3 Dec 2013

ಸಿಕಾಡ - ಜೀರುಂಡೆ

ನಮ್ಮ ಪಶ್ಚಿಮಘಟ್ಟದ ವೈಶಿಷ್ಟ್ಯವೇ ಹೀಗೆ . ಅಲ್ಲಿ  ಸುಮ್ಮನೆ ಮನೆಯಂಗಳದಲ್ಲಿ ಒಂದು ಸುತ್ತು ಹಾಕಿದರೂ ಸಾಕು , ಅನೇಕ ವಿಸ್ಮಯಗಳು ಕಣ್ಣಿಗೆ ಬೀಳುತ್ತವೆ. ಮಳೆಗಾಲದಲ್ಲಿ ಊರಿಗೆ ಹೋಗಿದ್ದಾಗಲೂ  ಹೀಗೇ ಆಯಿತು . ಸುಮ್ಮನೇ ಅಂಗಳದ ಪುಟ್ಟ ಕೈತೋಟದಲ್ಲಿ ಕ್ಯಾಮರದೊಂದಿಗೆ ಅಡ್ಡಾಡುತ್ತಿದ್ದೆ . ಆಕಾಶ ದುಖಿಃಸಿ ಅಳುತ್ತಿದೆಯೇನೋ ಎಂಬಂತೆ ಸುರಿಯುವ   ಜುಲೈ-ಆಗಸ್ಟ್ ತಿಂಗಳ ಮಲೆನಾಡಿನ ಮಳೆಯಲ್ಲಿ , ಮಾನವರೂ ಸೇರಿದಂತೆ ದೊಡ್ಡ ದೊಡ್ಡ ಪ್ರಾಣಿಗಳೆಲ್ಲ ಆದಷ್ಟು ಬೆಚ್ಚನೆಯ ಗೂಡು ಸೇರಿಕೊಳ್ಳುತ್ತವೆ. ಆದರೆ ಅನೇಕ ಹುಳ ಹಪ್ಪಟೇ ಕೀಟಗಳಿಗೆ , ಹಾವಸೆ ಕಳೆ ಗಿಡ ಗಂಟಿಗಳಿಗೆ , ಅದು ವರುಷಗಳ ನಿದ್ರೆ ಮುಗಿಸಿ ಹೊರಬರುವ , ಸಂಗಾತಿಗಳನ್ನು ಅರಸಿ ತಮ್ಮ ಸಂತತಿ ಮುಂದುವರೆಸುವ ಸುಸಮಯ .


ದಾಸವಾಳ ಗಿಡದ ರೆಂಬೆಯೊಂದರ ಎಲೆಯ ಮೇಲೆ ಇದು ಕಾಣಿಸಿತು . ಏನಿರಬಹುದು? ಓಡುಹುಳದಂತಹ ಕಂದು ಬಣ್ಣದ ಕೀಟದಂತೆ ಕಾಣಿಸಿತು .   .....  ಹುಡುಕಿದಾಗ , ಅದೇ ಗಿಡದಲ್ಲಿ ಇನ್ನೂ ನಾಲ್ಕಾರು ಇಂತಹುದೇ ಆಕೃತಿ ಕಣ್ಣಿಗೆ ಬಿತ್ತು ......ನೋಡಿದರೆ ಜೀವವಂತೂ ಇದ್ದಂತಿಲ್ಲ , ಹಾಗಾದರೆ ಬೇರೆ ಕೀಟ , ಜೇಡ ಏನಾದರೂ ಒಳಭಾಗವನ್ನೆಲ್ಲ ತಿಂದು ಉಳಿಸಿದ ಹೊರಚರ್ಮವೆ? ಹಾಗಾಗಿದ್ದರೆ ಮುದ್ದೆಯಂತಿರುತ್ತಿತ್ತೇ ಹೊರತು ಇಷ್ಟು ಸರಿಯಾದ ಆಕೃತಿ ಇರುತ್ತಿರಲಿಲ್ಲ. ಯಾವುದೋ ಕೀಟದ molting ಆದಾಗ ಉಳಿದ exoskeleton (ಹೊರಚರ್ಮ) ಇರಬಹುದೆನ್ನಿಸಿತು......ಯಾವುದಿರಬಹುದು?


ನಿಧಾನವಾಗಿ ಎಂದೋ ಓದಿದ ನೆನಪಾಯ್ತು .... ಇದು ಸಿಕಾಡ ...ಹೌದು ಪೂರ್ಣಚಂದ್ರ ತೇಜಸ್ವಿಯವರ " ನಡೆಯುವ ಕಡ್ಡಿ ಹಾರುವ ಎಲೆ " ಪುಸ್ತಕದಲ್ಲೂ ಇದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ . ಖುಷಿಯಾಗಿ ಅದನ್ನು ತೆಗೆದುಕೊಂಡುಬಂದದ್ದಾಯ್ತು. ಮಗಳು ಅದನ್ನು ತನ್ನ ಶಾಲೆಗೆ ತೆಗೆದುಕೊಂಡು ಹೋಗಿ ವಿಜ್ಞಾನ ಶಿಕ್ಷಕಿಗೆ ತೋರಿಸಿ , ಮೆಚ್ಚುಗೆ ಪಡೆದಳು .


ಈ ಸಿಕಾಡ ಅಥವಾ ಜೀರುಂಡೆಗಳದು ವಿಸ್ಮಯಕರವಾದ ಜೀವನ ಚಕ್ರ. ಹೆಚ್ಚಾಗಿ ಗಿಡ ಮರಗಳಲ್ಲೇ ವಾಸಿಸುವ ಇವುಗಳು ಸಸ್ಯರಸವನ್ನು ಹೀರುತ್ತವೆ. ಗಂಡು ಕೀಟವು ತನ್ನ ಹಿಂಭಾಗದಲ್ಲಿರುವ "ಟಿಂಬಲ್ಸ್" ಎಂಬ ಅಂಗದಿಂದ ವಿಶಿಷ್ಟವಾದ ಶಬ್ದ ಹೊರಡಿಸುತ್ತದೆ. ಈ ಅಂಗವು ನಮ್ಮ ತಬಲಾ , ಮೃದಂಗ ಮೊದಲಾದ ಚರ್ಮವಾದ್ಯಗಳಂತೆ ಕೆಲಸ ಮಾಡುತ್ತದೆ. ಆದರೆ ಕೇಳಲು ಇದು ಹಕ್ಕಿಗಳ ಹಾಡಿನಂತಿರುತ್ತದೆ . ಸಂಗಾತಿಯನ್ನು ಆಕರ್ಷಿಸುವುದು ಈ ಕೂಗಿನ ಮುಖ್ಯ ಉದ್ದೇಶ. ಹೆಣ್ಣು ಕೀಟವು ಮರಗಳ ತೊಗಟೆಯ ಬಿರುಕಿನಲ್ಲಿ ಮೊಟ್ಟೆಗಳನ್ನಿಡುತ್ತದೆ. ಸಂತಾನೋತ್ಪತ್ತಿ ಕೆಲಸವಾದೊಡನೆ ಈ ಕೀಟಗಳು ಸಾಯುತ್ತವೆ.

ಮೊಟ್ಟೆಯು ಒಡೆದು ಹೊರಬರುವ ಮರಿಗೆ ರೆಕ್ಕೆಗಳಿರುವುದಿಲ್ಲ. ಅದು ಮರವನ್ನಿಳಿದು ನಿಧಾನವಾಗಿ ಮಣ್ಣಿನಲ್ಲಿರುವ ಮರದ ಬೇರನ್ನು ತಲುಪುತ್ತವೆ. ಅಲ್ಲಿ ಬೇರಿನ ರಸವನ್ನು ಕುಡಿಯುತ್ತಾ ನಿಧಾನವಾಗಿ ಬೆಳೆಯುತ್ತವೆ. ಸುಮಾರು ಎರಡು - ಮೂರು ವರ್ಷಗಳ ಕಾಲ ಅಲ್ಲೇ ಉಳಿಯುತ್ತವೆ. ಉತ್ತರ ಅಮೇರಿಕಾದ ಕೆಲ ಸಿಕಾಡಗಳು ಹದಿಮೂರು - ಹದಿನೇಳು ವರ್ಷಗಳಷ್ಟು ದೀರ್ಘಾವಧಿಯವರೆಗೆ ಮರಿಗಳಾಗಿ ನೆಲದೊಳಗೇ ಇರುತ್ತವಂತೆ!!
ಬೆಳೆದ ಮರಿಗಳು ಮತ್ತೆ ಮಣ್ಣಿನಿಂದ ಹೊರಬಂದು ಮರಗಳನ್ನೇರುತ್ತವೆ. ಯಾವುದಾದರೊಂದು ರೆಂಬೆಯನ್ನೋ ಎಲೆಯನ್ನೋ ಮುಂಗಾಲುಗಳಿಂದ ಗಟ್ಟಿಯಾಗಿ ಹಿಡಿದು ಕುಳಿತುಕೊಳ್ಳುತ್ತವೆ. ಆಗ ಆ ಮರಿಯ ಬೆನ್ನಿನ ಚರ್ಮ ನಿಧಾನವಾಗಿ ಬಿರಿಯುತ್ತದೆ. ಬಿರಿದು ಬಾಯಿಬಿಟ್ಟ ಚರ್ಮದೊಳಗಿಂದ ರೆಕ್ಕೆಯುಳ್ಳ ಜೀರುಂಡೆ ಹೊರಬರುತ್ತದೆ.


ಆಗ ಆ ಜೀರುಂಡೆಯ ಹೊರಚರ್ಮವು ಹೀಗೆ ಗಿಡಮರಗಳಿಗೆ ಅಂಟಿಕೊಂಡಂತೆ ಉಳಿಯುತ್ತದೆ.
ಸುಮಾರು ಎರಡೂವರೆ ಸಾವಿರ ಜಾತಿಯ ಸಿಕಾಡಗಳಿವೆಯೆನ್ನುತ್ತಾರೆ ಜೀವಶಾಸ್ತ್ರಜ್ಞರು. ಇವುಗಳು ಇಷ್ಟು ದೀರ್ಘಕಾಲ ಮಣ್ಣಿನಲ್ಲಿ ಅಡಗುವುದು ಒಂದು ಬಗೆಯ ರಕ್ಷಣಾವಿಧಾನವಂತೆ. ಇವುಗಳ ಪ್ರಿಡೇಟರ್ ಆದ Cicada killer wasp ಗಳಿಂದ ತಪ್ಪಿಸಿಕೊಳ್ಳುವ ಉಪಾಯವಿದು ಎನ್ನುತ್ತಾರೆ  ವಿಜ್ಞಾನಿಗಳು . 
ಹದಿನೇಳು ವರ್ಷಗಳ ಕಾಲ ಭೂಮಿಯಲ್ಲಿ ಅಡಗುವ ಸಿಕಾಡಗಳ ಬಗ್ಗೆ ಇಲ್ಲೊಂದು ಉತ್ತಮ ವಿಡಿಯೋ ಇದೆ ....ಗಮನಿಸಿ   https://www.youtube.com/watch?v=tjLiWy2nT7U

6 comments:

  1. ಜೀರುಂಡೆಗಳ ಬಗ್ಗೆ ತುಂಬಾ ಒಳ್ಳೆಯ ಮಾಹಿತಿ ನಿಮ್ಮ ಲೇಖನದಲ್ಲಿದೆ.

    https://www.facebook.com/groups/kannada3K/permalink/483794418371780/

    ReplyDelete
  2. ಬೀಟ್ಲ್-ಜೀರುಂಡೆ, ಮಾಹಿತಿ ಚನ್ನಾಗಿದೆ ಸುಮಾವ್ರೆ.. ಕೀಟ ಜಾತಿಯಲ್ಲಿ ಹಲವಾರು ವಿಸ್ಮಯಗಳು ಇಲ್ಲದಿಲ್ಲ. ಕೀಟಗಳ ಹಲವಾರು ಉಪಕಾರಿ ಗುಣಗಳನ್ನು ವಿಜ್ಞಾನಿಗಳು ಕಂಡುಕೊಂಡು ಅವನ್ನು ಸ್ವಾಭಾವಿಕ ನಿಯಂತ್ರಕಗಳಂತೆ ಸಸ್ಯ ರೋಗಕಾರಕಗಳನ್ನು ಜೈವಿಕ ವಿಧಾನಗಳಿಂದ ನಿಯಂತ್ರಿಸಲಾಗುತ್ತಿದೆ. ಹೀಗಾಗಿ ಔಷಧಿ/ರಾಸಾಯನಿಕ ಸಂಯುಕ್ತಗಳ ಬಳಕೆಯನ್ನು ಕಡಿಮೆ ಮಾಡಬಹುದಾಗಿದೆ ..ಚನ್ನಾಗಿದೆ ಲೇಖನ..

    ReplyDelete