16 Sept 2009

ಪ್ರಾಣಿಗಳಲ್ಲಿ ಸ್ವರಕ್ಷಣಾ ತಂತ್ರಗಳು

ಪ್ರಕೃತಿಯ ಬಗ್ಗೆ ಪ್ರಾಣಿ ಪಕ್ಷಿಗಳ ಬಗ್ಗೆ ವೈಜ್ಙಾನಿಕವಾಗಿ, ಕುತೂಹಲ ಹುಟ್ಟುವಂತೆ ಬರೆಯುತ್ತಿದ್ದವರು ತೇಜಸ್ವಿ. ಅವರ"ಪರಿಸರದ ಕಥೆಗಳು" ಸಂಕಲನದಲ್ಲಿ ಉಡದ ಬಗ್ಗೆ ಬರೆಯುತ್ತಾ ಅವರೆನ್ನುತ್ತಾರೆ "ಪ್ರಕೃತಿ ಅದಕ್ಕೆ ತನ್ನ ರಕ್ಷಣೆಗೆ ಯಾವ ಅಸ್ತ್ರಗಳನ್ನು ನೀಡಿದೆಯೊ" ಎಂದು. ನಿಜ ಎಲ್ಲ ಜೀವಿಗಳೂ ತನ್ನ ರಕ್ಷಣೆಗೆ ಅನೇಕ ಉಪಾಯಗಳನ್ನು ಕಂಡುಕೊಂಡಿರುತ್ತವೆ. ಅನೇಕ ಅನುಕೂಲಗಳನ್ನು ಪ್ರಕೃತಿಯೆ ನೀಡಿರುತ್ತದೆ.



ದೈಹಿಕ ಶಸ್ತ್ರಾಸ್ತ್ರಗಳು-- ಹೆಚ್ಚಿನ ಪ್ರಾಣಿಗಳು ತಮ್ಮ ದೇಹದ ಭಾಗಗಳನ್ನೆ ವೈರಿಗಳಿಂದ ರಕ್ಷಣೆಗಾಗಿ ಬಳಸುತ್ತವೆ.




  1. ದಪ್ಪ ಚರ್ಮ(cuticle): ಹೇನು,ತಿಗಣೆಗಳನ್ನು ಸುಲಭವಾಗಿ ಹೊಸಕುವುದು ಸಾಧ್ಯವೆ? ಹೊಟ್ಟೆ ಹುಳುಗಳು ಏಕೆ ಜೀರ್ಣವಾಗಲ್ಲ? ಹೇನು ತಿಗಣೆ ಮುಂತಾದವುಗಳ ದಪ್ಪ ಚರ್ಮ ಅವುಗಳನ್ನು ರಕ್ಷಿಸುತ್ತದೆ. ಲಾಡಿಹುಳು ,ಕೊಕ್ಕೆಹುಳು ಮೊದಲಾದ ಪರಾವಲಂಬಿ ಹುಳುಗಳು ಜಠರ ಮತ್ತು ಕರುಳಿನ ಜೀರ್ಣರಸದಿಂದಲೂ ಜೀರ್ಣವಾಗದಂತಹ ವಿಶಿಷ್ಠ ಚರ್ಮವನ್ನು ಪಡೆದಿವೆ.
  2. ಕವಚ(shell): ಪ್ರಾಣಿ ಜಗತ್ತಿನಲ್ಲಿ ಅನೇಕ ಕರ್ಣರಿದ್ದಾರೆ. ಮಹಾಭಾರತದ ಕರ್ಣನಿಗೆ ಹುಟ್ಟುವಾಗಲೇ ಕವಚ ಕುಂಡಲಗಳಿದ್ದವಂತೆ. ಅದೇರೀತಿ ಮೃದ್ವಂಗಿಗಳಾದ ಕಪ್ಪೆಚಿಪ್ಪು,ಬಸವನಹುಳು ಮುಂತಾದವು ಮತ್ತು ಆಮೆಗಳಿಗೂ ಇರುವ ಗಟ್ಟಿಯಾದ ಹೊರಕವಚ ಶತ್ರುಗಳಿಗೆ ಅಭೇಧ್ಯ. ತನ್ನ ಕಾಲುಗಳು ತಲೆಯನ್ನು ಚಿಪ್ಪಿನೊಳಗೆಳೆದುಕೊಂಡುಬಿಡುವ ಆಮೆಯನ್ನು ತಿನ್ನಲು ಯಾವ ಪ್ರಾಣಿಗೂ ಸಾಧ್ಯವಾಗುವುದಿಲ್ಲ
  3. ಕೂದಲುಗಳು,ಸ್ಕೇಲ್ಗಳು: ಕಂಬಳಿಹುಳುಗಳ ಮೈಮೇಲಿರುವ ಕೂದಲುಗಳು, ಕೆಲವು ಜಾತಿಯ ಕಂಬಳಿಹುಳುಗಳ ಗಾಢ ಬಣ್ಣ ಅದರ ಅನೇಕ ವೈರಿಗಳನ್ನು ಭಯಗೊಳಿಸುತ್ತದೆ. ಮುಳ್ಳುಹಂದಿಯ ಮುಳ್ಳುಗಳು ಅದರ ಪ್ರಬಲ ಅಸ್ತ್ರ. ಸಮುದ್ರಸೌತೆ, ಸೀಅನಿಮೋನ್, ಸಿಯರಚಿನ್ ಮೊದಲಾದ ಸಮುದ್ರವಾಸಿಗಳ ದೇಹದ ತುಂಬ ಮುಳ್ಳಿನಂತಹ ರಚನೆಗಳಿವೆ. ಹಾವು, ಮೊಸಳೆ, ಮೀನು ಮೊದಲಾದವುಗಳ ದೊರಗಾದ ಚರ್ಮವು(ಸ್ಕೇಲ್) ಅವುಗಳನ್ನು ರಕ್ಷಿಸುತ್ತದೆ.

  4. ಕುಟುಕು ಮುಳ್ಳುಗಳು: ದೇಹದಲ್ಲಿರುವ ಮುಳ್ಳಿನಂತಹ ಚೂಪಾದ ಅಂಗದಿಂದ ವಿಷಪೂರಿತ ದ್ರವವನ್ನು ವೈರಿಗಳಿಗೆ ಚುಚ್ಚುವ ಅನೇಕ ಜೀವಿಗಳಿವೆ. ಹೈಡ್ರಾ ಮುಂತಾದವುಗಳ ಟೆಂಟೆಕಲ್, ಜೇನುನೊಣಗಳ ಮುಳ್ಳು, ಹಾವಿನ ವಿಷದ ಹಲ್ಲುಗಳು ಕೆಲವು ಉದಾಹರಣೆ. "crocodile hunter"ಎಂದೆ ಪ್ರಖ್ಯಾತನಾದ ಸ್ಟೀವ್ ನ ದುರಂತ ಸಾವಿಗೆ ಕಾರಣವಾದ ಎಲೆಕ್ಟ್ರಿಕ್ ರೇ ಅಥವಾ ಸ್ಟಿಂಗ್ ರೇ ಗಳು ತಮ್ಮ ಸ್ಟಿಂಗ್ ಗಳಿಂದ ಅಧಿಕ ಪ್ರಮಾಣದ ಶಾಕ್ ನೀಡಬಲ್ಲವು.

  5. ಕೋಡು,ಕೊಂಬು, ದಂತ: ಸಸ್ತನಿಗಳಾದ ಜಿಂಕೆ,ಕಡವೆ,ಕಾಡುಕೋಣ ಮೊದಲಾದವುಗಳ ಕೋಡು,ಘೇಂಡಾಮೃಗದ ಕೊಂಬು, ಆನೆಯ ದಂತ ಅವುಗಳ ಆಯುಧಗಳಾಗಿವೆ.

  6. ಉಗುರು,ಹಲ್ಲು,ಕಾಲು, ಬಾಲ:ಮಾಂಸಾಹಾರಿ ಪ್ರಾಣಿ ಪಕ್ಷಿಗಳಲ್ಲಿ ಉಗುರು ಶಕ್ತಿಶಾಲಿ ಆಯುಧ . ಅನೇಕ ಸಸ್ತನಿಗಳಲ್ಲಿ ಬಾಲಚಿಕ್ಕ ಪುಟ್ಟ ಕೀಟಗಳನ್ನೋಡಿಸುವ ಸಾಧನ. ಕಾಂಗರು,ಕತ್ತೆ,ಜೀಬ್ರ,ಜಿರಾಫೆಗಳ ಕಾಲ ಬಳಿ ಹೋದೀರಿ ಜೋಕೆ!



camouflage(ಕಪಟರೂಪಿ): ಜೀವಿಯು ತನ್ನ ಸುತ್ತಮುತ್ತಲಿನ ಪರಿಸರದಲ್ಲಿ ಕಾಣದಂತೆ ಲೀನವಾಗುವ ಕ್ರಿಯೆಗೆ camouflage ಎಂದು ಹೆಸರು. ಇದರಲ್ಲಿ ಎರಡು ವಿಧ.





  1. ಸಹಜ: ಅನೇಕ ಪ್ರಾಣಿಗಳು ತಾವು ವಾಸಿಸುವ ಪರಿಸರದಲ್ಲಿರುವ ಬಣ್ಣಗಳನ್ನೆ ಸಹಜವಾಗಿ ಪಡೆದಿರುತ್ತವೆ. ಅವುಗಳನ್ನು ಗುರುತಿಸುವುದೇ ಕಷ್ಟವೆಂಬಷ್ಟು ಅವು ತಮ್ಮ ಪರಿಸರದಲ್ಲಿ ಲೀನವಾಗಿರುತ್ತವೆ. ಉದಾಹರಣೆ- ಎಲೆಗಳನ್ನೆ ಹೋಲುವ ಎಲೆಕೀಟ, ಒಣಗಿದ ಕಡ್ಡಿಯಂತೆಯೆ ತೋರುವ ಕಡ್ಡಿಹುಳು, ಮಾಸಿದ ಹಸಿರು ಬಣ್ಣದ ಕಪ್ಪೆ, ತರಗೆಲೆಗಳ ಬಣ್ಣದ ಹಾವುಗಳು, ಒಣಗಿದ ಹುಲ್ಲಿನ ಬಣ್ಣದ ಚಿರತೆ,ಸಿಂಹ,ಹುಲಿ, ಹಿಮದ ಬಣ್ಣದ ಹಿಮಕರಡಿ, ಹೀಗೆ ಸಾವಿರಾರು. ತುಂಬ ಆಸಕ್ತಿದಾಯಕವಾದುದೆಂದರೆ ಪೆಂಗ್ವಿನ್ ಗಳ ಕಪ್ಪು ಮತ್ತು ಬಿಳಿ ಬಣ್ಣ. ಅದರ ಹೊಟ್ಟೆಯ ಭಾಗ ಬಿಳಿ.ನೀರಿನಲ್ಲಿ ಈಜುವಾಗ ಅದು ಕೆಳಗಿರುವ ಶಾರ್ಕ ಮೊದಲಾದ ವೈರಿಗಳಿಗೆ ಹಿಮಬಂಡೆಯಂತೆ ತೋರುತ್ತದೆ. ಅದರ ಬೆನ್ನು ಕಪ್ಪು. ನೀರಿನಲ್ಲಿರುವಾಗ ಮೇಲಿರುವ ವೈರಿಗಳಿಗೆ ಅದು ಕಲ್ಲು ಬಂಡೆಯೆನಿಸುತ್ತದೆ!!.

  2. ಬುದ್ಧಿಪೂರ್ವಕ: ಗೋಸುಂಬೆ, ಆಕ್ಟೊಪಸ್ ಗಳು ವೈರಿಯೆದುರಾದಾಗ ತಮ್ಮ ಬಣ್ಣ ಬದಲಿಸಿ ಸುತ್ತಲಿನ ಪರಿಸರದ ಬಣ್ಣವನ್ನೇ ತಾಳುತ್ತವೆ. ಗೋಸುಂಬೆಯ ಚರ್ಮದಲ್ಲಿರುವ ಕ್ರೊಮಟೋಫೋರ‍್ ಗಳ ಹಿಗ್ಗುವಿಕೆ ಮತ್ತು ಕುಗ್ಗುವಿಕೆಯಿಂದ ಅದರ ಬಣ್ಣ ಬದಲಾಗುತ್ತದೆ.



ರಾಸಾಯನಿಕಗಳ ಬಿಡುಗಡೆ: ಆಕ್ಟೋಪಸ್, ಸ್ಕ್ವಿಡ್, ಕೆಲ ಓತಿಗಳು ವಾಸನಾಗ್ರಾಹಿ ವೈರಿಗಳೆದುರಾದಾಗ ಕೆಟ್ಟ ವಾಸನೆ ಸೂಸುವ ಇಂಕಿನಂತಹ ದ್ರಾವಣವನ್ನು ತಲೆಯಲ್ಲಿರುವ ಗ್ರಂಥಿಯಿಂದ ಹೊರಚಿಮ್ಮಿಬಿಡುತ್ತವೆ. ವೈರಿ ಅದರ ವಾಸನೆಗೆ ಹಿಂಜರಿಯುತ್ತದೆ. ಕೆಲವು ಜಾತಿಯ ಓಡುಹುಳ(beetle)ಗಳು ಕೆಟ್ಟವಾಸನೆಯ ಸೆಂಟ್ ಹೊರಸೂಸಿ ಶತ್ರುಗಳನ್ನು ಹಿಮ್ಮೆಟ್ಟಿಸುತ್ತವೆ. ಕೆಲ ಚಿಟ್ಟೆಗಳ ದುರ್ವಾಸನೆ,ಕೆಟ್ಟ ರುಚಿಗೆ ಹೆದರಿ ಯಾವ ಪಕ್ಷಿಗಳೂ ಅದನ್ನು ತಿನ್ನುವುದಿಲ್ಲ.




ಇದಲ್ಲದೆ ಅನೇಕ ಜೀವಿಗಳು ಶತ್ರುಗಳನ್ನು ಗಲಿಬಿಲಿಗೊಳಿಸಿ ಪರಾರಿಯಾಗುತ್ತವೆ.





  1. ಹಲ್ಲಿ ಬಾಲ ಕಳಚಿಕೊಳ್ಳುವಂತೆಯೆ ಆಕ್ಟೋಪಸ್, ನಕ್ಷತ್ರಮೀನುಗಳು ತಮ್ಮ ಕೈಗಳನ್ನು ಕಳಚಿಕೊಳ್ಳುತ್ತವೆ. ಶತ್ರುವಿನ ಗಮನ ಕಳಚಿದ ಅಂಗದ ಮೇಲಿದ್ದಾಗ ಇವು ತಪ್ಪಿಸಿಕೊಳ್ಳುತ್ತವೆ.

  2. ಆಕ್ಟೋಪಸ್ ವೈರಿಯೆದುರಾದಾಗ ಮೀನಿನಂತೆ, ಹಾವಿನಂತೆ ದೇಹವನ್ನು ಬಾಗಿಸಿ ಬಳುಕಿಸಿ ಅದನ್ನು ಬೆದರಿಸುತ್ತದೆ.

7 comments:

  1. ಸುಮಾ,

    ಬಿ.ಎಸ್ಸಿ.ಯಲ್ಲಿ ನಾನು ಓದಿದ್ದೂ ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ ಮತ್ತು ರಸಾಯನ ಶಾಸ್ತ್ರ. Biology ನನ್ನಚ್ಚುಮೆಚ್ಚಿನ ವಿಷಯ ಕೂಡ. ನಿಮ್ಮ ಉತ್ತಮ ಅಭಿರುಚಿ, ಆಸಕ್ತಿಗಳನ್ನು ಕಂಡು ಸಂತೋಷವಾಯಿತು. ಯಾವ ಬರಹವನ್ನೇ ಆಗಲಿ ಬರೆದು ಹರಿದು ಬಿಸಾಡದಿರಿ. ಹಾಗೆಯೇ ಇಟ್ಟು ಸ್ವಲ್ಪ ಸಮಯದ ನಂತರ ಬೇಕಿದ್ದರೆ ಪ್ರಕಟಿಸಿ. ನಮ್ಮ ತುಮುಲಗಳನ್ನು ಪ್ರಕಟಿಸಲು ಬಳಸುವ ಸಾಧನವಾದ ಈ ಬರವಣಿಗೆ ಯಾವತ್ತೂ ಉತ್ತಮವಾಗಿಯೇ ಇರುತ್ತದೆ. ಬರುತ್ತಿರುವೆ. ಬರೆಯುತ್ತಿರಿ.

    ReplyDelete
  2. ಉಪಯುಕ್ತ ಮಾಹಿತಿ ನೀಡಿದ್ದೀರಾ! ಧನ್ಯವಾದಗಳು

    ReplyDelete
  3. ಸುಮಾ
    ನನಗೊಬ್ಬಳು ಸಾಥಿ ಸಿಕ್ಕಹಾಗೆ...ನಾನು ಈ ಹಿಂದೆ ಸಮುದ್ರ ಕುದುರೆ-ಹೊರುವ ಗಂಡುಗಳು ಅಂತ ಬ್ಲಾಗ್ ಪೋಸ್ಟ್ ಮಾಡಿದ್ದೆ, ಇದೇ ಶೀರ್ಷಿಕೆಯ ವಿವರವಾದ ಲೇಖನ ಕನ್ನಡದ ಡೈಜಸ್ಟ್ ಎಂದೇ ಹೆಸರಾದ ಕಸ್ತೂರಿಯಲ್ಲಿ ಎರಡು ದಶಕದ ಹಿಮ್ದೆ ಪ್ರಕಟಿಸಿದ್ದೆ..ಅದೇ ಕಸ್ತೂರಿಯ ಮತ್ತೊಮ್ದು ಸಂಚಿಕೆಯಲ್ಲಿ ಸಮುದ್ರದ ಛದ್ಮವೇಷಿಗಳು (ನೀವು ಹೇಳಿರುವ adoptation) ಸಹಾ ಪ್ರಕತವಾಗಿತ್ತು. ನಿಮ್ಮ ಈ science ಅನ್ನು ಜನಪ್ರಿಯಗೊಳಿಸುವ ಪ್ರಯತ್ನ ಫಲಪ್ರದವಾಗಲಿ ಎಂದು ಹಾರೈಸುತ್ತೇನೆ...ಶುಭವಾಗಲಿ

    ReplyDelete
  4. ಸುಮಾ ಮೇಡಮ್,

    ಪ್ರಾಣಿ ರಕ್ಷಣೆ ವಿಚಾರದಲ್ಲಿ ಈ ಲೇಖನ ನಿಜಕ್ಕೂ ಮಾಹಿತಿಯುಕ್ತ ಲೇಖನ. ಇಂಥವು ಇನ್ನಷ್ಟು ಬರೆಯಿರಿ...ಚೆನ್ನಾಗಿರುತ್ತೆ...

    ReplyDelete
  5. ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು ತೇಜಸ್ವಿನಿ,ಸೀತಾರಾಮ್ ಸರ‍್.
    ಜಲನಯನ ಅವರೆ ಧನ್ಯವಾದಗಳು. ಸಮುದ್ರ ಕುದುರೆಯ ಬಗ್ಗೆ ನೀವು ಬರೆದ ಲೇಖನದ ಲಿಂಕ್ ಕೊಡಲು ಸಾಧ್ಯವಾ. ನಾನು ನಿಮ್ಮ ಬ್ಲಾಗ್ನಲ್ಲಿ ನೋಡಿದೆ, ಸಿಗಲಿಲ್ಲ.
    ಶಿವು ಸರ‍್ ಇಂತಹ ಮಾಹಿತಿಗಳು ತುಂಬಾ ಇವೆ. ಆದರೆ ಅದನ್ನು ಸರಳವಾಗಿ ಬರೆಯಲು ನನಗೆ ಬರುತ್ತಿಲ್ಲ. ಪ್ರಯತ್ನಿಸುತ್ತಿದ್ದೇನೆ. ಹೀಗೆ ಅನೇಕ ಜೀವಿಗಳ ಜೀವನವಿಧಾನವನ್ನು ಕವನಗಳಲ್ಲಿ ಹಿಡಿದಿಟ್ಟಿದ್ದಾರೆ ನನ್ನವರಾದ ಸುಧಾಕಿರಣ್. ಆ ಸಂಕಲನವೀಗ ಪ್ರಕಟಣೆಗೆ ಅಣಿಯಾಗುತ್ತಿದೆ.

    ReplyDelete
  6. ವೈಜ್ಞಾನಿಕ ವಿಷಯಗಳನ್ನು ಸರಳವಾಗಿ, ಅದರಲ್ಲೂ ಇಂಗ್ಲೀಷ್ ಅಲ್ಲದ ಭಾಷೆಯಲ್ಲಿ ಬರೆಯುವುದು ಒಂದು ಕಲೆಯೆ. ಲೇಖನ ತುಂಬ ಉಪಯುಕ್ತವಾಗಿದೆ

    ReplyDelete
  7. ಸುಮಾ, ನನ್ನ science & share ನಲ್ಲಿ ಕೆಲವು ಮೀನುಗಳ ಬಗ್ಗೆ ಪೋಸ್ಟ್ ಮಾಡಿದ್ದೇನೆ ನೋಡಿ ನಿಮ್ಮ ಅನಿಸಿಕೆ ತಿಳಿಸಿ.
    ನೀವು ಕೇಳಿದ ಲಿಂಕ್ ಇಲ್ಲಿದೆ ನೋಡಿ (ನನ್ನ ಜಲನಯನ ಬ್ಲಾಗ್ ನಲ್ಲಿದೆ)
    http://jalanayana.blogspot.com/2009/05/blog-post_18.html

    ReplyDelete