3 Aug 2011

ನಾಗರಪಂಚಮಿಯಲ್ಲಿ ಮದರಂಗಿಯ ಘಮ

"ಪಂಚಮಿ ಹಬ್ಬಕ್ ಉಳಿದಾವ ದಿನ ನಾಕ
ಅಣ್ಣ ಬರಲಿಲ್ಲ ಯಾಕಾ ಕರಿಯಾಕ"
ನಮ್ಮೂರಿನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗ ಶಾಲೆಯ ಪ್ರತೀ ಕಾರ್ಯಕ್ರಮದಲ್ಲೂ ಯಾರಾದರೊಬ್ಬ ಹುಡುಗಿ ಈ ಹಾಡಿಗೆ ಡ್ಯಾನ್ಸ್ ಮಾಡುತ್ತಿದ್ದಳು !!( ಡ್ಯಾನ್ಸ್ ಮಾಡುವುದು ಕೇವಲ ಹುಡುಗಿಯರು ಮಾತ್ರ ಎಂದು ನಂಬಿದ್ದ ದೇಶಕಾಲವದು). ಒಂದು ಕಾಲದಲ್ಲಿ ಅಷ್ಟು ಫೇಮಸ್ ಈ ಹಾಡು. ತುಂಬ ದಿನಗಳ ವರೆಗೆ ನನಗೆ ಈ ಹಾಡಿನಲ್ಲಿ ಬರುವ ಪಂಚಮಿ ಹಬ್ಬ ಯಾವುದು ಎಂದೇ ತಿಳಿದಿರಲಿಲ್ಲ. ಆದರೆ  ಆಮೇಲೆ ನಾಲ್ಕೊ ಐದನೆಯ ತರಗತಿಯ ಕನ್ನಡ ಪುಸ್ತಕದಲ್ಲಿ ಪಂಚಮಿ ಹಬ್ಬ ಅಂತ ಒಂದು ಪಾಠ ಇತ್ತು . ಅದನ್ನು ಮಾಡುವಾಗ ನಮ್ಮ ಮೇಷ್ಟರು ಪಂಚಮಿ ಹಬ್ಬವೆಂದರೆ ನಾವೆಲ್ಲ ಆಚರಿಸುವ ನಾಗರಪಂಚಮಿ ಹಬ್ಬವೇ ಎಂದು ತಿಳಿಸಿದರು . ಆ ಪಾಠದಲ್ಲಿ ಕೊಟ್ಟಿದ್ದ ದೊಡ್ಡದಾದ ಮರಕ್ಕೆ ಕಟ್ಟಿದ ಜೋಕಾಲಿಯ ಚಿತ್ರ ಇನ್ನೂ ನೆನಪಿದೆ . ಈ ಹಬ್ಬದ ದಿನ ಹಳ್ಳಿಗಳಲ್ಲಿ ಊರವರೆಲ್ಲ ಸೇರಿ ಜೋಕಾಲಿ ಆಡುತ್ತಾರೆ ಎಂದೇನೋ ಆ ಪಾಠದಲ್ಲಿತ್ತು . ಮಲೆನಾಡಿನ ನಮ್ಮ ಊರಿನಲ್ಲೇನೂ ಆ ಆಚರಣೆಯಿರಲಿಲ್ಲ .  ಜೋಕಾಲಿಯನ್ನು ತುಂಬ ಇಷ್ಟಪಡುತ್ತಿದ್ದ ನನಗೆ ನಮ್ಮ ಊರಲ್ಲೂ ಹೀಗೆ ಆಚರಿಸಬಾರದೇ ಎನ್ನಿಸಿ ಅಜ್ಜನಲ್ಲಿ ಕೇಳಿದ್ದೆ. ಅಜ್ಜ  "ಕೂಸೇ ಈ ಸುರಿವ ಮಳೆಯಲ್ಲೆಂತ ಜೋಕಾಲಿ ಆಡ್ತ! ನಾಗರಕಲ್ಲಿನ ಪೂಜೆನೇ ಕೊಡೆ ಹಿಡಿದುಕೊಂಡು ಮಾಡಕ್ಕು  ..ನಿಂದೊಳ್ಳೇ ತಮಾಷೆ "  ಎಂದು ನಕ್ಕುಬಿಟ್ಟಿದ್ದರು.
ಶ್ರಾವಣಮಾಸವೆಂದರೆ ದಿನಕ್ಕೊಂದು ಹಬ್ಬ .. ಅದಕ್ಕೊಂದು ಪಾಯಸ . ಅದರಲ್ಲಿ ಈ ನಾಗರಪಂಚಮಿ ಸ್ವಲ್ಪ ದೊಡ್ಡ ಹಬ್ಬ . ನಮ್ಮ ಮನೆಯಲ್ಲಿ ಈ ಹಬ್ಬಕ್ಕೆ ಗಣೇಶಹಬ್ಬ ಅಥವಾ ದೀಪಾವಳಿಯಂತೆ ಹೊಸಬಟ್ಟೆಯೇನೂ ತರುತ್ತಿರಲಿಲ್ಲ. ಆದ್ದರಿಂದ ತುಂಬ ಸಂಭ್ರಮವೇನೂ ಈ ಹಬ್ಬಕ್ಕಿರಲಿಲ್ಲ. ಆದರೂ ನಾಗರಪಂಚಮಿಯನ್ನು ವಿಶಿಷ್ಟವಾಗಿಸಿದ್ದ ಎರಡು ಸಂಗತಿಗಳೆಂದರೆ  ಎಳ್ಳುಂಡೆ ಮತ್ತು ಮದರಂಗಿ .

 ಹುರಿದ ಕಪ್ಪು ಎಳ್ಳನ್ನು ಹದವಾದ ಬೆಲ್ಲದಪಾಕಕ್ಕೆ ಹಾಕಿ, ಜೊತೆಗೊಂದಿಷ್ಟು ಕೊಬ್ಬರಿ ಸೇರಿಸಿ ಪುಟ್ಟ ಪುಟ್ಟ ಎಳ್ಳುಂಡೆಗಳನ್ನು ಮಾಡಿ ನಾಗರಕಲ್ಲಿಗೆ ನೈವೇದ್ಯವಿಡುತ್ತಿದ್ದರು. ಈ ಹಬ್ಬ ಬಿಟ್ಟರೆ ಇನ್ನು ಯಾವಾಗಲೂ ಎಳ್ಳುಂಡೆಯನ್ನು ಮಾಡುತ್ತಿರಲಿಲ್ಲವಾದ್ದರಿಂದ ಅದು ನನಗಿಷ್ಟವಾಗಿತ್ತು. ನಾಗರಕಲ್ಲಿನ ಬಳಿಯಿಟ್ಟ ನೈವೇದ್ಯವನ್ನು ನಾವೆಲ್ಲ ಮಲಗಿದ್ದಾಗ ಹಾವು ಬಂದು ತಿನ್ನುತ್ತದೆ ಎಂದೇ ನನ್ನ ಭಾವನೆಯಾಗಿತ್ತು.   ಒಂದು ಕೈಯಲ್ಲಿ ಕೊಡೆ ಹಿಡಿದು ಇನ್ನೊಂದು ಕೈಯಲ್ಲಿ  ನಾಗರಕಲ್ಲಿಗೆ ಅಜ್ಜ ಪೂಜೆ ಮಾಡುವುದನ್ನು ಎಲ್ಲಾದರು ಹಾವು ಹಾಲು ಕುಡಿಯಲು ಬಂದುಬಿಡಬಹುದೆಂಬ ಭಯದಲ್ಲಿ ಸ್ವಲ್ಪ ದೂರ ನಿಂತೇ ನೋಡುತ್ತಿದ್ದೆ ನಾನು.

ಈ ಹಬ್ಬಕ್ಕಾಗಿ ನಾವು ಕಾತರದಿಂದು ಕಾಯುತ್ತಿದ್ದುದು ಸಾಯಂಕಾಲ ನಡೆಯುತ್ತಿದ್ದ ಇನ್ನೊಂದು ಆಚರಣೆಗೆ . ಅದು ಹೇಗೆ ಕೈಗೆ ಮದರಂಗಿ ಹಚ್ಚಿಕೊಳ್ಳುವುದಕ್ಕೂ ನಾಗರಪೂಜೆಗೂ ಸಂಭಂದವೂ ಗೊತ್ತಿಲ್ಲ . ಅಂತೂ ಆ ದಿನ ಮನೆಯವರೆಲ್ಲರೂ ಕನಿಷ್ಟ ಒಂದು ಬೆರಳಿಗಾದರೂ ಮದರಂಗಿ ಹಚ್ಚಿಕೊಳ್ಳುವ ಕ್ರಮವಿತ್ತು.
ಅದಕ್ಕೆ ತಯಾರಿ ಹಿಂದಿನ ದಿನವೇ ಪ್ರಾರಂಭವಾಗುತ್ತಿತ್ತು. ಯಾರಮನೆಯ ಮದರಂಗಿಗಿಡದಲ್ಲಿ ಒಳ್ಳೆಯ ಸೊಪ್ಪು ಇದೆ ಎಂದು ಹುಡುಕುತ್ತಿದ್ದೆವು  ಅದರಲ್ಲೂ ಕೆಂಡಮದರಂಗಿ ಗಿಡದ ಸೊಪ್ಪಿಗೆ ಬೇಡಿಕೆ ಹೆಚ್ಚು . ಸಾದ್ಯವಾದಷ್ಟು ಬೇಗ ಹೋಗಿ ಆ ಸೊಪ್ಪನ್ನು ಕೊಯ್ಯುವುದು ಊರಿನ ಎಲ್ಲ ಹುಡುಗಿಯರ ಕೆಲಸವಾಗಿರುತ್ತಿತ್ತು. ಅಂತು ಒಳ್ಳೆಯ ಸೊಪ್ಪು ಸಂಪಾದಿಸಿ ಮನೆಗೆ ತಂದು ಅದನ್ನು ನೀರು ಆರಲೆಂದು ಹರವಿಡುವುದು. ನಂತರ ಅದರ ಕೆಂಪಾಗಿಸುವ ಗುಣ ಹೆಚ್ಚಿಸುವುದೆಂಬ ನಂಬಿಕೆಯಿದ್ದ , ಅಡಿಕೆತೋಟದ ಕಾಲುವೆಯ ಬಳಿ ಹೇರಳವಾಗಿ ಬೆಳೆದಿರುತ್ತಿದ್ದ "ಕಾಗೆಕಾಲು", "ಗುಬ್ಬಿಕಾಲು" ( ಒಂದು ಜಾತಿಯ ಫರ್ನ್ ) ಗಿಡಗಳನ್ನು ಕಿತ್ತು ತಂದಿಡುತ್ತಿದ್ದೆವು . ರಾತ್ರಿ ಅಜ್ಜಿ ಅವೆಲ್ಲ ಸೊಪ್ಪನ್ನು ರುಬ್ಬುವಕಲ್ಲಿನಲ್ಲಿ ಹಾಕಿ ರುಬ್ಬುತ್ತಿದ್ದರು . ಅವರ ಕೈ ಎಷ್ಟು ಕೆಂಪಾಗುತ್ತದೆ ಎಂಬ ಕುತೂಹಲದಲ್ಲಿ  ಗಳಿಗೆ ಗಳಿಗೆಗೂ "ಕೈ ತೋರಿಸು ಅಮ್ಮಮ್ಮ " ಎಂದು ಕೇಳುತ್ತಾ ನಾನು ಮತ್ತು ತಂಗಿ ಅಲ್ಲೆ ಕುಳಿತಿರುತ್ತಿದ್ದೆವು . ಸೊಪ್ಪೆಲ್ಲ ಅರೆದು ಗಟ್ಟಿಯಾದ ಚಟ್ನಿಯ ಹದಕ್ಕೆ ಬಂದಾಗ ಅಜ್ಜಿಯ ಅಂಗೈ ಕೂಡ ಕೆಂಪಾಗಿರುತ್ತಿತ್ತು. ಅದು ಹೆಚ್ಚು ಕೆಂಪಾದಷ್ಟು ನಮಗೆ ಖುಷಿ .  ಮಾರನೇ ದಿನ ನಮ್ಮ ಕೈ ಕೂಡ   ಹಾಗೆ ಕೆಂಪಾಗುತ್ತದೆಂಬ ಸಂತೋಷ. ಮದರಂಗಿ ಚಟ್ನಿಯನ್ನು  ಕೈ ಮೇಲಿಟ್ಟು ಕಟ್ಟಲು ಮಳೆಗೆ ಹೇರಳವಾಗಿ ಬೆಳೆದಿರುತ್ತಿದ್ದ " ಕುರ್ಡಂಗಿ ಗಿಡ" ದ ಎಲೆಯನ್ನು ಕೊಯ್ದು ತರುತ್ತಿದ್ದೆವು . ಮೃದುವಾದ ಆ ಎಲೆಯನ್ನು ಹೇಗೆ ಬೇಕಾದರೂ ಬಾಗಿಸಿ ಕಟ್ಟಬಹುದಿತ್ತು.
ಅಂತೂ ಎಲ್ಲ ತಯಾರಿ ಮುಗಿಸಿ ರಾತ್ರಿ ಬೇಗ ಊಟ ಮಾಡಿ , ಮದರಂಗಿ ಹಚ್ಚಿಸಿಕೊಳ್ಳುವ ಸಂಭ್ರಮ ಶುರುವಾಗುತ್ತಿತ್ತು. ಅಪ್ಪ , ಅಮ್ಮ ಮತ್ತು ಅಜ್ಜಿಯರು ಸೇರಿ ನನ್ನ ಮತ್ತು ತಂಗಿಯ ಕೈಕಾಲು ಬೆರಳುಗಳಿಗೆ ಮದರಂಗಿ ಚಟ್ನಿಯನ್ನು ಟೊಪ್ಪಿಯಂತೆ ಇಟ್ಟೂ ಮೇಲೆ ಕುರ್ಡಂಗಿ ಎಲೆ ಸುತ್ತಿ ಬಾಳೆಪಟ್ಟೆ( ಬಾಳೇಗಿಡದ ನಾರು )ಯಿಂದ ಕಟ್ಟುತ್ತಿದ್ದರು .
 ಕೈ ಕಾಲು ಬೆರಳಿನಲ್ಲಿರುವ ಟೊಪ್ಪಿಗೆ ಯಾವುದೇ ತೊಂದರೆಯಾಗಂತೆ ನಡೆದು ಹಾಸಿಗೆ ಸೇರಿ ಮಲಗಿದರೆ ಕುತ್ತಿಗೆಯವರೆಗೂ  ಅಮ್ಮ ಹೊದೆಸುತ್ತಿದ್ದ ಬೆಚ್ಚನೆಯ ರಗ್ ಹಿತವಾಗಿರುತ್ತಿತ್ತು.  ಕೈ ಹೊದಿಕೆಯ ಹೊರಗಿಟ್ಟರೆ ಚಳಿ , ಒಳಗಿಟ್ಟರೆ ಬೆರಳಲ್ಲಿರುವ ಮದರಂಗಿ ಬೀಳುವುದೆಂಬ  ಭಯದಲ್ಲಿ ಸರಿಯಾಗಿ ನಿದ್ದೆ ಬಾರದೆ ಇರುವಾಗ ಎಂದೂ ಇಲ್ಲದೆ ಆಗಲೇ ಎಲ್ಲಾದರೂ ತುರಿಕೆಯಾಗುತ್ತಿತ್ತು. ಅಂತೂ  ಹೇಗೋ ನಿದ್ರೆ ಹತ್ತಿದರೆ   ನನ್ನ ಬೆರಳು, ಉಗುರುಗಳು ಕೆಂಪೇ ಆಗದಿರುವಂತೆಯೂ , ತಂಗಿಯ ಕೈಬೆರಳುಗಳು ಅಚ್ಚಕೆಂಪು ಬಣ್ಣವಾದಂತೆಯೂ ಕನಸು ಬಿದ್ದು ಎಚ್ಚರವಾಗುತ್ತಿತ್ತು .
ಎಂದೂ ಏಳುಗಂಟೆಯ ಒಳಗೆ ಹಾಸಿಗೆ ಬಿಟ್ಟೇಳದ ನಾನು ಆ ದಿನ ಮಾತ್ರ ಐದೂವರೆಗೆ ಅಮ್ಮ ಏಳುತ್ತಿದ್ದಂತೆಯೆ ಎದ್ದು ಹೊರಗೋಡುತ್ತಿದ್ದೆ. ಕೈ ಕಾಲಿನಲ್ಲಿರುವ ಮದರಂಗಿಯ ಟೊಪ್ಪಿಯನ್ನೆಲ್ಲ ತೆಗೆದು ಒಣಗಿದ ಚಟ್ನಿಯನ್ನು ತೊಳೆಯುವಾಗ ಕಟ್ಟಿದ್ದರಿಂದಾಗಿ ಸರಿಯಾಗಿ ರಕ್ತಸಂಚಾರವಾಗದೆ ಬೆರಳುಗಳೆಲ್ಲ ಮುದುಡಿದಂತಾಗಿರುತ್ತಿತ್ತು . ತೊಳೆದ ಕೈಗೆ ಕೊಬ್ಬರಿ ಎಣ್ಣೆ ಸವರಿ ಬೆಳಕಿಗೆ ಹಿಡಿದು ನೋಡುವಾಗ ಕೈ ಕೆಂಪಾದ ಸಂಭ್ರಮ ಮುಖದಲ್ಲಿ ಕುಣಿಯುತ್ತಿತ್ತು , ಜೊತೆಗೆ ಮದರಂಗಿಯ ನರುಗಂಪು ಮುದ ನೀಡುತ್ತಿತ್ತು .    ಬೆಳಗಾದಂತೆಲ್ಲ ಯಾರ ಕೈ ಎಷ್ಟು ಕೆಂಪಾಗಿದೆ ಎಂದು ನೋಡುವ ಸಂಭ್ರಮ , ಆ ದಿನ ಸ್ಕೂಲಿನಲ್ಲೂ ಅದೇ ಕೆಲಸ. ಯಾರ ಕೈ ಹೆಚ್ಚು ಕೆಂಪಾಗಿದೆಯೋ ಅವರಲ್ಲಿ ಅದರ ಗುಟ್ಟೆನು ಎಂದು ವಿಚಾರಿಸುವುದು .. ಸೊಪ್ಪು ಯಾವ ಗಿಡದಿಂದ ತಂದಿದ್ದೆಂದು ಕೇಳಿ  ಮುಂದಿನ ವರ್ಷಕ್ಕೆ ನನಗೂ ಅದೇ ಸೊಪ್ಪು ತಂದು ಕೊಡೆಂದು  ಕೇಳುವುದು ಹೀಗೇ ಕಳೆಯುತ್ತಿತ್ತು.

ನಾನು ಈಗ ಈ ಬೆಂಗಳೂರೆಂಬೊ ಸಿಂಗಾಪುರದಂತಹ ಊರಿನಲ್ಲಿ ನನ್ನ ಬಾಲ್ಯದ ಸವಿನೆನಪುಗಳನ್ನು ಹರವಿಕೊಂಡು ಕುಳಿತಿರುವಾಗ ನನ್ನೆಜಮಾನ್ರು " ನಾಳೇ ನಾಗರಪಂಚಮಿಯಂತೆ ... ಬೆಳಗ್ಗೆನೇ ಎಷ್ಟು ಹಾಲು ಬೇಕೋ ಅಷ್ಟು ತಗೊಂಡುಬಿಡು ಆಮೇಲೆ ಗೊತ್ತಲ್ಲ ಇದ್ದಬದ್ದ ಹಾಲನ್ನೆಲ್ಲ ನಾಗರಕಲ್ಲಿಗೆ ಸುರಿಯುತ್ತಾರೆ ಈ   ಜನ " ಅಂತ ಗೊಣಗುತ್ತಾ ನನ್ನನ್ನು ವರ್ತಮಾನಕ್ಕೆಳೆದು ತಂದರು.

22 comments:

  1. ನಾಗಪಂಚಮಿಯ ಬಗ್ಗೆ ಮತ್ತು ಮದರಂಗಿ ಬಗ್ಗೆ ಒಂದು ಸುಂದರ ಅನುಭವದ ಲೇಖನ ಇಷ್ಟವಾಯ್ತು..

    ReplyDelete
  2. ಸುಮ ನಿಮ್ಮೆಲ್ಲ ಪರಿವಾರ್ಗಕ್ಕೆ ನಾಗರ ಪಂಚಮಿ ಶುಭವನ್ನು ತರಲಿ....ಈ ಪವಿತ್ರ ಹಬ್ಬದ ದಿನದ ಹಬ್ಬದ ಹಿನ್ನೆಲೆ ಮತ್ತು ಆ ದಿನದ ಆಚರಣೆಯ ನಿಮ್ಮ ಲೇಖನ ಮಾಹಿತಿಯುಕ್ತ...

    ReplyDelete
  3. ನಾಗರ ಪಂಚಮಿ ಹಬ್ಬದ ಶುಭಾಶಯಗಳು:)

    ReplyDelete
  4. ನೈಸ್ ಸುಮಕ್ಕಾ... :-)

    2007ರ ನಾಗರ ಪಂಚಮಿಗೆ ನಾನು ಬರೆದದ್ದು:
    http://hisushrutha.blogspot.com/2007/08/blog-post_17.html

    ReplyDelete
  5. ಓದಿ ಸಕತ್ ಖುಷಿ ಆತು. ಚನಾಗಿ ಬರದ್ದೆ..ಸುಮಕ್ಕ ..:-)

    ReplyDelete
  6. Good one Suma. Liked it!!
    :-)
    Malathiakka

    ReplyDelete
  7. nangu baalyad nagarapanchami nenpaatu :)
    chenaagiddu article!
    ninne ashte nan colleagues hatra heLtaa iddi madaringi hachaha kathe na.
    Blore li sopp antu huDkal saadville. Mehendi cone tand ittidi. raati haakyakku :)

    ReplyDelete
  8. ಕಮೆಂಟಿಸಿದ ಎಲ್ಲರಿಗೂ ಧನ್ಯವಾದಗಳು .
    ಸುಶ್ರುತ ನೀ ಬರೆದ ಲೇಖನ ಓದಿದಿ.ತುಂಬ ಚೆನ್ನಾಗಿ ಬರದ್ದೆ . ಅದನ್ನೇ ಕಾಪಿ ಮಾಡಿ ನಾನು ಬರೆದಿದ್ದೇನೋ ಅನ್ನೋಹಂಗೆ ಇದ್ದಲೋ ಮರಾಯ...ನಿಜ್ಜ ಅದನ್ನ ನಾನು ಈಗಲೇ ಓದಿದ್ದು ಗೊತ್ತಾ :(
    ನೀನು ಅದನ್ನ ಬರೆದಾಗ ನಾನಿನ್ನೂ ಬ್ಲಾಗ್ ಲೋಕಕ್ಕೆ ಕೈ ಇಟ್ಟಿರ್ಲೆ .

    ReplyDelete
  9. ಚೆನ್ನಾಗಿದೆ :)

    ReplyDelete
  10. Nagara panchami ondondu kade ondondu reeti aacharisuttare... nimma bhaagada aacharane bagge chennagi vivarisiddira...

    ReplyDelete
  11. ಮೃತ್ಯುಂಜಯ ಹಂದಿಗೋಡುThursday, 04 August, 2011

    ಅಂದು ಮಕ್ಕಳಾದ ನಾವೆಲ್ಲ ಊಟ ಮಾಡಿ ಬೇಗ ಮಲಗಿಬಿಡುತ್ತಿದ್ದೆವು.
    ರಾತ್ರಿ ಯಾವಾಗಲೋ ನಿದ್ರೆಯಲ್ಲಿರುವ ನಮ್ಮ ಬೆರಳಿಗೆ ಮದರಂಗಿ
    ಚಟ್ನೆ ಇಟ್ಟು ಚನ್ನೆ ಮರದ ಎಲೆಯಿಂದ ಯಾವ ಮಾಯದಲ್ಲೋ ಅಮ್ಮ
    ಕಟ್ಟಿ ಬಿಡುತ್ತಿದ್ದಳು. ಬೆಳೆಗ್ಗೆ ಅಮ್ಮ ಎಬ್ಬಿಸಿ ಸಗಣಿ ನೀರಿನಲ್ಲಿ ಕೈ ಅದ್ದಿ
    ತೆಗೆಸಿ ಬಿಡುತ್ತಿದ್ದಳು. ಹಾಗೆ ಮಾಡಿದರೆ ತುಂಬಾ ಕೆಂಪಾಗುತ್ತದೆಂಬ
    ನಂಬಿಕೆ. ಶಾಲೆಯಲ್ಲಿ ಅ ದಿನವೆಲ್ಲ ಯಾರ ಬೆರಳು ಎಷ್ಟು ಕೆಂಪು
    ಅಂತ ನೋಡುವುದೇ ಕಾಯಕ. ಹೀಗೆ ಬಾಲ್ಯದ ನೂರೆಂಟು ನೆನಪು.
    ಈಗ ಎಲ್ಲಾ ಅದಲು ಬದಲು ಕಂಚಿನ ಕದಲು.

    ReplyDelete
  12. ನಮ್ಮಲ್ಲೂ ಎಳ್ಳುಂಡೆ ಮಾಡುತ್ತಾರೆ.. ಜೊತೆಗೆ ಹಸಕ್ಕಿ ತಂಬಿಟ್ಟು ಮಾಡುತ್ತಾರೆ ಅದು ನಂಗಿಷ್ಟ.

    _ನನ್ನ ಬ್ಲಾಗಿಗೂ ಬನ್ನಿ

    ReplyDelete
  13. ಪಂಚಮಿ ಹಬ್ಬದ ಸಂಭ್ರಮವನ್ನು ಸೊಗಸಾಗಿ ಚಿತ್ರಿಸಿದ್ದೀರಿ. ನಿಮಗೆ ಹಬ್ಬದ ಶುಭಾಶಯಗಳು.

    ReplyDelete
  14. ಬಾಲ್ಯದ ಪಂಚಮಿ ಹಬ್ಬದ ಮೆಲುಕು ಮಧುರವಾಗಿ ಹರವಿ ಎಲ್ಲರನ್ನು ಬಾಲ್ಯ ನೆನಪಿಸುವಂತೆ ಮಾಡಿದ್ದಿರಾ.

    ReplyDelete
  15. ಚೆನ್ನಾಗಿದೆ :)

    ReplyDelete
  16. ಮತ್ತೊಂದು ಸಾಂದರ್ಭಿಕ ಲೇಖನ ಅಕ್ಕ..ಚೆನ್ನಾಗಿದೆ. ನಮ್ಮ ಸಂಸ್ಕೃತಿ, ಪರಂಪರೆ, ಆಚರಣೆಗಳು ಎಷ್ಟೊಂದು ಅರ್ಥಪೂರ್ಣ ಹಾಗು ವಿಶಿಷ್ಟ..
    ಈಗಿನ ಆಧುನಿಕತೆಯ ಯುಗದಲ್ಲಿ ಏನೆಲ್ಲಾ ಖುಷಿಗಳನ್ನು ಕಳೆದುಕೊಂಡಿದ್ದೇವೆ!

    ಇಂಥ ಬರಹಗಳಿಂದ ನಿಮ್ಮ ಬ್ಲಾಗ್ ಇನ್ನಷ್ಟು ಶೋಭಿಸಲಿ..

    ReplyDelete
  17. ಸಾ೦ದರ್ಭಿಕ ಲೇಖನ - ಸು೦ದರವಾಗಿ ನಿರೂಪಿಸಿದ್ದೀರಿ. ಅಭಿನ೦ದನೆಗಳು.

    ಅನ೦ತ್

    ReplyDelete
  18. ಸುಮ ಅವರೇ,
    ಎಳ್ಳುಂಡೆ ಮತ್ತು ಮದರಂಗಿ ನೆನಪು ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು !
    ಹಬ್ಬದ ತಡವಾದ ಶುಭಾಶಯಗಳು :)

    ReplyDelete
  19. ಬಹಳ ಸೊಗಸಾಗಿದೆ ,ಕಾಗಿ ಕಾಲ ಗುಬ್ಬಿ ಕಾಲ.ಕೂಡ ಮದರಂಗಿಗೆ ಬಣ್ಣ ಕೊಡುತ್ತದೆ..ಮತ್ತು ಕೆಂಡ ಮದರಂಗಿ ಎಂಬುದು ಇದೆ ಎಂಬುದು ನನಗೆ ಇಗಲೇ ತಿಳಿದಿದ್ದು..ಮದರಂಗಿಯಲ್ಲಿ ಗಂಡು ಮರ ಹೆಣ್ಣು ಮರ ಇರುತ್ತೆ..ಹೆಣ್ಣು ಮರಕ್ಕೆ ಹೂ ಕಾಯಿ ಬಿಡುತ್ತೆ ಅದು ಔಷದಕ್ಕೆಂದು ಉಪಯೋಗಿಸಲ್ಪದುತ್ತೆ..ಮತ್ತು ಗಂಡು ಮರದ ಎಲೆಗಳನ್ನು ಕೈಗೆ ಹಚ್ಚಲು ಬಳಸುತ್ತಾರೆ..ಹೆಣ್ಣು ಮರದ ಎಲೆಗಳು ಹೆಚ್ಹು ಬಣ್ಣ ಕೊಡುವುದಿಲ್ಲ..funny but true

    ReplyDelete
  20. ನಾಗರಪಂಚಮಿಯ ದಿನ ಹಬ್ಬದ ಸಂಭ್ರಮ ನೆನಪು ಮಾಡಿಕೊಟ್ಟದ್ದಕ್ಕೆ ಧನ್ಯವಾದಗಳು .ಹಬ್ಬದ ಲೋಕಕ್ಕೆ ಕರೆದೊಯ್ದಿದ್ದೀರಿ ..!

    ReplyDelete