5 Sept 2013

ಬೆಂಗಳೂರಿನ ಗಣೇಶೋಸ್ತವ

ಸಾಯಂಕಾಲ ಆರು ಗಂಟೆ ..ತರಕಾರಿ ಅಂಗಡಿಯಿಂದ ನಾನು ಮತ್ತು ಮಗಳು ವಾಪಾಸ್ ಮನೆಗೆ ಬರುತ್ತಿದ್ದೆವು. ಎದುರಿನಿಂದ ನಾಲ್ಕಾರು ಮಕ್ಕಳ ಗುಂಪೊಂದು ಬಂದಿತು. ಎಲ್ಲರ ಕೈಯ್ಯಲ್ಲಿ ಕಾಣಿಕೆ ಡಬ್ಬಿ . ಹತ್ತಿರವಾಗುತ್ತಿದ್ದಂತೆಯೆ " ಅಕ್ಕ ಗಣೇಸನ್ನ ಕೂರಿಸ್ತೀವಿ ..ಕಾಣಿಕೆ ಕೊಡಿ ಅಕ್ಕ " ಅಂತ ಶುರು ಮಾಡಿಕೊಂಡವು . ನಾನು "ಇಲ್ಲಪ್ಪ ನಾನು ಕೊಡಲ್ಲ " ಎಂದು ಮುಂದುವರೆದೆ... ಒಬ್ಬ ಚಿಲ್ಟಾರಿ ನನ್ನ ಮಗಳನ್ನು ಅಡ್ಡಗಟ್ಟಿ ನಿಂತುಬಿಟ್ಟ . ಏನೋ ಕೈಲಾಗಿದ್ದು ಹಾಕಕ್ಕ ಅಂತ ಗೋಗರೆಯಲು ಪ್ರಾರಂಭಿಸಿದ್ದನ್ನ ಕೇಳಿ ಮಗಳು ನನ್ನೆಡೆ ನೋಡಿದಳು . ಅವಳನ್ನು ಎಳೆದುಕೊಂಡು ಮುಂದೆ ನಡೆದೆ. ಅವಳಿಗೆ ಕೋಪ . " ಪಾಪ ಅಮ್ಮ  ಚಿಕ್ಕ ಹುಡುಗ , ಒಂದು ಹತ್ತ್ ರೂಪಾಯಿ ಕೊಟ್ಟರೇನಾಗ್ತಿತ್ತು " ಅಂತ ಬಯ್ದಳು .

ಹೂಂ ಈಗೇನೋ ಅವನ್ನು ನೋಡಿದರೆ ಪಾಪ ಎನ್ನಿಸುತ್ತೆ. ಆದರೆ ಆಮೇಲೆ ನಾವೆ ಅನುಭವಿಸಬೇಕಲ್ವಾ ?   ಈ ಚಿಲ್ಟಾರಿಗಳೇನು ಸಾಮಾನ್ಯದವಾ? ಈಗೇನೊ ಹೀಗೆ ಚಿಕ್ಕ ಪುಟ್ಟ ಡಬ್ಬಿ ಹಿಡಿದು ವಸೂಲಿ ಮಾಡ್ತವೆ. ಗಣೇಶನ ಹಬ್ಬದ ದಿನ ಇಲ್ಲೆ ಎಲ್ಲೋ ಖಾಲಿ ಸೈಟ್ ನಲ್ಲಿ  ನಾಲ್ಕು ಕಡ್ಡಿ ಹುಗಿದು , ಅದಕ್ಕೆ ಎಲ್ಲಿಂದಲೋ ಒಂದು ದೊಡ್ಡ ಪ್ಲಾಸ್ಟಿಕ್ ಶೀಟ್ ಸಂಪಾದಿಸಿ , ಮಾಡು ಮಾಡುತ್ತವೆ. ಚಿಕ್ಕದೊಂದು ಗಣೇಶನನ್ನ ಕೂರಿಸಿ , ತಮಗೆ ತೋಚಿದಂತೆ ಅಲಂಕರಿಸುತ್ತವೆ, ಅವರವರ ಅಮ್ಮಂದಿರನ್ನು ಕಾಡಿ ನೇವೇದ್ಯಕ್ಕೆ ಅವಲಕ್ಕಿಯೋ ಮತ್ತೊಂದೋ ಮಾಡಿಸಿ ಹಂಚಿ ತಿನ್ನುತ್ತವೆ. ಎಲ್ಲಾ ನೋಡೋಕೆ ಕೇಳೋಕೆ ಚೆನ್ನಾಗೇನೋ ಇರತ್ತೆ.ನಾಳೆ ಈ ಹುಡುಗರು ದೊಡ್ಡೋರಾಗ್ತಾರೆ . ಬೀದಿಯಲ್ಲಿ ಡಬ್ಬಿ ಹಿಡಿದು ವಸೂಲಿ ಮಾಡೋದನ್ನ ನಿಲ್ಲಿಸಿ , ಮನೆಗಳಿಗೆ , ಅಂಗಡಿ , ಕಛೇರಿಗಳಿಗೆ ರಸೀದಿ ಪುಸ್ತಕ ಹಿಡಿದು ನುಗ್ಗುತ್ತಾರೆ. ಅವರ ಗಾತ್ರ , ಮುಖಭಾವಗಳನ್ನು ನೋಡಿದರೆ ಇಲ್ಲ ಎನ್ನಲು ಧೈರ್ಯ ಸಾಲದೆ ಏನೋ ಕೊಟ್ಟು ಸುಮ್ಮನಾಗ್ತೀವಿ .
ಆಮೇಲೆ ನಿಜವಾದ ಕಷ್ಟ ಶುರುವಾಗತ್ತೆ ನೋಡಿ.  ಈಗ ದೊಡ್ಡೋರಾಗಿರ್ತಾರಲ್ಲ , ಹಬ್ಬ ಇಂತಹ ದಿನವೇ ಆಗಬೇಕೆಂಬ ನಿಯಮವೇನೂ  ಇರೋದಿಲ್ಲ.   ಯಾವುದೋ ಒಂದು ಬುಧವಾರ ಯಾವುದೋ ರಸ್ತೆಯಲ್ಲಿ ಪೆಂಡಾಲ್ ಮೇಲೇಳುತ್ತದೆ. ಇಡೀ ಬೀದಿಗೂ ದೀಪಾಲಂಕಾರವಾಗುತ್ತದೆ . ಗುರುವಾರ ಬೆಳಿಗ್ಗೆ ಆರಕ್ಕೆಲ್ಲ  ಮೈಕಾಸುರ ಮಂಜುನಾಥನನ್ನು ಎಬ್ಬಿಸಲು ಪ್ರಾರಂಭಿಸುತ್ತಾನೆ. ಆಮೇಲೆ ಗಜಮುಖನೆ ಗಣಪತಿಯೆ ಶುರುವಾಗುತ್ತದೆ. ಎಂಟು ಗಂಟೆ ಆಗುತ್ತಿದ್ದಂತೆ ಖನ್ನಡದ ಸುಪುತ್ರನೊಬ್ಬನ ಕೈಗೆ ಮೈಕ್ ಬರುತ್ತದೆ. ಆತ ಒಂದಿಷ್ಟು ಹೊತ್ತು ಕಾಲೊನಿಯ ಜನರಿಗೆಲ್ಲ ತಮ್ಮ ಕಾರ್ಯಕ್ರಮದ ರೂಪುರೇಷೆಗಳನ್ನು ತನ್ನ ಅದ್ಬುತವಾದ ಖನ್ನಡದಲ್ಲಿ ವಿವರಿಸಿ, ಎಲ್ಲರೂ ತಮ್ಮ ಯುವಕಸಂಘದ ಗಣೇಶೋಸ್ತವದಲ್ಲಿ ಎಚ್ಚಿನ ಸಂಕ್ಯೆಯಲ್ಲಿ ಬಾಗವಯಿಸಬೇಕಾಗಿ ಕೋರಿಕೊಳ್ಳುತ್ತಾನೆ. ಆಮೇಲೆ ವೈಭವದೊಂದಿಗೆ ಗಣೇಶನ ಪ್ರತಿಷ್ಟಾಪನೆಯಾಗುತ್ತದೆ.

ಅಷ್ಟು ಹೊತ್ತು ಇದ್ದಬದ್ದ ದೇವರುಗಳನ್ನೆಲ್ಲ ಎಬ್ಬಿಸಿದ ಮೈಕಾಸುರನಿಗೆ ಕನ್ನಡಚಿತ್ರೋದ್ಯಮ ಅದೇನು ಲಂಚ ಕೊಟ್ಟಿರತ್ತೋ ಆ ಗಣೇಶನಿಗೇ ಗೊತ್ತು . ಅದು "ತಲೆ ಬಾಚ್ಕೊಳೊ , ಪೌಡ್ರ್ ಹಾಕ್ಕೊಳೊ"ದಿಂದ ಹಿಡಿದು "ಪ್ರೀತ್ಸೆ ಪ್ರೀತ್ಸೆ" ವರೆಗೂ ಎಲ್ಲವನ್ನೂ ಹಾಡಿ ಮುಗಿಸುತ್ತದೆ. ಒಂದು ಸಾರಿ ತಂದ ಸಿಡಿಯಲ್ಲಿನ ಎಲ್ಲಾ ಹಾಡು ಮುಗಿದರೆ ಮತ್ತೆ ವಾಪಾಸ್ ಸಾಯಂಕಾಲ ಆರರವರೆಗೂ ಅದನ್ನೇ ಹಾಕಲಾಗುತ್ತದೆ . 
ಸಾಯಂಕಾಲ ಆರರಿಂದ ಪ್ರಸಿದ್ಧ ತಂಡದಿಂದ ರಸಮಂಜರಿ ಕಾರ್ಯಕ್ರಮವಿರುತ್ತದೆ. ಅವರು ಸ್ವಲ್ಪ ಹಳೆಯದು ಸ್ವಲ್ಪ ಹೊಸದು ಹೀಗೆ ಕಾಂಬಿನೇಷನ್ ಮಾಡಿ ಮತ್ತೆ ಕನ್ನಡ ಚಿತ್ರಗಳ ಹಾಡುಗಳನ್ನು ರಾತ್ರಿ ಹನ್ನೊಂದರವರೆಗೆ ಹಾಡುತ್ತಾರೆ. 

ಇದೇ ದಿನಚರಿ ಗುರುವಾರ ಬೆಳೆಗ್ಗೆಯಿಂದ ಭಾನುವಾರದವರೆಗೂ ನಡೆಯುತ್ತದೆ. ಭಾನುವಾರ ಸಾಯಂಕಾಲ ಡಕ್ಕಣಕ ಡಕ್ಕಣಕಣ ವಾದ್ಯ, ಪಟಾಕಿಗಳ ಕಿವಿಗಡಚಿಕ್ಕುವ ಶಬ್ದದೊಂದಿಗೆ ....ಕಾರ್ಯಕರ್ತರುಗಳ ಟಪ್ಪಂಗುಚ್ಚಿ ನೃತ್ಯದೊಂದಿಗೆ ಮೆರವಣಿಗೆ ಮಾಡಿ ಗಣೇಶನನ್ನು ಮುಳುಗಿಸಲಾಗುತ್ತದೆ .

ಇದೆಲ್ಲಾ ಕತೆ ಕೇವಲ ಒಂದು ಬಾರಿಯಾದರೆ ಸಹಿಸಬಹುದು .   ಏರಿಯಾದಲ್ಲಿಯೂ ಎಷ್ಟೊಂದು ರಸ್ತೆಗಳಿರುತ್ತವಲ್ಲ ...ಕನಿಷ್ಟ ಎರಡು ರಸ್ತೆಗಳಿಗೊಂದು ಯುವಕ ಸಂಘಗಳೂ ಇರುತ್ತವಲ್ಲ . ಎಲ್ಲರೂ ಒಂದೇ ಬಾರಿ ಹಬ್ಬ ಮಾಡಲಾಗುತ್ತದೆಯೆ ? ಹಾಗಾಗಿ   ಚೌತಿಯಿಂದ ಪ್ರಾರಂಭಿಸಿದರೆ ದೀಪಾವಳಿ ಬರುವವರೆಗೂ ಪ್ರತೀ ವಾರವೂ ಒಂದಲ್ಲ ಒಂದು ರಸ್ತೆಯಲ್ಲಿ ಗಣೇಶೋತ್ಸವ ನಡೆಯುತ್ತದೆ . ಕೆಲವರು ಇನ್ನೂ ತಲೆ ಓಡಿಸಿ ಡಿಸೆಂಬರ್ ನಲ್ಲೂ ಗಣೇಶೋಸ್ತವ, ಖನ್ನಡ ರಾಜ್ಯೋಸ್ತವ  ಎರಡನ್ನೂ ಒಟ್ಟಿಗೇ ಆಚರಿಸುತ್ತಾರೆ !
 ನಮ್ಮ ಮನೆ ಬೇರೆ ನಮ್ಮ ಏರಿಯಾದಲ್ಲಿ ಎತ್ತರದ ಪ್ರದೇಶದಲ್ಲಿರುವುದರಿಂದ ಎಲ್ಲೇ ಮೈಕ್ ಹಾಕಿದರೂ ನಮ್ಮ ಮನೆಯಲ್ಲೇ ಹಾಕಿದಷ್ಟು ಸ್ಪಷ್ಟವಾಗಿ ಕೇಳುತ್ತದೆ . ಪ್ರತೀ  ಗುರುವಾರ ಅಥವಾ ಶುಕ್ರವಾರ ಬೆಳಿಗ್ಗೆ ಮೈಕ್ ಕೇಳಿಸಿತೆಂದರೆ  ಇನ್ನು ಮುಂದಿನ ಮೂರು ದಿನಗಳವರೆಗೆ ಮೈಕಾಸುರನ ಟಾರ್ಚರ್ ಎದುರಿಸಲು ಮಾನಸಿಕವಾಗಿ ಸಿದ್ಧರಾಗಲೇ ಬೇಕಾಗುತ್ತದೆ !

ಇವೆಲ್ಲ ಕಾರಣಗಳಿಂದಾಗಿ ಮೊದಲೆಲ್ಲ ತುಂಬ ಇಷ್ಟವಾಗಿದ್ದ ಚೌತಿಹಬ್ಬ ಮತ್ತು ಗಣೇಶ ಈಗೀಗ ಭಯ  ಹುಟ್ಟಿಸುತ್ತಿವೆ. ಈಗ ಹೇಳಿ ನಾನು ಆ ಮಕ್ಕಳ ಕಾಣಿಕೆ ಡಬ್ಬಿಗೆ ದುಡ್ಡು ಹಾಕಿದಿದ್ದದ್ದು ಸರಿ ತಾನೆ?

ಏನಾದರಾಗಲಿ ಸದ್ಯಕ್ಕಂತೂ ನಾವು ಇದರಿಂದ ತಪ್ಪಿಸಿಕೊಂಡು ಊರಿಗೆ ಹೋಗಿ ಶಾಂತಿ ನೆಮ್ಮದಿಯಿಂದ ಹಬ್ಬ ಆಚರಿಸುತ್ತೇವೆ . ಹಾಗಾಗಿ ನಾಲ್ಕುದಿನ ಮೊದಲೇ ಗಣೇಶನ ಹಬ್ಬದ ಶುಭಾಶಯಗಳು .

12 comments:

 1. ಅಯ್ಯೋ ಈ ಗಣಪತಿ ಹಬ್ಬ ಬಂದ್ರೆ ಗಲ್ಲಿ ಗಲ್ಲಿನಲ್ಲೆಲ್ಲಾ ಕೂರುಸ್ತಾರೆ... ಅದು ಎಂತವರು ಪೋಲಿಪಕಾಳಿಗಳೇ ಗಣಪತಿ ಹಬ್ಬ ಮಾಡೋಕ್ಕೆ ನಿಲ್ಲೋದು ಸಂಜೆ ಆದ್ರೆ ಕುಡಿದು ಡಕ್ಕಣ್ಣಕ್ಕ ಡಕ್ಕಣಕ್ಕ ಅಂತಾ ತೂಗಾಡ್ತಾರೆ... ದೇವರ ಪೂಜೆ ಹಬ್ಬ ಅನ್ನುವುದಕ್ಕೆ ಬೆಲೆಯೇ ಇಲ್ಲ

  ReplyDelete
 2. ನಮ್ಮ ಗಲ್ಲಿಯ ಗಣೇಸೋಷ್ತವ ನೆನಪಾಯ್ತು ಕಣ್ರೀ..

  ಹೀಗೇ ನಡಿತದೆ...!

  ಲೋಕಮಾನ್ಯ ತಿಲಕರು ಆಚರಿಸಿದ ಉದ್ದೇಶವೇ ಬೇರೆ ಇತ್ತು..
  ಜನ ಸಂಘಟನೆ
  ಮತ್ತು ಸ್ವಾತಂತ್ರ್ಯದ ಬಗೆಗೆ ತಿಳುವಳಿಕೆಗಾಗಿ...

  ಸಕಾಲಿಕ ಲೇಖನ..
  ಅಭಿನಂದನೆಗಳು ವಾಸ್ತವಿಕತೆಗಾಗಿ..

  ReplyDelete
  Replies
  1. ಗಣೇಶೋ"ತ್ಸ"ವ !

   ದಯವಿಟ್ಟು ಕನ್ನಡವನ್ನು ಸರಿಯಾಗಿ ಬಳಸಿ.....
   ಧನ್ಯವಾದ :)

   Delete
  2. ಇಲ್ಲಿ ಲೇಖಕಿ ಹಾಗೂ ಪ್ರತಿಕ್ರಿಯೆ ನೀಡಿದವರು ಉಪಯೋಗಿಸಿದ ಭಾಷೆ ಈ ಗಲ್ಲಿ ಗಲ್ಲಿಯಲ್ಲಿ ಕನ್ನಡವನ್ನು ಚಾಕುವಿಂದ ಕೊಳ್ಳುವ ಭಾಷೆಯ ಒಂದು ಅನುಕು ರೂಪ ಅಷ್ಟೇ. ಅವರ ಕನ್ನಡ ಭಾಷೆಯ ಬಳಕೆ, ಸದ್ಭಳಕೆ ಬಗ್ಗೆ ಅನುಮಾನ ಬೇಡ

   Delete
 3. ನಮ್ಮಲ್ಲಿಯೂ ಸಹ ಇಂತಹ ಪೋಲಿ ಹುಡುಗರ ಕಾಟ ಇದೆ. ಹಬ್ಬದ ಐದು ದಿನಗಳಲ್ಲಿ ಕರ್ಕಶ ಸಂಗೀತ, ಪುಂಡಗುಣಿತ ಇವನ್ನು ಸಹಿಸಬೇಕು. ದುಡ್ಡು ಕೇಳುವುದು ತಮ್ಮ ಹಕ್ಕು ಎನ್ನುವಂತೆ, ಏನೇನೂ ವಿನಯ ತೋರಿಸದೆ ವಸೂಲಿ ಮಾಡುತ್ತಾರೆ. ಇದು ಪ್ರಜಾಪ್ರಭುತ್ವ ಅಲ್ವೆ?

  ReplyDelete
 4. ನವಿರಾದ ಬರವಣಿಗೆ ... ನನ್ನ ಬೆಂಗಳೂರಿನ ದಿನಗಳನ್ನು ನೆನಪಿಸುವಂತಿತ್ತು... !

  ಶೀರ್ಷಿಕೆಯಲ್ಲಿ ಗಣೇಶೋ"ಸ್ತ"ವ ಅಂತ ಬರೆದಿದ್ದೇರಲ್ಲ.! ಅದು ಗಣೇಶೋ"ತ್ಸ"ವ ಅಲ್ಲವೇ !?
  ಅದು ಉತ್ಸವ ; ಉಸ್ತವ ಅಲ್ಲ...!
  ಭಾಷೆಯ ಬಳಕೆಯಲ್ಲಿ ಕಾಳಜಿ ಇರಲಿ...
  ನಮ್ಮ ಕನ್ನಡವನ್ನು ಅಂದವಾಗಿ ಬಳಸುವುದು ನಾವು ನಮ್ಮ ಭಾಷೆಗೆ ಕೊಡುವ ಗೌರವ...

  ಹೀಗೇ ಬರೆಯುತ್ತಿರಿ... ಆಭಿನಂದನೆಗಳು... :)

  ReplyDelete
  Replies
  1. Anonymous ಅವರೆ ಉಸ್ತವ ಎಂದು ಬಳಸಿದ್ದು ನನಗೆ ಗೊತ್ತಿಲ್ಲದೆ ಎಂದುಕೊಂಡಿರೆ? ಹಾಗೆಯೆ ಇದರಲ್ಲಿ ಇನ್ನೂ ಅನೇಕ ತಪ್ಪು ಶಬ್ದಗಳಿವೆ ( ಎಚ್ಚಿನ ಸಂಕ್ಯೆ , ಬಾಗವಯಿಸಬೇಕಾಗಿ ಇತ್ಯಾದಿ) ಅದನ್ನ ಏಕೆ ಗಮನಿಸಲಿಲ್ಲ ? ಇಲ್ಲಿ ಮೈಕ್ ಹಿಡಿದು ಮಾತನಾಡುವವರು ಹೆಚ್ಚಾಗಿ ಹೀಗೆ ಮಾತನಾಡೋದು ಎಂದು ಸೂಚಿಸುವುದಕ್ಕಾಗಿ ವ್ಯಂಗ್ಯವಾಗಿ ಅದನ್ನು ಬಳಸಿದ್ದೇನೆ .

   Delete
 5. ಅನಾಮಧೇಯ ಹೇಳಿದ ಅಭಿಪ್ರಾಯನೇ ನಂಗೂ ಮೂಡಿತ್ತು.. ಉತ್ಸವ, ಉಸ್ತವ ಅಲ್ಲ ಅಂತ..
  ನೀವು ಹೇಳೋ ಮಾತು ೧೦೦% ಸರಿ :-)

  ReplyDelete
 6. ಕನ್ನಡ ಭಾಷೆಯ ಕುತ್ತಿಗೆ ಪಟ್ಟಿ ಹಿಡಿದು ದುಡಿಸಿಕೊಳ್ಳುವ ಈ ಕೆಲ ಕನ್ನಡ ಕಲಿಗಳು ಮಾಡುವ ಅನಾಹುತ ಈ ಉತ್ಸವಗಳು. ಯಾವುದೋ ಕಾರಣಕ್ಕೆ, ಯಾರದೋ \ಪ್ರತಿಷ್ಠೆಗಾಗಿ ನಡೆಸುವ ಈ ಉತ್ಸವಗಳಿಂದ ಭಾಷೆ ಬೆಳೆಯುವುದಿರಲಿ ಉಸಿರುಗಟ್ಟದೆ ಹೋದರೆ ಅದೇ ದೊಡ್ಡ ಕೊಡುಗೆ. ಬಾಲ್ಯದಿಂದ ಇಲ್ಲಿಯ ತನಕ ಒಮ್ಮೆ ಹೋಗಿ ಬಂದಂತೆ ಭಾಸವಾಯಿತು. ಸುಂದರ ಲೇಖನ

  ReplyDelete
 7. ಅಯ್ಯೋ ಸುಮಕ್ಕ ಇಲ್ಲೂ ಇದೆ ಕತೆ! ಆ ಕೆಟ್ಟ ಮೈಕು .., ಕೆಟ್ಟ ಸಿನಿಮ ಹಾಡುಗಳು .., ಡಕ್ ನಕಾ .. , ತಲೆ ಚಿಟ್ಟು ಹಿಡಿತಿದೆ! ..ಗಣೇಶ ಹಬ್ಬಕ್ಕೆ ಒಳ್ಳೆಯ ಲೇಖನ .

  ReplyDelete
 8. ನಲ್ಮೆಯ ಸುಮ ಅವರೆ,

  ನಿಮ್ಮ ಬರಹ ತುಂಬಾ ಚೆನ್ನಾಗಿದೆ. ಆದರೆ ನನ್ನ ಒಂದೆರಡು ಸಲಹೆ ಗಮನಿಸಿ.

  ೧. ಗಣೇಶೋತ್ಸವ vs ಗಣೇಶೋತ್ಸವ - ಇದನ್ನು ತಾವು ವ್ಯಂಗವಾಗಿ ಬಳಸಿರುವುದರ ಬಗ್ಗೆ ನನ್ನದೇನೂ ತಕರಾರು ಇಲ್ಲ .. ಆದರೆ ’ಉಸ್ತವ’ ಯಾಕೆ ತಪ್ಪು ಹಾಗೂ ’ಉತ್ಸವ’ ಯಾಕೆ ಸರಿ? ಒಮ್ಮೆ ಯೋಚಿಸಿ ನೋಡಿ. ಬಡವರು/ಹಳ್ಳಿಗಾಡಿನ ಜನ ಬಳಸುವ ಭಾಷೆಯ ಬಗೆಗೆ ಮುಂದುವರಿದ/ಹೊಟ್ಟೆತುಂಬಿದ ಜನರ ತಾತ್ಸಾರ ಮನೋಭಾವದ ಸ್ಟೀರಿಯೋಟೈಪ್ ಅನ್ನು ಇದು ಸೂಚಿಸುವುದಿಲ್ಲವೇ? ನಾವುಗಳು ಓದಿಕೊಂಡು-ಕಲಿತುಕೊಂಡಿದ್ದನ್ನೇ ಅವರೂ ಮಾತನಾಡಬೇಕು, ಅದು ಮಾತ್ರ ಸರಿ .. ಇದು ಯಾವ ನ್ಯಾಯ. ಭಾಷೆ ಎಂದಿಗೂ ಮೊದಲು ನಾಲಿಗೆಯಲ್ಲಿ ನಲಿದು ಆಮೇಲೇನೇ ಬರಹಕ್ಕೆ ಇಳಿಯುವುದು ಅಲ್ಲವೇ? ನನ್ನ ಪ್ರಕಾರ ಬಡವರು-ಓದುಬರಹ ತಿಳಿಯದವರು ಬಳಸುವ ಭಾಷೆಯೇ ನಿಜವಾದ ಕನ್ನಡ, ನಮ್ಮಂತವರದೆಲ್ಲಾ ಬರೀ ಮೇಲರಿಮೆಯ ತಪ್ಪುಕಲ್ಪನೆಯಿಂದ ಕೂಡಿದ ಬರಿಗನ್ನಡ. ವಿವರಗಳಿಗೆ ನೋಡಿ : honalu.net, ellarakannada.org

  ೨. ಬೀದಿಬದಿಯ ಹುಡುಗರಿಗೆ ವರ್ಷದಲ್ಲಿ ಕೆಲವು ಸರಿ ದೇಣಿಗೆ ನೀಡುವುದಕ್ಕೆ ಇಷ್ಟು ಪೇಚಾಡುವ ನಾವುಗಳು, ಹೊರನಾಡಿನ ಕಂಪೆನಿಗಳೊಡನೆ ಷಾಮೀಲಾಗಿ ಲಕ್ಷಲಕ್ಷ ದುಡಿಯುತ್ತಾ, ಮಲ್ಟಿಪ್ಲೆಕ್ಸುಗಳಲ್ಲಿ ಪಿಜ್ಜಾಬರ್ಗರು ಅಂಗಡಿಗಳಲ್ಲಿ, ಡಿಪಾರ್ಟುಮೆಂಟು ದುಕಾನುಗಳಲ್ಲಿ .. ಒಂದಕ್ಕೆರಡು ಬೆಲೆಮಾಡಿ ಸುಲಿದರೂ ಬಾಯಿ ಇನ್ನೊಂದು ಮುಚ್ಚಿಕೊಂಡು ಅವರಿಗೆ ದುಡ್ಡು ತತ್ತು ಬರುವ ನಾವುಗಳು .. ನಮ್ಮಿಂದಲೇ ನಮ್ಮ ಸ್ವಾರ್ಥದಿಂದಲೇ ಬಡವರಾಗಿ ಉಳಿದಿರುವ ನಮ್ಮ ಅಣ್ಣತಮ್ಮಂದಿರ ಬಗೆಗಿನ ನಮ್ಮ ತಾತ್ಸಾರ ನೋಡಿ ಕನ್ನಡ ತಾಯಿ ಕಣ್ಣೀರು ಸುರಿಸುತ್ತಿದ್ದಾಳೆ.

  ನನ್ನಿ
  ಹರೀಶ

  ReplyDelete
 9. ಹರೀಶ ಅವರೆ ನಿಮ್ಮ ಸಲಹೆಗಳನ್ನು ಗಮನಿಸಿದೆ.
  ೧ . ಮೊದಲನೆಯದಾಗಿ ನಾನೊಂದು ವಿಚಾರವನ್ನು ತಮ್ಮ ಗಮನಕ್ಕೆ ತರಲು ಬಯಸುತ್ತೇನೆ. ಹಳ್ಳಿಗರು , ಬಡವರು , ಅನಕ್ಷರಸ್ತರ ಭಾಷೆಯ ಬಗ್ಗೆ ನನಗೆ ಗೌರವವಿದೆ. ಅದನ್ನು ನಾನೆಲ್ಲಿಯೂ ಟೀಕಿಸಿಲ್ಲ. ನಾನೂ ಸಹ ಹಳ್ಳಿಯಲ್ಲೇ ಹುಟ್ಟಿ ಬೆಳೆದವಳು. ಇಂದು ಕನ್ನಡವೇನಾದರೂ ಉಳಿದಿದ್ದರೆ ಅದು ಹಳ್ಳಿಗಳಲ್ಲೇ ಹೊರತು ಬೆಂಗಳೂರಿನಲ್ಲಿ ಖಂಡಿತಾ ಅಲ್ಲ. ನಾನಿಲ್ಲಿ ಬರೆದಿರೋದು ಬೆಂಗಳೂರಿನ ಗಲ್ಲಿ ಗಲ್ಲಿಗಳಲ್ಲಿ ನಡೆಯುವ ಗಶೇಸೋತ್ಸವದ ಬಗ್ಗೆ. ಹಾಗೂ ಅದನ್ನು ನಡೆಸುವವರ ಸಂಸ್ಕೃತಿಯ ಬಗ್ಗೆ . ಹುಟ್ಟು ಕನ್ನಡ ಹೋರಾಟಗಾರರಂತೆ ಆವೇಶ ತೋರುವ ಇವರುಗಳು ನೀವು ಹೇಳುವಂತೆ ಅನಕ್ಷರಸ್ತರೂ ಅಲ್ಲ , ಬಡವರೂ ಆಗಿರುವುದಿಲ್ಲ . ಆಡು ಮಾತು ಹೇಗೇ ಇರಬಹುದು , ಆದರೆ ಸಾರ್ವಜನಿಕವಾಗಿ ಯಾವುದೇ ಭಾಷೆಗೆ ಒಂದು ನಿಯಮ ಇರುತ್ತದಲ್ಲ . ಅದನ್ನು ಅನುಸರಿಸಿದರೆ ಗೊತ್ತಿಲ್ಲದವರೂ ಕಲಿಯುವಂತಾಗುವುದಿಲ್ಲವೆ? ಶತಮಾನಗಳಿಂದ ನಾವು ಹೀಗೆಯೇ ಮಾತನಾಡಿದ್ದೇವೆ . ಅದಕ್ಕೆ ಈಗಲೂ ಹಾಗೆಯೇ ಮಾಡುತ್ತೇವೆಂಬುದು ಸರಿಯೆ? ಕೇವಲ ಸಿನೆಮಾ ಹಾಡುಗಳಲ್ಲಿ ಮಾತ್ರ ನಮ್ಮ ಕನ್ನಡ ಸಂಸ್ಕೃತಿ ಇದೆಯೆ? ಇದನ್ನು ನೋಡಿ ಆ ಗಣಪ ಮತ್ತು ನಮ್ಮ ಕನ್ನಡ ತಾಯಿ ಸಂತೋಷ ಪಡಬೇಕೆ?
  ೨ ಅಪಾತ್ರದಾನ ಯಾವತ್ತೂ ಒಳ್ಳೆಯದಲ್ಲ , ಅದು ಎಷ್ಟು ಚಿಕ್ಕ ಮೊತ್ತವೇ ಆಗಿರಲಿ ಕೊಡುವಾಗ ಅದು ಯಾವ ಕೆಲಸಕ್ಕೆ ಉಪಯೋಗಿಸಲ್ಪಡುತ್ತಿದೆ ಎಂದು ಯೋಚಿಸಬೇಕಲ್ಲವೆ? ಬೀದಿ ಬದಿಯ ಮಕ್ಕಳು ತಮ್ಮ ಹೊಟ್ಟೆಗಾಗಿಯೋ , ಬಟ್ಟೆಗಾಗಿಯೋ , ಓದಿಗಾಗಿಯೋ ಹಣ ಕೇಳಿದ್ದರೆ ಹಿಂದೆ ಮುಂದೆ ಯೋಚಿಸದೆ ಹಣ ಕೊಡುತ್ತಿದ್ದೆ. ಆದರೆ ಸಾರ್ವಜನಿಕವಾಗಿ ಗಣಪತಿ ಇಡುವುದು , ನಾಲ್ಕು ದಿನಗಟ್ಟಲೆ ಇಡೀ ಗಲ್ಲಿಗೆ ಕೇಳಿಸುವಷ್ಟು ಜೋರಾಗಿ ಮೈಕ್ ಹಾಕೋದು , ಆಮೇಲೆ ಗಣೇಶ ವಿಸರ್ಜನೆ ಹೆಸರಿನಲ್ಲಿ ಕುಡಿದು ಕುಣಿಯೋದು ಇವೆಲ್ಲವುಗಳ ಅವಶ್ಯಕತೆ ಈಗಿನ ಸಮಾಜಕ್ಕೆ ಇದೆಯೆ? ಏನು ಸಾಧಿಸುತ್ತಾರೆ ಇದರಿಂದ ? ಇದರಿಂದ ಯಾವ ಬಡವರು ಉದ್ಧಾರ ಆಗುತ್ತಾರೆ ಸ್ವಾಮಿ? ಕನ್ನಡತಾಯಿ ಇಂತಹ ಅಸಂಭದ್ದವನ್ನು ನೋಡಿಯೂ ಕಣ್ಣೀರು ಸುರಿಸುತ್ತಾಳೆ.

  ReplyDelete