20-May-2018

ಅಮ್ಮನೂ ಮತ್ತು ಧುಪ್ಪು ಎಂಬ ಅವಳ ಮಗನೂ


"ಅಮ್ಮಾ ಎಲ್ಲಾ ಅರಾಮಿದ್ದೀರಾ"..ಪ್ರತೀ ದಿನ ಫೋನ್ ಮಾಡುತ್ತಿದ್ದಂತೆ ಕೇಳುವ ವಾಡಿಕೆ. ಸಾಮಾನ್ಯವಾಗಿ ಇದಕ್ಕೆ ಉತ್ತರ ಬರೋದು "ಥೋ ಸುಮ್ನಿರಾ...ಮಾರಾಯ" ಎಂದೇ!!  ನೀವು ತಪ್ಪು ತಿಳಿಯಬೇಡಿ ಮಾರಾಯ್ರೇ... ಅಮ್ಮ ಹೀಗೆ ಹೇಳೋದು ನನಗಲ್ಲ.  ತನ್ನದೇ ಹಕ್ಕೆಂಬಂತೆ ಕುರ್ಚಿಯ ಮೇಲೆ ನೆಮ್ಮದಿಯಿಂದ ಮಲಗಿ ನಿದ್ರಿಸಿದ್ದ ತನ್ನನ್ನು ಎಬ್ಬಿಸಿ,ಅಲ್ಲಿ ಕುಳಿತು ಫೋನ್ ಕೈಗೆತ್ತಿಕೊಂಡಿರುವ ತನ್ನ ಮೇಲೆ ಕೋಪಗೊಂಡು ಜಡೆಯನ್ನು ಹಿಡಿದು ಎಳೆಯುತ್ತಿರುವ ತನ್ನ ಮುದ್ದಿನ ಮಗ "ಧುಪ್ಪು" ಗೆ ಹೇಳುವುದದು.

 ಸೊಂಪಾದ ನಿದ್ರೆ

ಅಷ್ಟರಲ್ಲಿ ನಾನು ರೇಗಿ, ಅವನನ್ನು ಓಡಿಸು ಅಲ್ಲಿಂದ, ನನ್ನ ಹತ್ತಿರ ಮಾತನಾಡು ಎನ್ನುವುದೂ, ಅಮ್ಮ ಸರಿ ಮಾರಾಯ್ತಿ ಯಾಕೆ ಬೇಜಾರು ಮಾಡಿಕೊಳ್ಳುವುದು ನಿನ್ನ ಹತ್ತಿರವೇ ಮಾತಾಡ್ತಿದ್ದೀನಲ್ಲಾ ಎನ್ನುವುದೂ, ಆದರೂ ಮಧ್ಯೆ ಮಧ್ಯೆ ಕಾಟ ಕೊಡುವ ಅವನನ್ನು ಗದರಿಸುವುದೂ ದಿನಚರಿಯೇ ಆಗಿಬಿಟ್ಟಿದೆ. ತಂಗಿಯೂ ಒಮ್ಮೊಮ್ಮೆ ಈ ಅಮ್ಮನ ಮುದ್ದಿನ ಮಗನ ಕಾಟದಿಂದ ಬೇಸತ್ತು ನನಗೆ ಫೋನ್ ಮಾಡಿ ಕಷ್ಟ ಹೇಳಿಕೊಳ್ಳುವುದುಂಟು.
ಪ್ರತೀ ಬಾರಿ ಊರಿಗೆ ಹೋದಾಗಲೂ ಒಂದು ಸುತ್ತು ಗುಂಡಗಾಗಿರುವ ಅವನನ್ನು ಕಂಡು ನಾನು "ಅಯ್ಯೋ ಧುಪ್ಪು ಮತ್ತೂ ದಪ್ಪ ಆಗಿದ್ದೀಯಲ್ಲೋ" ಎಂದರೆ ಅಮ್ಮ ಜಗತ್ತಿನ ಎಲ್ಲ ತಾಯಂದಿರಂತೆಯೇ, “ಛೇ ಪಾಪದ್ದು ಕಣೇ ನಾಲ್ಕು ದಿನದಿಂದ ಊಟನೇ ಸರಿಯಾಗಿ ಮಾಡ್ತಿಲ್ಲ, ಯಾರ ಕಣ್ಣು ಬಿದ್ದಿದೆಯೋ ಏನೋ... ಸೋತು ಹೋಗಿದೆ ಪಾಪ! ಎಂದು ಲೊಚಗುಡುತ್ತಾಳೆ!!  ಅವನೋ ಅಲ್ಲಿ ನಮ್ಮ ಕಣ್ಣೆದುರಿನಲ್ಲೇ ಒಂದು ಬಟ್ಟಲು ಹಾಲನ್ನು ಒಂದೇ ಉಸಿರಿಗೆ ಗುಟುಕರಿಸಿ, ಮೀಸೆಗಂಟಿದ ಒಂದೆರಡು ಹನಿಯನ್ನೂ ಬಿಡದೆ  ನೆಕ್ಕಿ, ಘನಗಾಂಬೀರ್ಯದಿಂದ ಸೋಫಾ ಮೇಲೆ ಪವಡಿಸುತ್ತಾನೆ. ತಕ್ಷಣವೇ ಅಮ್ಮ ಅಥವಾ ಅಪ್ಪ ಇಬ್ಬರಲ್ಲೊಬ್ಬರು ಅವನಿಗೆ ಚಳಿಗಿಳಿ ಆದೀತೆಂದು ಸೋಫಾ ಬ್ಯಾಕ್ ಮೇಲಿರುವ ಕವರ್ ತೆಗೆದು ಹೊದಿಸಿ ಪ್ರೀತಿಯಿಂದ ತಟ್ಟುತ್ತಾರೆ. ನಾವು ಮಕ್ಕಳಿಬ್ಬರೂ ದೂರದ ಊರುಗಳಲ್ಲಿರುವುದರಿಂದ ಅಪ್ಪ ಅಮ್ಮ ಇಬ್ಬರಿಗೂ ಕಾಡುವ ಒಂಟಿತನವನ್ನು ಕಿಂಚಿತ್ತಾದರೂ ಕಡಿಮೆ ಮಾಡಿರುವುದಕ್ಕಾಗಿ “ಧುಪ್ಪು” ಎಂಬ ಈ ಮಾರ್ಜಾಲದ ಮೇಲೆ ನಮಗೂ ಪ್ರೀತಿಯಿದೆ. ಅಲ್ಲದೇ ಮನೆಗೆ ಬಂದ ಯಾರನ್ನೇ ಆದರೂ ಹತ್ತಿರ ಬಂದು ಮೂಸಿ, ಕಾಲಿಗೆ ತನ್ನ ಮೈಸವರುವ, ಸೋಪಾದಲ್ಲೋ ಕುರ್ಚಿಯಲ್ಲೋ ಕುಳಿತರೆ ತಾನೂ ಹತ್ತಿ ಪಕ್ಕದಲ್ಲಿ ಒತ್ತಿಕೊಂಡು ನಿಶ್ಚಿಂತನಾಗಿ ನಿದ್ರಾವಶನಾಗುವ ಪರಿಗೆ ಎಂತವರಿಗೂ ಅವನನ್ನು ದ್ವೇಷಿಸಲು ಸಾಧ್ಯವಾಗುವುದೂ ಇಲ್ಲ.

ಮುದ್ದಾದ ಈ ಬೆಕ್ಕಿನ ಮರಿಯನ್ನು ನನ್ನ ಅಮ್ಮನ ಮಡಿಲು ಸೇರಿಸಿದ್ದು ಅದರ ತಾಯಿ.  ಆ ತಾಯಿ ಬೆಕ್ಕು ನಮ್ಮ ಚಿಕ್ಕಪ್ಪನ ಮನೆಯಲ್ಲಿತ್ತು.  ಆದರೆ ಅದರ ಹಿಂದಿನ ಸಂತಾನವೂ ಅಲ್ಲೇ ಇದ್ದದ್ದರಿಂದ ಈ ಬಾರಿ ಮರಿ ಹಾಕಲು  ಅಪ್ಪನ ಮನೆಯ ಅಟ್ಟದ ರಹಸ್ಯ ಸ್ಥಳವನ್ನು ಅದು ಆಯ್ದುಕೊಂಡಿತ್ತು. ಮರಿಗಳು ಹುಟ್ಟಿ ಕೆಲವಾರಗಳ ನಂತರ ಅವನ್ನು ಎತ್ತಿಕೊಂಡು ಹೋಗಿ ಪಕ್ಕದ ಮನೆಯಲ್ಲಿಟ್ಟಿತ್ತು.  ಆದರೆ ಅಷ್ಟರಲ್ಲಿ ಈ ಮರಿಗೆ ಈ ಅಪ್ಪ ಅಮ್ಮ ಇಷ್ಟವಾಗಿಬಿಟ್ಟಿದ್ದರಿಂದ ಇದು ಮಾತ್ರ ಒಂದೆರಡು ದಿನಗಳಲ್ಲಿ ಇಲ್ಲಿಗೇ ವಾಪಾಸ್ ಬಂದಿತ್ತು.   ಕೆಲವೊಮ್ಮೆ ಮನೆ ಬೀಗವನ್ನು ಹಾಕಿ ವಾರಗಟ್ಟಲೇ ನಾಪತ್ತೆಯಾಗುವ ಈ ಅಪ್ಪಾಮ್ಮನ  ಬಗ್ಗೆ ಅದಕ್ಕೆ ಹೇಗೆ ಗೊತ್ತಾಯ್ತೋ ಏನೋ, ಸಮಯಕ್ಕೆ ಬೇಕಾಗುತ್ತದೆ ಎಂದು ಯೋಚಿಸಿ, ಆ ಮನೆಗೂ ಆಗಾಗ ಭೇಟಿ ಕೊಟ್ಟು, ಅವರ ಬಳಿ ಹಾಲು ಬಿಸ್ಕೇಟ್ ಗಳಿಸುವಷ್ಟು ವಿಶ್ವಾಸ ಇಟ್ಟುಕೊಂಡಿತು.  

ಹೀಗೆ ಬಂದು ಸೇರಿದ ಈ ಮುದ್ದು ಮರಿ, ಸಕಲಜೀವಗಳನ್ನೂ ಹುಟ್ಟಿದ ಮಕ್ಕಳಂತೆಯೆ ಪ್ರೀತಿಸುವ ಅಮ್ಮನ ವಿಶ್ವಾಸ ಗೆಲ್ಲಲು ಹೆಚ್ಚು ಕಷ್ಟವೇನೂ ಪಡಬೇಕಾಗಿರಲಿಲ್ಲ. ಆದರೆ ಕೆಲವೇ ದಿನಗಳಲ್ಲಿ ಅಪ್ಪನೂ ಇವನ ಆಜ್ಞಾನುವರ್ತಿಯಾಗಿದ್ದು ಮಾತ್ರ ಆಶ್ಚರ್ಯಕರ.

ಅಪ್ಪನ ಕಾಲಿನಿಂದ ಮಸಾಜ್ !

ಈ ಮರಿಗೆ ಅಪ್ಪ ಇಟ್ಟ ಹೆಸರು “ಧುಪ್ಪು”.  ಮನೆ ಜನರ ಕಾಲು ಕಂಡೊಡನೆಯೆ  ಕತ್ತು ಚಾಚಿ “ಧುಪ್” ಎಂದು ಮಲಗಿ ಕಾಲಿನಿಂದ ತನ್ನ ಮೈಯನ್ನೆಲ್ಲ ಸವರು ಎನ್ನುವ, ಹಾಗೆ ಸವರುತ್ತಿದ್ದರೆ ಸುಮ್ಮನೇ ಕಣ್ಣುಮುಚ್ಚಿ ಎಷ್ಟು ಹೊತ್ತಾದರೂ ಮಲಗಿಬಿಡುವುದರಿಂದಲೇ ಅವನಿಗೆ ಅದೇ ಹೆಸರು ಎಂಬುದು ಅಪ್ಪನ ವಿವರಣೆ. ಅಮ್ಮ ಇನ್ನೂ ಅವನಿಗೆ ಇಡಲು ಒಳ್ಳೆಯ ಹೆಸರೊಂದನ್ನು ಹುಡುಕುತ್ತಿದ್ದಾರೆ!!

ಬೇಟೆ

 ದಿನದ ಹೆಚ್ಚಿನ ಸಮಯ ಸೋಫಾದ ಮೇಲೆ ಮಲಗಿ ನಿದ್ರಿಸುವ ಧುಪ್ಪು ಸಾಯಂಕಾಲವಾಗುತ್ತಿದ್ದಂತೆ ಹೊರಗೋಡುತ್ತಾನೆ. ಅವನು ಬೇಟೆಯಾಡುವ ಸಮಯವದು. ಏನನ್ನಾದರೂ ಬೇಟೆಯಾಡಿ ಅಲ್ಲಿಯೇ ತಿಂದು ಮುಗಿಸಿದರೆ ತನ್ನ ಶೌರ್ಯ  ಮನೆ ಜನರಿಗೆ ತಿಳಿಯುವುದಿಲ್ಲವಲ್ಲಾ  ...ಹಾಗಾಗಿ ಅದನ್ನು ತಂದು ಜಂಬದಿಂದ ನಮ್ಮೆದುರು ಹಾಕುತ್ತಾನೆ. ಬದುಕಿದೆಯಾ ಬಡಜೀವವೇ ಎಂಬಂತೆ ಅದು ಹಾರಿ ಓಡುವಾಗ  ಹಿಂದಿನಿಂದ ಓಡಿ ಹಿಡಿಯುತ್ತಾನೆ. ಇದೇ ಆಟ ಆ ಬಲಿ ಪ್ರಾಣಿ ಸುಸ್ತಾಗಿ ಸಾಯುವವರೆಗೂ ನಡೆಯುತ್ತದೆ. ಒಮ್ಮೊಮ್ಮೆ ಹೀಗೆ ಅವನು ಸೊಂಡಿಲಿಯನ್ನೋ, ಓತಿಕ್ಯಾತವನ್ನೋ ನಮ್ಮೆದುರಲ್ಲೇ ಆಟವಾಡಿಸುವಾಗ, ಬೆದರಿದ ಅವು ಓಡಿಬಂದು ನಮ್ಮ ಕಾಲನ್ನೇ ಏರಿ, ಆ ಗಾಬರಿಗೆ ನಾವು ಹಾರಿ ಬಿದ್ದು ನಂತರ ಅವನನ್ನು ಬಯ್ದುಕೊಳ್ಳುತ್ತಾ ಏಳುವುದೂ ಉಂಟು!!    ಜಿರಲೆ, ಪತಂಗ, ಚಿಟ್ಟೆ. ಹಲ್ಲಿ, ಅಳಿಲು ಇಲಿ ಓತಿಕ್ಯಾತ ಹಾವುರಾಣಿ ಹೀಗೆ ಅವನ ಆಹಾರದ ಪಟ್ಟಿಯಲ್ಲಿರುವ ಜೀವಿಗಳು ಅನೇಕ. ಅದು ಹೀಗೆ ವಿವಿಧ ರೀತಿಯ ನಾನ್ವೆಜ್ ತಿಂದಾಗೆಲ್ಲ ಅಮ್ಮ  “ಹಾಳುಮೂಳು ಎಲ್ಲಾ  ತಿನ್ನತ್ತೆ ಕಣೇ ಅದಕ್ಕೆ ಹೊಟ್ಟೆ ಸರಿ ಇರೋದಿಲ್ಲ ಪಾಪ” ಎನ್ನುತ್ತಾರೆ!! ಅವೆಲ್ಲಾ ಅದರ ಆಹಾರ, ಅವನ್ನೆಲ್ಲಾ ತಿನ್ನೋದರಿಂದ ಅಲ್ಲಮ್ಮಾ ಅದಕ್ಕೆ ಹೊಟ್ಟೆ ಕೆಡೋದು, ನೀವು ಪ್ರೀತಿಯಿಂದ ತಿನ್ನಿಸ್ತೀರಲ್ಲಾ ಬಿಸ್ಕೇಟು, ಬೇಕರಿ ತಿಂಡಿಗಳು, ಸ್ವೀಟು ಅಂತೆಲ್ಲಾ...ಅದರಿಂದ ಹೊಟ್ಟೆ ಕೆಡೋದು ಅಂತ ನಾನು ಹೇಳೋದನ್ನ ಅಮ್ಮ ಯಾವತ್ತೂ ನಂಬಲಿಲ್ಲ ಬಿಡಿ. 

ಬಿಸ್ಕೇಟ್ ತಿನ್ನುವ ವಿಧಾನ!


ಎಲ್ಲಾ ಪ್ರಾಣಿ, ಪಕ್ಷಿ, ಕೀಟಗಳನ್ನೂ ಪ್ರೀತಿಸುವ ಅಮ್ಮ ಜಿರಲೆಯನ್ನು ಕಂಡರೆ ಮಾತ್ರ ರಣಚಂಡಿ ಅವತಾರ ತಾಳುತ್ತಾರೆ. ಪೊರಕೆಯನ್ನು ತಂದು ಅದನ್ನು ಶತಾಯ ಗತಾಯ ಬೇಟೆಯಾಡಿ,  ಧುಪ್ಪುಗೆ ಕೊಡುತ್ತಾರೆ (ಅದು ಹೀಗೆ ಹಾಳುಮೂಳು(?) ತಿನ್ನುವುದು ಇಷ್ಟವಿಲ್ಲದಿದ್ದರೂ). ಅದೇ ಅಪ್ಪಿತಪ್ಪಿ ಮನೆಯೊಳಗೆ ಪತಂಗವೊಂದು ಬಂದರೆ ಬೇಗ ಹೋಗು ಮಾರಾಯ ಧುಪ್ಪು ನೋಡಿದ್ರೆ ತಿಂದು ಬಿಡ್ತಾನೆ ಎನ್ನುತ್ತಾ ಹೊರಗೆ ಹಾರಿಸುತ್ತಾರೆ!!    

ಗೋಡೆಯ ಮೇಲಿರುವ ಹಲ್ಲಿಯನ್ನು ಹಾರಿ ಹಾರಿ ಹಿಡಿಯಲು ಪ್ರಯತ್ನಿಸುವ ಧುಪ್ಪು ತನ್ನಿಂದ ಆಗದು ಎನ್ನಿಸಿದಾಗ ಮ್ಯಾಂ ಎನ್ನುತ್ತಾ ಅಪ್ಪನ ಕಾಲು ಸುತ್ತುತ್ತಾನೆ. ಅದನ್ನು ಹಿಡಿಯಲು ಸಹಾಯ ಮಾಡಿ ಎಂದು ಕೇಳುವ ವಿಧಾನವಂತೆ ಅದು. ಅಪ್ಪ ಪೊರಕೆಯಲ್ಲಿ ಆ ಹಲ್ಲಿಯನ್ನು ಕೆಳಗೆ ಹಾಕಿದರೆ ಇವನು ತಿಂದು ತೇಗುತ್ತಾನೆ!!
 ಮಕ್ಕಳು ತಂದೆತಾಯಿಯರ ಮಧ್ಯೆ ಬಾಂಧ್ಯವ್ಯವನ್ನು ಗಟ್ಟಿಗೊಳಿಸುವಂತೆಯೇ ನನ್ನ ಅಪ್ಪ ಅಮ್ಮನ ನಡುವೆ ಮಾತುಕತೆಗೊಂದು ವಿಷಯವಾಗಿರುವ,  ಮೊಮ್ಮಕ್ಕಳು ಕತ್ತಿಗೆ ಜೋತು ಬಿದ್ದು ಮುದ್ದು ಮಾಡಿಸಿಕೊಳ್ಳುವಷ್ಟೇ ಪ್ರೀತಿಯಿಂದ ಮುದ್ದು ಮಾಡಿಸಿಕೊಳ್ಳಲು ಕೊರಳೊಡ್ಡುವ, ಪುಟ್ಟ ಮಕ್ಕಳಂತೆಯೆ ಹಿಂದೆಮುಂದೆ ಸುಳಿಯುತ್ತಾ  ಹಠ ಮಾಡುತ್ತಾ ತಿಂಡಿತಿನಿಸು ಬೇಡುವ, ತನ್ನ ತುಂಟತನ ಆಟಗಳಿಂದ ಅವರಿಬ್ಬರ ಮೊಗದಲ್ಲಿ ನಗು ತರಿಸುವ, ಒಂಟಿತನ ಹೆಚ್ಚು ಕಾಡುವ ಸಾಯಂಕಾಲಗಳಲ್ಲಿ ತನ್ನ ಬೇಟೆಯ ಶೌರ್ಯಗಳನ್ನು ಪ್ರದರ್ಶಿಸಿ ಅವರನ್ನು ಮುದಗೊಳಿಸುವ, ಒಟ್ಟಿನಲ್ಲಿ ಮನೆಯಲ್ಲಿ ಸ್ವಲ್ಪ ಹೊತ್ತು ಧುಪ್ಪು ಕಾಣದಿದ್ದರೂ ಧುಪ್ಪು ಎಲ್ಲಿ ಹೋಯ್ತೇನಪಾ ಎನ್ನುತ್ತಾ ಹುಡುಕಾಡುವ ಮಟ್ಟಿಗೆ ಅಪ್ಪ, ಅಮ್ಮನನ್ನು ಆವರಿಸಿರುವ ಈ ಮಾರ್ಜಾಲರಾಯನಂತದ್ದೊಂದು ಜೀವ ಈಗಿನ ಕಾಲದ ಮೈಕ್ರೋ, ಮಿನಿ ಕುಟುಂಬಗಳಿಗೆ ಅಗತ್ಯವಾಗಿ ಬೇಕೆನ್ನಿಸುವುದಿಲ್ಲವೆ?

1 comment:

  1. ಧುಪ್ಪುವಿನ ಕಥೆ ಕೇಳಿ ಸಂತೋಷ ಹಾಗು ಆಶ್ಚರ್ಯ ಒಟ್ಟಿಗೆ ಆದವು.ಅಂತೂ ನಿಮ್ಮ ತಂದೆ ತಾಯಿಯರನ್ನು ಖುಶಿ ಪಡಿಸುತ್ತಿರುವ ಧುಪ್ಪುವಿಗೆ ಧನ್ಯವಾದಗಳನ್ನು ಹೇಳಲೇಬೇಕು!

    ReplyDelete