ಸಸ್ಯಗಳಿಗೆ ಅವುಗಳ ಕಾಂಡ , ನಮಗೆ ನಮ್ಮ ಬೆನ್ನೆಲುಬಿದ್ದಂತೆ. ಆಧಾರನೀಡುವುದರೊಂದಿಗೆ ಬೇರಿನಿಂದ ಹೀರಿದ ಪೋಷಕಾಂಶಗಳನ್ನು ಸಸ್ಯದ ಎಲ್ಲ ಭಾಗಗಳಿಗೆ ಮತ್ತು ಎಲೆಗಳಲ್ಲಿ ತಯಾರಾದ ಆಹಾರವನ್ನು ಉಳಿದೆಲ್ಲ ಭಾಗಗಳಿಗೆ ತಲುಪಿಸುವ ಕಾರ್ಯವು ಅದರದ್ದೆ. ಹೂವು ಎಲೆ ಕಾಯಿ ಹಣ್ಣುಗಳನ್ನು ಹಿಡಿದಿಡುವ ಅಂಗ ಕೂಡ. ಇಂತಿಪ್ಪ ಕಾಂಡಗಳಲ್ಲಿ ಮುಖ್ಯವಾಗಿ ಎರಡು ವಿಧಗಳಿವೆ. ದೃಡವಾದ ಕಾಂಡಗಳು(ಮರಗಳ ಕಾಂಡಗಳು) ಮತ್ತು ಮೃದು ಅಥವ ದೃಡವಲ್ಲದ ಕಾಂಡಗಳು (ಬಳ್ಳಿಗಳ ಕಾಂಡಗಳು).
ದೃಡವಾದ ಕಾಂಡಗಳನ್ನುಳ್ಳ ಸಸ್ಯಗಳು ಹೆಚ್ಚು ಎತ್ತರವಾಗಿದ್ದು ಬಲಿಷ್ಠವಾಗಿರುತ್ತವೆ. ಆದರೆ ಮೃದುವಾದ ಕಾಂಡಗಳುಳ್ಳ ಸಸ್ಯಗಳು ಹೆಸರೆ ಸೂಚಿಸುವಂತೆ ದುರ್ಬಲವಾಗಿರುವುದರಿಂದ ಆಧಾರವಿಲ್ಲದೆ ಇರಲಾರವು. ಇವು ಬೆಳೆಯಲು ಬೇರೆ ಸಸ್ಯ, ಗೋಡೆ , ಕಲ್ಲು , ನೆಲ ಮುಂತಾದ ಯವುದಾದರರೂ ಆಧಾರ ಬೇಕೇಬೇಕು.
ಮೃದುವಾದ ಕಾಂಡಗಳುಳ್ಳ ಸಸ್ಯಗಳಲ್ಲಿ ಪ್ರಮುಖವಾದವುಗಳೆಂದರೆ ಬಳ್ಳಿಗಳು. ಈ ಬಳ್ಳಿಗಳಲ್ಲಿ ಅವುಗಳ ರಚನೆಯ ಆಧಾರದ ಮೇಲೆ ಅನೇಕ ಜಾತಿಗಳಿವೆ.
ಅವುಗಳಲ್ಲಿ ತನ್ನ ಯಾವುದೇ ಭಾಗದಿಂದ ಆಧಾರಕ್ಕೆ ಸುತ್ತಿಕೊಂಡು ಬೆಳೆಯುವ ಬಳ್ಳಿಗಳನ್ನು "climbers"ಎನ್ನುತ್ತಾರೆ.
ಇಂತಹ ಬಳ್ಳಿಗಳಲ್ಲಿ ಕೆಲವು ಮುಖ್ಯವಾದ ಕಾಂಡದಿಂದಲೆ ಆಧಾರವನ್ನು ಬಳಸಿರುತ್ತವೆ. ಇನ್ನು ಕೆಲವು ಬಳ್ಳಿಗಳಲ್ಲಿ ಸಸ್ಯದ ಕೆಲವು ಎಲೆ, ಎಲೆಯ ತುದಿ, ಮೊಗ್ಗು, ಮೊದಲಾದವುಗಳು ಮಾರ್ಪಾಡಾಗಿ ಸುರಳಿ ಸುರಳಿಯಾದ ತೆಳ್ಳನೆಯ ಸ್ಪ್ರಿಂಗ್ ನಂತಹ ರಚನೆಯಾಗಿ , ಅದರ ಸಹಾಯದಿಂದ ಆಧಾರವನ್ನು ಬಳಸಿ ನಿಲ್ಲುತ್ತವೆ. ಇಂತಹ ರಚನೆಗಳನ್ನು "tendril "ಎನ್ನುತ್ತಾರೆ.
ಆಧಾರವಾಗಿರುವ ಸಸ್ಯಗಳಿಂದ ಇವು ಬೇರೇನನ್ನೂ ಪಡೆಯುವುದಿಲ್ಲವಾದ್ದರಿಂದ ಅದಕ್ಕೆ ಅಪಾಯವಾಗುವುದಿಲ್ಲ.
ಇಂತಹ ಮಾರ್ಪಾಡುಗಳಿಂದ ಸಸ್ಯಗಳಿಗೆ ಗಟ್ಟಿಯಾದ ಕಾಂಡ ಪಡೆಯಲು ವ್ಯಯಿಸಬೇಕಾಗಿದ್ದ ಶಕ್ತಿಯ ಉಳಿತಾಯವಾಗುತ್ತದಲ್ಲದೆ , ಬಿರುಗಾಳಿ , ಬಿರುಮಳೆಯಂತಹ ಅವಗಡಗಳಿಂದ ಹಾನಿಯಾಗುವುದು ತಪ್ಪುತ್ತದೆ.
ಇಂತಹ ಸಸ್ಯಗಳಿಂದ ನಾವು ಮಾನವರು ಕಲಿಯಬೇಕಾದದ್ದೆಷ್ಟಿದೆಯಲ್ಲವೆ? ಕಷ್ಟದಲ್ಲಿರುವಾಗ ಯಾರಾದರು ಬಂದು ನಮ್ಮನ್ನು ಮೆಲೆತ್ತಲಿ ಎಂದು ಬಯಸುತ್ತೆವೆ ವಿನಃ , ಸಿಕ್ಕ ಆಧಾರವನ್ನು ಹಿಡಿದು ಮೇಲೆಬರಲು ಬೇಕಾದ "ಟೆಂಡ್ರಿಲ್" ನಂತಹ ಗುಣಗಳನ್ನು ಬೆಳೆಸಿಕೊಳ್ಳುವುದಿಲ್ಲ.
