13 Apr 2015

ಗೆದ್ದಲು ಎಂಬ ಪುಟ್ಟ ರೈತ

 ಎರಡು ವರ್ಷಗಳ ಹಿಂದಿನ ಘಟನೆಯಿದು.   ಅದು ಎಪ್ರಿಲ್  ತಿಂಗಳಿನ ಕೊನೆ  .......ಮಲೆನಾಡಿನ ನೆತ್ತಿಯಂತಿರುವ ಕೊಡಚಾದ್ರಿ ಪರ್ವತದ ತಪ್ಪಲಿನಲ್ಲಿರುವ ಪುಟ್ಟ ಊರು ನಿಟ್ಟೂರಿನಲ್ಲಿರುವ ನಮ್ಮ ಮನೆಯಲ್ಲಿ ರಜೆಯನ್ನು ಕಳೆಯುತ್ತಿದ್ದೆವು. ಎರಡು ಮೂರು ದಿನದಿಂದ ಸಾಯಂಕಾಲ ಮಳೆ ಬರುತ್ತಿತ್ತು. ಆ ದಿನ ಬೆಳಗ್ಗೆ ಎದ್ದು ಕಾಫಿ ಕಪ್ ಹಿಡಿದು ಹೊರಬಂದರೆ ಅಂಗಳದಲ್ಲಿ ಒಂದು ಅಚ್ಚರಿ ಕಾದಿತ್ತು. ಅಂಗಳದಲ್ಲಿ ಅಲ್ಲಲ್ಲಿ  ಒಂದು ವಿಧಧ ಮಣ್ಣಿನ ರಾಶಿ , ಮಣ್ಣಿನ ಜೊತೆಗೆ ಚಿಕ್ಕ ಚಿಕ್ಕ ಅಸಂಖ್ಯಾತ ಬಿಳಿ ಬಣ್ಣದ ಮೊಟ್ಟೆಯಂತಹ ವಸ್ತು . ಹತ್ತಿರ ಹೋಗಿ ಪರೀಕ್ಷಿಸಿದಾಗ ಆ ರಾಶಿಯೆಲ್ಲವೂ ಒಂದು ಚಿಕ್ಕ ಕುಳಿಯಿಂದ ಹೊರದಬ್ಬಲ್ಪಟ್ಟಂತೆ ಇತ್ತು. ಜೊತೆಗೆ ಅಲ್ಲಿ ಗೆದ್ದಲುಗಳು ಓಡಾಡುತ್ತಿದ್ದವು.
 ಅಂಗಳದಲ್ಲಿ ಅನೇಕ ಕಡೆ ಇಂತಹ ಚಿತ್ತಾರ

ಬಹುಶಃ ಗೆದ್ದಲುಗಳು ಹುತ್ತ ನಿರ್ಮಿಸಲು ಪ್ರಯತ್ನಿಸುತ್ತಿರಬೇಕೆಂದುಕೊಂಡೆ. ಆದರೆ ಆ ಬಿಳಿಯ ಬಣ್ಣದ ಮೊಟ್ಟೆಯಂತಹ ವಸ್ತು ಏನೆಂದು ತಿಳಿಯಲಿಲ್ಲ. ಸ್ವಲ್ಪ ಹೊತ್ತು ಕಳೆದರೆ ಅದೇನೆಂದು ಗೊತ್ತಾಗಬಹುದಿತ್ತು ..ಆದರೆ ಆ ದಿನ ನಾವು ಅಲ್ಲಿಂದ ಬೆಂಗಳೂರಿಗೆ ವಾಪಾಸಾಗಲೇ ಬೇಕಿದ್ದುದರಿಂದ ಅದನ್ನು ಗಮನಿಸಲಾಗಲಿಲ್ಲ. ಅದೇನಿರಬಹುದೆಂಬ ಕುತೂಹಲ ಆಗಾಗ ಮನದ ಮೂಲೆಯಲ್ಲೆಲ್ಲೋ ಕಾಡಿ ಮರೆಯಾಗುತ್ತಿತ್ತು.
ಗೆದ್ದಲಿನ ಗೂಡಿನಿಂದ ಹೊರದಬ್ಬಲ್ಪಟ್ಟ ವಸ್ತು

 ಕಳೆದ ವರ್ಷ ಮತ್ತೆ ಅದೇ ಘಟನೆಯ ಪುನರಾವರ್ತನೆಯಾಯಿತು. ಒಂದಿಷ್ಟು ಮಣ್ಣಿನ ಜೊತೆ ಬಿಳಿ ಬಿಳಿ ಮೊಟ್ಟೆಯಂತಹ ವಸ್ತು ಅಂಗಳದಲ್ಲಿ ಕಾಣಿಸಿತ್ತು .ಕೆದಕಿದಾಗ ಅಲ್ಲೊಂದಿಷ್ಟು ಗೆದ್ದಲುಗಳೂ ಕಾಣಿಸಿದ್ದವು. ಈ ಬಾರಿಯಾದರೂ ಅದನ್ನು ಗಮನಿಸಬೇಕೆಂದುಕೊಂಡಿದ್ದೆ. ಆದರೆ ಆ ದಿನವೇ ಮನೆಗೆ ಯಾರೋ ನೆಂಟರು ಬರುವವರಿದ್ದರಿಂದ ಅಂಗಳದಲ್ಲಿ ಆ ಕಸದ ರಾಶಿಯನ್ನು ಹಾಗೇ ಬಿಡಲು ಮನೆಯವರ್ಯಾರೂ ತಯಾರಿರಲಿಲ್ಲ. ಎಲ್ಲ ಗುಡಿಸಿಬಿಟ್ಟರು.
 ಗೂಡಿನ ದ್ವಾರದಲ್ಲಿ ಗೆದ್ದಲೂ ಇದೆ

ಮರುದಿನ ಹಿಂದಿನ ದಿನ ಆ ರಾಶಿ ಕಾಣಿಸಿದ ಜಾಗದಲ್ಲೆ ಒಂದು ಚಿಕ್ಕ ಅಣಬೆ ಬೆಳೆದಿರುವುದು ಗಮನಕ್ಕೆ ಬಂತು. ಆಗ ಇದು ಗೆದ್ದಲುಗಳು ಹುತ್ತ ನಿರ್ಮಿಸುವ ಕ್ರಿಯೆ ಆಗಿರಲಾರದು ಎಂದು ಯೋಚಿಸಿದೆ. ಹಾಗೆಂದು ಕೇವಲ ಅಣಬೆ ಬೆಳೆಯುವ ಪ್ರಕ್ರಿಯೆಯಾಗಿದ್ದರೆ ಅಲ್ಲಿ ಗೆದ್ದಲುಗಳೇಕಿರಬೇಕಿತ್ತು? ತಲೆಯಲ್ಲೇ ಗೆದ್ದಲುಗಳು ಓಡಾಡಿದ ಅನುಭವ. ಸರಿ ಇದ್ದಾರಲ್ಲ ನಮ್ಮ ಗೂಗಲ್ ಮಾಹಾಶಯರು ...ಅವರಲ್ಲಿ  ಕೇಳಿದಾಗ ....... ಪ್ರಕೃತಿಯ ನಾಟಕರಂಗದಲ್ಲಿ ನಡೆದ ಆ ಚಿಕ್ಕ ಆಟ ಏನೆಂದು ತಿಳಿಯಿತು. ಆದರೂ ನಾನಂದುಕೊಂಡಿದ್ದೇ ನಿಜವೇಕೆಲ ಅನುಮಾನಗಳಿದ್ದವು. ಮತ್ತೆ ಸಹಾಯಕ್ಕೆ ಬಂದಿದ್ದು ಗೂಗಲ್ ಮಹಾಶಯರೇ....ನನಗೆ ಬೇಕಿದ್ದ ವಿಷಯದ ಬಗ್ಗೆ ಇದ್ದ ವಿಡಿಯೋ ತುಣುಕೊಂದು ದಾರಿ ತೋರಿಸಿತು. ಗೋವಾ ಯೂನಿವರ್ಸಿಟಿಯ ಬಟಾನಿಸ್ಟ್ ನಂದಕುಮಾರ್ ಕಾಮತ್ ತೆಗೆದ ಆ ವಿಡಿಯೋದ ಸಹಾಯದಿಂದ ಅವರಿಗೆ ಮೈಲ್ ಮಾಡಿ , ನನ್ನ ಅನುಮಾನಗಳನ್ನು ಮುಂದಿಟ್ಟು , ನಾನು ತೆಗೆದ ಫೋಟೊ ಕಳಿಸಿದೆ . ಮಾರನೇ ದಿನವೇ ಅವರಿಂದ ಉತ್ತರ ಬಂದಿತ್ತು. ಅದರಲ್ಲಿ ನನ್ನ ಬಹುತೇಕ ಅನುಮಾನಗಳಿಗೆ ಉತ್ತರ ದೊರಕಿತ್ತು. 


ಪ್ರಕೃತಿಯಲ್ಲಿ ಅನೇಕ ಜೀವಿಗಳು ಒಂದಕ್ಕೊಂದು ಪೂರಕವಾಗಿ ಸಹಜೀವನ ನಡೆಸುತ್ತವೆ. ಅದರಲ್ಲಿ ಗೆದ್ದಲು ಮತ್ತು ಶಿಲೀಂದ್ರಗಳ ಸಹಜೀವನ  ಪ್ರಾಕೃತಿಕವಾಗಿ ತುಂಬ ಮಹತ್ವದ್ದಾಗಿದೆ.

ಗೆದ್ದಲು ಮತ್ತು ಶಿಲೀಂದ್ರಗಳ ಸಂಘಜೀವನದ ಬಗ್ಗೆ ಅರಿಯುವುದಕ್ಕೂ ಮೊದಲು ಅವೆರಡರ ಜೀವನ ವಿಧಾನಗಳ ಬಗ್ಗೆ ಸ್ವಲ್ಪ ತಿಳಿಯುವುದು ಅವಶ್ಯಕ. 
 ಪುಟ್ಟ ಅಣಬೆಗಳು


ಶಿಲೀಂದ್ರ
ಫಂಗಸ್ ಅಥವಾ ಶಿಲೀಂದ್ರ ಸಸ್ಯವೂ ಅಲ್ಲದ , ಪ್ರಾಣಿಯೂ ಅಲ್ಲದ ವಿಚಿತ್ರ ಜೀವಿ. ಸಸ್ಯಗಳಂತೆ ಸ್ವಂತ ಆಹಾರ ಉತ್ಪಾದಿಸಲಾರದು , ಪ್ರಾಣಿಗಳಂತೆ ಚಲಿಸಲಾರದು .ಆದರೆ ಜೀವಂತ ಅಥವಾ ಕೊಳೆಯುತ್ತಿರುವ ಸಾವಯವ ವಸ್ತುಗಳ ಮೇಲೆ ಸಸ್ಯಗಳಂತೆಯೆ ಬೆಳೆದು , ಅದರರೊಳಗೆ ತನ್ನ ಬೇರಿನಂತಹ ಹೈಪೆಯನ್ನು ತೂರಿಸಿ ಅದರ ಮೂಲಕ ಕಿಣ್ವಗಳನ್ನು ಸುರಿಸಿ ಆ ಸಾವಯವ ವಸ್ತುವನ್ನು ಸರಳ ಆಹಾರವನ್ನಾಗಿ ಪರಿವರ್ತಿಸಿ , ಅದರ ಶಕ್ತಿಯನ್ನು ಹೀರಿ ಬೆಳೆಯುತ್ತವೆ. ಮನುಷ್ಯನ ಚರ್ಮದಲ್ಲಿ ವಾಸಿಸುವ ರಿಂಗ್ ವರ್ಮ್ ನಂತಹ ಫಂಗಸ್ ನಿಂದ ಹಿಡಿದು , ನಾವು ತಿನ್ನುವ ದೋಸೆ ಇಡ್ಲಿಯಲ್ಲಿ, ಬ್ರೆಡ್ ಪಿಡ್ಜಾದಲ್ಲಿ , ವೈನ್ ಗಳಲ್ಲಿ  ಶಿಲೀಂದ್ರಗಳು ಇರುತ್ತವೆ. ಇವುಗಳಿಲ್ಲದ ಜಗತ್ತನ್ನು ಕಲ್ಪಿಸಿಕೊಳ್ಳುವುದೂ ಕಷ್ಟವೆಂಬ ಮಟ್ಟಿಗೆ ಇವು ನಮಗೆ ಅನಿವಾರ್ಯವಾಗಿವೆ.
ಶಿಲೀಂದ್ರಗಳ ಸಂತಾನೋತ್ಪತ್ತಿಕ್ರಿಯೆಯೂ ಹೆಚ್ಚು ಕಡಿಮೆ ಸಸ್ಯಗಳಂತೆಯೇ. ಹೈಪೆಗಳ ಕವಲೊಡೆಯುವಿಕೆಯಿಂದ ಹೊಸ ಶಿಲೀಂದ್ರ ಉದಯಿಸುವುದು ಒಂದು ವಿಧ.   ಇನ್ನೊಂದು ವಿಧದ ಸಂತಾನೋತ್ಪತ್ತಿಯಲ್ಲಿ ಇದರಿಂದ ಫ್ರುಟಿಂಗ್ ಬಾಡಿ ಅಥವಾ ಅಣಬೆ ಬೆಳೆದು ಅದರಲ್ಲಿರುವ ಸ್ಪೋರ್ ಗಳಿಂದ ಹೊಸ ಶಿಲೀಂದ್ರಗಳು  ಹುಟ್ಟುತ್ತವೆ  .

ಗೆದ್ದಲು
ಗೆದ್ದಲುಗಳು  ಸಂಘಜೀವಿಗಳು. ಲಕ್ಷಗಟ್ಟಲೆ ಸಂಖ್ಯೆಯಲ್ಲಿ ಒಟ್ಟಿಗೆ ವಾಸಿಸುತ್ತವೆ. ಅವುಗಳ ಒಂದು ಗುಂಪಿನಲ್ಲಿ ರಾಜ ಪರಿವಾರ , ಸೈನಿಕ ಮತ್ತು ಕೆಲಸಗಾರ ಹುಳುಗಳು ಎಂಬ ಮೂರು ಜಾತಿಯ ಹುಳುಗಳಿರುತ್ತವೆ.   ರಾಜ ಮತ್ತು ರಾಣಿಯರದು ಕೇವಲ ಮೊಟ್ಟೆಯಿಡುವ ಕೆಲಸ , ಸೈನಿಕ ಹುಳುಗಳದ್ದು ಗೂಡಿನ ರಕ್ಷಣೆಯ ಹೊಣೆ  .  ಆಹಾರ ಸಂಗ್ರಹಣೇ , ಗೂಡು ಕಟ್ಟುವುದು , ಮರಿಗಳನ್ನು ಬೆಳೆಸುವುದು ಮುಂತಾದ ಎಲ್ಲ ಕೆಲಸಗಳನ್ನು ನಿರ್ವಹಿಸುವುದು ಕೆಲಸಗಾರ ಗೆದ್ದಲುಗಳು. ಭೂಮಿಯನ್ನು ಕೊರೆದು ವ್ಯವಸ್ಥಿತವಾದ ಅನೇಕ ಕೋಣೆಗಳುಳ್ಳ ಗೂಡು ನಿರ್ಮಿಸುವ ಕೆಲಸಗಾರ ಹುಳುಗಳು ಗೂಡಿನಲ್ಲಿಯ ವಾತಾವರಣದ ಉಷ್ಣತೆಯನ್ನು ನಿಯತ್ರಿಸಲು ಅದರ ಮೇಲೆ ಎತ್ತರವಾದ ಹುತ್ತವನ್ನು ನಿರ್ಮಿಸುತ್ತವೆ.

ಸಸ್ಯಗಳಲ್ಲಿರುವ ಸೆಲ್ಯುಲೋಸ್ ಗೆದ್ದಲುಗಳ ಪ್ರಮುಖ ಆಹಾರ. ಆದ್ದರಿಂದ ಅವು ಸಸ್ಯಜನ್ಯವಾದ ಒಣ ಮರ , ಪೀಠೋಪಕರಣ , ಕಾಗದ ಇತ್ಯಾದಿ ಎಲ್ಲಾ ವಸ್ತುಗಳನ್ನೂ ತಿನ್ನಬಲ್ಲವು!   ವಿಶೇಷವೆಂದರೆ ಸೆಲ್ಯುಲೋಸ್ ಜೀರ್ಣಿಸಿಕೊಳ್ಳಲು ಅವು ಕೆಲ ಸೂಕ್ಷಾಣುಗಳ ಸಹಾಯ ಪಡೆಯುತ್ತವೆ. ಗೆದ್ದಲುಗಳ ಗಂಟಲಿನಲ್ಲಿ ವಾಸಿಸುವ ಕೆಲ ಬ್ಯಾಕ್ಟೀರಿಯಾಗಳು , ಪ್ರೋಟೋಜೋವಾಗಳು ಉತ್ಪಾದಿಸುವ ಕಿಣ್ವಗಳು ಸೆಲ್ಯುಲೋಸನ್ನು ವಿಭಜಿಸುತ್ತವೆ.

ಗೆದ್ದಲು ಮತ್ತು ಶಿಲೀಂದ್ರಗಳ ಸಂಘಜೀವನ
ಆದರೆ ಕೆಲ ಜಾತಿಯ ಗೆದ್ದಲುಗಳು ಸೆಲ್ಯುಲೋಸನ್ನು ಜೀರ್ಣಿಸಿಕೊಳ್ಳಲು ಕೆಲವು ಶಿಲೀಂದ್ರಗಳ ಸಹಾಯ ಪಡೆಯುತ್ತವೆ . ಅಂತಹ ಶಿಲೀಂದ್ರಗಳನ್ನು ಗೆದ್ದಲುಗಳು ತಮ್ಮ ಗೂಡಿನಲ್ಲಿಯೆ ಬೆಳೆಸುತ್ತವೆ.
ಕೆಲಸಗಾರ ಗೆದ್ದಲುಗಳು ತಿಂದ ಆಹಾರವನ್ನು ಗೂಡಿನಲ್ಲಿ ವಿಸರ್ಜಿಸುತ್ತವೆ. ಅರೆಬರೆಯಾಗಿ ಜೀರ್ಣವಾದ ಆ ಆಹಾರವಸ್ತುಗಳನ್ನು ಪೇರಿಸಿ ಫಂಗಸ್ ಕಾಂಬ್ ರಚಿಸುತ್ತವೆ ನಂತರ ಅದರ ಮೇಲೆ ಹೊರಗಡೆಯಿಂದ ಸಂಗ್ರಹಿಸಿ ತಂದ ಫಂಗಸ್ ಸ್ಪೋರ್ ಗಳನ್ನು ಚೆಲ್ಲುತ್ತವೆ. ಸೆಲ್ಯುಲೋಸ್ ಭರಿತವಾದ ಫಂಗಸ್ ಕಾಂಬ್ ಮೇಲೆ ಬೆಳೆವ ಫಂಗಸ್ ತನ್ನ ಕಿಣ್ವಗಳಿಂದ ಅದನ್ನು ವಿಭಜಿಸುತ್ತದೆ. ಜೀರ್ಣವಾಗಿ ಸರಳ ಸಕ್ಕರೆಯ ರೂಪಕ್ಕೆ ಬಂದ ಆ ಆಹಾರವನ್ನು ಗೆದ್ದಲುಗಳು ತಿನ್ನುತ್ತವೆ.
ಫಂಗಸ್ ಮತ್ತು ಗೆದ್ದಲುಗಳ ಈ ಸಹಜೀವನ ಪ್ರಕೃತಿಯಲ್ಲಿ ಸಹಬಾಳ್ವೆಗೊಂದು ಅತ್ಯುತ್ತಮ ಉದಾಹರಣೆ.

ಅಂದು  ನಮ್ಮ ಮನೆಯ ಅಂಗಳದಲ್ಲಿದ್ದದ್ದು ಇಂತಹುದೇ ಒಂದು ಗೆದ್ದಲುಗಳ ಗೂಡಿನಲ್ಲಿ ಬೆಳೆದ ಶಿಲೀಂದ್ರದಿಂದ ಹೊರಹೊಮ್ಮಿದ ಅಣಬೆಯಾಗಿತ್ತು. Macrotermitinae ಜಾತಿಯ ಗೆದ್ದಲುಗಳು ತಮ್ಮ ಗೂಡಿನಲ್ಲಿ Termitomyces  ಎಂಬ ಜಾತಿಯ ಶಿಲೀಂದ್ರಗಳ ಬೇಸಾಯ ಮಾಡುತ್ತವೆ. ಮಳೆ ಬಂದಾಗ ನೆಲದಾಳದಲ್ಲಿದ್ದ ಗೆದ್ದಲುಗೂಡಿನಲ್ಲಿ ಬೆಳೆದಿದ್ದ ಶಿಲೀಂದ್ರಗಳು ಸಂತಾನೋತ್ಪತ್ತಿ ನಡೆಸುವ ಕ್ರಿಯೆ ಆರಂಭಿಸುತ್ತವೆ. ಗೆದ್ದಲುಗಳು ರಾತ್ರಿ ವೇಳೆಯಲ್ಲಿ ಫಂಗಸ್ ಕಾಂಬ್ ಗಳನ್ನು ಹೊರತಂದು ಹಾಕುತ್ತವೆ . ಅಲ್ಲಿ Termitomyces microcarpus Heim ಎಂಬ ಈ ಅಣಬೆ ಬೆಳೆಯುತ್ತದೆ. ಈ ಅಣಬೆ ಬೆಳೆದು ಅದರಲ್ಲಿನ ಸ್ಫೋರ್ ಗಳನ್ನು ಗಾಳಿಗೆ ಹೊರಚೆಲ್ಲುವಾಗ ಅದನ್ನು ಸಂಗ್ರಹಿಸುವ ಗೆದ್ದಲುಗಳು ಅದನ್ನು ಮತ್ತೆ ತಮ್ಮ ಗೂಡಿಗೊಯ್ದು ಹೊಸದಾಗಿ ಶಿಲೀಂದ್ರಗಳ ವ್ಯವಸಾಯ ಆರಂಭಿಸುತ್ತವೆ.
ನಮ್ಮ ಪಶ್ಚಿಮಘಟ್ಟಗಳಲ್ಲಿ ಮಳೆಗಾಲದಲ್ಲಿ ಈ ಚಟುವಟಿಕೆಯನ್ನು ಕಾಣಬಹುದು. ಗೋವಾ,ಕೊಂಕಣದಲ್ಲಿ ಮಳೆಗಾಲದಲ್ಲಿ ಗುಂಪು ಗುಂಪಾಗಿ ಹುಟ್ಟುವ ಈ ಅಣಬೆಗಳನ್ನು ಸಂಗ್ರಹಿಸಿ ಅಡುಗೆಗೆ ಬಳಸುತ್ತಾರೆ ಎನ್ನುತ್ತಾರೆ ಗೋವಾದ ಬಟಾನಿಸ್ಟ್ ನಂದಕುಮಾರ್ ಕಾಮತ್ 
ನಂದಕುಮಾರ್ ಕಾಮತ್ ಅವರ ವಿಡಿಯೋ ತುಣುಕುಗಳನ್ನು ಇಲ್ಲಿ ನೋಡಬಹುದು 
https://www.youtube.com/watch?v=T0sBMfdUvq0
https://www.youtube.com/watch?v=aGis1BRv6s8

ಅಷ್ಟು ಪುಟ್ಟ ದೇಹದ ಗೆದ್ದಲುಗಳು ತಮ್ಮ ಸಮುದಾಯದ ಹಸಿವು ನೀಗಿಸಲು   ಶಿಲೀಂದ್ರಗಳ ವ್ಯವಸಾಯ ಮಾಡುವುದು ಮತ್ತು ಇದರಿಂದ ಆ ಶಿಲೀಂದ್ರಗಳಿಗೂ ಬದುಕಲು ಅನುಕೂಲವಾಗುವುದು , ಪ್ರಕೃತಿಯು ಜೀವಿಗಳಿಗೆ ಬದುಕಲು  ಹೇಗೆಲ್ಲ ದಾರಿತೋರಿಸುತ್ತದೆ ಎಂಬುದಕ್ಕೊಂದು ನಿದರ್ಶನ.

4 comments:

  1. ಉತ್ತಮ ಮಾಹಿತಿ. "ಗೂಗಲ್ ಯುನಿವರ್ಸಿಟಿ" ಎಷ್ಟು ಚಂದ. ಬೇಕಾದಾಗ ಅದರೊಳಗೆ ಹೋಗಿ ಬೇಕೆಂಬಷ್ಟು ಓದಬಹುದು!!!.

    ReplyDelete
  2. ಪ್ರಕೃತಿಯಲ್ಲಿಯ ಸಹಕಾರ ಜೀವನವನ್ನು ತಿಳಿದು ಖುಶಿಯಾಯಿತು. ಗೆದ್ದಲುಗಳ ಗಂಟಲುಗಳಲ್ಲಿ ವಾಸಿಸುವ ಸೂಕ್ಷ್ಮಾಣು ಜೀವಿಗಳು ಆಹಾರಪಚನಕ್ಕೆ ಸಹಾಯ ಮಾಡುವುದನ್ನು ಅರಿತು ಅಚ್ಚರಿಯಾಯಿತು. ಉತ್ತಮ ಮಾಹಿತಿಯನ್ನು ಸಂಗ್ರಹಿಸಿ, ಸರಳವಾಗಿ ತಿಳಿಯುವಂತೆ ನಿರೂಪಿಸಿದ ನಿಮಗೆ ಧನ್ಯವಾದಗಳು.

    ReplyDelete
  3. ನಮಸ್ಕಾರ...ಒಳ್ಳೆಯ ಲೇಖನ..ಗೆದ್ದಲು ತೋಟದಲ್ಲಿ ಹುತ್ತ ನಿರ್ಮಿಸುವುದನ್ನು ತಡೆಯುವುದು ಹೇಗೆ ಎಂದು ತಿಳಿಸಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು

    ReplyDelete
  4. ಸುಲಭವಾಗಿ ಜೀರ್ಣವಾಗುವಂತೆ ಗೆದ್ದಲು ಮತ್ತು ಶಿಲೀಂದ್ರಗಳ ಸಂಘಜೀವನ ಕಟ್ಟಿಕೊಟ್ಟ ತಮ್ಮ ಬರಹಕ್ಕೆ ಶರಣು.

    ReplyDelete