17 Oct 2016

"ಅಕ್ಷಯಾಂಬರ" ನಾಟಕದ ಬಗ್ಗೆ ಒಂದಿಷ್ಟು ಅನಿಕೆಗಳು


“ಅವಧಿ” ಅಂತರ್ಜಾಲ ಪತ್ರಿಕೆಯಲ್ಲಿ ಸಂಧ್ಯಾರಾಣಿಯವರ ವಿಮರ್ಶೆ ಓದಿದ ಮೇಲೆ ಈ "ಅಕ್ಷಯಾಂಬರ" ನಾಟಕವನ್ನು ನೋಡಲೇಬೇಕು ಎನ್ನಿಸಿತ್ತು. ನನಗೆ ಅತ್ಯಂತ ಪ್ರಿಯವಾದ ಯಕ್ಷಗಾನ ಮತ್ತು ಸ್ತ್ರೀ ಸಮಾನತೆ ಎಂಬ ಎರಡು ವಿಷಯಗಳನ್ನು ಆಧರಿಸಿದ ನಾಟಕವೆಂಬುದು ನನಗಿದ್ದ ಪ್ರಧಾನ ಆಕರ್ಷಣೆ. ಇತ್ತೀಚೆಗೆ ನೀನಾಸಂ ಸಂಸ್ಕೃತಿ ಶಿಬಿರದ ನಾಲ್ಕನೆ ದಿನದ ಪ್ರದರ್ಶನದಲ್ಲಿ ಈ ನಾಟಕವನ್ನು ನೋಡುವ ಅವಕಾಶ ಲಭಿಸಿತು.



ಸಾಂಪ್ರದಾಯಿಕವಾಗಿ ಗಂಡುಕಲೆ ಎನ್ನಿಸಿದ್ದ ಯಕ್ಷಗಾನ ರಂಗವನ್ನು ಸ್ತ್ರೀ ಪ್ರವೇಶಿಸಿ ಅನೇಕ ವರ್ಷಗಳಾಗಿದ್ದರೂ ಹವ್ಯಾಸಿ ಕಲಾವಿದೆಯರಾಗಿಯೆ ಉಳಿದದ್ದು ಹೆಚ್ಚು. ವೃತ್ತಿ ಮೇಳಗಳಲ್ಲಿ ಇಂದಿಗೂ ಕೂಡ ಮಹಿಳೆಯರಿಲ್ಲವೆಂದೇ ಹೇಳಬಹುದು. ಹಿಂದೊಮ್ಮೆ, ಇದು ಕೇವಲ ಗಂಡಸರು ಮಾತ್ರವೇ ಮಾಡಬಹುದಾದ ಕೆಲಸ ಎಂದೆನಿಸಿದ್ದ ಅನೇಕ ಕ್ಷೇತ್ರಗಳಲ್ಲಿಯೂ ಮಹಿಳೆಯರು ಸಮರ್ಥವಾಗಿ ತೊಡಗಿಸಿಕೊಂಡಿರುವ ಈ ಕಾಲಘಟ್ಟದಲ್ಲಿ ಕಲೆಯಂತಹ ಸೃಜನಶೀಲ ಕ್ಷೇತ್ರದಲ್ಲಿ ಇಂದಿಗೂ ಈ ಮಡಿವಂತಿಕೆಯಿರುವುದು ಅಶ್ಚರ್ಯಕರವಾದರೂ ಸತ್ಯ. ಇಂತಹ ಕ್ಷೇತ್ರದಲ್ಲಿ ಮಹಿಳೆಯೊಬ್ಬಳು ಪ್ರವೇಶಿಸಿದಾಗ ಉಂಟಾಗಬಹುದಾದ ತಾಕಲಾಟಗಳ ಸಮರ್ಥ ಚಿತ್ರಣ “ಅಕ್ಷಯಾಂಬರ”.

ಕೇವಲ ದ್ರೌಪದಿ ವೇಷಧಾರಿ ಗಂಡು ಮತ್ತು ಕೌರವ ವೇಷಧಾರಿ ಹೆಣ್ಣು ಎರಡೇ ಪಾತ್ರಗಳನ್ನು ಇಟ್ಟುಕೊಂಡು ನಮ್ಮ ಮನದಲ್ಲಿ ಶತಮಾನಗಳಿಂದ ಬೇರೂರಿರುವ ಗಂಡು, ಹೆಣ್ಣಿನ ಮಾದರಿಯ ಮಿಥ್ಯೆಯನ್ನು ಒಡೆಯುವ ಕೆಲಸವನ್ನು ಮಾಡುತ್ತದೆ ಈ ನಾಟಕ.

ದ್ರೌಪದಿ ಪಾತ್ರಧಾರಿಯಾಗಿ ಪ್ರಸಾದ್ ಚೇರ್ಕಾಡಿ  ಅವರದು ಅದ್ಭುತವಾದ ಅಭಿನಯ. ರಂಗವನ್ನು ಮಧ್ಯೆ ಇರುವ ಬಿಳಿ ಗೆರೆಗಳಿಂದ ಗುರುತಿಸಿದ ಸ್ಥಳವನ್ನು “ಯಕ್ಷಗಾನ ರಂಗಸ್ಥಳ”ವಾಗಿಯೂ ಅದರ ಸುತ್ತಲಿನ ಸ್ಥಳವನ್ನು ಯಕ್ಷಗಾನ ಪಾತ್ರಧಾರಿಗಳು ವೇಷ ಕಟ್ಟುವ “ಚೌಕಿ ಮನೆ”ಯನ್ನಾಗಿಯೂ ವಿಭಾಗಿಸಿರುತ್ತಾರೆ. ಚೌಕಿಮನೆಯಲ್ಲಿ ಪುರುಷರಿಗೆ ಸಹಜವಾದ ನಿಸ್ಸಂಕೋಚದಿಂದ ಸ್ತ್ರೀಯರ ಉಡುಪುಗಳನ್ನು ತೊಡುವ ಅವರ ಆಂಗಿಕ, ರಂಗಸ್ಥಳಕ್ಕೆ ಬರುತ್ತಿದ್ದಂತೆಯೆ ಆಗಾಗ ಸೆರಗನ್ನು ಸರಿಪಡಿಸಿಕೊಳ್ಳುವ ನಾಜೂಕು ನಾರಿಯಾಗಿ ಬದಲಾಗುವ ಪರಿ ಖುಷಿ ಕೊಡುತ್ತದೆ. ಇದನ್ನು ನೋಡಿದಾಗ ಚಿಕ್ಕಂದಿನಲ್ಲಿ ಅಪ್ಪನ ಜೊತೆ ಯಕ್ಷಗಾನದ ಚೌಕಿ ಮನೆಗೆ ಹೋಗಿ ಅಲ್ಲಿ ಸ್ತ್ರೀವೇಷ ಪಾತ್ರಧಾರಿ ಲಂಗ ಬ್ಲೌಸ್ ನಲ್ಲಿ ನಿಸ್ಸಂಕೋಚವಾಗಿ ನಿಂತು ಬೀಡಿ ಸೇದುತ್ತಿದ್ದುದನ್ನು ನೋಡಿದ ನೆನಪಾಗಿ ನಗು ಬಂದಿತ್ತು. ಚೌಕಿ ಮನೆಯಲ್ಲಿ ತಾನು ಹೆಸರಾಂತ ಸ್ತ್ರೀ ಪಾತ್ರಧಾರಿಯೆಂಬ ಹಮ್ಮು, ಪುರುಷನೆಂಬ ಅಹಂಕಾರವನ್ನು ತನ್ನ ಹಾವಭಾವ ಮಾತಿನ ಧಾಟಿಯಲ್ಲಿ ಪ್ರತೀ ಹಂತದಲ್ಲಿ ತೋರಿಸುವ ಪ್ರಸಾದ್ , ಗೆರೆ ದಾಟಿ ರಂಗಸ್ಥಳಕ್ಕೆ ಬರುತ್ತಿದ್ದಂತೆಯೆ ಹೂಗಳನ್ನು ಆಯ್ದು ಮಾಲೆ ಕಟ್ಟುವ ಮೆಲುಮಾತಿನ, ಮೆಲು ನಡೆಯ ಹೆಣ್ಣಾಗುತ್ತಾರೆ. ಅಭಿಮನ್ಯುವಿನ ಪಾತ್ರ ಮಾಡಬೇಕೆಂಬ ತಹತಹ, ಅದಕ್ಕಾಗಿ ಗುರುಗಳ ಬಳಿ ಗೋಗರೆಯುವ ಪರಿ, ಅಭಿಮನ್ಯುವಾಗಿ ಕುಣಿಯುವಾಗಿನ ಚುರುಕುತನ, ಆ ಪಾತ್ರ ಸಿಗದಿದ್ದಾಗ ಆಗುವ ನಿರಾಶೆ, ಹೆಣ್ಣೊಬ್ಬಳು, ಪುರುಷ ಪಾತ್ರಧಾರಿಯಾಗಿ ತನ್ನ ಸ್ಥಾನವನ್ನು ಕಸಿಯುತ್ತಿದ್ದಾಳೆಂಬ ಕೋಪ, ಅಸಹಾಯಕತೆ, ಆಕೆ ತನ್ನೆಲ್ಲಾ ನಿರೀಕ್ಷೆಗಳನ್ನೂ ಮೀರಿ ಮೇಳದಲ್ಲಿ ಬೆಳೆದು ನಿಂತಾಗ ಕುಸಿಯುವ ಆತ್ಮವಿಶ್ವಾಸ, ಎಲ್ಲವನ್ನೂ ಸಮರ್ಥವಾಗಿ ಬಿಂಬಿಸುವ ಪ್ರಸಾದ್ ಅತ್ಯುತ್ತಮ ನಟ ಎಂಬುದರಲ್ಲಿ ಅನುಮಾನವಿಲ್ಲ.

ಯಕ್ಷಗಾನೇತರರಾಗಿದ್ದೂ, ಕ್ಲಿಷ್ಟಕರವಾದ ಯಕ್ಷರಂಗದ ಸೂಕ್ಷ್ಮಗಳನ್ನು ಅರಿತು, ಇಂತಹ ನಾಟಕವನ್ನು ನಿರ್ದೇಶಿಸಿ, ಕೌರವ ಪಾತ್ರವನ್ನು ಮಾಡುವ ಹುಡುಗಿಯಾಗಿ ಅಭಿನಯಿಸಿರುವ ಶರಣ್ಯ ಅಭಿನಂದನಾರ್ಹರು. ಅತ್ಯಂತ ಪ್ರಸ್ತುತವಾದ ಗಹನವಾದ ವಿಷಯವೊಂದನ್ನು ಆಯ್ದುಕೊಂಡು ಅದನ್ನು ವಿಶಿಷ್ಟ ರಂಗ ಪರಿಕರಗಳ ಮೂಲಕ, ಬೆಳಕು ನೆರಳುಗಳ ಮೂಲಕ, ಅನೇಕ ರೂಪಕಗಳ ಮೂಲಕ, ಸಂಭಾಷಣೆ ಮತ್ತು ಅದರ ನಡುವಿನ ಮೌನದ ಮೂಲಕ, ವೇಷಭೂಷಣಗಳ ಮೂಲಕ, ಸಮರ್ಥ ನಟನೆಯ ಮೂಲಕ ಪ್ರೇಕ್ಷಕರಿಗೆ ಮನಮುಟ್ಟಿಸುವಲ್ಲಿ ನಿರ್ದೇಶಕಿ ಶರಣ್ಯ ಯಶಸ್ವಿಯಾಗುತ್ತಾರೆ.

ಯಕ್ಷಗಾನದಲ್ಲಿ ಸ್ತ್ರೀಯರು ಕೌರವ, ರಾವಣ, ಅರ್ಜುನ ಇತ್ಯಾದಿ ದೊಡ್ಡ ಪುರುಷ ಪಾತ್ರ ಮಾಡಿದಾಗಲೆಲ್ಲ ಎದುರಿಸಬೇಕಾದ ದೊಡ್ಡ ಟೀಕೆಯೆಂದರೆ ಪಾತ್ರಕ್ಕೆ ತಕ್ಕಂತಹ ಧ್ವನಿ, ದೇಹದಾರ್ಡ್ಯತೆ ಸಾಕಾಗುವುದಿಲ್ಲವೆಂಬುದೇ ಆಗಿರುತ್ತದೆ. ಆದರೆ ಸ್ತ್ರೀ ಪಾತ್ರವನ್ನು ಮಾಡುವ ಪುರುಷನ ಗಡಸು ಧ್ವನಿ, ರೋಮಭರಿತ ಮುಖ, ನಾಟಕೀಯ ಹಾವಭಾವಗಳನ್ನು ಸುಲಭವಾಗಿ ಒಪ್ಪಿಕೊಳ್ಳುತ್ತಾರೆ. “ಪುರುಷವೇಷಕ್ಕೆ ಬೇಕಾದ ಗಡಸುತನ ನಿಮಗೆಲ್ಲಿ ಸಾಧ್ಯ? ಎರಡು ತಲೆ ಕರು ಹುಟ್ಟಿದರೆ ಕುತೂಹಲದಿಂದ ನಾಲ್ಕು ದಿನ ನೋಡುವಂತೆ ಈಗ ನಿನ್ನ ಪಾತ್ರವನ್ನು ನೋಡಲು ಜನ ಬರುತ್ತಿದ್ದಾರಷ್ಟೆ ನಾಲ್ಕು ದಿನ ಕಳೆದರೆ ಮೂಲೆಗುಂಪಾಗುತ್ತಿ” ಎಂಬ ಪುರುಷನ ಟೀಕೆಗೆ ಮಹಿಳೆ ಹೇಳುವ “ಮೊಟ್ಟಮೊದಲು ಸ್ತ್ರೀವೇಷ ಮಾಡಿದ ಪುರುಷನನ್ನು ನೋಡಿದ ಪ್ರೇಕ್ಷಕ, ಈ ರೋಮಭರಿತ, ಗಡಸು ಕಂಠದ ಸ್ತ್ರೀಯನ್ನು ನೋಡಿ ಎಷ್ಟು ನಕ್ಕಿರಬಹುದಲ್ವಾ” ಎಂಬ ಮಾತು ಯಕ್ಷಗಾನ ಪ್ರೇಕ್ಷಕರ ಮನೋಭಾವವನ್ನು ಸಮರ್ಥವಾಗಿ ಪ್ರಶ್ನಿಸುತ್ತದೆ.

ರಂಗದ ಮೇಲೆ ಕಾಣುವುದು ನಿಜವಲ್ಲ ನಾಟಕ ಎಂದಾದಾಗ ಅಲ್ಲಿಯೂ ಹೆಣ್ಣಿಗೊಂದು ನ್ಯಾಯ, ಗಂಡಿಗೊಂದು ನ್ಯಾಯ ಏಕೆ?
ಸಮಾಜದ ದ್ವಂದ್ವ ಮನಸ್ಥಿತಿಯನ್ನು ಪ್ರಶ್ನಿಸುವ, ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕುವ, ಅನೇಕ ಪ್ರಶ್ನೆಗಳಿಗೆ ಉತ್ತರ ದೊರಕಿಸಿಕೊಡುವ, ನೋಡಿದ ಅನೇಕ ದಿನಗಳವರೆಗೂ ಕಾಡುವ ನಾಟಕ “ಅಕ್ಷಯಾಂಬರ”. ಈ ನಾಟಕ ನೋಡಿದವರು, ಸ್ತ್ರೀವೇಷ ಪಾತ್ರಧಾರಿ ಪ್ರಸಾದ್ ಚೇರ್ಕಾಡಿ ಮತ್ತು ನಿರ್ದೇಶಕಿ ಶರಣ್ಯ ರಾಂಪ್ರಕಾಶ್ ಅವರ ಅಭಿಮಾನಿಯಾಗದಿರಲು ಸಾಧ್ಯವಿಲ್ಲ.

ಕೊನೆಯಲ್ಲೊಂದು ಕೊಸರು: ಯಕ್ಷಗಾನವನ್ನು ಕಲಿತು ನಾಟಕದಲ್ಲಿ ಅಳವಡಿಸಿಕೊಂಡಿರುವ ಶರಣ್ಯ ಅವರ ಬಗ್ಗೆ ಗೌರವವಿದೆ. ಆದರೂ ಅವರ ಕುಣಿತ ಮತ್ತು ಮಾತುಗಾರಿಕೆಯಲ್ಲಿ ಯಕ್ಷಗಾನದ ಶೈಲಿಯ ಕೊರತೆ ಕಾಣುತ್ತದೆ. ಅದರಲ್ಲೂ ಅತ್ಯಂತ ಸಹಜ ಸುಂದರವಾಗಿ ಯಕ್ಷಗಾನದ ಕುಣಿತ, ಮಾತುಗಾರಿಕೆ ಎರಡನ್ನೂ ಪ್ರದರ್ಶಿಸುವ ಪ್ರಸಾದ್ ಎದುರಲ್ಲಿ ಈ ವಿಚಾರದಲ್ಲಿ ಶರಣ್ಯ ಸಪ್ಪೆಯಾಗಿ ತೋರುತ್ತಾರೆ. ಇದನ್ನು ಇನ್ನಷ್ಟು ಸುಧಾರಿಸಿಕೊಳ್ಳಬಹುದೆಂಬುದು ನನ್ನ ಅಭಿಪ್ರಾಯ.

1 comment:

  1. ನಾಟಕದಲ್ಲಿ ಯಕ್ಷಗಾನವನ್ನು ಅಳವಡಿಸಿಕೊಂಡ ಹಾಗು ಪುರುಷಮೇಲ್ಮೆಯನ್ನು ಕೆದಕುವ ಇಂತಹ ಒಂದು ನಾಟಕ ಇದ್ದುದನ್ನು ಓದಿಯೇ ಅತೀವ ಸಂತಸವಾಯಿತು.ಈ ನಾಟಕ ನಮ್ಮಲ್ಲಿ ಬಂದರೆ ನೋಡಲೇ ಬೇಕಾಯಿತು.

    ReplyDelete