25 Mar 2010

ಸೂರ್ಯಾಸ್ತ




"ನನ್ನ ಅವಸಾನ ಯಾತ್ರೆ ಪ್ರಾರಂಭಾವಾಗಿದೆ . ಇದು ಪ್ರಕೃತಿ ಸಹಜ . ಎಂಬತ್ತು ವರ್ಷಗಳ ಸಂತೃಪ್ತ ಬದುಕನ್ನು ಕಂಡ ನಾನು ಇನ್ನು ಈ ಬದುಕಿನ ಬಗ್ಗೆ , ದೇಹದ ಬಗ್ಗೆ ವ್ಯಾಮೋಹ ಇಟ್ಟುಕೊಳ್ಳಬಾರದು . ನೀವೂ ಸಹ ಯಾರೂ ಇದಕ್ಕಾಗಿ ದುಖಿಃಸಬಾರದು . ಸ್ಥಿತಪ್ರಜ್ಞರಾಗಿ ನನಗೆ ವಿದಾಯ ಹೇಳಿ " - ನಾಲ್ಕು ತಿಂಗಳ ಹಿಂದೆ ಪ್ರಥಮ ಬಾರಿಗೆ ಹೃದಯದ ತೊಂದರೆಯಿಂದ ಆಸ್ಪತ್ರೆ ಸೇರಿದಾಗ ನನ್ನ ಮಾವನವರು ಹೇಳಿದ ಮಾತಿದು. ಹೇಳಿದಂತೆಯೆ ತನ್ನ ಅಂತಿಮ ಯಾತ್ರೆಯನ್ನು ಇಪ್ಪತ್ತು ದಿನಗಳ ಹಿಂದೆ ಮುಗಿಸಿಯೂ ಬಿಟ್ಟರು.


ಅಪಾರ ಶಿಷ್ಯರಿಗೆ ಪ್ರೀತಿಯ ಮೇಸ್ಟ್ರು , ಪತ್ನಿಗೆ ಆದರ್ಶ ಪತಿ , ಬೆಳೆದ ಮಕ್ಕಳಿಗೆ ಒಳ್ಳೆಯ ಗೆಳೆಯ ಎಲ್ಲವೂ ಆಗಿದ್ದ ಸೂರ್ಯನಾರಾಯಣ ಭಟ್ಟರು ಇನ್ನಿಲ್ಲ.


ಸೂರ್ಯನಾರಾಯಣ ಭಟ್ -ಹೊಸನಗರದ ನಿಟ್ಟೂರಿನ ಸುತ್ತಮುತ್ತಲೂ "ಮೇಸ್ಟ್ರು " ಎಂದೇ ಪರಿಚಿತರು. ಮೂಲತಃ ಸಾಗರದ ಭೀಮನಕೋಣೆಯವರಾದರೂ , ನಿಟ್ಟೂರಿನ ಸರ್ಕಾರಿ ಶಾಲೆಯ ಶಿಕ್ಷಕರಾಗಿ ಅಲ್ಲೆ ನೆಲೆ ನಿಂತವರು. ನನ್ನ ಮದುವೆ ಅವರ ಕೊನೇ ಮಗ ಸುಧಾಕಿರಣರೊಂದಿಗೆ ನಡೆಯುವ ವೇಳೆಗಾಗಲೆ ಅವರು ನಿವೃತ್ತರಾಗಿ ಹನ್ನೆರಡು ವರ್ಷಗಳಾಗಿದ್ದವು. ನನ್ನ ಅಜ್ಜ ಹಾಗೂ ಮಾವನವರು ಸಮಕಾಲೀನರಾಗಿದ್ದರು. ಹಾಗೆಂದೇ ನಾನು ಮಾವನವರಲ್ಲಿ ನನ್ನ ಅಜ್ಜನನ್ನೆ ಕಾಣುತ್ತಿದ್ದೆ.



ನಿಜಕ್ಕೂ ಅವರೊಬ್ಬ ಆದರ್ಶ ವ್ಯಕ್ತಿಯಾಗಿದ್ದರು . ಸಾರ್ವಜನಿಕ ಜೀವನ , ಸಾಂಸಾರಿಕ ಜೀವನ ಎರಡರಲ್ಲೂ ಯಶಸ್ವಿಯಾಗಿ ಬಾಳಿದರು. ಇಲ್ಲಿ ಅವರ ಕೆಲ ಗುಣವಿಶೇಷಗಳನ್ನು ನೆನಪು ಮಾಡಿಕೊಳ್ಳುವ ಯತ್ನ ಮಾಡಿದ್ದೇನೆ.


ಮಾನವೀಯತೆ ಅಂತಃಕರಣ : ಮನೆಯ ಸೊಸೆಯರನ್ನು ಅವರು ನೋಡಿಕೊಳ್ಳುತ್ತಿದ್ದ ರೀತಿಯಲ್ಲೇ ಅವರಿಗಿದ್ದ ಅಪಾರ ಅಂತಃಕರಣದ ಅರಿವಾಗುತ್ತಿತ್ತು . ಸೊಸೆಗೆ ಹೆಚ್ಚು ಕೆಲಸದ ಭಾರ ಬೀಳಬಾರದೆಂದು ಕೆಲಸದವರನ್ನಿಟ್ಟುಕೊಳ್ಳೀ ಎನ್ನುತ್ತಿದ್ದರು . ಆ ಕೆಲಸದವರನ್ನು ಮನೆಮಂದಿಯಂತೆಯೆ ನೋಡಿಕೊಳ್ಳುತ್ತಿದ್ದರು. ಅವರು ಮನೆಕಟ್ಟಿಸಿದಾಗ ಪ್ರತಿ ಕೋಣೆಯ ಬಾಗಿಲಿಗೆ ಮನೆಮಂದಿಯ ಹೆಸರಿನ ಅರ್ಥ ಬರುವಂತೆ ಕಾವ್ಯಾತ್ಮಕ ಹೆಸರುಗಳನ್ನು ಕೊಟ್ಟಿದ್ದರು. ಅದರಲ್ಲಿ ಒಂದು ಕೋಣೆಯ ಬಾಗಿಲಿಗೆ ಇಪ್ಪತ್ತು ವರ್ಷಗಳಿಂದ ಮನೆಕೆಲಸ ಮಾಡಿದ ಜೇನಿ ಎಂಬಾಕೆಯ ಹೆಸರನ್ನು "ಮಧುಮಾಲತಿ " ಎಂದು ಇಟ್ಟಿದ್ದರು. ಇದು ಒಂದು ಉದಾಹರಣೆಯಷ್ಟೇ.

ಪ್ರಾಣಿ ಪಕ್ಷಿ ಎಲ್ಲವನ್ನು ಪ್ರೀತಿಸುವ ಗುಣವಿತ್ತು. ಬೀದಿಯ ನಾಯಿ , ಬೆಕ್ಕುಗಳಿಗೆಂದೇ ಊಟದ ತಟ್ಟೆಯಲ್ಲಿ ಅನ್ನವನ್ನುಳಿಸಿ ಹಾಕುತ್ತಿದ್ದರು.


ಪ್ರೂತ್ಸಾಹಿಸುವ ಗುಣ: ಬೇರೆಯವರಲ್ಲಿರುವ ಚಿಕ್ಕ ಪ್ರತಿಭೆಯನ್ನೂ ಥಟ್ಟನೆ ಗುರುತಿಸಿ ಪ್ರೋತ್ಸಾಹಿಸುವ ಒಳ್ಳೆಯ ಮನಸ್ಸಿತ್ತು. ಮಕ್ಕಳು , ದೊಡ್ಡವರೆನ್ನದೆ ಎಲ್ಲರನ್ನೂ ಅವರು ಪ್ರೋತ್ಸಾಹಿಸುತ್ತಿದ್ದರು. ಅಜ್ಞಾತವಾಗಿದ್ದ "ದೇವತಾರಾಮಯ್ಯ " ಎಂಬ ಕವಿಯ "ಸತ್ಯಹರಿಶ್ಚಂದ್ರ" ಮಹಾಕಾವ್ಯವನ್ನು ಪ್ರಕಟಿಸಲು ತಮ್ಮ ಅರವತ್ತನೆಯ ವಯಸ್ಸಿನಲ್ಲಿ ಊರೂರು ಸುತ್ತಿದ್ದರು.




ಅತ್ಯುತ್ತಮ ಶಿಕ್ಷಕ: ಅವರೆಷ್ಟು ಪ್ರಭಾವಶಾಲಿ , ಅತ್ಯುತ್ತಮ ಶಿಕ್ಷಕರಾಗಿದ್ದರೆಂದು ನನಗೆ ತಿಳಿದದ್ದು ಎರಡು ವರ್ಷಗಳ ಹಿಂದೆ ನಿಟ್ಟೂರಿನ ಶಾಲೆಯ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ. ಅಂದು ಉಪಮುಖ್ಯಮಂತ್ರಿಗಳಾಗಿದ್ದ ಯಡ್ಯೂರಪ್ಪನವರಿಂದ ಮಾವನವರಿಗೆ ಸನ್ಮಾನ ಏರ್ಪಡಿಸಿತ್ತು ಅವರ ಶಿಷ್ಯವರ್ಗ. ಅವರು ಹೇಳುತ್ತಿದ್ದ ನೀತಿಪಾಠ , ರಾಮಾಯಣ ಮಹಾಭಾರತದ ಕಥೆಗಳು ಎಲ್ಲವನ್ನು ಮುವತ್ತು ವರ್ಷಗಳ ನಂತರವೂ ನೆನಪಿಸಿಕೊಂಡು ತುಂಬ ಬಾವುಕರಾಗಿ ಮಾತನಾಡುತ್ತಿದ್ದರು ಅವರ ಶಿಷ್ಯರು.

ನಿಟ್ಟೂರಿನ ಸುತ್ತಮುತ್ತಲಿನ ಆನೇಕ ಹಳ್ಳಿಗಳಲ್ಲಿ ಶಾಲೆಯನ್ನು ಪ್ರಾರಂಭಿಸುವಲ್ಲಿ ಅವರು ವಹಿಸಿದ ಪಾತ್ರ ದೊಡ್ಡದೆಂದು ಆ ಭಾಗದ ಜನತೆ ಕೊಂಡಾಡುತ್ತಾರೆ.



ಕಾಮನ್ ಸೆನ್ಸ್:ನಮ್ಮ ಮನೆಗೆ ಬಂದಾಗ ಪತ್ರಿಕೆಗಳಲ್ಲಿ ಬರುತ್ತಿದ್ದ ಪದಭಂದವನ್ನು ಬೇರೆ ಪೇಪರ್ ನಲ್ಲಿ ಬರೆದು ತುಂಬುತ್ತಿದ್ದರು . ಮನೆಯ ಉಳಿದ ಸದಸ್ಯರಿಗೆ ಮೊದಲ ಆದ್ಯತೆ ಕೊಡಬೇಕೆಂಬುದು ಅವರ ಅಭಿಪ್ರಾಯ!


ಅಪಾರವಾದ ಓದು ನೀಡಿದ್ದ ಜ್ಞಾನ:

ಅವರು ನಿವೃತ್ತಿಯ ನಂತರದ ಕಾಲವನ್ನು ಓದಿಗೆಂದೇ ಮೀಸಲಿಟ್ಟವರಂತೆ ಸಮಯವನ್ನು ಸ್ವಲ್ಪವೂ ವ್ಯರ್ಥ ಮಾಡದೆ ಸದಾ ಎನನ್ನಾದರೂ ಓದುತ್ತಿರುತ್ತಿದ್ದರು . ಇಂತಹ ಓದು ಅವರಿಗೆ ಅಪಾರವಾದ ಜ್ಞಾನ ನೀಡಿತ್ತು. ವಿಶಾಲ ದೃಷ್ಟಿಕೋನ, ಸಹೃದಯತೆ ಮೈಗೂಡಿತ್ತು.

ಮಾವನವರಿಗೆ ಯಾವುದೇ ವಿಧವಾದ ಮೂಡನಂಬಿಕೆಗಳಿರಲಿಲ್ಲ. ದಿನಾ ಶೃದ್ಧೆಯಿಂದ ದೇವರ ಪೂಜೆ ಮಾಡುತ್ತಿದ್ದರು . ಅದರೆ ದೇವರ ಹೆಸರಿನಲ್ಲಿ ನಡೆಯುವ ಸುಲಿಗೆಯನ್ನು, ಡಂಭಾಚರವನ್ನು ವಿರೋಧಿಸುತ್ತಿದ್ದರು.


ಅವರಿಗೆ ಇತ್ತಿಚಿನ ನಾಲ್ಕು ವರ್ಷಗಳಿಂದ ಸರಿಯಾಗಿ ಕಿವಿ ಕೇಳಿಸುತ್ತಿರಲಿಲ್ಲ. ಅದಕ್ಕಾಗಿ ಅವರೆಂದೂ ಬೇಸರಪಟ್ಟವರಲ್ಲ . ನಾವೆಲ್ಲ ನಮ್ಮ ಪಾಡಿಗೆ ಮಾತನಡಿಕೊಳ್ಳುತ್ತಿದ್ದರೂ ಬೇಸರಿಸದೆ ತನ್ನಷ್ಟಕ್ಕೆ ಓದುತ್ತಿರುತ್ತಿದ್ದರು . ಇದು ವಯೋಸಹಜವಾದದ್ದು ಅದರಲ್ಲಿ ಉಳಿದವರದೇನು ತಪ್ಪು? ಎಂಬ ಭಾವ ಅವರಲ್ಲಿರುತ್ತಿತ್ತು.


ಯಾವುದೇ ವಿಚಾರವನ್ನೂ ಅವರೊಂದಿಗೆ ನಾವು ಮುಕ್ತವಾಗಿ ಚರ್ಚಿಸಬಹುದಾಗಿತ್ತು.



ಹೊಸವಿಚಾರಗಳನ್ನು ಮುಕ್ತವಾಗಿ ಸ್ವಾಗತಿಸುವ ಮನೋಭಾವವಿತ್ತು. ಪಿಜ್ಝಾದಂತಹ ತಿಂಡಿ ಕೊಟ್ಟರೂ ಅಸ್ವಾದಿಸಿ , ಮಾಡಿದವರನ್ನು ಮುಕ್ತವಾಗಿ ಹೊಗಳುತ್ತಿದ್ದರು.


ಅವರು ಪೇಪರ್ ಓದುವುದನ್ನು ನೋಡಲು ತುಂಬ ಚೆನ್ನಾಗಿರುತ್ತಿತ್ತು. ಸುದ್ದಿಯನ್ನು ಓದುತ್ತಾ ಜೊತೆಗೆ ತನ್ನ ಕಮೆಂಟ್ ಹೇಳುತ್ತಾ ಅವರು ಓದುತ್ತಿರುವಾಗ ಮುಖದಲ್ಲಿ ನವರಸಗಳೂ ಮೂಡುತ್ತಿದ್ದವು . ನಡುವೆಯೆಲ್ಲಾದರೂ ಭ್ರಷ್ಟ ರಾಜಕಾರಣಿಯದೋ, ಮೋಸಗಾರ ಮಠಾಧಿಪತಿಯದೋ, ಭಯೋತ್ಪಾದಕರದೋ ಸುದ್ದಿ ಕಾಣಿಸಿದರೆ , ಮುಖದಲ್ಲಿ ರೌದ್ರಾವತಾರವೇ. ಇವರನ್ನೆಲ್ಲಾ ಕಡಿದು ಹಾಕಬೇಕು! ಎಂಬ ಉದ್ಗಾರ ಬರುತ್ತಿತ್ತು.{ನಾಟಕಗಳಲ್ಲಿ ಅದ್ಭುತವಾಗಿ ಅಭಿನಯಿಸುತ್ತಿದ್ದರಂತೆ }





ಆದರ್ಶ ದಾಂಪತ್ಯ: ಮಾವನವರಿಗೆ ಪತ್ನಿಯ ಮೇಲೆ ಆಪಾರ ಗೌರವ . ಅತ್ತೆಯವರಿಗೆ ಗಂಡನ ಮನದಲ್ಲೇನಿದೆಯೆಂದು ಅವರು ಹೇಳದೇ ಅರಿವಾಗುತ್ತಿತ್ತು. ಮಾವನವರಿಗೆ ನಾವ್ಯಾರು ಮಾತನಾಡಿದ್ದು ಕೇಳಿಸದಿದ್ದರೂ ಅತ್ತೆ ಮಾತನಾಡಿದ್ದು ಕೇಳಿಸುತ್ತಿತ್ತು. ಅವರಿಬ್ಬರನ್ನೂ ನೋಡಿದರೆ ನರಸಿಂಹಸ್ವಾಮಿಯವರ ಕವನಗಳಲ್ಲಿ ಬರುವ ಆದರ್ಶ ದಂಪತಿಗಳ ನೆನಪಾಗುತ್ತದೆಂದು ಎಲ್ಲರೂ ಹೇಳುತ್ತಿದ್ದರು .


ಸ್ವಾಭಿಮಾನ:ಬುದ್ಧಿ ತಿಳಿದಾಗಿನಿಂದ ತನ್ನ ಕೊನೆಯ ದಿನದವರೆಗೂ ಸ್ವಾಭಿಮಾನಿಯಾಗಿ ಬದುಕಿದರು ಮಾವ. ಎರಡು ವರ್ಷಗಳಿಂದಲೇ ತನ್ನ ಸಾವಿಗೆ ತಯಾರಿ ನಡೆಸುತ್ತಿದ್ದರೆಂದು ಈಗ ಅನ್ನಿಸುತ್ತಿದೆ. ತನ್ನ ಕ್ರಿಯಾಕರ್ಮಗಳಿಗೆ ಬೇಕಾಗುವಷ್ಟು ಹಣವನ್ನು ಕೂಡಿಟ್ಟಿದ್ದರು . ಎಲ್ಲಿಯವರೆಗೆ ಅವರ ತಯಾರಿ ಇತ್ತೆಂದರೆ , ಶವಕ್ಕೆ ಮುಚ್ಚುವ ಬಿಳಿ ಬಟ್ಟೆಯನ್ನು, ನಂತರ ಬೇಕಾಗುವ ಮಡಕೆಯನ್ನು , ಕರ್ಮ ಮಾಡುವಾಗ ಗಂಡುಮಕ್ಕಳಿಗೆ ಬೇಕಾಗುವ ಪಂಚೆ ,ಅಂಗವಸ್ತ್ರ ಮೊದಲಾದವುಗಳನ್ನು ವರ್ಷದ ಮೊದಲೇ ತಂದಿಟ್ಟಿದ್ದಲ್ಲದೇ ಹೆಂಡತಿ ಮಕ್ಕಳಿಗೆ ತಿಳಿಸಿದ್ದರು!!


ಹೇಳಲು ಹೊರಟರೆ ಇನ್ನೂ ಬೇಕದಷ್ಟಿದೆ ಆದರೆ ಮುಂದೆ ಬರೆಯಲಾಗುತ್ತಿಲ್ಲ.

ತಂದೆಯ ಬಗ್ಗೆ ಸುಧಾಕಿರಣ್ ಬರೆದ ಕವನ ಅವರ ಬ್ಲಾಗ್-http://nagandige.blogspot.com/ ನಲ್ಲಿದೆ.

20 comments:

  1. ಇಂತಹ ಅಪೂರ್ವ ಮಾಣಿಕ್ಯವನ್ನು ಹೊಂದಿದ್ದಂತಹ ನೀವೆ ಪುಣ್ಯವಂತರು. ಭೌತಿಕವಾಗಿ ದೂರವಾದರೂ, ನಾವು ಪ್ರೀತಿಸುವ ವ್ಯಕ್ತಿಗಳು ನಮ್ಮ ಜೊತೆಯಲ್ಲೇ ಮನದಲ್ಲೇ ಇರುತ್ತಾರೆ..ಅಲ್ಲವೇ ? ...

    ReplyDelete
  2. ಸುಮಾ...

    ಈ ಸಾವು ಅರ್ಥವಾಗದ ನಿಗೂಢ...

    ಸಾತ್ವಿಕ ಜೀವನ ನಡೆಸಿದ ಅವರಿಗೆ ತಮ್ಮ ಸಾವಿನ ಪೂರ್ವ ಸೂಚನೆ ಇತ್ತಾ ?

    ಅವರ ಮಾತುಗಳು...
    ಆದರ್ಶ ಜೀವನ
    ನಮ್ಮೊಂದಿಗೆ...
    ಯಾವಾಗಲೂ ಇರುತ್ತದೆ...

    ಅವರಿಗೆ ನಮ್ಮ ನಮನಗಳು...
    ದೇವರು ಅವರಿಗೆ ಚಿರ ಶಾಂತಿಯನ್ನು ಕರುಣಿಸಲಿ....

    ReplyDelete
  3. ನಮ್ಮ ಮನಸು ಬಯಸುವವರ ಜೊತೆ ಸದಾ ಇರ್ಬೇಕು ಅನ್ಸುತ್ತೆ...ಅನ್ಕೊಂಡಿದ್ದು ಎಲ್ಲ ಆದ್ರೆ ಜೀವನ ಜೀವನನೇ..?
    ಅವರಿಗೆ ನಮ್ಮ ನಮನಗಳು...
    ನಿಮ್ಮವ,
    ರಾಘು.

    ReplyDelete
  4. ತಮ್ಮ ಮಾವನವರಿಗೆ ಸಲ್ಲಿಸಿದ ನುಡಿನಮನ ಮನ ಕಲಕಿತು. ಇ೦ತಾ ಹಿರಿಜೀವದ ಬಗ್ಗೆ ತಿಳಿಸಿದ್ದು ನಮಗೊ೦ದು ಸ್ಫೂರ್ತಿ. ತಮಗೂ ತಮ್ಮ ಕುಟು೦ಬ ವರ್ಗಕ್ಕೂ ಅವರ ಅಗಲುವಿಕೆಯ ನೋವ ಕರಗಿಸುವ ಶಕ್ತಿ ಆ ದೇವರು ನೀಡಲಿ. ಅವರ್ ವಿಚಾರ ಆದರ್ಶ ಪಾಲನೆಗಳಿ೦ದ ಅವರನ್ನು ಬದುಕಿಸಿಡುವ ಕಾರ್ಯ ಇನ್ನು ನಿಮ್ಮದೆಲ್ಲರದು ಅಲ್ಲವೇ.

    ReplyDelete
  5. ಅಪರೂಪದ ವ್ಯಕ್ತಿತ್ವವನ್ನು ಯಥಾರ್ಥವಾಗಿ ಬರೆದಿದ್ದೀರಿ. ನಿಜಕ್ಕೂ ಅವರ ಜೀವನದ ಆದರ್ಶ ಹಾಗೂ ಸಿದ್ಧಾ೦ತಗಳನ್ನು ಹೇಳಲು ಶಬ್ದಗಳು ಕಡಿಮೆಯೆ..
    ಅವರಿಗೆ ತಕ್ಕ೦ತಹ ಪತ್ನಿ,ಮಕ್ಕಳು,ಸೊಸೆಯ೦ದಿರು,ಮೊಮ್ಮಕ್ಕಳು..
    ಅವರು ಸ೦ತ್ರುಪ್ತ ಜೀವನ ನಡೆಸಿ ಅದನ್ನೆ ಮಾರ್ಗದರ್ಶಿಸಿದ್ದರೆನ್ನುವುದು ಮನೆಮ೦ದಿಯನ್ನು ನೋಡಿಯೆ ತಿಳಿಯುತ್ತದೆ.

    ಸಾವಿನ ನ೦ತರವೂ ಅವರು ಎಲ್ಲರ ಮನದಲ್ಲಿ ನೆಲೆಸಿದ್ದಾರೆ.

    ReplyDelete
  6. ಅಂತಹ ಪುಣ್ಯಾತ್ಮರನ್ನು ಮಾವನವರ ರೂಪದಲ್ಲಿ ಪಡೆದ ನೀವೇ ಧನ್ಯರು. ಅವರ ಪ್ರತಿ ನಿಮಗಿರುವ ಅಪಾರ ಅಭಿಮಾನ, ಪ್ರೀತಿ, ವಿಶ್ವಾಸಗಳನ್ನು ಅಕ್ಷರರೂಪದಲ್ಲೆ ತುಂಬಾ ಹೃದಯಂಗಮವಾಗಿ ಕಾಣಿಸಿದ್ದೀರಿ.

    ಅವರ ಆತ್ಮಕ್ಕೆ ಶಾಂತಿಸಿಗಲೆಂದು ಪ್ರಾರ್ಥಿಸುವೆ.

    ReplyDelete
  7. ಸುಮಾ, ಎಲ್ಲರೂ ಒಂದಲ್ಲ ಒಂದು ದಿನ ಇಲ್ಲಿಂದ ಹೋಗುವುದೇ.. ಆದರೂ ನಿಮ್ಮ ಮಾವನವರಂತೆ ಜೀವನ ಸಾಗಿಸಿ, ಬದುಕನ್ನು ಮಾಗಿಸಿಕೊಂಡು, ಎಲ್ಲರಿಗೂ ಬೇಕಾದವರಾಗಿ, ಹೋದರೆ, ಅದಕ್ಕಿಂತ ಜೀವನದಲ್ಲಿ ಸಾರ್ಥಕತೆ ಇನ್ನೇನಿದೆ? ನನ್ನ ಪ್ರಾಣಾಮಗಳು ಅವರ ಚೇತನಕ್ಕೆ! ನಿಮಗೆಲ್ಲ ಅದರಲ್ಲೂ ನಿಮ್ಮ ಅತ್ತೆಯವರಿಗೆ, ಅವರ ಅಗಲಿಕೆಯ ದುಖವನ್ನು ಭರಿಸುವ ಶಕ್ತಿ ಬರಲೆಂಬ ಹಾರೈಕೆ ..

    ReplyDelete
  8. ಬಹುಷಃ ಅವರ ಸಾವಿನ ಬಗ್ಗೆ ಪುಣ್ಯ ಪುರುಷನಿಗೆ ಮೊದಲೇ ತಿಳಿದಿತ್ತೇನೋ? ಅವರ ಬಗ್ಗೆ ಕೇವಲ ಕೇಳಿ ತಿಳಿದಿದ್ದ ನಮಗೆ ಅವರ ಆದರ್ಶ, ವ್ಯಕ್ತಿತ್ವಗಳು ಮಾದರಿಯಾಗಲಿ.

    ನಾವು ಓದುವಾಗ ಮೇಷ್ಟ್ರ ಗುಣಗಾನವನ್ನು ನಮ್ಮ ಗುರುರ್ಗಳಿಂದ ಕೇಳುತ್ತಿದ್ದೆವು. ನಮ್ಮೂರಿನ ಹೆಮ್ಮೆಯ ಮೇಷ್ಟ್ರು ನಮ್ಮನಗಲಿರುವುದು ಅತೀ ದುಃಖದ ಸಂಗತಿ. ಅವ್ರ ಆದರ್ಶ ನಮ್ಮದಾಗಲಿ. ಆ ದೇವರು ನಿಮಗೆ ನೋವನ್ನು ಭರಿಸುವ ಶಕ್ತಿ ನೀಡಲಿ. ಇಂತಹ ಮೇರು ವಕ್ತಿ ಇನ್ನೊಮ್ಮೆ ಹುಟ್ಟಿಬರಲಿ.

    ReplyDelete
  9. ಸುಮಾ,
    ಸಾರ್ಥಕ ಬದುಕನ್ನು ನಡೆಸಿದವರು, ನಮ್ಮ ಮನದಲ್ಲಿಯೇ ಕೊನೆಯವರೆಗೂ ಉಳಿಯುವರು.

    ReplyDelete
  10. ಸಾರ್ಥಕ ಬದುಕಿನ ಬಗ್ಗೆ ಸಮಯೋಚಿತ ಬರಹ....

    ReplyDelete
  11. ಸುಮಾ ಮೇಡಂ ,
    ಆ ಜೀವ ಬೇಗ ಭೂಮಿಗೆ ಬರಲಿ....... ಇನ್ನೊಂದು ರೂಪದಲ್ಲಿ..... ಮನಕಲಕುವ ಲೇಖನ.............

    ReplyDelete
  12. This comment has been removed by the author.

    ReplyDelete
  13. ಸುಧಾಕಿರಣರ ಕವನಕ್ಕೆ ಕಥನ ನಿಮ್ಮಿಂದ ಸುಮಾ...ಚನ್ನಾಗಿದೆ ಜುಗಲ್ ಬಂದಿ...ಇದೇ ತೋರುತ್ತೆ ನಿಮ್ಮಿಬ್ಬರಿಗೂ ಅಗಲಿದ ಆತ್ಮ ಎಷ್ಟು ಪ್ರಿಯವಾಗಿತ್ತೆಂದು...science ತಿಳಿದವರಾದ ನೀವು..energy cannot be created nor destroyed ಅನ್ನೋದನ್ನ ನಂಬುತ್ತೀರಾದರೆ...ಅವರು ನಿಮ್ಮಲೇ ಇದ್ದಾರೆ..ನಿಮ್ಮ ಹೆಚ್ಚಿನ ಶಕ್ತಿಯಾಗಿ ಎನ್ನೋಣವೇ..

    ReplyDelete
  14. ಸುಮಾ ಅವರೆ ...
    ನಿಮ್ಮ ಬರಹವೇ ಹೇಳುತ್ತದೆ ನಿಮ್ಮ ಮಾವ ಎಂತಹ ಮೇರು ವ್ಯಕ್ತಿತ್ವ ಉಳ್ಳವರಾಗಿದ್ದರೆಂದು ,,
    ನಿಮ್ಮ ಅಕ್ಷರಾಂಜಲಿ ತೊರೆದ ಜೀವಕ್ಕೆ ಶ್ರದ್ದಾಂಜಲಿಯಾಗಿದೆ ..

    ReplyDelete
  15. This comment has been removed by the author.

    ReplyDelete
  16. ಬಹೂನಾಂ ಜನ್ಮನಾಮಂತೇ
    ಜ್ನಾನವಾನ್ಮಾಮ್ ಪ್ರಪದ್ಯತೇ ||

    ಇದು ಭಗವದ್ಗೀತೆಯ ಸಂದೇಶ, ನಿಮ್ಮ ಮಾವನವರನ್ನು ತೀರಾ ಅಂತಲ್ಲದಿದ್ದರೂ ಹತ್ತಿರದಿಂದ ನೋಡಿ ಮಾತನಾಡಿದವ ನಾನು; ಅದು ನನ್ನ ಸೌಭಾಗ್ಯ. ಬಹುತೇಕ ಶಿಕ್ಷಕರು ಒಂದೋ ತಾವು ತಮ್ಮ ಭಾವನೆಗಳನ್ನು ಸಾಹಿತ್ಯಪ್ರಾಕಾರಗಳಲ್ಲಿ ಹೊರಹೊಮ್ಮಿಸುತ್ತಾರೆ, ಅಥವಾ ತಮ್ಮ ಸಂಸಾರದಲ್ಲಿ ಮತ್ತು ಸುತ್ತ ಮುತ್ತಲ ಸಮಾಜದಲ್ಲಿ ಅನೇಕರನ್ನು ಒಳ್ಳೆಯ ಸಾಹಿತ್ಯ-ಕಾವ್ಯದ ಆರಾಧನೆಯ ಅಭಿರುಚಿಗೆ ಪ್ರೋತ್ಸಾಹಿಸುತ್ತಾರೆ, ಈ ನಿಟ್ಟಿನಲ್ಲಿ ನಿಮ್ಮ ಮಾವನವರೂ ಕೂಡ ಸ್ತುತ್ಯಾರ್ಹರೇ. ನನ್ನ ಒಂದೇ ಅನಿಸಿಕೆ ಅವರು ಇಹವ ತೊರೆವ ಮುನ್ನ ಒಮ್ಮೆ ನಮ್ಮಲ್ಲಿ ಭುಂಜಿಸಲೆಂಬ ಮಹದಾಸೆ ಇಟ್ಟುಕೊಂಡಿದ್ದ ನಮಗೆ ಅದನ್ನು ಪೂರೈಸಲು ಸಾಧ್ಯವಾಗಲಿಲ್ಲ, ಅದಕ್ಕೇ ಅನ್ನುವುದು ವ್ಯಕ್ತಿಗಳು ನಮ್ಮ ನಡುವೆ ಇರುವಾಗ ನಾಳೆ ಎಂದು ಮುಂದೂಡುವುದನ್ನು ಇಂದೇ ಮಾಡಿಬಿಡಬೇಕು ಎಂದು. ನಿಮ್ಮ ಸಮಸ್ತ ಕುಟುಂಬಿಕರಿಗೆ ನನ್ನ ಸಾಂತ್ವನ ತಿಳಿಸಿ, ನಿಮಗೆಲ್ಲ ದೇವರು ಅವರ ಅಗಲಿಕೆಯ ಅನಿವಾರ್ಯತೆಯನ್ನು ಸಹಿಸುವ ಶಕ್ತಿಯನ್ನು ಕೊಡಲಿ, ಮಡಿದ ಗುರು, ಪ್ರಿಯ ಶಿಕ್ಷಕ, ಪ್ರೀತಿಯ ಮಾವ, ನಲ್ಮೆಯ ಯಜಮಾನ ಎನಿಸಿಕೊಂಡ ಆ ಆತ್ಮ ನಮ್ಮೆಲ್ಲರಿಗಾಗಿ ಪುನಃ ಈ ಭೂರಮೆಯಲ್ಲಿ ಹುಟ್ಟಿ ಹಲವರಿಗೆ ಬೋಧಿಸಲಿ ಎಂದು ಹಾರೈಸುತ್ತೇನೆ.

    ReplyDelete
  17. Madam,

    1. Thanks for visiting my blog:
    www.badari-poems.blogspot.com

    2. Essay on Mestru is such an impressive that it took me to my school age. Now I remember Sharma and Karanth teacher.

    thanks for fruitful rewind.

    - Badarinath Palavalli
    cameraman
    Kasthuri Tv
    email: tentcinema@gmail.com

    ReplyDelete
  18. ಮೇಡಮ್,

    ನಿಮ್ಮ ಮಾವನವರ ಸಾರ್ಥಕ ಬದುಕಿನ ಬಗ್ಗೆ ಉತ್ತಮ ಬರಹದ ಮೂಲಕ ಅವರಿಗೆ ನಮನ ಸಲ್ಲಿಸಿದ್ದೀರಿ...

    ReplyDelete
  19. ಸುಂದರ ನುಡಿನಮನ..
    ಆಪ್ತವಾಗಿ ಬಂದಿದೆ.
    ನೀವು ಬರೆದಂತೆ ಮೇರು ವ್ಯಕ್ತಿತ್ವಹೊಂದಿದ್ದ ನಿಮ್ಮ ಮಾವನವರಿಗೆ ಗೌರವಪೂರ್ವಕ ನಮನಗಳು.

    ReplyDelete