12 May 2014

ಪಾಂಡವರತಳಿಯೆಂಬ ಸ್ವರ್ಗದಲ್ಲಿ

 ಕಾಡಿನ ಮಧ್ಯೆ ಪಯಣ
        

"ಏ ನಾವೆಲ್ಲೋ ದಾರಿ ತಪ್ಪಿದ್ಯ ಕಾಣ್ತೋ ಮಾರಾಯ " ಎಲ್ಲರಿಗಿಂತ ಮುಂದಿದ್ದ ಸತ್ಯಣ್ಣನ ಧ್ವನಿ ಕೇಳಿದಾಗ ಒಣಗಿದ ತರಗಲೆಗಳ ಮೇಲೆ ಬ್ಯಾಲೆನ್ಸ್ ಮಾಡುತ್ತಾ ಕಷ್ಟಪಟ್ಟು ನಡೆಯುತ್ತಿದ್ದ ನನ್ನ ಗಂಟಲೊಣಗಿತು. ಒಂದು ಕ್ಷಣ ಪಕ್ಕದಲ್ಲೇ ನಡೆಯುತ್ತಿದ್ದ ಸುಧಾಕಿರಣ್ ಕೈ ಹಿಡಿದು ಸುಧಾರಿಸಿಕೊಂಡು ಹೌದಾ ಏನು ಮಾಡೋದು ಈಗ ಎಂದೆ... ಏನಾಗಲ್ಲ ಸುಮ್ನಿರು ತುಂಬ ದೊಡ್ಡದೇನಲ್ಲ ಈ ಕಾಡು ಮುಂದೆ ದಾರಿ ಸಿಗದಿದ್ದರೂ ವಾಪಾಸ್ ಮನೆಗಂತೂ  ಹೋಗಬಹುದು  ಎನ್ನುತ್ತಾ ಮುಂದುವರೆದರವರು. ನಮ್ಮ ಊರಿನ ಪುಟ್ಟ ಹೀರ‍ೋ ಅವಿನಾಶ ತೋರಿಸಿದ ಕಡೆಯಲ್ಲೆ ಹೆಚ್ಚೆ ಹಾಕುತ್ತಾ ನಡೆಯುತ್ತಿದ್ದ ಮಗಳು ಇಂಚರ ಮತ್ತು ಭಾವನವರ  ಮಗಳು ಐಶ್ವರ್ಯ ಸ್ವಲ್ಪ ಭಯವಾಗುತ್ತಿದ್ದರೂ ತೋರಿಸಿಕೊಳ್ಳದೆ "ದಾರಿ ತಪ್ಪಿದ್ದೇವಾ ? ಹೌ ಥ್ರಿಲ್ಲಿಂಗ್"  ಎನ್ನುತ್ತಾ ಜುಟ್ಟು  ಕುಣಿಸಿದರು ...ಏ ದಾರಿನೂ ತಪ್ಪಲ್ಲೆ ಎಂತೂ ಇಲ್ಲೆ ಬನ್ನಿ ಸಾಕು ..ಟೀಪು ನೋಡಿ ಇಲ್ಲೆ ಹೋಗ್ತಾ ಇದ್ದು ಎನ್ನುತ್ತಾ ಧೀರನಂತೆ ಹೆಜ್ಜೆ ಹಾಕಿದವ ಅವಿನಾಶನ ತಮ್ಮ ಹತ್ತು ವರ್ಷದ ಅಭಿಷೇಕ.
 ಎಲ್ಲರಿಗಿಂತ ಚಿಕ್ಕವನಾದರೂ , ಎಲ್ಲರಿಗಿಂತ ಮುಂದಿದ್ದ ಅಭಿಷೇಕ


ಊರಿಗೆ ಹೋದಾಗೆಲ್ಲ ಹೀಗೆ ಮಕ್ಕಳು , ಅಕ್ಕಪಕ್ಕದ ಮನೆಯ ಚಿಲ್ಟೂ ಪಿಲ್ಟೂಗಳನ್ನೆಲ್ಲ ಕಟ್ಟಿಕೊಂಡು ನಮ್ಮೂರಿನ ಸುತ್ತಮುತ್ತಲಿರುವ ಗುಡ್ಡ ಬೆಟ್ಟ ಕಾಡು ಸುತ್ತುವುದು ತುಂಬ ಇಷ್ಟದ ಸಂಗತಿ.  ನಮಗೆ ದಾರಿತೋರಿಸಲು ನೆಚ್ಚಿನ ಭಂಟ ಪಕ್ಕದಮನೆಯ ಟೀಪೂ ಬಾಲ ಎತ್ತಿಕೊಂಡು ಯಾವಾಗಲೂ ತಯಾರಿರುತ್ತಾನೆ.

 ದಾರಿಯಲ್ಲಿ ಮನ ಸೆಳೆದ ನೀಲ ಸುಂದರಿ

ಈ ಬಾರಿ ಹಾಗೆ ಹೊರಟವರು  ನಾಲ್ಕು ಕಿ.ಮಿ ದೂರದಲ್ಲಿದ್ದ " ಪಾಂಡವರತಳಿ " ಎಂಬ ಜಾಗಕ್ಕೆ ಹೊರಟಿದ್ದೆವು . ನಮಗ್ಯಾರಿಗೂ ಸರಿಯಾದ ದಾರಿ ಗೊತ್ತಿರಲಿಲ್ಲ. ಸ್ವಲ್ಪ ದೂರವಾದ್ದರಿಂದ ಟೀಪೂ ತೋರಿಸುವ ದಾರಿಯನ್ನೂ ನಂಬುವಂತಿರಲಿಲ್ಲ. ಆಗ ನಮ್ಮ  ನೆರವಿಗೆ ಬಂದವನು ಆ ಸ್ಥಳದ ಅತೀವ ಅಭಿಮಾನಿಯಾದ ಪಕ್ಕದ ಮನೆ ಸತ್ಯಣ್ಣ. ಬೇಸರವಾದಾಗೆಲ್ಲ ಅಲ್ಲಿಗೆ ಹೋಗಿ ಧ್ಯಾನ ಮಾಡುವ ಆತ ಬರುತ್ತೇನೆಂದ ಮೇಲೆ ಧೈರ್ಯವಾಗಿ ಹೊರಟಿದ್ದೆವು. ಆದರೀಗ ಅವನೇ ದಾರಿ ತಪ್ಪಿದ್ದೇವೆಂದ ಮೇಲೆ ???
 ಅಂತಹ ದೊಡ್ಡ ಕಾಡೇನು ಅಲ್ಲ ಎಂಬ ಧೈರ್ಯದಲ್ಲೇ ಮುಂದುವರೆದಿದ್ದೆವು . ಅಲ್ಲದೆ ಅಲ್ಲಲ್ಲಿ ಮರ ಕಡಿಯುವವರು  ಮಾಡಿಕೊಂಡ ಮಸುಕು ಕಾಲು ದಾರಿ ಕಾಣಿಸುತ್ತಿತ್ತು.
 ಊಟದ ತಟ್ಟೆಯಷ್ಟು ಅಗಲವಾದ ಅಣಬೆ!

ಮುಂದೆ ಮುಂದೆ ಹೋದಂತೆ ಕಾಡು ದಟ್ಟವಾಗಿತ್ತು ...ದಾರಿಯಲ್ಲಿ ಮರವೊಂದರ ಬಳಿ ಬೆಳೆದಿದ್ದ  ಒಂದು ಅಣಬೆ ಗಮನ ಸೆಳೆಯಿತು. ಆ ಜಾತಿಯ ಅಷ್ಟು ದೊಡ್ಡದಾದ  ಅಣಬೆ ನಾನು ನೋಡೇ ಇರಲಿಲ್ಲ . ದೈತ್ಯಾಕಾರದ ಒಂದೆರಡು ಮರಗಳೂ ಕಣ್ಣಿಗೆ ಬಿದ್ದವು ...ಅವು ಅದು ಹೇಗೆ ಮರಗಳ್ಳರ ಕಣ್ಗಳಿಂದ ತಪ್ಪಿಸಿಕೊಂಡಿದ್ದವೋ ಗೊತ್ತಿಲ್ಲ. ಮುಂದೆ ಹೋದಂತೆ ಧರೆಗುರುಳಿದ್ದ ದೈತ್ಯಾಕಾರದ ಮರವೊಂದರ ಮೇಲೆ ಹತ್ತಿ ಹೋಗಬೇಕಾಗಿ ಬಂದಾಗ ಅವತಾರ್ ಸಿನೆಮಾದ ಮರಗಳು ನೆನಪಾಗಿತ್ತು.


ಉರುಳಿ ಬಿದ್ದಿದ್ದ ದೈತ್ಯ ಮರಗಳು

ಅಂತೂ ಕೋಲೂರುತ್ತಾ ಬೆಟ್ಟದ ತುದಿ ತಲುಪಿದ್ದೆವು. ಇನ್ನು ಅದನ್ನಿಳಿದು ಮುಂದೆಕಾಣುವ ಚಿಕ್ಕ ಗದ್ದೆಬಯಲು ದಾಟಿ , ಅದರೆದುರಿನ ಕಾಡು ಪ್ರವೇಶಿಸಿದರೆ ನಮ್ಮ ಗುರಿ ....ಎಲ್ಲರೂ ಬಿಡುಗಡೆಯ ನಿಟ್ಟುಸಿರಿಟ್ಟು ಮುಂದುವರೆದೆವು . ಜೀವನದಲ್ಲಿ ಮೇಲೆ ಹತ್ತುವುದು ಕಷ್ಟ , ಕೆಳಗೆ ಇಳಿಯುವುದು ಸುಲಭ ಎನ್ನುತ್ತಾರೆ. ಆದರೆ ಬೆಟ್ಟದ ವಿಚಾರದಲ್ಲಿ ನನಗೆ ಇಳಿಯುವುದೇ ಕಷ್ಟವೆನ್ನಿಸುತ್ತದೆ. 

ಕಾಡಿನ ಮಧ್ಯದ ಪುಟ್ಟ ಮನೆಯೊಂದರ ಒಡತಿ

ಬೆಟ್ಟವಿಳಿಯುತ್ತಿದ್ದಂತೆ ಕಾಣಿಸಿದ ಮನೆಯೊಂದು ಎಂತಹ ಸುಂದರ ಪ್ರದೇಶದಲ್ಲಿತ್ತೆಂದರೆ  , ಹಿಂದೆ ಕಾಡು , ಮುಂದೆ ಗದ್ದೆ ಬಯಲು , ಪಕ್ಕದಲ್ಲಿ ಜುಳು ಜುಳು ಶಬ್ದದೊಂದಿಗೆ ಹರಿವ ಪುಟ್ಟ ತೊರೆ ..ಆಹಾ !...ಮನೆ ಇದ್ದರೆ ಇಂತಹ ಕಡೆ ಇರಬೇಕು ಎನ್ನಿಸಿತ್ತು.... ಆದರೆ ಆ ಮನೆಯಾಕೆಯನ್ನು ಮಾತನಾಡಿಸಿದಾಗ ಇನ್ನೊಂದು ಮುಖ  ಅನಾವರಣಗೊಂಡಿತ್ತು. , ಸರಿಯಾದ ರಸ್ತೆಗಳಿಲ್ಲ , ವಾಹನ ಸೌಕರ್ಯವಿಲ್ಲ , ಹತ್ತಿರದಲ್ಲಿ ಯಾವ ಮನೆಯೂ ಇಲ್ಲ ....  ಕಾಡು ಪ್ರಾಣಿಗಳ ಕಾಟ .... ಕಾಡುಗಳ್ಳರ ಕಾಟ ...ಊಫ್ ...ದೂರದ ಬೆಟ್ಟ ನುಣ್ಣಗೆ ಅಲ್ವೆ?

ಹಕ್ಕೆ ಮನೆ


ಎಳೆಹಸಿರು ತುಂಬಿದ ಗದ್ದೆ ಬಯಲನ್ನು ದಾಟುತ್ತಿದ್ದಂತೆ ಪುಟ್ಟ ಹೊಳೆ ಎದುರಾಯಿತು. ಅದೇ ಹೊಳೆಯನ್ನು ಅನುಸರಿಸಿ ಮುಂದುವರೆದಾಗ ಆ ಸುಂದರ ಪ್ರದೇಶವನ್ನು ತಲುಪಿದೆವು.

ಸುತ್ತಲೂ ದಟ್ಟ ಕಾನನ ... ಮಧ್ಯೆ ಆ ಕಾಡನ್ನು ಇಬ್ಭಾಗವಾಗಿಸಿ ಹರಿಯುವ ಶುದ್ಧ ಜಲಧಾರೆ ...ಹೊಳೆಯ ದಾರಿಯಲ್ಲಿ ಅಡ್ಡಬಂದ ದೊಡ್ಡ ದೊಡ್ಡ ಕಲ್ಲು ಬಂಡೆಗಳು ....ಸಾವಿರಾರು ವರ್ಷಗಳಿಂದ ನೀರಿನ ರಭಸಕ್ಕೆ ಮೈಯೊಡ್ಡಿ ಚಿತ್ರ ವಿಚಿತ್ರ ಆಕಾರ ತಳೆದಿರುವ ಬಂಡೆಗಳು... ಅವುಗಳ ಮಧ್ಯೆ ಇನ್ನಷ್ಟು ರಭಸದಿಂದ ನುಗ್ಗಿ ಭೋರ್ಗರೆವ ಜಲರಾಶಿ ....ಅಬ್ಬ ನಿಜಕ್ಕೂ ಸ್ವರ್ಗ.

 ಬಂಡೆಗಳ ನಡುವೆ ತಣ್ಣಗೆ ಹರಿವ ನೀರು


ನಮ್ಮ ದೇಶದಾಂತ್ಯಂತ ಯಾವುದೇ ಪ್ರಕೃತಿವಿಶೇಷ ಸ್ಥಳಗಳಿದ್ದರೂ ಅವುಗಳನ್ನು ರಾಮಾಯಣ , ಮಹಾಭಾರತಕ್ಕೆ ಜೋಡಿಸುವ ಪರಿಪಾಠವಿದೆ. ಆ ಪಾಂಡವರು , ರಾಮಲಕ್ಷ್ಮಣರು ತಮ್ಮ ವನವಾಸ ಕಾಲದಲ್ಲಿ ಅದೆಷ್ಟು ಊರುಗಳನ್ನು ಸಂದರ್ಶಿಸಿದ್ದರೋ ! ಯಾವ ಭಾಗದಲ್ಲಿ ನೋಡಿದರೂ ರಾಮನೋ ಅರ್ಜುನನೋ ಬಾಣ ಬಿಟ್ಟು ಹರಿಸಿದ ಜಲಧಾರೆ , ಭೀಮನ ಹೆಜ್ಜೆ ಗುರುತು   ಇತ್ಯಾದಿಗಳು ಕಾಣಸಿಗುತ್ತವೆ!!

ಭೀಮನ ಮಂಚ!

 ಹಾಗೆಯೆ ಈ ನಮ್ಮ ಪಾಂಡವರತಳಿ ಎಂಬಲ್ಲೂ ಪಾಂಡವರು ವನವಾಸ ಕಾಲದಲ್ಲಿ ಸ್ವಲ್ಪ ಕಾಲ ತಂಗಿದ್ದರಂತೆ , ಕುರುಹಾಗಿ ಇಲ್ಲಿ ಭೀಮನ ಮಂಚವಿದೆ , ದ್ರೌಪದಿಯ ಒರಳುಕಲ್ಲಿನ ಹೊಂಡವಿದೆ , ಭೀಮನ ಹೆಜ್ಜೆ ಗುರುತಿದೆ.ಕಲ್ಲಿನ ಮಧ್ಯೆ ರಭಸವಾಗಿ ಹರಿಯುವ ನೀರಿಗೆ ದೇಹ ಒಡ್ಡಿದರೆ  ಮಾಸಾಜ್ ಮಾಡಿಸಿಕೊಂಡಂತಾಗಿ ಹಾಯೆನಿಸುತ್ತದೆ. ಸ್ವಲ್ಪ ಎಚ್ಚರ ತಪ್ಪಿ  ನೀರಿನಲ್ಲಿ ಮುಳುಗಿ ಪಾಚಿಗಟ್ಟಿರುವ ಕಲ್ಲಿನ ಮೇಲೆ ಕಾಲಿಟ್ಟರೆ ಜಾರಿಬಿದ್ದು ಮೂಳೇ ಪುಡಿಯಾಗುವುದು ಖಂಡಿತಾ .ಮನಸೋಇಚ್ಛೆ ನೀರಿನಲ್ಲಿ ಆಟವಾಡಿ ಕತ್ತಲಾಗುತ್ತಿದ್ದುದನ್ನು ಗಮನಿಸಿ ಅನಿವಾರ್ಯವಾಗಿ ಹೊರಟೆವು. ವಾಪಾಸ್ ಬರುವಾಗ ಸರಿಯಾದ ದಾರಿಯಲ್ಲಿ ಸುಲಭವಾಗಿ ಬಂದಾಗ  , ಹೋಗುವಾಗ ನಾವೆಷ್ಟು ಸುತ್ತಿಬಳಸಿ ಹೋಗಿದ್ದೆವೆಂಬ ಅರಿವಾಗಿತ್ತು.ಎಲ್ಲಿದೆ? - ಹೊಸನಗರ ತಾಲ್ಲೂಕಿನ ನಿಟ್ಟೂರಿ ಬಳಿ.
ಮಾರ್ಗ-ನಿಟ್ಟೂರು ಕೊಲ್ಲೂರು ಮಾರ್ಗದ ಮಧ್ಯೆ ಸಿಗುವ ನಾಗೋಡಿಯಿಂದ ಒಳರಸ್ತೆಯಲ್ಲಿ ನಾಲ್ಕು ಕಿಮಿ
ಹತ್ತಿರದ ಪ್ರೆಕ್ಷಣೀಯ ಸ್ಥಳಗಳು - ನಗರ ಕೋಟೆ ,ಕೊಡಚಾದ್ರಿ , ಕೊಲ್ಲೂರು , ಸಿಗಂದೂರು ,
ಉಳಿಯಲು ಸ್ಥಳ - ನಿಟ್ಟೂರಿನ ಸುತ್ತಮುತ್ತ ಅನೇಕ ರೆಸಾರ್ಟ್ ಮತ್ತು ಹೋಂಸ್ಟೇಗಳಿವೆ.
ಹೋಗಲು ಸೂಕ್ತವಾದ ಕಾಲ : ಅಕ್ಟೋಬರ್ - ಮೇ
ಎಚ್ಚರಿಕೆ - ದಾರಿ ತೋರಿಸಲು ಸ್ಥಳೀಯರು ಇರುವುದು ತುಂಬ ಅವಶ್ಯಕ.


 ಮಾರ್ಚ್ ೧೬ ರ ಸಖಿ ಪಾಕ್ಷಿಕ ಪತ್ರಿಕೆಯಲ್ಲಿ ಈ ಲೇಖನ ಪ್ರಕಟವಾಗಿದೆ.
 http://sakhiexpress.epapr.in/233612/Sakhi/01-MARCH-2014#dual/60/1

15 comments:

 1. suma..photos jote nimma anubhava oduvaaga..nimma adrushtada bagge hotte kichchu baruvudu guarantee..pattanada gadibidiyalle jeevana mugivudeno annuva bejaariddaaga..ee baraha nammannu nimmondige tannage suttadisiddu ashte sathya..:) chennaagide.

  ReplyDelete
  Replies
  1. ಸಮಯವಿದ್ದಾಗ ಬನ್ನಿ ಅಪರ್ಣ , ಅಲ್ಲಿಗೇ ಹೋಗಿ ಇನ್ನಷ್ಟು ಖುಷಿ ಪಡೋಣ :)

   Delete
 2. ಈಗೆರಡು ವರ್ಷಗಳಿಂದ ವರ್ಷಕ್ಕೊಮ್ಮೆ ತಿಂಗಳ ಮಟ್ಟಿಗೆ ಜರ್ಮನಿಯಲ್ಲಿ ಬಂದಿರೋ ಅವಕಾಶ ಸಿಕ್ಕಿದೆ.ಪಟ್ಟಣದ ನಡುವೆಯೇ ತುಂಬಿರುವ ಇಲ್ಲಿಯ ವನ-ಜಲಸಿರಿ ನೋಡಿ ಖುಷಿ ಪಡೋದ್ರ ಜೊತೆಜೊತೆಯಲ್ಲಿ ನಮ್ಮ ದೇಶದ ಅರಣ್ಯಗಳ ಲೂಟಿ,ನೀರಿನ ಬವಣೆಗಳನ್ನು ನೆನೆದು ತಪ್ತವಾಗುತ್ತೆ ಮನಸ್ಸು.ಈ ಹಿನ್ನೆಲೆಯಲ್ಲಿ ನಿಮ್ಮ ಬರಹ ಓದಿ ಹಾಯೆನಿಸಿತು,ಆದರೂ ಮರ ಕಡಿಯುವವರ ದಾರಿಯ ಪ್ರಸ್ತಾಪ ಬಂದಾಗ ಮನ ತಲ್ಲಣಿಸಿತು.ಒಟ್ಟಿನಲ್ಲಿ ಇಂಥಾ ಸ್ಥಳಗಳು ಅಲ್ಲಿಯ ನೀರು ಎಲ್ಲಾ ನೋಡಿ ಮನ ತಂಪಾಯ್ತು.ನಮ್ಮ ದೇಶದ ಇಂಥಾ ಸಂಪತ್ತು ಯಾರ ಕೆಟ್ಟ ಕಣ್ಣುಗಳ ಈಡಾಗದಿರಲಿ

  ReplyDelete
  Replies
  1. ನಿಜ ಜಯಲಕ್ಷ್ಮಿ , ಪರಿಸರದ ವಿಚಾರದಲ್ಲಿ ನಮ್ಮಲ್ಲಿರುವ ಅಜ್ಞಾನ ನೆನೆಸಿಕೊಂಡರೆ ಬೇಸರವಾಗುತ್ತದೆ. ಇಂತಹ ಕೆಲವೇ ಕೆಲವು ಸ್ಥಳಗಳೂ , ಕಾಡುಗಳ್ಳರ ಸ್ವತ್ತಾಗಿವೆ .

   Delete
 3. This comment has been removed by the author.

  ReplyDelete
  Replies
  1. ಸುಂದರ ಕಾಡು.. ಆ ನೀಲ ವರ್ಣದ ಹೂವಿನ ಗಿಡಕ್ಕೆ ನಮ್ಮ ಕಡೆ ಒಳ್ಳೆ ಗಿಡ ಅಂತಾರೆ. ಇದನ್ನು ಸರ್ಪಸುತ್ತು ಕಾಯಿಲೆಗೆ ಔಷದವಾಗಿಯೂ ಬಳಸುತ್ತಾರೆ. ಆನಿತಾ ನರೇಶ್ ಮಂಚಿ :)

   Delete
  2. ಹೌದಾ ಅನಿತಕ್ಕ ? ಇದು ಗೊತ್ತಿರಲಿಲ್ಲ , ಧನ್ಯವಾದಗಳು ಮಾಹಿತಿಗೆ :)

   Delete
 4. ಸ್ಥಳ ಪರಿಚಯಕ್ಕೆ ಧನ್ಯವಾದಗಳು.. :)

  ReplyDelete
 5. ಸೊಗಸಾಗಿದೆ ನಿಮ್ಮೀ ಪಯಣದ ಬರಹ. ಭೀಮನ ಮಂಚ ನೋಡಿ ಕಣ್ಣು ಪಾವನವಾಯಿತು. ಮಲಗಿದಾಗ ಲಟಿರೆಂದು ಮುರಿಯುವ ಗೋಜಿಲ್ಲ!
  ಮಾಲಾ

  ReplyDelete
  Replies
  1. ಹ..ಹ..ಹ ನಿಜ ಸ್ವಲ್ಪ ಗಾತ್ರದಲ್ಲಿ ದೊಡ್ಡದಾಗಿರುವ ನನ್ನಂತವರೂ ಧೈರ್ಯವಾಗಿ ಮಲಗಬಹುದು :)

   Delete
 6. ಫೋಟೋಗಳನ್ನು ನೋಡಿದಾಗ ಈ ಸ್ಥಳ ನಿಜಕ್ಕೂ ಸ್ವರ್ಗವೆನ್ನಿಸಿತು.

  ReplyDelete
 7. ಪಾಂಡವರತಳಿಯ ಸಾದೃಶವಾಯಿತು.
  ಒಳ್ಳೆಯ ಚಿತ್ತಗಳು.

  ReplyDelete
 8. Chitra mattu lekhana eradu chennagide..:)

  ReplyDelete
 9. ಅಷ್ಟು ಹತ್ರ ಇದ್ರೂ ನಾನು ನೋಡಿಲ್ಲ ಸುಮಕ್ಕ ..., ನೆಕ್ಸ್ಟ್ ಟೈಮ್ ನೋಡ್ಬೇಕು ..., ಒಳ್ಳೆಯ ಪ್ಲೇಸ್ , ಒಳ್ಳೆಯ ಬರಹ ....

  ReplyDelete