8 Oct 2009

ಮುನಿದ ಮಳೆರಾಯ

ಛೆ!! ಮನಸ್ಸೆಲ್ಲ ಭಾರವಾಗಿದೆ. ಪೇಪರ‍್,ಟಿ.ವಿ ಗಳಲ್ಲಿ ನೋಡಿದ ಜಲಪ್ರಳಯದ ದೃಶ್ಯಗಳು ಕನಸಲ್ಲೂ ಕಾಡುತ್ತವೆ. ಮುನಿದ ಮಳೆರಾಯ ಉತ್ತರ ಕರ್ನಾಟಕ,ಆಂಧ್ರದ ಅನೇಕ ಪ್ರದೇಶಗಳಲ್ಲಿ ನರಕ ಸೃಷ್ಠಿಸಿದ್ದಾನೆ.ಸಂಭಂಧಿಕರು,ಮನೆ, ಜಮೀನು,ಜಾನುವಾರು ಎಲ್ಲವನ್ನು ಕಳೆದುಕೊಂಡ ಜನರ ಗೋಳು ನೋಡಲಾಗದು.ಎಷ್ಟೋ ಕುಟುಂಬಗಳು ಬೀದಿಪಾಲಾಗಿವೆ.ಮಳೆಯ ನೀರಿನಲ್ಲಿ ಅನೇಕರ ಭವಿಷ್ಯವೆ ಕೊಚ್ಚಿಹೋಗಿದೆ.

ಮಾನವೀಯತೆಯ ದರ್ಶನವಾಗುವುದು ಸಹ ಇಂತಹ ವಿಪತ್ತು ಎದುರಾದಾಗಲೆ. ಹಣ, ಬಟ್ಟೆ, ಆಹಾರಸಾಮಗ್ರಿ ಎಲ್ಲವನ್ನು ದಾನವಾಗಿ ನೀಡುವ ಸಹಸ್ರ ಸಹಸ್ರ ಮಂದಿಯಿಂದ ನೊಂದವರಿಗೆ ಸ್ವಲ್ಪ ಮಟ್ಟಿನ ಆಸರೆ ದೊರಕೀತು.ಆದರೆ ಸಂಗ್ರಹವಾದ ವಸ್ತುಗಳನ್ನು ಅವಶ್ಯಕತೆಯಿರುವವರಿಗೆ ಸರಿಯಾಗಿ ಹಂಚಬೇಕಾದದ್ದು ಅವಶ್ಯಕ. ನಿಜವಾದ ಕಾಳಜಿಯಿಂದ ಸಂಗ್ರಹಿಸುವವರಿಗೆ ದಾನವನ್ನು ಕೊಡುವುದೊಳಿತು.

ಇನ್ನು ಇಂತಹ ವಿಚಾರದಲ್ಲೂ ರಾಜಕೀಯವನ್ನು ಮಾಡುವ, ಒಬ್ಬರ ಮೇಲೊಬ್ಬರು ಕೆಸರೆರಚಿಕೊಳ್ಳುವ ಪಕ್ಷಗಳು, ಫುಢಾರಿಗಳು ,ಇದನ್ನೇ ಪ್ರಚಾರಕ್ಕೆ ಬಳಸಿಕೊಳ್ಳುವ ಪ್ರಚಾರಪ್ರಿಯರು, ಹೇಳಲಾಗದಷ್ಟು ಅಸಹ್ಯ ಹುಟ್ಟಿಸುತ್ತಾರೆ.

ಪ್ರತೀಬಾರಿ ಇಂತಹ ಅವಗಢ ನಡೆದಾಗ ನನ್ನಲ್ಲೇಳುವ ಪ್ರಶ್ನೆ ಇದನ್ನು ತಡೆಯುವುದು ಸಾಧ್ಯವಿಲ್ಲವೆ? ನಿಜ ಪ್ರಕೃತಿಯ ಮುಂದೆ ಹುಲುಮಾನವರಾದ ನಾವು ಕುಬ್ಜರು. ಆದರೆ ಚಂದ್ರಲೋಕವನ್ನು ಪ್ರವೇಶಿಸಲು ತಯಾರಿರುವ ನಾವು {ನಾನು ನಮ್ಮ ದೇಶದ ಬಗ್ಗೆ ಹೇಳುತ್ತಿದ್ದೇನೆ}ಇಂತಹ ಪ್ರಾಕೃತಿಕ ವಿಕೋಪವನ್ನೆದುರಿಸಲು ಬೇಕಾದ ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳಲು ಏಕೆ ಸಾಧ್ಯವಾಗುತ್ತಿಲ್ಲ? ಹವಾಮಾನ ಇಲಾಖೆ ಮುಂದಿನ ೨೪ಘಂಟೆ ಭರ್ಜರಿ ಮಳೆಯಾಗುತ್ತದೆ ಎಂದರೆ ಅಲ್ಲಿ ಬಿಸಿಲು ಬೀಳುತ್ತದೆ ಎಂದೆ ತಿಳಿದುಕೊಳ್ಳಬಹುದು.ಇನ್ನು ಭೂಕಂಪವಾದ ಮೇಲೆ ನಾವು ಮೊದಲೆ ಸೂಚಿಸಿದ್ದೆವು ,ಸರ್ಕಾರಗಳು ಕ್ರಮ ಕೈಗೊಂಡಿಲ್ಲ ಎಂದು ಅವರು , ಹಾಗೇನಿಲ್ಲ ನಮಗೆ ಯಾವುದೇ ಸೂಚನೆ ದೊರೆತಿರಲಿಲ್ಲ ಎಂದು ಸರ್ಕಾರಗಳು ಜಾರಿಕೊಳ್ಳುತ್ತವೆ.
ಇಂತಹ ವಿಪತ್ತುಗಳ ಸಂಭವನೀಯತೆಯನ್ನು ಅರಿಯುವ ವಿಚಾರದಲ್ಲಿ ಹೆಚ್ಚಿನ ಸಂಶೋಧನೆಗಳು ನಡೆಯಬೇಕು.ಅದನ್ನು ಸಮರ್ಥವಾಗಿ ಎದುರಿಸುವ ರೀತಿಯನ್ನು ಜನಸಾಮಾನ್ಯರಿಗೆ ತಲುಪಿಸಬೇಕು. ಇದು ಇಂದಿನ ಅತ್ಯಂತ ಅವಶ್ಯಕ ಕಾರ್ಯ ಎಂದು ನನ್ನ ಅಭಿಪ್ರಾಯ.