“ನೀವು ತಪ್ಪು ಮಾಡ್ತಾ ಇದ್ದೀರಿ”
ಮಗಳ ಸೆಕೆಂಡ್ ಪಿಯುಸಿ
ಪರೀಕ್ಷೆಗೆ ಎರಡು ತಿಂಗಳಿದ್ದಾಗ ಅವಳ ಟೀಚರ್ ನಮ್ಮನ್ನು ಕರೆಸಿದ್ದರು.
ತನಗೆ ಬೇಸಿಕ್ ಸೈನ್ಸ್ ಓದಬೇಕಿದೆ, ಹಾಗಾಗಿ ಮುಂದೆ
ಬಿಎಸ್ಸಿಗೆ ಸೇರುತ್ತೇನೆ
ಎಂದು ಇವಳು ಅವರಿಗೆ ಹೇಳಿದಾಗ ಅವರಿಗೆ ಗಾಭರಿಯೇ ಆಗಿತ್ತು. ಮೆಡಿಕಲ್
ಸೇರುವಂತೆ ಅವಳ ಮನವೊಲಿಸಲು ಸಾಕಷ್ಟು ಪ್ರಯತ್ನಿಸಿ, ಸೋತು
ನಮ್ಮನ್ನು ಕರೆಸಿದ್ದರು. ನಾವೂ ಸಹ ಅವಳಿಚ್ಛೆಯಂತೆ ಬಿಎಸ್ಸಿಗೆ ಸೇರಿಸುತ್ತೇವೆ ಎಂದದ್ದು ಕೇಳಿ ಅವರಿಗೆ ತೀರಾ ಬೇಸರವಾಗಿತ್ತು.
ನಿಮ್ಮ ಮಗಳಿಗೆ ಅರಾಮಾಗಿ ಮೆಡಿಕಲ್ ಸೀಟ್ ಸಿಗತ್ತೆ, ಅವಳು ಬಿಎಸ್ಸಿ ಮಾಡ್ತೀನಿ
ಅಂತ ಹೇಳ್ತಾ ಇದ್ದಾಳೆ, ನೀವು ಅವಳಿಗೆ ಸ್ವಲ್ಪ ಬುದ್ಧಿ ಹೇಳುವುದು ಬಿಟ್ಟು
ಬಿಎಸ್ಸಿಗೇ ಸೇರಿಸ್ತೀವಿ ಅಂತಿದ್ದೀರಲ್ಲ! ನೀವು
ತಪ್ಪು ಮಾಡ್ತಾ ಇದ್ದೀರಿ! ಎಂದುಬಿಟ್ಟಿದ್ದರು.
ಇರಲಿ ಬಿಡಿ, ಮಕ್ಕಳಿಗೆ ಅವರಿಷ್ಟದ
ವಿಷಯ ಓದಲು ಪ್ರೋತ್ಸಾಹಿಸುವುದು ತಪ್ಪು ಎಂದಾದರೆ ನಾವು ಅದನ್ನೇ ಮಾಡುತ್ತೇವೆ ಎಂದು ಹೇಳಿ ಬಂದಿದ್ದೆವು.
ಹೀಗೆ ತನ್ನಿಷ್ಟದ ಮೈಕ್ರೋಬಯಾಲಜಿಯಲ್ಲಿ ಬಿಎಸ್ಸಿ, ಎಮ್ಎಸ್ಸಿ ಮುಗಿಸಿದ ಇಂಚರ ನಂತರ ತನ್ನ ಕನಸಾಗಿದ್ದ ಪಿಎಚ್ಡಿಗೆ ಆಯ್ದುಕೊಂಡಿದ್ದು ನ್ಯಾಷನಲ್ ಸೆಂಟರ್ ಫಾರ್ ಬಯಲಾಜಿಕ್ ಸೈನ್ಸ್ ಸಂಸ್ಥೆ. ಎಮ್ಎಸ್ಸಿ ಓದುವಾಗಲೇ ಕೊನೆಯ ಸೆಮಿಸ್ಟರ್ಗೆ ಮಾಡಬೇಕಿದ್ದ ಡಸರ್ಟೇಷನ್ ಅದೇ ಸಂಸ್ಥೆಯಲ್ಲಿ ಮಾಡಿ, ನಂತರ ಅವರ ಪಿಐ ಅದೇಶದಂತೆ ಅಲ್ಲಿ ಒಂದು ವರ್ಷ ಅಸಿಸ್ಟೆಂಟ್ ರೀಸರ್ಚರ್ ಆಗಿ ಕೆಲಸ ಮಾಡಿ, ನಂತರ JGEEBILS ಪರೀಕ್ಷೆಯಲ್ಲಿ ತೇರ್ಗಡೆಯಾಗಿ, ಪಿಹೆಚ್ಡಿಗೆ ಅಲ್ಲೇ ಪ್ರವೇಶ ಪಡೆದು ಈಗ ವರ್ಷವಾಗಿದೆ.
ನ್ಯಾಷನಲ್ ಸೆಂಟರ್ ಫಾರ್ ಬಯಲಾಜಿಕ್ ಸೈನ್ಸ್(ಎನ್‌ಸಿಬಿಎಸ್) ಸಂಸ್ಥೆಯು ಮುಂಬೈನ ಟಿಐಎಫ್‌ಆರ್ ನ ಅಂಗಸಂಸ್ಥೆಯಾಗಿದ್ದು ಜೀವವಿಜ್ಞಾನಕ್ಕೆಂದೇ ಮೀಸಲಾಗಿರುವ ದೇಶದ ಪ್ರತಿಷ್ಟಿತ ಸಂಸ್ಥೆಗಳಲ್ಲೊಂದು. ಇಲ್ಲಿ ಪಿಹೆಚ್ಡಿ ಪದವಿ ಪಡೆಯಲು ಕನಿಷ್ಟ ಐದು ವರ್ಷ ಬೇಕು. ಪಿಹೆಚ್ಡಿ ಪಡೆಯಲು ಒಂದು “ಪೇಪರ್” ಆದರೂ ಅವರ ಹೆಸರಿನಲ್ಲಿ ಇರಬೇಕು ಎಂಬ ನಿಯಮವಿದೆ. “ಪೇಪರ್” ಅಂದರೆ ಇವರು ಮಾಡಿದ ಅಧ್ಯಯನವನ್ನು ವಿಧಿವತ್ತಾಗಿ ಬರೆದು ಅಂತರರಾಷ್ಟ್ರೀಯ ವಿಜ್ಞಾನ ವೇದಿಕೆಗಳಾಗಿರುವ ವಿಜ್ಞಾನ ಪತ್ರಿಕೆಗಳಲ್ಲಿ ಪ್ರಕಟಿಸುವುದು, ಹಾಗೆ ಪ್ರಕಟವಾಗುವುದಕ್ಕೂ ಮೊದಲು ಅದು ಆಯಾ ಕ್ಷೇತ್ರದ ಹಲವಾರು ಪರಿಣಿತರಿಂದ ಪರೀಕ್ಷಿಸಲ್ಪಡುತ್ತದೆ. ಅವರೇನಾದರೂ, ಇನ್ನೂ ಅಧ್ಯಯನದ ಅಗತ್ಯವಿದೆಯೆಂದರೆ ಮತ್ತೆ ಮಾಡಬೇಕು. ಒಟ್ಟಿನಲ್ಲಿ ಅವರ ಒಪ್ಪಿಗೆಯ ಮುದ್ರೆ ಬಿದ್ದರಷ್ಟೇ ಪ್ರಕಟವಾಗುತ್ತದೆ. ಹೀಗೆ ಪರೀಕ್ಷೆಗೆ ಒಳಪಡುವ ಮುನ್ನ ಅವರ ಪೇಪರ್ ಅನ್ನು ಬಯೋಆರ್ಕೈವ್‌ನಲ್ಲಿ ಹಾಕಿಡಬಹುದು. ಒಂದು ವಿಷಯದ ಮೇಲೆ ಇವರು ಎಷ್ಟು ಕೆಲಸ ಮಾಡಿದ್ದಾರೆ ಎಂಬುದನ್ನು ಪ್ರಪಂಚದಾದ್ಯಂತ ಇರುವ ವೈಜ್ಞಾನಿಕ ಸಮುದಾಯಕ್ಕೆ ತಿಳಿಸುವ ವಿಧಾನವಿದು. ಇದು ಅವರ ಪೇಪರ್ ಪ್ರಕಟವಾಗುವುದರ ಮೊದಲ ಹಂತ ಎನ್ನಬಹುದು.
ಮಗಳ ಮೊಟ್ಟಮೊದಲ ಪೇಪರನ್ನು ಬಯೋಆರ್ಕೈವ್ಗೆ ಸಲ್ಲಿಸಲಾಗಿದೆ. ಇದು ನಿಜಕ್ಕೂ ನಾವು ತಪ್ಪು ಮಾಡಿಲ್ಲವೆಂಬ
ಭರವಸೆ ನೀಡುತ್ತಿದೆ. ಎನ್ಸಿಬಿಎಸ್ನ ಅಂಜನಾ ಬದರಿನಾರಾಯಣ್ ಅವರ ಲ್ಯಾಬ್‌ನಲ್ಲಿ, ಬ್ಯಾಕ್ಟೀರಿಯಲ್ ಡಿಎನ್‌ಎ ಡ್ಯಾಮೇಜ್
ರಿಪೇರ್ ಅಂದರೆ ಬ್ಯಾಕ್ಟೀರಿಯಾಗಳು ತಮ್ಮ ಡಿಎನ್ಎ ನಲ್ಲಿ ತೊಂದರೆಯಾದಾಗ ಹೇಗೆ ರಿಪೇರಿ ಮಾಡಿಕೊಳ್ಳುತ್ತವೆ ಎಂಬ ವಿಶಾಲವಾದ ವಿಷಯದ ಮೇಲೆ
ಅಧ್ಯಯನ ಮಾಡಲಾಗುತ್ತಿದೆ. ಅವರ ಮಾರ್ಗದರ್ಶನದಲ್ಲಿ ಮಗಳು ಅಧ್ಯಯನ ನಡೆಸುತ್ತಿದ್ದಾಳೆ.
ಆದರೆ ಮೂಲ ವಿಜ್ಞಾನದ ಶಾಖೆಗಳಲ್ಲಿ ಆಸಕ್ತಿ ಉಳ್ಳವರಿಗೆ
ಈ ಕ್ಷೇತ್ರ ಸೂಕ್ತವಾದದ್ದು. ಅದರಲ್ಲೂ ನಮ್ಮ ಐಐಎಸ್ಸಿ, ಎನ್ಸಿಬಿಎಸ್, ಐಸಾರ್, ಟಿಐಎಫ್‌ಆರ್ ಮೊದಲಾದ ವಿಶ್ವಮಾನ್ಯ ಸಂಸ್ಥೆಗಳಲ್ಲಿ ನೀಡುವ ವಿದ್ಯಾರ್ಥಿವೇತನವೂ ಸಹ ಮಧ್ಯಮವರ್ಗದ ಜೀವನಕ್ಕೆ
ಸಾಕಾಗುವಷ್ಟಿರುತ್ತದೆ. ಜೊತೆಗೆ ದೇಶವಿದೇಶಗಳಲ್ಲಿ ನಡೆವ ವಿಜ್ಞಾನ ಸಮ್ಮೇಳನಗಳಿಗೆ ಹೋಗುವ ಅವಕಾಶ, ಅವಶ್ಯಕತೆಯಿದ್ದರೆ ವಿಶ್ವದಾದ್ಯಂತ ಇರುವ ವಿಜ್ಞಾನಿಗಳೊಡನೆ ತರಬೇತಿ ಪಡೆವ ಅವಕಾಶ ಎಲ್ಲವೂ
ಇರುತ್ತದೆ. ಓದು ಮುಗಿದ ಮೇಲೆ ವಿವಿಧ ಉದ್ಯಮಗಳಲ್ಲಿಯೋ, ಶಿಕ್ಷಕವೃತ್ತಿಯೋ , ಸ್ವಯಂವೃತ್ತಿಯೋ ಹೀಗೆ ಅವರಿಷ್ಟದ ವೃತ್ತಿ
ಮಾಡುವ ಅವಕಾಶವಂತೂ ಇದೆ. ವಿಪರ್ಯಾಸವೆಂದರೆ ನಮ್ಮ ಬೆಂಗಳೂರಿನಲ್ಲೇ ಇರುವ ಐಐಎಸ್‌ಸಿ,
ಎನ್‌ಸಿಬಿಎಸ್ ನಂತಹ ಸಂಸ್ಥೆಗಳಲ್ಲಿ
ನಮ್ಮ ಕನ್ನಡಿಗರ ಸಂಖ್ಯೆ ತುಂಬಾ ಕಡಿಮೆ. ಅದೇನು ನಮ್ಮ ವಿದ್ಯಾರ್ಥಿಗಳಿಗೆ
ಇದರ ಬಗೆಗೆ ಹೆಚ್ಚಾಗಿ ತಿಳಿದಿಲ್ಲವೋ ಅಥವಾ ಆಸಕ್ತಿಯಿಲ್ಲವೋ ಗೊತ್ತಿಲ್ಲ.
ಕೇವಲ ವಿಜ್ಞಾನ ಎಂಬುದೊಂದೇ ಅಲ್ಲ, ಈಗಂತೂ ಇನ್ನೂ ಬಹಳಷ್ಟು ಶಾಖೆಗಳಲ್ಲಿ ಓದಲು ವಿಫುಲ ಅವಕಾಶಗಳಿವೆ. ಹಾಗಾಗಿ ಪೋಷಕರು, ಶಿಕ್ಷಕರು ತಮ್ಮ ಮಕ್ಕಳಿಗೆ ಆಸಕ್ತಿ ಇರುವ ವಿಷಯವನ್ನು
ಓದಲು, ಆ ಕ್ಷೇತ್ರದಲ್ಲಿ ಮುಂದುವರೆಯಲು ಪ್ರೋತ್ಸಾಹ ನೀಡಬೇಕು.
ಮೆಡಿಕಲ್, ಇಂಜಿನಿಯರಿಂಗ್ ಎಂಬ ಎರಡೇ ವಿಭಾಗದೆಡೆಗೆ ಎಲ್ಲರನ್ನೂ ತಳ್ಳಬೇಕಾಗಿಲ್ಲ. ಆಗ ಅದಕ್ಕಾಗಿ
ಮಕ್ಕಳನ್ನು ಮಾರ್ಕ್ಸ್ ಮೆಷೀನ್ ಮಾಡುವ ಅಗತ್ಯವೂ ಇರುವುದಿಲ್ಲ.
ಬಯೋಆರ್ಕೈವ್ನ ಈ ಕೆಳಗಿನ ಲಿಂಕ್ನಲ್ಲಿ ಇಂಚರಳ ಪೇಪರ್ ನೋಡಬಹುದು.
https://www.biorxiv.org/content/10.1101/2024.08.20.608768v1
ಇಂಚರಳ ಪ್ರತಿಭೆಗೆ ಹಾಗು ನೀವು ಕೊಡುತ್ತಿರುವ ಪ್ರೋತ್ಸಾಹಕ್ಕೆ ಅಭಿನಂದನೆಗಳು.
ReplyDelete