23 Nov 2009

ಬಳುಕುವ ಬಳ್ಳಿಯ ಜಾಣ್ಮೆ

ಬಳುಕುವ ಬಳ್ಳಿಯೆಂದೊಡನೆ ಶಿಲ್ಪಾ ಶೆಟ್ಟಿಯನ್ನೋ ಐಶ್ವರ್ಯ ರ‍ೈಯನ್ನೊ ಕಲ್ಪಿಸಿಕೊಳ್ಳಬೇಡಿ . ನಾನು ಹೇಳಹೊರಟಿರುವುದು ನಿಜವಾದ ಬಳ್ಳಿಗಳ ಜಾಣ್ಮೆಯ ಬಗ್ಗೆ.

ಸಸ್ಯಗಳಿಗೆ ಅವುಗಳ ಕಾಂಡ , ನಮಗೆ ನಮ್ಮ ಬೆನ್ನೆಲುಬಿದ್ದಂತೆ. ಆಧಾರನೀಡುವುದರೊಂದಿಗೆ ಬೇರಿನಿಂದ ಹೀರಿದ ಪೋಷಕಾಂಶಗಳನ್ನು ಸಸ್ಯದ ಎಲ್ಲ ಭಾಗಗಳಿಗೆ ಮತ್ತು ಎಲೆಗಳಲ್ಲಿ ತಯಾರಾದ ಆಹಾರವನ್ನು ಉಳಿದೆಲ್ಲ ಭಾಗಗಳಿಗೆ ತಲುಪಿಸುವ ಕಾರ್ಯವು ಅದರದ್ದೆ. ಹೂವು ಎಲೆ ಕಾಯಿ ಹಣ್ಣುಗಳನ್ನು ಹಿಡಿದಿಡುವ ಅಂಗ ಕೂಡ. ಇಂತಿಪ್ಪ ಕಾಂಡಗಳಲ್ಲಿ ಮುಖ್ಯವಾಗಿ ಎರಡು ವಿಧಗಳಿವೆ. ದೃಡವಾದ ಕಾಂಡಗಳು(ಮರಗಳ ಕಾಂಡಗಳು) ಮತ್ತು ಮೃದು ಅಥವ ದೃಡವಲ್ಲದ ಕಾಂಡಗಳು (ಬಳ್ಳಿಗಳ ಕಾಂಡಗಳು).

ದೃಡವಾದ ಕಾಂಡಗಳನ್ನುಳ್ಳ ಸಸ್ಯಗಳು ಹೆಚ್ಚು ಎತ್ತರವಾಗಿದ್ದು ಬಲಿಷ್ಠವಾಗಿರುತ್ತವೆ. ಆದರೆ ಮೃದುವಾದ ಕಾಂಡಗಳುಳ್ಳ ಸಸ್ಯಗಳು ಹೆಸರೆ ಸೂಚಿಸುವಂತೆ ದುರ್ಬಲವಾಗಿರುವುದರಿಂದ ಆಧಾರವಿಲ್ಲದೆ ಇರಲಾರವು. ಇವು ಬೆಳೆಯಲು ಬೇರೆ ಸಸ್ಯ, ಗೋಡೆ , ಕಲ್ಲು , ನೆಲ ಮುಂತಾದ ಯವುದಾದರರೂ ಆಧಾರ ಬೇಕೇಬೇಕು.

ಮೃದುವಾದ ಕಾಂಡಗಳುಳ್ಳ ಸಸ್ಯಗಳಲ್ಲಿ ಪ್ರಮುಖವಾದವುಗಳೆಂದರೆ ಬಳ್ಳಿಗಳು. ಈ ಬಳ್ಳಿಗಳಲ್ಲಿ ಅವುಗಳ ರಚನೆಯ ಆಧಾರದ ಮೇಲೆ ಅನೇಕ ಜಾತಿಗಳಿವೆ.

ಅವುಗಳಲ್ಲಿ ತನ್ನ ಯಾವುದೇ ಭಾಗದಿಂದ ಆಧಾರಕ್ಕೆ ಸುತ್ತಿಕೊಂಡು ಬೆಳೆಯುವ ಬಳ್ಳಿಗಳನ್ನು "climbers"ಎನ್ನುತ್ತಾರೆ.



ಇಂತಹ ಬಳ್ಳಿಗಳಲ್ಲಿ ಕೆಲವು ಮುಖ್ಯವಾದ ಕಾಂಡದಿಂದಲೆ ಆಧಾರವನ್ನು ಬಳಸಿರುತ್ತವೆ. ಇನ್ನು ಕೆಲವು ಬಳ್ಳಿಗಳಲ್ಲಿ ಸಸ್ಯದ ಕೆಲವು ಎಲೆ, ಎಲೆಯ ತುದಿ, ಮೊಗ್ಗು, ಮೊದಲಾದವುಗಳು ಮಾರ್ಪಾಡಾಗಿ ಸುರಳಿ ಸುರಳಿಯಾದ ತೆಳ್ಳನೆಯ ಸ್ಪ್ರಿಂಗ್ ನಂತಹ ರಚನೆಯಾಗಿ , ಅದರ ಸಹಾಯದಿಂದ ಆಧಾರವನ್ನು ಬಳಸಿ ನಿಲ್ಲುತ್ತವೆ. ಇಂತಹ ರಚನೆಗಳನ್ನು "tendril "ಎನ್ನುತ್ತಾರೆ.

ಈ ಟೆಂಡ್ರಿಲ್ ಗಳು ಹುಟ್ಟುವಾಗ ನೆಟ್ಟಗಿದ್ದು ನಂತರ ನಿಧಾನವಾಗಿ ಸುರಳಿಯಾಗುತ್ತವೆ. ಆಧಾರವನ್ನು ಇವು ಅದೆಷ್ಟು ಗಟ್ಟಿಯಾಗಿ ಹಿಡಿಯುತ್ತವೆಂದರೆ ಜೋರಾದ ಗಾಳಿ ಬೀಸಿದರೂ ಸಹ ಆಧಾರವಾಗಿರುವ ವಸ್ತು ಬೀಳಬಹುದೇ ಹೊರತು , ಬಳ್ಳಿ ಬೀಳುವುದಿಲ್ಲ.
ಆಧಾರವಾಗಿರುವ ಸಸ್ಯಗಳಿಂದ ಇವು ಬೇರೇನನ್ನೂ ಪಡೆಯುವುದಿಲ್ಲವಾದ್ದರಿಂದ ಅದಕ್ಕೆ ಅಪಾಯವಾಗುವುದಿಲ್ಲ.

ಇಂತಹ ಮಾರ್ಪಾಡುಗಳಿಂದ ಸಸ್ಯಗಳಿಗೆ ಗಟ್ಟಿಯಾದ ಕಾಂಡ ಪಡೆಯಲು ವ್ಯಯಿಸಬೇಕಾಗಿದ್ದ ಶಕ್ತಿಯ ಉಳಿತಾಯವಾಗುತ್ತದಲ್ಲದೆ , ಬಿರುಗಾಳಿ , ಬಿರುಮಳೆಯಂತಹ ಅವಗಡಗಳಿಂದ ಹಾನಿಯಾಗುವುದು ತಪ್ಪುತ್ತದೆ.


ಇಂತಹ ಸಸ್ಯಗಳಿಂದ ನಾವು ಮಾನವರು ಕಲಿಯಬೇಕಾದದ್ದೆಷ್ಟಿದೆಯಲ್ಲವೆ? ಕಷ್ಟದಲ್ಲಿರುವಾಗ ಯಾರಾದರು ಬಂದು ನಮ್ಮನ್ನು ಮೆಲೆತ್ತಲಿ ಎಂದು ಬಯಸುತ್ತೆವೆ ವಿನಃ , ಸಿಕ್ಕ ಆಧಾರವನ್ನು ಹಿಡಿದು ಮೇಲೆಬರಲು ಬೇಕಾದ "ಟೆಂಡ್ರಿಲ್" ನಂತಹ ಗುಣಗಳನ್ನು ಬೆಳೆಸಿಕೊಳ್ಳುವುದಿಲ್ಲ.



Posted by Picasa

10 comments:

  1. ವಿಜ್ಞಾನದ ವಿಷಯಗಳನ್ನು ಸುಲಲಿತವಾಗಿ ತಿಳಿಸುವ ನಿಮಗೆ ಧನ್ಯವಾದಗಳು. ನಿಸರ್ಗದಲ್ಲಿಯ ಬೆರಗನ್ನು ತೋರಿಸುವ ಇಂತಹ ವಿಷಯಗಳನ್ನು ಮತ್ತೆ ಮತ್ತೆ ತಿಳಿಸುತ್ತಿರಿ.

    ReplyDelete
  2. ವಿಜ್ನಾನ ಬರಹಗಳ ಅಭಿಮಾನಿಗಳಲ್ಲಿ ನಾನೂ ಒಬ್ಬಳು. ತು೦ಬಾ ಚೆನ್ನಾಗಿ ಬರೆದಿದ್ದೀಯ ಸುಮಕ್ಕ. ಅಭಿನ೦ದನೆಗಳು. ನಿಜಕ್ಕೂ ತೀರಾ ಕ್ಷುಲ್ಲಕವೆನಿಸುವ ಬೇಲಿಯ ಮೇಲಿನ ಬಳ್ಳಿಯಲ್ಲೂ ಬೆರಗುಗೊಳಿಸುವ ವಿಸ್ಮಯವನ್ನು ನೋಡಲು ಪ್ರಕೃತಿಯನ್ನು ಅರಿಯುವ , ಆರಾಧಿಸುವ , ಸದಾ ಕುತೂಹಲಕಾರಿಯಾಗಿರುವ ಮನಸ್ಸೇ ಹೊರತು ಯಾವ ಸಸ್ಯಶಾಸ್ತ್ರದ ಶಿಕ್ಷನಾಗಲೀ, ಪುಸ್ತಕವಾಗಲೀ ಅಲ್ಲ, ಅಲ್ಲವೇ?

    ಚಿ೦ತನೆಯ ಓಘ, ಭಾಷೆಯ ಮೇಲಿನ ಹಿಡಿತ ಇಷ್ಟವಾಯಿತು.

    ReplyDelete
  3. ದುರ್ಬಲರೂ -ತಮ್ಮ ಸುತ್ತಮುತ್ತ ಇರುವ ಬಲಾಡ್ಯರಿಗೆ ತೊ೦ದರೆಯಾಗದ೦ತೆ ಅವರನ್ನು ಉಪಯೋಗಿಸಿ ಬೆಳೆಯಬಹುದಾದ ಹಾದಿಯನ್ನು ನವಿರಾದ ಬಳ್ಳಿಯ ಬೆಳವಣಿಗೆಯ ವೈಜ್ಞಾನಿಕ ಲೇಖನದ ಮುಖಾ೦ತರ ಸು೦ದರವಾಗಿ ವಿವರಿಸಿದ್ದಿರಾ ಸುಮಾರವರೇ.

    ReplyDelete
  4. ಸುಮಾ ಅವರೇ,
    ತುಂಬಾ ಸುಂದರವಾಗಿ, ಸರಳವಾಗಿ ಬರಿಯುವ ನಿಮ್ಮ ಶೈಲಿ ಇಷ್ಟವಾಗುತ್ತದೆ
    ಜಟಿಲ ವಿಜ್ಞಾನವನ್ನು ಇಷ್ಟೊಂದು ಸರಳ ಮಾಡುವುದು ಅಷ್ಟೊಂದು ಸುಲಭವಲ್ಲ ಅಲ್ಲವೇ?

    ReplyDelete
  5. ಸುಮಾ...

    ಸರಳವಾಗಿ , ವಿವರವಾಗಿ ಬರೆದಿದ್ದೀರಿ...

    ಎಷ್ಟು ಚಂದವಾಗಿ ಬಳ್ಳಿಗಳು ಸ್ಪ್ರಿಂಗ್ ಥರಹ ಗಿಡದ ಕಾಂಡ ಹಿಡಿದಿದೆ...!!

    ನಾವೆಲ್ಲ ದಿನನಿತ್ಯ ನೋಡುವ ವಿಷಯವೇ ಆಗಿದ್ದರೂ..
    ಇಷ್ಟು ವಿಷಯ ಗೊತ್ತಿರಲಿಲ್ಲ...

    ಧನ್ಯವಾದಗಳು...

    ಅಭಿನಂದನೆಗಳು...

    ReplyDelete
  6. ಲೇಖನ ಚೆನ್ನಾಗಿ ಮೂಡಿದೆ. ಒಂದೇ ಜಾತಿಯ ಬಳ್ಳಿಯ ಬದಲಿಗೆ, ಹಲವು ಜಾತಿಗಳನ್ನು ಚಿತ್ರೀಕರಿಸಬಹುದಿತ್ತೇನೋ...

    ReplyDelete
  7. ಕಾಂಡದ ವಿಚಾರವನ್ನು ಇಷ್ಟು ಸರಳವಾಗಿ ಸುಲಭವಾಗಿ ಅರ್ಥವಾಗುವಂತೆ ಬರೆದಿದ್ದೀರಿ. ನನಗೆ ಇದರ ಬಗ್ಗೆ ಹೆಚ್ಚು ಗೊತ್ತಿರಲಿಲ್ಲ. ಖುಷಿಯಾಯಿತು.

    ಧನ್ಯವಾದಗಳು.

    ReplyDelete
  8. ಸುಮ, ಸಸ್ಸ್ಯಗಳ ಈ ಟೆಂಡ್ರಿಲ್ ಗಳು ಆಶ್ರಯ ಪಡೆದು ಬೆಳೆಯುವ ರೀತಿಯ ವಿವರನೆ ಚನ್ನಾಗಿ ಸರಲವಾಗಿ ವಿವರ್ರಿಸಿದ್ದೀರಿ. ಶಾರ್ಕ್ ಮೀನು ಎಂದರೆ ಹೆದರುವ ಎಲ್ಲ ಜಲಜೀವಿಗಳಂತೆ...ರೆಮೋರಾ ಮಿನು ಹೆದರುವುದಿಲ್ಲ ಇದು ಶಾರ್ಕನ ದವಡೆ ಕೆಳಭಾಗಕ್ಕೆ ಅಂಟಿಕೊಂಡು ಲಿಫ್ಟ್ ತಗೊಳ್ಳುತ್ತೆ...ಇದನ್ನು ಶಾರ್ಕ್ ಏನೂ ಮಾಡುವುದಿಲ್ಲ..!!...ನೀವು ಹೇಳಿದಂತೆ ಮಾನವರಿಗೆ ಬಹಳ ಕಲಿಯುವುದಿದೆ ಸಸ್ಯ-ಪ್ರಾಣಿಗಳಿಂದ...ತಮಗೆ ಅನ್ನವಿಟ್ಟ ಮನೆಗೆ ಕನ್ನ ಕೊರೆಯುವ ಜಾತಿ ಮಾನವನದು...

    ReplyDelete
  9. ಸುಮ ಅವರೆ,

    ಸಚಿತ್ರ ಲೇಖನ ತುಂಬಾ ಚೆನ್ನಾಗಿದೆ. ನಿಮ್ಮ ಈ ವಿಜ್ಞಾನ ಲೇಖನವನ್ನೋದುವಾಗ ತುಂಬಾ ಸಂತೋಷವಾಗುತ್ತದೆ. ನನ್ನಿಷ್ಟದ, ನಾ ಕಲಿತ ಸಸ್ಯ ಶಾಸ್ತ್ರ ಕಣ್ಮುಂದೆ ಬರುತ್ತದೆ.

    ಕೊನೆಯಲ್ಲಿ ನೀವು ಹೇಳಿದ ಅನಿಸಿಕೆಯೂ ಚೆನ್ನಾಗಿದೆ. ಆದರೆ..
    ಇನ್ನೂ ಒಂದು ವರ್ಗದ ಜನರಿರುತ್ತಾರೆ. ಸ್ವತಃ ತಾವು ಸಾಕಷ್ಟು ಬಲಾಢ್ಯರಾಗಿದ್ದರೂ, ಸ್ವಂತ ಕಾಲ ಮೇಲೆ ನಿಲ್ಲುವಷ್ಟು ಸಬಲರಾಗಿಯೂ ಇನ್ನೊಬ್ಬರ ಸಹಕಾರ, ಆಸರೆಯನ್ನು ಹಂಬಲಿಸುತ್ತಾ ಬೇರೊಬ್ಬರ ಆಶ್ರಯದಲ್ಲೇ ಹಬ್ಬಲು ಇಚ್ಛಿಸುತ್ತಾರೆ. ನಾವು ಬಂದಳಿಕೆಯಾದೇ ಮೇಲೇರುವ ಬಳ್ಳಿಯಾದರೆ ತುಂಬಾ ಹಿತ.. ಆಶ್ರಯಿಸಿದ ಮರಕ್ಕೂ, ಲತೆಗೂ ಅಲವೇ? :)

    ReplyDelete
  10. ಸುಮ, ಸಸ್ಯಶಾಸ್ತ್ರದ ವಿದ್ಯಾರ್ಥಿ ನಾನಾಗಿದ್ದೆ ಅನ್ನೋದು ನಿಮ್ಮ ಬರಹ ಓದಿದ ಮೇಲೆ ನೆನಪಿಗೆ ಬಂತು!!! ತುಂಬಾ ಚೆನ್ನಾಗಿ ಬರೆದಿದ್ದೀರ... ಫೋಟೋಗಳು 'ಜೀವಂತಿಕೆಯಿಂದ' ಕೂಡಿವೆ!
    keep the work going!

    ReplyDelete