22 Nov 2010

ಮಲೆನಾಡಿನ ಮಳೇಗಾಲದ ಅತಿಥಿ - ಹಿಸಕನ ಹುಳ.



ಇಶ್ಶಿಶ್ಶಿ....ತೂಊಊ.... ಇದೊಂದು ಕೊಳಕು ... ... ಇನ್ನು ಸೋಪು ಹಾಕಿ ಕೈ ತೊಳೆದ್ರೂ ಲೋಳೆ ಹೋಗಲ್ಲ ....ಛಿ.... ಬೀನ್ಸ್ ಬಳ್ಳಿಯ ಬುಡದಲ್ಲಿದ್ದ ಅಮ್ಮ ಕೈಯನ್ನು ಅಸಹ್ಯದಿಂದ ನೋಡಿಕೊಳ್ಳುತ್ತಾ ಬಚ್ಚಲು ಮನೆಗೆ ನಡೆದರು . ತಕ್ಷಣ ಅಲ್ಲೇ ಅಂಗಳದಲ್ಲಿ ಆಡುತ್ತಿದ್ದ ಮಕ್ಕಳ ಸೈನ್ಯದ ಕಿವಿ ನೆಟ್ಟಗಾಯಿತು , ಎಲ್ಲ ಅವರೆ ಬಳ್ಳಿಯ ಬಳಿ ಓಡಿದರು. ಅವರಲ್ಲೇ ಚೂಟಿಯಾದ ಹುಡುಗನೊಬ್ಬ ತಕ್ಷಣ ಅಡುಗೆಮನೆಗೋಡಿ ಒಂದು ಹಿಡಿ ಉಪ್ಪು ತೆಗೆದುಕೊಂಡು ಬಂ . ಬೀನ್ಸ್ ಎಲೆಯ ಹಿಂದಿದ್ದ ಹಿಸ್ಕನಹುಳದ ಆಯಷ್ಯ ಇನ್ನೇನು ತೀರೇ ಹೋಗುತ್ತೆಂದು ಕ್ಯಾಮರ ಹಿಡಿದು ನಾನು ಹೊರಗೋಡಿದೆ..
ಮಳೆಗಾಲದಲ್ಲಿ ಮಲೆನಾಡಿನಲ್ಲಿ ಕಂಡುಬರುವ ವಿಶಿಷ್ಟ ಜೀವಿಗಳಲ್ಲಿ "ಹಿಸ್ಕು " ಎಂಬ ಈ ವಿಚಿತ್ರ ಮೃದ್ವಂಗಿಯೂ ಒಂದು . ಮೈಯೆಲ್ಲ ಲೋಳೆ ಲೋಳೇ ...... ಮೆತ್ತಗಿನ ತಣ್ಣನೆಯ ಮೈ .... ತುಂಬ ನಿಧಾನವಾದ ನಡಿಗೆ ...... ನಡೆದ ಜಾಗವನ್ನೆಲ್ಲ ಆವರಿಸುವ ಅದರ ಲೋಳೆಯಿಂದಾಗಿ ಅನೇಕರಿಗೆ ತುಂಬ ರೇಜಿಗೆ ಹುಟ್ಟಿಸುವ ಜೀವಿಗಳು ಒಂದು ಜಾತಿಯ " ಸ್ಲಗ್"ಗಳು.

ಮೃದ್ವಂಗಿಗಳ ಮುಖ್ಯ ಲಕ್ಷಣವಾದ ದೇಹದ ಹೊರಕವಚ ಅಥವಾ ಚಿಪ್ಪು ಈ ಜಾತಿಯ ಜೀವಿಗಳಿಗಿರುವುದಿಲ್ಲ ಅಥವಾ ಕೆಲವಕ್ಕೆ ಇದ್ದರೂ ತುಂಬ ಚಿಕ್ಕದಾಗಿದ್ದು ದೇಹವನ್ನು ರಕ್ಷಿಸಲಾರವು. ತುಂಬ ಮೃದು ದೇಹ . ಹೆಚ್ಚಾಗಿ ನೀರಿನಿಂದ ರಚಿಲ್ಪಟ್ಟಿದೆ . ಬಿಸಿಲಿಗೆ ದೇಹ ನಿರ್ಜಲೀಕರಣಗೊಳ್ಳುವ ಅಪಾಯವಿರುವುದರಿಂದ ಈ ಸ್ಲಗ್ ಹೆಚ್ಚಾಗಿ ತಂಪಾದ ವಾತಾವರಣವಿರುವ ಜಾಗದಲ್ಲಿ , ಮಳೆಗಾಲದಲ್ಲಿ ಕಂಡುಬರುತ್ತವೆ. ಕೆಲವು ರಾತ್ರಿ ವೇಳೆ ಮಾತ್ರ ಚಟುವಟಿಕೆಯಿಂದಿರುತ್ತವೆ.

ದೇಹದಲ್ಲಿ ತಲೆ , ಮ್ಯಾಂಟಲ್ , ಬಾಲ , ಮಸ್ಕುಲಾರ್ ಪಾದಗಳಿವೆ. ಬಲಬಾಗದಲ್ಲಿ ಉಸಿರಾಟಕ್ಕಾಗಿ ಒಂದು ಚಿಕ್ಕ ರಂದ್ರವಿದೆ.
ದೇಹದ ಮುಂಭಾಗದಲ್ಲಿ ಎರಡು ಜೊತೆ ಬೇಕಾದಾಗ ಹೊರಚಾಚಬಲ್ಲ ಸ್ಪರ್ಶಾಂಗಗಳಿವೆ . ಅದರಲ್ಲಿ ಮೇಲಿರುವ ಸ್ಪರ್ಶಾಂಗಗಳು
ಕಣ್ಣಿನಂತೆ ಮತ್ತು ಕೆಳಭಾಗದ ಸ್ಪರ್ಶಾಂಗ ವಾಸನಾಗ್ರಾಹಿ ಕೆಲಸ ಮಾಡುತ್ತವೆ.
ಕೆಳಭಾಗದಲ್ಲಿ ಪುಟ್ಟ ಬಾಯಿ , ಬಾಯಲ್ಲಿ ಆಹಾರವನ್ನು ಕತ್ತರಿಸಲು ಹಲ್ಲುಗಳಿವೆ.

ನಡೆಯುವಾಗ ತೆಳುವಾದ ಲೋಳೆದ್ರವವನ್ನು ( ಮ್ಯೂಕಸ್ ) ಪಾದಭಾಗದಿಂದ ಸ್ರವಿಸುತ್ತದೆ. ಈ ಲೋಳೆದ್ರವ ಅದರ ಮೃದುವಾದ ಪಾದಗಳನ್ನು ಗಟ್ಟಿ ಮೇಲ್ಮೈಯಿಂದ ರಕ್ಷಿಸುತ್ತದೆ . ಮತ್ತು ಅದರಲ್ಲಿರುವ ಫೈಬರ್ ಅಂಶ ಗೋಡೆ ,ಮಾಡು ಮೊದಲಾದ ಮೇಲ್ಮೈಗಳಲ್ಲೂ ಸಂಚರಿಸಲು ಸಹಾಯವಾಗುತ್ತದೆ.
ಇದಲ್ಲದೆ ಗಟ್ಟಿಯಾದ ಲೋಳೆದ್ರವವೊಂದು ಸಂಪೂರ್ಣ ದೇಹವನ್ನು ರಕ್ಷಿಸುತ್ತದೆ . ಅದರ ಕೆಟ್ಟ ರುಚಿ ಅದನ್ನು ವೈರಿಗಳಿಂದ ದೂರವಿಡುತ್ತದೆ. ಆ ದ್ರವದ ಕೆಟ್ಟ ರುಚಿಯನ್ನು ಸಹಿಸಲಾಗದೆ ಅನೇಕ ಮಾಂಸಾಹಾರಿ ಪ್ರಾಣಿಗಳು ಇವನ್ನು ತಿನ್ನಲು ಹೋಗುವುದಿಲ್ಲ.
ಜೊತೆಗೆ ಇದು ಹರಿದಾಗ ಆ ದಾರಿಯಲ್ಲಿ ಉಳಿಯುವ ಲೋಳೆದ್ರವ ಬೇರೆ ಸ್ಲಗ್ ಗಳಿಗೆ ಲೈಂಗಿಕ ಸಂಗಾತಿ ಹುಡುಕಲು ಸಹಾಯವಾಗುತ್ತದೆ.

ಮುಖ್ಯವಾಗಿ ಗಿಡಗಳ ಎಲೆಗಳು , ಚಿಗುರು , ಸತ್ತ ಎಲೆಗಳು , ಶಿಲೀಂದ್ರಗಳು ಸ್ಲಗ್ ಗಳ ಆಹಾರ . ಎರೆಹುಳ , ತಮ್ಮದೇ ಜಾತಿಯ ಜೀವಿಗಳು ಮುಂತಾದವನ್ನು ತಿನ್ನುವ ಮಾಂಸಾಹಾರಿ ಸ್ಲಗ್ ಗಳೂ ಇವೆ.

ಲೈಂಗಿಕವಾಗಿ ಇವು ಹರ್ಮೊಫ್ರೊಡೈಟ್ . ಅಂದರೆ ಗಂಡು ಹಾಗೂ ಹೆಣ್ಣು ಜನನಾಂಗಗಳೆರಡೂ ಒಂದೇ ದೇಹದಲ್ಲಿರುವಂತಹ ಜೀವಿ. ತಂಪಾದ ಜಾಗದಲ್ಲಿ ಮೊಟ್ಟೆಗಳನ್ನಿಡುತ್ತದೆ.

ಕೆಲವು ಜಾತಿಯ ಸ್ಲಗ್ ಗಳು ಆಹಾರ ಬೆಳೆ ಗಿಡಗಳನ್ನು ತಿನ್ನುವುದರಿಂದ ಸ್ವಲ್ಪ ಅಪಾಯಕಾರಿಯಾದರೂ ಹೆಚ್ಚಿನವು ನಿರುಪದ್ರವಿಗಳು . ಒಣ ಎಲೆಗಳು ಶಿಲೀಂದ್ರಗಳನ್ನು ತಿಂದು ಪರಿಸರದ ಸಮತೋಲನ ಕಾಪಾಡುವುದರಿಂದ ಒಂದುರೀತಿಯಲ್ಲಿ ಮಾನವನಿಗೆ ಉಪಕಾರಿಯೆಂದೇ ಹೇಳಬಹುದು.

ತಂಪಾದ ವಾತಾವರಣದಲ್ಲಿ ಮಾತ್ರ ಚಟುವಟಿಕೆಯಿಂದ ಇರಬಲ್ಲವಾದ್ದರಿಂದ ಮಳೆಗಾಲ ಮುಗಿದು ಬೇಸಗೆ ಪ್ರಾರಂಭವಾಗುತ್ತಿದ್ದಂತೆ ನೀರಿನ ಪಸೆ ಇರುವ ಜಾಗಗಳಲ್ಲಿ ದೀರ್ಘನಿದ್ರೆಗೆ ಜಾರುತ್ತವೆ ಅಥವಾ ಸಾಯುತ್ತವೆ. ದೇಹವು ಹೆಚ್ಚು ನೀರಿನಿಂದ ಆವೃತವಾಗಿದೆ . ಆದ್ದರಿಂದ ಉಪ್ಪು ಅದರ ಮೇಲೆ ಹಾಕಿದರೆ ನೀರೆಲ್ಲ ಹೊರಬಂದು ದೇಹವೇ ಕರಗಿಹೋಗುತ್ತದೆ .
ಮಕ್ಕಳು ಕುತೂಹಲಕ್ಕೆಂದೋ ಅಥವಾ ಇದರ ಅಸಹ್ಯ ಲೋಳೆಯನ್ನು ಸಹಿಸದೆಯೋ ಇದರ ಮೇಲೆ ಉಪ್ಪು ಹಾಕಿ ಸಾಯಿಸಿಬಿಡುತ್ತಾರೆ . ಅನೇಕ ಸ್ಲಗ್ ಗಳು ಹೀಗೆ ಬಲಿಯಾಗುತ್ತಿರುವುದು ಮಾತ್ರ ವಿಷಾದದ ಸಂಗತಿ.


ಅಂದಹಾಗೆ ಮಲೆನಾಡಿನಲ್ಲಿ ಕಂಡುಬರುವ ಈ ಫೋಟೊದಲ್ಲಿರುವ ಹಿಸಕುಹುಳ ಜೀವಶಾಸ್ತ್ರೀಯವಾಗಿ ಗ್ಯಸ್ಟ್ರೊಪೊಡಾದ ಸ್ಲಗ್ ಜಾತಿಗೆ ಸೇರಿದೆ. ಆದರೆ ಇದರ ಸ್ಪೀಶೀಸ್ ನೇಮ್ ನನಗೆ ತಿಳಿದಿಲ್ಲ. ತಿಳಿದವರು ದಯವಿಟ್ಟು ತಿಳಿಸಿ , ಹಾಗೆ ಕನ್ನಡದಲ್ಲೂ ಬೇರೆ ಹೆಸರು ತಿಳಿದಿದ್ದರೆ ಹೇಳಿ.

16 comments:

  1. 'ಶಿಲೀಂದ್ರ' anno shabda odade esht dina aagitteno.. thanks! :-)

    ReplyDelete
  2. This comment has been removed by the author.

    ReplyDelete
  3. ಸುಮ,
    ಹಿಸುಕಿನ ಹುಳದ ನೆನಪಷ್ಟೆ..ನೋಡದೇ ತು೦ಬಾ ದಿನಗಳಾದವು.

    ಹಿಸುಕಿನ ಹುಳದ ವೈಜ್ನಾನಿಕ ಹೆಸರು helix aspersa.
    Genus 'helix,'
    species is 'aspersa.'

    ReplyDelete
  4. ಲತಕ್ಕ Helix aspersa ಅನ್ನೋದು ಬಸವನಹುಳುವಿನ ವೈಜ್ಞಾನಿಕ ಹೆಸರಿರಬೇಕು . ಅದು ಒಂದು snail.ಅದರ ಬೆನ್ನ ಮೇಲೆ ಚಿಪ್ಪೊಂದು ಇರುತ್ತದೆ . ಅಪಾಯ ಎದುರಾದರೆ ಅದು ಸಂಪೂರ್ಣ ದೇಹವನ್ನು ಚಿಪ್ಪಿನೊಳಗೆ ಎಳೆದುಕೊಳ್ಳಬಲ್ಲದು. ಆದರೆ ಹಿಸಕುಹುಳದ ಬೆನ್ನ ಮೇಲೆ ಆ ಥರಹದ ಚಿಪ್ಪು ಕಾಣಿಸಲ್ಲವಾದ್ದರಿಂದ ಅದು ಬಹುಶಃ slug. ಏಕೆಂದರೆ slug ಬೆನ್ನ ಮೇಲಿನ ಚಿಪ್ಪು ಇರುವುದಿಲ್ಲ .

    ReplyDelete
  5. ಹೆರ್ಮೋಫ್ರೊಡೈಟು ಜೀವಿಯಲ್ಲಿ ಎರಡೂ ಲಿಂಗಗಳು ಇರುವದರಿಂದ ಇದು ತನ್ನಷ್ಟಕ್ಕೇ ಸಂತಾನೋತ್ಪತ್ತಿಯನ್ನು ಮಾಡುವದೆ?

    ReplyDelete
  6. ಸುನಾಥ್ ಕಾಕ ಹರ್ಮೊಪ್ರೊಡೈಟ್ ಜೀವಿಗಳಲ್ಲಿ ಎರಡೂ ಲಿಂಗಗಳಿದ್ದರೂ ಸ್ವಯಂ ಸಂತಾನೋತ್ಪತ್ತಿ ಮಾಡಿಕೊಳ್ಳುವ ಜೀವಿಗಳು ಕಡಿಮೆ. ಹೆಚ್ಚಾಗಿ ಎರಡು ಜೀವಿಗಳು ಏಕಕಾಲದಲ್ಲಿ sperm exchange ಮಾಡಿಕೊಳ್ಳುತ್ತವೆ.
    ಈ ಸ್ಲಗ್ ಗಳಲ್ಲಿ ಹಾಗೆ ನಡೆದ ನಂತರ ಬೇರೆಯಾಗುವಾಗ ಹೆಣ್ಣು ಜನನಾಂಗದಲ್ಲೇ ಸಿಕ್ಕಿಹಾಕಿಕೊಂಡುಬಿಡುವ ಗಂಡು ಜನನಾಂಗವನ್ನು ಕಳಚಿಕೊಂಡು ಬಿಡುವ ಸಾಮರ್ಥ್ಯವಿದೆಯಂತೆ . ನಂತರ ಗಂಡುಜನನಾಂಗವನ್ನು ಕಳೇದುಕೊಂಡ ಸ್ಲಗ್ ಕೇವಲ ಹೆಣ್ಣೀನಂಟೆ ಬದುಕಬಲ್ಲದಂತೆ .

    ReplyDelete
  7. ಈ ಹುಳುವನ್ನು ನಾನು ಈಗಷ್ಟೇ ನೋಡಿದ್ದು ಅದ್ದರಿಂದ ನನಗೆ ಇದರ ಬಗ್ಗೆ ಹೆಚ್ಹಿನ ಮಾಹಿತಿಗಳಿಲ್ಲ . ಪರಿಚಯಿಸಿದ್ದಕ್ಕೆ ಧನ್ಯವಾದಗಳು

    ReplyDelete
  8. if its a land slug it belongs to the same family, class and genus/species Arion... However it is said that, all slugs are descended from snails that gradually lost or reduced their shells over time...

    ಕ್ಷಮೆ ಇರಲಿ,ನನಗೆ ಕನ್ನಡದಲ್ಲಿ ವಿವರಿಸಲು ಬರುವುದಿಲ್ಲ :(

    ReplyDelete
  9. Thank you Manasa . Yes it is a land snail. It may belong to the Genus Limex or Arion . Tail portion is rounded in Arion , but it is pointed in Limex. ಈ ಹಿಸ್ಕ್ ಬಾಲ ಹೇಗಿದೆಯಿಂದು ಇನ್ನಷ್ಟು ಹತ್ತಿರದಿಂದ ನೋಡಿದರೆ ಯಾವ ಜೀನಸ್ ಎಂದು ತಿಳಿಯುತ್ತದೆ.

    ReplyDelete
  10. ಕಳೆದ ವಾರ ನಾನು ಸಿರಸಿಗೆ ಹೋಗಿದ್ದೆ. ಅಲ್ಲಿ ನನಗೆ ಇವು ಕಾಣಲಿಲ್ಲ. ಅವು ಮಳೆಗಾಲದಲ್ಲಿ ಮಾತ್ರ ಕಾಣುತ್ತವೇನೋ..ಚಿತ್ರಸಹಿತ ಮಾಹಿತಿಗೆ ಧನ್ಯವಾದಗಳು.

    ReplyDelete
  11. ಸುಮ ಆವರೇ,

    ಹಿಸಕನ ಹುಳು ಬಗ್ಗೆ ಮಾಹಿತಿಗೆ ವಂದನೆಗಳು.
    ಚಿಪ್ಪಿದ್ದ ಇದೇ ತರದ ಹುಳುಗಳು ನಮ್ಮ ಮನೆಯ ಲಿಲ್ಲೀ ಹೂವುಗಿಡ, ಟ್ಯೂಲಿಪ್ ಗಿಡ ತಿಂದು ಹಾಕಿದ್ದವು.

    ReplyDelete
  12. ಈಗ ಎಲ್ಲ ಕಡೆ ಇದೇ ಹುಳಗಳು ಕಾಣುತ್ತಿವೆ. ರಸ್ತೆಯ ಮೇಲೆಲ್ಲ ಅವೇ

    ReplyDelete
  13. ಹಿಸಕನ ಹುಳು ಹಿ೦ದೆ ನೋಡಿದ್ದರೂ ಹೆಸರು ಕೇಳಿದ್ದು ಇದೇ ಮೊದಲು. ಉತ್ತಮ ಚಿತ್ರ-ಮಾಹಿತಿ ಗೆ ಧನ್ಯವಾದಗಳು ಸುಮಾ ಅವರೆ.


    ಅನ೦ತ್

    ReplyDelete
  14. ಸುಮ ಒಳ್ಲೆಯ ಮಾಹಿತಿ...ಕೆಲವು ವಿಷಯಗಳ ಸೂಕ್ಷ್ಮವಿವರ ತಿಳಿಸಿದ್ದಿರಿ...ಲಿಮಾಕ್ಸ್ ಮ್ಯಾಕ್ಸಿಮಸ್, ನಮ್ಮಲ್ಲಿ ಸಾಮಾನ್ಯವಾಗಿ ಕಾಣೋ ಸ್ಲಗ್ ಪ್ರಬೇಧ, ಆರಿಯನ್ ಪ್ರಜಾತಿ ಅಥವಾ ಜೀನಸ್ನಲ್ಲಿ ಕಪ್ಪು ಸ್ಲಗ್ಗಳು ಪ್ರಮುಖ..ಹೌದು ಇವು ಜಲಮೂಲದಿಂದ ನೆಲಮೂಲಕ್ಕೆ ವರ್ಗವಾದ ಕಾರಣ ಉಳಿದ ಕವಚಧಾರಿ ಮೃದ್ವಂಗಿಗಳಂತೆ ಉಸಿರಾಡುವುದು ಕಿವಿರಿನಮೂಲಕವಲ್ಲ ಶ್ವಾಸಕೋಶದ ಮೂಲಕ.....
    ಸುನಾಥಣ್ಣ ಉಭಯಲಿಂಗಿಗಳಲ್ಲಿ ಎರಡೂ ಲಿಂಗ ತಮ್ಮಲ್ಲೇ ಇದ್ದರೂ ಆಂತರಿಕ ಫಲಗೊಳ್ಳುವಿಕೆ ವಿಶೇಷ ಪರಿಸ್ಥಿತಿಗಳಿಗೆ ಸೀಮಿತವಿರುತ್ತದೆ..ಅದೇ ವಿಕಸನ ಸರಣಿಯ ಮೂಲದ ಕೆಲವು(ಕೆಳ ಹಂತಗಳಲ್ಲಿ) ಜೀವಿಗಳಲ್ಲಿ ಸಾಮಾನ್ಯವಾಗಿರುತ್ತದೆ....ಇದು ಬಹುಶಃ ಸರಣಿಯ ಮೇಲ್ಚಾವಣಿಗೆ ಹೋದಂತೆ ಮಾಯವಾಗಿರಬಹುದು...ನಿಸರ್ಗದ ಚಯನ ಪ್ರಕ್ರಿಯೆ ಇದು.

    ReplyDelete
  15. ತೇವಾಂಶ ಹೆಚ್ಚಿರುವ ತೋಟಗಳಲ್ಲಿ ಬಸವನಹುಳುಗಳ ಬಾಧೆ ಅಪಾರ. ಚಿಗುರು-ಹಸಿರು ಎಲೆಗಳನ್ನೆಲ್ಲ ಇವು ತಿನ್ನುವುದರಿಂದ ಫಸಲು ಕಟ್ಟದೇ ನಷ್ಟವುಂಟಾಗುತ್ತದೆ. ಇವುಗಳನ್ನು ನಿಯಂತ್ರಣ ಮಾಡುವುದು ಕಷ್ಟ

    ReplyDelete
  16. ತುಂಬಾ ಮಾಹಿತಿಯುಳ್ಳ ಲೇಖನ.

    ReplyDelete