14 Dec 2015

"ಸ್ವಪ್ನಸಾರಸ್ವತ"ದಲ್ಲಿ ತೇಲಿದಾಗ ಕಾಡಿದ ಭಾವಗಳು


ತುಂಬಾ ದಿನಗಳಿಂದ ಗೋಪಾಲಕೃಷ್ಣ ಪೈ ಅವರ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ  "ಸ್ವಪ್ನ ಸಾರಸ್ವತ" ಕಾದಂಬರಿಯನ್ನು ಓದಬೇಕೆಂದುಕೊಂಡಿದ್ದರೂ ಸಾದ್ಯವಾಗಿರಲಿಲ್ಲ. ಅಂತೂ ಈಗ ಓದಿ ಮುಗಿಸಿದೆ.  ಅದ್ಭುತವಾದ ಕಾದಂಬರಿ. ಇದನ್ನ ಓದುತ್ತಿರುವಾಗ ಹೊಳೆದ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದೇನೆ:
  • ಕೆಲವೊಂದು ಐತಿಹಾಸಿಕ ಸತ್ಯಗಳನ್ನು ಇತಿಹಾಸದ ಪುಸ್ತಗಳಲ್ಲಿ ಓದುವಾಗ ಕಾಡದ ದುಖಃ, ಬೇಸರ ಅದನ್ನು ಒಂದು ಕಾದಂಬರಿಯ ರೂಪದಲ್ಲಿ ಓದಿದಾಗ ಕಾಡುತ್ತದೆ. ಬಹುಶಃ ಇತಿಹಾಸವನ್ನು ವೈಜ್ಞಾನಿಕ ತಳಹದಿಯಲ್ಲಿ ನಿರೂಪಿಸುವುದು, ಮತ್ತು ಸಮುದಾಯದ ಕತೆಯಾಗಿ ಹೇಳುವುದರಿಂದ ನಾವು ಅದರಿಂದ ಹೊರಗುಳಿದು ಅದನ್ನು ಓದುವುದು ಸಾದ್ಯವಾಗುತ್ತದೆ. ಆದರೆ ಅದೇ ಸತ್ಯಗಳು ಕಾದಂಬರಿಯ ರೂಪದಲ್ಲಿದ್ದಾಗ ನಾವೂ ಅದರೊಳಗೆ ಒಂದು ಪಾತ್ರದಂತೆಯೇ ತಲ್ಲೀನರಾಗುವುದರಿಂದ ನಮ್ಮ ಜೀವನದಲ್ಲೇ ನಡೆದ ಘಟನೆಯೆಂಬಷ್ಟು ಭಾವನೆಗಳನ್ನು ಕೆರಳಿಸಬಲ್ಲದು.
  • ಹಿಂದಿನ ರಾಜ ಮಾಹಾರಾಜರ ಆಳ್ವಿಕೆಯಲ್ಲಾಗಲಿ ನಂತರದ ಯೂರೋಪಿಯನ್ನರ ದಬ್ಬಾಳಿಕೆಯಲ್ಲಾಗಲೀ ನೊಂದ, ಪ್ರಾಣತೆತ್ತ, ಸ್ವಂತದ ನೆಲೆ ಕಳೆದುಕೊಂಡ ಸಾಮಾನ್ಯ ಜನರಿಗೆ ಲೆಕ್ಕವೇ ಇಲ್ಲ. ಅವರ ಗೋಳನ್ನು ಕೇಳುವವರೂ ಇರಲಿಲ್ಲ. ಅಂದಿನ ಅಸ್ಥಿರ ಜನಜೀವನಕ್ಕೆ ಹೋಲಿಸಿದರೆ ಇಂದಿನ ನಾಗರೀಕ ಸಮಾಜ ಎಷ್ಟು ಸುಸ್ತಿರವಾಗಿದೆಯೆಂಬುದು ಅರಿವಾಗುತ್ತದೆ.  ಆದರೆ ಇಂತಹ ಇತಿಹಾಸದಿಂದ ಇನ್ನೂ ಪಾಠ ಕಲಿಯದ ಕೆಲವು ದುಷ್ಟರು ಪ್ರಪಂಚದಾದ್ಯಂತ ಜನಸಾಮಾನ್ಯನ ನೆಮ್ಮದಿಗೆ ಕಂಟಕಪ್ರಾಯರಾಗಿದ್ದಾರೆಂಬುದನ್ನು ನೆನೆದಾಗ ದುಖಃವಾಗುತ್ತದೆ.
  • ಯಾವುದೇ ಸಮುದಾಯ, ಜನಾಂಗ ಅಥವಾ ಕುಟುಂಬ ತನ್ನ ಮೂಲನೆಲೆಯನ್ನು ಬಿಟ್ಟು ಹೊಸ ಪ್ರದೇಶವೊಂದನ್ನು ನೆಲೆಯಾಗಿಸಿಕೊಂಡಾಗ  ತನ್ನ ಮೂಲದ ರೀತಿನೀತಿಗಳನ್ನೂ ಉಳಿಸಿಕೊಂಡು, ಹೊಸ ಪರಿಸರದ ರೀತಿನೀತಿಗಳಿಗೂ ಹೊಂದಿಕೊಂಡು ಬಾಳುವುದು ತುಂಬಾ ಕಷ್ಟ.  ಕೇವಲ ತನ್ನ ಮೂಲವನ್ನಷ್ಟೇ ಉಳಿಸಿಕೊಳ್ಳುತ್ತೇನೆಂದರೆ ಹೊಸ ಪರಿಸರದಲ್ಲಿ ಬಾಳುವುದೇ ಕಷ್ಟವಾದೀತು, ತನ್ನದೆಲ್ಲವನ್ನೂ ಬಿಟ್ಟು ಹೊಸ ಪರಿಸರವನ್ನೇ ಅಪ್ಪಿಕೊಳ್ಳುತ್ತೇನೆಂದರೆ ಅದು ಆ ಜನಾಂಗ ಅಥವಾ ಕುಟುಂಬದ ಬೇರನ್ನೇ ಮರೆತಂತೆ.  ಇವೆರಡ ನಡುವಿನ ಸಮನ್ವಯ ಮುಖ್ಯವಾಗುತ್ತದೆ.   ಗ್ಲೋಬಲ್ ವಿಲೇಜ್ ಕಾನ್ಸೆಪ್ಟಿನ ಈ ದಿನಗಳಲ್ಲಿ ಈ ಸಮನ್ವಯ ಸಾಧಿಸುವ ಉಪಾಯವನ್ನು ಎಲ್ಲರೂ ಕಂಡುಕೊಂಡಾಗ ಯಾವುದೇ ಜನಾಂಗದ ಸಂಸ್ಕೃತಿ ನಾಶವಾಗಬಹುದೆಂಬ ಆತಂಕ ಅರ್ಥವಿಲ್ಲದ್ದಾಗಬಹುದು.
  • ಚಿಕ್ಕ ವಯಸ್ಸಿನಲ್ಲಿ ಹದಿಹರೆಯದಲ್ಲಿ ನಮಗೆ ನಮ್ಮ ಕುಟುಂಬದ ಮೂಲದ ಬಗ್ಗೆ ಹೆಚ್ಚಿನ ಆಸಕ್ತಿ ಇಲ್ಲದಿದ್ದರೂ ನಡುವಯಸ್ಸಿಗೆ ಬರುತ್ತಿದ್ದಂತೆ ಹೆಚ್ಚಿನ ಆಸಕ್ತಿ ಹುಟ್ಟುತ್ತದೆಯೆ? ಹಾಗಿದ್ದಲ್ಲಿ ನಮ್ಮ ಮಕ್ಕಳಿಗೆ ಮೊಮ್ಮಕ್ಕಳಿಗೆ, ಅವರಿಗೆ ಈಗ ಆಸಕ್ತಿ ಇಲ್ಲದಿದ್ದರೂ ನಮ್ಮ ಕುಟುಂಬದ ಮೂಲದ ಕತೆ ಹೇಳುವುದು ಒಳ್ಳೆಯದಲ್ಲವೆ? 
  •  ತನ್ನ ಕುಟುಂಬಕ್ಕಿರುವ ಶಾಪವಿದೆಯೆಂಬ ನಂಬಿಕೆ, ಅದರಿಂದಾಗಿ ಎಲ್ಲವನ್ನೂ ಕಳೆದುಕೊಂಡರೂ,
     ಮುಂದೆಂದೋ ಅವಧೂತನೊಬ್ಬ ತನ್ನ ಕುಟುಂಬವನ್ನು ಕಾಪಾಡುತ್ತಾನೆಂಬ ನಂಬಿಕೆಯಲ್ಲೇ ಆ ನೋವುಗಳನ್ನೆದುರಿಸುವ ಶಕ್ತಿ ಪಡೆವ ರಾಮಚಂದ್ರ ಪೈ  "ಜೀವನದಲ್ಲಿ ನಂಬಿಕೆಗಳ ಪಾತ್ರ ತುಂಬಾ ದೊಡ್ಡದು"  ಎಂಬ ಸತ್ಯವನ್ನು ಸಂಕೇತಿಸುತ್ತಾನೆ. 
  • ಹೊಟ್ಟೆಕಿಚ್ಚೆಂಬುದು ಹೇಗೆ ಕುಟುಂಬಗಳನ್ನೇ ನಾಶ ಮಾಡಬಲ್ಲದು ಎಂಬುದು ಮಹಾಭಾರತದ ಕಾಲದಿಂದಲೂ ಜನಜನಿತವಾದ ಸತ್ಯ, ಆದರೂ ಅದನ್ನು ಮೀರಲು ಇಂದಿಗೂ ಸಾದ್ಯವಾಗದಿರುವುದು ದುರಂತ. ಅಣ್ಣ, ತಮ್ಮರ ಮಧ್ಯೆ , ಅಕ್ಕ ತಂಗಿಯರ ಮಧ್ಯೆ, ಜೀವದ ಗೆಳೆಯರ ಮಧ್ಯೆ, ಧರ್ಮ ಧರ್ಮಗಳ ನಡುವೆ,  ದೇಶಗಳ ಮಧ್ಯೆ ಈ ಅಸೂಯೆ ಹಚ್ಚಿಸುವ ಕಿಚ್ಚು ಎಂದಿಗೂ ವಿನಾಶಕಾರಿಯೆ. 
ಕೊನೆಯದೊಂದು ಕೊಸರು
ನಮ್ಮ ಧರ್ಮ, ದೇವರ ಮೇಲಿನ ನಂಬಿಕೆ ಪ್ರಾಣಕ್ಕಿಂತ ದೊಡ್ಡದೆ? ಜೀವವಿದ್ದರಲ್ಲವೆ ಧರ್ಮವನ್ನು ಆಚರಿಸಲು ಸಾದ್ಯವಾಗುವುದು? ಹೀಗಿದ್ದಾಗ ತನ್ನ ಮತ್ತು ತನ್ನನ್ನು ನಂಬಿದ ಜನರ ಪ್ರಾಣ ಉಳಿಸಲು ದೇವರ ಮೂರ್ತಿಯನ್ನು ಯಾರು ಒಯ್ದರು ಎಂಬ ಸತ್ಯವನ್ನು ಬಾಯ್ಬಿಟ್ಟ ವಿಠ್ಟು ಪೈ ತಪ್ಪೇನು?  ಅದಕ್ಕಾಗಿ ನಾಗ್ಡೋ ಬೇತಾಳ ಶಾಪ ಕೊಡುವ ಅಗತ್ಯವೇನಿತ್ತು ಎಂಬುದು ಕಾಡುವ ಪ್ರಶ್ನೆಯಾಗುಳಿಯುತ್ತದೆ.  ಬೇರೆಲ್ಲಾ ಕಡೆ ಅತ್ಯಂತ ಗೌರವಯುತವಾಗಿ, ಸಶಕ್ತವಾಗಿ ಕಾಣುವ ನಾಗ್ಡೋ ಬೇತಾಳನ ಪಾತ್ರ ಇದೊಂದು ವಿಚಾರದಲ್ಲಿ ಕೆಳಗಿಳಿದಂತೆ ಅನ್ನಿಸುತ್ತದೆ.  ಅಥವಾ ಕೆಲವೊಂದು ವಿಪರೀತ ಪರಿಸ್ಥಿತಿಯಲ್ಲಿ ಆ ಕಠೋರತೆ ಅನಿವಾರ್ಯವೆಂಬ ಸಂದೇಶವೂ ಇಲ್ಲಿರಬಹುದೇನೋ.

No comments:

Post a Comment