22 Oct 2013

ಟೆಂಟ್ ಜೇಡರಬಲೆ

ಅದು ಅಕ್ಕ ಬೆಳೆಸಿದ ಪುಟ್ಟ ಕೈತೋಟ . ಅಲ್ಲಿ ಇಷ್ಟೇ ಜಾಗದಲ್ಲಿ ಪುದಿನಾ, ಟೊಮೊಟೊ , ಬಸಳೆ , ಸೂಜಿಮೆಣಸು , ಹರಿವೆಸೊಪ್ಪು , ಬೆಂಡೆ ಮೊದಲಾದ ತರಕಾರಿ ಗಿಡಗಳೂ , ದಾಸವಾಳ , ಗುಲಾಬಿ , ಸೇವಂತಿಗೆಯಂತಹ ಹೂವಿನ ಗಿಡಗಳೂ ಇವೆ. ಅಲ್ಲೇ ನನಗೆ ಈ ಸುಂದರ ಬಲೆ ಕಾಣಿಸಿದ್ದು.



ದಾಸವಾಳ ಗಿಡದ ಎರಡು ಕೊಂಬೆಗಳ  ನಡುವೆ ಈ  ಜೇಡರ ಬಲೆ ಇತ್ತು. ಮೊದಲೆಲ್ಲ ಜೇಡರಬಲೆಯೆನ್ನೇ ನೋಡಿರಲಿಲ್ಲವೆಂದಲ್ಲ .....ಇಂತಹ ವಿಚಿತ್ರ ಆಕಾರದ ಬಲೆಯನ್ನು ಇದುವರೆಗೂ ಗಮನಿಸಿರಲಿಲ್ಲ. ತೋಟದಲ್ಲಿಯೋ ಮನೆಯ ಮೂಲೆಯಲ್ಲಿಯೋ ಇರುವ ಬಲೆಗಳನ್ನು ನಾನೂ ಗಮನಿಸಿದ್ದೇನೆ . ಅವೆಲ್ಲ ವೃತ್ತಾಕಾರವಾಗಿಯೋ ಅಥವಾ ನಿರ್ದಿಷ್ಟ ಆಕಾರವಿಲ್ಲದ ಎಳೆಗಳ ಗುಂಪಂತೆಯೋ ಇರುವ ಬಲೆಗಳು. ಆದರಿದು ಬೇರೆಯದೇ ರೀತಿ. ದೊಡ್ಡದಾಗಿ ಹರಡಿಕೊಂಡಿರುವ ಬಲೆ , ಕೆಳಭಾಗದಲ್ಲಿ  ಟೆಂಟ್  ಕಟ್ಟಿದಂತಿರುವ ಆಕಾರ . ಆ ಟೆಂಟ್ ಆಕಾರದ ಬಲೆಯಲ್ಲಿ ಎಳೆಗಳು ಅದೆಷ್ಟು ಶಿಸ್ತಾಗಿ ಜೋಡಿಸಲ್ಪಟ್ಟಿವೆಯೆಂದರೆ ಸೊಳ್ಳೆಪರದೆಯೊಂದನ್ನು ಕಟ್ಟಿದಂತೆ ಕಾಣುತ್ತಿತ್ತು .ಬಲೆಯ ಮಧ್ಯದಲ್ಲಿ  ಒಂದರ ಕೆಳಗೊಂದರಂತೆ ಜೋಡಿಸಿಟ್ಟಂತಿರುವ ಮೊಟ್ಟೆಯಂತಹ ಆಕಾರದ ವಸ್ತು. ಜೇಡ ಆ  ಟೆಂಟ್ ಆಕಾರದ ಬಲೆಯಲ್ಲಿ  ಕುಳಿತಿತ್ತು. ಕಪ್ಪು ಬಿಳಿ ತಿಳಿಹಸಿರು ಬಣ್ಣಗಳ ಚಿಕ್ಕ ಗಾತ್ರದ ಜೇಡವದು.




ಇವು Cyrtophora ಎಂಬ ಪ್ರಜಾತಿಗೆ ಸೇರಿದ ಜೇಡಗಳು .   ಹೆಚ್ಚಾಗಿ ಗಿಡಮರಗಳಿರುವಲ್ಲಿ ಕಂಡುಬರುತ್ತದೆ. ಇವು ನಿರ್ಮಿಸುವ ಈ ವಿಶಿಷ್ಟ ಬಲೆ ಉಳಿದ ಜೇಡಗಳ ಬಲೆಯಂತೆ ಅಂಟುವ ಗುಣ ಹೊಂದಿರುವುದಿಲ್ಲವಂತೆ . ಬಲೆಯ ಮಧ್ಯದಲ್ಲಿ ತನ್ನ ಮೊಟ್ಟೆಗಳ ಕೋಶಗಳನ್ನು ಇಟ್ಟು ರಕ್ಷಿಸುತ್ತವೆ.   ಒಣಗಿದ ಎಲೆ , ಹೂವು ಇತ್ಯಾದಿ ಸಸ್ಯ ಕಸ ಬಲೆಯ ಮೇಲೆ ಬಿದ್ದರೆ ಉಳಿದ ಜೇಡಗಳಂತೆ ಅದನ್ನು ತೆಗೆದೆಸೆದು ಬಲೆಯನ್ನು ಸ್ವಚ್ಛಗೊಳಿಸಿಕೊಳ್ಳುವ ಗೋಜಿಗೆ ಹೋಗದೆ ಅದನ್ನು ಉಳಿಸಿಕೊಂಡು ಅದರ ಮರೆಯನ್ನೆ ತನ್ನ ಅಡಗುತಾಣವನ್ನಾಗಿ ಮಾಡಿಕೊಳ್ಳಬಲ್ಲ ಜಾಣ ಜೇಡಗಳಿವು !


4 comments:

  1. ಭೂರಮೆಯ ಮಡಿಲಲ್ಲಿ ಇಂಥವೆಷ್ಟೋ ಸೋಜಿಗಗಳು.....
    ಆಸ್ವಾದಿಸುವ ಮನಸ್ಸಿರಬೇಕಷ್ಟೇ....

    ಚಂದದ ಚಿತ್ರ... nice one...

    ReplyDelete
  2. ಜೇಡರ ಬಲೆ..ತೋಟದಲ್ಲಿ ಮುಖಕ್ಕೆ ಗೊತ್ತಿಲ್ಲದಂತೆ ಮೆತ್ತುತ್ತಿದ್ದ ನೆನಪಾಯ್ತು..

    ReplyDelete
  3. ಇಂತಹ ಚೆಲುವಾದ ಬಲೆಯನ್ನು ನಾನು ನೋಡಿರಲಿಲ್ಲ. ಧನ್ಯವಾದಗಳು.

    ReplyDelete
  4. ವಾಹ್! ಇದೊಂದು ಕರಕುಶಲತೆ ಕಲಿತ ಜೇಡ! ತುಂಬಾ ಚೆನ್ನಗಿದೆ ಚಿತ್ರ ಹಾಗು ಮಾಹಿತಿ... ನನ್ನ ಬ್ಲಾಗಿಗೊಮ್ಮೆ ಭೇಟಿ ನೀಡಿ...
    http://poemsofpradeep.blogspot.com

    ReplyDelete