11 Jun 2010

ಓತಿಕ್ಯಾತ

" ಅಮ್ಮ ಅದೇನು ? ಹಾವಾ ? " ಭಯಮಿಶ್ರಿತ ಧ್ವನಿಯಲ್ಲಿ ಕೇಳುತ್ತ ಹಿಂದಡಿಯಿಟ್ಟಳು ಮಗಳು. ಅಲ್ಲ , ಬಾ ನೀನೆ ಸರಿಯಾಗಿ ನೋಡುವೆಯಂತೆ ಎಂದು ಹತ್ತಿರ ಕರೆದೊಯ್ದೆ. ಹೆಜ್ಜೆಯ ಶಬ್ದಕ್ಕೆ ವೆನಿಲ್ಲ ಬಳ್ಳಿಯ ಎಲೆಯ ಮರೆಯಲ್ಲಿದ್ದ ಓತಿಕ್ಯಾತ ಹೊರಬಂದಿತು . ಅದು ಕಚ್ಚತ್ತಾ ? ಬಣ್ಣ ಬದಲಾಯಿಸುತ್ತಾ ? "....... ಅವಳ ಪ್ರಶ್ನೆಪತ್ರಿಕೆ ತಯಾರಿತ್ತು !

ಯಾರ ಗಮನವನ್ನೂ ಸೆಳೆಯದ ಈ ಬಡಪಾಯಿಗೆ ವಿಚಿತ್ರವಾದ ಹೆಸರು - ಓತಿಕ್ಯಾತ . ಮನೆಯ ಸುತ್ತಮುತ್ತಲಿನ ಕೈತೋಟ , ತೋಟ, ಗದ್ದೆಗಳ ತರಗೆಲೆಗಳ ಮಧ್ಯೆ ಹೆಚ್ಚು ಕಡಿಮೆ ಒಣ ತರಗೆಲೆಗಳ ಬಣ್ಣದ ಈ ಓತಿಕ್ಯಾತ ವಾಸಿಸುತ್ತದೆ. ಒಂದು ಕಾಲದಲ್ಲಿ ಈ ಭೂಮಿಯನ್ನಾಳಿದ್ದ ದೈತ್ಯೋರಗಗಳಾದ ಡೈನೋಸಾರಸ್ ಜಾತಿಗೇ ಈ ಓತಿಗಳೂ ಸೇರಿವೆ.




ಅತೀ ಚಿಕ್ಕ ಶಬ್ದ ಗ್ರಹಿಸಬಲ್ಲ ಒಳಕಿವಿಗಳು , ಬೇರೆ ಬೇರೆ ದಿಕ್ಕಿನಲ್ಲಿ ನೋಡಬಲ್ಲ ಸಾಮರ್ಥ್ಯದ ಎರಡು ಕಣ್ಣುಗಳು , ಇದನ್ನು ಮಕ್ಕಳು ಎಸೆಯುವ ಕಲ್ಲುಗಳು , ನಾಯಿಯ ದಾಳಿ ಮುಂತಾದ ಅಪಾಯದಿಂದ ರಕ್ಷಿಸುತ್ತವೆ . ಉದ್ದನೆಯ ಕಾಲ್ಬೆರಳುಗಳು ಮತ್ತು ಉಗುರುಗಳು ಮರ ಹತ್ತಲು ಸಹಾಯಕ .

ಸಸ್ಯ ಮತ್ತು ಅದರ ಉತ್ಪನ್ನಗಳನ್ನು ತಿನ್ನುವ ಅನೇಕ ಕೀಟಗಳು , ಹುಳುಗಳು ಇದರ ಮುಖ್ಯ ಆಹಾರ . ಆದ್ದರಿಂದ ಇದು ಮಾನವನಿಗೆ ಉಪಕಾರಿಯೆ.


ಇದೇ ಜಾತಿಗೆ ಸೇರಿದ ಗೋಸುಂಬೆಯಂತೆ ಇದೂ ಬಣ್ಣ ಬದಲಿಸುತ್ತವಂತೆ , ಆದರೆ ಗೋಸುಂಬೆಯಷ್ಟು ಸ್ಪಷ್ಟವಾಗಿ , ಶ್ರೀಘ್ರವಾಗಿ ಬಣ್ಣ ಬದಲಿಸುವ ಸಾಮರ್ಥ್ಯವಿಲ್ಲವಂತೆ.

"ಬ್ರೀಡಿಂಗ್ ಸೀಸನ್" ಬಂದಾಗ ಗಂಡಿನ ಕುತ್ತಿಗೆಯ ಭಾಗ ಕೆಂಪು ವರ್ಣಕ್ಕೆ ತಿರುಗುತ್ತದೆ . ಸಿಕ್ಸ್ ಪ್ಯಾಕ್ ಅಬ್ಸ್ ಬೆಳೆಸಿಕೊಳ್ಳಲು "ಪುಶ್ ಅಪ್ಸ್" ಮಾಡುವ ಯುವಕರಂತೆ ಇದೂ ತನ್ನ ಮುಂಗಾಲುಗಳಿಂದ ಪುಶ್ ಅಪ್ ಮಾಡುತ್ತಾ ತನ್ನ ಕತ್ತಿನ ಸುಂದರವಾದ ಬಣ್ಣ ತೋರುತ್ತಾ ಹೆಣ್ಣನ್ನು ಆಕರ್ಷಿಸುತ್ತದಂತೆ . ಅದಲ್ಲದೆ ಆ ಸಮಯದಲ್ಲಿ ಬೇರೆ ಗಂಡುಗಳು ಅಲ್ಲಿ ಬಂದರೆ ಫೈಟಿಂಗ್ ಪ್ರಾರಂಭಿಸುತ್ತದಂತೆ.


ಇದೇ ಜಾತಿಗೆ ಸೇರಿದ ಅನೇಕ ವಿಧದ ಓತಿಗಳನ್ನು ಕೆಲವು ದೇಶಗಳಲ್ಲಿ ನಮ್ಮಲ್ಲಿ ನಾಯಿ ಬೆಕ್ಕು ಸಾಕಿದಂತೆ ಪ್ರೀತಿಯಿಂದ ಸಾಕುತ್ತಾರಂತೆ !!
ಅದರ ಜೀವನ ವಿಧಾನದ ಬಗ್ಗೆ ಓದಿದಾಗ - ನಮ್ಮ ಸುತ್ತಮುತ್ತಲೂ ಇರುವ ಇಂತಹ ಎಷ್ಟೋ ಜೀವಿಗಳ ಜೀವನ ಹೇಗಿರುತ್ತದೆಂಬುದನ್ನು ನಾವು ಗಮನಿಸಿಯೇ ಇರುವುದಿಲ್ಲವಲ್ಲ ಎನ್ನಿಸಿದ್ದು ನಿಜ .











14 comments:

  1. ಇತ್ತೀಚಿಗೆ ಈ ಓತಿಕ್ಯಾತಗಳನ್ನು ನೋಡಿಲ್ಲ.ಶಾಲೆಯಲ್ಲಿದ್ದಾಗ ನೋಡಿದ್ದು.ಸಾಬರ ಹುಡುಗರಿಗೆ ಅವುಗಳನ್ನು ಕಂಡು ಏನು ದ್ವೆಶವಿತ್ತೋ!ಬೇಡಕಣ್ರೋ ಅಂದ್ರೂ ಕೇಳದೆ
    ಅಟ್ಟಿಸಿಕೊಂಡು ಹೋಗಿ ಕಲ್ಲು ಹೊಡೆಯುತ್ತಿದ್ದರು.ಮಾಹಿತಿಗೆ ಧನ್ಯವಾದಗಳು.

    ReplyDelete
  2. ನಾವು ಚಿಕ್ಕವರಿದ್ದಾಗ ಬೇಲಿ ಮೇಲೆ ಕುಳಿತ ಓತಿಕ್ಯಾತಕ್ಕೆ ಕಲ್ಲು ಹೊಡೆಯದೆ ಬರುತ್ತಿರಲಿಲ್ಲ! ಈಗ ಒತಿಕ್ಯಾತಗಳೂ ತುಂಬಾ ಅಪರೂಪವಾಗಿವೆ ಅನ್ನಿಸುತ್ತೆ. ಅಪರೂಪದ ಮಾಹಿತಿ.
    ಧನ್ಯವಾದಗಳು.

    ReplyDelete
  3. ಓತಿಕಾಟ ಎಂದು ನಾವು ಕರೆಯುವ ಈ ಜೀವಿಗಳು ಇತ್ತೀಚೆಗೆ ಕಣ್ಣಿಗೇ ಬೀಳುತ್ತಿಲ್ಲ. ಒಳ್ಳೆಯ ಮಾಹಿತಿ ಹಾಗು ಚಿತ್ರ ನೀಡಿದ್ದೀರಿ. ಧನ್ಯವಾದಗಳು.

    ReplyDelete
  4. ಕೃಷ್ಣಮೂರ್ತಿ ಸರ್ ಹೇಳಿದ ಹಾಗೆ ಕೆಲವರು ಅದನ್ನು ಹಿಡಿದು ಅದಕ್ಕೆ ಬೀಡಿ ಸೇದಿಸುವುದ ನೋಡಿದ್ದೆ. ತೇಜಸ್ವಿ ಪ್ರಕೃತಿ ಬಗ್ಗೆ ಬರೆದ ಹಾಗೆ ನಮ್ಮಲ್ಲಿ ಈಗ ಬರಹಗಳು ಕಡಿಮೆ... ಉತ್ತಮ ಪ್ರಯತ್ನ

    ReplyDelete
  5. ನನ್ನೂರಲ್ಲಿ ಇದು ತುಂಬ ಇದೆ. ನೀವೆಂದಂತೆ ಇದೊಂದು ರೀತಿ typical ಜೀವಿ. ಚಿತ್ರಗಳು ಹಾಗೂ ಮಾಹಿತಿಗೆ ಧನ್ಯವಾದಗಳು.

    ReplyDelete
  6. ಓತಿಕ್ಯಾತದ ಬಗ್ಗೆ ಚಿತ್ರ ಸಹಿತ ಒಂದು ಅನುಭವ. ಚೆನ್ನಾಗಿ ಬರೆದಿದ್ದೀರಿ. ಚಿತ್ರಗಳೂ ಚೆನ್ನಾಗಿವೆ. ನನಗಿನ್ನು ಓತಿಕ್ಯಾತ ಫೋಟೊ ತೆಗೆಯಲಾಗಿಲ್ಲ..ಮುಂದೆ ಪ್ರಯತ್ನಿಸಬೇಕು.

    ReplyDelete
  7. ತುಂಬಾ ಚೆನ್ನಾಗಿ ಮಾಹಿತಿ ನೀಡಿದ್ದೀರಿ ಸುಮ, ಚಿತ್ರಗಳೂ ವಿವರಣೆ ತಕ್ಕಂತೆ ತೆಗೆದಿದ್ದೀರಿ ಧನ್ಯವಾದಗಳು

    ReplyDelete
  8. thanks for the info. I like otikyata . muddagiratte.

    ReplyDelete
  9. ಸುಮಾ, ವಿಜ್ಜಾನಿಗಳಲ್ಲಿ ಓತಿಕ್ಯಾತಗಳ ಮತ್ತು ಅವುಗಳ ಪೂರ್ವಜರಾದ ಕಪ್ಪೆ (ದ್ವಿಚರಗಳು, amphibian) ನಡುವಿನ ಸಂಬಂಧಗಳ ಬಗ್ಗೆ ಮತ್ತು ಕಪ್ಪೆಗಳು ಓತಿಕ್ಯಾತಗಳ ಮಧ್ಯೆ ಜೀವವಿಕಾಸ ಸರಣಿಯ ಕೊಂಡಿ ಅಭಾವವಿದ್ದು ತರ್ಕಗಳಲ್ಲಿ ಒಮ್ಮತವಿರಲಿಲ್ಲ. ಕೆಲವು ಆಸಕ್ತರು 1995 ರಲ್ಲಿ ಕಂಡುಕೊಂಡ ಪಳಯುಳಿಕೆಯೊಂದರ ಕಾರಣ ಮತ್ತು ಇತ್ತೀಚಿನ ಅದರ ಪೂರ್ಣ ಮಾಹಿತಿಯ ಪ್ರಕಟಣೆ ಕಾರಣ ..ಕಪ್ಪೆಗಳನ್ನು ಓತಿಕ್ಯಾತಗಳೊಂದಿಗೆ ಜೋಡಿಸುವ ಪ್ರಮುಖ ಕೊಂಡಿ ಸಿಕ್ಕಂತಾಗಿದೆ. ಅದೇ..ಜೆರೋಬೆಟ್ರಾಕಸ್ (Gerobatrachus)..ಇದರ ಕೆಲವು ದೇಹ ಲಕ್ಷಣಗಳು ಕಪ್ಪೆಗೆ ಹೋಲಿಕೆಯಾದರೆ ಮತ್ತೆ ಕೆಲವು ಇಂದಿನ ಓತಿಕ್ಯಾತಗಳಿಗೆ ಹೋಲಿಕೆಯಾಗುತ್ತವೆ. ಈ ಮಾಹಿತಿ ನಂತರ ಕಪ್ಪೆಗಳಿಂದ ನೆಲದಮೇಲೆ ಓಡಾಡುವ ಓತಿಕ್ಯಾತಗಳು ಉತ್ಭವವಾಗಿ 240 -275 ದಶಲಕ್ಷ ವರ್ಷಗಳು ಸಂದಿವೆ ಎನ್ನುವ ಮಾತು ಈಗ ಧೃಢವಾಗಿದೆ.......
    ಓಹ್...ನಿಮ್ಮ ಉತ್ತಮ ಮಾಹಿತಿ ಮತ್ತು ಚಿತ್ರಗಳ ಓತಿಕ್ಯಾತಗಳ ಲೇಖನ ಕಂಡು ..ನನ್ನ ..ಮನಸ್ಸು ಆ ಕಡೆ ಓಡಿತು....

    ReplyDelete
  10. ಸುಮಾಜೀ, ಸರಳ ಮಾಹಿತಿಯೊಂದಿಗೆ ಓತಿಕ್ಯಾತನ ಬಗ್ಗೆ ತಿಳಿಸಿದ್ದೀರಿ. ತೋಟಗಳಲ್ಲಿ, ಕಲ್ಲುಬಂಡೆಗಳಲ್ಲಿ ಎಳೆಬಿಸಿಲಲ್ಲಿ ಕಾಣಸಿಗುತ್ತಿದ್ದ ಇವುಗಳ ಸಂಖ್ಯೆ ಇತ್ತೀಚೆಗೆ ಕ್ಷೀಣಿಸುತ್ತಿವೆ.

    ಧನ್ಯವಾದಗಳು.

    ReplyDelete
  11. @ಜಲನಯನ,
    ಓತಿಕ್ಯಾತ Reptilia ತರಗತಿಗೆ ಸೇರಿದ ಜೀವಿ, ಹಾಗೂ ಕಪ್ಪೆ Amphibia. ಅದು ಹೇಗೆ ಕಪ್ಪೆಯಿಂದ ಓತಿಕ್ಯಾತ ವಿಕಾಸವಾಯಿತು?

    ವಿಜ್ಞಾನಿಗಳು ಕಪ್ಪೆಗಳಿಗೂ, ಹಾವುರಾಣಿಗೂ (Salamanders) ಒಂದೇ ಪೂರ್ವಜರು (Gerobatrachus)ಎಂದು ಗುರುತಿಸುತ್ತಿರುವುದು; ಓತಿಕ್ಯಾತಕ್ಕೂ, ಕಪ್ಪೆಗೂ ಅಲ್ಲ! ದಯವಿಟ್ಟು ಸ್ಪಷ್ಟಪಡಿಸಿ...

    @ಸುಮ,
    ಮಾಹಿತಿಯುಕ್ತ ಲೇಖನ, ಧನ್ಯವಾದ.

    ReplyDelete
  12. ಸರಳ ಮಾಹಿತಿ ಸು೦ದರವಾಗಿ ಮೂಡಿದೆ.

    ReplyDelete
  13. ಪಾಲವ್ರೇ..ನಿಮ್ಮ ಮಾತು ನಿಜ...ಹಾವುರಾಣಿಗೂ ಜೆರೋಬಟ್ರಾಕಸ್ ಗೂ ಬಹಳ ನಿಕಟ .ನಾನು ಹೇಳಿದ್ದು ಕಪ್ಪೆಯ ಮತ್ತು ಜೆರೋಬೆಟ್ರಾಕಸ್ ಮಧ್ಯದ ಕೊಂಡಿಯ ಬಗ್ಗೆ....ಇಲ್ಲೇ ಸ್ವಲ್ಪ ಮಟ್ಟಿಗೆ ಕನ್ಫ್ಯೂಶನ್ ಇದ್ದದ್ದು...ಎನಿಸುತ್ತೆ... ಇಲ್ಲಿ ಸ್ಥೂಲಾರ್ಥದಲ್ಲಿ ಪೂರ್ವಜರು ಎಂದು ಹೇಳಬೇಕಾದರೆ ಜೀವಸರಣಿಯಲ್ಲಿ ಕಪ್ಪೆ (ಉಭಯ ಜೀವಿ) -ಜೆರೋಬೆಟ್ರಾಕಸ್-ಸಲಮಾಂಡರ್-ಹೀಗೆ ಮುಂದುವರೆಯುತ್ತೆ ...Amphibia ಜೀವವಿಕಾಸಗೊಂಡ Reptilia ಇದನ್ನು ಒಪ್ಪುತ್ತೀರಲ್ಲಾ...?

    ReplyDelete