದ್ದೆವು. ಅಲ್ಲಿಯ ಮೆಟ್ಟಿಲುಗಳ ಪಕ್ಕದ ಬಂಡೆಯ ಇಳಿಜಾರಿನಲ್ಲಿ ನಾಲ್ಕು ಆಡುಗಳು ನಮ್ಮನ್ನು ಅಣಕಿಸುವಂತೆ ವೇಗವಾಗಿ ಇಳಿಯುತ್ತಿದ್ದವು!!.
ಅದು ಬಿದ್ದುಬಿಡುತ್ತದೆ ಎಂಬ ಆತಂಕ್ಕೆ ನನಗೆ ಪ್ರಾರಂಭವಾದ ಕಾಲುನಡುಕ ನಿಲ್ಲಲು ಒಂದು ಘಂಟೆ ಬೇಕಾಯಿತು.
ಅದನ್ನು ನೋಡಿದರೆ ಕೊರಕಲಿನ ಮೂಲೆಯಲ್ಲೆಲ್ಲೊ ಅರಾಮಾಗಿ ಮೇಯುತ್ತಾ ನಿಂತಿತ್ತು. ಅದಕ್ಕಿರುವ ಅದ್ಭುತ ಬ್ಯಾಲೆನ್ಸ್ ನೋಡಿ ಆಶ್ಚರ್ಯವಾಯಿತು.
ನನ್ನ ತಲೆಯಿಂದ ಚೆಲುವನಾರಾಯಣ,ಯೋಗಾನರಸಿಂಹ,ಗೊಮ್ಮಟನ ಭವ್ಯತೆ ಎಲ್ಲ ಮರೆಯಾಗಿ ಆಡು ಕುಣಿಯತೊಡಗಿತು.
ಮೆಲುಕು ಹಾಕುವ ಗೊರಸುಳ್ಳ ಸಸ್ತನಿಗಳ ಜಾತಿಯಾದ ಆಡುಗಳಲ್ಲಿ ಮುನ್ನೂರಕ್ಕು ಹೆಚ್ಚು ತಳಿಗಳಿವೆಯಂತೆ. ಅವುಗಳ ವಿಶಿಷ್ಠ ಕಾಲುಗಳ ರಚನೆ, ಕಣ್ಣು , ಎಂತಹ ದುರ್ಗಮ ಪ್ರದೇಶದಲ್ಲು ದೇಹದ ಸಮತೋಲನವನ್ನು ಕಾಯ್ದುಕೊಳ್ಳಲು ಸಹಕಾರಿಯಾಗಿದೆ.
ಅವುಗಳ ಕಾಲಬೆರಳುಗಳಲ್ಲಿ ಮೂರು ಮತ್ತು ನಾಲ್ಕನೆಯ ಬೆರಳುಗಳು ಮಾತ್ರ ಸಮಪ್ರಮಾಣದಲ್ಲಿ ಬೆಳವಣಿಗೆ ಹೊಂದಿದ್ದು, ಕಾಲುಗಳ ಮಧ್ಯದರೇಖೆ ಇವುಗಳ ನಡುವೆ ಹಾದು ಹೋಗುತ್ತದೆ. ಎರಡು ಗೊರಸುಗಳು ಈ ಎರಡು ಬೆರಳುಗಳನ್ನು ಮುಚ್ಚುವಂತೆ ಇದ್ದು ಹೆಚ್ಚಿನ ಬಲ ನೀಡುತ್ತವೆ. ಈ ರೀತಿಯ ರಚನೆ ಕಠಿಣ ಮೇಲ್ಮೈಯಲ್ಲಿ ನಿಲ್ಲಲು ಬೇಕಾದ ಧೃಡತೆಯನ್ನು ನೀಡುತ್ತದೆ. ಅಂತೆಯೆ ಮೆದುವಾದ ನೆಲದಲ್ಲಿರುವಾಗ ಗೊರಸುಗಳು ಹಿಗ್ಗಿ ಜಾರದಂತೆ ಕಾಪಾಡುತ್ತವೆ.
ಜೊತೆಗೆ ಕಣ್ಣು ಪಾಪೆಯ ರಚನೆ ಇಕ್ಕೆಲಗಳನ್ನು ಸರಿಯಾಗಿ ಗುರುತಿಸಲನುಗುಣವಾಗಿದೆ.
ಆಡು ಮುಟ್ಟದ ಸೊಪ್ಪಿಲ್ಲ ಎಂಬ ಗಾದೆಯೆ ಇದೆಯಲ್ಲವೆ? ನಿಜ ಅದು ಎಲ್ಲವನ್ನು ತಿನ್ನಬಲ್ಲುದಾದರು ಎಳೆ ಚಿಗುರು ಸೊಪ್ಪು ಹೆಚ್ಚು ಪ್ರಿಯ. ಅದಕ್ಕಾಗಿ ಎಂತಹ ದುರ್ಗಮ ಪ್ರದೇಶದಲ್ಲಾದರು ನಡೆಯಬಲ್ಲದು. ಮೆಲುಕು ಹಾಕುವ ಪ್ರಾಣಿಯಾದ್ದರಿಂದ ಜಠರದಲ್ಲಿ ನಾಲ್ಕು ಕೋಣೆಗಳಿವೆ.
ಈ ಮೆಲುಕುಹಾಕುವ ಸಸ್ಯಾಹಾರಿ ಸಸ್ತನಿಗಳು ಮಾಂಸಾಹಾರಿ ಪ್ರಾಣಿಗಳಿಗೆ ಆಹಾರವಾಗಿವ ಸಾಧ್ಯತೆ ಹೆಚ್ಚಾಗಿರುವುದರಿಂದ ಕಡಿಮೆ ಸಮಯದಲ್ಲಿ ಹೆಚ್ಚು ತಿಂದು ನಂತರ ವಿರಾಮದಲ್ಲಿ ಅದನ್ನು ಚೆನ್ನಾಗಿ ಜಗೆದು ನುಂಗುತ್ತವೆ. ಅವುಗಳ ಗೊರಸು ಹೆಚ್ಚು ವೇಗ ನೀಡಿ ವೈರಿಗಳಿಂದ ತಪ್ಪಿಸಿಕೊಳ್ಳಲು ಸಹಕರಿಸುತ್ತದೆ.
ಹೀಗೆ ಪ್ರಕೃತಿ ಎಷ್ಟು ಜಾಣ್ಮೆಯಿಂದ ಪ್ರತಿಯೊಂದನ್ನು ರಚಿಸಿದೆಯಲ್ಲವೆ? ಪ್ರಕೃತಿಗಿಂತ ಮಿಗಿಲಾದ ವಿಜ್ಞಾನಿ ಯಾರಿದ್ದಾರೆ?