18 Aug 2014

ನೀರ ಮೇಲಿನ ಗುಳ್ಳೆಯೂ ನಿಜ ಹರಿಯೆ !!



ಮಲೆನಾಡಿನ ಮಳೆಗಾಲದ ಒಂದು ರಾತ್ರಿ , ಮಳೆಯ ಶಬ್ದದ ಜೊತೆಗೆ ಪೈಪೋಟಿಗಿಳಿದಂತೆ ಕೂಗುವ ವಿವಿಧ ಕೀಟಗಳು , ಮನೆಯ ಸುತ್ತಲೂ ಗಾಢವಾದ ಕತ್ತಲೆ , ಕರೆಂಟ್ ಇಲ್ಲವಾದ್ದರಿಂದ ಮನೆಯೊಳಗೂ ಕತ್ತಲೆ . ಚಿಕ್ಕವಳಿದ್ದಾಗ ಇಂತಹ ಸನ್ನಿವೇಶದಲ್ಲಿ ಕುಳಿತಲ್ಲಿಂದ ಏಳಲೂ ಕೂಡ ಭಯವಾಗುತ್ತಿದ್ದುದು ಏಕೆ ಗೊತ್ತ ? ಕಾಲಿಟ್ಟರೆ ಕಪ್ಪೆ ಎಲ್ಲಾದರೂ ಮೈಮೇಲೆ ಹಾರೀತು ಎಂದು.
ನಿಜ , ಹಾವಿಗೂ ಕೂಡ ಅಷ್ಟೊಂದು ಭಯವಾಗುತ್ತಿರಲಿಲ್ಲ , ಆದರೆ ಈ ಮಳೆಗಾಲದಲ್ಲಿ ಎಲ್ಲೆಂದರಲ್ಲಿ ಹಾರುವ ಪುಟ್ಟ ಕಪ್ಪೆಗಳು  ಒಂದು ರೀತಿ ಭಯ ಮಿಶ್ರಿತ ಅಸಹ್ಯ ಹುಟ್ಟಿಸುತ್ತಿದ್ದವು , ಅವುಗಳಿಂದ ಏನೂ ಅಪಾಯವಿಲ್ಲವೆಂದು ತಿಳಿದಿದ್ದರೂ! ತಣ್ಣನೆಯ ದೇಹದ , ಕುತ್ತಿಗೆಯೇ ಇಲ್ಲದ ವಿಚಿತ್ರಾಕಾರದ , ಹೊರಚಾಚಿದ ಕಂಗಳ ,  ಕುಪ್ಪಳಿಸುವ ಕಪ್ಪೆ ಭಯ ಹುಟ್ಟಿಸುತ್ತಿದ್ದುದರಲ್ಲಿ ಆಶ್ಚರ್ಯವೇನಿಲ್ಲ  ಬಿಡಿ !


ಮಳೆಗಾಲದಲ್ಲಂತೂ ಅನೇಕ ಗಾತ್ರ ಆಕಾರಗಳ ಕಪ್ಪೆಗಳು ಶಾಲೆಗೆ ಹೋಗುವ ದಾರಿಯಲ್ಲಿ ಕಾಣಿಸುವುದು ಸಾಮಾನ್ಯವಾಗಿತ್ತು.  ಎಷ್ಟೋ ಕಪ್ಪೆಗಳು ವಾಹನಗಳಿಗೆ ಸಿಲುಕಿ ಸತ್ತು ಕೊಳೆಯುತ್ತಾ ಕೆಟ್ಟ ವಾಸನೆ ಸೂಸುತ್ತಾ ಬಿದ್ದಿರುತ್ತಿದ್ದವು.

 ಸ್ವಲ್ಪ ದೊಡ್ಡವಳಾದ ಮೇಲೆ ಅವುಗಳ ಮೇಲಿದ್ದ ಭಯ ಕಡಿಮೆಯಾಗಿ ಗಮನಿಸತೊಡಗಿದ್ದೆ. ನಮ್ಮ ಮನೆಯ ಜಗುಲಿಯ ಮೂಲೆಯಲ್ಲೊಂದು ದೊಡ್ಡ ಕಪ್ಪೆ ಕುಳಿತಿರುತ್ತಿತ್ತು. ಅಮ್ಮ ಅದನ್ನು ಎಷ್ಟು ಬಾರಿ ಹೊರಗೆ ಹಾಕಿದರೂ , ಸ್ವಲ್ಪ ಹೊತ್ತಿನಲ್ಲಿ ವಾಪಾಸ್ ಅಲ್ಲೇ ಕುಳಿತಿರುತ್ತಿತ್ತು.  ಹಾಗಾದರೆ  ಅವುಗಳಿಗೂ ತಮ್ಮ ಜಾಗ ತಮ್ಮ ಮನೆ ಇದು ಎಂಬ ಭಾವ ಮತ್ತು ಅದನ್ನು ಗುರುತಿಸಿ ಅಲ್ಲಿಗೇ ವಾಪಾಸಾಗುವ ಸಾಮರ್ಥ್ಯ ಎಲ್ಲಾ ಇರಬಹುದೆ ಎಂಬ ಆಶ್ಚರ್ಯ . ಅದನ್ನು ಇನ್ನಷ್ಟು ಪರೀಕ್ಷಿಸಬೇಕೆಂಬ ಯೋಚನೆಯಲ್ಲಿ , ಹಿಡಿದು, ಗುರುತಿಗಾಗಿ ಕಾಲಿಗೊಂದು ಚಿಕ್ಕ ದಾರ ಸುತ್ತಿ , ಎರಡು ಫರ್ಲಾಂಗ್ ದೂರದಲ್ಲಿದ್ದ ಚಿಕ್ಕ ಹಳ್ಳವೊಂದರ ಬಳಿ ಬಿಟ್ಟು ಬಂದೆ. ನಾನು ಅದನ್ನು ಬಿಟ್ಟು ಬಂದಾಗ ಸುಮಾರು ಬೆಳಗಿನ ಹತ್ತು ಗಂಟೆ , ಸಾಯಂಕಾಲ ನಾಲ್ಕರ ವೇಳೆಗೆ ಅದು ಜಗಲಿಯ ಮೂಲೆಯ ತನ್ನ ಎಂದಿನ ಸ್ಥಾನದಲ್ಲಿ ಗಾಢ ಆಲೋಚನೆಯಲ್ಲಿ ಮುಳುಗಿರುವ ತತ್ವಜ್ಞಾನಿಯಂತೆ ಕುಳಿತಿತ್ತು.  ಆಮೇಲೆ ಅದನ್ನು ಎತ್ತಿ ಹೊರೆಗೆ ಹಾಕುವ ಸಾಹಸವನ್ನು ನಾವೆಲ್ಲರೂ ಕೈಬಿಟ್ಟೆವು. ಅದು ಸಹಾ ತನ್ನ ಮನೆಯೆಂಬ ಹಕ್ಕಿನಿಂದ ಕುಳಿತಿರುತ್ತಿತ್ತು. ಅದ್ಯಾವಾಗ ಏನನ್ನು ತಿನ್ನುತ್ತಿತ್ತೋ ನಾವ್ಯಾರು ಗಮನಿಸಲಿಲ್ಲ. ಆ ವರ್ಷ ಮಳೆಗಾಲ ಕಳೆದು ಚಳಿಗಾಲ ಮುಗಿಯುವವರೆಗೂ ಅಲ್ಲಿ ಇರುತ್ತಿದ್ದ ಆ ಕಪ್ಪೆರಾಯ ಬೇಸಿಗೆ ಪ್ರಾರಂಭವಾಗುತ್ತಿದ್ದಂತೆ ಮಾಯವಾಗಿದ್ದ. ಅದೆಲ್ಲಿ ಹೋಗಿ ಅಡಗಿದನೋ ಅಥವಾ ಸತ್ತೇ ಹೋದನೋ ತಿಳಿಯಲಿಲ್ಲ.

ಪಿಯುಸಿಯಲ್ಲಿ ಪ್ರಾಣಿಶಾಸ್ತ್ರದ ತರಗತಿಗಳಲ್ಲಿ ಕಪ್ಪೆಗಳ ದೇಹರಚನೆಯ ಬಗ್ಗೆಯೆ ವಿಸ್ತ್ರುತವಾದ ಪಾಠವಿತ್ತು.   ಅದರ ದೇಹದ ಹೊರಚರ್ಮವನ್ನು ಕೊಯ್ದು ಒಳಭಾಗಗಳನ್ನು ಗಮನಿಸುವಾಗ ಇನ್ನೂ  ಹೊಡೆದುಕೊಳ್ಳುತ್ತಿದ್ದ ಅದರ ಹೃದಯವನ್ನು ನೋಡಿ ಪಾಪಪ್ರಜ್ಞೆಯಿಂದ ಬೇಸರವಾಗಿಬಿಟ್ಟಿತ್ತು.

  ಬೆಂಗಳೂರಿಗೆ ಬಂದ ನಂತರ ಇಲ್ಲಿ ಕಪ್ಪೆಗಳನ್ನು ನೋಡೇ ಇಲ್ಲ . ಮಳೆಗಾಲದಲ್ಲೂ ಕೂಡ ಇಲ್ಲಿ ಕಪ್ಪೆಗಳನ್ನು ಕಂಡಿಲ್ಲ .




ಈ ಬಾರಿ ಮಳೆಗಾಲದ ಪ್ರಾರಂಭದಲ್ಲಿ ಊರಿಗೆ ಹೋಗಿದ್ದೆ . ಮಳೆ ಬಂದು ರಸ್ತೆಗಳಲ್ಲೆಲ್ಲಾ ನೀರು ನಿಂತಿತ್ತು.  ಹೊಸ ತೋಟದ ಬಳಿಯಂತೂ ಅಲ್ಲಲ್ಲಿ ನೀರು ನಿಂತು ಪುಟ್ಟ ಪುಟ್ಟ ಕೆಂಪು ನೀರಿನ ಕೆರೆಯೆ ಸೃಷ್ಟಿಯಾದಂತಿತ್ತು. ಹೀಗೆ ಸೃಷ್ಟಿಯಾದ ಕೆಲ ಪುಟ್ಟ ಹೊಂಡಗಳಲ್ಲಿ ಚಿಕ್ಕ ಚಿಕ್ಕ ನೊರೆಗಳಿಂದಾದ ದೊಡ್ಡ ಗುಳ್ಳೆಗಳು  ತೇಲುತ್ತಿದ್ದವು. ಮಧ್ಯೆ ಮಧ್ಯೆ ಬಿಳಿಯ ಮೊಟ್ಟೆಯಂತಹ ವಸ್ತು ಕಾಣಿಸುತ್ತಿತ್ತು.  ನಿಧಾನವಾಗಿ ಅದರ ಒಂದು ಬದಿಯನ್ನು ಮುಟ್ಟಿದೆ. ಜೆಲ್ಲಿಯನ್ನು ಸ್ಪರ್ಶಿಸಿದ ಅನುಭವವಾಯ್ತು .  "ನೀರ ಮೇಲಣ ಗುಳ್ಳೆ ನಿಜವಲ್ಲ ಹರಿಯೆ " ಎಂಬ ದಾಸವಾಣಿಯನ್ನು ಸುಳ್ಳಾಗಿಸುವಂತೆ ಅಚಲವಾಗಿತ್ತು ಆ ನೊರೆಗುಳ್ಳೆ. ಇದೇನಿರಬಹುದೆಂಬ ಅಚ್ಚರಿಯಲ್ಲಿ ತಲೆಕೆಡಿಸಿಕೊಂಡು ನಿಂತಿದ್ದಾಗ , ಅಪ್ಪ ಇದು ಕಪ್ಪೆಗಳು ಇಟ್ಟಿರುವ ಮೊಟ್ಟೆಗಳು , ಇಂತಹ ನೊರೆಗುಳ್ಳೆಗಳು ಈ ಕಾಲದಲ್ಲಿ  ಬೇಕಾದಷ್ಟು ಕಾಣಿಸುತ್ತವೆ ಎಂದರು.



ನನಗೆ ಕಾಲೇಜಿನಲ್ಲಿ ಕಪ್ಪೆಗಳ ಬಗ್ಗೆ ಓದುವಾಗ ಅವು ನೀರಿನಲ್ಲಿ ಮೊಟ್ಟೆಗಳನ್ನು ಇಡುತ್ತವೆ , ಎಂದು ಓದಿದ ನೆನಪಿತ್ತು. ಆದರೆ ಹೀಗೆ ನಾಲ್ಕಾರು  ದಿನಗಳಲ್ಲಿ ಒಣಗಿ ಹೋಗುವ ಈ ಪುಟ್ಟ ಹೊಂಡದಲ್ಲಿ   ನೊರೆಗುಳ್ಳೆಗಳನ್ನು ನಿರ್ಮಿಸಿ ಮೊಟ್ಟೆಗಳನ್ನಿಡುವ ಬಗ್ಗೆ ಓದಿದ ನೆನಪಿರಲಿಲ್ಲ.  ಹೊರಬಂದ ಮರಿಗಳು ಇಲ್ಲಿ ಬೆಳೆಯುವುದಾದರೂ ಹೇಗೆ? ಅವಕ್ಕೆ ಆಹಾರವೆಲ್ಲಿ ಸಿಗುತ್ತದೆ?

ಕೊನೆಗೆ ಗೂಗಲಮ್ಮ ಇದಕ್ಕೆಲ್ಲ ಉತ್ತರ ತಿಳಿಸಿದಳು.

 ಕಪ್ಪೆಗಳಲ್ಲಿ ಅನೇಕ ಜಾತಿಗಳಿವೆ. ನೆಲದಲ್ಲಿ , ನೀರಿನ  ಸನಿಹ  ವಾಸಿಸುವಂತವು ಹಲವಾದರೆ, ಮರಗಳ ಮೇಲೆ ಇರುವಂತವು ಕೆಲವು. ನಮ್ಮ ಪಶ್ಚಿಮಘಟ್ಟದ ಕಾಡುಗಳಲ್ಲಿ ಪ್ರಪಂಚದಲ್ಲಿ ಬೇರೆಲ್ಲೂ ಇರದ ಅನೇಕ ಜಾತಿಯ ಅಪೂರ್ವ ಕಪ್ಪೆಗಳಿವೆಯಂತೆ.  ಕಪ್ಪೆಗಳ ಜೀವನಚಕ್ರದಲ್ಲಿ,  ಮೊಟ್ಟೆ - ಗೊದಮೊಟ್ಟೆ - ಕಪ್ಪೆ ಈ ಮೂರು ಹಂತಗಳಿವೆ . ಕಪ್ಪೆಗಳು ಕೆರೆ ಹಳ್ಳಗಳಲ್ಲಿ   ಒಂದು ರೀತಿಯ ಲೋಳೆ ದ್ರವದಿಂದ ಆವರಿಸಿದ ಕಪ್ಪುಬಣ್ಣದ ಮೊಟ್ಟೆಗಳನ್ನು ಇಡುತ್ತವೆ . ಮೊಟ್ಟೆಯೊಡೆದು ಹೊರಬರುವ ಮರಿಗಳೇ ಗೊದಮೊಟ್ಟೆಗಳು . ಮೀನಿನಾಕಾರದಲ್ಲೆ ಇರುವ ಇವುಗಳು ಮೀನಿನಂತೆಯೆ ಜಲವಾಸಿಗಳು. ಈ ಗೊದಮೊಟ್ಟೆ ಎರಡು ಮೂರು ಹಂತದಲ್ಲಿ ಬೆಳೆದು ನಂತರ ಕಪ್ಪೆಯಾಗುತ್ತದೆ.  ಕಪ್ಪೆಗಳ ಮೊಟ್ಟೆಗಳು, ಮರಿಗಳು ಅನೇಕ ಜಲಚರಗಳಿಗೆ ಆಹಾರವಾದ್ದರಿಂದ ಬದುಕಿ ಉಳಿಯುವ ಸಂಖ್ಯೆ ಕಡಿಮೆ.


  ಕೆಲವು ನೆಲವಾಸಿ , ಮರವಾಸಿ ಕಪ್ಪೆಗಳು ಮೊಟ್ಟೆಯಿಡಲು ಇನ್ನೂ ಸುರಕ್ಷಿತ ವಿಧಾನವನ್ನನುಸರಿರುತ್ತವೆ. ಮರವಾಸಿ ಕಪ್ಪೆಗಳು  ಕೆರೆ ಕೊಳ್ಳಗಳ ಬಳಿಯಿರುವ ಮರಗಿಡಗಳನ್ನು ಅಯ್ದುಕೊಳ್ಳುತ್ತವೆ. ಅಲ್ಲಿ ನೀರಿನ ಮೇಲೆ ಬಾಗಿರುವ ಟೊಂಗೆಯನ್ನು ಹುಡುಕಿ ಅದರ ಎಲೆಯ ಮೇಲೆ ನೊರೆಗೂಡನ್ನು ನಿರ್ಮಿಸಿ ಅದರಲ್ಲಿ ಮೊಟ್ಟೆಯಿಡುತ್ತವೆ.  ಮೊಟ್ಟೆಯೊಡೆದು ಹೊರಬರುವ ಮರಿ ನೇರವಾಗಿ ನೀರಿಗೆ ಬೀಳುತ್ತದೆ.ಅಲ್ಲಿ ಬೆಳೆದು ಕಪ್ಪೆಯಾಗಿ , ದಡ ಸೇರಿ ಮರಗಳಲ್ಲಿ ವಾಸಿಸುತ್ತವೆ.
ಇನ್ನು ಕೆಲ ನೆಲವಾಸಿ ಕಪ್ಪೆಗಳು ಮಳೆಗಾಲದಲ್ಲಿ ತಾತ್ಕಾಲಿಕವಾಗಿ ಸೃಷ್ಠಿಯಾಗುವ ನೀರಿನ ಹೊಂಡಗಳಲ್ಲಿ ನೊರೆಗೂಡು ನಿರ್ಮಿಸಿ ಮೊಟ್ಟೆಯಿಡುತ್ತವೆ. ಮರಿಯಾದ ನಂತರ ಇವುಗಳು ಮಳೆಯ ನೀರಿನ ಜೊತೆ ತೇಲುತ್ತಾ ಹತ್ತಿರದ ಕೆರೆಕೊಳ್ಳಗಳನ್ನು ಸೇರಿಕೊಂಡು ಬೆಳೆಯುತ್ತವೆ.


ನೊರೆಗೂಡು ನಿರ್ಮಿಸಲು ಹೆಣ್ಣು ಕಪ್ಪೆ ಮೊದಲು ಲೋಳೆಯಾದ ದ್ರವವನ್ನು ಸ್ರವಿಸುತ್ತದೆ.   ಗಂಡು ಕಪ್ಪೆಗಳು  ಕಾಲಿನಲ್ಲಿ ಅದನ್ನು ಬೀಟ್ ಮಾಡಿ ನೊರೆ ಉಂಟುಮಾಡುತ್ತವೆ.  ಒಮ್ಮೆ ಚೆನ್ನಾಗಿ ನೊರೆ ಉಂಟಾದ ಮೇಲೆ ಹೆಣ್ಣು ಅದರ ಮಧ್ಯೆ ಬಿಳಿಯ ಬಣ್ಣದ ಮೊಟ್ಟೆಗಳನ್ನಿಡುತ್ತದೆ.   ನೊರೆಗುಳ್ಳೆಯ ಮೇಲ್ಭಾಗ ಗಾಳಿಯ ಸಂಪರ್ಕದಿಂದ ಗಟ್ಟಿಯಾಗಿ ಜೆಲ್ಲಿಯಂತಾಗುತ್ತದೆ.  ಕೆಸರು ನೀರಿನಲ್ಲಿ ಇದು ಇರುವುದರಂದ ಸೂಕ್ಷ್ಮಾಣುಗಳಿಂದ  ಮೊಟ್ಟೆಗಳು ನಾಶವಾಗದಂತೆ ತಡೆಯುವ ಸೂಕ್ಷ್ಮಾಣು ನಿರೋಧಕ ಅಂಶ ನೊರೆಯಲ್ಲಿರುವ ಪ್ರೋಟೀನ್ ಗಳಲ್ಲಿರುತ್ತದೆ. ಆದರೆ ಆ ಪ್ರೋಟೀನ್ ಮೊಟ್ಟೆಗಳ ಮೇಲೆ ಯಾವುದೇ ದುಷ್ಪರಿಣಾಮ ಉಂಟುಮಾಡುವುದಿಲ್ಲ. ನೊರೆಯ ಈ ಗುಣವೀಗ ಜೀವವಿಜ್ಞಾನಿಗಳ ಗಮನ ಸೆಳೆದಿದೆಯಂತೆ. ರೋಗಾಣುಗಳನ್ನು ನಾಶಪಡಿಸುವ , ದೇಹದ ಜೀವಕೋಶಗಳಿಗೆ ಯಾವುದೇ ಹಾನಿಯುಂಟುಮಾಡದ ಔಷಧಿಗಳನ್ನು ತಯಾರಿಸಲು ಇದು ನೆರವಾಗಲಿದೆಯಂತೆ.
ಇಷ್ಟೇ ಅಲ್ಲದೆ ಈ ನೊರೆ , ಮೊಟ್ಟೆಗಳಿಗೆ ಅವಶ್ಯಕವಾದ ತೇವಾಂಶವನ್ನೂ ಒದಗಿಸಿ ಕಾಪಾಡುತ್ತದೆ. ತಾತ್ಕಾಲಿಕ ನೀರಿನ ಹೊಂಡಗಳು ಬೇಗನ ಒಣಗಿಹೋಗಬಹುದಾದ್ದರಿಂದ ಇಂತಹ ಜಾಗದಲ್ಲ್ಲಿರುವ ನೊರೆಗುಳ್ಳೆಗಳಲ್ಲಿರುವ ಮೊಟ್ಟೆಗಳು ಬೇಗನೇ ಬೆಳೆದು ಮರಿಯಾಗುತ್ತದೆ.
ಈ ರೀತಿಯ ತತ್ಕಾಲಿಕ ಹೊಂಡಗಳಲ್ಲಿ ಮೀನು ಮೊದಲಾದ ಯಾವುದೇ ಜಲಚರಗಳು ಇರುವುದಿಲ್ಲವಾದ್ದರಿಂದ ಇಲ್ಲಿ ಕಪ್ಪೆಗಳಿಡುವ ಮೊಟ್ಟೆಗಳನ್ನು ತಿನ್ನುವ ವೈರಿಗಳಿಲ್ಲ .  ಬೇರಾವುದೇ ನೆಲವಾಸಿಗಳಿಗೆ ಜೆಲ್ ನಂತಿರುವ ನೊರೆಯನ್ನು ಬೇಧಿಸಿ ಮೊಟ್ಟೆ ತಿನ್ನಲು ಸಾಧ್ಯವಿಲ್ಲ .
ನಿಜಕ್ಕೂ ಪ್ರಕೃತಿ ವಿಸ್ಮಯಗಳ ಸಂತೆ !! ಅಲ್ಲವೆ?





5 comments:

  1. ನೊರೆಗೂಡುಗಳು ಹಲವು ಪ್ರಕಾರದ ಮೀನುಗಳಲ್ಲೂ ಕಂಡುಬರುತ್ತದೆ ಸುಮಾ.. ಗೊರಾಮಿ, ಫೈಟರ್ ಗೋಲ್ಡ್ ಫಿಶ್ ಇವೆಲ್ಲಾ ನೊರೆಗುಳ್ಳೆ ಗೂಡು ಕಟ್ಟುವ ನೈಪುಣ್ಯ ಹೊಂದಿರುವ ಮೀನುಗಳು.
    ಬಹಳ ರಸವತ್ತಾಗಿ ಆಸಕ್ತಿ ಮೂಡುವಂತೆ ಪರಿಸರ ಪರಿಚಯ ಮಾಡಿಕೊಡುವ ನಿಮ್ಮ ಲೇಖನಗಳು ನಿಜಕ್ಕೂ ವಿಙಾನವನ್ನು ಇನ್ನಷ್ಟು ಆಸಕ್ತಿದಾಯಕ ವಿಷಯವನ್ನಾಗಿಸುತ್ತವೆ. ಇನ್ನೂ ಹೆಚ್ಚು ಹೆಚ್ಚು ಮೂಡಿಬರಲಿ. ಪುಸ್ತಕ ಏಕೆ ಮಾಡಬಾರದು ನೀವು.. ನಾನು ಈ ವಿಚಾರದಲ್ಲಿ ಕಾರ್ಯತತ್ಪರನಾಗಿದ್ದೇನೆ...

    ReplyDelete
  2. ನಾನು ಪಿ.ಯು.ಸಿಯಲ್ಲಿ ಮಾಡಿದ ಡಿಟೆಕ್ಷನ್ ನೆನಪಾದವು.
    ಒಳ್ಳೆಯ ಕಪ್ಪೆ ವಿವರ.

    ReplyDelete
  3. ಲೇಖನ ಚೆನ್ನಾಗಿದೆ ಸುಮಾ ಅವರೆ ..

    ReplyDelete
  4. ಸುಮ್ಮನೆ ಇದೆಂತದೋ ನೊರೆಗುಳ್ಳೆ ಎಂದು ತಳ್ಳಿಹಾಕುತ್ತಿದ್ದ ಮನಸಿಗೆ ಅದನ್ನು ಗಮನಿಸಿ ನೋಡುವ ಮಾಹಿತಿಯನ್ನು ಕೊಟ್ಟಿದ್ದೀರಿ. ಧನ್ಯವಾದಗಳು.

    ReplyDelete
  5. I had no idea Suma! Very informative! Thank you for sharing!
    Malathi S

    ReplyDelete