23 Jun 2014

ಮಾಯಾವಿ ಸರೋವರದಲ್ಲೊಂದು ಮುಳುಕು.

ಮೇಲ್ವರ್ಗದ ಜೀವಿಗಳಲ್ಲಿ ಕಾಣುವ ಹೆಣ್ಣು ಗಂಡು ಎಂಬ ಪ್ರತ್ಯೇಕತೆ ಪ್ರಕೃತಿಯ  ಪ್ರಯೋಗಾಲಯದಲ್ಲಿ ಉದ್ಭವಿಸಿದ ಉತ್ಕೃಷ್ಟ ಸೃಷ್ಟಿ. ಒಂದೇ ಜಾತಿಗೆ ಸೇರಿದ್ದರೂ ದೈಹಿಕವಾಗಿ , ಮಾನಸಿಕವಾಗಿ ವಿಭಿನ್ನವಾಗಿರುವ   ಎರಡು ಜೀವಗಳ ನಡುವಿನ ಆಕರ್ಷಣೆ , ಹೊಂದಾಣಿಕೆ , ವೈರುಧ್ಯತೆ , ಸ್ವಾರ್ಥ ,  ಪ್ರಪಂಚವನ್ನು ಜೀವಂತವಾಗಿಟ್ಟಿದೆ ಮತ್ತು ಮುನ್ನೆಡೆಸುತ್ತಿದೆ.

  ತನ್ನ ವಂಶವಾಹಿಯನ್ನು ಮುಂದುವರೆಸಿ , ತನ್ನ ಸಂತತಿಯನ್ನು ಬೆಳೆಸುವುದೇ ಪ್ರಕೃತಿಯಲ್ಲಿನ ಗಂಡುಪ್ರಾಣಿಯ  ಪರಮೋದ್ದೇಶ. ಇದಕ್ಕಾಗಿ ಆ ಗಂಡು ಜೀವ ಎಷ್ಟೆಷ್ಟೋ ಉಪಾಯಗಳನ್ನು ಮಾಡುತ್ತದೆ. ಸುಂದರ ರೂಪ ಧರಿಸಿ ಹೆಣ್ಣನ್ನು ಆಕರ್ಷಿಸುವುದು , ಆಹಾರ , ರಕ್ಷಣೆ ಒದಗಿಸಿ ಒಲಿಸಿಕೊಳ್ಳುವುದು , ಆಕೆಗಾಗಿ ಪ್ರಾಣ ತೆರಲೂ ಸಿದ್ಧವಿದ್ದಂತೆ ಹೋರಾಡುವುದು ಎಲ್ಲವನ್ನೂ ಮಾಡುತ್ತವೆ. ಕೆಲವು ಪ್ರಾಣಿಗಳಂತೂ ತಮ್ಮದಲ್ಲದ ಸಂತತಿಯನ್ನು ಕೊಲ್ಲುವ ಕ್ರೌರ್ಯವನ್ನೂ ಬೆಳೆಸಿಕೊಂಡಿರುತ್ತವೆ. ಆದರೆ ಒಮ್ಮೆ ತನ್ನ ವಂಶವಾಹಿಗಳನ್ನು ಹೆಣ್ಣಿಗೆ ವರ್ಗಾಯಿಸಿದ ನಂತರ ಸಂತತಿಯ ಜವಾಬ್ದಾರಿಯನ್ನು ಹೊರುವ ಗಂಡುಪ್ರಾಣಿಗಳ ಸಂಖ್ಯೆ ತುಂಬ ಕಡಿಮೆ.
ಪ್ರಕೃತಿಯಲ್ಲಿ ಹೆಣ್ಣು, ತಾಯಿ . ತನ್ನದಲ್ಲದ ಮರಿಗಳನ್ನೂ ಪೊರೆಯಬಲ್ಲದು ಹೆಣ್ಣುಜೀವ. ಹೆಚ್ಚಿನ ಪ್ರಾಣಿಪ್ರಪಂಚದಲ್ಲಿ  ತನ್ನ ಸಂಸಾರದ ಸಂತತಿಗೆ ಆಹಾರ ಒದಗಿಸಿ , ರಕ್ಷಣೆ ನೀಡಿ , ಮುಂದೆ ಬಾಳಲು ಬೇಕಾದ ತರಬೇತಿ ನೀಡುವ ಹೊಣೆ ಹೊರುವುದು ಹೆಣ್ಣುಪ್ರಾಣಿಗಳೇ. 

ಯೋಚನಾ ಸಾಮರ್ಥ್ಯದಲ್ಲಿ , ಬುದ್ಧಿಯಲ್ಲಿ ಎಲ್ಲ ಪ್ರಾಣಿಗಳಿಗಿಂತ ಮೇಲಿರುವ  ಮಾನವರ ಲೋಕದಲ್ಲಿಯೂ ಈ ವಿಚಾರದಲ್ಲಿ ಹೆಚ್ಚಿನ ವ್ಯತ್ಯಾಸವೇನಿಲ್ಲ.   ಮಕ್ಕಳನ್ನು ನವಮಾಸ ಹೊತ್ತು , ಪ್ರಾಣಾಂತಿಕ ಕಷ್ಟದಲ್ಲಿ ಹೆತ್ತು , ಹಸಿವು ನಿದ್ರೆ ಲೆಕ್ಕಿಸದೆ ಪಾಲಿಸುವುದು ತಾಯಿ. ಈಗ ಪರಿಸ್ಥಿತಿ ಸುಧಾರಿಸುತ್ತಿದೆಯಾದರೂ ತೀರಾ ಇತ್ತೀಚಿನವರೆಗೂ ಮಕ್ಕಳ ಲಾಲನೆ ಪಾಲನೆಯಲ್ಲಿ ಗಂಡ ಯಾವುದೇ ಜವಾಬ್ದಾರಿಯನ್ನೂ ವಹಿಸುತ್ತಿರಲಿಲ್ಲ. ಗಂಡು , ತನಗೇನೋ ಕಷ್ಟವಾದೊಡನೆಯೋ , ಅಥವಾ ಯಾವುದೋ ಸಾಧನೆಯ ಬೆನ್ನುಹತ್ತಿಯೋ , ಕಾಣದ ಆಕರ್ಷಣೆಯನ್ನು ಹುಡುಕಿಯೋ  ಸಂಸಾರವನ್ನೇ ತ್ಯಜಿಸಿ ಓಡಿಹೋಗಬಲ್ಲ  . ಆದರೆ ಹೆಣ್ಣು ಹಾಗೆ ಮಾಡುವುದು ತುಂಬಾ ವಿರಳ.  ಗಂಡಸರ ಸ್ಥಾನವನ್ನೂ ತುಂಬಿ ಸಂಸಾರ ನಡೆಸಬಲ್ಲ ತಾಕತ್ತು ಹೆಂಗಸರದು.   ಆದರೂ ಮಕ್ಕಳನ್ನು ಗುರುತಿಸುವುದು ಅವರ ತಂದೆಯ ಹೆಸರಿನಲ್ಲೇ ಎಂಬುದು ವಿಚಿತ್ರ.

ಇದೇ ವಿಷಯವನ್ನು ಆಧರಿಸಿದ ನಾಟಕ " ಮಾಯಾವಿ ಸರೋವರ " .  ಅಹಲ್ಯ ಬಲ್ಲಾಳರ ನಿರ್ದೇಶನದ "ಮಾಯಾವಿ ಸರೋವರ"   ನಾಟಕದ ಅನೇಕ ಸಂಗತಿಗಳು ತುಂಬ ಇಷ್ಟವಾದವು. ಅದರೆ ಕೆಲವೊಂದು ಸಂಗತಿಗಳನ್ನು ಇನ್ನಷ್ಟು ಸುಧಾರಿಸಿಕೊಳ್ಳಬಹುದೆನ್ನಿಸಿತು.

ಪಾತ್ರಧಾರಿಗಳ ಅತ್ಯುತ್ತಮ ಅಭಿನಯ ನಾಟಕದ ಪ್ಲಸ್ ಪಾಯಿಂಟ್ . ಅದರಲ್ಲಿಯೂ ರಾಜ ರಾಣಿ ಮತ್ತು ಹೆಣ್ಣು ವೇಷದ ರಾಜ ಇವರುಗಳಂತೂ ಮನ ಗೆದ್ದುಬಿಡುತ್ತಾರೆ.
ಚುುರುಕಾದ ಸಂಭಾಷಣೆ , ನಗುವನ್ನುಕ್ಕಿಸುತ್ತದೆ , ಕೆಲಮೊಮ್ಮೆ ವ್ಯವಸ್ಥೆಯಯ ವ್ಯಂಗ್ಯವನ್ನು ಸಮರ್ಥವಾಗಿ ಬಿಂಬಿಸಿ ಚಿಂತನೆಗೆ ಹಚ್ಚುತ್ತದೆ.

ಎಲ್ಲಾ ಕ್ಷೇತ್ರಗಳಲ್ಲೂ ಗಂಡಿಗೆ ಸರಿಸಮನಾಗಿ ಹೆಣ್ಣು ಹೆಜ್ಜೆ ಹಾಕುತ್ತಿರುವ ಮತ್ತದನ್ನು ಮನಪೂರ್ವಕವಾಗಿ ಸ್ವಾಗತಿಸುತ್ತಿರುವ ಗಂಡಸರು ಹೆಚ್ಚಿರುವ ಈಗಿನ ಕಾಲಘಟ್ಟದಲ್ಲಿ ಈ ಕಥಾವಸ್ತು ಸ್ವಲ್ಪ ಹಳೆಯದೇನೋ ಎನ್ನಿಸಿತು . ಆದರೆ  ಹೊರಗೆ ದುಡಿದು ಬಂದರೂ ಮನೆಕೆಲಸ ಅವಳೇ ಮಾಡಬೇಕಿರುವ , ಎಲ್ಲಾ ಪ್ರಮುಖ ನಿರ್ಧಾರಗಳನ್ನೂ ಗಂಡನೇ ಮಾಡಬೇಕಿರುವ ಅದೆಷ್ಟೋ ಸಂಸಾರಗಳು ಇನ್ನೂ ಇವೆ, ಹೆಣ್ಣು ಭ್ರೂಣಹತ್ಯೆ , ಮರ್ಯಾದಾಹತ್ಯೆ ಹಿಂದೆಂದಿಗಿಂತ ಹೆಚ್ಚಿದೆ , ಇನ್ನೂ ಹೆಣ್ಣಿಗೆ ಹೆಚ್ಚಿನ ವಿಧ್ಯಾಭ್ಯಾಸ ನಿರಾಕರಿಸುವ , ಚಿಕ್ಕವಯಸ್ಸಿನಲ್ಲೆ ಮದುವೆ ಮಾಡುವ ಪ್ರಕರಣಗಳು ಹೇರಳವಾಗಿವೆ. ಇದನ್ನೆಲ್ಲ ಯೋಚಿಸಿದಾಗ ಈ ಕಥಾವಸ್ತು  ಖಂಡಿತಾ ಪ್ರಸ್ತುತ ಎನ್ನಿಸಿತು .

ನಾಟಕದಲ್ಲಿನ ನಾಟಕೀಯತೆಗೆ ಮೆರಗು ಕೊಡುವ ಅಂಶಗಳಾದ  ರಂಗವಿನ್ಯಾಸ , ಧ್ವನಿ , ಬೆಳಕಿನ ಸಮರ್ಥ ಬಳಕೆ , ವಸ್ತ್ರವಿನ್ಯಾಸ ಉತ್ತಮವಾಗಿದ್ದು ದೃಶ್ಯಗಳನ್ನು ಕಟ್ಟಿಕೊಡುತ್ತವೆ.

ಪ್ರಾರಂಭ ಸ್ವಲ್ಪ ಚುರುಕಾಗಿದ್ದಿದ್ದರೆ ನಾಟಕ ಇನ್ನಷ್ಟು ಆಕರ್ಷಕವಾಗುತ್ತಿತ್ತು. ಹಿನ್ನೆಲೆಯ ಹಾಡುಗಳು ಇನ್ನಷ್ಟು ಮಧುರವಾಗಿರಬಹುದಿತ್ತು.  ಗಹನವಾದ ಕಥಾವಸ್ತು ಇದ್ದರೂ ಅದು ನಿರೀಕ್ಷಿಸಿದ ಗಾಢ ಪರಿಣಾಮವನ್ನು ಬೀರುವುದಿಲ್ಲ. ನಾಟಕ ವಿಡಂಬನಾತ್ಮಕವಾಗಿರುವುದೇ ಇದಕ್ಕೆ ಕಾರಣವಿರಬಹುದು, ಆದರೂ ಇನ್ನಷ್ಟು ಕ್ರಿಸ್ಪ್ ಆದ ನಿರೂಪಣೆಯಿಂದ ಉತ್ತಮಗೊಳಿಸಬಹುದಾದ ಸಾಧ್ಯತೆಯಿದೆ.

 ಕೊನೆಯಲ್ಲಿ " ಸಂಸಾರೆಂಬ ಮಾಯಾವಿ ಸರೋವರದಲ್ಲಿ ಮುುಳುಗೇಳುವ ಗಂಡ ಹೆಂಡತಿ ಇಬ್ಬರೂ ಆಗಾಗ ಪರಸ್ಪರರ ಸ್ಥಾನದಲ್ಲಿ ನಿಂತು  ಕಷ್ಟಸುಖಗಳನ್ನು ಅರ್ಥ ಮಾಡಿಕೊಂಡರೆ ಸಂಸಾರ ಇನ್ನಷ್ಟು ಸುಂದರವಾಗುತ್ತದೆ " ಎಂಬ  ರಾಜನಾಡುವ   ಮಾತು ಮನದಲ್ಲಿ ನಾಟುತ್ತದೆ.



6 comments:

  1. ನಮ್ಮ ಸಮಾಜವು ಇನ್ನೂ ಪುರುಷಪ್ರಧಾನವಾಗಿಯೇ ಇರುವುದರಿಂದ, ಈ ನಾಟಕ ಇನ್ನೂ ಪ್ರಸ್ತುತವಾಗಿಯೇ ಇದೆ. ಚಂದದ ನಾಟಕದ ತಿರುಳನ್ನು ಸುಂದರವಾಗಿ ವಿವರಿಸಿದ್ದೀರಿ. ಧನ್ಯವಾದಗಳು.

    ReplyDelete
  2. ನಾಗರೀಕತೆಯು ಮುಂದುವರೆದಿದೆ ಎನಿಸಿದರೂ ಪೂರ್ವ ವಾಸನೆಗಳಿನ್ನೂ ಆಳದಲ್ಲಿ ಬೇರೂರಿಬಿಟ್ಟಿವೆ.
    ನಾಟಕದ ಉತ್ತಮ ವಿಮರ್ಷಾತ್ಮಕ ಲೇಖನ.

    ReplyDelete
  3. ಓಹ್....ಈ ಓದು ನನಗೆ ಹೇಗೆ ತಪ್ಪಿಹೋಯ್ತು?!

    ಬಂದು ನಮ್ಮ ಪ್ರಯೋಗವನ್ನು ನೋಡಿದ್ದಲ್ಲದೆ ನಿಮಗನಿಸಿದ್ದನ್ನು ಅದೆಷ್ಟು ಸಹೃದಯತೆಯಿಂದ ಬರೆದಿದ್ದೀರಿ. ತುಂಬ ತುಂಬ ಖುಶಿಯಾಯ್ತು.
    ಅಹಲ್ಯಾ

    ReplyDelete
    Replies
    1. ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದೆ, ನೀವು ಅಲ್ಲಿ ಪ್ರತಿಕ್ರಿಯಿಸಿದ್ದಿರಿ ಕೂಡಾ. ಪ್ರೇಕ್ಷಕರ ಅನಿಸಿಕೆಗಳಿಗೆ ಮಹತ್ವ ನೀಡುವ ನಿಮ್ಮೊಳಗಿನ ಕಲಾವಿದೆಗೆ ನಮನ

      Delete
  4. ಸುಮಾ, ಇವತ್ತು ಅಹಲ್ಯ ಇದನ್ನು ಗುಂಪೊಂದರಲ್ಲಿ ಶೇರ್ ಮಾಡಿಕೊಂಡಿದ್ದರಿಂದ ನಿಮ್ಮ ಈ ವಿಮರ್ಶೆ ಓದುವಂತಾಯಿತು. ಎಂದಿನಂತೆ ನಿಮ್ಮ ನಿಷ್ಪಕ್ಷಪಾತದ ದೃಷ್ಟುಕೋನದಿಂದಾಗಿ ಈ ವಿಮರ್ಶೆಉತ್ತಮವಾಗಿ ಮೂಡಿ ಬಂದಿದೆ.

    ReplyDelete