ಮೊಸಳೆಗಳು ಅತ್ಯಂತ ಪುರಾತನ ಕಾಲದಿಂದ ಅಂದರೆ ಸುಮಾರು ಇನ್ನೂರು ಮಿಲಿಯನ್ ವರ್ಷಗಳಿಂದ ಭೂಮಿಯಲ್ಲಿ ವಾಸವಾಗಿವೆ. ಜೀವವಿಜ್ಞಾನಿಗಳು ಇವನ್ನು Reptile ಗಳ ಜಾತಿಗೆ ಸೇರಿಸುತ್ತಾರೆ. ಆ ಕಾಲದಲ್ಲಿ ಭೂಮಿಯಲ್ಲಿ ಹೆಚ್ಚಾಗಿ ವಾಸಿಸುತ್ತಿದ್ದ ದೈತ್ಯೋರಗಗಳು ಅರವತ್ತೈದು ಮಿಲಿಯನ್ ವರ್ಷಗಳ ಹಿಂದೆ ಕಾರಣಾಂತರಗಳಿಂದ ಸಾಮೂಹಿಕವಾಗಿ ನಾಶಹೊಂದಿದರೂ ಈ ಮೊಸಳೆಯ ಜಾತಿಗೆ ಸೇರಿದ ಜೀವಿಗಳು ಮಾತ್ರ ಇದುವರೆಗೂ ಉಳಿದಿವೆ.
ನದಿ, ಹೊಳೆ ,ಆಳವಾದ ಕೆರೆ ಮುಂತಾದ ಸಿಹಿನೀರಿಲ್ಲಿ ಮತ್ತು ಉಪ್ಪುನೀರಿರುವ ಜೌಗು ಪ್ರದೇಶದಲ್ಲಿ ವಾಸವಾಗಿರುವ ಇವು ನೆಲ ನೀರೆರಡರಲ್ಲೂ ವಾಸಿಸಬಲ್ಲ ಉಭಯವಾಸಿಗಳು.
ದೇಹವು ನೀರಿನಲ್ಲಿ ವಾಸಿಸಲು ಅನುಕೂಲಕರವಾದ ಎಲ್ಲ ಮಾರ್ಪಾಡುಗಳಿವೆ. ಈಜಲು ಅನುಕೂಲಕರವಾದ ಮೀನಿನಾಕಾರದ ದೇಹ, ನೀರಿನಲ್ಲಿ ವೇಗವಾಗಿ ತಿರುಗಲು ಸಹಾಯಕವಾದ ಜಾಲಪಾದಗಳು, ಶಕ್ತಿಶಾಲಿ ಬಾಲ, ನೀರುನಿರೋಧಕ ಪೊರೆಗಳಿರುವ ಕಣ್ಣು, ಇವುಗಳ ಸಹಾಯದಿಂದ ಇದು ನೀರುನಲ್ಲಿ ಈಜಬಲ್ಲದು,ಮುಳುಗಿ ನೆಲಕ್ಕೆ ಕಾಲನ್ನೂರಿ ನೆಡೆಯಬಲ್ಲದು.
ಇವುಗಳ ಹೊಟ್ಟೆಯ ಅಂದರೆ ಕೆಳಭಾಗದ ಚರ್ಮ ಮೃದುವಾಗಿದೆ. ಆದರೆ ಬೆನ್ನ ಚರ್ಮವು ಎಷ್ಟು ದಪ್ಪವೆಂದರೆ ಬಾಣ ,ಗುಂಡಗಳಿಂದ ಕೂಡ ಇದನ್ನು ಭೇಧಿಸುವುದು ಕಷ್ಟ.
ಮೊಸಳೆಗಳು ಬೇಟೆಯನ್ನು ಕಚ್ಚಿ ಹಿಡಿದು ಹರಿದು ತಿನ್ನುತ್ತವೆ . ಬೇಟೆ ಹಿಡಿಯಲು ಬೇಕಾದ ವೇಗವಾದ ಚಲನಾ ಸಾಮರ್ಥ್ಯ ಬಲವಾದ ಕಾಲಿನ ಸ್ನಾಯುಗಳಿಂದ ಲಭ್ಯ. ಮೊಸಳೆಗಳು ಬೇಟೆಯನ್ನು ಒಮ್ಮೆ ಕಚ್ಚಿ ಹಿಡಿದರೆ ಬಿಡಿಸುವುದು ತುಂಬಾ ಕಷ್ಟ. ನಮ್ಮ ಪುರಾಣಗಳಲ್ಲಿ ಬರುವ ಗಜೇಂದ್ರ ಮೋಕ್ಷದ ಕಥೆ ನೆನಪಿಸಿಕೊಳ್ಳಿ. ಆನೆಯಂತಹ ಶಕ್ತಿಶಾಲಿ ಪ್ರಾಣಿಗೂ ಬಿಡಿಸಿಕೊಳ್ಳಲು ಸಾಧ್ಯವಾಗದಷ್ಟು ಬಲವಾದ ಹಿಡಿತವದು. ಅದರ biting force 5000 pounds/sq inch ಗಳಿಗಿಂತಲೂ ಹೆಚ್ಚಂತೆ. ಇತರ ಶಕ್ತಿಶಾಲಿ ಬೇಟೆಗಾರರಾದ ಚಿರತೆ, ಹೈನಗಳಿಗಿರುವ ೧೦೦೦-೧೫೦೦ ಪೌಂಡ್ /ಸ್ಕೈರ‍್ ಇಂಚ್ ಸಾಮರ್ಥ್ಯಕ್ಕೆ ಹೋಲಿಸಿದರೆ ಇದು ಎಷ್ಟು ಹೆಚ್ಚೆಂದು ಅರಿವಾಗುತ್ತದೆ.
ಬಲವಾದ ದವಡೆಯ ಸ್ನಾಯುಗಳಿಂದ ಈ ಕಾರ್ಯ ಸಾದ್ಯವಾಗಿದೆ. ಆದರೆ ಅವು ಬಾಯಿತೆರೆಯಲು ಸಹಾಯಕವಾಗುವ ಸ್ನಾಯುಗಳು ತುಂಬ ದುರ್ಬಲವಾಗಿದೆ. ಆದ್ದರಿಂದಲೆ ಮೊಸಳೆಯನ್ನು ಹಿಡಿಯುವವರು ಅದರ ಬಾಯನ್ನು ದಪ್ಪ ರಬ್ಬರ‍್ ಬ್ಯಾಂಡ್ ನಿಂದ ಕಟ್ಟಿದರೂ ಸಾಕು ಅದು ಬಾಯಿ ತೆರೆಯಲಾರದು!
ಚಟುವಟಿಕೆ ಕಡಿಮೆಯಾದ್ದರಿಂದ ಆಹಾರದ ಅವಶ್ಯಕತೆಯೂ ಕಡಿಮೆ. ಸುಮಾರು ವಾರಕ್ಕೊಮ್ಮೆ ಆಹಾರದ ಬೇಟೆ. ಬೇಟೆಯಾಡುವಾಗ ಅದನ್ನು ಕಚ್ಚಿ ಹರಿಯುವಾಗ ಒಂದಕ್ಕೊಂದು ಸಹಾಯ ಮಾಡುವಷ್ಟು ಬುದ್ಧಿಯಿದೆ. ಬೇಟೆಯ ಮೂಳೆ ಚಿಪ್ಪು ಮುಂತಾದ ಗಟ್ಟಿವಸ್ತುಗಳನ್ನೂ ಜೀರ್ಣಸಿಕೊಳ್ಳುತ್ತದೆ. ಇದಕ್ಕೆ ಕಾರಣ ಅದರ ಅತಿ ಆಮ್ಲೀಯ ಜೀರ್ಣರಸಗಳು ಮತ್ತುಅದು ನುಂಗುವ ಕಲ್ಲು!!!. ಅದರ ಜಠರದಲ್ಲಿರುವ ಈ ಕಲ್ಲುಗಳು ಜೀರ್ಣಕ್ರಿಯಯಲ್ಲಷ್ಟೇ ಅಲ್ಲದೆ ದೆಹದ ಸಮತೋಲನ ಕಾಯ್ದುಕೊಳ್ಳಲೂ ಸಹಕಾರಿಯಾಗಿವೆ.
ಶೀತರಕ್ತ ಪ್ರಾಣಿಯಾದ್ದರಿಂದ ದೇಹದ ಉಷ್ಣತೆ ವಾತಾವರಣವನ್ನು ಅವಲಂಬಿಸಿದೆ. ಬೆವರಿನ ಗ್ರಂಥಿಗಳಿಲ್ಲವಾದ್ದರಿಂದ ಅಧಿಕ ಉಷ್ಣತೆಯನ್ನು ಬಾಯಿಂದ ಹೊರಹಾಕುತ್ತದೆ.
ಇನ್ನೊಂದು ಆಸಕ್ತಿದಾಯಕ ವಿಷಯವೆಂದರೆ ಇವು ತಮ್ಮ ವಾಸಸ್ಥಾನವನ್ನು ನೆನಪಿಟ್ಟುಕೊಳ್ಳಬಲ್ಲವು . ದೂರ ಒಯ್ದು ಬಿಟ್ಟರೂ ಮತ್ತೆ ಮೂಲಸ್ಥಳಕ್ಕೇ ಹಿಂದಿರುಗುತ್ತವೆ.
ಇವುಗಳ ಆಯಸ್ಸು ಸುಮರು ಎಪ್ಪತ್ತು ವರ್ಷಗಳು. ಪ್ರಾಪ್ತ ವಯಸ್ಕ ಹೆಣ್ಣು ನೀರಿನ ದಡದಲ್ಲಿ ಕಸ ಕಡ್ಡಿ ಮಣ್ಣು ಮರಳುಗಳನ್ನು ಪೇರಿಸಿ ಒಮ್ಮೆಲೆ ೪೦ ರಿಂದ ೮೦ ಮೊಟ್ಟೆಗಳನ್ನಿಡುತ್ತದೆ. ಕೊಳೆಯುವ ಕಸ ಕಡ್ಡಿಗಳ ಶಾಖಕ್ಕೆ ಮೊಟ್ಟೆಗಳೊಡೆಯುತ್ತವೆ. ಒಡೆಯುವಾಗ ತಾಯಿ ಸಹಾಯ ಮಾಡುತ್ತದೆ. ಕೆಲವು ದಿನಗಳವರೆಗೆ ಮರಿಗಳನ್ನು ರಕ್ಷಿಸುತ್ತದೆ.
ಈ ಬಲಿಷ್ಟದೇಹಿಗೆ ತೊಂದರೆ ಕೊಡುವ ವೈರಿ ಮಾನವನೇ ಹೊರತು ಬೇರಾರಿಲ್ಲ. ಜಾಕೆಟ್, ಪರ್ಸ್, ಶೂ, ಹ್ಯಾಟ್ ಮುಂತಾವುಗಳನ್ನು ಅದರ ಚರ್ಮದಿಂದ ತಯಾರಿಸಬಹುದು. ಅವುಗಳ ಮಾಂಸವನ್ನು ಕೆಲವು ದೇಶಗಳಲ್ಲಿ ಆಹಾರವಾಗಿ ಉಪಯೋಗಿಸುತ್ತಾರೆ. ಇವುಗಳ ಆಸೆಗಾಗಿ ಮಾನವ ಈ ಜೀವಿಗಳನ್ನು ಬೇಟೆಯಾಡುವುದು ನಿರಂತರವಾಗಿ ನಡೆಯುತ್ತಿದೆ.
{ಈ ಫೋಟೊಗಳನ್ನು ಚನ್ನೈಯಲ್ಲಿರುವ ಕ್ರೊಕೊಡೈಲ್ ಪಾರ್ಕನಲ್ಲಿ ತೆಗೆದದ್ದು. ಇದು ಏಷ್ಯಾದ ದೊಡ್ಡ ಮೊಸಳೆ ಸಂಶೋದನಾಕೇಂದ್ರಗಳಲ್ಲೊಂದು. ಅನೇಕ ಜಾತಿಯ ಮೊಸಳೆಗಳನ್ನು ಇಲ್ಲಿ ನೋಡಬಹುದು. ಅವರು ಕೊಡುವ ಮರಿ ಮೊಸಳೆಯನ್ನು, ಹಾವನ್ನು ಹಿಡಿದು ಸಂತಸ ಪಡಬಹುದು.}

