1 Dec 2009

ಸೌಮ್ಯ - ಭಾಗ ೧

ನಾನು ಸೌಮ್ಯ. ವಯಸ್ಸು ೧೭ ವರ್ಷ. ನನ್ನ ವಾಸಸ್ಥಾನ ಬಾಲಾಪರಾಧಿಗಳನ್ನಿರಿಸುವ ರಿಮ್ಯಾಂಡ್ ಹೋಂ. ಇಲ್ಲಿನ ಗೇಟ್ ಸರಳುಗಳ ಬಳಿ ನಿಂತು ನಾನು ನನ್ನ ಅಪ್ಪ ಅಮ್ಮನಿಗಾಗಿ ಕಾಯುತ್ತಿದ್ದೇನೆ . ಎಂದಾದರೊಂದು ದಿನ ಅವರು ನನ್ನನ್ನು ನೋಡಲು ಬರುತ್ತಾರೆಂಬ ನಂಬಿಕೆ ನನಗಿದೆ.
ನಾನು ಇಲ್ಲಿಗೆ ಹೇಗೆ ಬಂದೆ ಎಂಬ ಪ್ರಶ್ನೆ ನಿಮ್ಮನ್ನು ಕಾಡುತ್ತಿದೆ ಎಂದು ಗೊತ್ತು. ಹೇಳುತ್ತೇನೆ , ನನ್ನ ಬಾಲ್ಯದಿಂದ ಈವರೆಗಿನ ಘಟನೆಗಳನ್ನು.
ಚಿಕ್ಕ ಮಗುವಾಗಿದ್ದಾಗ ನನ್ನ ಪ್ರಪಂಚದಲ್ಲಿದ್ದವಳು ನನ್ನ ಅಮ್ಮ ಮಾತ್ರ . ನನ್ನನ್ನು ಬೆನ್ನ ಮೇಲೆ ಕೂರಿಸಿಕೊಂಡು ಸವಾರಿ ಮಾಡುತ್ತಿದ್ದ ಅಮ್ಮನ ಚಿತ್ರಣ ಮಸುಕು ಮಸುಕಾಗಿ ಇನ್ನೂ ನನ್ನ ಕಣ್ಣಲ್ಲಿದೆ. ನರ್ಸರಿಗೆ ಹೋಗಲು ಪ್ರಾರಂಭಿಸಿದಾಗ ನನಗೆ ಪ್ರತಿಯೊಬ್ಬರಿಗೂ ತಂದೆ ಎಂಬ ವ್ಯಕ್ತಿ ಇರುತ್ತಾರೆಂಬ ವಿಷಯ ತಿಳಿಯಿತು .ಆಗೆಲ್ಲ ನನಗೆ ನನ್ನ ಅಪ್ಪ ಬೇಕು ಎಂದು ಅಮ್ಮನನ್ನು ಪೀಡಿಸುತ್ತಿದ್ದೆ. ಅಮ್ಮ ಎತ್ತಿಕೊಂಡು , ನಿನ್ನ ಅಪ್ಪ ದೂರದ ಊರಲ್ಲಿದ್ದಾರೆ ಸಲ್ಪ ದಿನಗಳಾದ ಮೇಲೆ ಬರುತ್ತಾರೆ ಪುಟ್ಟ ಎಂದು ಹೇಳುತ್ತಾ ಕೆನ್ನೆಗೆ ಮುತ್ತನ್ನಿಡುತ್ತಿದ್ದಳು . ಅವಳ ಪ್ರೀತಿಯ ನುಡಿಗಳಿಗೆ ಶಾಂತಳಾಗುತ್ತಿದ್ದ ನನಗೆ ಇನ್ನೊಮ್ಮೆ ನನ್ನ ಗೆಳತಿಯರು ವಿಷಯ ಎತ್ತುವ ವರೆಗೂ ಅಪ್ಪನ ನೆನಪೇ ಬರುತ್ತಿರಲಿಲ್ಲ. ಆದರೆ ಅಮ್ಮ ಹೇಳಿದ ಆ ಸ್ವಲ್ಪ ದಿನಗಳು ಮುಗಿಯಲೇ ಇಲ್ಲ . ನಾನು ಮಾತ್ರ ಬೆಳೆಯುತ್ತಿದ್ದೆ .
ಸ್ಕೂಲ್ ಸೇರಿದಾಗ ಮೊದಲ ದಿನ ಮಿಸ್ ಎಲ್ಲರಲ್ಲೂ ಅವರ ಅಪ್ಪ ಅಮ್ಮನ ಹೆಸರು ಕೇಳಿದರು. ನಾನು ಮಾತ್ರ ಅಮ್ಮನ ಹೆಸರೊಂದೆ ಹೇಳಿದೆ . ’ಅಪ್ಪನ ಹೆಸರೇನು ಮರಿ’ ಮಿಸ್ ಕೇಳಿದಾಗ ನಂಗೆ ಮರೆತುಹೋಗಿದೆ ಎಂದೆ. ಆಗ ಎಲ್ಲರೂ ನಕ್ಕ ನಗೆಯ ಶಬ್ದ ಇನ್ನೂ ನನ್ನ ಕಿವಿಗಳಲ್ಲಿದೆ.
ನನ್ನ ಗೆಳತಿಯರು ಅವರ ಅಪ್ಪನ ಬಗ್ಗೆ ಮಾತನಡಲು ಪ್ರಾರಂಭಿಸಿದರೆ ನಾನು ಮೌನವಾಗುಳಿಯುತ್ತಿದ್ದೆ . ಆಗೆಲ್ಲ ಅವರು ನನ್ನನ್ನು ನೊಡುತ್ತಿದ್ದ ರೀತಿಯನ್ನು ನಾನೆಂದೂ ಮರೆಯಲಾರೆ. ಪೇರೆಂಟ್ಸ್ ಡೇ ದಿನವಂತೂ ಅಮ್ಮನ ಹತ್ತಿರ ಅಪ್ಪನನ್ನು ಈಗಲೆ ಕರೆಸು ಅವರೆ ಸ್ಕೂಲಿಗೆ ಬರಲಿ ಎಂದು ಜಗಳವನ್ನೆ ಮಾಡುತ್ತಿದ್ದೆ. ಅಮ್ಮ ಏನೊ ಹೇಳಿ ಸಮಾಧಾನಪಡಿಸುತ್ತಿದ್ದಳು.
ಇನ್ನೂ ಸ್ವಲ್ಪ ದೊಡ್ಡವಳಾಗುತ್ತಿದ್ದಂತೆ ಅಮ್ಮ ನನಗೆ ಅಪ್ಪನ ಬಗ್ಗೆ ಸುಳ್ಳು ಹೇಳುತ್ತಿದ್ದಾಳೆ ಎನಿಸತೊಡಗಿತ್ತು. ಅಜ್ಜಿಯ ಬಳಿ ನಿಜ ಹೇಳುವಂತೆ ಪೀಡಿಸುತ್ತಿದ್ದೆ. ಅಜ್ಜಿ ಕಣ್ಣೀರಿಡುತ್ತ ಎಲ್ಲ ನನ್ನ ಕರ್ಮ ಎನ್ನುತ್ತಿದ್ದಳು. ನನ್ನ ಪ್ರಶ್ನೆಗೆ ಮಾತ್ರ ಉತ್ತರ ಸಿಕ್ಕುತ್ತಿರಲಿಲ್ಲ.
ಅದೊಂದು ದಿನ , ನನ್ನ ಈಗಿನ ಸ್ಥಿತಿಗೆ ಕಾರಣೀಭೂತವಾದ ದಿನ , ನಾನಾಗ ಐದನೇ ತರಗತಿಯಲ್ಲಿದ್ದೆ. ಓದಿನಲ್ಲಿ ತುಂಬ ಚುರುಕು. ಕ್ಲಾಸಿಗೆ ಯಾವಾಗಲೂ ನಾನೇ ಫಸ್ಟ್. ಹೇಗಾದರೂ ತಾನು ಕ್ಲಾಸಿಗೆ ಫಸ್ಟ್ ಬರಬೇಕೆಂದು ಶೋಭ ಪ್ರಯತ್ನಿಸುತ್ತಿದ್ದಳು. ನನ್ನನ್ನು ಆಡಿಕೊಂಡು ನಗುವುದೆಂದರೆ ಅವಳಿಗೆ ತುಂಬ ಇಷ್ಟ. ಆ ದಿನ ಅವಳು ಮತ್ತು ಅವಳ ಗೆಳತಿಯರು ಏನೋ ಕ್ಷುಲ್ಲಕ ಕಾರಣಕ್ಕಾಗಿ ಜಗಳ ತೆಗೆದರು. ನಾನೂ ಜಗಳವಾಡಿದೆ . ಅವಳು "ನನ್ನ ಅಪ್ಪನಲ್ಲಿ ಹೇಳಿಕೊಡುತ್ತೇನೆ ’ಎಂದು ಹೆದರಿಸಿದಳು. ನಾನೇನು ಕಡಿಮೆ? "ನಿನಗೊಬ್ಬಳಿಗೇನಾ ಅಪ್ಪ ಇರೋದು , ನಾನೂ ಅಪ್ಪನನ್ನು ಕರೆದುಕೊಂಡು ಬರುತ್ತೇನೆ ನೋಡು " ಎಂದೆ. ಅವರೆಲ್ಲ ಒಮ್ಮೆಲೆ ನಗತೊಡಗಿದರು. ಯಾಕ್ರೆ ನಗ್ತೀರ ಎಂದದ್ದಕ್ಕೆ "ನೀನು ನಿನ್ನ ಅಪ್ಪನನ್ನು ಹೇಗೆ ಕರೆದುಕೊಂಡು ಬರುತ್ತೀಯ? ಅವರು ನಿನ್ನಮ್ಮನಿಗೆ ಡೈವೋರ್ಸ್ ಕೊಟ್ಟಿದ್ದಾರೆ ಗೊತ್ತಾ? ಇನ್ಯಾವತ್ತು ಅವರು ಇಲ್ಲಿಗೆ ಬರಲ್ಲ ಅಂತ ನಿನ್ನೆ ನನ್ನಪ್ಪ ಹೇಳುತ್ತಿದ್ದರು"ಎಂದುಬಿಟ್ಟಳು ಶೋಭಾ. ನನಗೆ ಅದೇನೆಂದು ಸರಿಯಾಗಿ ಅರ್ಥವಾಗಲಿಲ್ಲ .
ಅಮ್ಮ ಆಫೀಸಿಂದ ಒಳಬರುತ್ತಿದ್ದಂತೆ "ಅಮ್ಮ ನೀನಿವತ್ತು ಅಪ್ಪನನ್ನು ಕರೆಸಲೇ ಬೇಕು . ಆ ಶೋಭ ಹೇಳುತ್ತಾಳೇ ಅವರು ನಿನಗೆ ಡೈವೋರ್ಸ್ ಕೊಟ್ಟಿದ್ದಾರೆ ಇನ್ಯವತ್ತೂ ಇಲ್ಲಿಗೆ ಬರಲ್ಲ ಅಂತ , ನಿಜವಾ ಅಮ್ಮ? ಅದೇನದು ನನಗೂ ತೋರಿಸು , ಅದನ್ನು ಕೊಟ್ಟರೆ ಅವರು ಇಲ್ಲಿಗೆ ಯಾಕೆ ಬರೊಲ್ಲಮ್ಮ?" ಎಂದು ಅಳುತ್ತಾ ಕೇಳಿದ ನನ್ನನ್ನು ಅಮ್ಮ ಗಟ್ಟಿಯಾಗಿ ತಬ್ಬಿಕೊಂಡು ತಾನೂ ಅಳತೊಡಗಿದಳು. "ನಿನಗೆ ಅಪ್ಪ ಅಮ್ಮ ಇಬ್ಬರೂ ನಾನೆ ಕಂದ . ದಯವಿಟ್ಟು ಇನ್ನು ಅಪ್ಪನ ಬಗ್ಗೆ ಕೇಳಬೇಡ . ಅವರಿಗೆ ನಾವು ಬೇಕಾಗಿಲ್ಲ ." ಅಳುತ್ತಲೆ ಹೇಳಿದ ಅಮ್ಮನನ್ನು ನೋಡಿ ಅವಳು ಅತ್ತದ್ದನ್ನೇ ನೋಡಿರದ ನಾನು , ಇನ್ನೆಂದೂ ಅವಳ ಬಳಿ ಅಪ್ಪನ ಬಗ್ಗೆ ಕೇಳಬಾರದೆಂದು ನಿರ್ಧರಿಸಿದ್ದೆ. ಆದರೆ ಅಪ್ಪನ ಹಂಬಲ ಮಾತ್ರ ಕಡಿಮೆಯಾಗಲಿಲ್ಲ . ನಾವೇಕೆ ಅವರಿಗೆ ಬೇಡವಾದೆವೆಂಬ ಹೊಸ ಕುತೂಹಲವೂ ಈಗ ಹುಟ್ಟಿಕೊಂಡಿತ್ತು. ಎಂದಾದರೊಂದು ದಿನ ಅಪ್ಪನನ್ನು ಕಂಡು ನನ್ನ ಪ್ರಶ್ನೆಗಳನ್ನಿಡಬೇಕು , ಸಾಧ್ಯವಾದರೆ ಅವರನ್ನು ಅಮ್ಮನ್ನೆದುರು ನಿಲ್ಲಿಸಿ ಅವಳನ್ನು ಸಂತೋಷಪಡಿಸಬೇಕೆಂದು ಅಂದೇ ನಿರ್ಧರಿಸಿದ್ದೆ.
ದಿನಗಳು ಉರುಳುತ್ತಿತ್ತು. ಕ್ರಮೇಣ ನಾನು ಗಟ್ಟಿಯಾಗಿದ್ದೆ, ’ ಅಪ್ಪ ಇಲ್ಲ ಅಮ್ಮನ ಮಗಳು’ ಇತ್ಯಾದಿ ಲೋಕದ ಟೀಕೆಗಳಿಗೆ ಕಿವುಡಾದೆ.
ನಾನಾಗ ಹೈಸ್ಕೂಲ್ ಕೊನೆ ವರ್ಷದಲ್ಲಿದ್ದೆ . ಯೌವ್ವನಕ್ಕೆ ಕಾಲಿರಿಸುತ್ತಿದ್ದುದರಿಂದ ಒಮ್ಮೆ ನೋಡಿದವರು ಇನ್ನೊಮ್ಮೆ ತಿರುಗಿ ನೋಡುವಷ್ಟು ಸುಂದರವಾಗಿದ್ದೆ. ದಿನಾ ಸ್ಕೂಲಿಗೆ ಹೋಗಿ ಬರುವಾಗ ಹತ್ತಾರು ಕಣ್ಗಳು ನನ್ನನ್ನೇ ಹಿಂಬಾಲಿಸುವುದರ ಅರಿವಾಗಿ ಹೆಮ್ಮೆಯೆನ್ನಿಸುತ್ತಿತ್ತು. ಹೀಗಿದ್ದಾಗಲೊಂದು ದಿನ ಪಕ್ಕದಲ್ಲಿದ್ದ ಖಾಲಿ ಮನೆಗೆ ಒಂದು ಪುಟ್ಟ ಸಂಸಾರ ಬಂದಿಳಿಯಿತು. ಗಂಡ , ಹೆಂಡತಿ , ನನ್ನದೇ ವಯಸ್ಸಿನ ಮಗಳು , ಕಾಲೇಜಿಗೆ ಹೋಗುತ್ತಿದ್ದ ಮಗ ಇರುವ ಆ ಸಂಸಾರವನ್ನು ನೋಡಿದಾಗ ನನಗೆ ಸಂತೋಷವಾಗುತ್ತಿತ್ತು . ನನಗಿರುವ ಕೊರತೆ ಮತ್ತಷ್ಟು ಕಾಡುತ್ತಿತ್ತು. ನನ್ನದೇ ವಯಸ್ಸಿನ ರೂಪ ಮತ್ತೆರಡು ದಿನದಲ್ಲೇ ನನ್ನ ಗೆಳತಿಯಾಗಿದ್ದಳು . ಅವಳ ಅಣ್ಣ ಶ್ರೀನಾಥನ ಪರಿಚಯವೂ ಅವಳ ಮೂಲಕ ಆಗಿತ್ತು. ನನ್ನನ್ನು ಕಂಡಾಗ ಮಿನುಗುವ ಅವನ ಕಣ್ಣುಗಳು ನನ್ನಲ್ಲಿ ಕನಸು ಮೂಡಿಸುತ್ತಿದ್ದವು.
ಸ್ವಲ್ಪ ದಿನಗಳಲ್ಲೇ ಅತ್ಮೀಯತೆಯಿಂದ ನನ್ನ ಮನಗೆದ್ದ ಶ್ರೀನಾಥನಲ್ಲಿ ನನ್ನೆಲ್ಲ ಕನಸುಗಳನ್ನು ಹಂಚಿಕೊಂಡಿದ್ದೆ. ನನ್ನ ಅಪ್ಪನನ್ನು ಕಾಣುವ ಬಯಕೆಯನ್ನೂ ಸಹಾ. ನನ್ನ ತಂದೆಯನ್ನು ಹೇಗಾದರೂ ಪತ್ತೆಹಚ್ಚಿ ಭೇಟೀ ಮಾಡಿಸುವೆನೆಂದು ಭರವಸೆಯಿತ್ತ ಅವನ ಮೇಲೆ ನನಗೂ ನಂಬಿಕೆ ಹುಟ್ಟಿತು. ಅವನ ಪ್ರೀತಿಯ ಮಾತುಗಳು ನನ್ನನ್ನು ಸುಂದರ ಲೋಕದಲ್ಲಿ ವಿಹರಿಸುವಂತೆ ಮಾಡುತ್ತಿತ್ತು.
....ಇನ್ನೂ ಇದೆ

11 comments:

  1. ಸುಮಾ ಮೇಡಮ್,

    ಸೌಮ್ಯ ಕತೆ ನಿಜಕ್ಕೂ ಮನಕಲಕುತ್ತಿದೆ. ಅಪ್ಪನಿಲ್ಲದ ಬದುಕು ಮಕ್ಕಳಿಗೆ ಹೇಗಿರಬಹುದು ಅನ್ನುವುದನ್ನು ಕತೆಯ ಮೂಲಕ ಚೆನ್ನಾಗಿ ಹೇಳಿದ್ದೀರಿ...ಮುಂದೇನಾಯಿತು...ಎನ್ನುವ ಕುತೂಹಲದೊಂದಿಗೆ ನಿಲ್ಲಿಸಿದ್ದೀರಿ...ಖಂಡಿತ ಮುಂದಿನಭಾಗಕ್ಕಾಗಿ ಕಾಯುತ್ತಿದ್ದೇನೆ...

    ತುಂಬಾ ಒಳ್ಳೆಯ ಬರಹವನ್ನು ಬರೆಯುತ್ತಿದ್ದೀರಿ...ಮುಂದುವರಿಸಿ...

    ReplyDelete
  2. ಆಹಾ! ಮುಂದೇನಪ್ಪಾ ಎನ್ನುವ ಕುತೂಹಲ ಕಾಡಿಸುತ್ತಿದೆ!

    ReplyDelete
  3. ಹೌದು, ಸೌಮ್ಯ ಯಾಕೆ ರಿಮ್ಯಾಂಡ್ ಹೋಮ್ ಗೆ ಹೋಗ್ತಾಳೆ, ಬೇಗ ಹೇಳ್ರೀ....

    ReplyDelete
  4. ಸರಳ ಶೈಲಿಯ ಬರವಣಿಗೆ. ಓದುಗರನ್ನು ಓದಿಸಿಕೊ೦ಡು ಹೋಗುವ ತಮ್ಮ ಕಥಾಧಾರೆ ಚೆನ್ನಗಿದೆ. ಒ೦ದು ಅತ್ಯುತ್ತಮ ವಿಷಯ ಹೆಕ್ಕಿ ಕಥೆ ಹೆಣೆದಿದ್ದಿರಾ! ಮು೦ದೇನು ಎ೦ಬ ತವಕದಲ್ಲಿ ಕಾಯುತ್ತಿರುವೆವು....

    ReplyDelete
  5. ಸುಂದರವಾಗಿ ಕಥೆ ಬರೆದಿದ್ದಿರಾ
    ಕುತೂಹಲ ಬೇಗ ತಣಿಸಿ, ಕಾಯಿಸಬೇಡಿ :)

    ReplyDelete
  6. ಸುಮ ಅವರೆ,
    ನಿಮ್ಮ ಬ್ಲಾಗ್ ಗೆ ಇದು ನನ್ನ ಮೊದಲ ಕಾಮೆಂಟ್.
    ಸುಂದರ ಶೈಲಿಯಲ್ಲಿ ಬರೆದ ಕಥೆ ಕುತೂಹಲದಿಂದ ಓದಿಸಿಕೊಂಡು ಹೋಗುತ್ತಿದೆ.
    ಮುಂದಿನ ಭಾಗದ ನಿರೀಕ್ಷೆಯಲ್ಲಿದ್ದೇನೆ.

    ReplyDelete
  7. ಕಥೆ ತುಂಬಾ ಚನ್ನಾಗಿ ಮೂಡಿ ಬಂದಿದೆ.
    ಮುಂದೇನು..? ಎನ್ನುವ ಕುತೂಹಲ ಮೂಡಿದೆ...
    ಮುಂದಿನ ಭಾಗವನ್ನು ಬೇಗ ಬರೆಯಿರಿ.

    ReplyDelete
  8. ಸುಮ, ಜೀವಶಾಸ್ತ್ರದ ವಿನೂತನಗಳ ಇನ್ನೊಂದು ಕಂತು ಎನ್ನುತ್ತಾ ಓದಲು ಪ್ರಾರಂಭಿಸಿ...ಸುಮನಲ್ಲಿ ಒಳ್ಳೆಯ ಕಥೆಗಾರ್ತಿಯ ಲಕ್ಷಣ ಕಾಣತೊಡಗಿದವು...
    ಕಥೆ ತಿರುವಿನತ್ತ ಹೋಗುತ್ತಿದೆ...ನಾನೂ ಹಿಂಬಾಲಿಸುತ್ತೇನೆ...ಬರಲಿ ಕಂತು...

    ReplyDelete
  9. ಪ್ರತಿಕ್ರಿಯಿಸಿ ಪ್ರೋತ್ಸಾಹಿಸಿದವರೆಲ್ಲರಿಗೂ ಧನ್ಯವಾದಗಳು.

    ReplyDelete
  10. ಸುಮ ಮೇಡಮ್, ಕಥೆ ಚೆನ್ನಾಗಿದೆ. ಕುತೂಹಲದಿಂದ ಓದಿಸಿಕೊಂಡು ಹೋಗುತ್ತದೆ. ಮುಂದೇನಾಯಿತು? ಸೌಮ್ಯ ರಿಮ್ಯಾಂಡ್‌ ಹೋಂ ಸೇರಿದ್ದು ಹೇಗೆ ಎಂದು ಬೇಗ ತಿಳಿಸಿ.

    ReplyDelete