4 Mar 2010

ಅಜ್ಜನಿಗೊಂದು ಪತ್ರ

ಅಜ್ಜ ನಿಮ್ಮೊಂದಿಗೆ ಚಳಿಗಾಲದ ಎಳೆಬಿಸಿಲಿನಲ್ಲಿ ಅಂಗಳದಲ್ಲಿ ಕುಳಿತು ತೆಂಗಿನ ಗರಿಗಳಿಂದ ಚಾಪೆ ನೇಯುವುದನ್ನು ಮತ್ತೊಮ್ಮೆ ಹೇಳಿಸಿಕೊಳ್ಳುವಾಸೆ.

ನೀವು ಬೆಳೆಸಿದ ಹೂವಿನ ಗಿಡಗಳ ಹೂವನ್ನು ಗೆಳತಿಯರಿಗೇನೋ ಮಹದುಪಕಾರ ಮಾಡುತ್ತಿದ್ದೇನೆಂಬ ಭಾವದಲ್ಲಿ ಗರ್ವದಿಂದ ಕೊಡುತ್ತಿದ್ದೆನಲ್ಲ ಆ ದಿನಗಳು ನೆನಪಾಗುತ್ತಿವೆ.

ನೀವು ಬೆಳೆಸಿದ ಹಣ್ಣಿನ ಗಿಡಗಳ ಹಣ್ಣನ್ನು ನಿಮ್ಮ ಜೊತೆ ಹೋಗಿ ಕೊಯ್ದುಕೊಂಡು ಬರುವಾಗಿನ ಸಂತೋಷ ಇನ್ನೆಲ್ಲಿ?

ನಿವೇ ತಯಾರಿಸಿ ನುಡಿಸುತ್ತಿದ್ದ ಗರಟೇವಾದ್ಯ ತನ್ನ ತಂತಿಗಳನ್ನೆಲ್ಲ ಕಿತ್ತುಕೊಂಡು ಅನಾಥವಾಗಿ ಮೇಲುಮೆತ್ತಿನ ಮೂಲೆಯಲ್ಲೆಲ್ಲೋ ಅನಾಥವಾಗಿ ಬಿದ್ದಿದೆ.

ನನ್ನಲ್ಲಿ ಪುಸ್ತಕಪ್ರೀತಿ ಹುಟ್ಟಿಸಿದ ಮಹಡಿಯ ಮೇಲಿನ ಕೋಣೆಯ ಕಪಾಟಿನಲ್ಲಿದ್ದ ನಿಮ್ಮ ಪುಸ್ತಕಗಳು ಕಾಲನ ಹೊಡೆತದಿಂದ ಜೀರ್ಣವಾಗಿವೆ.

ನೀವು ಮನೆಯಲ್ಲಿಲ್ಲದಿದ್ದಾಗ ನೀವೆ ಮಾಡಿದ ಹುಲ್ಲಿನ ಹಾಸಿಗೆಯ ಮೇಲೆ ಮಲಗಿ ದುಖಃದಿಂದ ಕುಂಯ್ ಗುಡುತ್ತಿದ್ದ ಚೋಟು ಮಣ್ಣಲ್ಲಿ ಮಣ್ಣಾಗಿದ್ದಾನೆ.

ಪೇಟೆಗೆ ಹೋದ ಅಪ್ಪ ಚಿಕ್ಕಪ್ಪ , ನೆಂಟರ ಮನೆಗೆ ಹೋದ ಅಮ್ಮ ,ಚಿಕ್ಕಮ್ಮ ಇನ್ನೂ ಬರಲಿಲ್ಲವೆಂದು ಆತಂಕದಿಂದ ಶಥಪಥ ಹಾಕುತ್ತಿದ್ದ ನಿಮ್ಮ ಹೆಜ್ಜೆಯ ಬಿರುಸಿಲ್ಲದೆ ಮನೆಯ ಜಗುಲಿಯ ನೆಲ ತಣ್ಣಗಾಗಿದೆ.

ಸುಮ್ಮನೆ ಯಾವುದೊ ದೇವರ ಹೆಸರಿನಲ್ಲಿ ಭಿಕ್ಷೆ ಬೇಡುತ್ತ ಬಂದು ನಿಮ್ಮ ಹತ್ತಿರ ಉಗಿಸಿಕೊಂಡು ಹೊಗುತ್ತಿದ್ದವರು , ಈಗ ಮತ್ತೆ ಬರುತ್ತಿದ್ದಾರೆ .

ಎಲೆ ಅಡಿಕೆ ತಟ್ಟೆಯ ತಂಬಾಕು ನಿಮ್ಮ ದಾರಿ ಕಾದು ಕಾದು ಸಾಕಾಗಿ ಒಣಗಿದೆ.

ಎಸ್ ಎಸ್ ಎಲ್ ಸಿ ರಿಸಲ್ಟ್ ದಿನ ನನ್ನನ್ನು ಹತ್ತಿರ ಕರೆದು "ನೀನು ಒಂದುವೇಳೇ ಫೇಲ್ ಆದರೂ ಏನೂ ತೊಂದರೆಯಿಲ್ಲ ಪುಟ್ಟಿ ಮತ್ತೆ ಕಟ್ಟಿ ಪಾಸ್ ಮಾಡಬಹುದು , ಜೀವನವೇನೂ ಮುಳುಗಿಹೋಗುವುದಿಲ್ಲ " ಎಂದು ನೀವು ಹೇಳಿದ ಮಾತು ನನ್ನ ಕಿವಿಗಳಲ್ಲಿನ್ನೂ ಇದೆ , ಅದೇ ಮಾತುಗಳನ್ನು ನಾನು ನನ್ನ ಮಗಳಿಗೂ ಮುಂದೆ ಹೇಳುತ್ತೇನೆ.

ಬ್ರೈನ್ ಹೆಮರೇಜ್ ಅಂತಹ ದೊಡ್ಡ ವಿಪತ್ತಿನಿಂದ ನರಳಿದರೂ ಆಪರೇಷನ್ನಿಂದ ಚೇತರಿಸಿಕೊಂಡು ಜೀವನೋತ್ಸಾಹದಿಂದ ಮೊದಲಿನಂತಾಗಿ ನಂತರ ಹತ್ತು ವರ್ಷ ಬಾಳಿದ ನಿಮ್ಮ ಮನೋಬಲ ನಮ್ಮೆಲ್ಲರಿಗೂ ಮಾದರಿ.

ಗಂಡನಾಗುವವನ ಮನೆಗೆ ಮೊದಲಬಾರಿ ಹೊರಟಾಗ ಅಪರೂಪಕ್ಕೆ ಸೀರೆಯುಟ್ಟದ್ದರಿಂದಾಗುತ್ತಿದ್ದ ನನ್ನ ಮುಜುಗರವನ್ನು ಗುರುತಿಸಿ ಚೂಡಿದಾರವನ್ನೇ ಹಾಕಿಕೊಳ್ಳಬಹುದಿತ್ತಲ್ಲ ಪುಟ್ಟಿ ಎಂದು ನೀವೆಂದಿದ್ದು ನಾನೆಂದಿಗೂ ಮರೆಯಲಾರೆ.

ನಿಮ್ಮ ಜನರೇಷನ್ ಗೆ ಅಪರೂಪವೆನಿಸುವಷ್ಟು ಆಧುನಿಕ ಮನೋಭಾವ ನಿಮ್ಮಲ್ಲಿದ್ದುದ್ದಕ್ಕೆ ಸಾಕ್ಷಿ , ಟಿವಿಯಲ್ಲಿ ಬರುತ್ತಿದ್ದ ಶೋಲೆ ಸಿನೆಮಾವನ್ನು ರಾತ್ರಿ ಹನ್ನೆರಡರವರೆಗೂ ವೀಕ್ಷಿಸಿ , ಮೊದಲೇ ಮಲಗಿದ ನನಗೆ ಮರುದಿನ ಕಥೆ ಹೇಳಿದ್ದು .

ವಯಸ್ಸಾದಂತೆಲ್ಲ ಸ್ವಲ್ಪ ಹೆಚ್ಚೆ ಎನ್ನಬಹುದಾದಷ್ಟು ಮಾತನಾಡುತ್ತಿದ್ದ ನಿಮ್ಮಿಂದ ನಾವೆಲ್ಲ ತಪ್ಪಿಸಿಕೊಂಡು ಮರೆಯಾಗುತ್ತಿದ್ದಾಗ ತಪ್ಪಿಸಿಕೊಳ್ಳಲಾಗದೆ ನಿಮ್ಮೆದುರು ಉಳಿದು ನಿಮ್ಮ ಭೈರಿಗೆಗೆ ಕಿವಿಕೊಡುತ್ತಿದ್ದ ನನ್ನ ಗಂಡನಿಗೀಗ ಆ ಮನೆಯ ಚಾವಡಿ ರಂಗು ಕಳೆದುಕೊಂಡಿದೆಯೆನ್ನಿಸುತ್ತಿದೆಯಂತೆ.

ನಾನು ಕಾಲೇಜಿನಿಂದ ಬರುವುದು ತಡವಾದರೆ ಬಿರುಮಳೆಯಲ್ಲೂ ಕೊಡೆಹಿಡಿದು ಬಸ್ ನಿಲ್ದಾಣಕ್ಕೆ ಬರುತ್ತಿದ್ದುದನ್ನು ನೆನೆಸಿಕೊಳ್ಳುತ್ತಾ ಬೆಳಗಿನ ಜಾವದ ಬಸ್ಸಿಳಿದವಳ ಕಣ್ಣು ನೀವೆಲ್ಲಾದರೂ ಬಂದಿರಬಹುದೇನೊ ಎಂಬ ಸಣ್ಣ ಆಸೆಯಿಂದ ಸುತ್ತ ಹುಡುಕಿತ್ತು. ಆದರೆ ನಂತರ ನೆನಪಾಯಿತು ಅಜ್ಜ ನೀವಿಲ್ಲದೆ ಈಗ ಒಂದು ವರ್ಷ ಕಳೆದಿದೆ.

16 comments:

  1. ನೆನಪುಗಳ ಮಾತು ಮಧುರ....ಮಧುರವಾಗಿದೆ ನಿಮ್ಮ ನೆನಪಿನಂಗಳದ ಮಾತು.

    ReplyDelete
  2. ಸುಮಾ ಮೇಡಂ,
    ನನಗೆ ಅಜ್ಜ ಇಲ್ಲ.... ನಾನು ನೋಡಿಲ್ಲ ಅವರಿಗೆ..... ಅವರ ನೆನಪು ತುಂಬಾ ಆಯ್ತು..... ಧನ್ಯವಾದ..... ತುಂಬಾ ಭಾವಪೂರ್ಣ ಲೇಖನ.....

    ReplyDelete
  3. ಸುಮಾ ಅವರೆ ನನಗೆ ನನ್ನ ಬಾಲ್ಯದ ದಿನಗಳನ್ನು ನನ್ನ ಅಜ್ಜನನ್ನು ನೆನಪಿಸುವ೦ತೆ ಮಾಡಿತು ನಿಮ್ಮ ಲೇಖನ.

    ReplyDelete
  4. ಸುಮಾ ಅವ್ರೆ, ಅಮ್ಮ ಬಾಲ್ಯದಲ್ಲಿ ಅಜ್ಜ-ಅಜ್ಜಿ ತುಂಬಾ ಮುಖ್ಯ ಪಾತ್ರ ವಹಿಸುತ್ತಾರೆ. ಈ ವಿಧವಾಗಿ ನಿಮ್ಮ ಅಜ್ಜನನ್ನು ನೆನೆದುಕೊಳ್ಳುವ ಮೂಲಕ ಅವರಿಗೆ ಭಾವ ಪೂರ್ಣ ಶೃದ್ಧಾಂಜಲಿ ಅರ್ಪಿಸಿದ್ದೀರಾ.
    ತಮ್ಮ ಹೆಗಲು, ಸೊಂಟದ ಮೇಲೆ ನನ್ನನ್ನು ಬೆಳೆಸಿದ ನನ್ನಜ್ಜ ಅಜ್ಜಿಯ ನೆನಪಾಗಿ ಕಣ್ಣೇರು ಜಿನುಗಿತು.
    ನೆನಪುಗಳ ಮಾತು ಮಧುರ.....................

    ReplyDelete
  5. ಸುಮಾ,
    ಅಜ್ಜ, ಅಜ್ಜಿಯರ ನೆನಪು ತುಂಬ ಮಧುರವಾದದ್ದು. ನನಗೂ ಸಹ ನನ್ನ ಅಜ್ಜ, ಅಜ್ಜಿಯರನ್ನು ನಿಮ್ಮ ಲೇಖನ ನೆನಪಿಸಿತು.

    ReplyDelete
  6. ಸುಮಾ...

    ನಿಮ್ಮ ಲೇಖನ ಓದಿ..
    ನನ್ನಜ್ಜನ ನೆನಪಾಗಿ..
    ಕಣ್ಣಲ್ಲಿ ನೀರಾಡಿತು...

    ಅಜ್ಜನ ತೊಡೆಯೇರಿ ಕುಳಿತು..
    ಅಜ್ಜನ ಯಕ್ಷಗಾನದ ಭಾಗವತಿಗೆಯ ಹಾಡು ನೆನಪಾಯಿತು..

    ಬಹಳ ಸೊಗಸಾಗಿ ಹಾಡುತ್ತಿದ್ದರು ನನ್ನಜ್ಜ...!

    ಬಹಳ ಆಪ್ತವಾಗಿ ಬರೆದಿದ್ದೀರಿ...

    ReplyDelete
  7. ಮನೇಲಿ ಒಬ್ರು ಹಿರಿಯರು ಇದ್ರೆ ಎಷ್ಟು ಚಂದ... ನಿಮ್ಮ ಅಜ್ಜನ ನೆನಪು ನನ್ನನ್ನು ಮತ್ತೊಮ್ಮೆ ಬಾಲ್ಯಕ್ಕೆ ಎಳೆದು ಕರೆದುಕೊಂಡು ಹೋಗಿತ್ತು.. ಸುಂದರ ನೆನಪುಗಳನ್ನು ಮತ್ತೊಮ್ಮೆ ನೆನಪಿಸಿಕೊಳ್ಳುವಂತೆ ಮಾಡಿದ ನಿಮ್ಮ ಲೇಖನಕ್ಕೆ ಧನ್ಯವಾದಗಳು.

    ReplyDelete
  8. ಆಪ್ತತೆಯಬರಹ ಓದುತ್ತಾ ಕಣ್ಣುಗಳು ಆರ್ಧ್ರವಾದವು. ನನಗೆ ಬುದ್ಧಿ ಬರುವ ಮು೦ಚೆಯೆ ಕಾಲವಾದ ಅಜ್ಜ -ಅಜ್ಜಿಯರು ಇದ್ದಿದ್ದರೆ ಎ೦ಬ ಕಲ್ಪನೆಯಲ್ಲಿ ನಾನು ಅಪಾರವಾಗಿ ಕಳೆದುಕೊ೦ಡದ್ದೇನು ಎ೦ಬುದರ ಅರಿವಿನ ಜೊತೆ ಕಲ್ಪನೆಯಲ್ಲೂ ಮನ ವಿಷಣ್ಣವಾದ೦ತೆನಿಸಿತು.

    ReplyDelete
  9. ಸುಮಾ ನಿಮ್ಮನ್ನು ನೋಡಿ ಹೊಟ್ಟೆಕಿಚ್ಚಾಗ್ತಿದೆ...

    ReplyDelete
  10. ajjandire haage! avarige generation gap irolla. hecchu chennaagi mommakkalannu artha maadikondirtaare yaakendre avarige avara makkalu arthavaagiruvadilla adakke! avara makkalu arthavaagadiruvadakkoo kaaranavuntu.... praayada sookku... ahankaara....! adakke mommakkalige hattiradavaraaguttaare!

    ReplyDelete
  11. 'ಸುಮ' ಅವ್ರೆ..,

    ನಾನು ಅಜ್ಜನ ಜೊತೆಯ ಒಡನಾಟ ಅನುಭವಿಸಿಲ್ಲ.. ಆದರೂ ನಿಮ್ಮ ನೆನಪಿನ ಪುಟಗಳು ಅದನ್ನು ತುಸುವಾದರೂ ಅರ್ಥೈಸುತ್ತಿವೆ...
    ಅವರು ನೀಡಿದ ಮಾರ್ಗದರ್ಶನ ನೀಡಲು ಆ ಸ್ಥಾನವನ್ನು ಇಲ್ಲಿ ಹಲವರು ಅಲಂಕರಿಸಿದ್ದಾರೆ..

    ನನ್ನ 'ಮನಸಿನಮನೆ'ಗೊಮ್ಮೆ ಬನ್ನಿ:http:/manasinamane.blogspot.com

    ReplyDelete
  12. ಸುಮಾ ಮೇಡಮ್,

    ನನಗೆ ಅಜ್ಜ ಇರಲಿಲ್ಲ. ಆದರೂ ನಿಮ್ಮ ಅನುಭವವನ್ನು ಓದಿ ನನ್ನದೇ ಅಂದುಕೊಂಡಾಗ ಒಂಥರ ಖುಷಿ ಉಂಟಾಯಿತು. ಒಂದು ಭಾವನಾತ್ಮಕ ಲೇಖನವನ್ನು ಅರ್ಥಪೂರ್ಣವಾಗಿ ಬರೆದಿದ್ದೀರಿ...

    ReplyDelete
  13. ಸುಮಾ...ಹುಲಿಗಳ ಸಂತತಿ, ಜೀವನ...ಇರುವೆಗಳ ಶಿಸ್ತು...ಈಗ ಭಾವನೆಗಳ ಹುತ್ತ ಅಜ್ಜನ್ನ ಕೆದಕಿದಿರಿ...ಎಲ್ಲ ವಿಷಯಗಳ ನಿರೂಪಣೆ ...ಪ್ರಸ್ತಾವನೆ...ಬಹಳ ಸೊಗಸಾಗಿ ಮಾಡುತ್ತೀರಿ...ಅಭಿನಂದನೆಗಳು....

    ReplyDelete
  14. ಬರಹ,ಆಪ್ತವಾದ ಭಾವನೆಗಳ ತ೦ತುಗಳನ್ನು ಬೆಸೆದುಕೊ೦ಡು ಬ೦ದಿದೆ.
    ಬರಹಗಳು ಬರುತ್ತಿರಲಿ.

    ReplyDelete
  15. ಆರ್ಷೇಯ ಪದ್ಧತಿಯಂತೆ ನಿಮ್ಮೆಲ್ಲರ ಮನೆಗಳ ಮನಗಳ ಹತ್ತಿರ ಬಂದು ಯುಗಾದಿಯ, ಹೊಸವರ್ಷದ ಶುಭಾಶಯಗಳನ್ನು ಕೋರುತ್ತಿದ್ದೇನೆ, ಹೊಸವರ್ಷ ತಮಗೆಲ್ಲ ಸುಖ-ಸಮೃದ್ಧಿದಾಯಕವಾಗಿರಲಿ

    ReplyDelete