15 Oct 2014

ಎಲೆ - ಅಡಿಕೆ

" ಕಾಫಿ ಅಥವಾ ಟೀ ಜಾಸ್ತಿ ಕುಡೀತೀಯಾ? " ಚಿಕ್ಕ ಬಾಚಿಯಂತಹ ಸಾಧನದಿಂದ ನನ್ನ ಹಲ್ಲನ್ನು ಕೆರೆಯುತ್ತಾ ಆ ಹಲ್ಲಿನ ಡಾಕ್ಟರ್ ಕೇಳಿದರು.
"ಇಲ್ಲಪ್ಪ ನಾನು ದಿನಕ್ಕೆ ಎರಡೇ ಕಪ್ ಕಾಫಿ ಕುಡಿಯೋದು " .
" ದಿನಕ್ಕೆ ಎಷ್ಟು ಸಾರಿ ಬ್ರಶ್ ಮಾಡ್ತೀ?" ಅನುಮಾನದಿಂದ ಆತ ಮತ್ತೆ ಪ್ರಶ್ನಿಸಿದರು .
"ದಿನಕ್ಕೆರಡು ಬಾರಿ ಮಾಡ್ತೀನಿ ಸರ್ ...ಮಧ್ಯೆ ಏನಾದ್ರೂ ಚಾಕೊಲೇಟ್ ಅಥವಾ ಸ್ವೀಟ್ ತಿಂದರೆ ಮತ್ತೊಂದು ಬಾರಿ " ......  ಪ್ರೈಮರಿ ಸ್ಕೂಲಿನ ಪಿಟಿ ಮೇಸ್ಟ್ರು ನೆನಪಾಗಿ ನಗು ಬಂತು.
ಆದರೆ ಡಾಕ್ಟ್ರಪ್ಪ ನಗಲಿಲ್ಲ. ಇನ್ನಷ್ಟು ಗಂಭೀರವಾಗಿ "ಹಾಗಾದರೆ ಯಾಕಮ್ಮ ಇಷ್ಟು ಬೇಗ ನಿನ್ನ ಹಲ್ಲು ಇಷ್ಟೊಂದು ಕರೆಗಟ್ಟುತ್ತೆ ???  ಅಡಿಕೆ ಎಲೆ ಏನಾದ್ರೂ ತಿನ್ನೋ ಅಭ್ಯಾಸ ಇದೆಯಾಮ್ಮ " ಕೇಳಿದರು . 
ಮಾಲು ಸಮೇತ ಸಿಕ್ಕಿಬಿದ್ದ  ಕಳ್ಳನಂತಾದರೂ , ಸಾವರಿಸಿಕೊಂಡೆ.
ಹೂಂ....ಎಲ್ಲಾದರೂ ಊರಿಗೆ ಹೋದಾಗ....ಒಮ್ಮೊಮ್ಮೆ ಅಷ್ಟೇ ಸರ್ ....  ಎಲೆ ಅಡಿಕೆ ಹಾಕುತ್ತೇನೆ....
"ಇನ್ನು ಮೇಲೆ ಅದೆಲ್ಲ ಬಿಟ್ಬಿಡು ....ಇಲ್ಲವಾದರೆ ನಿನ್ನ ಹಲ್ಲು ಒಂದೂ ನೆಟ್ಟಗಿರೋಲ್ಲ ನೋಡು " ಡಾಕ್ಟರ್ ಹೇಳಿದಾಗ ಸುಮ್ಮನೆ ತಲೆಯಾಡಿಸಿದೆ.

ಮಲೆನಾಡಿನ ಅಡಿಕೆ ಬೆಳೆಗಾರರ ಮನೆಯಲ್ಲಿ ಹುಟ್ಟಿ , ಸದಾಕಾಲ ಬಾಯಲ್ಲಿ ಎಲೆ ಅಡಿಕೆ ತುಂಬಿಕೊಂಡು ಅದನ್ನೇ ಜೀವನದ ಸಕಲ ಕೆಲಸಕಾರ್ಯಕ್ಕೂ ಸ್ಫೂರ್ತಿಯಾಗಿಟ್ಟುಕೊಂಡಿರುವ  ಅಜ್ಜ , ಅಪ್ಪನ ಧೀರ ಪರಂಪರೆಯನ್ನು ಉಳಿಸಿ ಬೆಳೆಸುವ ಹೊಣೆಗಾರಿಕೆಯಿರುವ ನಾನು ಎಲೆಅಡಿಕೆ ತಿನ್ನುವುದನ್ನು ಬಿಟ್ಟುಬಿಡಬೇಕಂತೆ !
ಇಷ್ಟಕ್ಕೂ ಇದು ನನಗೆ ಇವತ್ತು ನಿನ್ನೆಯ ಅಭ್ಯಾಸವೆ? ಬಹುಶಃ ನನಗೆ ಪ್ರಥಮ ಅನ್ನಪ್ರಾಶನವಾಗುತ್ತಿದ್ದಂತೆಯೆ , ಅದು  ಸರಿಯಾಗಿ ಜೀರ್ಣವಾಗಲಿ ಎಂದು ಅಪ್ಪ  ಚೂರೇ ಚೂರು ಅಡಿಕೆ ಎಲೆ ತಿನ್ನಿಸಿರಬಹುದು !

ನನಗೆ ನೆನಪಿರುವಂತೆ ಚಿಕ್ಕವಳಿದ್ದಾಗ ಪ್ರತಿ ದಿನ ರಾತ್ರಿ ಊಟವಾದ ಮೇಲೆ ಅಪ್ಪ ಒಂದು ವೀಳ್ಯದೆಲೆಗೆ   ಚಿಕ್ಕದಾಗಿ ಪುಡಿ ಮಾಡಿಕೊಂಡ ಅಡಕೆ  , ಚೂರೇ ಚೂರು ಸುಣ್ಣ ಬೆರೆಸಿ ಬಲ ಅಂಗೈಯಲ್ಲಿಟ್ಟುಕೊಂಡು  ಎಡ ಹೆಬ್ಬೆರಳಿನಿಂದ ಅದನ್ನು ತಿಕ್ಕಿ , ತಿಕ್ಕಿ ಮೃದುವಾಗಿಸಿ ಇನ್ನೇನು ಅದು ಕೆಂಪು ರಸ ಹೊರಸೂಸುತ್ತದೆನ್ನುವಷ್ಟರಲ್ಲಿ ಅದರಲ್ಲಿ ಸಮಪಾಲು ಮಾಡಿ ನನ್ನ ಮತ್ತು ತಂಗಿಯ ಬಾಯಿಗಿಡುತ್ತಿದ್ದರು . ಆ ನಂತರ ಅವರು ಹೇಳುತ್ತಿದ್ದ , ನರಿ ಕಬ್ಬಿನಗದ್ದೆಗೆ ನುಗ್ಗಿದ ಕಥೆಯನ್ನೋ ಅಥವಾ ಭೀಮ ಬಕಾಸುರರ ಸಮರದ ಕಥೆಯನ್ನೋ ಕೇಳುತ್ತಾ ಆ ಕವಳ ಜಗಿಯುವ ಮಜ ವರ್ಣಿಸಲಾಗದು .
ಸ್ವಲ್ಪ ದೊಡ್ಡವರಾಗುತ್ತಿದ್ದಂತೆ ಅಪ್ಪ ಸಾಗರದ ಹೋಟೆಲುಗಳ ಪಕ್ಕದಲ್ಲಿರುತ್ತಿದ್ದ ಬೀಡಾ ಅಂಗಡಿಯವರಂತೆಯೆ ಸಿಹಿ ಬೀಡಾ ಮಾಡಿ ಕೊಡುತ್ತಿದ್ದರು. ಈಗಲೂ ನಾನು ಊರಿಗೆ ಹೋಗುತ್ತೇನೆಂದರೆ ಅಪ್ಪ ಸಿಹಿ ಬೀಡಾ ತಯಾರಿಸಲು ಬೇಕಾಗುವ ಎಲ್ಲ ಪರಿಕರಗಳನ್ನು ಜೋಡಿಸಿಟ್ಟುಕೊಂಡಿರುತ್ತಾರೆ . ಹೋದ ದಿನದಿಂದ ವಾಪಾಸ್ ಬರುವವರೆಗೂ ದಿನಕ್ಕೊಂದೊ ಎರಡೋ ಬೀಡಾ ತಿಂದು ಸಂತೋಷಪಡುತ್ತೇನೆ. 

 ನಮ್ಮ ಮನೆಯಲ್ಲಿ ನಡೆದ ಸಮಾರಂಭವೊಂದಕ್ಕೆ ಅಪ್ಪ ತಯಾರಿಸಿದ ಸಿಹಿ ಬೀಡಾ

ಗಂಡನಿಗೆ ನಾನು ಹೀಗೆ ಎಲೆಅಡಿಕೆ ತಿನ್ನುವುದು ನೋಡಿದಾಗ ತಮ್ಮ ಅಜ್ಜಿಯ ನೆನಪಾಗತ್ತಂತೆ , ಅವರ ಬಳಿ ಇರುತ್ತಿದ್ದ ಕವಳದ ಸಂಚಿಯೊಂದು ಕಡಿಮೆ ನಿನ್ನ ಬಳಿ ಎನ್ನುತ್ತಿರುತ್ತಾರೆ. ಎಲ್ಲಾ ಗಂಡಸರಂತೆಯೆ ನನ್ನ ಹುಟ್ಟಿದ ದಿನವನ್ನು ಯಾವಾಗಲೂ ಮರೆಯುವ ನನ್ನ ಗಂಡ , ಈ ಬಾರಿ ಅದು ಹೇಗೋ ನೆನಪಿಟ್ಟುಕೊಂಡು ನನಗೊಂದು ಗಿಫ್ಟ್ ಕೂಡಾ ಕೊಟ್ಟಾಗ ನನಗೆ ಸಿಕ್ಕಾಪಟ್ಟೆ ಆಶ್ಚರ್ಯವಾಗಿಬಿಡ್ತು . ಗಿಫ್ಟ್ ಪ್ಯಾಕ್ ತೆಗೆದಾಗ ಕಂಡಿದ್ದು ಸುಂದರವಾದ ಕಸೂತಿ ಹಾಕಿದ ಸೆಣಬಿನ ನಾರಿನ  ಕವಳದ ಸಂಚಿ !  ಮುಸಿ ಮುಸಿ ನಗುತ್ತಾ ನಿಂತಿದ್ದ ಮಗಳು , ಈ ಪ್ಲಾನ್ ನಲ್ಲಿ ಅವಳ ಪಾಲೂ ಇದೆ ಎಂದು ಸಾರಿದ್ದಳು.



ತಾಂಬೂಲ ಎಂದು ಫಾರ್ಮಲ್ ಆಗಿ ಕರೆಯಬಹುದಾದ , ಬೀಡಾ , ಅಡಿಕೆ ಎಲೆ , ಇತ್ಯಾದಿ ಅನೇಕ ರೂಢಿಗತವಾದ ಹೆಸರುಗಳುಳ್ಳ ಈ ಜಿವ್ಹಾಪಹಾರಿಗೆ ಮಲೆನಾಡಿಗರು ಕರೆಯುವುದು " ಕವಳ " ಎಂದು. ಮಲೆನಾಡಿನ ಹೆಚ್ಚಿನ ಮನೆಗಳಲ್ಲಿ ದಿನ ಪ್ರಾರಂಭವಾಗುವುದು , ಮುಗಿಯುವುದು ಎರಡೂ ಕವಳದಿಂದಲೇ ಎಂಬ ಕಾಲವೊಂದಿತ್ತು.
ಅತಿಥಿಗಳು ಮನೆಗೆ ಬಂದರೆ ಹೆಂಗಸರು  ಅದೆಷ್ಟೇ ಮೃಷ್ಟಾನ್ಹ ಭೋಜನ ತಯಾರಿಸಿ ಬಡಿಸಿದರೂ , ಅದರ ನಂತರ ಒಂದು ಕವಳ ಬೀಳಲಿಲ್ಲವೆಂದರೆ ಅದು ಆತಿಥ್ಯವೇ ಅಲ್ಲ. ಇನ್ನು ಗಡಿಬಿಡಿಯಲ್ಲೇ ಭೇಟಿ ಕೊಟ್ಟು ಹೊರಡುವ ಅತಿಥಿಗಳಂತೂ ಬೇರೇನನ್ನೂ ತೆಗೆದುಕೊಳ್ಳದೆ  , ಕವಳ ಹಾಕಿಕೊಂಡು ಹೊರಟರೆಂದರೆ ಮನೆಯವರು ಸಂತೄಪ್ತರಾಗುತ್ತಿದ್ದರು. ಇನ್ನು ಮದುವೆ ಮುಂಜಿ ದೇವರಕಾರ್ಯ ಮುಂತಾದ ವಿಶೇಷ ದಿನಗಳೆಂದರೆ ಉಳಿದ ತಯಾರಿಗಳ ಜೊತೆಗೆ ಕವಳಕ್ಕೆ ಬೇಕಾಗುವ ಸಾಮಗ್ರಿಗಳನ್ನು ಮರೆಯದೇ ಜೋಡಿಸಿಡುವುದು ದೊಡ್ಡ ಕೆಲಸವೇ . ಹಿಂದಿನ ದಿನವೇ ಊರಿನ ನಾಲ್ಕಾರು ಗಂಡಸರು ತಮ್ಮ ಮನೆಯಿಂದಲೇ ತಂದ ಅಡಿಕೆ ಕತ್ತರಿಯಲ್ಲಿ ಒಂದೆರಡು ಕೆಜಿ ಅಡಿಕೆಯನ್ನು ಚಿಕ್ಕ ಚೂರುಗಳನ್ನಾಗಿ ಕತ್ತರಿಸಿಡುವುದು ಸಂಪ್ರದಾಯವೆನ್ನುವಷ್ಟರ ಮಟ್ಟಿಗೆ ಚಾಲ್ತಿಯಲ್ಲಿದೆ.  ವಿಶೇಷದ ಸಿಹಿ ಊಟದ ನಂತರ ಗಂಡಸರೆಲ್ಲ ಕವಳದ ತಟ್ಟೆ ಅರಸಿ , ಅದರ ಸುತ್ತಾ  ಸೇರಿದರೆಂದರೆ , ಜಗತ್ತಿನ ಸಕಲೆಂಟು ವಿಚಾರಗಳೂ ಅಲ್ಲಿ ಚರ್ಚೆಯಾಗುತ್ತಿದ್ದವು.  ಒಳಮನೆಯಲ್ಲಿ ಕುಳಿತ ಹೆಂಗಸರು ಹೊರಜಗಲಿಯಲ್ಲಿದ್ದ  ಕವಳದ ತಟ್ಟೆಯನ್ನು ಅಲ್ಲೇ ಓಡಾಡುತ್ತಿರುವ ಯಾವುದೋ ಚಿಲ್ಟಾರಿಯ ಬಳಿ ಹೇಳಿ ತರಿಸಿಕೊಂಡು ಜಗ ಗೆದ್ದ ಸಂಭ್ರಮದಲ್ಲಿ ಕವಳ ಹಾಕುವ ದೃಶ್ಯ   ಸಾಮಾನ್ಯವಾಗಿತ್ತು.

 ಇಪ್ಪತ್ತು ಮುವತ್ತು ವರ್ಷಗಳ ಹಿಂದಿನವರೆಗೂ ಮಲೆನಾಡಿನ ಪ್ರತಿಯೊಬ್ಬ ಅಡಿಕೆ ಬೆಳೆಗಾರರ ಮನೆಯಲ್ಲೂ ಕಂಡುಬರುತ್ತಿದ್ದ ವಸ್ತುವೆಂದರೆ ಕವಳದ ತಬುಕು ಅಥವಾ ಕವಳದ  ತಟ್ಟೆ .  ಮನೆಯ ಜಗುಲಿಯಲ್ಲಿರುವ ಮರದ ಮೇಜಿನ ಮೇಲೆ ಇನ್ನೇನೂ ಇಲ್ಲದಿದ್ದರೂ ಕವಳದ ತಬುಕನ್ನಂತೂ  ಇಲ್ಲಿನ ಪ್ರತೀ ಮನೆಯಲ್ಲೂ ಕಾಣಬಹುದಿತ್ತು.
ಆ ಕವಳದ ತಟ್ಟೆಯೆಂದರೆ ಸಾಮಾನ್ಯವಲ್ಲ. ಅದರಿಂದಲೇ ಆ ಮನೆಯ ಅಂತಸ್ತು , ಶಿಸ್ತು , ಸ್ವಚ್ಛತೆಯ ಮಟ್ಟವನ್ನು ಅಳೆಯಬಹುದಿತ್ತು.  ಬೀಟೆಯ ಮರದ ಸುಂದರ ಕೆತ್ತನೆಯುಳ್ಳ ತಟ್ಟೆ , ಬೆತ್ತದಲ್ಲಿ ಸುಂದರವಾಗಿ ನೇಯ್ದ ತಟ್ಟೆ , ಬೆಳ್ಳಿ , ತಾಮ್ರದ ಅಗಲವಾದ ಹರಿವಾಣ , ಹೀಗೆ ಅವರವರ ಅನುಕೂಲಕ್ಕೆ ತಕ್ಕ ತಟ್ಟೆಯನ್ನು ಕವಳದ ತಟ್ಟೆಯಾಗಿ ಉಪಯೋಗಿಸುತ್ತಿದ್ದರು . ಆ ತಟ್ಟೆಯಲ್ಲಿ ಸುಣ್ಣ ಇಡಲಿಕ್ಕೆಂದು ಚಿಕ್ಕದಾದ ಒಂದು ಡಬ್ಬಿ , ಕತ್ತರಿಸಿದ ಹೊಗೆಸೊಪ್ಪು ಇಡಲೊಂದು ಡಬ್ಬಿ , ಕತ್ತರಿಸಿದ ಆಡಕೆ ಹಾಕಿಡಲೊಂದು ಡಬ್ಬಿ , ಅಡಿಕೆ ಕತ್ತರಿ ಹೀಗೆ ಕವಳ ಹಾಕುವವರ ಅವಶ್ಯಕತೆ ಅನುಕೂಲಕ್ಕೆ ತಕ್ಕಂತೆ ಜೋಡಿಸಿಇಡುತ್ತಿದ್ದರು .

ಕವಳಕ್ಕೆ ಬೇಕಾಗುವ ಸಾಮಗ್ರಿಗಳನ್ನು ಹದಮಾಡಿಡುವುದೂ ಒಂದು ಕಲೆ. ನಮ್ಮ ಮನೆಯಲ್ಲಿ ಇದನ್ನು ಹೆಚ್ಚಾಗಿ ಮಾಡುತ್ತಿದ್ದುದು ಅಜ್ಜ ಮತ್ತು ಅಪ್ಪ.
ಸಾಮಾನ್ಯವಾಗಿ ವೀಳ್ಯದೆಲೆಯನ್ನು ಮನೆ ಎದುರಿನ ಕೈತೋಟದಲ್ಲಿ ಬೆಳೆಸುತ್ತಿದ್ದರು. ಅಡಕೆ ಕೊಯಿಲಾಗಿ , ಅದನ್ನು ಬೇಯಿಸಿ ಒಣಗಿಸಿದಮೇಲೆ  ಗೋಟಾಗದ , ಒಳ್ಳೆಯ ಬೆಟ್ಟೆ ಅಡಿಕೆಯನ್ನು ಆರಿಸಿ  ವರ್ಷಕ್ಕಾಗುವಷ್ಟನ್ನು ಡಬ್ಬಿಯಲ್ಲಿ ತುಂಬಿಸಿಡುತ್ತಿದ್ದರು . 
ಸುಣ್ಣವನ್ನು ಹದ ಮಾಡಿಡುವುದೊಂದು ದೊಡ್ಡ ಪ್ರೊಸೀಜರ್ . ಪೇಟೆಯಲ್ಲಿ ಸಿಗುವ ಕಲ್ಲುಸುಣ್ಣವನ್ನು ತಂದು ಅದನ್ನು ದೊಡ್ಡದೊಂದು ಪಾತ್ರೆಯಲ್ಲಿ ಹಾಕಿಟ್ಟು ಅದರ ಮೇಲೆ ಎಚ್ಚರಿಕೆಯಿಂದ ನೀರು ಸುರಿಯುತ್ತಿದ್ದರು . ಸುಣ್ಣ ನೀರಿನಲ್ಲಿ ಕರುಗುವಾಗ ಹೆಚ್ಚಿನ ಶಾಖ ಉಂಟಾಗಿ ಕುದಿಯುತ್ತದೆ . ಹಾಗಾಗಿ  ಮಕ್ಕಳ್ಯಾರೂ  ಹತ್ತಿರ ಹೋಗದಂತೆ ತಡೆಯುತ್ತಿದ್ದರು.  ಗಟ್ಟಿಯಾದ ಸುಣ್ಣವೆಲ್ಲ ಕರಗಿ ದ್ರಾವಣ ತಣ್ಣಗಾದಾಗ ಅದನ್ನು ಒಂದು ಶುದ್ಧವಾದ ಬಟ್ಟೆಯಲ್ಲಿ ಸೋಸುತ್ತಿದ್ದರು.  ಕೆಳಗಿನ ಶುದ್ಧವಾದ ಸುಣ್ಣದ ದ್ರಾವಣವನ್ನು ಸ್ವಲ್ಪ ಹೊತ್ತು ಹಾಗೆಯೆ ಬಿಟ್ಟಾಗ  ತಿಳಿ ನೀರು ಮೇಲೆ ಉಳಿಯುತ್ತದೆ. ಆ ನೀರನ್ನು ಬಗ್ಗಿಸುತ್ತಾ ಬಂದಂತೆ ಕೆಳಗೆ ದಪ್ಪನಾದ ಸುಣ್ಣದ ದ್ರಾವಣ ಉಳಿಯುತ್ತದೆ. ಆ ದ್ರಾವಣವನ್ನು ಮತ್ತೆ ಸೋಸುತ್ತಿದ್ದರು. ಆಗ ಬಟ್ಟೆಯಲ್ಲಿ ಶುದ್ಧವಾದ ಮೃದುವಾದ ಬೆಣ್ಣೆಯಂತಹ ಸುಣ್ಣ ಉಳಿಯುತ್ತಿತ್ತು. ಆ ಸುಣ್ಣವನ್ನು ಒಂದು ಮಡಕೆಯಲ್ಲಿ ತುಂಬಿಸಿ ಬಟ್ಟೆಯಿಂದ ಕಟ್ಟಿ ಅಡುಗೆಮನೆಯ ಅಟ್ಟದ ಮೇಲೆ ಇಡುತ್ತಿದ್ದರು. ಬೇಕಾದಾಗ ಆ ಮಡಕೆಯಿಂದ ಚಿಕ್ಕ ಸುಣ್ಣದ ಡಬ್ಬಿಗೆ ಸುಣ್ಣವನ್ನು ತೆಗೆದು ತರುವುದೂ ಅಜ್ಜ ಇಲ್ಲವೆ ಅಪ್ಪ ಮಾತ್ರ . ಈಗೆಲ್ಲ ಚಿಕ್ಕ ಚಿಕ್ಕ ಡಬ್ಬಿಗಳಲ್ಲಿ ಹದಮಾಡಿದ ಸುಣ್ಣವೇ ಸಿಗುತ್ತದೆ.

ಹಿಂದೆಲ್ಲ ಮಲೆನಾಡಿನ ಮನೆಗಳ ಹೊರಜಗುಲಿಗಳ ಗೋಡೆಗಳಲ್ಲಿ  ಸುಣ್ಣದ ಚಿತ್ರ ವಿಚಿತ್ರ ಚಿತ್ತಾರಗಳು ಕಾಣುತ್ತಿದ್ದವು.  ಹೆಚ್ಚಿನ ಖರ್ಚಿಲ್ಲದೇ ಈ ಚಿತ್ತಾರಗಳು ಗೋಡೆಯ ಮೇಲೆ ಮೂಡುತ್ತಿದ್ದವು.  ಎಲೆಗೆ  ತೋರುಬೆರಳಿನ ತುದಿಯಿಂದ ಸುಣ್ಣ ಹಚ್ಚಿದವರು ಬೆರಳಿನಲ್ಲಿ ಉಳಿದ ಸುಣ್ಣವನ್ನು ಅಲ್ಲೇ ಸಿಗುವ ಗೋಡೆಗೆ ಬಳಿದು ಅದನ್ನು ಶೃಂಗರಿಸುತ್ತಿದ್ದದೇ ಇದಕ್ಕೆ ಕಾರಣ ಅಂತ ತಾಂಬೂಲದ್ವೇಷಿ ಅಮ್ಮ ಹೇಳೋದನ್ನ ನಾನಂತೂ ಒಪ್ಪಿಲ್ಲ ಬಿಡಿ.

ಇನ್ನು ಹೊಗೆಸೊಪ್ಪಿಲ್ಲದ ಕವಳ ಉಪ್ಪಿಲ್ಲದ ಊಟವೇ ಸರಿ ಎಂದು ಅಜ್ಜ , ಅಪ್ಪನ ಭಾವನೆಯಾಗಿತ್ತು. ಪೇಟೆಯಲ್ಲಿ ಸಿಗುವ ತಂಬಾಕಿನ ಕಟ್ಟನ್ನು ತಂದು , ಅದನೊಮ್ಮೆ ತೊಳೆದು , ಚಿಕ್ಕದಾಗಿ ಕತ್ತರಿಸಿ ಸ್ವಲ್ಪ ಸುಣ್ಣದೊಂದಿಗೆ ಚೆನ್ನಾಗಿ ಕಲೆಸಿ ಒಂದು ಡಬ್ಬಿಯಲ್ಲಿ ಇಟ್ಟುಕೊಂಡಿರುತ್ತಿದ್ದರು.  ಆ ಡಬ್ಬಿಯ ಮುಚ್ಚಳವನ್ನು   ತೆಗೆದರೆ ಅದರ ಘಾಟು ವಾಸನೆ ಮೂಗಿಗೆ ಬಡಿದು ತಲೆ ತಿರುಗಿದಂತಾಗುತ್ತಿತ್ತು. ಆಗೆಲ್ಲ ಈ ಗಂಡಸರು ಹೇಗೆ ಇದನ್ನು ತಿನ್ನುತ್ತಾರೋ ಎಂದು ಆಶ್ಚರ್ಯವಾಗುತ್ತಿತ್ತು. ಕೆಲಸದ ಮಂಜಿ ಒಮ್ಮೆ ಹೊಗೆಸೊಪ್ಪು ತಿನ್ನುವುದನ್ನು ನೋಡಿದ ನಾನು ಅರೆ ಹೆಂಗಸಾಗಿ ಇವಳೂ ಹೊಗೆಸೊಪ್ಪು ತಿನ್ನುತ್ತಾಳಾ ಎಂದು ಆಶ್ಚರ್ಯಪಟ್ಟಿದ್ದೆ. ಇದು ಎಷ್ಟು ಅಡಿಕ್ಟಿವ್ ಎಂದರೆ ಅಜ್ಜನಿಗೊಮ್ಮೆ ಬ್ರೈನ್ ಹೆಮರೇಜ್ ಆಗಿ ಆಪರೇಷನ್ ಮಾಡಿದರು. ಹದಿನೈದು ದಿನಗಳ ಕಾಲ ಸಾವು ಬದುಕಿನ ಮಧ್ಯೆ ಹೋರಾಡಿದ ಅಜ್ಜ ನಂತರ ಚೇತರಿಸಿಕೊಂಡರು. ಡಾಕ್ಟರ್ ಅವರಿಗಿನ್ನು ತಂಬಾಕು ತಿನ್ನಲು ಬಿಡಲೇಬೇಡಿರೆಂದು ಸೂಚಿಸಿದ್ದರು. ಅವರು ಸಹಜ ಸ್ಥಿತಿಗೆ ಮರಳಲು  ಸುಮಾರು ನಾಲ್ಕು ತಿಂಗಳು ಬೇಕಾಯಿತು. ಅಲ್ಲಿಯವರೆಗೂ ಅವರು ತಂಬಾಕು ತಿನ್ನದಂತೆ ನೋಡಿಕೊಂಡಿದ್ದಷ್ಟೇ ನಮಗೆ ಸಾಧ್ಯವಾಗಿದ್ದು. ನಂತರ ಚಿಕ್ಕ ಮಕ್ಕಳು ತಿಂಡಿಯನ್ನು ಕದ್ದುಮುಚ್ಚಿ ತಿಂದಂತೆ ಕದ್ದುಮುಚ್ಚಿಯಾದರೂ ಹೊಗೆಸೊಪ್ಪು ತಿನ್ನುತ್ತಿದ್ದರು. ಸ್ವಲ್ಪ ದಿನಗಳ ನಂತರ ರಾಜಾರೋಷವಾಗೇ ನಮಗೆಲ್ಲರಿಗೂ ಹೆದರಿಸಿ ತಿನ್ನಲು ಪ್ರಾರಂಭಿಸಿದರು.  ಯಾರಾದರೂ ಹೊಗೆಸೊಪ್ಪಿನ ದುಷ್ಪರಿಣಾಮಗಳ ಬಗ್ಗೆ  ಮಾತನಾಡಿದರೆ , ನಾನು ಅದನ್ನು ತಿಂದೇ  ಈ ವಯಸ್ಸಿನಲ್ಲಿ ಅಷ್ಟು ದೊಡ್ಡ ಆಪರೇಷನ್ ಇಂದ ಚೇತರಿಸಿಕೊಂಡೆ ಗೊತ್ತಾ ಎನ್ನುತ್ತಿದ್ದರು !
ಈಗೆಲ್ಲ ಈ ಹೊಗೆಸೊಪ್ಪು ವಿವಿಧ ರೂಪದ ಚಿಕ್ಕ ಚಿಕ್ಕ ಪ್ಲಾಸ್ಟಿಕ್ ಪ್ಯಾಕೆಟ್ ಗಳಲ್ಲಿ ದೊರೆಯುತ್ತದೆ. ಅಲ್ಲದೆ ಅದು ವಿವಿಧ ರೂಪ ತಾಳಿ ಮನುಷ್ಯರ ಆರೋಗ್ಯವನ್ನಷ್ಟೇ ಅಲ್ಲದೆ ಪ್ರಕೃತಿಯನ್ನು ಸಾಧ್ಯವಾದಷ್ಟು ಹಾಳುಗೆಡವುತ್ತಿದೆ. ಯಾವುದೇ ಪ್ರಾಕೃತಿಕ ಪ್ರವಾಸಸ್ಥಳಕ್ಕೆ ಹೋದರೂ ಇದರ ನೂರಾರು ಪ್ಯಾಕೆಟ್ ಗಳು ಎಲ್ಲೆಂದರಲ್ಲಿ ಅಸಹ್ಯವಾಗಿ ಬಿದ್ದಿರುವುದನ್ನು ಗಮನಿಸಬಹುದು .

ಹೊಗೆಸೊಪ್ಪು ಹಾಕದ ತಾಂಬೂಲ ಆರೋಗ್ಯಕರವೆಂದು ಆಯುರ್ವೇದ ಹೇಳಿದೆ. ಇದರಲ್ಲಿರುವ ವೀಳ್ಯದೆಲೆ ಜೀರ್ಣಕಾರಿ , ಕಫಹರ . ಸುಣ್ಣದಲ್ಲಿನ ಕ್ಯಾಲ್ಸಿಯಂ ಅಂಶ ದೇಹಕ್ಕೆ ಅತ್ಯವಶ್ಯಕ.  ಅಡಿಕೆಯಲ್ಲಿ ನರಗಳನ್ನು ಉತ್ತೇಜಿಸುವ ಅಂಶಗಳಿದ್ದು , ದೇಹವನ್ನು ಚಟುವಟಿಕೆಯಿಂದ ಇಡಲು ಸಹಕಾರಿಯಾಗುತ್ತದೆ ಎಂಬ ನಂಬಿಕೆಯಿದೆ.
ಊಟದ ನಂತರ ಹೊಗೆಸೊಪ್ಪು ಹಾಕದ ತಾಂಬೂಲ ಸೇವನೆ ಆರೋಗ್ಯಕರ ಎನ್ನುತ್ತದೆ ಆಯುರ್ವೇದ. ನಮ್ಮ ಹಿಂದೂ ಸಂಸ್ಕೃತಿಯಲ್ಲಂತೂ ಎಲೆ ಅಡಿಕೆಗೆ ಪೂಜ್ಯ ಸ್ಥಾನವೇ ಇದೆ. ಯಾವುದೇ ಪೂಜೆ ಪುನಸ್ಕಾರಗಳು ಹೋಮ ಹವನಗಳು ಎಲೆ ಆಡಿಕೆ ಇಲ್ಲದೆ ಪೂರ್ಣಗೊಳ್ಳವು. ಉಡುಗೊರೆ  ಕೊಡುವಾಗ ಜೊತೆಗೆ ಎಲೆ ಅಡಿಕೆ  ಇಟ್ಟು ಕೊಡುವ ಸಂಪ್ರದಾಯ ಈಗಲೂ ಇದೆ. ಯಾವುದೇ ಹೊಸ ಕಾರ್ಯ ಪ್ರಾರಂಭಿಸುವಾಗ ಯಜಮಾನ ಕೆಲಸಗಾರರಿಗೆ ವೀಳ್ಯ ಕೊಡುವ ಪದ್ಧತಿಯಿತ್ತು. "ಸುಪಾರಿ ಕೊಡುವುದು " ಎಂಬ ನುಡಿಗಟ್ಟಿನ ಬಳಕೆ ಇಂದಿಗೂ ಭೂಗತ ಜಗತ್ತಿನಲ್ಲಿ ಬಳಕೆಯಲ್ಲಿದೆ. ಹೀಗೆ ನಮ್ಮ ಹಿಂದೂ ಸಂಸ್ಕೃತಿಯಲ್ಲಿ , ಜನಮನದಲ್ಲಿ ತಾಂಬೂಲ ಹಾಸು  ಹೊಕ್ಕಾಗಿದೆ

ಆದರೆ ಈಗಿನ ವಿಷಯ ಬೇರೆ . ಅಡಿಕೆ ಆರೋಗ್ಯಕ್ಕೆ ಹಾನಿಕರ , ಕ್ಯಾನ್ಸರ್ ಕಾರಕ ಎಂದು ಸಂಶೋಧನೆಗಳಿಂದ ತಿಳಿದುಬಂದಿದೆಯೆಂದು ಸರ್ಕಾರ ಅದನ್ನು ಬ್ಯಾನ್ ಮಾಡಬಹುದೆಂಬ ವದಂತಿಗಳಿವೆ. ಅಡಿಕೆಯೇ ಇಲ್ಲವೆಂದ ಮೇಲೆ ತಾಂಬೂಲಕ್ಕೆಲ್ಲಿಯ ಬೆಲೆ?
ಹೆಚ್ಚಿನ ಬೆಲೆ ಬರಲೆಂಬ ಆಸೆಗೆ ಅಡಿಕೆಗೆ ರಾಸಾಯನಿಕ ಬಣ್ಣ ಬೆರೆಸುವುದು , ಹಾಳಾದ ಕೊಳೆ ಬಂದ ಅಡಿಕೆಗಳನ್ನೂ ಬಿಡದೆ ಕೃತಕ ಬಣ್ಣ ಬೆರೆಸಿ ಮಾರುವುದು , ಆರೋಗ್ಯಕ್ಕೆ ಹಾನಿಕರವಾದ ರಾಸಾಯನಿಕಗಳನ್ನು ಅಡಿಕೆಗೆ ಬೆರೆಸಿ , ಗುಟ್ಕಾ , ಖೈನಿ , ಪಾನ್ ಇತ್ಯಾದಿಗಳನ್ನು ತಯಾರಿಸುವುದು  ಅಡಿಕೆಗೆ ಇಂತಹ ಕುಖ್ಯಾತಿ ಬರಲು ಕಾರಣವೆಂಬ ವಾದ ತಾಂಬೂಲಪ್ರಿಯರದು.
ಇತ್ತೀಚೆಗೆ ಅಡಿಕೆ ಬೆಳೆಗಾರರ ಮಕ್ಕಳೆಲ್ಲ ಪಟ್ಟಣ ಸೇರಿರುವುದೇ ಇದಕ್ಕೆ ಮೂಲ ಕಾರಣವಿರಬಹುದೆಂಬ ಬಲವಾದ ಗುಮಾನಿ ನನ್ನದು.   ಪೇಟೆ ಸೇರಿದ ಇವರುಗಳು ಬಿಳಿ ಹಲ್ಲುಗಳ ಶೋಕಿಗೆ ಬಿದ್ದು ಕವಳ ತೊರೆದಿದ್ದಾರೆ.  ಮನೆಯಲ್ಲಿರುವ ವೃದ್ಧ ತಂದೆ ತಾಯಿಯರು ಕವಳ ಜಗಿಯಲಾರರು. ಮೊದಲೆಲ್ಲ ಅಡಿಕೆಯನ್ನು ಹದಗೊಳಿಸುವಾಗ ನಾವೂ ತಿನ್ನುತ್ತೇವೆಂಬ ಎಚ್ಚರಿಕೆ ಇರುತ್ತಿತ್ತು ಹಾಗಾಗಿ ಶುಚಿಗೆ ಶುದ್ಧತೆಗೆ ಹೆಚ್ಚಿನ ಮಹತ್ವ ಸಿಗುತ್ತಿತ್ತು. ಈಗ ಕೆವಲ ಮಾರುಕಟ್ಟೆಗೆ ಮಾರಲು ಬೇಕಾದ ಬಣ್ಣ , ಗಾತ್ರವಷ್ಟೆ ಮುಖ್ಯವಾಗಿದೆ . ಹಾಗಾಗಿ ಏನನ್ನೋ ಬೆರೆಸುವುದು , ಅದರಿಂದ ಅಡಿಕೆಗೆ ಮಾನಹಾನಿ.
  ಅಡಿಕೆ ಬೆಳೆಗಾರರೆಲ್ಲರೂ ಕಡ್ಡಾಯವಾಗಿ ಅಡಿಕೆ ತಿನ್ನಲೇಬೇಕು ಎಂಬ ನಿಯಮ ಜಾರಿಗೆ ಬಂದರೆ ಬಹುಶಃ ಇವೆಲ್ಲವನ್ನು ತಪ್ಪಿಸಬಹುದೇನೋ ಏನೆನ್ನುತ್ತೀರಿ? ಅನೇಕ ಹಲ್ಲಿನ ಡಾಕ್ಟರ್ ಗಳಿಗೂ ಅನುಕೂಲವಾಗುತ್ತದೆ.



ಅಮೇರಿಕಾದಲ್ಲಿ ನಡೆವ " ಅಕ್ಕ " ಸಮ್ಮೇಳನದ ಪ್ರಯುಕ್ತ ಹೊರತಂದ " ಹರಟೆ ಕಟ್ಟೆ " ಎಂಬ ಲಘುಪ್ರಭಂದ ಸಂಕಲನದಲ್ಲಿ ಇದು ಪ್ರಕಟವಾಗಿದೆ.

7 comments:

  1. thumba chenda ittu, malnadall huttid mele adke ele thindidre hege.. :P :d Proud to be a malnad guy :)

    ReplyDelete
  2. Sogasagide baraha...suaashayagalu..

    ReplyDelete
  3. ನಮ್ಮಲ್ಲಿಯೂ ಎಲೆ-ಅಡಿಕೆ ಎಂದರೆ ಅಚ್ಚುಮೆಚ್ಚು.
    ಕೆಲವು ಹೆಂಗಸರಿಗಂತೂ 'ಕಡ್ಡಿವುಡಿ' ಎಂದೇ ಕರೆಯುತ್ತಾರೆ..
    ಹೊಗೆಸೊಪ್ಪು ನೋಡುವುದು ವರುಷಕೊಮ್ಮೆ ಮಹಾನವಮಿಯಲ್ಲಿ ಪೂರ್ವಜರಿಗೆ ಮಾಡುವ ಪೂಜೆಯಲ್ಲಿ ಎಡೆ ಇಡಲು ತಂದಾಗ ಅಷ್ಟೇ.
    ಎಲೆ-ಅಡಿಕೆಯಂತೆ ಕೆಂಪಾದ ಲೇಖನ.

    ReplyDelete
  4. ತುಂಬಾ ತುಂಬಾ ಚೆನ್ನಾಗಿದೆ ಲೇಖನ :) :)..ನಿಜ ಕವಳದ ಬಟ್ಟಲು ಮನೆಯ ಗೌರವದ ಪ್ರತಿಷ್ಠೆಯೂ ಹೌದು...ಈಗೀಗ ಕವಳದ ಡಬ್ಬಿಯಲ್ಲಿ ಗುಟಕಾ ಕೊಟ್ಟೆಗಳು ಉಳಿಯುತ್ತಿರುವುದಷ್ಟೇ ವಿಪರ್ಯಾಸ ...
    ಇಷ್ಟವಾಯಿತು ಮೇಡಮ್..

    ReplyDelete
  5. ಹರಟೆಹರಟೆ ಕಟ್ಟೆಗೆ ಒಂದು ಉಘೇ... ಉಘೇ...

    ಕವಳದ ತಿತ್ತಿಗೆ ತೆಲುಗುವಿನಲ್ಲಿ ವಕ್ಕಾಕು ಸಂಚಿ ಅನ್ನುತ್ತೇವೆ. ಹಳ್ಳಿಯ ನಮ್ಮ ಬಟ್ಟೆ ಅಂಗಡಿಯಲ್ಲಿ ಸಾವಿರ ಚಿತ್ತಾರಗಳ ಸಂಚಿಗಳನ್ನು ಈಗಲೂ ಮಾರುತ್ತಾನೆ ನನ್ನ ಅಣ್ಣ.

    ಒಳ್ಳೆಯ ಆರೋಗ್ಯ ಮುಖಿ ಲೇಖನ.

    ReplyDelete
  6. ಹರಟೆಕಟ್ಟೆಯಲ್ಲಿ ಓದಿದ್ದಿ ಇದ್ನ :-) "ಪ್ರಭಂಧ" = "ಪ್ರಬಂಧ" ಆಗಕ್ಕಿತ್ತಲ್ದಾ ? ಮುದ್ರಣದೋಷ ಅಂದ್ಕತ್ತಿ :-)

    ReplyDelete