13 Dec 2012

ಒಡಲು ಬಗೆದ ನೋವು

"ನೀಲೂ ಚಾ ಕುಡೀತ್ಯನೆ "  ನಾಲ್ಕನೇ ಬಾರಿ ಜಾನಕಿ ಕೇಳಿದಾಗಲೂ ಉತ್ತರಿಸದೇ ಮುಸುರೆ ಪಾತ್ರೆಗಳನ್ನು ಇನ್ನೂ ಜೋರಾಗಿ ಉಜ್ಜುತ್ತಾ ತನ್ನ ಗೊಣಗಾಟವನ್ನೂ ಇನ್ನೂ ಹೆಚ್ಚಿಸಿದಳು ನೀಲೂ. ಜಾನಕಿಗೆ ಅವಳ ಗೊಣಗಾಟ ಹೊಸದಲ್ಲವಾದರೂ  ಈ ದಿನ ಸ್ವಲ್ಪ ಹೆಚ್ಚಾಗಿಯೆ  ಕಂಡಿತು. ಅವಳು  ಹೀಗಿದ್ದಾಗ ಯಾವುದೇ ಸಮಯದಲ್ಲಾದರೂ ಕೆಲಸ ಬಿಟ್ಟು  ಹೊರಟುಬಿಡುವ ಅಭ್ಯಾಸ ಗೊತ್ತಿದ್ದುದ್ದರಿಂದ, ಮುಸುರೆ ಪಾತ್ರೆಗಳನ್ನಾದರೂ ತೊಳೆದು ಹೋಗಬಹುದಿತ್ತು ಈ ಖೋಡಿ ಏನು ಮಾಡ್ತಾಳೋ  ಏನೋ ಅಂದುಕೊಂಡಳು ಜಾನಕಿ.


"ನೀನೊಂದು  ವಿಚಿತ್ರ ಮಾರಾಯ್ತಿ ... ಆ ಅರೆಹುಚ್ಚಿಯನ್ನು ಕೆಲಸಕ್ಕೆ ಇಟ್ಟುಕೊಂಡಿದ್ದಿ ...ಒಂದು ದಿನ ಕೆಲಸ ಮಾಡಿದರೆ ನಾಲ್ಕು ದಿನ ಅವರಿವರನ್ನು ಬಯ್ಯುವುದರಲ್ಲೇ ಕಾಲ ಕಳೆಯುತ್ತಾಳೆ ಅವಳು. ಅವಳ ಮೇಲೆ ಅದೇನು ವಿಚಿತ್ರ ಪ್ರೀತಿಯೋ ನಿನಗೆ  "  ಜಾನಕಿಗೆ ಯಾವಾಗಲೂ ಹೇಳುತ್ತಿದ್ದ ವಿಶ್ವ.
ಜಾನಕಿಗೆ ಈ ನೀಲೂವೆಂದರೆ ವಿಚಿತ್ರ ಪ್ರೀತಿಯಿದ್ದುದು ನಿಜ. ನೊಂದ  ಹೆಣ್ಣು ಜೀವ ಪಾಪ ಎಂಬುದು ಒಂದು ಕಾರಣವಾದರೆ , ಎಂತವರ ಮುಖದಲ್ಲಾದರೂ ತನ್ನ ಹರಿತವಾದ ನೇರಾನೇರ ಮಾತಿನಿಂದ ನೀರಿಳಿಸುತ್ತಿದ್ದ ಅವಳ ತಾಕತ್ತು ಇನ್ನೊಂದು ಕಾರಣ. ಸೌಮ್ಯಳೆನ್ನಿಸಿಕೊಂಡ ತನಗೆ ಸಾಧ್ಯವಿಲ್ಲದ ಮಾತುಗಳನ್ನು ಮುಖಕ್ಕೆ ಹೊಡೆದಂತೆ ಆಡಬಲ್ಲ ಆಕೆ , ಸ್ವಾತಂತ್ರದ ಪ್ರತೀಕದಂತೆ  ತೋರುತ್ತಿದ್ದಳು ಜಾನಕಿಗೆ.

ಸಭ್ಯ ನಾಗರೀಕತೆಯ ಮುಖವಾಡದಲ್ಲಿದ್ದ ಅನೇಕ ದೊಡ್ಡ ಮನುಷ್ಯರೆನ್ನಿಸಿಕೊಂಡವರ ಸಣ್ಣತನಗಳನ್ನು ಹೇಳಿಕೊಂಡು ತಿರುಗುವ ನೀಲುವೆಂದರೆ ಊರಿನ ಜನಕ್ಕೆಲ್ಲ ಒಂದು ರೀತಿಯ ಅಸಡ್ಡೆ.  ಅವಳ ಮಾಸಿದ ಸೀರ‍ೆ , ಅವಳಂತಹ ಇನ್ನೊಬ್ಬರನ್ನು ಹಿಡಿಸಬಹುದಾದಷ್ಟು ಸಡಿಲವಾದ ಕುಪ್ಪಸ , ಬಾಯಿಯಲ್ಲಿ ಸದಾಕಾಲ ಎಲೆಅಡಿಕೆ , ಇದ್ದ ಮೋಟುದ್ದದ ಕೂದಲಿಗೆ ತರತರಹದ ರಿಬ್ಬನ್ನು , ಕ್ಲಿಪ್ಪುಗಳಿಂದ  ಅಲಂಕರಿಸಿದ ಜುಟ್ಟು, ಸೊಂಟಕ್ಕೆ ಸಿಕ್ಕಿಸಿದ ಒಂದು ಬಟ್ಟೆಯ ಚೀಲ ಅದರಿಂದ ಹೊರಗಿಣುಕುತ್ತಿದ್ದ ಕುಡುಗೋಲಿನ ಹಿಡಿಕೆ, ಇದು ಅವಳ ಅವತಾರ. ಅವಳ ದೇಹದ ಒಂದು ಭಾಗದಂತೆಯೇ ಇದ್ದ ಆ ಚೀಲವನ್ನು ಅವಳು ಸೊಂಟದಿಂದ ತೆಗೆದದ್ದು ನೋಡಿದವರಿರಲಿಲ್ಲ. ಅಂಗಳ ಬಳಿಯುವಾಗ, ಪಾತ್ರೆ ತೊಳೆಯುವಾಗ , ಕೊನೆಗೆ ಊಟ ಮಾಡುವಾಗಲೂ ಅದು ಸೊಂಟದಲ್ಲೇ ಇರುತ್ತಿತ್ತು.   ಮನಸ್ಸಿದ್ದರೆ ಎಲ್ಲ ಕೆಲಸಗಳನ್ನು ಶ್ರದ್ಧೆಯಿಂದ ಮಾಡುತ್ತಿದ್ದಳು. ಇಲ್ಲವಾದರೆ  ಮಾಡುತ್ತಿದ್ದ ಕೆಲಸವನ್ನು ಅರ್ಧದಲ್ಲಿಯೆ ಬಿಟ್ಟು  ಯಾರಿಗೋ ಬಯ್ಯುತ್ತ ಕುಳಿತುಬಿಡುತ್ತಿದ್ದಳು .
ಊರಿನ ತುದಿಯಲ್ಲಿ ಅವಳದೊಂದು ಆಗಲೋ ಈಗಲೋ ಬೀಳುವಂತಿದ್ದ ಗುಡಿಸಲಿತ್ತು. ಅದು ಊರಿನ ತುಂಟ ಹುಡುಗರ ಪಾಲಿಗೆ " ನೀಲೂವಿನ ಅರಮನೆ " ಎಂದೇ ಪ್ರಸಿದ್ದವಾಗಿತ್ತು. ಆ ಹುಡುಗರು ಅವಳ ಗುಡಿಸಲಿನ ಮಾಡಿನ ಮೇಲೆ ಕಲ್ಲೆಸೆಯುವುದು , ಬಾಗಿಲು ಕಿತ್ತಿಟ್ಟು ಬರುವುದು ಮೊದಲಾದ ಕಿತಾಪತಿ ಮಾಡುತ್ತಿದ್ದರು .ಆಗೆಲ್ಲ ಭದ್ರಕಾಳಿಯಂತೆ ಸೊಂಟದ ಚೀಲದಿಂದ ಕುಡುಗೋಲನ್ನು ಹಿರಿದು , ಆವೇಶದಿಂದ ಕೂಗುತ್ತಾ ಆ ಹುಡುಗರ ಹಿಂದೆ ಓಡುತ್ತಿದ್ದಳು ನೀಲೂ.. ಅವು ಅಣಕಿಸುತ್ತಾ ತಪ್ಪಿಸಿಕೊಂಡು ಓಡುತ್ತಿದ್ದವು. ಸರೀ ಆ ದಿನವೆಲ್ಲ ಅವಳ ಮನೆ ಬಳಿ ಯಾರೂ ಓಡಾಡುವಂತಿರಲ್ಲ ಅಷ್ಟು ಜೋರಾಗಿರುತ್ತಿತ್ತು ಅವಳ  ಹಾರಾಟ.  ಇದೆಲ್ಲದರಿಂದಾಗಿ ಊರಿನವರಿಂದ ಅವಳಿಗೆ ಅರೆಹುಚ್ಚಿಯೆಂಬ ಪಟ್ಟ . ಹಾಗಾಗಿ ಏನು ಬೇಕಾದರೂ ಮಾಡುವ, ಹೇಳುವ ಸ್ವಾತಂತ್ರ ಅವಳಿಗಿತ್ತು. ಆ ಸ್ವಾತಂತ್ರಕ್ಕಾಗಿಯೆ ಅರೆಹುಚ್ಚಿಯಂತಾಡುತ್ತಾಳೇನೋ ಎಂಬ ಅನುಮಾನವೂ ಜಾನಕಿಗಿತ್ತು.


                         
ಚಹಾ ಮೇಲಿನ ಅವಳ ಪ್ರೀತಿ ಗೊತ್ತಿದ್ದ ಜಾನಕಿ ಒಂದು ಉದ್ದ ಲೋಟದ ತುಂಬಾ ಸಕ್ಕರೆ ಜಾಸ್ತಿ ಹಾಕಿದ ಚಹಾ ತಂದು ಮುಸುರೆಕಟ್ಟೆಯ ಬಳಿ ಗೊಣಗುತ್ತಾ ಕುಳಿತವಳಿಗೆ ಕೊಡುತ್ತಾ " ಇವತ್ತೇನಾಯ್ತು ನಿಂಗೆ ! ಮಕ್ಕಳೇನಾದ್ರೂ ಬಂದಿದ್ವೇನೇ " ಎಂದಳು.
"ಹೋಗಿನ್ಯ ನೀವಾಚೆಗೆ ...ಮಕ್ಕಳಂತೆ ಮಕ್ಕಳು ...ನನ್ನ ಬೊಜ್ಜ ....ಅವೊಂದು ಮಕ್ಕಳಾ ...ಸತ್ರುಗಳಲ್ದಾ ..." ನೀಲೂವಿನ ಗೊಣಗಾಟ ಜಾಸ್ತಿಯಾಯ್ತು.
"ಹೋಗಲಿ ಬಿಡು ಚಾ ಕುಡಿದು ಪಾತ್ರೆ ತೊಳೆದುಕೊಟ್ಟು ಹೋಗು ಆಯ್ತಾ ಹಾಗೇ ಹೊರಟುಬಿಡಬೇಡ" ಎನ್ನುತ್ತಾ ಒಳಬಂದಳು ಜಾನಕಿ.
                         

ಹಾಂ...ಒಂದು ಕಾಲದಲ್ಲಿ ಹೀಗಿರಲಿಲ್ಲ ನೀಲು.  ತಕ್ಕಮಟ್ಟಿಗೆ ಸುಂದರಿಯೆ. ಘಟ್ಟದ ಕೆಳಗಿನ ಕುಂದಾಪುರದ   ಕಡೆಯಿಂದೆಲ್ಲೋ ಸೀನು ಸೇರೆಗಾರನ ಜೊತೆ ಓಡಿ ಬಂದವಳೆಂದು ಊರ ಜನ ಆಡಿಕೊಳ್ಳುತ್ತಿದ್ದರು. ಮದುವೆ ಆಗಿತ್ತೆಂದು ಅವಳು ಹೇಳುತ್ತಿದ್ದರೂ ನಿಜ ವಿಷಯ ಬಲ್ಲವರಾರೂ ಇರಲಿಲ್ಲ. ಒಟ್ಟಿನಲ್ಲಿ  ಊರ ತುದಿಯಲ್ಲಿದ್ದ ಪುಟ್ಟ ಮನೆಯಲ್ಲಿ ಅವರ ಸಂಸಾರ ಶುರುವಾಗಿತ್ತು.
ಅವಳ ಗಂಡನೆನ್ನಿಸಿಕೊಂಡ ಸೀನು ಸೇರೇಗಾರ ಅರವತ್ತನಾಲ್ಕು ವಿದ್ಯೆಗಳನ್ನೂ ಬಲ್ಲ ಚತುರ. ಆದರೂ ಅದರಲ್ಲಿ ಕಳ್ಳತನ , ಸುಳ್ಳತನ , ಮೊದಲಾದ ದುರ್ವಿದ್ಯೆಗಳ ಬಳಕೆ ಹೆಚ್ಚಾಗಿ ಮಾಡುತ್ತಿದ್ದುದರಿಂದಲೂ,  ತನ್ನ ಕೆಲಸದ ಹೆಣ್ಣಾಳುಗಳ ಜೊತೆ ಅಗತ್ಯಕ್ಕಿಂತ ಹೆಚ್ಚು ಸಲಿಗೆ ವಹಿಸುವ ಅವನ ಚಟದಿಂದಾಗಿಯೂ, ಊರಿನಲ್ಲಿ ಅನೇಕ ಜನಗಳ ವಿರೋಧ ಕಟ್ಟಿಕೊಂಡಿದ್ದ. ಜೊತೆಗೆ ಸಾಯಂಕಾಲಗಳಲ್ಲಿ ನಶೆ ಏರಿಸಿಕೊಂಡು ಚರಂಡಿ ಅಳೆಯುವ ಅಭ್ಯಾಸವೂ ಇತ್ತು. ಅವನ  ಈ ಎಲ್ಲ ಚಟಗಳಿಗೆ ಅವನ ದುಡಿಮೆ ಸಾಕಾಗುತ್ತಿರಲಿಲ್ಲ. ಮನೆಗೆ ಬಂದರೆ ಸಾಕು ನೀಲೂವಿನೊಡನೆ ಜಗಳವಾಡುವುದು, ಹೊಡೆಯುವುದು ಸಾಮಾನ್ಯವಾಗಿತ್ತು . ಅವನ ಏಟು ತಿಂದು ಬೇಸರವಾಗಿ ಕೊನೆಗೆ ಇವಳು ನಾಲ್ಕು ಏಟು ಕೊಟ್ಟಾಗಲಷ್ಟೇ ಅವ ಸುಮ್ಮನೆ ಮಲಗುತ್ತಿದ್ದ . ಅಷ್ಟರಲ್ಲಾಗಲೇ ಎರಡು ಪುಟ್ಟ ಮಕ್ಕಳ ತಾಯಾಗಿದ್ದ ನೀಲೂ ಸಂಸಾರರಥ ತೂಗಿಸಲಿಕ್ಕಾಗಿ  ಸುತ್ತಮುತ್ತಲಿನ ಅಡಿಕೆ ತೋಟದ ಕೆಲಸಕ್ಕೆ ಹೋಗತೊಡಗಿದಳು. ಮಕ್ಕಳನ್ನು ಶಾಲೆಗೆ ಸೇರಿಸಿದಳು. ಹೀಗಿದ್ದಾಗಲೇ ಒಮ್ಮೆ  ಕುಂದಾಪುರದ  ಸಂಕಪ್ಪಸೆಟ್ಟರ ತೋಟದ ಕೆಲಸಕ್ಕೆ ಹೋಗಿ ಬರುತ್ತೇನೆ ಎಂದು ಹೋದ ಸೀನು ಸೇರೇಗಾರ ಎಷ್ಟು ದಿನಗಳಾದರೂ ವಾಪಾಸ್ ಬರಲೇ ಇಲ್ಲ. ಏನಿರಬಹುದೆಂದು ವಿಚಾರಿಸಲು ಹೋದ ನೀಲುವಿಗೆ ದೊಡ್ಡದೊಂದು ಆಘಾತವಾಗಿತ್ತು . ಅವಳ ಗಂಡನೆನ್ನಿಸಿಕೊಂಡವ ಅಲ್ಲಿ ಸಂಕಪ್ಪಸೆಟ್ಟರ ತೋಟಕ್ಕೆ ಕೆಲಸಕ್ಕೆ ಬರುತ್ತಿದ್ದ ಹೆಣ್ಣಾಳೊಬ್ಬಳೊಡನೆ ಎಲ್ಲಿಗೋ ಹೊರಟುಹೋಗಿದ್ದ. ನೀಲೂವಿಗೆ ಇನ್ನ್ಯಾವುದೋ ಊರಿನಲ್ಲಿ ತನ್ನಂತ ಇನ್ನೊಂದು ನೀಲೂ ಹುಟ್ಟಿಕೊಂಡಿರುವುದು ಖಚಿತವಾಯ್ತು.
ವಾಪಾಸ್ ಊರಿಗೆ ಬಂದವಳು ಮೊದಲಿನ ನೀಲೂವಾಗಿರಲಿಲ್ಲ. ಎರಡು ಮಕ್ಕಳನ್ನು ಚೆನ್ನಾಗಿ ಓದಿಸಬೇಕು. ತನ್ನಂತೆ ಅವು ಆಗಬಾರದು ಎಂಬುದು ಅವಳ ಜೀವನದ ಏಕೈಕ ಗುರಿಯಾಯ್ತು. ಗಂಡನಿಲ್ಲದ ಒಂಟಿ ಹೆಣ್ಣು . ಅವಳ ಸ್ಥಿತಿಯನ್ನು ದುರುಪಯೋಗಪಡಿಸಿಕೊಳ್ಳಲು ಯತ್ನಿಸಿದವರ ಮಾನವನ್ನು ಗಟ್ಟಿ ದ್ವನಿಯಲ್ಲಿ ನಾಲ್ಕು ಜನರೆದುರಲ್ಲೇ ಹೇಳಿ ಬೆವರಿಳಿಸಿಬಿಡುತ್ತಿದ್ದಳು. ತಮ್ಮ ತಪ್ಪು ಮುಚ್ಚಿಟ್ಟುಕೊಳ್ಳಲು ಅದೇ ಜನಗಳು ಅವಳಿಗೆ "ಸ್ವಲ್ಪ ಲೂಸು ಅದು " ಎಂಬ ಪಟ್ಟ ಕಟ್ಟಿದರು...ಆ ದಿನಗಳಲ್ಲಿ ಅವಳ ಬಗ್ಗೆ ಊರಲ್ಲೆಲ್ಲ ಏನೇನೋ ಗುಲ್ಲಿತ್ತು.  ಜನರಿಗೇನು ಎಲುಬಿಲ್ಲದ ನಾಲಿಗೆ .....ಒಂಟಿ ಹೆಣ್ಣು ಹೇಗಿದ್ದರೂ ತಪ್ಪೇ..... ನಿಜ ವಿಚಾರ ಬಲ್ಲವರಾರು?

ಏನೇ ಆದರೂ ಜಾನಕಿಯೂ ಸೇರಿದಂತೆ ಊರಿನ ಅನೇಕ ಹೆಂಗಸರಿಗೆ ನೀಲೂವೆಂದರೆ ಏನೋ ಒಂದು ರೀತಿಯ ಕರುಣೆಯಿತ್ತು. ಅವರ ಕೃಪೆಯಿಂದಲೇ ನೀಲೂ ಮಕ್ಕಳಿಗೆ ಎರಡು ಹೊತ್ತು ಊಟ ಹಾಕಿದಳು ...ಕಷ್ಟಪಟ್ಟು ಕೆಲಸ ಮಾಡಿ ಅವರನ್ನು ಓದಿಸಿದಳು.

ಅಂತೂ ಕಾಲ ಚಕ್ರ ಉರುಳಿತು . ನೀಲೂವಿನ ಎರಡು ಹೆಣ್ಣು ಮಕ್ಕಳೂ ಪಿಯುಸಿ ಮುಗಿಸಿ ದೂರದ ಶಿವಮೊಗ್ಗದಲ್ಲಿ ಯಾವುದೋ ಕೆಲಸ ಹುಡುಕಿಕೊಂಡು ಹೋದರು. ಅಷ್ಟೆಲ್ಲ ಕಷ್ಟಪಟ್ಟು ತಮ್ಮನ್ನು ದಡ ಸೇರಿಸಿದ ಅಮ್ಮನ ಬಗ್ಗೆ  ಅಸಡ್ಡೆ ಅವಕ್ಕೆ ಮೊದಲೇ ಪ್ರಾರಂಭವಾಗಿತ್ತು. ಈಗಂತೂ ಅಮ್ಮ ಲೆಕ್ಕಕ್ಕೇ ಇಲ್ಲವಾಯಿತು.  ಮೊದಮೊದಲು ನೀಲೂ ಹೆಮ್ಮೆಯಿಂದ ಮಕ್ಕಳ ಸುದ್ದಿ ಹೇಳಿಕೊಳ್ಳುತ್ತಾ ಅಲೆದಳು. ವರ್ಷಗಟ್ಟಲೆ ತನ್ನನ್ನು ನೋಡಲು ಮಕ್ಕಳು ಬರದಿದ್ದಾಗ ಯಾರ ಸಹಾಯದಿಂದಲೋ ಅವರಿದ್ದಲ್ಲಿ ಹೋದಳು . ಇಬ್ಬರು ಹೆಣ್ಣುಮಕ್ಕಳೂ ಅವಳನ್ನು ಆದರಿಸಲಿಲ್ಲ. ಅವಳು ಅಲ್ಲಿಗೆ ಬಂದದ್ದೇ ತಪ್ಪೆಂಬಂತೆ ವರ್ತಿಸಿದರು ...ಅದೆಲ್ಲಕ್ಕಿಂತ ನೀಲೂವಿಗೆ ಆಘಾತ ನೀಡಿದ ಸಂಗತಿಯೆಂದರೆ ಮಕ್ಕಳಿಬ್ಬರೂ ಇನ್ನೊಂದು ತಿಂಗಳಲ್ಲಿ ಮದುವೆಯಾಗುತ್ತಿದ್ದಾರೆಂಬ  ಸುದ್ದಿ . ತನಗೊಂದು ಮಾತೂ ತಿಳಿಸದೆ ಇಂತಹ ತೀರ್ಮಾನಕ್ಕೆ ಬಂದ ಮಕ್ಕಳ ವರ್ತನೆಗೆ ನೀಲೂ ಸಂಪೂರ್ಣ ಕುಸಿದುಹೋದಳು. ಅಂದೇ ಅಲ್ಲಿಂದ ಹೊರಡುತ್ತೇನೆ ಎಂದ ಅಮ್ಮನಿಗೆ ಉಳಿಯಲು ಮಕ್ಕಳು ಹೇಳಲೇ ಇಲ್ಲ. ಕೊನೇ ಪಕ್ಷ ತನ್ನ ಅಳಿಯಂದಿರನ್ನಾದರೂ ನೋಡಬೇಕೆಂದಿದ್ದ ನೀಲೂ ಮಕ್ಕಳ ಅಸೆಡ್ಡೆ ತಾಳಲಾರದೆ ಸುಮ್ಮನೆ ಊರಿಗೆ ವಾಪಾಸಾದಳು. ಸ್ವಲ್ಪ ಲೂಸು ಎಂಬ ಪಟ್ಟ ಅವಳಿಗೆ ಮೊದಲೇ ಇತ್ತು . ಈಗ ಅದೇ ನಿಜವೂ ಆಯಿತು. ತನ್ನ ಮನಸ್ಸಿಗೆ ಬಂದಂತೆ ಇರತೊಡಗಿದಳು. ಇಷ್ಟವಿದ್ದರೆ ಕೆಲಸ ಮಾಡಿದಳು ..ಇಲ್ಲವಾದರೆ ಯಾರದೋ ಮನೆಯ ಕಟ್ಟೆಯ ಮೇಲೆ ಸುಮ್ಮನೆ ಕುಳಿತಿರುವುದು ....ಒಮ್ಮೊಮ್ಮೆ ವಿನಾಕಾರಣ ನಗುವುದು ...ಸದಾ ಗೊಣಗುವುದು ಎಲ್ಲವೂ ರೂಢಿಯಾಯ್ತು. ಜಾನಕಿಯಂತಹ ಊರಿನ ಹೆಂಗಸರು ಕರೆದು ಊಟ ಹಾಕಿದರೆ ಮಾಡುತ್ತಿದ್ದಳು ...ಆಗ ಮನಸ್ಸು ಬಂದರೆ ಅವರ ಎಲ್ಲ ಕೆಲಸಗಳನ್ನೂ ಮಾಡಿಕೊಡುತ್ತಿದ್ದಳು. ದಿನಗಟ್ಟಲೇ ಮನೆಯಲ್ಲಿ ಸುಮ್ಮನೇ ಮಲಗಿಬಿಡುತ್ತಿದ್ದಳು.
 

ಆಗಾಗ ಮಕ್ಕಳ ನೆನಪಾದಾಗ ಹೀಗೆ ಗೊಣಗುವುದು ಹೆಚ್ಚಾಗುತ್ತಿತ್ತು. ಇಂದೂ ಕೂಡ ಅಂತದ್ದೇ ಏನೋ ಆಗಿರಬೇಕೆಂದುಕೊಂಡಳು ಜಾನಕಿ.  ತೋಟದಿಂದ ಏಲಕ್ಕಿ ಕೊಯ್ದು ತಂದು ತೊಳೆದು ಗೋಣೀತಾಟಿನ ಮೇಲೆ ನೀರುಬಸಿಯಲು ಹರವಿದ ಗಂಡ ಮಹೆಶನಿಗೆ ಚಹಾ ಮಾಡಿಕೊಟ್ಟವಳು ...ಬೇಳೆ ಬೇಯಿಸಲು ಕುಕ್ಕರ್ ತರಲು ಮುಸುರೆಗುಂಡಿಯ ಬಳಿ ಬಂದಳು. ಇನ್ನೂ ಮುಸುರೆಕಟ್ಟೆಯ ಮೇಲೆ ಗರ ಬಡಿದವರಂತೆ ಸುಮ್ಮನೆ ಕುಳಿತೇ ಇದ್ದ ನೀಲೂವನ್ನು ನೋಡಿ ಸಂಕಟವಾಯಿತು .
"ನೀಲೂ ಇಂದ್ಯಾಕೋ ನಿಂಗೆ ಸಮ ಇಲ್ಲೆ ಮಾರಾಯ್ತಿ ..ಬೇಗೆ ಬೇಗ ಇದಿಷ್ಟು ಪಾತ್ರೆ ತೊಳೆದುಕೊಟ್ಟುಬಿಡು , ತಿಂಡಿ ಕೊಡ್ತೆ ತಿಂದು ಮನೆಗೆ ಹೋಗಿ ಮಲಗು " ಎಂದಳು.

"ನನ್ನ ಕಥಿ ನನಗಾಯಿತ್ತು ನಿಮ್ಗೊಂದು ಪಾತ್ರೆ ತೊಳುದೆ ಹೆಚ್ಚಾಯಿತ್ತ್ ಅಲ್ದಾ " ಎನ್ನುತ್ತಾ ಸಿಡುಕಿದಳು ನೀಲೂ ...
"ಅದೇನಾಯ್ತು ಹೇಳೆ ಮಾರಾಯ್ತಿ ನನ್ನಿಂದೇನಾದ್ರೂ ಮಾಡಕ್ಕಾತ್ತಾ ನೋಡ್ತೆ " ಅನುನಯಿಸಿ ಕೇಳಿದ ಜಾನಕಿಯ ಧ್ವನಿಗೆ ಕರಗಿದ ನೀಲೂ ಜೋರಾಗಿ ಅಳಲು ಪ್ರಾರಂಭಿಸಿದಳು . ಸದಾ ದೊಡ್ಡ ಧ್ವನಿಯಲ್ಲಿ ಅವರಿವರನ್ನು ಬಯ್ಯುತ್ತಾ ಓಡಾಡುವಾಕೆ ಹೀಗೆ ಅತ್ತದ್ದನ್ನು ಜಾನಕಿ ನೋಡೇ ಇರಲಿಲ್ಲವಾಗಿ ಅವಳಿಗೆ ಗಾಭರಿಯಾಯಿತು.
ಸ್ವಲ್ಪ ಹೊತ್ತು ಹಾಗೆ ಅತ್ತ ನೀಲೂ ಸಮಾಧಾನಗೊಂಡು " ನೋಡಿ ಜಾನಕಮ್ಮ ನನ್ನ ಬಗ್ಗೆ ಜನ ಏನೆನೆಲ್ಲ ಮಾತಾಡಿಕೊಳ್ತ್ರು ಅಲ್ದ ..ನಾ ಗಂಡ ಬಿಟ್ಟವಳು ..ಅರೆಹುಚ್ಚಿ ...ಆಚೆದಿಂಬದ ತಿಮ್ಮಪ್ಪಹೆಗ್ಡೇರ ಸೂಳೆ ....ಎಂತೆಲ್ಲ ಹೇಳ್ತ್ರು ...ಆದ್ರೆ ನಂಗೆ ಬೇಜಾರೇನು ಇಲ್ಲೆ ಕಾಣಿ ..ಎಲುಬಿಲ್ಲದ ನಾಲ್ಗೆ ..ಹೆಂಗೂ ಹೊರಳುತ್ತು ಅದು....ಸತ್ಯ ನಂಗೆ ಗೊತ್ತಿತ್ತು ಅಲ್ದ .......ಆದ್ರೆ.ನನ್ನ ರಕ್ತವೇ ಹಿಂಗಂದ್ರೆ ಹೆಂಗೆ ?
ನಿನ್ನೆ ನನ್ನ ಹಿರಿ ಮಗಳು ಪಕ್ಕದಮನೆ ಸೀತಕ್ಕನ ಮನೆಗೆ ಫೋನ್ ಮಾಡಿ ನನ್ನ ಕರೆಸಿ ಮಾತಾಡಿತ್ತ್...ಅಂತೂ ಇಷ್ಟು ದಿನ ಆದ್ ಮೇಲಾದ್ರೂ ನಾ ನೆನಪಾದ್ನಲ್ಲ ನನ್ನ ಮಕ್ಳಿಗೆ ಅಂತ ಖುಷಿ ಪಟ್ನೆ ... ಆದ್ರೆ ಅದು ನನ್ನ ಖುಷಿಗಲ್ಲ ಪೋನ ಮಾಡಿದ್ದು ಕಾಣಿ ...ಎಂತ ಹೇಳತ್ತ್ ಗೊತ್ತಿತ್ತಾ? ...ಅವ್ಳಿಗೆ ಅವ್ಳ ತಂಗಿಗೆ ನನ್ನಿಂದ ಮರ್ಯಾದೆ ಇಲ್ಲಂತೆ...ಅವ್ರ ಅಪ್ಪನ್ನ ಮನಿಂದ ಓಡ್ಸಿ ಅವಕ್ಕೆ ಅಪ್ಪನ ನೆರಳಿಲ್ಲದ ಹಾಂಗೆ ಮಾಡಿದ್ದು ನಾನಂತೆ ...ಅದನ್ನ ಅವ್ರ ಅಪ್ಪನೇ ಅವ್ಳಿಗೆ ಸಿಕ್ಕಿ ಹೇಳಿದ್ನಂತೆ. ಹೆಗ್ಡೇರ ಮಾತು ಕಟ್ಟಿಕೊಂಡು ನಾನು ಅವನನ್ನೇ ಓಡಿಸಿದ್ನಂತೆ ...ನನ್ನ ಕೂಸೇ ಹಿಂಗಂದ್ರೆ ನಾನು ಬದುಕೂದು ಹ್ಯಾಂಗೆ ಹೇಳಿ ?
ಅಬ್ಬ ಆ ಗಂಡಸಿನ  ಕ್ರೌರ್ಯವೇ ಎನ್ನಿಸಿತ್ತು ಜಾನಕಿಗೆ ..."ಹೋಗಲಿ ಬಿಡು ನೀಲೂ ಎಂತೆಂತದ್ದನ್ನೇ ಎದುರಿಸಿದ್ದೀ ನೀನು ..ಇದಕ್ಕೆ ಯಾಕೆ ಇಷ್ಟು ಬೇಜಾರಾಗ್ತಿ ? ನಿನ್ನ ಮಕ್ಕಳಿಗೂ ಸತ್ಯ ಒಂದಲ್ಲ ಒಂದು ದಿನ ಗೊತ್ತಾಗತ್ತೆ ಬಿಡು ..ಸಮಾಧಾನ ಮಾಡಿಕೊ "  . ಹೀಗೆನ್ನುವುದು ಎಂತಹ ಶುಷ್ಕ ಉಪಚಾರವಾಗುತ್ತದೆಂದು ಯೋಚಿಸುತ್ತಲೇ  , ನುಡಿದಳು ಜಾನಕಿ.
ಎಂತಾ ಸಮಾಧಾನ ಜಾನಕಮ್ಮ...ಅವ ನನ್ನ ನಡು ನೀರಲ್ಲಿ ಕೈ ಬಿಟ್ಟಾಗ ಹೆದರಲಿಲ್ಲೆ, ಒಂಟಿ ಹೆಣ್ಣಾಗಿ ಮಕ್ಕಳನ್ನ ಸಾಕಿದೆ...ಈಗ ಅದೇ ಮಕ್ಕಳಿಂದ ಇಂತಹ ಮಾತು........ ಇದರ ಬದಲು ಜನ ಹೇಳೂ ಹಾಂಗೆ ಅರ್ಧ ಲೂಸ್ ಅಲ್ಲದೆ ಪೂರ್ತಿ ಲೂಸಾಗಿದ್ದರೆ ಒಳ್ಳೆದಾತಿತ್ತು ಕಾಣಿ , ಆಗ ನಂಗೇನೂ ಗೊತ್ತೇ ಆಗ್ತಿಲ್ಲೆಯಾಯಿತ್ತಲ್ದ ..ಹಿ ..ಹಿ..ಹಿ. " ಎಂದಿಗಿಂತ ವಿಚಿತ್ರವಾಗಿ ನಕ್ಕ ನೀಲೂವನ್ನು ನೋಡಿ ಬೆಚ್ಚಿದಳು ಜಾನಕಿ.
ಹಾಗೆಲ್ಲ ಹೇಳಬೇಡ ನೀಲೂ , ಇಲ್ನೋಡು ...ಇವತ್ತು ನೀನು ಕೆಲಸ ಮಾಡಬೇಡ ಬಿಡು. ಇಲ್ಲೆ ಊಟ ಮಾಡಿ ಒಂದು ಘಳಿಗೆ ಮಲಗು ಗೊತ್ತಾಯ್ತ ...ನಾನೀಗ ಅಡಿಗೆ ಮಾಡುತ್ತೇನೆ ... ಬಾ ಅಲ್ಲೆ ಕುಳಿತು ಮಾತನಾಡು ...ಎಂದು ಎದ್ದವಳನ್ನು ನೋಡಿ ನಕ್ಕ ನೀಲೂ.."ಅಡ್ಡಿಲ್ಲೆ ಬಿಡಿನ್ಯ ಅಮ್ಮ ಇದಿಷ್ಟು ತೊಳೆದು ನಾನು ಮನೆಗೇ ಹೊಗ್ತೆ...ನಂಗೇನೂ ಅಗ್ತಿಲ್ಯೆ...ಹೆದ್ರ್ ಬೇಡಿ ..ಗಟ್ಟಿ ಜೀವ ನಂದು " ಹೇಳುತ್ತಾ ಪಾತ್ರೆಯನ್ನು ಗಟ್ಟಿಯಾಗಿ ಉಜ್ಜ ತೊಡಗಿದಳು.


ಜಾನಕಿ ನೀಲೂವನ್ನು ನೋಡಿದ್ದು ಅಂದೇ ಕೊನೆ. ಮಾರನೆಯ ದಿನದಿಂದ ಯಾರೂ ಅವಳನ್ನು ಕಾಣಲಿಲ್ಲ. ಎಲ್ಲಿಗೆ ಹೋದಳೋ ಏನಾದಳೋ ಯಾರಿಗೂ ತಿಳಿಯದು. ಆದರೆ ಊರಲ್ಲಿ ಸುದ್ದಿಗಳಿಗೇನೂ ಕೊರತೆಯಿರಲಿಲ್ಲ. ನೀಲೂ  ಪೂರ್ತಿ ಹುಚ್ಚಿಯಾಗಿ ಕುಂದಾಪುರದ ಬಸ್ ಸ್ಟ್ಯಾಂಡ್ ನಲ್ಲಿ ಭಿಕ್ಷೆ ಬೇಡುತ್ತಿದ್ದಾಳಂತೆ ಎಂದವರೆಷ್ಟೋ, ಉಡುಪಿಯಲ್ಲಿ ಹೆಂಗಸೊಬ್ಬಳು ತನ್ನನ್ನು ಬಿಟ್ಟು ಬೇರೆಯವಳ ಸಂಗ ಮಾಡಿದ ಗಂಡನನ್ನು ಕೊಲೆ ಮಾಡಿ ತಾನೂ ಸತ್ತಳಂತೆ ಅದು ನೀಲೂವೇ ಇರಬೇಕೆಂದವರೆಷ್ಟೋ, ಶಿವಮೊಗ್ಗದಲ್ಲಿ ತನ್ನ ಮಕ್ಕಳ ಮನೆಯಲ್ಲೇ ಕೆಲಸ ಮಾಡುತ್ತಾ ಇದ್ದಾಳಂತೆ ಎಂದವರೆಷ್ಟೋ, ಅದ್ಯಾವೂದೂ ಅಲ್ಲ ಅವಳು ಮುಳುಗಡೆ ಹೊಳೆ ಹಾರಿದ್ದಾಳೆ ಎಂದವರೆಷ್ಟೋ .....ನಿಜ ಸಂಗತಿ ಇದುವರೆಗೂ ತಿಳಿದಿಲ್ಲ.













ಈ ಕಥೆ   ೧೪-೧೨-೧೨ರ ವಿಜಯನೆಕ್ಸ್ಟ್  ಪತ್ರಿಕೆಯಲ್ಲಿ ಪ್ರಕಟವಾಗಿದೆ.

9 comments:

  1. ಒಂದು ಹೆಣ್ಣನ್ನು ಸಮಾಜದಲ್ಲಿರುವ ಹಸಿದ ಕೆಲ ಪ್ರಾಣಿಗಳು ಹೇಗೆ ಮುಗಿಸುತ್ತವೆ ಎನ್ನುವುದನ್ನು ಎಷ್ಟು ನಿಜವಾಗಿ ಬರೆದಿದ್ದೀರಿ...ಕರುಳು ಹಿಂಡಿದಂತಾಗುತ್ತದೆ... ರಕ್ತವೇ ತನಗೆ ಶಾಪವಾದರೆ ಇನ್ನೆಲ್ಲಿ ಬದುಕಲು ಆಶಾಭಾವ?..ಬರೆದ ಕಥೆ ಕಣ್ಣಲ್ಲಿ, ಮನದಲ್ಲಿ ಕಂಬನಿ ಮಿಡಿಯುತ್ತದೆ

    ReplyDelete
  2. ಕರಳು ಮಿಡಿಯುವ ಕತೆ.

    ReplyDelete
  3. ಯಾಕೋ ಮನಸ್ಸು ವಿಹ್ವಲವಾಯಿತು.

    ReplyDelete
  4. ಇವತ್ತು ಹೆಣ್ಣಿನ ಬಗ್ಗೆ ಓದಿದ ಎರಡನೇ ಕಥೆ...ಓದಿ ಪಾಪಾ ಹೀಗಾಗ ಬಾರದಿತ್ತು ಎನಿಸಿತು...

    ಆ ಘಟ್ಟದ ಕೆಳಗಿನ ಭಾಷೆ ,ಜೊತೆಗೆ ಆ ಶಬ್ದಗಳು ಮನೆಯನ್ನು ನೆನಪಿಸಿತು....
    ಕಥೆ ಅಂತಾ ಅನಿಸಲೇ ಇಲ್ಲ..ಯಾರೋ ನನ್ನೆದುರು ಕೂತು ಹೇಳುತ್ತಿದ್ದಾರೆ ಅನಿಸಿದಂತಿದೆ ನಿಮ್ಮ ನಿರೂಪಣೆ..
    ನಾನಂತೂ ನಿಮ್ಮ ಬರಹಕ್ಕೆ ಅಭಿಮಾನಿಯಾದೆ...
    ಮತ್ತಷ್ಟು ಬರಹಗಳನ್ನು ಹಾಕಿ..
    ಖಂಡಿತ ಓದುತ್ತೇನೆ..
    ನಮಸ್ತೆ...

    ReplyDelete
  5. ಇದು ನಿಜ ಕಥೆಯಾ...? ಹೌದಾಗಿದ್ದರೆ.... ಇದನ್ನ ಕಥೆ ಮಾಡಿ ಬರೆದಿದ್ದು ಚೆನ್ನಾಗಿದೆ.... ಅಲ್ಲಿಯದೇ ಭಾಷೆ ಉಪಯೋಗ ಸಹ ಸಹಕಾರಿಯಾಯ್ತು..... ಮನಸ್ಸು ನೋವಾಯಿತು....

    ReplyDelete
  6. ನಿಜ ಕಥೆಯೇ ?? ಮನಮಿಡಿಯುವ ಕಥೆ. ಸುಂದರವಾಗಿ ನಿರೂಪಿಸಿದ್ದೀರಿ....ಮಧ್ಯೆ ಮಧ್ಯೆ ನಮ್ಮ ಕುಂದ ಕನ್ನಡ ಕಂಡು ಖುಷಿ ಆಯಿತು...

    ReplyDelete
  7. ಕಥೆಯನ್ನು ಇಷ್ಟಪಟ್ಟು ಕಮೆಂಟಿಸಿದವರೆಲ್ಲರಿಗೂ ಧನ್ಯವಾದಗಳು. ಇದು ನಿಜವಲ್ಲ ...ಕಥೆಯಷ್ಟೇ...ಹಾಂ ನಮಗೆ ಗೊತ್ತಿರುವ ಒಬ್ಬ ಮಹಿಳೆಯ ಬದುಕಿನ ಎಳೆಯೊಂದನ್ನು ಇಟ್ಟುಕೊಂಡು ಹೆಣೆದ ಕಥೆ .

    ReplyDelete
  8. ನಿರೂಪಿಸಿದ ಬಗೆ ಚೆನ್ನಾಗಿತ್ತು.

    ReplyDelete