27 May 2010

ಭೀಮೇಶ್ವರಕ್ಕೆ ಭೇಟಿ ನೀಡಿ



ಮಲೆನಾಡು ಅನೇಕ ಸುಂದರ ಪ್ರಾಕೃತಿಕ ತಾಣಗಳ ತವರೂರು.ಇಂತಹ ಮಲೆನಾಡಿನ ಮುಕುಟಮಣಿಯಾದ ಜೋಗ ಜಲಪಾತದ ಹತ್ತಿರದಲ್ಲೇ ಇರುವ ಭೀಮೇಶ್ವರ ದೇವಸ್ಥಾನ ಕೇವಲ ಭಕ್ತರಷ್ಟೇ ಅಲ್ಲ ಪ್ರಕೃತಿಪ್ರಿಯರನ್ನೂ ಆಕರ್ಷಿಸುವ ಸ್ಥಳ.
ನಮ್ಮ ಊರಿನಿಂದ ಕೇವಲ ೫೦ ಕಿ ಮಿ ದೂರದಲ್ಲಿದ್ದರರೂ ಹೋದರಾಯಿತೆಂಬ ಅಸಡ್ಡೆಯಿಂದ ಇದುವರೆಗೂ ಹೋಗಲಾಗಿರಲಿಲ್ಲ. ಇತ್ತೀಚೆಗೆ ಅಂತೂ ಸಮಯ ಕೂಡಿ ಬಂದು , ಹೊರಟೆವು. ಸಾಗರ ದಾಟಿ ತಾಳಗುಪ್ಪದ ವಿಶಾಲ ಗದ್ದೆ ಬಯಲನ್ನು (ಮುಂಗಾರುಮಳೆ ಖ್ಯಾತಿ) ಕಣ್ತುಂಬಿಕೊಂಡು ಕಾರ್ಗಲ್ ತಲುಪಿದೆವು. ಇಲ್ಲಿಂದ ಮುಂದಿನ ದಾರಿಯಲ್ಲಿ ಇಕ್ಕೆಲಗಳ್ನ್ನೂ ಆವರಿಸಿರುವ ದಟ್ಟ ಕಾಡು ಚೇತೋಹಾರಿಯಾದ ಅನುಭವ ನೀಡುತ್ತದೆ. ಕೋಗಾರ್ ಘಾಟಿಯ ಬಳಿ ಮುಖ್ಯರಸ್ತೆಯಿಂದ ಮಣ್ಣಿನ ರಸ್ತೆಗೆ ಹೊರಳಿ ನಮ್ಮ ವ್ಯಾನ್ ಸಾಗುತ್ತಿತ್ತು. ಕೆಟ್ಟ ತಿರುವುಗಳಿಂದ ಕೂಡಿದ ಆ ರಸ್ತೆಯಲ್ಲಿ ಜೀವಭಯವೆಂದರೇನೆಂಬುದರ ಅರಿವಾಯಿತು. ದಾರಿಯ ಮಧ್ಯದಲ್ಲೇ ಎದುರಾದ ಕಿರು ತೊರೆಯಲ್ಲಿ ಮನದಣಿಯೆ ಆಟವಾಡಿ ಮುಂದುವರೆದೆವು.
ಸುಮಾರು ಎರಡು ಕಿಮಿ ಸಾಗಿದ ವ್ಯಾನ್ ಒಂದು ದೊಡ್ಡ ಏರನ್ನು ಎದುಸಿರು ಬಿಡುತ್ತಾ ಹತ್ತಿ ಮುಂದೆ ಸಾಗಲಾರೆನೆಂದು ನಿಂತಿತು. ಅಲ್ಲೇ ಸನಿಹದಲ್ಲಿ ಮನೆಯೊಂದಿತ್ತು. ಅದು ಭೀಮೇಶ್ವರ ದೇವಸ್ಥಾನದ ಪೂಜೆ ಮಾಡುವ ಭಟ್ಟರ ಮನೆಯೆಂದು ತಿಳಿಯಿತು. ದಟ್ಟ ಕಾಡಿನ ನಡುವೆ ಒಂಟಿ ಮನೆಯಲ್ಲಿರುವ ಅವರ ಧೈರ್ಯಕ್ಕೆ ಮೆಚ್ಚಲೇಬೇಕು.(ಈಗ ಮಲೆನಾಡಿನಂತಹ ಮಲೆನಾಡಿನಲ್ಲೂ ಕ್ರೂರಪ್ರಾಣಿಗಳ ಭಯವಿಲ್ಲ. ಪ್ರಾಣಿಗಳಿದ್ದರಲ್ಲವೆ ಭಯಪಡಲು? ಆದರೆ ಕ್ರೂರ ಕಾಡುಗಳ್ಳರಭಯವಂತೂ ಇದೆ.) ಇದು ದೇವಾಲಯದ ದಾರಿ

ಇಲ್ಲಿಂದ ಮುಂದೆ ಕಾಲುಹಾದಿಯಲ್ಲಿ ಬೆಟ್ಟವೇರಬೇಕು. ಒಂದು ಕಡೆ ಕಲ್ಲುಬಂಡಗಳು , ಇನ್ನೊಂದು ಕಡೆ ಆಳವಾದ ಪ್ರಪಾತ , ಎರಡರ ಮಧ್ಯೆ ಸಾಗುವಾಗ ಉಸಿರು ಸಿಕ್ಕಿಹಾಕಿಕೊಂಡ ಆನುಭವವಾದರು ಸುತ್ತಲಿನ ಸುಂದರ ದೃಶ್ಯಗಳು ಮನಕ್ಕೆ ತಂಪೆರೆಯುತ್ತವೆ.
ಎತ್ತರದ ಕಲ್ಲುಬಂದೆಯ ಮೇಲಿರುವ ಶಿವದೇವಾಲಯವನ್ನೇರಲು ಕಲ್ಲಿನ ಮೆಟ್ಟಿಲುಗಳಿವೆ. ಚಿಕ್ಕ ದೇವಾಲಯವು ತುಂಬ ಹಳೆಯದಾಗಿದ್ದು ಶಿಥಿಲವಾಗಿದೆ. ಅಂತಹ ವಿಶೇಷವಾದ ವಾಸ್ತುಶಿಲ್ಪವೇನಿಲ್ಲ. ಈ ಎಲ್ಲ ಕೊರತೆಯನ್ನು ನಗಣ್ಯವಾಗಿಸುವುದು ಸುತ್ತಲಿನ ಸುಂದರ ಪರಿಸರ. ಪಕ್ಕದ ಹೆಬ್ಬಂಡೆಯ ಮೇಲಿನಿಂದ ಬೀಳುವ ಜಲಧಾರೆಯಂತೂ ಮನಸೂರೆಗೊಳ್ಳುತ್ತದೆ. ಮಳೆಗಾಲದಲ್ಲಿ ಸುಂದರ ಜಲಪಾತವನ್ನೇ ಸೃಷ್ಠಿಸುವ ಈ ಜಲಧಾರೆ ಎಂತಹ ಕಡು ಬೇಸಗೆಯಲ್ಲು ಬತ್ತುವುದಿಲ್ಲವೆಂದು ಸ್ಥಳೀಯರು ಹೇಳುತ್ತಾರೆ. ದೇವಾಲಯದ ಪ್ರಾಶಾಂತ ವಾತಾವರಣ, ಸ್ವಚ್ಚವಾದ ಗಾಳಿ , ಪಕ್ಷಿಗಳ ಕಲರವ ಧನ್ಯತೆಯನ್ನು ಮೂಡಿಸುತ್ತದೆ. ಪ್ರವಾಸಿಗರ ಸಂಖ್ಯೆ ಹೆಚ್ಚಿಲ್ಲವಾದ್ದರಿಂದ ಪರಿಸರವಿನ್ನೂ ಸ್ವಚ್ಛವಾಗಿದೆ.


ಆ ಸುಂದರ ಪ್ರಕೃತಿಯ ಮಡಿಲಲ್ಲಿ ಕೆಲ ಕಾಲ ಸಂತೋಷದಿಂದ ಕಳೆದು ನಾವು ಹೊರಟಾಗ ಸೂರ್ಯನೂ ತನ್ನ ದಿನದ ಕಾಯಕ ಮುಗಿಸಿ ಹೊರಡುವ ತಯಾರಿಯಲ್ಲಿದ್ದ.
ಮಲೆನಾಡಿನ ದಟ್ಟ ಅನುಭವವನ್ನು ಕಟ್ಟಿಕೊಡುವ ಭೀಮೇಶ್ವರಕ್ಕೊಮ್ಮೆ ಭೇಟಿ ನೀಡಿ ರಿಫ್ರೆಶ್ ಆಗಿ.

ಎಲ್ಲಿದೆ:
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಜೋಗದ ಸನಿಹದ ಕಾರ್ಗಲ್ - ಭಟ್ಕಳ ಮುಖ್ಯರಸ್ಥೆಯಲ್ಲಿ ಕಾರ್ಗಲ್ ನಿಂದ ೨೮ ಕಿಮಿ ಸಾಗಿದರೆ ಕೋಗಾರ್ ಎಂಬ ಪುಟ್ಟ ಊರು ಸಿಗುತ್ತದೆ . ಇಲ್ಲಿಂದ ಕೋಗಾರ್ ಘಾಟಿ ಪ್ರಾರಂಭವಾಗುತ್ತದೆ. ಇಲ್ಲಿಂದ ೩ ಕಿಮಿ ಸಾಗಿದರೆ ಬಲಕ್ಕೆ ಮಣ್ಣಿನ ರಸ್ತೆಯೊಂದು ಸಿಗುತ್ತದೆ ಅದರಲ್ಲಿ ಎರಡು ಕಿಮಿ ಸಾಗಿದರೆ ಭೀಮೇಶ್ವರ ಬೆಟ್ಟದ ಬುಡ . ಇಲ್ಲಿಂದ ಕಾಲ್ನೆಡಿಗೆಯಲ್ಲಿ ಒಂದು ಕಿಮೀ ಹೋದರೆ ದೇವಸ್ಥಾನ ಸಿಗುತ್ತದೆ.

ಸ್ಥಳಪುರಾಣ:
ಇಲ್ಲಿರುವ ಚಿಕ್ಕ ಕಲ್ಲಿನ ದೇವಾಲಯವಿದೆ. ಮಹಾಭಾರತದ ಪಾಂಡವರು ವನವಾಸದಲ್ಲಿದ್ದಾಗ ಇಲ್ಲಿ ಕೆಲಕಾಲ ವಾಸವಿದ್ದರೆಂದೂ , ಇಲ್ಲಿರುವ ಶಿವಲಿಂಗವನ್ನು ಭೀಮನು ಸ್ಥಾಪಿಸಿದ್ದರಿಂದ ಭೀಮೇಶ್ವರವೆಂಬ ಹೆಸರಾಯಿತೆಂದೂ ಹೇಳುತ್ತಾರೆ.

ಮುಖ್ಯ ಉತ್ಸವ:
ಪ್ರತಿ ವರ್ಷ ಶಿವರಾತ್ರಿಯಂದು ಇಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಸುತ್ತಲಿನ ನೂರಾರು ಭಕ್ತರು ಆ ಪೂಜೆಯಲ್ಲಿ ಪಾಲ್ಗೊಳ್ಳುತ್ತಾರ‍ೆ.

15 comments:

  1. ಸುದಾ ಮೇಡಂ,
    ಹೌದು, ನೀವು ಹೇಳಿದಂತೆ ಭೀಮೇಶ್ವರ ಬೆಟ್ಟ ಒಂದು ಸುಂದರ ಪ್ರಕೃತಿ ಸೌಂದರ್ಯದ ಮಡಿಲು. ಜೋಗದಲ್ಲಿ KPC Ltd ನಲ್ಲಿರುವ ನಮ್ಮ ಚಿಕ್ಕಮ್ಮ, ಚಿಕ್ಕಪ್ಪನವರೊಂದಿಗೆ ನಾವೆಲ್ಲಾ ಹೋಗಿದ್ದೆವು. ನೋಡಲೇಬೇಕಾದ ಸುಂದರವಾದ ಪ್ರದೇಶ.
    ಅದರಂತೆಯೇ ಕುಂದಾದ್ರಿಯೂ ಒಂದು ಉತ್ತಮ ಪ್ರಕೃತಿ ಸೌಂದರ್ಯದ ಗಣಿ. ಒಮ್ಮೆ ಅಲ್ಲಿಗೂ ಹೋಗಿ ಬನ್ನಿ. ಅಲ್ಲಿಯ ಬಗ್ಗೆ ನನ್ನ ಬ್ಲಾಗಲ್ಲಿ ವಿವರವಾಗಿ ಬರೆದಿದ್ದೇನೆ. ನೋಡಿ.

    ReplyDelete
  2. uttama mahithi hagu sundara chitragalu.

    ReplyDelete
  3. naanu ee bettakke hogilla, aadre sigandoorige hogiddene........ idara hattiravaa idu........ sundara chitragalu madam,...........
    nanna blog update yaarigoo hoguttilla........ hosadaagi barediddene...... banni......

    ReplyDelete
  4. Oh!. very good place. I will visit.

    ReplyDelete
  5. ಸುಮಕ್ಕ,
    ನಂಗೆ ಈ ಜಾಗ ಸಕತ್ ಇಷ್ಟ...
    ಇದು ನನ್ನ ಅಜ್ಜನ್ ಮನೆ ಇಂದ ಸುಮಾರು 15 km ದೂರದಲ್ಲಿ ಇದ್ದು...
    ಎರಡು ವರ್ಷದ ಹಿಂದೆ ಹೋಗಿದಿದ್ದಿ..ತುಂಬಾ ಚನಾಗಿದ್ದು..
    ಮತ್ತೆ ನೆನಪು ಆತು.... :-)

    ReplyDelete
  6. ಮೇಡಮ್,

    ಫೋಟೊಗಳ ಜೊತೆಗೆ ಸೊಗಸಾದ ಮಾಹಿತಿಯನ್ನು ನೀಡಿದ್ದೀರಿ. ನಿಮ್ಮ ಪ್ರವಾಸದ ಬರಹವೂ ಚೆನ್ನಾಗಿದೆ. ಮುಂದಿನ ಮಳೆಗಾಲದಲ್ಲಿ mansoon photography ಗೆ ಮಲೆನಾಡ ಕಡೆ ಹೋಗುವ ವಿಚಾರವಿದೆ. ನೀವು ಅದಕ್ಕೆ ತಕ್ಕಂತ ಮತ್ತಷ್ಟು ನೀಡಿದ್ದಕ್ಕೆ ಧನ್ಯವಾದಗಳು.

    ReplyDelete
  7. ಉತ್ತಮ ನೈಸರ್ಗಿಕ ತಾಣದ ಬಗೆಗೆ ಉತ್ತಮ ಮಾಹಿತಿ ನೀಡಿದ್ದೀರಿ. ಧನ್ಯವಾದಗಳು.

    ReplyDelete
  8. ಮಲೆನಾಡು ಅಂತ ಹೇಳಿದ ಮೇಲೆ ಅಲ್ಲಿನ ಪ್ರಾಕೃತಿಕ ಸೌಂದರ್ಯ ಹೇಗಿದೆ ಅಂತ ಕೇಳಲೇ ಬೇಕಿಲ್ಲ..ಆ ಹಸಿರು, ಆ ಬೆಟ್ಟ, ಆ ನದಿ, ಆ ಕಲರವ ಎಲ್ಲದು ಅದ್ಭುತ...ಒಂದು ಒಳ್ಳೆಯ ಸ್ಥಳ ಗೊತ್ತಾಯಿತು.
    ನಿಮ್ಮವ,
    ರಾಘು.

    ReplyDelete
  9. ಸುಮಾ, ಚನಾಗಿದೆ ಮಾಹಿತಿ, ಕಡಿಮೆ ಪ್ರಚಾರ ಇರೋ ಹಲವು ರಮಣೀಯ ಪ್ರದೇಶಗಳನ್ನ ಪರಿಚಯಿಸೋದೂ ಒಮ್ದು ಉತ್ತಮ ಕೆಲಸವೇ...ಅದರಲ್ಲೂ ಮಲೆನಾಡಿನ ಮಡಿಲಲ್ಲಿ ಇವಕ್ಕೆ ಬರ ಇರೊಲ್ಲ ಅನ್ನೋದು ನಿಮ್ಮ ಲೇಖ್ನದಿಂದ ಗೊತ್ತಾಗುತ್ತೆ.

    ReplyDelete
  10. ಸುಮ ಅವರೆ ಪುಣೆಯ ಹತ್ತಿರವೂ ಒಂದು ಭೀಮೇಶ್ವರ ಇದೆಯಂತೆ ಭೀಮಾನದಿ ಅಲ್ಲಿ ಉಗಮವಾಗುತ್ತದೆ.
    ನಮ್ಮ ಕರ್ನಾಟಕದಲ್ಲೂ ಅಷ್ಟೇ ಚೆಲುವಿನ ತಾಣ ಇದೆ ಪರಿಚಯಿಸಿದ್ದಕ್ಕೆ ಧನ್ಯೋಸ್ಮಿ...

    ReplyDelete
  11. ನಾನು ಹೋಗಲೇಬೇಕು
    ತುಂಬಾ ಒಳ್ಳೆಯ ವಿವರಣೆ

    ReplyDelete
  12. ಓಹ್. ನನ್ನ to b visited ಪಟ್ಟಿಗೆ ಮತ್ತೊಂದು ಸೇರ್ಪಡೆ !

    ReplyDelete
  13. ಸುಮಾ ನಿನ್ನ ಬರಹ ಓದಿದ ಮೇಲೆ ಭೀಮೆಶ್ವರಕ್ಕೆ ಹೊಗಬೆಕನ್ನೊ ಆಸೆ ಆಗ್ತಾ ಇದ್ದು!

    ReplyDelete
  14. dhanyavaadagalu suma kutalle bayaluseemeya nanage hasirina ruchi hattisiddakke rekha

    ReplyDelete