4 Dec 2009

ಸೌಮ್ಯ - ಭಾಗ ೨

ಒಂದು ದಿನ ಶ್ರೀನಾಥ ತನ್ನ ಫ್ರೆಂಡ್ ಗಿರೀಶನ ಪರಿಚಯ ಮಾಡಿಸಿದ. ಅವನ ತಂದೆ ನನ್ನ ತಂದೆಯ ಸಹೋದ್ಯೋಗಿಯಾಗಿದ್ದರೆಂದು ಅವನು ತಿಳಿಸಿದಾಗ ನನಗೆ ನನ್ನ ತಂದೆ ಸಿಕ್ಕಷ್ಟೇ ಸಂತಸವಾಗಿತ್ತು. ನಾನು ಶ್ರೀನಾಥನ ಬಳಿ ಗಿರೀಶನ ತಂದೆಯನ್ನು ಭೇಟಿಯಾಗೋಣ ಎಂದೆ . ಆದರೆ ಅವರಿಬ್ಬರು ಒಕ್ಕೊರಲಿನಲ್ಲಿ ಅವರು ಈಗ ಊರಲಿಲ್ಲ , ಬಂದ ಮೇಲೆ ಭೇಟಿಯಾಗೋಣ ಎಂದರು.
ಗಿರೀಶ ಹೇಳಿದ ಪ್ರಕಾರ , ಪ್ರೀತಿಸಿ ಮದುವೆಯಾಗಿದ್ದ ನನ್ನ ತಂದೆ ಮತ್ತು ತಾಯಿ ನಾನು ಹುಟ್ಟಿದ ಮೇಲೆ ಯಾವುದೋ ಭಿನ್ನಾಭಿಪ್ರಾಯದಿಂದ ಬೇರಾಗಿದ್ದರು. ಯಾವುದೋ ಹೆಂಗಸಿನ ಜೊತೆ ಅಪ್ಪನಿಗೆ ಸಂಭಂಧವಿತ್ತೆಂದು ಸುದ್ದಿಯಾಗಿತ್ತು. ಅಮ್ಮನಿಂದ ಡೈವೊರ್ಸ್ ಆದ ನಂತರ ಅಪ್ಪ ಗೋವಾಕ್ಕೆ ವರ್ಗ ಮಾಡಿಸಿಕೊಂಡು ಹೊರಟು ಹೋದರು. ಆಮೇಲೆ ಗಿರೀಶನ ತಂದೆಗೂ ಅವರ ಸಂಪರ್ಕವಿರಲಿಲ್ಲ .
ಕೇಳುತ್ತಿದ್ದ ನನಗೆ ಕತ್ತಲೆಯಲ್ಲಿರುವವರಿಗೆ ದೀಪ ಸಿಕ್ಕಂತಾಗಿತ್ತು. ಗೋವಾದಲ್ಲಿ ಅವರು ಕೆಲಸ ಮಾಡುತ್ತಿರುವ ಸಂಸ್ಥೆಗೆ ಹೋಗಿ ಸುಲಭವಾಗಿ ಅವರನ್ನು ಭೇಟಿ ಮಾಡಬಹುದೆಂದುಕೊಂಡೆ. ಶ್ರೀನಾಥ ನೀನೊಬ್ಬಳೇ ಅಷ್ಟು ದೂರದ ಊರಿಗೆ ಹೋಗುವುದು ಒಳ್ಳೆಯದಲ್ಲ ನಾನೂ ಬರುತ್ತೇನೆ ಎಂದ. ಬೇಸಗೆ ರಜೆ ಪ್ರಾರಂಭವಾಗಿತ್ತಿದ್ದಂತೆ ಹೋಗುವುದೆಂದು ತೀರ್ಮಾನಿಸಿದೆವು.
ಪರೀಕ್ಷೆ ಹತ್ತಿರ ಬರುತ್ತಿತ್ತು . ತುಂಬ ಚೆನ್ನಾಗಿ ಓದುತ್ತಿದ್ದ ನನ್ನ ಬಗ್ಗೆ ಟೀಚರ್ ಗಳಿಗೆ ಬಾರೀ ನಿರೀಕ್ಷೆಗಳಿದ್ದವು. ನಾನೂ ಚೆನ್ನಾಗೆ ತಯಾರಿ ನಡೆಸಿದ್ದೆ. ದಿನಕ್ಕೊಮ್ಮೆ ಶ್ರೀನಾಥನ ಭೆಟಿಯಾಗುತ್ತಿತ್ತು. ನಮ್ಮ ಸಲುಗೆ ಸಾಮಿಪ್ಯ ನೋಡಿದ ಅಮ್ಮನಿಗೆ ಕಸಿವಿಸಿಯಾಗಿ ರಾತ್ರಿ ಮಲಗಿದ್ದ ನನ್ನ ಬಳಿ ಬಂದು ತಲೆ ನೇವರಿಸುತ್ತ ಬುಧ್ಧಿವಾದ ಹೇಳಿದ್ದಳು . ಅವಳ ಪ್ರಕಾರ ಗಂಡು ಜಾತಿ ನಂಬುಗೆಗೆ ಅರ್ಹವಾಗಿರಲಿಲ್ಲ. ಆದರೆ ನಾನು ಅವನು ನನ್ನ ಒಳ್ಳೆಯ ಗೆಳೆಯನಷ್ಟೇ ಎಂದು ಅವಳ ಮಾತನ್ನು ತಳ್ಳಿಹಾಕಿದ್ದೆ. ಮಗಳ ಮೇಲೆ ತುಂಬ ನಂಬಿಕೆಯನ್ನಿಟ್ಟಿದ್ದ ಅವಳು ಸುಮ್ಮನಾಗಿದ್ದಳು.
ಅಮ್ಮನಲ್ಲಿ ನಿಜ ವಿಷಯ ತಿಳಿಸಿಬಿಡಬೇಕೆಂದು ಎಷ್ಟೋ ವೇಳೇ ಅನ್ನಿಸಿತ್ತು . ಆದರೆ ಅವಳೆಲ್ಲಿ ನೊಂದುಕೊಳ್ಳುತ್ತಾಳೊ , ಅಪ್ಪನ ವಿಷಯವೆತ್ತಬೇಡವೆಂದುಬಿಡುತ್ತಾಳೊ ಎಂದು ಸುಮ್ಮನಾಗಿಬಿಡುತ್ತಿದ್ದೆ.
ನಮ್ಮಿಬ್ಬರ ಪರೀಕ್ಷೆಗಳು ಮುಗಿದ ನಂತರ ಒಂದು ದಿನ ನಾವು ಗೋವಾಕ್ಕೆ ಹೋಗುವುದೆಂದು ತೀರ್ಮಾನಿಸಿದೆವು. ಅಮ್ಮನ ಹತ್ತಿರ ಏನು ಹೇಳುವುದು? ಶ್ರೀನಾಥನೇ ಒಂದು ಉಪಾಯ ಸೂಚಿಸಿದ . ನನ್ನ ಫ್ರೆಂಡ್ ರೇಖಾಳಲ್ಲಿ ನಮ್ಮ ವಿಷಯವನ್ನೆಲ್ಲ ತಿಳಿಸಿದೆ. ನನ್ನ ನೋವಿನ ಅರಿವಿದ್ದ ಆವಳು ನನಗೆ ಸಹಾಯ ಮಾಡಲು ಒಪ್ಪಿದಳು. ಅವಳೊಂದಿಗೆ ಅವಳ ಅಜ್ಜಿಯ ಊರು ಮಂಗಳೂರಿಗೆ ಹೋಗುತ್ತೇನೆಂದು ಅಮ್ಮನನ್ನು ಒಪ್ಪಿಸಿದೆವು. ಅಮ್ಮನಲ್ಲಿ ಸುಳ್ಳು ಹೇಳುತ್ತಿದ್ದೇನಲ್ಲಾ ಎಂದು ದುಖಃವಾದರೂ ಅಪ್ಪನನ್ನು ಕಾಣುವ ತವಕದ ಕೈ ಮೇಲಾಗಿತ್ತು.
ಅಂದು ನಾನು ಶುಭದಿನವೆಂದುಕೊಂಡಿದ್ದ ಭಾನುವಾರ ಬೆಳಗಿನ ಬಸ್ಸಿಗೆ ನನ್ನನ್ನು ಕಳುಹಿಸಲು ಅಮ್ಮ ಬಂದಿದ್ದಳು. ನಾನು ಮತ್ತು ರೇಖ ಮಂಗಳೂರಿನ ಬಸ್ ಹತ್ತಿ ಕುಳಿತ ನಂತರ ಕನಿಷ್ಠ ಹತ್ತು ಬಾರಿ ಹುಷಾರಾಗಿ ಹೋಗಿ ಬಾ ಎಂದು ಹೇಳಿ ಮನೆಗೆ ಹೊರಟಳು . ಅಮ್ಮ ಮರೆಯಾದ ನಂತರ ಬಂದ ಶ್ರೀನಾಥನೊಡನೆ ನಾನು ಗೋವಾದ ಬಸ್ಸನ್ನೇರಿದೆ. ಬಸ್ಸಿನಲ್ಲಿದ್ದ ಶ್ರೀನಾಥ ನಾಲ್ವರು ಗೆಳೆಯರನ್ನು ನೋಡಿದಾಗ ಇವರೆಲ್ಲ ಯಾಕೆ ಬಂದರು ಎನಿಸಿದ್ದು ನಿಜ. ನನ್ನ ಅನುಮಾನ ಪರಿಹರಿಸಲೆಂಬಂತೆ , ಅವರೆಲ್ಲ ನಮಗೆ ಸಹಾಯ ಮಾಡಲು ಬಂದಿದ್ದಾರೆ , ಗೋವಾದ ಪರಿಚಯ ಇವರಿಗೆ ಚೆನ್ನಾಗಿದೆ ಅಲ್ಲದೆ ಈ ಅಜಯ್ ಫಾರ್ಮ್ ಹೌಸ್ ಗೋವಾದ ಬಳಿಯಲ್ಲಿದೆ ಎಂದ ಶ್ರೀನಾಥ. ಏನೋ ಒಂದು ರೀತಿಯ ಭಯವಾದರೂ ಶ್ರೀನಾಥನ ಮೇಲಿದ್ದ ವಿಶ್ವಾಸದಿಂದ ಸುಮ್ಮನೆ ಕುಳಿತೆ.
ಬಸ್ಸು ಗೋವಾ ತಲುಪಿದಾಗ ರಾತ್ರಿಯಾಗಿತ್ತು. ಹೋಟೆಲ್ ಒಂದರಲ್ಲಿ ಊಟ ಮುಗಿಸಿ ದ ಮೇಲೆ ಭೂತಬಂಗಲೆಯಂತಹ ತೋಟದ ಮನೆಯೊಂದಕ್ಕೆ ಕರೆತಂದರು. ನಿರ್ಮಾನುಷವಾಗಿದ್ದ ಆ ಮನೆಯ ಬಳಿ ಇದ್ದ ಕಾವಲುಗಾರನೊಬ್ಬ ಬಾಗಿಲು ತೆಗೆದು ವಿಚಿತ್ರ ನೋಟದಿಂದ ನನ್ನನ್ನು ನೋಡಿ ಹೊರಟುಹೋದ. ವಿಶಾಲವಾದ ಮನೆಯ ಮಹಡಿಯ ರೂಮಿಗೆ ಕರೆದೊಯ್ದ ಶ್ರೀನಾಥ ಇದು ನಿನ್ನ ರೂಮು . ನೀನು ಫ್ರೆಶ್ ಆಗಿ ಮಲಗು. ನಾವೆಲ್ಲ ಕೆಳಗಿನ ರೂಮಿನಲ್ಲಿರುತ್ತೇವೆ. ನಾಳೆ ಬೆಳಗ್ಗೆ ನಿನ್ನ ಅಪ್ಪನನ್ನು ನೋಡಲು ಹೋಗೋಣ ಎಂದು ಕೆನ್ನೆಹಿಂಡಿದ. ನನಗಾಗಿ ಇಷ್ಟೆಲ್ಲ ಮಾಡುತ್ತಿರುವ ಅವನ ಬಗ್ಗೆ ಅಭಿಮಾನ ಉಕ್ಕಿತ್ತು.
ತುಂಬ ದಿನಗಳ ತನ್ನ ಕನಸು ಈಡೇರಲಿದೆ , ಬೆಳಗ್ಗೆ ನಾನು ನನ್ನ ಅಪ್ಪನನ್ನು ನೋಡುತ್ತೇನೆಂಬ ಸಂಭ್ರಮದಲ್ಲಿ ತೇಲುತ್ತಾ ಮಲಗಿದ್ದ ನನ್ನ ಬಳಿ ಯಾರೋ ಬಂದಂತಾಯಿತು. ಗಾಭರಿಯಲ್ಲಿ ಯಾರು ಎಂದೆ , ನಾನೇ ಏಕೆ ಭಯ ಚಿನ್ನು ಎಂದ ಶ್ರೀನಾಥ ಏನೇನೋ ಮಾತನಾಡುತ್ತ ಹತ್ತಿರ ಬಂದು ದೇಹವನ್ನಾವರಿಸಿದ. ಅವನೇನು ಮಾಡುತ್ತಿದ್ದಾನೆಂಬ ಅರಿವಾದರೂ ನನ್ನವನೆಂಬ ಅಭಿಮಾನದಲ್ಲಿ ಸುಮ್ಮನುಳಿದೆ. ಸ್ವಲ್ಪ ಹೊತ್ತಿನ ಬಳಿಕ ಅವನೆದ್ದು ಹೋದ. ನೋವು , ಏನೋ ಕಳೆದುಕೊಂಡೆನೆಂಬ ಭಾವದಲ್ಲಿ ಅಳುತ್ತಿದ್ದಾಗ ಶ್ರೀನಾಥನ ಗೆಳೆಯ ಗಿರೀಶ ಒಳಬಂದು ಮೈ ಕೈ ಸವರಲಾರಂಭಿಸಿದ. ಸಿಟ್ಟಿನಿಂದ ಎದ್ದು ಕೆಳಗೋಡಿ ಬಂದೆ . ಅರಾಮವಾಗಿ ನಗುತ್ತ ಉಳಿದ ಗೆಳೆಯರೊಡನೆ ತನ್ನ ಅನುಭವಗಳನ್ನು ಹಂಚಿಕೊಳ್ಳುತ್ತಾ ಕುಡಿಯುತ್ತಾ ಕುಳಿತಿದ್ದ ಅವನನ್ನು ನೋಡಿದಾಗ ನಾನೆಂಥ ಅಪಾಯದಲ್ಲಿದ್ದೇನೆಂಬ ಅರಿವಾಗಿತ್ತು. ಹೊರಗೋಡಲು ಪ್ರಯತ್ನಿಸಿದೆ. ಆದರೆ ಎಲ್ಲರೂ ಸುತ್ತುವರಿದಿದ್ದರು. ಹತ್ತಿರದಲ್ಲಿದ್ದ ಕಂಚಿನ ಹೂದಾನಿಯಿಂದ ನನ್ನನ್ನು ಹಿಡಿಯಲು ಬಂದ ಶ್ರೀನಾಥನ ತಲೆಗೆ ಬಡಿದೆ. ರಕ್ತ ಸುರಿಸುತ್ತಾ ಕೆಳಗೆ ಬಿದ್ದ ಆತ ಸತ್ತೇ ಹೋದ . ಅವನು ಸತ್ತದ್ದನ್ನು ಕಂಡು ಹೆದರಿ ಉಳಿದವರೆಲ್ಲ ಓಡಿಹೋದರು. ಕೂಗಿದ ಶಬ್ದಕ್ಕೆ ಓಡಿ ಬಂದ ಕಾವಲುಗಾರ ರಕ್ತದ ಮಡುವಿನಲ್ಲಿ ಬಿದ್ದಿದ್ದ ಶ್ರೀನಾಥನನ್ನೂ , ನಡುಗುತ್ತಾ ನಿಂತಿದ್ದ ನನ್ನನ್ನೂ ನೋಡಿ ಪೋಲೀಸರನ್ನು ಕರೆಸಿದ.
ನಂತರ ಏನಾಯಿತೋ ನನಗೊಂದೂ ತಿಳಿಯದು . ನಾನು ಹೇಳಿದ್ದನ್ನಂತೂ ಯಾರೂ ನಂಬಲಿಲ್ಲ . ಶ್ರೀನಾಥನ ಗೆಳೆಯರು , ಕಾವಲುಗಾರ ಎಲ್ಲರೂ ಬರೀ ಸುಳ್ಳುಗಳ ಸರಮಾಲೆಯನ್ನೇ ಹೇಳಿದರು . ಕೊನೆಗೆ ನನ್ನ ಅಮ್ಮನೂ ಸಹ ನಾನು ಹೇಳಿದ್ದನ್ನು ನಂಬದೆ ಅಳುತ್ತ ಹೊರಟುಹೋದಳು.
ಈಗ ನಾನು ಈ ರಿಮ್ಯಾಂಡ್ ಹೋಂ ನಿವಾಸಿ . ಎಂದಾದರೊಮ್ಮೆ ನನ್ನ ಅಮ್ಮ ನನ್ನ ಅಪ್ಪನನ್ನು ಕರೆದುಕೊಂಡು ನನ್ನನ್ನು ನೋಡಲು ಬರಬಹುದು ಎಂಬ ನಿರೀಕ್ಷೆಯಲ್ಲಿದ್ದೇನೆ. ಹೇಳಿ ಬರಬಹುದಲ್ಲವೆ?

13 comments:

  1. ಮನ ಮಿಡಿಯುವ೦ತ ಕಥೆ. ಸರಳ ಶೈಲಿ. ಚೆನ್ನಾಗಿ ಓದಿಸಿಕೊ೦ಡು ಹೋಗುತ್ತದೆ. ಕಥೆಯಲ್ಲಿನ ತಿರುವುಗಳು ಓದುಗನನಲ್ಲಿ ಕಥೆ ಬಗ್ಗೆ ಆಸಕ್ತಿ ಉ೦ಟು ಮಾಡುತ್ತದೆ. ತ೦ದೆಯನ್ನು ಹುಡುಕ ಹೊರಟವಳಿಗೆ ಮಿತ್ರರ ದ್ರೋಹ ಶಾಪವಾಗುತ್ತದೆ. ಜೈಲಿನಲ್ಲೂ, ಅಪ್ಪ-ಅಮ್ಮ ರು ಬ೦ದು ಕರೆದೊಯ್ದಾರು, ಎ೦ದು ಹಾದಿಯನ್ನು ಕಾಯುತ್ತಿರುವವಳು ಬದುಕ ನಿರ೦ತರ ಅಶಾವಾದದ ಅಭಿವ್ಯಕ್ತಿ ಅಗುತ್ತಾರೆ. ಅಪ್ಪ "ಭದ್ರತೆ"ಗೆ ಸ೦ಕೇತವಾದರೇ ಅಮ್ಮ "ಪ್ರೀತಿ-ಮಮತೆ-ವಾತ್ಸಲ್ಯ"ಕ್ಕೆ ಸ೦ಕೇತವಾಗಿ, ಅವರ ಬರುವಿಕೆಯ ಕಥಾನಾಯಕಿಯ ನೀರೀಕ್ಷೆಯಲ್ಲಿ ಅ೦ತ್ಯವಾಗುವ ಕಥೆ ಓದುಗರಿಗೆ, ಪ್ರೀತಿ ಹಾಗೂ ಭದ್ರತೆಯೆಡೆಗಿನ ಹೆಣ್ಣಿನ ನಿರ೦ತರ ತುಡಿತದ ತೀಕ್ಷಣತೆಯನ್ನು ಅರಿವಾಗಿಸುವಲ್ಲಿ ತು೦ಬು ಯಶಸ್ವಿಯಾಗಿದೆ.

    ReplyDelete
  2. ವಾಸ್ತವಕ್ಕೆ ಹತ್ತಿರವಾಗಿದೆ. ಓದ್ತಾ ಓದ್ತಾ ಮುಂದೇನಾಗುತ್ತೆ ಅಂತ ಊಹಿಸಬಹುದಾದರೂ, ಬರಹ ಚೆನ್ನಾಗಿದೆ. ಕತೆ ಮುಗಿದ ಮೇಲೆ ಬೇಜಾರಾಯಿತು.

    ಎಷ್ಟು ಓದಿದ್ರೂ, ಎಷ್ಟು ತಿಳಿ ಹೇಳಿದರೂ, ಜನ ಒಂದೊಂದ್ಸಲ ಕೆಟ್ಟದ್ದ್ಯಾವ್ದೂ ತಮಗಾಗಲ್ಲ, ಅದೆಲ್ಲಾ ಬೇರೆಯವರ ಪಾಲಿಗೆ ಅಂತ ತಿಳಿದು ಅರಿವುಗೇಡಿಗಳ ರೀತಿ ವರ್ತಿಸಿಬಿಡ್ತಾರೆ. ನೀವು ಕೊಟ್ಟಿದ್ದು ಒಂದು ಉದಾಹರಣೆ ಅಷ್ಟೇ, ಮೋಸ ಮಾಡ್ಲಿಕ್ಕೆ ಈಗೀಗ ಏನೆಲ್ಲಾ ಮಾಡ್ತಾರೆ!
    ನಾವು ಏನ್ ಮಾಡ್ತಿದೀವಿ, ಅದರ ಪರಿಣಾಮ ಏನು ಅಂತ ಯೋಚಿಸಿ ಮುಂದುವರೆದರೆ ಇಂಥದ್ದನ್ನೆಲ್ಲ ತಪ್ಪಿಸಬಹುದು ಅಂತ ನನಗನ್ನಿಸುತ್ತೆ.

    ReplyDelete
  3. ಕತೆ ಮನ ಕಲಕುತ್ತದೆ. ಅಲ್ಲದೆ ಅಮಾಯಕ ಹುಡುಗಿಯರಿಗೆ ಒಂದು ಎಚ್ಚರಿಕೆಯ ಗಂಟೆಯಂತಿದೆ.

    ReplyDelete
  4. ಸುಮಾ ಮೇಡಂ,
    ಮೊದಲ ಭಾಗವನ್ನೂ ಈಗಲೇ ಓದಿದೆ..... ಅಂತ್ಯ ಒಳ್ಳೆಯದಾಗಬಹುದೆಂದು ಆಶಿಸಿದ್ದೆ..... ಆದರೆ ಎಲ್ಲಾ ಕಷ್ಟದಲ್ಲಿದ್ದವರನ್ನು ನೋವು ಹಿಂಬಾಲಿಸುವ ಹಾಗೆ ಸೌಮ್ಯಳನ್ನೂ ಹುಡುಕಿ ಬಂದಿದೆ.... ಅಂತ್ಯ ನೋವು ತಂತು..... ನೀವು ಕಥೆ ಹೇಳಿದ ರೀತಿಚನ್ನಾಗಿದೆ....

    ReplyDelete
  5. ಸೀತಾರಾಂ ಸರ್ ಕಥೆಯ ತಿರುಳನ್ನು ನಿಮ್ಮ ಸಾಲುಗಳಲ್ಲಿ ಹಿಡಿದಿಟ್ಟದ್ದಕ್ಕೆ ಧನ್ಯವಾದಗಳು.

    ಆನಂದ್ ನಿಜ ಈ ಕಥೆಯನ್ನು ಯಾರೂ ಊಹಿಸಬಹುದು.ಆದರೆ ಇದು ಸತ್ಯ ಕಥೆ. ವ್ಯತ್ಯಾಸವೆಂದರೆ ನಿಜಜೀವನದಲ್ಲಿ ಹುಡುಗಿ ಇಲ್ಲಿ ಹೇಳಿದಂತಹ ಅಪಾಯಕ್ಕೆ ಒಳಗಾಗಿಲ್ಲ. ಕಥೆ ಹೀಗೆ ನಡೆಯಬಹುದು ಎಂಬ ಊಹೆಯಿಂದಲೆ ಆ ಹುಡುಗಿ ಅಪಾಯದಿಂದ ಪಾರಾಗಿದ್ದಾಳೆ. ನಿಜಜೀವನದಲ್ಲಿ ಅಪ್ಪನನ್ನು ಹುಡುಕಲು ಹುಡುಗನೊಬ್ಬನ ಸಹಾಯ ಪಡೆದ ನನ್ನ ಬಾಲ್ಯದ ಗೆಳತಿಯೊಬ್ಬಳು ಈ ಕಥೆಗೆ ಸ್ಪೂರ್ತಿ.ನಂತರ ಆ ಹುಡುಗನ ನಡತೆಯ ಬಗ್ಗೆ ಅವಳಲ್ಲಿ ಸಂಶಯ ಹುಟ್ಟಿ , ಮುಂದಾಗಬಹುದಾದ ಅಪಾಯವನ್ನು ಗ್ರಹಿಸಿ ಹಿನ್ನೆಡೆದಿದ್ದಾಳೆ.

    ಸುನಾಥ್ ಸರ್ , ನಿಜ ಎಷ್ಟೋ ಹೆಣ್ಣಮಕ್ಕಳು ಬುದ್ದ್ಜಿ ಬಲಿಯುವ ಮೊದಲೇ ಇಂತಹ ಅಪಾಯಕ್ಕೆ ಒಳಗಾಗಿರುತ್ತಾರೆ. ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.

    ದಿನಕರ ಅವರೆ ನಿಮ್ಮ ಪ್ರತಿಕ್ರಿಯೆಗಾಗಿ ಧನ್ಯವಾದಗಳು.

    ReplyDelete
  6. ಸುಮ ಮೇಡಮ್,

    ಕತೆ ವಾಸ್ತವವಾಗಿದ್ದು ನಡೆಯುತ್ತಿರುವ ಸದ್ಯದ ವಿದ್ಯಮಾನಗಳಿಗೆ ಕನ್ನಡಿ ಹಿಡಿದಂತಿದೆ. ಓದಿಸಿಕೊಂಡು ಹೋಗುವ ಈ ಕತೆ ಕೆಲವೊಮ್ಮೆ ಮನಕಲಕುವುದಂತು ನಿಜ. ಅನೇಕ ಹೆಣ್ಣು ಮಕ್ಕಳು ಎಚ್ಚರದಿಂದಿರಬೇಕಾದ ಸನ್ನಿವೇಶದಲ್ಲಿ ಒಂದು ಉತ್ತಮ ಸಂದೇಶ ನೀಡಿದ್ದೀರಿ...

    ಧನ್ಯವಾದಗಳು.

    ReplyDelete
  7. ಸುಮಾ ಅವರೇ,
    ತುಂಬಾ ತುಂಬಾ ಚೆನ್ನಾಗಿದೆ.. ಇವತ್ತು ಫಸ್ಟ್ ದಿನಕರ್ ಅವರ ಬ್ಲಾಗ್ ಓದಿ ಜೋಗಿ ಕಥೆಗಳ ನೆನಪಾಯಿತು... ಇಲ್ಲಿ ಪೂರ್ಣಿಮ ಭಟ್ ಅವರು ಕನ್ನಡಕ್ಕೆ ಅನುವಾದಿಸಿದ ಕಮಲಾದಾಸ್ ಅವರ 'ನನ್ನ ಕಥೆ' ಯಾ ನೆನಪಾಯಿತು... ನಂಬಿಕೆ ಮತ್ತು ದ್ರೋಹ ಒಂದೇ ಕಡೆ ಬೆರಸಿ ನಮಗೆ ಕಥೆ ಹೇಳಿದ್ದಿರ..
    ನಿಮ್ಮವ,
    ರಾಘು.

    ReplyDelete
  8. ಸುಮಾ ಅವರೆ, ಕಥೆ ಸರಳವಾಗಿದೆ. ಸೌಮ್ಯಳ ಸೌಮ್ಯತೆಯೇ, ನಂಬಿಕೆಯೇ ಇಂದಿನ ಅವಳ ಸ್ಥಿತಿಗೆ ಕಾರಣವಾಯಿತು ಎನ್ನಬಹುದು. ಅಪ್ಪ, ಅಮ್ಮ ರ ಭದ್ರತೆ ಮತ್ತು ಪ್ರೀತಿ ಇದ್ದಿದ್ದರೆ, ಸೌಮ್ಯಳ ಗತಿ ಹೀಗಾಗುತ್ತಿತ್ತೆ? ಎಂಬ ಯೋಚನೆ ಬರುತ್ತದೆ. ಹೀಗೆಯೇ ಇಂದಿನ ಅನೇಕ ಯುವತಿಯರ ಬಾಳು ಹೀಗೆ ಆಗುತ್ತಿರಬಹುದು. ವಿದ್ಯಾವಂತರೇ ಹೀಗಾದರೆ, ಇನ್ನು ಅವಿದ್ಯಾವಂತರ ಗತಿ? ವಾಸ್ತವ ಜಗತ್ತಿನ ಒಂದು ಕಿರುಪರಿಚಯವೇ ಈ ಕಥೆ ಎನ್ನಬಹುದು.
    ಧನ್ಯವಾದಗಳು

    ReplyDelete
  9. ಸುಮಾ ಅವರೇ,
    ಮನಸ್ಸು ಕಲಕುತ್ತದೆ ಕಥೆ ಓದಿದರೆ
    ಶಬ್ದಗಳಲ್ಲಿ ಅದನ್ನು ಅರ್ಥಪೂರ್ಣವಾಗಿ ಹಿಡಿದಿತ್ತಿದ್ದಿರಿ
    ಮಾತೆ ಹೊರಡುತ್ತಿಲ್ಲ

    ReplyDelete
  10. ನಂಬಿಕೆ ಮತ್ತು ದ್ರೋಹಗಳ ನಡುವಿನ ಎಳೆಗಳನ್ನು ಕಥೆಯಲ್ಲಿ ಚನ್ನಾಗಿ ಮೂಡಿಸಿದ್ದೀರಿ.... ಅಪ್ಪನನ್ನು ತೋರಿಸುವನೆಂಬ ಗೆಳೆಯನ ಮೇಕಿನ ನಂಬಿಕೆ ಸೌಮ್ಯಳನ್ನು ಪ್ರಪಾತಕ್ಕೆ ಎಳೆದು ತಳ್ಳುತ್ತದೆಂದು ಸ್ವತಃ ಅವಳೂ ಊಹಿಸಿರಲಿಕ್ಕಿಲ್ಲ.....ಸುಮಾ ಚನ್ನಾಗಿ ಮೂಡಿ ಬಂತು ಕಥೆ...

    ReplyDelete
  11. ಸುಮ,

    ಸೌಮ್ಯಳಂತಹ ಅದೆಷ್ಟೋ ಮುಗ್ಧೆಯರು ತನ್ನವರಿಗಾಗಿ, ತನ್ನವರ ಹನಿ ಪ್ರೀತಿಗಾಗಿ ಕಾತರಿಸಿ ಇಂತಹ ರಿಮಾಂಡ್ ಹೋಂ ಗಳಿಗೆ ಸೇರುತ್ತಿದ್ದಾರೆ. ತುಂಬಾ ನೋವಾಗುತ್ತದೆ ಅಂತಹವರ ನೆನೆದಾಗ. ಏನೂ ಅರಿಯದ ಮನಸು ಜೀವಮಾನವಿಡೀ ಮಾಡದ ತಪ್ಪಿಗಾಗಿ ನರಳುತ್ತದೆ.
    ಪತಿ-ಪತ್ನಿಯರು ಬೇರ್ಪಡುವ ವಿಷಯ ಅವರವರ ಖಾಸಗಿಯಾಗಿರಬಹುದು. ಆದರೆ ಅದು ಒಂದು ಜೀವಿಯ ಜೀವನವನ್ನೇ ನಿರ್ಧರಿಸುತ್ತದೆ ಎನ್ನುವುದನ್ನೂ ಅವರು ಮರೆಯಬಾರದು. ಮರೆತರೆ ಹೀಗಾಗುವುದೇ ಹೆಚ್ಚು ಅಲ್ಲವೇ? ಕೆಲವು ಮುಗ್ಧರು ಅಪ್ಪನಲ್ಲಿ ಗೆಳೆಯನನ್ನು/ಗೆಳೆಯನಲ್ಲಿ ಅಪ್ಪನನ್ನು ಹುಡುಕಿ ಮೋಸಹೋಗುತ್ತಾರೆ. ಇಲ್ಲಿ ಸೌಮ್ಯ ಅಪ್ಪನ ಹುಡುಕಾಟದಲ್ಲಿ ಮೋಸದ ಗೆಳೆತನಕ್ಕೆ ಬಲಿಯಾದಳು.

    ಸಂಕೀರ್ಣವಿಷಯವೊಂದನ್ನು ತುಂಬಾ ಸರಳವಾಗಿ ನಿರೂಪಿಸಿದ್ದೀರಿ. ಕಥೆ ಚೆನ್ನಾಗಿದೆ.

    ReplyDelete
  12. ಕಥೆ ತುಂಬಾ ಚನ್ನಾಗಿ ಮೂಡಿ ಬಂದಿದೆ.
    ಮನ ಕಲುಕುವಂತಿದೆ.

    ReplyDelete
  13. kathe mana muttuvantide. Please go through this link which talks about the same issues..

    http://www.ted.com/talks/sunitha_krishnan_tedindia.html

    ReplyDelete