18 Jul 2011

ಹೇನೆಂಬ ಹೆಮ್ಮಾರಿ

" ಏ...ಇಲ್ಲೊಂದು ಚಿಕ್ಕ ಮರಿ ...ತಪ್ಪಿಸಿಕೊಂಡು ಓಡಿಬಿಡುತ್ತೆ ಈಗ....ಅಲುಗಾಡಬೇಡ ಪುಟ್ಟ  ಹಾಂ... ಸಿಕ್ಕಿತು!... ಸಿಕ್ಕೇ ಬಿಟ್ಟಿತು "...ಹೆಬ್ಬೆರಳು ಮತ್ತು ತೋರುಬೆರಳುಗಳ ನಡುವೆ ಸಿಕ್ಕಿಕೊಂಡ ಆ ಪುಟ್ಟ ಜೀವಿಯನ್ನು ಎಡಗೈ ಹೆಬ್ಬೆರಳಿನ ಉಗುರಿನ ಮೇಲಿಟ್ಟು ...ಬಲಗೈ ಹೆಬ್ಬೆರಳಿನ ಉಗುರಿನಿಂದ ಒತ್ತಿ ಚಟ್ ಎಂಬ ಶಬ್ದ ಬಂದಾಗ ಸಮಾಧಾನಗೊಂಡೆ.
ಅಷ್ಟರಲ್ಲಿ ಮಗಳು "ಅಮ್ಮಾ...ಎಳೀಬೇಡಾಆಆಆ .. ನೋವಾಗ್ತಿದೆ... "ಎಂದು ಕೂಗಿ ಅದು ಅವಳಪ್ಪನ ಕಿವಿ ತಲುಪಿ  - "ಥೋ ಅದೇನದು ನಿಧಾನವಾಗಿ ತೆಗಿ.. ಇಲ್ಲದಿದ್ರೆ ಔಷಧಿ ಹಾಕಿ ತೆಗಿ " ಎಂದು ಅವರು ಕುಳಿತಲ್ಲಿಂದ ಕೂಗಿ  - ಅದಕ್ಕೆ "ನೀವು ಸುಮ್ಮನಿರಿ ನಿಮಗೇನು ಗೊತ್ತಾಗತ್ತೆ ಹೇನು ತೆಗೆಯುವ ಕಷ್ಟ " ಎಂದು ನಾನು ಬಯ್ದು ..... ಎಲ್ಲ ಆಯ್ತು .

ಇದು ನಮ್ಮ ಮನೆಯಲ್ಲಿ ಆಗಾಗ ಕಂಡುಬರುವ ದೃಶ್ಯ. ಸ್ಕೂಲಿಗೆ ಹೋಗುವ  ಮಗಳ ತಲೆಯಲ್ಲಿ ಹೇಗೋ ಹೇನು ಆಗಿಬಿಡುತ್ತದೆ. ಅದಿರುವುದು ಗೊತ್ತಾಗುವುದೇ ತಡ .. ಲಾಡನ್ ಹಿಂದೆ ಬಿದ್ದ ಅಮೇರಿಕಾದವರಂತೆ ನಾನು ಸಮರೋನ್ಮುಖಿಯಾಗುತ್ತೇನೆ ....ದಿನಾ ಹೇನುಹಣಿಗೆಯಿಂದ ಬಾಚಿ ತೆಗೆಯುವುದು....  ಅದಕ್ಕೂ ಬಗ್ಗದಿದ್ದಾಗ , ಹೇನು ತೆಗೆಯುವ ಶಾಂಪೂ , ಔಷಧಿ , ಕೆಲಸದವಳಿಂದ ಹಿಡಿದು ಅಜ್ಜಿಯವರೆಗೆ   ಹೇಳುವ   ಎಲ್ಲ  ಮನೆಔಷದ   ಮಾಡಿ ...ಅಂತೂ ಇಂತೂ ತಿಂಗಳುಗಟ್ಟಲೆ ಪ್ರಯತ್ನಪಟ್ಟು ಎಲ್ಲ ಹೇನನ್ನೂ ಅದರ ಮೊಟ್ಟೆಗಳ ಸಮೇತ ನಾಶ ಮಾಡಿದೆ ಎಂದು ಸಮಾಧಾನದಿಂದಿರುವಾಗಲೇ ಮತ್ತೆ ತಲೆ ಕೆರೆಯಲು ಶುರು ಮಾಡಿರುತ್ತಾಳೆ ಅವಳು.

ಮಕ್ಕಳು ತಲೆ ಕೆರೆಯುವುದರಲ್ಲೂ ಒಂದು ವಿಶೇಷವಿದೆ . ಬೇರೆಲ್ಲ ಸಮಯದಲ್ಲೂ ಎಷ್ಟು ಹೇನಿದ್ದರೂ ಸುಮ್ಮನಿರುವ ಅವು , ಯಾರಾದರೂ  ಮನೆಗೆ ಬಂದಾಗ ಅಥವಾ ಎಲ್ಲಿಯಾದರೂ ಹೋದಾಗ ಪುರುಸೊತ್ತಿಲ್ಲದಂತೆ ತಲೆ ಕೆರೆಯುತ್ತವೆ . ನೋಡಿದವರು "ಛೆ ಎಂತಹ ತಾಯಿಯೋ ಇವಳು , ಮಗಳ ತಲೆಯನ್ನು ಸ್ವಚ್ಛವಾಗಿಟ್ಟುಕೊಂಡಿಲ್ಲವಲ್ಲ " ಎಂದುಕೊಳ್ಳುವಂತೆ ಮಾಡುತ್ತವೆ. 

ಬಹುಶಃ ಹೆಣ್ಣುಮಕ್ಕಳಿರುವ ಎಲ್ಲ ತಾಯಂದಿರೂ ಒಮ್ಮೆಯಾದರೂ ಈ ಹೇನಿನ ಕಾಟವನ್ನು ಅನುಭವಿಸಿಯೇ ಇರುತ್ತಾರೆ . ಅಷ್ಟು ಸರ್ವವ್ಯಾಪಿ ಇದು. ಇದನ್ನು ನಾಶಪಡಿಸಲೆಂದೇ ಶಾಂಫೂಗಳು , ಔಷಧಿಗಳು ಎಲ್ಲ ಇದ್ದರೂ ಅದರ ಕಾಟ ತಪ್ಪಿಲ್ಲ.

 ನಾನು ಇರುವ ಒಬ್ಬ ಮಗಳ ತಲೆಯ ಹೇನಿಗೇ ಇಷ್ಟು ಹೆದರುತ್ತೇನೆ....ನಮ್ಮಮ್ಮ ಇಬ್ಬರು ಹೆಣ್ಣುಮಕ್ಕಳ ಹೇನನ್ನು ಹೇಗೆ ಸಂಭಾಳಿಸಿದರೋ ... ಅದರಲ್ಲಿ ನನ್ನ ತಂಗಿಯ ತಲೆ ಹೇನು ತೆಗೆಯುವುದು ಸುಲಭವಿತ್ತು. ಅವಳು ಅಮ್ಮನ ತೊಡೆಯ ಮೇಲೆ ನಿದ್ದೆ  ಮಾಡಬೇಕೆನಿಸಿದಾಗಲೆಲ್ಲ ಹೋಗಿ ಹೇನು ತೆಗೆ ಎಂದು ಅಮ್ಮನ ಕಾಲ ಮೇಲೆ ಮಲಗಿಬಿಡುತ್ತಿದ್ದಳು. ಅಮ್ಮ ಅವಳ ತಲೆಯ ಮೇಲೆ ಬೆರಳಾಡಿಸುತ್ತಿದ್ದರೆ ಅವಳಿಗೆ ಒಳ್ಳೆ ನಿದ್ದೆ.
ಆದರೆ ನಾನು ಅಷ್ಟು ಸುಲಭದಲ್ಲಿ ಕೈಗೆ ಸಿಗುತ್ತಿರಲಿಲ್ಲ . ನನ್ನನ್ನು ಹೆದರಿಸಲು ಅಮ್ಮ ಒಂದು ಉಪಾಯ ಕಂಡು ಹಿಡಿದಿದ್ದರು. "ಮಂಜಿ ಹತ್ತಿರ ಹೇಳುತ್ತೇನೆ ನೋಡು" ಎಂದರೆ "ಬೇಡಮ್ಮ ನೀನೆ ತೆಗಿ" ಎಂದು ಕೂರುತ್ತಿದ್ದೆ ನಾನು .ನಮ್ಮ ಮನೆಕೆಲಸಕ್ಕೆ  ಬರುತ್ತಿದ್ದ ಮಂಜಿಗೆ  ಹೇನು ತೆಗೆಯುವುದೆಂದರೆ ತುಂಬ ಇಷ್ಟ. ತಲೆಯನ್ನು ಹಿಡಿದಳೆಂದರೆ ಕೊನೇ ಮೊಟ್ಟೆ ಹುಡುಕಿ ಚಟ್ ಎನ್ನಿಸುವವರೆಗೂ ಅವಳಿಗೆ ಸಮಾಧಾನವಾಗದು , ತೆಗೆಸಿಕೊಳ್ಳುವವರ ಪಾಡೆನು ಎಂಬುದು ಅವಳಿಗೆ ಬೇಕಿರಲಿಲ್ಲ. ಎಷ್ಟೇ ಕಿರುಚಿದರೂ ಅವಳು ಬಿಡುತ್ತಿರಲಿಲ್ಲ. ಜೊತೆಗೆ ಸ್ನಾನದ್ವೇಷಿಯಾದ  ಅವಳ ಬೆವರು ವಾಸನೆ ಬೇರೆ.

ಕೀಟಗಳ ಜಾತಿಗೆ ಸೇರಿರುವ ಹೇನಿನಲ್ಲಿ ಅನೇಕ ವಿಧಗಳಿವೆ . ಚರ್ಮ , ಬಟ್ಟೆಗಳ ಮೇಲಿರುವ ಹೇನುಗಳೂ ಇವೆ. ದನಕರುಗಳು ನಾಯಿ ಬೆಕ್ಕು ಮುಂತಾದ ಸಾಕುಪ್ರಾಣಿಗಳ ಮೇಲೂ ಕೆಲ ಜಾತಿಯ ಹೇನುಗಳಿರುತ್ತವೆ.
ಎರಡರಿಂದ ಹದಿನೈದು ವಯಸ್ಸಿನ ಮಕ್ಕಳಲ್ಲಿ ಅದೂ ಹೆಚ್ಚಾಗಿ ಹೆಣ್ಣುಮಕ್ಕಳ  ತಲೆಯ ಕೂದಲುಗಳಲ್ಲಾಗುವ ಹೇನು ಬೇರೆಲ್ಲೂ ಒಂದು ದಿನಕ್ಕಿಂತ ಹೆಚ್ಚು ಕಾಲ ಬದುಕಲಾರವು.ತಲೆಯ ಚರ್ಮವನ್ನು ಕಚ್ಚಿ ರಕ್ತ ಹೀರಿ ಇವು ಬದುಕುತ್ತವೆ. ಕಚ್ಚಿ ರಕ್ತಹೀರಲು ಅನುಕೂಲಕರವಾದ ಗಟ್ಟಿಯಾದ ಮೌತ್ ಪಾರ್ಟ್ಸ್ ಇವಕ್ಕಿದೆ. ಕಚ್ಚಿದಾಗ ರಕ್ತ ಹೆಪ್ಪುಗಟ್ಟದಂತೆ ತಡೆಯುವ ಕಿಣ್ವಗಳನ್ನು ಸ್ರವಿಸಿ ಸರಾಗವಾಗಿ ರಕ್ತ ಹೀರುತ್ತವೆ.
ತಲೆಯಿಂದ ತಲೆಗೆ ಇವು ಹಾರುತ್ತವೆಂಬ ನಂಬಿಕೆಯಿದೆ . ಆದರೆ ಹಾರಲು ಇವಕ್ಕೆ ರೆಕ್ಕೆಗಳಿಲ್ಲ. ಕುಪ್ಪಳಿಸುವುದೂ ಸಾಧ್ಯವಿಲ್ಲ.  ಇವುಗಳ ಕಾಲುಗಳ ರಚನೆ ಕೂದಲುಗಳನ್ನು ಹಿಡಿದು ನಡೆಯಲು ಮತ್ತು ಓಡಲು ಸಾದ್ಯವಾಗುವಂತಿದೆ.
ಬೆಳಕನ್ನು ಕಂಡರೆ ಇವಕ್ಕೆ ಅಲರ್ಜಿ. ಹಾಗಾಗಿ ಹೆಚ್ಚಾಗಿ ಕಿವಿಯ ಹಿಂಭಾಗ ಮತ್ತು ಕುತ್ತಿಗೆಯ ಹತ್ತಿರ ಇರುತ್ತವೆ ಮತ್ತು ಅಲ್ಲೇ ಮೊಟ್ಟೆಗಳನ್ನಿಡುತ್ತವೆ. ದಿನಕ್ಕೆ ನಾಲ್ಕಾರು ಬಾರಿ ರಕ್ತ ಹೀರುತ್ತವೆ.
ಗಂಡು ಹೇನು ಹೆಣ್ಣಿಗಿಂತ ಗಾತ್ರದಲ್ಲಿ ಸ್ವಲ್ಪ ಸಣ್ಣದಾಗಿರುತ್ತವೆ. ವಯಸ್ಕ ಹೆಣ್ಣು ಹೇನು ದಿನಕ್ಕೆ ನಾಲ್ಕೈದು ಮೊಟ್ಟೆಗಳನ್ನು  ತಲೆಯ ಚರ್ಮಕ್ಕೆ ಸನಿಹವಾಗಿ ಕೂದಲಿನಲ್ಲಿ ತನ್ನ ಜೊಲ್ಲುರಸದಲ್ಲಿರುವ ಅಂಟಿನಿಂದ ಅಂಟಿಸುತ್ತದೆ.   ಅದರ ಅಂಟು ಎಷ್ಟು ಗಟ್ಟಿಯಾಗಿರುತ್ತದೆ ಎಂದರೆ ಮರಿ ಹೊರಗೆ ಬಂದ  ವರ್ಷಗಳ ನಂತರವೂ  ಮೊಟ್ಟೆಯ ಕವಚ ಕೂದಲಿಗೆ ಅಂಟಿಕೊಂಡಿರುತ್ತದೆ!! ಹೊರಬಂದ ಮರಿ ಒಟ್ಟು ನಾಲ್ಕು ಹಂತದ ಬೆಳವಣಿಗೆಯಿಂದ ದೊಡ್ಡದಾಗುತ್ತದೆ. ಪ್ರತಿಯೊಂದು ಹಂತದ ಮರಿಗಳೂ ರಕ್ತವನ್ನು ಹೀರುತ್ತವೆ. ಸುಮಾರು ಹದಿನೈದು ದಿನಗಳಲ್ಲಿ ಸಂಪೂರ್ಣ ಬೆಳವಣಿಗೆ ಹೊಂದುತ್ತವೆ. ಬೆಳೆದ ಹೆಣ್ಣು ಹೇನು ತನ್ನ ಜೀವಿತಾವಧಿಯಲ್ಲಿ ೧೦೦ ರಿಂದ ೧೫೦ ಮೊಟ್ಟೆಗಳನ್ನಿಡುತ್ತದೆ !!

ಇದು ಒಬ್ಬರಿಂದ ಒಬ್ಬರಿಗೆ ಹರಡುವುದು ಹತ್ತಿರದ ಸಂಪರ್ಕದಿಂದ. ಟವೆಲ್ , ಬಾಚಣಿಗೆ , ದಿಂಬುಗಳ ಮೂಲಕವೂ ಹರಡುತ್ತದೆ. ಸಮಾಧಾನದ ಸಂಗತಿಯೆಂದರೆ ಇವುಗಳಿಂದ ಬೇರಾವುದೇ ರೋಗ ಹರಡುವುದಿಲ್ಲ. ಆದರೆ ತುಂಬ ಹೆಚ್ಚದಾಗ ತಲೆಯಲ್ಲಿ ಕಜ್ಜಿಗಳಾಗಬಹುದು.

ಕೆನಡಾ , ಆಷ್ಟ್ರೇಲಿಯ ,ಯು ಎಸ್ ಮೊದಲಾದ ದೇಶಗಳ ಕೆಲ ಶಾಲೆಗಳಲ್ಲಿ ಹೇನಿರುವ ಮಕ್ಕಳಿಗೆ ಕಡ್ಡಾಯ ರಜೆ ಕೊಡುತ್ತಾರಂತೆ , ಹೇನು ಸಂಪೂರ್ಣವಾಗಿ ಮೊಟ್ಟೆಗಳ ಸಮೇತ ನಾಶವಾದ ಮೇಲಷ್ಟೇ ಸ್ಕೂಲಿಗೆ ಪ್ರವೇಶವಂತೆ . ಒಂದು ವೇಳೆ ನಮ್ಮ ದೇಶದಲ್ಲೇನಾದರೂ ಈ ನಿಯಮ ಬಂದರೆ?? 

13 comments:

  1. ಹ ಹ ಹ ...ಚೆನ್ನಾಗಿದೆ..
    ಹಾಗೆನದ್ರೂ ಭಾರತದಲ್ಲಿ ರಜೆ ಕೊಟ್ರೆ ... ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಆಗಬಹುದು.

    ReplyDelete
  2. This comment has been removed by the author.

    ReplyDelete
  3. ನಾವಿನ್ನು ಏಳನೇ ತರಗತಿಯಲ್ಲಿದ್ದೆವು ನನ್ನ ಸ್ನೇಹಿತೆ ತಲೆಯಲ್ಲಿ ಸಿಕ್ಕಾಪಟ್ಟೆ ಹೇನುಗಳು ಇರ್ತಾ ಇತ್ತು ನಮ್ಮ ಅಮ್ಮ ದಿನ ಅವಳ ತಲೆ ನೋಡಿ ನೋಡಿ ಸಾಕಾಗೋದು.. ಅವರಮ್ಮಗೆ ನೋಡೋಕೆ ಬರ್ತಾ ಇರ್ಲಿಲ್ಲ... ಹಹಹ ನಿಮ್ಮ ಈ ಲೇಖನ ಓದಿ ನೆನಪಾಯಿತು.
    ಈ ನಿಯಮ ನಮ್ಮ ದೇಶದಲ್ಲಿ ಬಂದರೆ ಚೆನ್ನಾಗಿರುತ್ತೆ ಹಹಹ ವರ್ಷ ಪೂರ್ತಿ ರಜೆ ಸಿಗಬಹುದು...

    ReplyDelete
  4. ಹೇನಿನ ಬಗೆಗೆ ಒಳ್ಳೇ ಲೇಖನ ಬರೆದಿರುವಿರಿ. ಶಾಲೆಗೆ ರಜೆ ಸಿಗುವ ಹಾಗಿದ್ದರೆ, ಇದನ್ನೇ ನೆವ ಮಾಡಿಕೊಂಡು, ಹುಡುಗಿಯರು ಶಾಲೆ ತಪ್ಪಿಸಬಹುದು!

    ReplyDelete
  5. ಮಾಹಿತಿಪೂರ್ಣ ಲೇಖನ. ನನ್ನ ಪುಟ್ಟಿಗೂ ಸ್ಕೂಲ್ ಶುರುವಾದಾಗ ಸ್ವಲ್ಪ ಸಮಯ ಈ ಕಾಟ ಕಾಡಿತ್ತು. ತುಂಬಾ ಕಷ್ಟಪಟ್ಟಿದ್ದೆ ಓಡಿಸಲು.. "ಬೆಳ್ಳುಳ್ಳಿ ಜಜ್ಜಿ ಎಣ್ಣೆಯಲ್ಲಿ ಕುದಿಸಿ ಹಚ್ಚಿ ಸ್ನಾನ ಮಾಡಿಸಿದರೆ, ಡಾಂಬರ್ ಗುಳಿಗೆಯನ್ನು ಎಣ್ಣೆಯಲ್ಲಿ ಹಾಕಿ ಕುದಿಸಿ ಹಚ್ಚಿ ಮಲಗಿ ಮರುದಿನ ಸ್ನಾನ ಮಾಡಿದರೂ" ಹೇನುಗಳು ಸಾಯುತ್ತವಂತೆ. ಮೊದಲನೆಯದನ್ನು ಮಾಡಿಲ್ಲ... ಎರಡನೆಯದ್ದನ್ನು ನಾವು ಚಿಕ್ಕವರಿದ್ದಾಗಿ ಮಾಡಿದ್ದೆವು. ಪರಿಣಾಮಕಾರಿ :)

    ReplyDelete
  6. ಒಳ್ಳೆ ಹೇನಿನ ಪುರಾಣ ಜೊತೆಗೆ ಉತ್ತಮ ಮಾಹಿತಿ. ಏಳು ಹಾಸಿಗೆ ದಾಟುತ್ತವೆ ಮತ್ತು ಹಾರುತ್ತವೆ ಎಂಬ ಅಂತೆ ಕಂತೆ ಕೇಳಿದ್ದೆ. ಸಧ್ಯ ಗಂಡು ಮಕ್ಕಳಿಗೆ ಇದರ ಕಾಟವಿಲ್ಲ. ಜೊತೆಗೆ ನನ್ನಂತವರ ಬೆಂಗಾಡು ಅವಕ್ಕೆ ಬೇಕಾಗಿಲ್ಲ...

    ReplyDelete
  7. olle 'henina kathe' Suma..good! chikkandina nenapu maadiside!

    ReplyDelete
  8. "ನಿಮಗೇನು ಗೊತ್ತಾಗತ್ತೆ ಹೇನು ತೆಗೆಯುವ ಕಷ್ಟ "- ಇಲ್ಲಾ ಮೇಡಂ. ಅಷ್ಟೇನೂ ಕಷ್ಟವಿಲ್ಲ. ಒಂದು ಮಾತ್ರೆ ಸಾಕು. (ಆ ಸಮಯದಲ್ಲಿ) ತಲೆಯಲ್ಲಿರುವ ಹೇನುಗಳನ್ನು ಸಾಯಿಸಲು!!!!ಆಶ್ಚರ್ಯ ಆದರೂ ನಿಜ!! ಒಂದು ವರ್ಷದ ಕೆಳಗೆ ನಾನು ಬರೆದ ಬ್ಲಾಗ್ ಲೇಖನ ಓದಿ. http://machikoppa.blogspot.com/2010/03/blog-post_09.html

    ReplyDelete
  9. haasyamayavagi henina puraana bareda reethi chennagittu.. maahitipoornavaagidhe :)

    ReplyDelete
  10. i have heard some soaps are available to remove that...
    machikoppa's article is also very informative ...

    ReplyDelete
  11. ಸುಮ ಅವರೇ,
    ಹೇನಿನ ಪುರಾಣ ಚೆನ್ನಾಗಿತ್ತು :)

    ReplyDelete
  12. henu puraana chennagide madam,
    ondu company start maadabahudu henidu :)

    ReplyDelete