18 Feb 2010

"ಅಣ್ಣನ ನೆನಪು" --ಬಗ್ಗೆ ಹೀಗೊಂದಿಷ್ಟು

ತೇಜಸ್ವಿ.... ರಾಷ್ಟ್ರಕವಿ ಕುವೆಂಪು ಅವರಂತಹ ಅದ್ಭುತ ಸಾಹಿತಿಯ ಮಗನಾಗಿಯೂ ತಂದೆಯ ಸಾಹಿತ್ಯದ ನೆರಳಿಂದ ದೂರ ಸಾಗಿ ತಮ್ಮದೇ ಆದ ಪ್ರತ್ಯೇಕ ಶೈಲಿಯಿಂದ , ವೈವಿಧ್ಯಮಯ ಬರಹಗಳಿಂದ ಕನ್ನಡಸಾಹಿತ್ಯಲೋಕದಲ್ಲಿ ಹೆಸರಾದವರು . ಅವರು ಬರೆದ "ಅಣ್ಣನ ನೆನಪು " ನಿಜಕ್ಕೂ ಒಂದು ಸಂಗ್ರಹಯೋಗ್ಯ ಕೃತಿ.
ಇದು ಅವರ ಆತ್ಮಕಥೆಯೋ , ಅವರ ಅಣ್ಣನ ನೆನಪೋ , ಕನ್ನಡ ಸಂಸ್ಕೃತಿ ಇತಿಹಾಸದ ಅವಲೋಕನವೋ ಎಂಬ ಗೊಂದಲ ತೇಜಸ್ವಿಯವರಂತೆಯೇ ನಮಗೂ ಕಾಡಿದರೂ ಅದು ಇವೆಲ್ಲವುಗಳ ಮಿಶ್ರಣವಾಗಿದ್ದು , ಓದುಗರನ್ನು ಆ ಕಾಲದಲ್ಲಿ ವಿಹರಿಸುವಂತೆ ಮಾಡುತ್ತದೆ.

ಎಲ್ಲೂ ತಂದೆಯ ಗುಣಗಾನ ಮಾಡದೆ , ಅವರ ನೈಜ ವ್ಯಕ್ತಿತ್ವವನ್ನು ಒಬ್ಬ ಸಾಮಾನ್ಯ ಮಗನಂತೆ ಕಟ್ಟಿಕೊಡುತ್ತಾರೆ ತೇಜಸ್ವಿ. ಕುವೆಂಪು ವ್ಯಕ್ತಿತ್ವದಲ್ಲಿದ್ದ ಸಂಕೀರ್ಣತೆಯನ್ನು ವಿವರಿಸುತ್ತಾ ಅವರು ಹೇಳುತ್ತಾರೆ ..... "ಅವರನ್ನು ಕವಿಯಾಗಿಯೋ ಕಾದಂಬರಿಕಾರರನ್ನಾಗಿಯೊ ತತ್ವ ಮೀಮಾಂಸಕರನ್ನಾಗಿಯೊ ಪರಿಗಣಿಸಿದಾಗ , ಅಥವಾ ಬಿಡಿಬಿಡಿಯಾಗಿ ಕಥೆ ಕಾವ್ಯವನ್ನವಲೋಕಿಸಿದಾಗ ಸರಳವಾಗಿ ಕಾಣುವ ವ್ಯಕ್ತಿತ್ವ ಒಟ್ಟಂದದಲ್ಲಿ ನೋಡಿದ ಕೂಡಲೆ ಅತ್ಯಂತ ಸಂಕೀರ್ಣವಾಗಿ ಕಾಣುತ್ತದೆ.
ಒಂದುಕಡೆ ಇಂಗ್ಲೀಷ್ ಜ್ಞಾನ ಮುಖ್ಯವೆಂದು ಶೂದ್ರರಿಗೆಲ್ಲ ಕರೆಕೊಡುತ್ತಾರೆ . ಕನ್ನಡದ ವಿಷಯಕ್ಕೆ ಬಂದಾಗ ಇಂಗ್ಲಿಷ್ ಅನ್ನು ಪೂತನಿಯೆಂದು ಟೀಕಿಸುತ್ತಾರೆ . ಭಾರತೀಯ ಸನಾತನ ಧರ್ಮದ ಕಟು ವಿಮರ್ಶೆ ಕುವೆಂಪು ಅವರಲ್ಲಿ ಕಾಣಬಹುದು. ಅಂತೆಯೆ ಉಪನಿಷದ್ ದರ್ಶನಗಳ ಆರಾಧನೆಯನ್ನೂ ಅವರಲ್ಲಿ ಕಾಣಬಹುದು . ಅವರ ಜೀವನಾದ್ಯಂತ ಎಂದೂ ಯಾವ ದೇವಸ್ಥಾನಕ್ಕೂ ಕಾಲಿಡಲಿಲ್ಲ. ಆದರೆ ಅಷ್ಟೆ ಗಾಢವಾಗಿ ಧ್ಯಾನ ತಪಸ್ಯೆ ಪ್ರಾರ್ಥನೆಗಳನ್ನು ಪ್ರತಿಪಾದಿಸಿದರು ."
ಕುವೆಂಪು ವ್ಯಕ್ತಿತ್ವದಲ್ಲಿದ್ದ ಮಾನವೀಯತೆ , ಮುಗ್ದತೆ , ವೈಜ್ಞಾನಿಕ ಮನೋಭಾವ , ನಿಷ್ಟುರತೆಗಳನ್ನು ಅವರು ಅನೇಕ ಪ್ರಸಂಗಗಳ ಮುಖಾಂತರವೇ ತಿಳಿಸುತ್ತಾರೆ .

ಸಾರ್ವಜನಿಕವಾಗಿ ತಮ್ಮ ಮಕ್ಕಳು ಮಾಡುವ ಪುಂಡಾಟಿಕೆಯನ್ನು ಸಮರ್ಥಿಸಿಕೊಳ್ಳುವ ಸೆಲೆಬ್ರಿಟಿಗಳಿಂದಲೇ ತುಂಬಿರುವ ಈ ನಮ್ಮ ದೇಶದಲ್ಲಿ ಮಗನ ಮೇಲೆ ವಾರೆಂಟ್ ಬಂದರೂ ತಮ್ಮ ಜನಪ್ರಿಯತೆಯನ್ನು ದುರುಪಯೋಗಪಡಿಸಿಕೊಳ್ಳದೇ ಮಗನಿಗೆ ಬುದ್ಧಿ ಹೇಳುವ ಕುವೆಂಪು ವಿಶೇಷವೆನಿಸುತ್ತಾರೆ.

ತಂದೆಯ ವೈಸ್ ಚಾನ್ಸಲರ್ ಹುದ್ದೆ ಅವರ ಬರವಣಿಗೆಗೆ ತೊಂದರೆಕೊಟ್ಟಿತೆಂದೇ ತೇಜಸ್ವಿ ಭಾವಿಸುತ್ತಾರೆ . ಬಹುಶಃ ತನ್ನ ಸ್ವಾತಂತ್ರಕ್ಕೆ ಧಕ್ಕೆ ತರಬಹುದಾದ ಇಂತಹ ಎಲ್ಲಾ ಅಮಿಷಗಳನ್ನು ಮೀರಲೆಂದೇ ಪೇಟೆಯಲ್ಲೇ ಹುಟ್ಟಿಬೆಳೆದ ತೇಜಸ್ವಿ ಹಳ್ಳಿಯಲ್ಲಿ ನೆಲೆಸಿದ್ದರೇನೋ.

ವ್ಯಕ್ತಿಯೊಬ್ಬರು ಎಷ್ಟೇ ಪ್ರಸಿದ್ಧರಾದರೂ ಅವರ ಮಕ್ಕಳಿಗೆ ಅಪ್ಪನೇ ಅಲ್ಲವೆ ? ಇದನ್ನು ತೇಜಸ್ವಿಯವರು ತಮ್ಮದೇ ಶೈಲಿಯಲ್ಲಿ ಹೀಗೆ ಹೇಳುತ್ತಾರೆ . "ನಾನು ಕಣ್ಣು ಬಿಟ್ಟಗ ಕಂಡಿದ್ದೇ ಅಣ್ಣ ಅಮ್ಮನನ್ನು , ನನಗಾಗ ಅವರು ಕವಿಯೂ ಅಲ್ಲ ದಾರ್ಶನಿಕರೂ ಅಲ್ಲ. ಗಾಳಿ ಬೆಳಕು ಮಳೆ ಬಿಸಿಲುಗಳ ವಿಸ್ತರಣೆಯಾಗಿ ಅವರು ನನಗೆ ಗೋಚರಿಸುತ್ತಾ ಹೋದರು. "
ಅದ್ದರಿಂದಲೇ ಅವರು ಎಲ್ಲರ ಮನೆಯಲ್ಲಿ ನಡೆಯುವಂತ ಸರಳ ಸಂಗತಿಗಳ ನಿರೂಪಣೆಯಿಂದಲೇ ತನ್ನ ಅಪ್ಪನನ್ನು ಚಿತ್ರಿಸುತ್ತಾರೆ . ಅದನ್ನು ಆಕ್ಷೇಪಿಸಿದವರಿಗೆ ಅವರು ಕೊಡುವ ಉತ್ತರವೂ ಸೊಗಸಾಗಿದೆ ....... " ನನಗೆ ತಿಳಿದ ಹಾಗೆ ಅಣ್ಣ ತಮಾಷೆ ವಿನೋದಗಳೊಂದಿಗೆ ಅನ್ನ ತಿನ್ನುವ ನಮ್ಮೆಲ್ಲರಂತೆ ಬದುಕಿದ್ದರು . ಬದುಕನ್ನು ಒಂದು ವ್ರತದಂತೆ ಪರಿಗಣಿಸಿ ವ್ರತನಿಷ್ಟರಂತೆ ಅವಡುಗಚ್ಚಿ ಜೀವಿಸುತ್ತಿದ್ದುದನ್ನು ನಾನಂತೂ ಕಂಡಿಲ್ಲ."

ಕೆಲವುಕಡೆ ಇದು ಅವಶ್ಯವಿರಲಿಲ್ಲವೆನ್ನಿಸುವಂತಹ ಪ್ರಸಂಗಗಳ ನಿರೂಪಣೆಯೂ ಇದೆ ಗೆಳೆಯ ಶಾಮಣ್ಣನ ಬೈಕ್ , ಸಂಗೀತ ಕಲಿಯುವ ಉತ್ಸಾಹದ ಬಗ್ಗೆ ಸ್ವಲ್ಪ ಹೆಚ್ಚೇ ಬರೆದಿದ್ದಾರಾದರು ಅದರ ಹಾಸ್ಯಮಯ ಧಾಟಿ ಓದಿಸಿಕೊಂಡು ಹೋಗುವುದರಿಂದ ರಸಭಂಗವಾಗುವುದಿಲ್ಲ.

ಇಂಗ್ಲೀಷ್ ಭಾಷೆಯ ಪರೀಕ್ಷೆಯಲ್ಲಿ ಪದೇ ಪದೇ ಫೇಲಾಗುತ್ತಿದ್ದ ತೇಜಸ್ವಿಗೆ "ಭಾಷೆಯ ಬಗ್ಗೇ ಎಂದೂ ಅಂಧಾಬಿಮಾನಕ್ಕೊಳಗಾಗಬಾರದು . ನಮ್ಮ ಭಾಷೆಯಲ್ಲಿ ಏನೂ ಇಲ್ಲ ಎಂದುಕೊಳ್ಳುವುದಕ್ಕಿಂತ ಎಲ್ಲಾ ಇದೆ ಎಂದುಕೊಳ್ಳುವುದು ಅಪಾಯ " ಎಂದು ಹೇಳಿದ ಕುವೆಂಪು ಅವರ ವಿವೇಚನೆಯ ಅಗತ್ಯ ಇಂದು ಎಲ್ಲರಲ್ಲೂ ಮೂಡಬೇಕಿದೆ.

ತಮ್ಮ ಬಾಲ್ಯ, ಯೌವ್ವನಕಾಲದ ಘಟನೆಗಳನ್ನು ತುಂಬ ಹಾಸ್ಯಮಯ ಶೈಲಿಯಲ್ಲಿ ನಿರೂಪಿಸುವ ತೇಜಸ್ವಿ , ನಂತರ ಆ ಕಾಲದ ಸಾಹಿತ್ಯಕ ವಿಪ್ಲವಗಳನ್ನು ವಿವರಿಸುವಾಗ ತುಂಬ ಗಂಭೀರವಾದ ಭಾಷಾಪ್ರಯೋಗಕ್ಕಿಳಿಯುತ್ತಾರೆ.

ಆ ಕಾಲಘಟ್ಟದಲ್ಲಿ ನಡೆದ ನವ್ಯ , ನವೋದಯಗಳ ನಡುವಿನ ತಿಕ್ಕಾಟದ ಪರಿಚಯವನ್ನೂ ಮಾಡಿಕೊಡುತ್ತಾರೆ ತೇಜಸ್ವಿ . ಆಗಿನ ಕಾಲದಲ್ಲಿ ಸಾಹಿತ್ಯಕವಲಯದಲ್ಲಿ ನಡೆದಿರಬಹುದಾದ ಜಾತೀಯ , ತಾತ್ವಿಕ , ಸಂಘರ್ಷಗಳ ಅರಿವಿರದ ಅದರ ಗೊಡವೆ ಬೇಕಿರದ ನಮ್ಮ ತಲೆಮಾರಿನ ನನ್ನಂತಹ ಸಾಮಾನ್ಯ ಓದುಗರಿಗೆ ಇದು ಸ್ವಲ್ಪ ಗೊಂದಲ ಎನಿಸುತ್ತದೆ.

ಈ ಕೃತಿ ವಿಶಿಷ್ಟವೆನಿಸುವುದು , ಇದು ಕುವೆಂಪು ವ್ಯಕ್ತಿತ್ವದ ಜೊತೆಜೊತೆಗೇ ತೇಜಸ್ವಿಯವರ ವ್ಯಕ್ತಿತ್ವದ ಪರಿಚಯವನ್ನೂ ಮಾಡಿಕೊಡುವ ಕಾರಣಕ್ಕಾಗಿ . ಅವರ ವೈವಿಧ್ಯಮಯ ಆಸಕ್ತಿಗಳು , ಸರಳ ಜೀವನ , ತಾನು ನಂಬಿದ ಆದರ್ಶಗಳನ್ನು ಅನುಸರಿಸುವ ಪರಿ , ಅದ್ಭುತ ಚಿಂತಕನಾದರೂ ಸಾಮಾನ್ಯರಿಗೂ ಅರ್ಥವಾಗುವಂತೆ ಬರೆಯಬಲ್ಲ ಸಾಮರ್ಥ್ಯ, ಈ ಕೃತಿಯ ಮುಖಾಂತರ ಹೆಚ್ಚು ಸ್ಪಷ್ಟವಾಗುತ್ತದೆ.
ಒಟ್ಟಿನಲ್ಲಿ ಸಾಹಿತ್ಯಾಸಕ್ತರು ಒಮ್ಮೆ ಓದಲೇಬೇಕಾದ ಕೃತಿಯಿದು.

18 comments:

 1. ಈ ಕೃತಿಯ ಬಗ್ಗೆ ಕೇಳಿರಲಿಲ್ಲ. ಅದರೊಳಗಿನ ಸಾರವನ್ನು ರಸವತ್ತಾಗಿ ಹೆಕ್ಕಿ ಕೊಟ್ಟಿದ್ದೀರಿ. ಪೂಚಂತೇ ಯವರ ಕೃತಿಗಳಲ್ಲಿ ವಿಶೇಷತೆಗಳು ಇದ್ದೇ ಇರುತ್ತವೆ. ಪರಿಚಯ ಮಾಡಿಕೊಟ್ಟ ನಿಮಗೆ ಧನ್ಯವಾದ. ಅಗತ್ಯವಾಗಿ ಓದುತ್ತೇನೆ.
  (ಅಂದಹಾಗೆ...ಇಂಗ್ಲಿಷ್ ’ಪೂತನಿಯಂಡೆ’?? :):))

  ReplyDelete
 2. ತೇಜಸ್ವಿ ಅವರ ಎಲ್ಲ ಕೃತಿಗಳೂ ನನಗೆ ಇಷ್ಟ... "ಅಣ್ಣನ ನೆನಪು" ಅವಲೋಕನ ಚನ್ನಾಗಿ ಮಾಡಿದ್ದೀರಿ.

  ReplyDelete
 3. ಧನ್ಯವಾದಗಳು ಸುಭ್ರಮಣ್ಯ ಅವರೆ ... ಪೂತನಿಯೆಂದೇ ಬರೆಯಬೇಕಾಗಿತ್ತು , ಪ್ರಿಂಟ್ ಮಿಸ್ಟೇಕ್ .... ಹ.ಹ.ಹ ನೀವಂದಿದ್ದೂ (ನಾನು ತಪ್ಪಿ ಬರೆದದ್ದೂ )ಒಂದರ್ಥದಲ್ಲಿ ಸರಿಯೇ ಬಿಡಿ.

  ಶರತ್ ಧನ್ಯವಾದಗಳು.

  ReplyDelete
 4. ತೇಜಸ್ವಿಗೆ ಅವರೆ ಸಾಟಿ! ನನ್ನ ಅವರ ಸಲುಗೆ ಬೆಳೆದದ್ದು ನಾನು ಪಿಯುಸಿ ಓದುತ್ತಿದ್ದಾಗ. ಆಗ ಬರಪೂರ ಪತ್ರ ಬರೆಯುವ ಉಮೇದಿ! ಯಾವುದೋ ಲೇಖನವೊಂದಕ್ಕೆ ಪ್ರತಿಕ್ರಿಯಿಸಿ ಬರೆದಪತ್ರಕ್ಕೆ ಉತ್ತರಿಸಿದ್ದರು! ಅದಾದ ಮೇಲೆ ಅವರ ಬರಹಗಳ ಮೂಲಕ ಆಪ್ತರಾದವರು. ತೊಂಭತ್ತರ ದಶಕದಲ್ಲಿ ನೀನಾಸಂ ಸಾಗರ ಎಲ್ ಬಿ ಕಾಲೇಜಿನಲ್ಲಿ ಅಯೋಜಿಸಿದ್ದ ಪೂಚಂತೇ ಅಧ್ಯಯನ ಶಿಬಿರ ಅವರ ಬರಹಗಳಿಗೆ ಹೊಸ ಪ್ರವೇಶ ಕೊಟ್ಟಿದ್ದಷ್ಟೇ ಅಲ್ಲ ಯೋಗೀಶ, ಕಿರಣ,ಶಶಿ ಸಂಪಳ್ಳಿ,ರಮೇಶ, ಶ್ರೀನೆವಾಸ, ಪ್ರಕಾಶ್ ಕುಗ್ವೆ ಮುಂತಾದ ಗೆಳೆಯರ ಗುಂಪನ್ನೇ ಸಂಪಾದಿಸಿಕೊಟ್ಟಿತು. ಅವರಲ್ಲಿ ಬಹುತೇಕರು ಇವತ್ತಿನ ಬರಹಗಾರರಾಗಿ ಬೆಳೆದಿದ್ದಾರೆ. ಇವತ್ತಿಗೂ ಸಂಪರ್ಕದಲ್ಲಿದ್ದಾರೆ!
  ೨೦೦೬ ರಲ್ಲಿ ತೀರ್ಥಹಳ್ಳಿಗೆ ಹೋಗುವ ಪ್ರಸಂಗ ಬಂದಿತ್ತು. ಹೀಗೆ ಕವಿಶೈಲಕ್ಕೂ ಹೋಗಿಬರೋಣವೆಂದು ಹೋದ್ರೆ ಅಕಸ್ಮಾತ್ ಪೂಚಂತೆ ಸಿಗಬೇಕೆ! ಸುಮಾರು ಒಂದುತಾಸಿಗೂ ಹೆಚ್ಚು ಕಾಲ ಹರಟೆಹೊಡೆದರು! ತಾವು ಸಿತಾರ್ ಕಲಿಯುವ ಸಾಹಸಮಾಡಿದ್ದನ್ನು ಪುನಃ ನೆನಪಿಸಿಕೊಂಡರು....ಜಾಗತೀಕರಣ.....ಹಾದಿತಪ್ಪುತ್ತಿರುವ ಕ್ರಷಿ....ಕೂಲಿಸಮಸ್ಯೆ.... ಉಭಯಕುಶಲೋಪರಿ ಸಾಂಪ್ರತ ಹೀಗೆ..... ಒಂದು ಅವಿಸ್ಮರಣೀಯ ಆಪ್ತ ಭೇಟಿಯದಾಗಿತ್ತು!
  ತೇಜಸ್ವಿ ತೀರಿಕೊಂಡಾಗ ಅವರ ಸಂಸ್ಕಾರಕ್ಕೆ ಇಡೀ ನಮ್ಮ ಕುಟುಂಬ ಕುಪ್ಪಳಿಗೆ ಹೋಗಿದ್ದೆವು. ಈಗ ನಮ್ಮ ಮನೆಯಲ್ಲಿ ಪುಟ್ಟ ತೇಜಸ್ವಿ ಬೆಳೆಯುತ್ತಿದ್ದಾನೆ ದಿನೇ ದಿನೇ!
  ಅಣ್ಣನ ನೆನಪಿನ ಮೂಲಕ ತೇಜಸ್ವಿಯನ್ನು ನೆನಪಿಸಿದ್ದಕ್ಕೆ ಥ್ಯಾಂಕ್ಸ್!

  ReplyDelete
 5. ಚೆನ್ನಾಗಿ ವಿವರಿಸಿದ್ದಿರ... "ಅಣ್ಣನ ನೆನಪು " ಕೃತಿಯನ್ನ,,, ಹೌದು,, ತೇಜಸ್ವಿ ರವರು ತುಂಬ ಚೆನ್ನಾಗಿ ಬರೆದಿದ್ದಾರೆ, ತಮ್ಮ ತಂದೆಯ ಬಗ್ಗೆ.

  Guru

  ReplyDelete
 6. 'ಅಣ್ಣನ ನೆನಪು' ಅತ್ಯಂತ ವಿಶಿಷ್ಟ ಹಾಗೂ ಮತ್ತೆ ಮತ್ತೆ ಓದಿಸಿಕೊಳ್ಳಬಲ್ಲ ಗಟ್ಟಿ ಕೃತಿ. ಅದು ಕನ್ನಡದ ಸಾಹಿತ್ಯ ಸಂದರ್ಭವನ್ನು, ಇತಿಹಾಸವನ್ನು ಸಾಹಿತ್ಯಕವಾಗಿ ದಾಖಲಿಸಿದ ಕೃತಿಯೂ ಹೌದು. ಕುವೆಂಪು ಅವರ ವ್ಯಕ್ತಿತ್ವ, ತೇಜಸ್ವಿ ರೂಪಗೊಂಡಿದ್ದು, ಅಂದಿನ ಸಾಮಾಜಿಕ ಸಂದರ್ಭ ಎಲ್ಲವೂ ಸಂಮಿಳಿತವಾಗಿದೆ. ನೀವು ಶ್ರೀಮತಿ ತಾರಿಣಿಯವರ 'ಮಗಳು ಕಂಡ ಕುವೆಂಪು' ಕೃತಿಯನ್ನು ಓದಿರದಿದ್ದರೆ, ಒಮ್ಮೆ ಓದಿ. ಆಗ ಕುವೆಂಪು ಎಂತಹಾ ಅದ್ಭುತ ತಂದೆ, ತಾತ ಹಾಗೂ ಮಾನವೀಯ ಗುಣವುಳ್ಳ ವ್ಯಕ್ತಿ ಎಂಬುದು ಅರಿವಾಗುತ್ತದೆ.

  ReplyDelete
 7. "ಪೂಚ೦ತೇ" -ಬದುಕು ಮತ್ತು ಬರಹದಲ್ಲಿ ವಿಶಿಷ್ಟತೆಯನ್ನು ಮೆರೆದವರು. ತ೦ದೆಯ ಪ್ರಭಾವಕ್ಕೊಳಗಾಗದೆ ಸ್ವತ೦ತ್ರವಾಗಿ ಬೆಳೆದವರು. "ಕರ್ವಾಲೋ" ನಾನು ಪಿಯೂ-ನಲ್ಲಿ ಪಠ್ಯವಾಗಿ ಮೊದಲಿಗೆ ಓದಿದ ಅವರ ಕೃತಿ. ಅಲ್ಲಿ೦ದ ಚಿದ೦ಬರ ರಹಸ್ಯ, ಕಿರುಗೂರಿನ ಗಯ್ಯಾಳಿಗಳು, ರುದ್ರಪ್ರಯಾಗದ ಭಯಾನಕ ನರಭಕ್ಷಕ, ಬೆಳ್ಳ೦ದೂರಿನ ನರಭಕ್ಷಕ, ಪೆದ್ದಚೆರುವಿನ ರಾಕ್ಷಸ, ಜಾಲಹಳ್ಳಿಯ ಕುರ್ಕ, ಮುನಿಶಾಮಿ ಮತ್ತು ಮಾಗಡಿ ಚಿರತೆ, ಅವರ ಲ೦ಕೇಶ ಪತ್ರಿಕೆ ಅ೦ಕಣ ಇತ್ಯಾದಿ ಇತ್ಯಾದಿ. ಅವರ ಅಭಿರುಚಿಗಳು ವೈವಿದ್ಧತೆಯಿ೦ದ ಕೂಡಿದವು. ಜಿಮ್.ಕಾರ್ಬೆಟ್ಟ್-ರ, ಕೆನೀತ್ ಅ೦ಡರ್ ಸನ್-ರ ಬೇಟೆ ಅನುಭವಗಳ ಅನುವಾದಗಳೂ ಅದ್ಭುತವಾಗಿವೆ.
  ಅ೦ತಹ ಪೂಚ೦ತೇ ರವರ ಅವರ ತ೦ದೆಯವರ ಬಗೆಗಿನ ಅವರ "ಅಣ್ಣನ ನೆನಪು" -ಕೃತಿಯ ಬಗ್ಗೆ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು.

  ReplyDelete
 8. ಸುಮ ಆ ಕೃತಿ ಬಗ್ಗೆ ಕೇಳಿದ್ದೆ ನಿಮ್ಮ ಅನಿಸಿಕೆ ನೋಡಿ ಓದುವ ಮನಸ್ಸಾಗಿದೆ. ಪ್ರೇರೆಪಿಸಿದ್ದಕ್ಕೆ ಧನ್ಯವಾದಗಳು...

  ReplyDelete
 9. 'ಸುಮ' ಅವ್ರೆ..,

  ಓದಬೇಕೆನಿಸುತ್ತಿದೆ.. ಸದ್ಯದಲ್ಲೇ ಓದಲು ಪ್ರಯತ್ನಿಸುತ್ತೇನೆ..

  Blog is Updated: http//manasinamane.blogspot.com

  ReplyDelete
 10. ತೇಜಸ್ವಿ ಯವರು ನನ್ನ ಮೆಚ್ಚಿನ ಲೇಖಕ. ತುಂಬಾ ಹಿಂದೆ ಓದಿದ ಕೃತಿಯನ್ನ ಮತ್ತೆ ನೆನಪಿಸಿದ್ದಕ್ಕೆ ಧನ್ಯವಾದಗಳು.

  ReplyDelete
 11. "ಅಣ್ಣನ ನೆನಪು"ಓದ್ಬೇಕಾಯ್ತು ... :)

  ReplyDelete
 12. ಸುಮಾ ಮೇಡಮ್,
  ತೇಜಸ್ವಿಯವರ ಅಣ್ಣನ ನೆನಪು ನಿಜಕ್ಕೂ ಅದ್ಬುತ ಪುಸ್ತಕ. ನನಗೆ ಬೇಸರವಾದಾಗಲೆಲ್ಲಾ ಕೈಗೆ ಸಿಗುವ ಪುಸ್ತಕಗಳಲ್ಲಿ ಅದು ಒಂದು. ಪುಸ್ತಕದ ಕೆಲವು ಸೂಕ್ಷ್ಮತೆಗಳನ್ನು ಚೆನ್ನಾಗಿ ಅವಲೋಕಿಸಿದ್ದಕ್ಕೆ ಧನ್ಯವಾದಗಳು

  ReplyDelete
 13. ಆಸಕ್ತಿಯನ್ನು ಹುಟ್ಟು ಹಾಕುವಂತಿದೆ ನಿಮ್ಮ ವಿಮರ್ಶಾತ್ಮಕ ಲೇಖನ. ಈ ಪುಸ್ತಕವನ್ನು ಇನ್ನೂ ಓದಿಲ್ಲ. ಆದಷ್ಟು ಬೇಗ ಓದುವೆ, ಧನ್ಯವಾದಗಳು.

  ReplyDelete
 14. ಸುಮ, ಇವನ್ನೆಲ್ಲ ಓದುವ ಸೌಭಾಗ್ಯ ಮತ್ತು ಸವಲತ್ತು ನಮಗಿಲ್ಲ ಮೇಲಾಗಿ ವಿದೇಶದಲ್ಲಿದ್ದು..ಬೇಕೆಂದರೂ ಕಷ್ಟಸಾಧ್ಯದ ವಿಷಯ..ನಿಮ್ಮ ಲೇಖನದ ಮೂಲಕ ಪೂಚತೇ ರವರ ಕೃತಿಗಳ ಬಗ್ಗೆ ತಿಳುವಂತಾಗುತ್ತದಲ್ಲ ಅದೇ ಸಮಾಧಾನ, ಧನ್ಯವಾದ.

  ReplyDelete
 15. ತೇಜಸ್ವಿಯವರ ಲೇಖನದಲ್ಲಿನ ಸಂಶೋಧನ ಮನೋಭಾವ ನಂಗೆ
  ಬಹಳ ಇಷ್ಟ
  ಬಹಳ ಕಡಿಮೆ ಲೇಖಕರಲ್ಲಿ ಅಂಥಹ ಕುತೂಹಲ ಇರುತ್ತದೆ
  ಒಳ್ಳೆಯ ಬರಹ ನಿಮ್ಮದು

  ReplyDelete
 16. ಕಮೆಂಟಿಸಿ ತೇಜಸ್ವಿಯವರ ಬರಹಗಳ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಎಲ್ಲರಿಗೂ ಧನ್ಯವಾದಗಳು.

  ReplyDelete
 17. Dear Suma
  You have provided valuable inputs wrt to the book. I have this book but yet to read it.
  Have you read 'magaLu kanDa kuvempu' by tarini Chidanand. adoo kUDa aaptavaagide.
  Happy to learn you r from Shimoga. My husband hails from teerthahalli.
  :-)
  take care
  malathi S

  ReplyDelete
 18. I want this book How can i get I tried online and shops also although I am not get please tell me how

  ReplyDelete