18 May 2010

ಮಂಗಣ್ಣ ಎಂಬ ಅದ್ಭುತ !

"ಈ ಮಂಗಗಳ ಕಾಟ ತಡಿಯೋಕಾಗಲ್ಲ . ನನ್ನ ತರಕಾರಿ ಗಿಡದ ಚಿಗುರು ಕೂಡ ಬಿಡದೆ ತಿಂದು ಬಿಡುತ್ತವೆ . ಅವುಗಳಿಗೆಷ್ಟು ಬುದ್ದಿ ನೋಡು , ಮಧ್ಯಾನ್ಹ ನಾನು ಮಲಗುವ ವೇಳೆ ಅವಕ್ಕೆ ಚೆನ್ನಾಗಿ ಗೊತ್ತಾಗುತ್ತದೆ . ಸರಿಯಾಗಿ ಅದೇ ಸಮಯಕ್ಕೆ ಬಂದು ಲೂಟಿ ಮಾಡುತ್ತವೆ ." ಅಮ್ಮ , ಎದುರಿನ ತೆಂಗಿನ ಮರದಲ್ಲಿ ಕುಳಿತು ತೆಂಗಿನ ಮಿಳ್ಳೆಗಳನ್ನು ತಿನ್ನುತ್ತಿದ್ದ ಮಂಗಗಳನ್ನು ನೋಡುತ್ತ ಹೇಳುತ್ತಿದ್ದರು .
"ಹೋಗಲಿ ಬಿಡಮ್ಮ ಪಾಪ ಅವಕ್ಕೆ ಕಾಡಲ್ಲಿ ತಿನ್ನಲೇನೂ ಸಿಗದೆ ಇಲ್ಲಿ ಬರುತ್ತವೆ . ಅವಕ್ಕೆ ಆಹಾರ ಕೊಟ್ಟ ಪುಣ್ಯ ಸಿಗುತ್ತೆ ಬಿಡು " ಎಂದ ನನ್ನನ್ನು ದುರುಗುಟ್ಟಿ ನೋಡುತ್ತಾ " ಹೋಗಿ ಹೋಗಿ ನಿನ್ನ ಹತ್ತಿರ ಹೇಳುತ್ತಿದ್ದೇನಲ್ಲ " ಎಂದು ಹೇಳಿ ಅವುಗಳನ್ನೋಡಿಸಲು ಹೊರಟರು. ನಾನೂ ಹಿಂಬಾಲಿಸಿದೆ .ಕ್ಯಾಮರವನ್ನು ಗಾಬರಿಯಿಂದ ನೋಡುತ್ತಿರುವ ಮಂಗಣ್ಣ


ಒಂದು ದೊಡ್ಡ ಮಂಗ ಮತ್ತೆ ನಾಲ್ಕು ಚಿಕ್ಕ ಮಂಗಗಳು ತಮ್ಮದೇ ಸಾಮ್ರಾಜ್ಯವೆಂಬಂತೆ ಕಾಯಿ ಚಿಗುರುಗಳನ್ನು ತಮ್ಮ ಬಾಯೊಳಗೆ ತುರುಕುತ್ತ ಅತ್ತಿಂದಿತ್ತ ಹಾರುತ್ತಿದ್ದವು . ನಮ್ಮನ್ನು ನೋಡುತ್ತಿದ್ದಂತೆ , ಎಲ್ಲವೂ ತಮ್ಮ ಹಲ್ಲು ಕಿರಿದು ಬಂದುಬಿಡುತ್ತೇನೆ ನೋಡು ಎಂಬಂತೆ ಅಭಿನಯಿಸುತ್ತಾ ಹೆದರಿಸಿದವು .
ನೋಡು ಇವಕ್ಕೆ ಸ್ವಲ್ಪವೂ ಭಯವಿಲ್ಲ ನಮಗೇ ಹೆದರಿಸುತ್ತವೆ , ಅಮ್ಮ ಕೋಲು ತೋರಿಸುತ್ತಾ ಹೆದರಿಸಲು ಪ್ರಯತ್ನಿಸಿದರೂ ಅವು ನಿರಾತಂಕವಾಗಿ ತಮ್ಮ ಕಾರ್ಯ ಮುಂದುವರೆಸಿದ್ದವು.


ದವಡೆಯಲ್ಲಿ ಅಹಾರವನ್ನು ತುಂಬುತ್ತಿರುವ ಮರಿಮಂಗ


ನಾನು ಕ್ಯಾಮರ ಹಿಡಿದು ಬಂದೆ . ನನ್ನ ಕೈಯಲ್ಲಿ ಕ್ಯಾಮರ ಕಂಡ ಕ್ಷಣ ಎಲ್ಲವೂ ವಿಧವಿಧ ಶಬ್ದ ಮಾಡುತ್ತಾ ಮರಗಳ ನಡುವೆ ಮರೆಯಾದವು . ಕ್ಯಾಮರವನ್ನು ಅವು ಕೋವಿಯೆಂದು ಭಾವಿಸಿದವೇನೋ . ನನಗೆ ತಕ್ಷಣ ವರ್ಷದ ಹಿಂದೆ ಬನ್ನೇರುಘಟ್ಟದಲ್ಲಿ ನೋಡಿದ ಮಂಗಗಳ ನೆನಪಾಯಿತು . ರಾಜಕಾರಣಿಗಳಂತೆ , ಸಿನೆಮಾ ತಾರೆಯರಂತೆ ಅವು ಫೋಟೊಗೆ ಫೋಸ್ ಕೊಟ್ಟಿದ್ದವು. ದಿನಾ ಬರುವ ಪ್ರವಾಸಿಗರ ಕೈನಲ್ಲಿರುವ ಕ್ಯಾಮರ ನಿರಪಾಯಕಾರಿಯೆಂದು ಅವಕ್ಕೆ ಗೊತ್ತು . ಆದರೆ ಈ ಹಳ್ಳಿಯ ಮಂಗಗಳಿಗೆ ಇದೇನೋ ವಿಚಿತ್ರವೆನ್ನಿಸಿ ಓಡಿದವು.
"ನಿನ್ನ ಕ್ಯಾಮರ ಇಲ್ಲೇ ಇಟ್ಟು ಹೋಗು ನನಗೆ ಮಂಗವನ್ನೋಡಿಸಲು ಸಹಾಯವಾಗುತ್ತೆ! " ಅಮ್ಮ ನಗುತ್ತಾ ಹೇಳಿದರು.
ಇಟ್ಟರೂ ಉಪಯೋಗವಿಲ್ಲಮ್ಮ , ಎರಡೇ ದಿನದಲ್ಲಿ ಅವುಗಳಿಗೆ ಇದು ಅಪಾಯಕಾರಿಯಲ್ಲವೆಂದು ತಿಳಿದುಬಿಡುತ್ತದೆ . ನಾನು ಹೇಳಿದಾಗ ನಿಜ ಮಾರಾಯ್ತಿ ನಮಗಿಂತ ಬುಧ್ದಿಯಿದೆ ಅವಕ್ಕೆ ಎನ್ನುತ್ತಾ ಒಳಹೊರಟರು.


ಯಾರೆಷ್ಟಾದ್ರೂ ಫೋಟೊ ತೆಗೀರಿ ಎನ್ನುತ್ತಿರುವ ಬನ್ನೇರುಘಟ್ಟದ ಮಂಗ

balenced diet!!

ಮಾನವನ ಪೂರ್ವಜರೆಂದೇ ಕರೆಸಿಕೊಳ್ಳುವ ಮಂಗಗಳ ಗುಣ ಲಕ್ಷಣಗಳು ಮಾನವರನ್ನೇ ಹೋಲುತ್ತವೆ .

ದೈಹಿಕವಾಗಿ ಕೈ ಕಾಲು ಬೆರಳುಗಳ ರಚನೆ ಅವುಗಳ ಮರದಲ್ಲಿ ವಾಸಿಸುವ ಜೀವನಶೈಲಿಗನುಗುಣವಾಗಿದೆ . ಕೊಂಬೆಯನ್ನು ಭದ್ರವಾಗಿ ಹಿಡಿಯಲು ಹೆಬ್ಬೆರಳು ಮತ್ತು ಅದಕ್ಕೆ ಅಭಿಮುಖವಾಗಿರುವ ಉಳಿದ ನಾಲ್ಕು ಬೆರಳುಗಳು ತುಂಬ ಉಪಯುಕ್ತವಾಗಿವೆ. ಬಾಲ ದೇಹದ ಬ್ಯಾಲೆನ್ಸ್ ಕಾಪಾಡುತ್ತದೆ.

ಬಾಯಿಯ ಒಳಗೆ ಹೆಚ್ಚಿನ ಸ್ಥಳವಿದೆ . ಶತ್ರುಗಳ ಭಯದಲ್ಲಿ ಬೇಗ ಬೇಗ ಅಹಾರ ತಿನ್ನುವಾಗ ದವಡೆಯ ಬಳಿಯ ಹೆಚ್ಚುವರಿ ಜಾಗದಲ್ಲಿ ಅಹಾರನ್ನು ತುಂಬಿಕೊಂಡು ನಂತರ ವಿರಾಮದಲ್ಲಿ ಅದನ್ನು ನಿಧಾನವಾಗಿ ಜಗಿದು ನುಂಗುತ್ತದೆ.

ಮಂಗಗಳು ಗುಂಪಾಗಿ ವಾಸಿಸುವ ಸಂಘಜೀವಿಗಳು . ಒಂದು ಗುಂಪು ಅದಕ್ಕೊಬ್ಬ ದೊಡ್ಡ ಗಂಡು ಮಂಗ ನಾಯಕ , ಆ ಗುಂಪಿನದೇ ಪ್ರತ್ಯೇಕ ಸಾಮ್ರಾಜ್ಯ ಎಲ್ಲವೂ ಇರುತ್ತದೆ . ತನ್ನ ಸಾಮ್ರಾಜ್ಯದಲ್ಲಿ ಬೇರೆ ಗುಂಪು ಪ್ರವೇಶಿಸಿದರೆ ಅವುಗಳ ನಡುವೆ ಘನಘೋರ ಯುಧ್ಧ ನಡೆಯುತ್ತದೆ . ಅದಲ್ಲದೆ ಎರಡು ಗಂಡುಗಳ ನಡುವೆ ಹೆಣ್ಣಿಗಾಗಿಯೂ ಯುಧ್ದ ನಡೆಯುತ್ತದೆ. ಅಂದರೆ ಹೆಣ್ಣು , ಮಣ್ಣಿಗಾಗಿ ಹೋರಾಡುವುದು ಮಾನವನಿಗೆ ಪೂರ್ವಜರ ಬಳುವಳಿ ಅಲ್ಲವೆ!

ಮರಿಗಳನ್ನು ತುಂಬ ಪ್ರೀತಿಯಿಂದ ಸಾಕುತ್ತವೆ . ತನ್ನ ಜೊತೆಗೇ ಮರಿಗಳನ್ನು ಹೊತ್ತೊಯ್ಯುವ ತಾಯಿ ಅದಕ್ಕೆ ಆಹಾರ ಸಂಗ್ರಹಣೆ , ಶತ್ರುಗಳಿಂದ ತಪ್ಪಿಸಿಕೊಳ್ಳುವ ಕಲೆ ಕಲಿಸುತ್ತದೆ.

ಅಕಸ್ಮಾತ್ತಾಗಿ ಸತ್ತ ಮರಿಗಳನ್ನು ದಿನಗಟ್ಟಲೇ ಹೊತ್ತು ಓಡಾಡುವ ಮಂಗಗಳನ್ನು ಕಾಣುತ್ತೇವೆ . ಅದು ದುಖಃದಿಂದಲೋ ಅಥವಾ ಸತ್ತದ್ದು ತಿಳಿಯದೆಯೊ , ಅಥವಾ ಅದೊಂದು ಸಹಜ ಕ್ರಿಯೆಯೊ ಎಂಬ ಬಗ್ಗೆ ವಿಜ್ಞಾನಿಗಳಲ್ಲೇ ಅಭಿಪ್ರಾಯ ಭೇದಗಳಿವೆ.

ತುಂಬ ಚಟುವಟಿಕೆಯ ತುಂಟಾಟಕ್ಕೆ ಉಪಮೆಯಂತೆ ಬಳಸಲ್ಪಡುವ ಇವುಗಳು ವಿವಿಧ ರೀತಿಯ ಶಭ್ದಗಳ ಮೂಲಕ ಸಂವಹಿಸುತ್ತವೆ. ಶತ್ರುಗಳ ದಾಳಿ , ಆಹಾರವಿರುವ ಸ್ಥಳ , ಸಂಗಾತಿಗೆ ಸೂಚನೆ , ಮರಿಗಳ ಮೇಲಿನ ಪ್ರೀತಿ ಎಲ್ಲವನ್ನು ಬೇರೆ ಬೇರೆ ರೀತಿಯಲ್ಲಿ ಶಬ್ದಗಳನ್ನು ಹೊರಡಿಸುವುದರ ಸೂಚಿಸುತ್ತವೆ.

"ತಲೆಯಲ್ಲಿನ ಹೇನು ತೆಗೆಸಿಕೊಳ್ಳದಿದ್ದರೆ ಮಂಗನ ಕೈಗೆ ಕೊಡುತ್ತೇನೆ ನೋಡು ! ಅದು ಅಲುಗಾಡಿದರೆ ಎರಡೇಟು ಕೊಟ್ಟು ಹೇನು ತೆಗೆದು ತಿನ್ನುತ್ತದೆ " ಎಂದು ಅಮ್ಮ ನಾನು ಚಿಕ್ಕವಳಿದ್ದಾಗ ಹೇನು ತೆಗೆಸಿಕೊಳ್ಳಲು ಹಠ ಮಾಡಿದರೆ ಹೇಳುತ್ತಿದ್ದರು . ಮಂಗಗಳು ಪರಸ್ಪರ ದೇಹದ ಕೂದಲುಗಳಲ್ಲಿರು ಹೇನು , ಸೀರುಗಳನ್ನು ತೆಗೆದು ತಿನ್ನುತ್ತವೆ ಎಂಬ ನಂಬಿಕೆಯಿದ್ದರೂ ಅದು ನಿಜವಲ್ಲ . ಚರ್ಮದಿಂದ ಸ್ರವಿಸಲ್ಪಡುವ ಕೆಲ ವಸ್ತುಗಳನ್ನು ಹುಡುಕಿ ತಿನ್ನುತ್ತವೆ , ಮತ್ತು ಕೂದಲುಗಳನ್ನು ಕೈಯಿಂದ ನೆವರಿಸುತ್ತವೆ . ಇದು ಅವುಗಳಲ್ಲಿ ಪ್ರೀತಿ ಅಭಿವ್ಯಕ್ತಿಸುವ ವಿಧಾನಗಳಲ್ಲಿ ಒಂದಂತೆ.

ಇನ್ನೊಂದು ಮುಖ್ಯವಾದ ವಿಚಾರವೆಂದರೆ ಅವುಗಳ ಕಲಿಕಾ ಸಾಮರ್ಥ್ಯ. ಪರಿಸ್ಥಿತಿಯನ್ನು ಗ್ರಹಿಸುವ , ಹೊಸದನ್ನು ಕಲಿಯುವ ಸಾಮರ್ಥ್ಯ ಅವಕ್ಕೆ ಹೆಚ್ಚಿದೆ. ಅದ್ದರಿಂದಲೇ ಅವುಗಳು ದಟ್ಟ ಕಾಡಿನಲ್ಲೂ , ಮೆಟ್ರೋಪಾಲಿಟನ್ ಸಿಟಿಗಳಲ್ಲೂ ಸಮರ್ಥವಾಗಿ ಬದುಕಬಲ್ಲವು.

14 comments:

 1. ನಮ್ಮ ಪೂರ್ವಜರ ಬಗ್ಗೆ ಉಪಯುಕ್ತ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು.
  ಕಿಚಕ್-ಪಿಚಕ್!!!

  ReplyDelete
 2. ತುಂಬಾ ಸ್ವಾರಸ್ಯಕರವಾಗಿತ್ತು ಲೇಖನ. ಮಂಗಗಳು , ಹುಡುಕಿ-ಹುಡುಕಿ ಹೇನು ತೆಗೆಯುವ ’ಚೇಷ್ಟೆ’ ಯಂತೂ ಸಕತ್ತಾಗಿರುತ್ತೆ.

  ReplyDelete
 3. ಸುಮಾ, ಮಂಗನಿಂದ ಮಾನವ...ಹಹಹ..ಚನ್ನಾಗಿದೆ ಈ ವಿಕಾಸ ಸರಣಿಯ ಮೊದಲ ಮಾನವನ ಸಚಿತ್ರ ಲೇಖನ..ನಿಮ್ಮ ಈ ಲೇಖನ ನೋಡಿ ಇತ್ತೀಚೆಗೆ ನ್ಯಾಷನಲ್ ಜಿಯೋಗ್ರಾಫಿಕ್ಸ್ ನಲ್ಲಿ ಮಂಗಗಳ (ಭಾರತದಲ್ಲಿ) ಬಗ್ಗೆ ಡಾಕ್ಯುಮೆಂಟ್ರಿ ನೆನಪಾಯ್ತು...ಕೆಲವು ಕಡೆ ಇವುಗಳ ಕಾಟ ತುಂಬಾನೇ ಇರುತ್ತೆ...ಆದ್ರೆ ಕಾರಣ ನಾವೇ ಕಾಡುಗಳನ್ನ ನಾಶಮಾಡಿ ಅವುಗಳನ್ನ ರೇಗಿಸ್ತಿದ್ದೀವಿ..

  ReplyDelete
 4. >>>ಮಂಗಗಳು ಪರಸ್ಪರ ದೇಹದ ಕೂದಲುಗಳಲ್ಲಿರು ಹೇನು , ಸೀರುಗಳನ್ನು ತೆಗೆದು ತಿನ್ನುವುದು , ಪ್ರೀತಿ ತೋರಿಸುವ ವಿಧಾನವಂತೆ . >>>

  ನಾನು ಓದಿ ತಿಳಿದುಕೊಂಡಿರುವ ಪ್ರಕಾರ ಅವು ಹುಡುಕಿ ತಿನ್ನುವುದು ಹೇನು ಸೀರುಗಳನ್ನು ಅಲ್ಲ. ದೇಹದಲ್ಲಿ ಕೂದಲುಗಳ ಮಧ್ಯ ಸಂಗ್ರಹವಾದ ಉಪ್ಪಿನ ಚಿಕ್ಕ ಚಿಕ್ಕ ಉಂಡೆಗಳನ್ನು ಹುಡುಕಿ ತಿನ್ನುತ್ತವೆ. ಅವುಗಳಿಗೆ ಆ ರುಚಿ ಬಹಳ ಇಷ್ಟವಂತೆ.

  Please clarify.

  ReplyDelete
 5. ತುಂಬಾ ಉತ್ತಮ ಮಾಹಿತಿ ಹಾಗೂ ಚಿತ್ರಗಳನ್ನು ನೀಡಿರುವಿರಿ. ಧನ್ಯವಾದಗಳು.

  ReplyDelete
 6. ಒಳ್ಳೆಯ ಮಾಹಿತಿ... ಹಾಗೆ ಫೋಟೋಗಳು ಕೂಡ ಚೆನ್ನಾಗಿ ಇದೆ...

  ReplyDelete
 7. ಅಂದರೆ ಹೆಣ್ಣು , ಮಣ್ಣಿಗಾಗಿ ಹೋರಾಡುವುದು ಮಾನವನಿಗೆ ಪೂರ್ವಜರ ಬಳುವಳಿ ಅಲ್ಲವೆ! :D :D 100% ನಿಜ.... ಮಂಗನಿಂದಲೇ ಮಾನವ ಎನ್ನುತ್ತದೆ ವಿಕಾಸವಾದ :)

  ReplyDelete
 8. ಎಲ್ಲರ ಪ್ರತಿಕ್ರಿಯೆಗೆ ಧನ್ಯವಾದಗಳು.

  ವಿಕಾಸ್ ನೀವೆಂದದ್ದು ನಿಜ . ನನ್ನ ಲೇಖನದಲ್ಲಿ ಒಂದು ತಪ್ಪಾಗಿದೆ. ಸಾಮಾನ್ಯವಾಗಿರುವ ನಂಬಿಕೆಯೆಂದರೆ ಮಂಗಗಳು ಪರಸ್ಪರ ಹೇನು ಹುಡುಕುತ್ತವೆ ಎಂದು . ಆದರೆ ಅವುಗಳು ಹುಡುಕಿ ತಿನ್ನುವುದು ಚರ್ಮದಿಂದ ಸ್ರವಿಸಲ್ಪಡುವ ವಸ್ತುಗಳನ್ನು ! ಅವುಗಳ ಈ ಬಿಹೇವಿಯರ್ ಪ್ರೀತಿ ತೋರಿಸುವ ವಿಧಾನದಲ್ಲೊಂದು ಎಂಬುದು ಜೀವವಿಜ್ಞಾನಿ "ಪ್ರ‍ೇಟರ್" ಅಭಿಪ್ರಾಯ.
  ಎಚ್ಚರಿಸಿದ್ದಕ್ಕಾಗಿ ಧನ್ಯವಾದಗಳು ವಿಕಾಸ್.

  ReplyDelete
 9. ನಾನೂ ಹೇನು ತಿನ್ನೋದು ಅಂತ ಅಂದ್ಕೊಂಡಿದ್ದೆ.. ಇದ್ರ ಬಗ್ಗೆ ಅಂತರ್ಜಾಲದಲ್ಲಿ ಯಾವುದಾದರೂ ಬರಹದ reference ಕೊಡಬಹುದೇ, ಹೆಚ್ಚಿನ ಮಾಹಿತಿ ತಿಳಿಯೋಕೆ ಸಹಾಯವಾಗುತ್ತದೆ.

  ಒಂದು ತಿದ್ದುಪಡಿ. ಮಂಗನಿಂದ ಮನುಜ ಎಂಬ ನಂಬಿಕೆ ಸರಿಯಲ್ಲ. ಮಂಗನಿಗೂ ಮನುಜನಿಗೂ ಪೂರ್ವಜ ಒಂದೇ ಎಂದರೆ ಹೆಚ್ಚು ಸಮರ್ಪಕ. ವಿಕಾಸವಾದದಂತೆ ಮಂಗ ಆದಮೇಲೆ ಅದರಿಂದ ಮನುಜರ ವಿಕಾಸ ಆಗಲಿಲ್ಲ, ಬದಲಿಗೆ ಇವೆರಡೂ ಹಲವು ವರ್ಷಗಳ ಹಿಂದೆ ಒಂದೇ ಪೂರ್ವಜರಿಂದ ವಿಕಾಸವಾದವುಗಳು...

  ReplyDelete
 10. ಒಮ್ಮೆ ನಂದಿ ಬೆಟ್ಟಕ್ಕೆ ನಾವು ಹೋದಾಗ ಅಲ್ಲಿರುವ ಮಂಗಗಳ ಪೈಕಿ ಒಂದು ಗರ್ಭಿಣಿ ಮಂಗ ನಾವು ಬಿಸ್ಕೆಟ್ ತಿನ್ನುವಾಗ ಮುಂದೆ ಬಂದು ಮನುಷ್ಯರಂತೆ ಕೈಯ್ಯೊಡ್ಡಿ ಬೇಡಿತು, ಅದನ್ನು ನೋಡಿದಾಗ ನಮಗೆ ನಿಸರ್ಗದಲ್ಲಿ ಎಂತಹ ಬುದ್ಧಿಮತ್ತೆ ಅಡಗಿದೆ ಎಂಬುದರ ಅರಿವಾಗುವುದರ್ ಜೊತೆಗೆ, ಆ ಮಂಗ ಕೀಟಲೆ ಮಾಡದೆ ದೈನ್ಯದಿಂದ ಕೇಳಿದ ರೀತಿ ನೋಡಿ ಮನದುಂಬಿ ಬಂತು. ಕಾಡಲ್ಲಿ ತಿನ್ನುವ ಅನುಕೂಲ ಮತ್ತು ಆಹಾರಗಳು ಇದ್ದರೆ ಮಂಗಗಳು ಅಲ್ಲದೇ ಮಿಕ್ಕುಳಿದ ಪ್ರಾಣಿಗಳು ಎಂದೂ ನಾಡಿಗೆ[ಊರಿಗೆ ]ಬರುತ್ತಿರಲಿಲ್ಲ! ನಿಮ್ಮ ಲೇಖನ ಚೆನ್ನಾಗಿದೆ,ಧನ್ಯವಾದ.

  ReplyDelete
 11. ಮೇಡಮ್,

  ಮಂಗಗಳ ಫೋಟೊಗಳ ಜೊತೆಗೆ ಕೆಲವು ಉಪಯುಕ್ತ ಮಾಹಿತಿಯನ್ನು ನೀಡಿದ್ದೀರಿ.
  ಅದಕ್ಕಾಗಿ ಧನ್ಯವಾದಗಳು.

  ReplyDelete
 12. ಪಾಲ ಅವರೆ ನಾನೂ ಅಂತರ್ಜಾಲದಲ್ಲಿ ಮಂಗಗಳ ಬಗ್ಗೆ ಹೆಚ್ಚಿನ ಮಾಹಿತಿ ಹುಡುಕುತ್ತಿದ್ದೇನೆ .ವಿಕಿಪಿಡಿಯಾ , ನ್ಯಾಶನಲ್ ಜಿಯಾಗ್ರಪಿಕ್ , ಡಿಸ್ಕವರಿ ಮೊದಲಾದ ತಾಣಗಳಲ್ಲಿ ಪ್ರೈಮೇಟ್ಸ್ ಬಿಹೇವಿಯರ್ ಗಳಲ್ಲೊಂದಾದ "grooming" ಬಗ್ಗೆ ಮಾಹಿತಿಯಿದೆ. ಆದರೆ ಸ್ಕಿನ್ ಸೆಕ್ರಿಷನ್ಸ್ ತಿನ್ನುವ ಬಗ್ಗೆ ಮಾಹಿತಿ ಸಿಗುತ್ತಿಲ್ಲ. ಆದರೆ ಜೀವವಿಜ್ಞಾನಿ ಪ್ರೇಟರ್ ಅವರ " Indiyan animals " ಪುಸ್ತಕದಲ್ಲಿ ಇದರ ಪ್ರಸ್ತಾಪವಿದೆ.

  ReplyDelete
 13. ಸುಮ.,

  ಎಷ್ಟೇ ಅದರೂ ನಮ್ಮ ಪೂರ್ವಜರಲ್ಲವೇ..

  ReplyDelete