16 Apr 2026

  


ಇತ್ತೀಚೆಗೆ ಒಂದು ಮಗುವಿನ ನಾಮಕರಣದ ಕಾರ್ಯಕ್ರಮದಲ್ಲಿ ಫಲತಾಂಬೂಲದ ಬದಲಿಗೆ ಮಲ್ಲಿಗೆ ಗಿಡಗಳನ್ನು ಕೊಟ್ಟರು. ನಾನಿದುವರೆಗೂ ಊರಿನಿಂದ ಕಂಡಕಂಡ ಗಿಡಗಳನ್ನೆಲ್ಲ ತಂದು ಬೆಳೆಸುವ ಪ್ರಯತ್ನ ಮಾಡಿದ್ದರೂ, ಮಲ್ಲಿಗೆ ಗಿಡವನ್ನು ಮಾತ್ರ ತಂದಿರಲಿಲ್ಲ. ಮಲ್ಲಿಗೆಹೂವು ಇಷ್ಟವಾದ ಹೂವಾಗಿದ್ದರೂ ಸಹ ಗಿಡ ಬೆಳೆಸಲು ಜಾಗ ಹೆಚ್ಚು ಬೇಕು, ನನ್ನ ಸೋಮಾರಿತನ ಬಿಟ್ಟು ಆರೈಕೆ ಮಾಡಬೇಕು ಇತ್ಯಾದಿ ಕಾರಣಗಳಿಂದಾಗಿ ಅದನ್ನು ಬೆಳೆಸುವ ಪ್ರಯತ್ನ ಮಾಡಲಿಲ್ಲ. ಆದರೀಗ ಅವರು ಕೊಟ್ಟದ್ದರಿಂದ ಬೆಳೆಸಬೇಕಾಗಿದೆ. ಇಂದು ಗೆಳತಿಯೊಬ್ಬರು ಮೈತುಂಬ ಹೂವರಳಿಸಿ ನಿಂತ ತಮ್ಮ ಮನೆಯ ಮಲ್ಲಿಗೆ ಬಳ್ಳಿಯ ಫೋಟೋ ಸ್ಟೇಟಸ್ ಹಾಕಿಕೊಂಡಿದ್ದನ್ನು ನೋಡಿದಾಗ ಇದನ್ನು ಬರೆಯಬೇಕೆನ್ನಿಸಿತು.

ಆ ಮಲ್ಲಿಗೆ ಗಿಡ ಒಮ್ಮೆಲೇ ನನ್ನನ್ನು ಬಾಲ್ಯಕ್ಕೆ ನಾನು ಹುಟ್ಟಿಬೆಳೆದ ಮನೆಗೆ ಕರೆದೊಯ್ದಿತ್ತು. ಆಗ ನಮ್ಮ ಮನೆಯಲ್ಲಿ ಅನೇಕ ಜಾತಿಯ ಮಲ್ಲಿಗೆ ಗಿಡಗಳಿದ್ದವು. ಸದಾಕಾಲ ಹೂವು ಬಿಡುವ ಪರಿಮಳರಹಿತವಾದ ಗಿಡ್ಡ ತೊಟ್ಟಿನ ಮಲ್ಲಿಗೆ, ಬೇಸಗೆಯಲ್ಲಿ ನಾಲ್ಕಾರು ದಿನಗಳ ಕಾಲ ಮಾತ್ರ ಹೂವು ಬಿಡುವ ಪರಿಮಳಭರಿತವಾದ ದುಂಡು ಮಲ್ಲಿಗೆ, ಸೂಜಿಯಂತೆ ಚೂಪಾದ ತುದಿಯುಳ್ಳ ಸೂಜಿಮಲ್ಲಿಗೆ, ಕಸ್ತೂರಿ ಮಲ್ಲಿಗೆ, ಜಾಜಿ ಮಲ್ಲಿಗೆ, ದೊಡ್ಡ ಗಾತ್ರದ ಕಾಕಡ ಮಲ್ಲಿಗೆ ಹೀಗೆ ಚಿತ್ರವಿಚಿತ್ರ ಹೆಸರಿನ ಮಲ್ಲಿಗೆಗಳೆಲ್ಲವೂ ಇದ್ದವು. 

ನಿತ್ಯವೂ ಬಿಡುವ ಪರಿಮಳವಿಲ್ಲದ ಕಾಕಡ ಮಲ್ಲಿಗೆಯನ್ನು ಅಜ್ಜ ಪೂಜೆಗೆಂದು ಪ್ರತಿದಿನ ಕೊಯ್ಯುತ್ತಿದ್ದರು. ಅಮ್ಮ, ಚಿಕ್ಕಮ್ಮಂದಿರು, ಅಜ್ಜಿ, ತಮಗೆ ಎಲ್ಲಿಯಾದರೂ ಹೋಗಲಿಕ್ಕಿದ್ದಾಗ ಗುಲಾಬಿ, ಸೇವಂತಿಗೆ, ಗೊರಟೆ ಮೊದಲಾದ ಯಾವ ಹೂವುಗಳೂ ಇಲ್ಲದಿದ್ದರೆ ಮಾತ್ರ ಇದನ್ನು ಕೊಯ್ದು ಅಬ್ಬಲಿಗೆ ಹೂವಿನೊಂದಿಗೆ ಸೇರಿಸಿ ಮಾಲೆ ಮಾಡಿ ಮುಡಿಯುತ್ತಿದ್ದರು.  ಈ ಕಾಕಡ ಮಲ್ಲಿಗೆ ಹೂವು ಗಿಡದ ಮೇಲೆ ಮಾತ್ರ ಚೆನ್ನಾಗಿ ಕಾಣುತ್ತದೆ, ಅದನ್ನು ಕೊಯ್ಯಲೇ ಬಾರದು ಎಂದು ನನಗನ್ನಿಸುತ್ತಿತ್ತು. ಅದಕ್ಕೆ ಕಾರಣ "ಹಸಿರು ಗಿಡದ ಮೇಲೆ ಮೊಸರು ಚೆಲ್ಲಿದೆ" ಎಂಬ ಗಾದೆ. ಆ ಗಾದೆಗೆ ಅನ್ವರ್ಥವಾಗಿತ್ತು ಆ ಜಾತಿಯ ಮಲ್ಲಿಗೆ ಗಿಡ. ದಟ್ಟ ಹಸಿರು ಬಣ್ಣದ ಎಲೆಗಳ ಮಧ್ಯಮ ಗಾತ್ರದ ಪೊದೆಯಂತಹ ಗಿಡಗಳ ಸಾಲು, ಗಿಡದ ತುಂಬ ಅರಳುವ ಪುಟ್ಟಪುಟ್ಟ ಬಿಳಿ ಹೂವುಗಳು.  ಕೊಯ್ದರೆ ಸ್ವಲ್ಪ ಹೊತ್ತಿಗೆಲ್ಲ ಬಾಡಿ ಕಪ್ಪಾಗುವ ಹೂಗಳು ಗಿಡದಲ್ಲಿಯೇ ಇದ್ದರೆ ಸಂಜೆಯವರೆಗೂ ಬೆಳ್ಳೆಗೆ ಹೊಳೆಯುತ್ತಿದ್ದವು. ದಿನಾ ಬಿಡುವ ಇವುಗಳ ಬಗೆಗೆ ನನಗೆ ವಿಶೇಷ ಪ್ರೀತಿಯೇನೂ ಇರಲಿಲ್ಲ. 

ಆದರೆ ವರ್ಷಕ್ಕೊಮ್ಮೆ ಮಾತ್ರ ಬಿಡುವ ದುಂಡು ಮಲ್ಲಿಗೆ, ಕಸ್ತೂರಿ ಮಲ್ಲಿಗೆ ಎಂದರೆ ಮಾತ್ರ ಎಲ್ಲಿಲ್ಲದ ಪ್ರೀತಿ. ಅವುಗಳ ಮೋಹಕ ಪರಿಮಳ ಮರುಳಾಗಿಸುತ್ತಿತ್ತು. ಅದರಲ್ಲೂ ದುಂಡು ಮಲ್ಲಿಗೆಯಂತೂ ಹೂವುಗಳ ರಾಜ ಎಂದೇ ನನ್ನ ಭಾವನೆ. ಹಿಂದಿನ ದಿನ ಮೊಗ್ಗಾಗಿರುವಾಗ ದುಂಡನೆಯ ಆಕಾರದಲ್ಲಿದ್ದು, ಸಾಯಂಕಾಲದ ವೇಳೆಗೆ ಅರೆಬಿರಿದಾಗ ಮೋಹಕ ಪರಿಮಳ ಬೀರುತ್ತಾ ಆಕರ್ಷಿಸುವ ಅದು, ಮಾರನೆಯ ಬೆಳಿಗ್ಗೆ ಸಂಪೂರ್ಣ ಅರಳಿ ಹೂವಾದ ನಂತರವೂ ಸುಂದರವಾಗಿ ಕಾಣುತ್ತದೆ.  ಅರಳಿದ ನಂತರವೂ ಕಾಕಡದಷ್ಟು ಬೇಗ ಬಾಡುವುದಿಲ್ಲ. ಇನ್ನು ಕಸ್ತೂರಿ ಮಲ್ಲಿಗೆ ತನ್ನ ವಿಶೇಷ ಪರಿಮಳದಿಂದ ಹಾಗೂ ಕೊಯ್ದ ಮೇಲೆ ಅರಳಿದ ನಂತರವೂ ಸಾಯಂಕಾಲದವರೆಗೂ ಬಾಡದೆ ಇರುವುದರಿಂದ ಸ್ವಲ್ಪ ಹೆಚ್ಚೇ ಪ್ರೀತಿ ಪಡೆದುಕೊಂಡಿತ್ತು. ಕಸ್ತೂರಿ ಮಲ್ಲಿಗೆಯು ಬಳ್ಳಿಯಾದ್ದರಿಂದ ಅದನ್ನು ಒಂದು ಚಪ್ಪರದ ಮೇಲೆ ಹಬ್ಬಿಸಬೇಕಾಗುತ್ತಿತ್ತು. ಚಪ್ಪರದ ತುಂಬಾ ಹೂವರಳಿಸಿ ನಿಲ್ಲುವ ಅದನ್ನು ಕೊಯ್ಯುವುದು ಸಾಕಷ್ಟು ಸಮಯ ಬೇಡುವ ಕೆಲಸ. ಆದರೆ ಅದು ಹಗಲು ಅರಳುವ ಹೂವಾಗಿದ್ದರಿಂದ ಅದನ್ನು ಬೆಳಿಗ್ಗೆ ಕೊಯ್ದು ದಾರದಿಂದ ಕಟ್ಟಿ ಮಾಲೆ ಮಾಡಬಹುದು. ದುಂಡು ಮಲ್ಲಿಗೆ ರಾತ್ರಿಯೇ ಅರಳುವುದರಿಂದ ಅದನ್ನು ಮಧ್ಯಾಹ್ನವೇ ಕೊಯ್ಯಬೇಕು, ಆಲ್ಲದೆ ಅದರ ತೊಟ್ಟು ದಪ್ಪ ಹಾಗೂ ಗಿಡ್ಡವಿರುವುದರಿಂದ ಸೂಜಿ ದಾರದಲ್ಲಿ ಮೊಗ್ಗನ್ನು ಪೋಣಿಸಬೇಕಾಗುತ್ತದೆ.

ಇನ್ನು ತನ್ನ ವಿಶಿಷ್ಟ ಪರಿಮಳದಿಂದ ಗಮನ ಸೆಳೆವ ಮಂಗಳೂರು ಮಲ್ಲಿಗೆ ನಮ್ಮ ಮನೆಯಲ್ಲಿರಲಿಲ್ಲ. ಪೇಟೆಯ ಹೂವಿನಂಗಡಿಗಳಲ್ಲಿ ಅದೂ ಬೆಳಗಿನ ವೇಳೆಯಲ್ಲಿ ಮಾತ್ರ ದೊರಕುತ್ತಿದ್ದ ದುಬಾರಿ ಹೂವಾಗಿತ್ತು ಅದು. 

ಈ ಮಲ್ಲಿಗೆ ಹೂವಿನಲ್ಲಿ ಅದೆಷ್ಟು ವಿಧಗಳಿವೆಯಲ್ಲ!  ಪ್ರತಿಯೊಂದು ಜಾತಿಯ ಮಲ್ಲಿಗೆಗೂ ಅದರದ್ದೇ ಆದ ವಿಶಿಷ್ಟ ಸುಗಂಧವಿರುತ್ತದೆ, ಗಾತ್ರದಲ್ಲಿಯೂ ವಿವಿಧತೆ, ಆದರೆ ಬಣ್ಣ ಮಾತ್ರ ಬಿಳಿ. ಬಿಳಿಬಣ್ಣವಲ್ಲದೆ ಬೇರೆಯಿದ್ದರೆ ಅದನ್ನು ಮಲ್ಲಿಗೆ ಎನ್ನಲೂ ಸಹ ಕಷ್ಟ.  ಈಗ ಊರಿನಲ್ಲಿ ನೇರಲೆ ಬಣ್ಣದ ಚುಕ್ಕಿಗಳಿರುವ ಬಿಳಿ ಹೂವು ಹಾಗೂ ಸಂಪೂರ್ಣ ನೇರಳೆ ಬಣ್ಣವಿರುವ ಮಲ್ಲಿಗೆಯ ಜಾತಿಗೆ ಸೇರಿದ, ಪರಿಮಳವಿಲ್ಲದ ಹೂವುಗಳಿವೆ. ಅವಕ್ಕೆ “ಮುತ್ತುಮಲ್ಲಿಗೆ” ಎಂದು ಕರೆಯುತ್ತಾರಾದರೂ ನನಗೆಂದೂ ಅವು ಮಲ್ಲಿಗೆ ಎನ್ನಿಸುವುದಿಲ್ಲ.

ಚಿಕ್ಕವರಿದ್ದಾಗ ಬೇಸಿಗೆಯ ರಜೆಯಲ್ಲಿ ಮನೆಗೆ ಬಂದಿರುತ್ತಿದ್ದ ಅತ್ತೆಯ ಮಗಳ ಜೊತೆಗೆ ಮಧ್ಯಾಹ್ನ ಮೂರು-ಮೂರುವರೆಗೆ ನಮ್ಮ ಮಲ್ಲಿಗೆಮೊಗ್ಗು ಕೊಯ್ಯುವ ಕೆಲಸ ಪ್ರಾರಂಭವಾಗುತ್ತಿತ್ತು. ನಾಲ್ಕಾರು ಗಿಡಗಳಲ್ಲಿದ್ದ ಅಷ್ಟೂ ಮೊಗ್ಗನ್ನು ಕೊಯ್ಯುವ ವೇಳೆಗೆ ನಾಲ್ಕು-ನಾಲ್ಕೂವರೆ ಆಗಿರುತ್ತಿತ್ತು. ನಂತರ ಅಮ್ಮ-ಅತ್ತೆ ಇಬ್ಬರೂ ಸೇರಿ ಅದನ್ನು ಚೆನ್ನಾಗಿ ಪೋಣಿಸಿ ಮಾಲೆ ಮಾಡಿ, ನನಗೆ, ಅತ್ತೆಯ ಮಗಳಿಗೆ, ತಂಗಿಗೆ ಉದ್ದ ಜಡೆ ಮಾಡಿ  ಮುಡಿಸುತ್ತಿದ್ದರು. ರಾತ್ರಿಯವರೆಗೂ ಆ ಉದ್ದ ಜಡೆಯನ್ನು ಓಲಾಡಿಸುತ್ತಾ ಖುಷಿಯಿಂದ ಓಡಾಡುತ್ತಿದ್ದೆವು. 

ಸ್ವಲ್ಪ ದೊಡ್ಡವರಾದ ಮೇಲೆ ಉದ್ದ ಜಡೆ ಮಾಡಿಸಿಕೊಳ್ಳುವುದು ನಿಂತರೂ ಹೂ ಕೊಯ್ದು ಪೋಣಿಸಿ ಮುಡಿಯುವ ಸಂಭ್ರಮ ನಿಲ್ಲಲಿಲ್ಲ. 

ಆ ಗಿಡವನ್ನು ನೋಡಿದೊಡನೆ ನನ್ನ ನಾಸ್ಟಾಲ್ಜಿಯಾ ಶುರುವಾಗಿತ್ತು. ಅದಕ್ಕೆ ಇಂಬು ಕೊಡುವಂತೆ ಸಾಯಂಕಾಲ ವಾಕಿಂಗ್‌ ಮುಗಿಸಿ ಬರುವಾಗ ದುಂಡುಮಲ್ಲಿಗೆ ಮೊಗ್ಗು ಮಾರುತ್ತಿದ್ದ ತಳ್ಳುಗಾಡಿ ಕಾಣಿಸಬೇಕೆ! ಅದೂ ಬಿಡಿ ಹೂ ಬೇರೆ! ಸರಿ ಇವತ್ತು ಹಳೆಯ ನೆನಪುಗಳನ್ನು ಜೀವಿಸಿದರಾಯಿತು ಎಂದು ಸ್ವಲ್ಪ ಮೊಗ್ಗು ಕೊಡು ಎಂದರೆ ಗಾಡಿಯಾತ ಏನೇನೋ ಹೇಳಿ ಒಂದಿಷ್ಟು ಹೆಚ್ಚೇ ಕೊಟ್ಟ. ಮನೆಗೆ ತಂದು ಖುಷಿಯಿಂದ ಪೋಣಿಸಲು ಪ್ರಾರಂಭಿಸಿದೆ. ಆದರೆ ಎಷ್ಟು ಪೋಣಿಸಿದರೂ ಮೊಗ್ಗು ಅಕ್ಷಯವಾಗುತ್ತಾ ಹೋದಂತೆನ್ನಿಸತೊಡಗಿತು! ಉದ್ದದ ಮೂರು ಮಾಲೆಯನ್ನು ಪೋಣಿಸಿಯಾಯಿತು. ಇರುವ ಚೋಟುದ್ದದ ಜುಟ್ಟಿಗೆ ಅದನ್ನು ಮುಡಿಯಲಂತೂ ಆಗುವುದಿಲ್ಲ, ದೇವರಿಗೇರಿಸಿ ತೃಪ್ತಿ ಪಟ್ಟದ್ದಾಯಿತು. ಅಂತೂ ಇಂತೂ ಪೋಣಿಸಿ ಮುಗಿಸುವಾಗ ಕಲಿತ ಪಾಠ.... ಕೆಲವೊಂದಷ್ಟು ಹಳೆಯ ವಿಷಯಗಳು ನೆನಪಿಸಿಕೊಂಡು ಖುಷಿಪಡಲಷ್ಟೇ ಚೆಂದ....ಈಗ ಅದನ್ನು ಜೀವಿಸುತ್ತೇನೆಂದು ಹೊರಟರೆ ಹಿಂದಿನ ಸವಿನೆನಪೂ ಕಹಿಯಾಗಬಹುದು.


No comments:

Post a Comment