8 Jul 2011

ಸೊಬಗಿನ ಕೊಡಗು

 ಪಶ್ಚಿಮಘಟ್ಟಸಾಲಿನಲ್ಲಿರುವ ಊರುಗಳೆಲ್ಲ ನನಗೆ  ( ನನ್ನ ಹುಟ್ಟೂರನ್ನು ನೆನಪಿಸುವುದರಿಂದ)  ಇಷ್ಟವಾಗುತ್ತವೆ. ನನ್ನ ಹುಟ್ಟೂರು ನನ್ನ ತಾಯಿಯೆಂದಾದರೆ ಇವೆಲ್ಲ ಊರುಗಳು ನನಗೆ ನನ್ನ ದೊಡ್ಡಮ್ಮನೋ ಚಿಕ್ಕಮ್ಮನೋ ಎನ್ನಿಸುತ್ತವೆ. ಅದರಲ್ಲೂ ಕೊಡಗಿನ ಬಗ್ಗೆ ನನಗೆ ವಿಶೆಷ  ಆಸಕ್ತಿ. ಅಲ್ಲಿಯ ನಿಸರ್ಗದ ಸೊಬಗು , ಕೂಡವ ಜನಾಂಗದ ಶ್ರೀಮಂತ ಸಾಂಸ್ಕೃತಿಕ ಪರಂಪರೆಗಳ ಬಗ್ಗೆ ತುಂಬಾ ಕುತೂಹಲ . ಕಾದಂಬರಿ , ಸಿನೆಮಾ ,  ಅಂತರ್ಜಾಲ ...ಅಲ್ಲಿ ಇಲ್ಲಿ  ಎಂದು ಕೊಡಗಿನ ಬಗ್ಗೆ ಏನೇನೆಲ್ಲಾ ಓದಿ  ಅಲ್ಲಿಗೊಮ್ಮೆ ಹೋಗಲೇಬೇಕು ಎನ್ನಿಸಿಬಿಟ್ಟಿತ್ತು. ಇಲ್ಲೇ ಹತ್ತಿರದಲ್ಲಿದೆಯಲ್ಲ ಬಿಡು ಹೋದರಾಯಿತು ಎನ್ನುತ್ತಿದ್ದ ಸುಧಾಕಿರಣ್ ಇತ್ತೀಚೆಗೊಮ್ಮೆ ದಿಡೀರ್ ಎಂದು  ಕೊಡಗು  ದರ್ಶನ ಮಾಡಿಸಿದರು.
  ನಮ್ಮ ಹೆಚ್ಚಿನ ಪ್ರವಾಸಗಳು ಪ್ರಿಪ್ಲಾನ್ಡ್ ಆಗಿರುತ್ತವೆ. ಒಂದು ದಿನದ ಪಿಕ್ನಿಕ್ ಆಗಲಿ , ವಾರದ ಪ್ರವಾಸವಾಗಲಿ , ಹೋಗಬೇಕಾದ ಸ್ಥಳ , ವಸತಿ ,ಊಟ ಎಲ್ಲವನ್ನೂ  ತಿಂಗಳ ಮೊದಲೇ ಕಾದಿರಿಸಿ ಹೊರಡುವುದು ನನ್ನವರ ಅಭ್ಯಾಸ. ಆದರೆ ಈ ಬಾರಿ  ಏನನ್ನೂ ಯೋಜಿಸದೆ ಸುಮ್ಮನೇ ಹೊರಟಿದ್ದೆವು. ಅನುಭವ ಅದ್ಭುತವಾಗಿತ್ತು .

ಕೊಡಗು ಜಿಲ್ಲೆಯಲ್ಲಿ ಅನೇಕ ಪ್ರೇಕ್ಷಣೀಯ ಸ್ಥಳಗಳಿವೆ .  ಮಡಕೇರಿ ಒಂದು ಸುಂದರವಾದ ಗಿರಿಧಾಮ.  ಚಿಕ್ಕ ಪುಟ್ಟ ಗುಡ್ಡಗಳನ್ನೇ ಕಡಿದು ಮಾಡಿದ ಜಾಗದಲ್ಲಿ  ಇರುವ ಕಟ್ಟಡಗಳು , ಮನೆಗಳನ್ನೇ ಹೋಂ ಸ್ಟೇ ಮಾಡಿಕೊಂಡು ಪ್ರವಾಸಿಗರನ್ನು ಕಾಯುವ ಜನಗಳು ,  ಗುಡ್ಡ ಬೆಟ್ಟಗಳ ನಡುವೆ ಸತ್ತುತ್ತಾ ಸಾಗುವ ಹಾದಿ , ಬೀದಿಯಲ್ಲಿ , ಮನಗಳಲ್ಲಿ ಬೆಂಗಳೂರಿನ ಯಾವುದೇ  ಶ್ರೀಮಂತ ಬೀದಿಗಳಲ್ಲಿ ಕಾಣಬಹುದಾದಂತಹುದೇ ಕಾರುಗಳು , ಜೊತೆಗೆ ಚಿತ್ರವಿಚಿತ್ರ ಜೀಪುಗಳು,  ತಂಪಾದ ಹವಾಮಾನ , ಪೇಟೆ ಬೀದಿಯಲ್ಲಿ  ಏಲಕ್ಕಿ , ಕಾಳು ಮೆಣಸು , ಜೇನುತುಪ್ಪ , ಟೀಪುಡಿ ಮಾರುವ ಅಂಗಡಿಗಳು , ಎಲ್ಲಾ ಅಂಗಡಿಗಳಲ್ಲೂ ಕಾಣುವ ಬಣ್ಣ ಬಣ್ಣದ ವೈನ್ ಬಾಟಲಿಗಳು ...ಎಲ್ಲವನ್ನು ಕಣ್ತುಂಬಿಕೊಳ್ಳುತ್ತಾ ಕ್ಯಾಮರಾ ಹೆಗಲಿಗೇರಿಸಿ ಓಡಾಡುವ ಪ್ರವಾಸಿಗರು ...ಇದು ಎರಡು ದಿನದ ಅಲ್ಪಾವಧಿಯಲ್ಲಿ ನನ್ನ ಕಣ್ಣಿಗೆ ಕಂಡ ಮಡಕೇರಿ.
 ರಾಜಾ ಸೀಟ್ ಉದ್ಯಾನವನದಲ್ಲಿ ಅರಳಿದ ಹೂವು
ಇಲ್ಲಿ  "ರಾಜಾ ಸೀಟ್" ಎಂಬ ಪುಟ್ಟ ಉದ್ಯಾನವನವಿದೆ . ಸುಂದರ ಹೂವುಗಳ , ಸಂಗೀತ ಕಾರಂಜಿಯ  ಈ ತೋಟದಲ್ಲಿನ ಸಾಯಂಕಾಲಗಳು ಸುಂದರ.  ಇಲ್ಲಿನ ವ್ಯೂ ಪಾಯಿಂಟ್ ನಿಂದ ಕಾಣುವ ದೃಶ್ಯ ಮರೆಯಲಾರದ್ದು. ಮೋಡವಿದ್ದುದರಿಂದ ಸೂರ್ಯಾಸ್ತ ನೋಡಲಾಗಲಿಲ್ಲ ನಮಗೆ.
                                                                                   
 ರಾಜಾ ಸೀಟ್ ನಿಂದ ಕಾಣುವ ವಿಹಂಗಮ ದೃಶ್ಯ.





ಓಂಕಾರೇಶ್ವರ ದೇವಾಲಯದ ಪುಷ್ಕರಣಿ
ಮಡಕೇರಿಯಲ್ಲಿರುವ ಓಂಕಾರೇಶ್ವರ ದೇವಸ್ಥಾನ ಪುರಾತವಾಗಿದ್ದು ನಗರದ ಭಕ್ತಿ ಕೇಂದ್ರವಾಗಿದೆ. ಇಲ್ಲಿಯ ಸುಂದರವಾದ ಪುಷ್ಕರಣಿ ಮನಸೆಳೆಯುತ್ತದೆ.   

ಅಬ್ಬಿ ಜಲಪಾತ ಮಡಕೇರಿಯಿಂದ ಸುಮಾರು 8 ಕಿಮಿ ದೂರದಲ್ಲಿದೆ. ಕಾಫಿ ಎಸ್ಟೇಟ್ ಮಧ್ಯದಲ್ಲಿ ಇರುವ ಜಲಪಾತದ ಬಳಿ ತಲುಪಲು ಅರ್ಧ ಕಿ.ಮೀ ನಡೆಯಬೇಕು . ಸುತ್ತಲಿನ ಕಣ್ಮನ ತಣಿಸುವ ಹಸಿರುಹಾದಿಯಲ್ಲಿ ನಡೆಯುವಾಗ ಈ ದಾರಿ ಹೀಗೇ ಅನಂತವಾಗಬಾರದೇ ಎನ್ನಿಸುತ್ತದೆ.
ಕಾವೇರಿ ನದಿ  ಇಲ್ಲಿ ಎತ್ತರದಿಂದ ಧುಮುಕಿ ಕಲ್ಲುಬಂಡೆಗಳ ನಡುವೆ ಬಳುಕುತ್ತಾ ಸಾಗುತ್ತದೆ.
 ನಾವು ಹೋದಾಗ ಇನ್ನೂ ಹೆಚ್ಚು ಮಳೆಯಾಗಿರಲಿಲ್ಲವಾದ್ದರಿಂದ ಜಲಪಾತದ ಅಬ್ಬರ ಕಡಿಮೆಯಿತ್ತು. ಮಳೆಯಾದಂತೆಯೆಲ್ಲ ಅದರ  ಸೌಂದರ್ಯ ಹೆಚ್ಚೆಂದು ಸ್ಥಳೀಯರು ಹೇಳುತ್ತಾರೆ.
                                 
 ಸುಂದರ ಕಾಫಿ ತೋಟದ ನಡುವೆ ಅಬ್ಬಿ ಜಲಪಾತಕ್ಕೆ ದಾರಿ

 ಅಬ್ಬಿಯಲ್ಲಿ ಬಳುಕುತ್ತಾ ಧುಮುಕುವ ಕಾವೇರಿ

ಕೊಡಗಿನ ಕಾನನಗಳು ಅನೇಕ ಕಾಡುಪ್ರಾಣಿಗಳ ಆವಾಸಸ್ಥಾನ . ಕಾಟಿ , ಹುಲಿ , ಚಿರತೆ , ಕಡವೆ , ಜಿಂಕೆ , ಮುಸಿಯ ಕಾಡಾನೆಗಳು ಇಲ್ಲಿಯ ಅಭಯಾರಣ್ಯಗಳಲ್ಲಿವೆ.
ಕುಶಾಲನಗರದ ಬಳಿ ಇರುವ ದುಬಾರೆ  ಆನೆಗಳ ತವರು.ಕಾಡಾನೆಗಳು ನದಿಯಲ್ಲಿ ನೀರು ಕುಡಿಯಲು ಬರುತ್ತವೆಯಂತೆ. ಅಲ್ಲದೆ ಅರಣ್ಯ ಇಲಾಖೆಯ  ಅನೇಕ ಸಾಕಿದ ಆನೆಗಳು ಇಲ್ಲಿವೆ. ಬೆಳಗಿನ ಸಮಯದಲ್ಲಿ ಇಲ್ಲಿ ಪ್ರಶಾಂತವಾಗಿ ಹರಿಯುವ ಕಾವೇರಿಯಲ್ಲಿ ನೀರು ಕುಡಿಯಲು ಸ್ನಾನ ಮಾಡಿಸಲು ಈ ಆನೆಗಳನ್ನು ಕರೆತರುತ್ತಾರೆ.  ಅಲ್ಲದೆ  ಹೊಸದಾಗಿ ಹಿಡಿದ ಕಾಡಾನೆಗಳನ್ನು ಸಾಕಿದ ಆನೆಗಳ ಸಹಾಯದಿಂದ ಇಲ್ಲಿ ಪಳಗಿಸುತ್ತಾರೆ.ಇಲ್ಲಿನ ನದಿಯಲ್ಲಿ ಬೋಟಿಂಗ್ ಮಾಡಬಹುದು.


 ದುಬಾರೆಯ ಅನೆ
ಹತ್ತಿರದಲ್ಲೇ ಇರುವ ಕಾವೇರಿ ನಿಸರ್ಗಧಾಮ ಒಂದು ಪುಟ್ಟ ದ್ವೀಪ.  ಹ್ಯಾಂಗಿಂಗ್ ಬ್ರಿಡ್ಜ್ ಮೂಲಕ ನದಿ ದಾಟಬೇಕು. ಇಲ್ಲಿ ಪ್ರಕೃತಿ ನಿರ್ಮಿತವಾದ ಸುಂದರ ವನರಾಶಿಯ ಕಿರುಪರಿಚಯ ಮಾಡಿಕೊಳ್ಳಬಹುದು. ಬಿದಿರುಮಟ್ಟಿಗಳ ನಡುವೆ ಕಾಡಿನ ದಾರಿಯಲ್ಲಿ ನಡೆದಾಡಿ ದಣಿದರೆ ತಣ್ಣನೆಯ ನೀರಿನಲ್ಲಿ ಆಟವಾಡಿ ಸುಸ್ತು ಪರಿಹರಿಸಿಕೊಳ್ಳಬಹುದು.ಬೋಟಿಂಗ್ ಮಾಡಬಹುದು. ಆನೆ ಸವಾರಿ ಕೂಡ ಮಾಡಬಹುದು.

ಹ್ಯಾಂಗಿಂಗ್ ಬ್ರಿಡ್ಜ್
                                                                                 

 ಕಾವೇರಿ ನಿಸರ್ಗಧಾಮ

 ಕಾವೇರಿ ನಿಸರ್ಗಧಾಮದಲ್ಲಿನ ವೀಕ್ಷಣಾಅಟ್ಟ

ಸಮಾಧಾನದಿಂದ ಹರಿಯುವ ಕಾವೇರಿಯಲ್ಲಿ ಪಯಣ

ಕಾವೇರಿ ನದಿ ಕೊಡಗಿನ ಬ್ರಹ್ಮಗಿರಿ ಬೆಟ್ಟಸಾಲಿನ ತಲಕಾವೇರಿಯಲ್ಲಿ ಹುಟ್ಟಿ , ಅಲ್ಲಿಂದ ಕೆಳಹರಿದು , ಭಾಗಮಂಡಲದಲ್ಲಿ ಸುಜ್ಯೋತಿ ಮತ್ತು ಕನ್ನಿಕಾ ಎಂಬ ಎರಡು ನದಿಗಳ ಜೊತೆ ಸಂಗಮಗೊಂಡು ಮುಂದೆ ಹರಿಯುತ್ತದೆ.  ಕೊಡವರಿಗೆ ಕಾವೇರಿ ಕೇವಲ ನದಿಯಲ್ಲ. ಕಾವೇರಿಯಮ್ಮೆ , ಕಾವೇರಿ ತಾಯಿ. ಅವರೆಲ್ಲ ಶ್ರದ್ಧೆ ಭಕ್ತಿಯ ಕೇಂದ್ರ ಅವಳು. ಆದ್ದರಿಂದಲೇ ಆಕೆ ಹುಟ್ಟಿದ ಸ್ಥಳ ಅವರಿಗೆ ಪವಿತ್ರ ಯಾತ್ರಾಸ್ಥಳ. ಆಕೆಯ ಸಂಗಮಸ್ಥಳ ಪಾಪಗಳನ್ನು ತೊಳೆಯುವ , ಇಷ್ಟಾರ್ಥಗಳನ್ನು ಪೂರೈಸುವ ಶಕ್ತಿಕೇಂದ್ರ.

 ತಲಕಾವೇರಿ
 ತಲಕಾವೇರಿ ಬೆಟ್ಟದಿಂದ ಕಾಣುವ ದೃಶ್ಯ

ಇಂತಹ ಕಾವೇರಿಯ ಹುಟ್ಟಿನ ಬಗ್ಗೆ ಅನೇಕ ಪೌರಾಣಿಕ ಕಥೆಗಳಿವೆ. ಅದರಲ್ಲಿ ನಮ್ಮ ಟ್ಯಾಕ್ಸಿ ಡ್ರೈವರ್ ಹೇಳಿದ ಕಥೆ ಹೀಗಿದೆ -

ಬ್ರಹ್ಮಗಿರಿಯ ರಾಜ ಕವೇರನಿಗೆ ಮದುವೆಯಾಗಿ ಅನೇಕ ವರ್ಷಗಳಾದರೂ ಮಕ್ಕಳಿರಲಿಲ್ಲ. ಆದ್ದರಿಂದ ತಪಸ್ಸು ಮಾಡಿದ ಆತ ದೇವತೆಗಳ ಆಶೀರ್ವಾದದಿಂದ ಒಬ್ಬ ಮಗಳನ್ನು ಪಡೆದ. ಕಾವೇರಿ ಎಂಬ ಹೆಸರಿಟ್ಟು ತುಂಬ ಪ್ರೀತಿಯಿಂದ ಅವಳನ್ನು ಸಾಕುತ್ತಿದ್ದ. ತುಂಬ  ಒಳ್ಳೆಯವಳಾದ ಕಾವೇರಿ ಜನರ ಕಷ್ಟಗಳಿಗೆ ಮರುಗುತ್ತಿದ್ದಳು . ತನ್ನ ಕೈಲಾದ ಉಪಕಾರ ಮಾಡುತ್ತಿದ್ದಳು . ಜನಸೇವೆಯಲ್ಲೇ ನೆಮ್ಮದಿ ಕಾಣುತ್ತಿದ್ದಳು. ಹೀಗಿರುವಾಗ ಅಗಸ್ತ್ಯನೆಂಬ ಮುನಿ ಆಕೆಯನ್ನು ನೋಡಿ ಮೆಚ್ಚಿ ಕವೇರನಲ್ಲಿ ಅವಳನ್ನು ತನಗೆ ಮದುವೆ ಮಾಡಿಕೊಡುವಂತೆ ಕೇಳಿದ. ಕವೇರನೇನೊ ಸಂತೋಷದಿಂದಲೇ ಒಪ್ಪಿದ. ಆದರೆ ಕಾವೇರಿ ಒಂದು ಶರತ್ತು ವಿಧಿಸಿದಳು ." ಮದುವೆಯಾಗುವವ ತನ್ನನ್ನು ಕ್ಷಣಮಾತ್ರವೂ ಬಿಟ್ಟಿರಬಾರದು , ಆತನೇನಾದರೂ ತನ್ನನ್ನು ತಸು ಅಗಲಿದರೂ ಮತ್ತೆ ತಾನು ಸಿಗಲಾರೆ " ಇದು ಆಕೆಯ ಶರತ್ತು.
ಇದಕ್ಕೆ ಒಪ್ಪಿದ ಅಗಸ್ತ್ಯನೊಡನೆ ಕಾವೇರಿಯ ಮದುವೆ ನಡೆದುಹೋಯಿತು. ಅವಳ ಶರತ್ತಿನಂತೆಯೆ ಅಗಸ್ತ್ಯ ಅವಳನ್ನು ಕ್ಷಣಮಾತ್ರವೂ ಬಿಟ್ಟಿರುತ್ತಿರಲಿಲ್ಲ. ಬೆಳಗಿನ ಜಾವದಲ್ಲಿ ಸ್ನಾನಾಹ್ನಿಕಗಳನ್ನು ಮಾಡಲು ಹೋಗುವಾಗ ಅವಳನ್ನು ಜಲರೂಪಕ್ಕೆ ಪರಿವರ್ತಿಸಿ ತನ್ನ ಕಮಂಡಲದಲ್ಲಿ ಇಟ್ಟುಕೊಂಡು ಹೋಗುತ್ತಿದ್ದ .
ಹೀಗಿರುವಾಗೊಮ್ಮೆ ಆ ನಾಡಿಗೆ ಭೀಕರ ಬರಗಾಲ ಬಂತು . ನೀರಿಗಾಗಿ ಜನರೆಲ್ಲ ದೇವತೆಗಳಲ್ಲಿ ಮೊರೆಇಟ್ಟರು. ಜನರ ಕಷ್ಟ ನೋಡುತ್ತಿದ್ದ ಕಾವೇರಿ ಸರಿಯಾದ ಸಮಯಕ್ಕೆ ಕಾಯುತ್ತಿದ್ದಳು. ಒಂದು ದಿನ ಅಗಸ್ತ್ಯ ಅವಳನ್ನು ನೀರನ್ನಾಗಿ ಮಾಡಿ ಕಮಂಡಲದಲ್ಲಿ ತುಂಬಿಸಿ  ತೀರ್ಥಕುಂಡದ  ಕಡೆ ನಡೆದ . ಕಮಂಡಲವನ್ನು ದಡದಲ್ಲಿಟ್ಟು ನೀರಿಗಿಳಿದ . ಆಗ ಕಾಗೆಯ ರೂಪದಲ್ಲಿದ್ದ ಗಣಪತಿಯು ಲೋಕ ಕಲ್ಯಾಣರ್ಥವಾಗಿ ಆ ಕಮಂಡಲವನ್ನು ಉರುಳಿಸಿಬಿಟ್ಟ. ನೀರಾಗಿದ್ದ ಕಾವೇರಿ ಅಲ್ಲಿಂದ ಹರಿಯಲು ಪ್ರಾರಂಭಿಸಿದಳು . ಅವಳನ್ನು ತಡೆಯಲು ಅಗಸ್ತ್ಯ ಪ್ರಯತ್ನಿಸಿದ .  ಅವಳು ಭೂಮಿಯಲ್ಲಿ ಅದೃಶ್ಯಳಾಗಿ ಹರಿದಳು . ಬೆಟ್ಟದಿಂದ ಕೆಳಗಿಳಿಯುವಾಗ ಅವಳನ್ನು ತಡೆಯಲು ಅಗಸ್ತ್ಯನೊಂದಿಗೆ ಅಲ್ಲಿಯ ನಿವಾಸಿಗಳು ಬಂದರು . ಆದರೆ ಅವಳ ರಭಸಕ್ಕೆ ಅವರುಟ್ಟಿದ್ದ ಸೀರೆಯ ನೆರಿಗೆ ಹಿಂದೆ ತಿರುಗಿಬಿಟ್ಟಿತು. ಆಗ ಅವಳು ಎಲ್ಲರಲ್ಲೂ ತನ್ನನ್ನು ತಡೆಯಬಾರದೆಂದೂ ಲೋಕಕಲ್ಯಾಣಾರ್ಥವಾಗೇ ತಾನು ಹರಿಯುವೆನೆಂದೂ ಹೇಳಿದಳು , ಅಲ್ಲಿನ ನಿವಾಸಿಗಳಿಗೆ ತನ್ನ ನೆನಪಿಗಾಗಿ ಹಿಂದು ಮುಂದಾಗೇ ಸೀರೆ ಉಡುವಂತೆ ಆಶೀರ್ವದಿಸಿದಳು. ಹೀಗೆ ಹರಿವ ಕಾವೇರಿ ಕೊಡವರ ಜೀವನದಿಯಾದಳು.



 ಕಾವೇರಿ ಸಂಗಮ



ಭಗಂಡೇಶ್ವರ ದೇವಾಲಯ













ತಲಕಾವೇರಿಯಲ್ಲಿ ಹುಟ್ಟಿದ ಕಾವೇರಿ ಬೆಟ್ಟವಿಳಿದು ಭಾಗಮಂಡಲದಲ್ಲಿ ಇನ್ನೆರಡು ನದಿಗಳ ಜೊತೆ ಸೇರಿ ಮುಂದೆ ಹರಿಯುತ್ತಾಳೆ.  ಭಕ್ತರು ತುಲಾಸಂಕ್ರಮಣದಂದು ಇಲ್ಲಿ ಪವಿತ್ರಸ್ನಾನ ಮಾಡಿ ದಡದಲ್ಲಿರುವ ಭಗಂಡೇಶ್ವರ ದೇವಾಲಯದ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ.
 ನಾವು ಹೋದಾಗ ಈ ದೇವಾಲಯದಲ್ಲಿ ಒಂದು ಕೊಡವ ಜೋಡಿಯ ಸರಳ ವಿವಾಹ ನಡೆಯುತ್ತಿತ್ತು. ಕೊಡವರ ಸಾಂಪ್ರದಾಯಿಕ ಉಡುಪಿನಲ್ಲಿದ್ದ ಜೋಡಿಯೊಂದಿಗೆ ಇಪ್ಪತ್ತೈದು - ಮುವತ್ತು ಆಪ್ತರಷ್ಟೇ ಇದ್ದ ಆ ಸರಳ ವಿವಾಹ ನೋಡಿ ಸಂತಸವಾಯಿತು.

  ಭಗಂಡೇಶ್ವರ ದೇವಾಲಯ

ಇಲ್ಲಿ ಬೇಸಿಗೆಯಲ್ಲಿ ಶಾಂತಳಾಗಿ ಹರಿಯುವ ಕಾವೇರಿ ಮಳೇಗಾಲದಲ್ಲಿ ಈ ಊರನ್ನು  ದ್ವೀಪವನ್ನಾಗಿ ಮಾಡಿಬಿಡುತ್ತಾಳಂತೆ. ಆ ಸಮಯದಲ್ಲಿ ಮೈತುಂಬಿ ಹರಿಯುವ ಅವಳು ಇಲ್ಲಿ ಮುಖ್ಯ ಸಂಪರ್ಕ ರಸ್ತೆಯನ್ನು ಮುಳುಗಿಸಿಬಿಡುತ್ತಾಳೆಂದು ಟ್ಯಾಕ್ಸಿ ಡ್ರೈವರ್ ಹೇಳುತ್ತಿದ್ದ.
ಇನ್ನೂ ಅನೇಕ ನೋಡುವಂತಹ ಸ್ಥಳಗಳಿದ್ದರೂ ಸಮಯದ ಅಭಾವದಿಂದ ಇನ್ನೊಮ್ಮೆ ಬಂದರಾಯಿತೆನ್ನುವ ಆಶಯದೊಂದಿಗೆ ಮರಳಿದೆವು . 






9 comments:

  1. ಕೊಡಗಿನ ಸೊಬಗಿನ ಬಗೆಗೆ ತುಂಬ ಸೊಗಸಾಗಿ ಬರೆದಿದ್ದೀರಿ. ಅಷ್ಟೇ ಸುಂದರವಾದ ಚಿತ್ರಗಳನ್ನೂ ಕೊಟ್ಟಿರುವಿರಿ. ಧನ್ಯವಾದಗಳು.

    ReplyDelete
  2. ವಾಹ್..!! ತುಂಬಾ ಚೆನ್ನಾಗಿದೆ ವಿವರಣೆ ಮತ್ತು ಫೋಟೋ..

    ReplyDelete
  3. ಪ್ರವಾಸ ಕಥನದ ಜೊತೆಗೆ ಸುಂದರ ಪೊಟೋಗಳು ಅದರ ವಿವರಣೆ...ಸುಮ.
    ನಮ್ಮ ಪ್ರಕೃತಿಯನ್ನು ನಾವು ಕಡೆಗಣಿಸುತ್ತಿದ್ದರೂ ಬಹುಪಾಲು ಸ್ವಾಭಾವಿಕವಾಗಿ ಉಳಿದಿರುವ ಹಲವಾರು ತಾಣಗಳಲ್ಲಿ ಮಡಿಕೇರಿ ಸುತ್ತಮುತ್ತಲ ತಾಣಗಳೂ ಕೆಲವು..ಅನ್ನಿಸುತ್ತೆ ಅಲ್ವಾ...ಧನ್ಯವಾದ ಒಳ್ಲೆಯ ಮಾಹಿತಿಗೆ.

    ReplyDelete
  4. ನಾನು ಹೋಗಿದ್ದೀನಿ... ಆದರೆ ತು೦ಬಾ ಸ್ಥಳಗಳನ್ನು ನೋಡಲಾಗಿರಲಿಲ್ಲ. ತು೦ಬಾ ಸು೦ದರ ಸ್ಥಳ. :)

    ReplyDelete
  5. ತುಂಬಾ ಚೆನ್ನಾಗಿದೆ, ನಾನು ತುಂಬಾ ಸಲ ಕೊಡಗಿಗೆ ಹೊಗಿದ್ದೆನೆ, ಮತ್ತೊಮ್ಮೆ ನೆನಪಿಸಿದ್ದಕೆ ಧನ್ಯವಾದಗಳು...

    ReplyDelete
  6. ಕೆಲಸದ ಒತ್ತಡದಲ್ಲಿ ಕೇವಲ ಎರಡು ದಿನಗಳು ಮಾತ್ರವೇ ನಮಗೆ ರಜೆ ಸಿಗಲಿದ್ದು ಆ ಎರಡು ದಿನಗಳಲ್ಲಿ ಎಷ್ಟು ಸಾದ್ಯವೋ ಅಷ್ಟು ಮಾತ್ರ ಕೊಡಗನ್ನು ನೋಡಿರುತ್ತೇವೆ. ಕೊಡಗಿಗೆ ಮುಂದಿನ ವಾರ ಹೋಗಲಿದ್ದು ಜಲಪಾತಗಳ ಬಗ್ಗೆ ಮಾಹಿತಿ ನೀಡಿ

    ReplyDelete