27 Sept 2011

ಹಠ

ಈ ಪ್ರಪಂಚದ ಅರಿವಿಲ್ಲದೆ ಮಲಗಿದ್ದ ರಾಮಯ್ಯನ ಮಂಚದ ತುದಿಯಲ್ಲಿ ಕುಳಿತಿದ್ದರು ಸೀತಮ್ಮ. ಕಣ್ಣಂಚು ಒದ್ದೆಯಾಗಿತ್ತು. ತಮ್ಮ ಐವತ್ತು ವರ್ಷಗಳ ದಾಂಪತ್ಯದಲ್ಲಿ ಅವರೆಂದೂ ಹೀಗೆ ಮಲಗಿದ್ದು ನೆನಪಿಲ್ಲ ಸೀತಮ್ಮನಿಗೆ. ನಿನ್ನೆ ಬಚ್ಚಲಿನಿಂದ ಬರುತ್ತಿದ್ದಾಗ ಜಾರಿ ಬಿದ್ದದ್ದೇ ನೆಪವಾಗಿ ಎಚ್ಚರವೇ ಇಲ್ಲದಂತೆ ಮಲಗಿಬಿಟ್ಟಿದ್ದಾರೆ. ತಕ್ಷಣ ಬಂದು ನೋಡಿದ ಡಾಕ್ಟರು ಮಗನನ್ನು ಅಂಗಳಕ್ಕೆ ಕರೆದೊಯ್ದು ಏನೋ ಮಾತನಾಡಿದ್ದರು. ನಂತರ ಇಲ್ಲೇ ಏನೇನೋ ಕೊಳವೆಗಳನ್ನೆಲ್ಲ ಅವರ ದೇಹಕ್ಕೆ ಜೋಡಿಸಿ ಹೋಗಿದ್ದರು. ಏಕೋ ಮಕ್ಕಳ್ಯಾರೂ ತಮಗೇನೂ ಬಿಡಿಸಿ ಹೇಳುತ್ತಿಲ್ಲ. ದೊಡ್ಡಸ್ಪತ್ರೆಗಾದರೂ ಕರೆದೊಯ್ಯೆಂದು ಮಗ ರಾಘವನಲ್ಲಿ ಗೋಗರೆದಿದ್ದರು. ನಾಳೆ ಕರೆದುಕೊಂಡು ಹೋಗುತ್ತೇನೆನ್ನುತ್ತಾನೆ ಅವನು. ಯಾರ ಆರೋಗ್ಯದ ವಿಚಾರದಲ್ಲೂ ಅಸಡ್ಡೆ ಮಾಡುವವನಲ್ಲ ಅವನು. ಆದರೂ....ಯಾಕೆ ಹೀಗೆ? ಇಂದಾದರೂ ತಾನೇ ಡಾಕ್ಟರ್ ಬಳಿ ಕೇಳಬೇಕೆಂದು ನಿಶ್ಚಯಿಸಿಕೊಂಡರು ಸೀತಮ್ಮ.

"ಅಮ್ಮ ಸ್ವಲ್ಪ ತಿಂಡೀ ತಿನ್ನು ಬಾ , ನಿನ್ನೆಯಿಂದ ಏನೂ ತಿಂದಿಲ್ಲ ನೀನು" ಹತ್ತಿರ ಬಂದು ಕೈ ಹಿಡಿದು ಕರೆದ ಹಿರಿಮಗಳ ಮುಖವನ್ನೇ ನೋಡಿದರು ಸೀತಮ್ಮ. ಹೌದಲ್ಲ ಈಗ ತನಗೆ ಹೊಟ್ಟೆಯಲ್ಲೇನೋ ತಳಮಳವಾಗುತ್ತಿದೆಯಲ್ಲ , ಗಂಡ ಈ ಸ್ಥಿತಿಯಲ್ಲಿದ್ದಾಗಲೂ ತನಗೆ ಹಸಿವೆಯಾಗುತ್ತಿದೆಯೆ? ನಿನ್ನೆಯೇನೋ ಹೊಟ್ಟೆಯ ಬಗ್ಗೆ ಗಮನವೇ ಹೋಗಿರಲಿಲ್ಲ ... ಆದರಿಂದು ... ಛೆ ಎಂತಹ ಹಾಳು ಹೊಟ್ಟೆಯಪ್ಪ... ಯೋಚಿಸುತ್ತಲೇ ಮಗಳನ್ನು ಹಿಂಬಾಲಿಸಿದರು

ಹಿರಿ ಮಗಳು ಪ್ಲೇಟಿಗೆ ಹಾಕಿಕೊಟ್ಟ ಉಪ್ಪಿಟ್ಟು ತಿನ್ನುತ್ತಿರುವಾಗ ಕೊನೆಯ ಮಗಳ ನೆನಪಾಗಿ ಮತ್ತೊಮ್ಮೆ ಕಣ್ತುಂಬಿತು ಸೀತಮ್ಮನಿಗೆ . ಛೆ ಎಷ್ಟು ಪ್ರೀತಿ ಅವರಿಗೆ ಆ ಮಗಳನ್ನು ಕಂಡರೆ ... ಆದರೆ ಕೊನೆಗಾಲಕ್ಕಾದರೂ ಅವಳ ಮುಖ ಕಾಣುತ್ತಾರೋ ಇಲ್ಲವೋ ... ಛೆ ಇದೇನು ಯೋಚಿಸುತ್ತಿದ್ದೇನೆ ತಾನು ... ಇದೇನು ಅವರ ಕೊನೆಗಾಲವೆ? ಹಾಗೆ ನನ್ನ ಮನಸ್ಸಿಗನ್ನಿಸುತ್ತಿದೆಯೆ? ಇರಬಹುದೇನೂ ನಿನ್ನೆ ಹೀಗಾದೊಡನೆ ಮಗ ಹತ್ತಿರದಲ್ಲೇ ಇರುವ ದೊಡ್ಡ ಮಗಳು ಲಕ್ಷ್ಮಿಯನ್ನು ಫೋನ್ ಮಾಡಿ ಕರೆಸಿದ್ದ. ಬಂದವಳನ್ನು ಅಂಗಳದಲ್ಲೇ ನಿಲ್ಲಿಸಿಕೊಂಡು ಏನೋ ಗುಸು ಗುಸು ಮಾತನಾಡಿದ್ದರು ಮಗ ಮತ್ತು ಸೊಸೆ. ಕಣ್ಣೊರೆಸಿಕೊಳ್ಳುತ್ತಲೇ ಒಳಬಂದಿದ್ದಳು ಮಗಳು. ಎಲ್ಲರೂ ಸೇರಿ ನನ್ನಿಂದ ಏನೋ ಮುಚ್ಚಿಡುತ್ತಿದ್ದಾರೆ ಎನ್ನಿಸಿ ಮತ್ತಷ್ಟು ದುಖಃ ಒತ್ತರಿಸಿ ಬಂತು ಸೀತಮ್ಮನಿಗೆ.

ಕೈ ತೊಳೆದು ಸೊಸೆ ಕೊಟ್ಟ ಬಿಸಿ ಕಾಫಿ ಗುಟುಕರಿಸುತ್ತಿರುವಾಗ " ಅಮ್ಮ ಆಶಂಗೆ ಫೋನ್ ಮಾಡಿದ್ದೆನಮ್ಮ . ಇವತ್ತು ಬಂದರೂ ಬರಬಹುದು ಅವಳು ಅಪ್ಪನನ್ನು ನೋಡಲಿಕ್ಕೆ ..." ಸಣ್ಣ ದ್ವನಿಯಲ್ಲಿ ಅಳುಕುತ್ತಲೇ ಮಗಳು ಲಕ್ಷ್ಮಿ ಹೇಳಿದಳು.
ಲಕ್ಷ್ಮಿಯ ಮಾತುಗಳು ಸೀತಮ್ಮನಿಗೆ ಅರ್ಥವಾಗಲು ಕೆಲ ಕ್ಷಣಗಳೆ ಬೇಕಾಯಿತು. "ಆಂ ಏನೆಂದೆ ಆಶಾ ಬರುತ್ತಾಳ .... ರಾಘವ ಕೂಡ ಮನೆಯಲ್ಲೇ ಇರುತ್ತಾನಲ್ಲೆ.... ಯಾಕೆ ರಾಮಾಯಣ ... ನೀನ್ಯಾಕೆ ಅವಳಿಗೆ ಪೋನ್ ಮಾಡಿದ್ದು? ನಿಮ್ಮಪ್ಪನಿಗೇನಾಗಿದೆ ನಿಜ ಹೇಳು?

ಆಶಾ ಬರೋದು ಅವರಿಗೂ ಗೊತ್ತಿದೆ ಅತ್ತೆ ....ಒಪ್ಪಿದ್ದಾರೆ ಅವರು...ಅತ್ತೆ ನೀವೀಗ ಸಮಾಧಾನ ಮಾಡಿಕೊಳ್ಳಬೇಕು .... ಮಾವನಿಗೆ ಬ್ರೈನ್ ಹೆಮರೇಜ್ ಆಗಿದೆ ಎಲ್ಲಿಗೆ ಕರೆದುಕೊಂಡು ಹೋದರೂ ಹುಷಾರಾಗೋದಿಲ್ಲ ಅಂತ ಹೇಳ್ತಿದ್ದಾರೆ ಡಾಕ್ಟರ್......ಹೀಗೆ ಕೆಲ ದಿನ ಇದ್ದರೂ ಇರಬಹುದೆಂದು ಹೇಳುತ್ತಿದ್ದಾರೆ ....ಸೊಸೆ ನಿಧಾನವಾಗಿ ಹೇಳಿದ್ದನ್ನು ಕೇಳಿದ ಸೀತಮ್ಮ ಕಲ್ಲಾದರು. ಇಂತದ್ದೊಂದು ಅನುಮಾನ ಇದ್ದರೂ ಅದೇ ನಿಜವಾಗಿಹೋಯ್ತಲ್ಲವೆಂಬ ಸಂಕಟದಲ್ಲಿ ಮಾತೇ ಹೊರಡಲಿಲ್ಲ. ಒಳಬಂದ ಮಗನೂ ತಾಯಿಯ ಭುಜ ಬಳಸಿ ಧೈರ್ಯ ತಗೋ ಅಮ್ಮ ...ಇದು ಸಹಜ ಅಲ್ವಾ... ಅಪ್ಪ ಎಂಬತ್ತು ವರ್ಷಗಳ ಸಾರ್ಥಕ ತುಂಬು ಜೀವನ ನಡೆಸಿದ್ದಾರೆ..... ಅವರು ಬಯಸಿದಂತೆಯೆ ಪರಾಧೀನರಾಗದೆ ನರಳಾಟವೇ ಇಲ್ಲದೆ ಹೋಗುತ್ತಿದ್ದಾರೆ.... ನಾವು ಗೌರವದಿಂದ ಬೀಳ್ಕೊಡೋಣ ಅಮ್ಮ ಧೈರ್ಯ ತಗೋ.....ಹೇಳಿ ಹೊರನಡೆದ.

ಈಗ ಸೀತಮ್ಮ ಮತ್ತೆ ಬಂದು ಗಂಡನ ಬಳಿ ಕುಳಿತರು, ಅವರಿರುವ ಪ್ರತೀ ಕ್ಷಣವನ್ನೂ ಅವರ ಜೊತೆ ಕಳೆಯ ಬೇಕೆಂದು ತೀರ್ಮಾನಿಸಿದವರಂತೆ.
ನಿನ್ನೆ ಬೆಳಿಗ್ಗೆ ಬಿದ್ದ ಸ್ವಲ್ಪ ಹೊತ್ತು ಕಣ್ಣು ಬಿಟ್ಟು ನೋಡುತ್ತಿದ್ದ ಅಸ್ಪಷ್ಟವಾಗಿ ಏನೋ ಗೊಣಗುತ್ತಿದ್ದ ಇವರು ಮಧ್ಯಾನ್ಹದ ವೇಳೇಗಾಗಲೇ ಕಣ್ಣು ಮುಚ್ಚಿ ಸುಮ್ಮನೆ ಮಲಗಿಬಿಟ್ಟಿದ್ದರು ...ಇಂದು ಮಧ್ಯಾನ್ಹವಾಗುತ್ತ ಬಂತು ಇನ್ನೂ ಕಣ್ತೆರೆದಿಲ್ಲ....ಹಾಗಾದರೆ ಹೀಗೇ ಹೋಗಿಬಿಡುತ್ತಾರ? ನನಗೊಂದು ವಿದಾಯವನ್ನೂ ಹೇಳದೇ ...ಇಂದು ಬರುತ್ತಿದ್ದಾಳಂತೆ ಅವಳು ....ಇವರಿಗೆ ಅವಳ ಮುಖವನ್ನು ನೋಡಲಾಗುತ್ತದೆಯೋ ಇಲ್ಲವೋ ...
ಎಷ್ಟು ಪ್ರೀತಿಯ ಮಗಳು ಅವಳು....ಹುಂ , ಹೆಚ್ಚು ಕಡಿಮೆ ಇಪ್ಪತ್ತು ವರ್ಷಗಳೇ ಕಳೇದುಹೋಯ್ತಲ್ಲ ಅವಳನ್ನು ನೋಡಿ....ಕೊನೆಯ ಮಗಳೆಂದು ಮನೆಯವರೆಲ್ಲರ ಮುದ್ದು ಹೆಚ್ಚಾಯ್ತಲ್ಲ ಅವಳಿಗೆ ...ಅವಳಿಗಿಂತ ಹತ್ತು ವರ್ಷಕ್ಕೆ ದೊಡ್ಡವನಲ್ಲವೇ ರಾಘವ ....ಅವಳು ಹುಟ್ಟಿದಾಗ ಎಲ್ಲರಿಗಿಂತ ಸಂತೋಷಪಟ್ಟವನು ಅವನೇ ಅಲ್ಲವೇ.. ಸಣ್ಣಗೆ ನರಳಿದ ಧ್ವನಿ ಕೇಳಿದಂತಾಗಿ ಸೀತಮ್ಮನ ಯೋಚನಾ ಸರಣಿ ತುಂಡಾಯ್ತು. ಗಂಡನ ಮುಖದ ಬಳಿ ಬಾಗಿ ಕೇಳಿದರು ಉಸಿರಾಟದ ಶಬ್ದದ ವಿನಃ ಬೇರೇನೂ ಕೇಳಿಸದೆ ಮತ್ತೆ ಮಂಕಾಗಿ ಕುಳಿತರು ಸೀತಮ್ಮ.

ಪಾಪ ಮಗ ರಾಘವ ಸ್ವಲ್ಪ ಸಿಟ್ಟು ಜಾಸ್ತಿ, ಆದರೂ ತುಂಬ ಒಳ್ಳೆಯ ಗುಣ. ಚಿಕ್ಕ ವಯಸ್ಸಿಗೇ ಸಣ್ಣದಾಗಿ ಅಡಿಕೆ ವ್ಯಾಪಾರ ಶುರು ಮಾಡಿದ. ಕಷ್ಟಪಟ್ಟು ದುಡಿದ. ಮನೆಯ ಜವಾಬ್ದಾರಿಗೆ ಹೆಗಲು ಕೊಟ್ಟ. ಇಲ್ಲವಾದರೆ ಕೇವಲ ಇವರ ವೈದಿಕ ವೃತ್ತಿಯಲ್ಲಿ ಮನೆ ನಡೆಸುವುದು ಕಷ್ಟವಿತ್ತು.ಈಗೇನೋ ಅವನ ವ್ಯಾಪಾರ ಚೆನ್ನಾಗಿ ನಡೆದು ಒಳ್ಳೆಯ ಸ್ಥಿತಿಯಲ್ಲಿದ್ದೇವೆ. ಅದರೆ ಅಗ ಹೀಗಿರಲಿಲ್ಲ. ದೊಡ್ಡ ಮಗಳ ಮದುವೆಗೆ ಅವನೇ ದುಡ್ಡು ಹೊಂದಿಸಿದ. ಕೊನೆಯ ತಂಗಿ ಆಶಾಳನ್ನು ಕಂಡರೆ ತುಂಬ ಪ್ರೀತಿ ...ಓದಿನಲ್ಲಿ ತುಂಬ ಚುರುಕಿದ್ದ ಅವಳು ಪಿಯುಸಿ ಮುಗಿಸಿ, ಡಾಕ್ಟರ್ ಆಗಬೇಕೆಂದು ಆಸೆಪಟ್ಟಳು. ಅಷ್ಟೆಲ್ಲಖರ್ಚು ಭರಿಸುವ ಶಕ್ತಿ ತಮಗಿರಲಿಲ್ಲ. ಆದರು ಅದರ ಸಂಪೂರ್ಣ ಜವಾಬ್ದಾರಿಯನ್ನು ತಾನೇ ಹೊತ್ತುಕೊಂಡು , ನಮ್ಮಿಬ್ಬರನ್ನು ಒಪ್ಪಿಸಿ, ಸಾಲ ಮಾಡಿ ಅವಳನ್ನು ದೂರದ ದಾವಣಗೆರೆಯ ಮೆಡಿಕಲ್ ಕಾಲೇಜಿಗೆ ಸೇರಿಸಿ , ಉಳಿಯಲು ಹಾಸ್ಟೆಲ್ ವ್ಯವಸ್ಥೆ ಮಾಡಿದ. ತನ್ನ ತಂಗಿ ದಾಕ್ಟರ್ ಆಗುತ್ತಾಳೆಂದು ಎಲ್ಲರ ಬಳಿ ಎಷ್ಟು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದ! ತಾನು ಓದಲಾಗದ್ದನ್ನು ತನ್ನ ತಂಗಿ ಓದುತ್ತಿದ್ದಾಳೆಂಬ ತೃಪ್ತಿ ಅವನಿಗೆ.

ಅವಳೂ ಚೆನ್ನಾಗಿ ಓದಿದಳು. ಅವಳ ಓದು ಮುಗಿಯುವ ವೇಳೆಗೆ ರಾಘವ ಅವಳ ಓದಿಗೆಂದು ಮಾಡಿದ ಸಾಲವನ್ನೆಲ್ಲ ತೀರಿಸಿದ್ದ. ಇನ್ನೇನು ನಮ್ಮ ಊರಿನಲ್ಲೆ ಕ್ಲಿನಿಕ್ ತೆಗೆದು ಒಳ್ಳೆಯ ಗಂಡನ್ನು ನೋಡಿ ಮದುವೆ ಮಾಡಿಬಿಟ್ಟರೆ ತನ್ನ ಜವಾಬ್ದಾರಿ ಮುಗಿದಂತೆ ಎಂದು ಕನಸು ಕಾಣುತ್ತಿದ್ದವನಿಗೆ ಆಶಾ ದೊಡ್ಡ ಆಘಾತ ನೀಡಿದ್ದಳು. ಓದು ಮುಗಿಸಿ ಬಂದವಳೇ ಬೆಂಗಳೂರಿನಲ್ಲಿ ತನಗೆ ಕೆಲಸ ಸಿಕ್ಕಿರುವುದಾಗಿಯೂ ಅಲ್ಲಿಗೇ ಹೋಗುತ್ತೇನೆಂದು ಹಠ ಹಿಡಿದಳು. ಅದಕ್ಕೂ ಒಪ್ಪಿಯಾಯಿತು. ನಂತರ ನಿಧಾನವಾಗಿ ತನ್ನ ಸಹಪಾಠಿಯಾದ ಜೋಸೆಫ್ ಅನ್ನು ಇಷ್ಟಪಟ್ಟಿರುವುದಾಗಿಯೂ ಅವನನ್ನೇ ಮದುವೆಯಾಗುತ್ತೇನೆಂದು ಹೇಳಿದಳು.
ಆಗ ರಾಘವನಿಗೆ ಬಂದ ಸಿಟ್ಟನ್ನು ನೋಡಿ ತನಗೂ ಭಯವಾಗಿತ್ತಲ್ಲವೇ , ಚಿಕ್ಕವಳಿದ್ದಾಗ ಕೂಡ ನನಗೂ ಅವಳ ಮೇಲೆ ಕೈ ಮಾಡಲು ಬಿಡದಿದ್ದವ ಅಂದು ಕೆನ್ನೆಗೊಂದು ಬಿಗಿದಿದ್ದ.
ಅವಳು ಜಗ್ಗದಿದ್ದಾಗ ಕುಳಿತು ಕಣ್ಣೀರಿಟ್ಟಿದ್ದ. ಮಾತನಾಡುವುದು ಸುಲಭ ಪುಟ್ಟಿ ಬೇರೆ ಜಾತಿ ಧರ್ಮದವರನ್ನು ಮದುವೆಯಾಗಿ ಅವನ ಜೊತೆ ಅವನ ಮನೆಯವರ ಜೊತೆ ಹೊಂದಿಕೊಂಡು ಬಾಳುವುದು ಕಷ್ಟ ಅರ್ಥ ಮಾಡಿಕೋ ಎಂದು ಗೋಗರೆದ... ಆದರೆ ಅವಳಿಗೇನಾಗಿತ್ತೋ ಯಾಕಷ್ಟು ಹಠ ಹಿಡಿದಳೋ.... ನಮ್ಮ ಯಾರ ಮಾತೂ ಕೇಳಲೇ ಇಲ್ಲ.
ಅಂದು ಈ ಚಿಕ್ಕ ಊರಿನಲ್ಲಿ ಅಂತರಜಾತೀಯ ವಿವಾಹ ಚಿಕ್ಕ ವಿಷಯವಾಗಿರಲಿಲ್ಲವಲ್ಲ ...ಊರಿನಲ್ಲಿ ವೈದಿಕ ಮನೆತನವೆಂದು ಹೆಸರಾಗಿದ್ದ ಮನೆ ನಮ್ಮದು. ಇವರಿಗೆ , ರಾಘವನಿಗೆ ಊರ ಜನರನ್ನೆದುರಿಸುವುದು ಹೇಗೆಂಬ ಚಿಂತೆಯಿತ್ತು.
ಅವಳು ಆ ಮದುವೆಯಾದರೆ ಇನ್ನೆಂದು ಈ ಮನೆಗೆ ಈ ಊರಿಗೆ ಕಾಲಿಡುವಂತಿಲ್ಲ, ತಮ್ಮ ಪಾಲಿಗೆ ಅವಳು ಸತ್ತಂತೆಯೆ ಸರಿ ಎಂದುಬಿಟ್ಟ ರಾಘವ. ಅವನು ಹೇಳುವುದು ಸರಿಯೂ ಇತ್ತು. ಈ ಊರಿನಲ್ಲಿ ನಾವು ಬದುಕಿ ಬಾಳಬೇಕಿತ್ತು.
ಅವಳು ಮನೆ ಬಿಟ್ಟು ಹೊರಟಳು... ತಮ್ಮ ಪ್ರೀತಿಯ ಮಗಳ ಈ ನಿರ್ಧಾರ ಇವರಿಗೆಷ್ಟು ಆಘಾತ ನೀಡಿತ್ತೆಂದರೆ ಅನೇಕ ದಿನಗಳವರೆಗೆ ಮಂಕಾಗಿಬಿಟ್ಟಿದ್ದರಲ್ಲವೆ ..ತನ್ನ ಸ್ಥಿತಿಯೂ ಹಾಗೇ ಆಗಿತ್ತು.

ನಂತರ ರಾಘವನಂತೂ ಅವಳ ಹೆಸರೆತ್ತಿದರೆ ಉರಿದು ಬೀಳುತ್ತಿದ್ದ. ಅವಳ ಓದಿಗಾಗಿ ತನ್ನ ಮದುವೆಯನ್ನೂ ಮುಂದೆ ಹಾಕಿದ್ದ ಪಾಪ. ಹತ್ತು ವರ್ಷದ ಹಿಂದಿರಬೇಕು ...ಒಮ್ಮೆ ಫೋನ್ ಮಾಡಿದ್ದಳಲ್ಲವೆ ... ನಿಮ್ಮನ್ನೆಲ್ಲ ನೋಡಬೇಕೆನ್ನಿಸುತ್ತಿದೆಯಮ್ಮ ಬರಲಾ ..ಕೇಳಿದ್ದಳು. ಕಾಲ ಎಷ್ಟೋ ಬದಲಾಗಿತ್ತು . ನಮ್ಮಿಬ್ಬರಿಗೂ ಅವಳ ಮೇಲಿದ್ದ ಕೋಪ ಕಡಿಮೆಯಾಗಿ ವಾತ್ಸಲ್ಯ ತಲೆಯೆತ್ತಿತ್ತು. ಅವಳ ಆಗಿನ ಅನಿವಾರ್ಯತೆ ಏನಿತ್ತೋ ಏನೋ...ಪಾಪ ಬಾ ಮನೆಗೆ ಎನ್ನಬೇಕೆಂದು ನಾಲಿಗೆ ತುದಿಗೆ ಬಂದರೂ, ರಾಘವನನ್ನು ಕೇಳದೆ ಬಾ ಎನ್ನುವ ಧೈರ್ಯವಿರಲಿಲ್ಲ ತಮಗಿಬ್ಬರಿಗೂ.... ವಿಷಯ ತಿಳಿದ ರಾಘವ ಕೂಗಾಡಿಬಿಟ್ಟಿದ್ದ. ಅವಳು ಬಂದರೆ ತಾನೇ ಮನೆ ಬಿಟ್ಟು ಹೋಗಿಬಿಡುತ್ತೇನೆ ಎಂದು ಹೇಳಿಬಿಟ್ಟಿದ್ದ. ಪಾಪ ಸೊಸೆ ಮೀನಾ ಅವನ ಮನವೊಲಿಸಲು ಎಷ್ಟೋ ಪ್ರಯತ್ನ ಪಟ್ಟಿದ್ದಳು. ಆದರೂ ಅವ ಒಪ್ಪಲಿಲ್ಲ.

ಇತ್ತೀಚೆಗೆ ನಾಲ್ಕಾರು ವರ್ಷಗಳಿಂದಂತೂ ಇವರಿಗೆ ಆ ಮಗಳ ಹಂಬಲ ಹೆಚ್ಚಾಗಿತ್ತು. ತಾನು ಕಣ್ಮುಚ್ಚುವುದರೊಳಗಾಗಿ ಒಮ್ಮೆ ಅವಳನ್ನು ನೋಡಬೇಕೆಂದು ಹೇಳುತ್ತಿರುತ್ತಿದ್ದರು. ಇಂದು ಬರುತ್ತಿದ್ದಾಳಂತೆ , ಯಾವ ಸೌಭಾಗ್ಯಕ್ಕೆ? ಇವರಿಗೆ ಎಚ್ಚರವಾಗಿ ನೋಡಲಾಗುತ್ತದೆಯೋ ಇಲ್ಲವೋ....ಇಬ್ಬರೂ ಹಠಮಾರಿಗಳೇ ..ಅವಳು ಆಗ ತನ್ನ ಹಠ ಬಿಡದೇ ನಮ್ಮನ್ನು ನೋಯಿಸಿದಳು. ಇವನು ಈಗ ತನ್ನ ಹಠ ಸಾಧಿಸುತ್ತಿದ್ದಾನೆ. ಇವರಿಬ್ಬರ ಹಠ ಸಾಧನೆಗೆ ಬಲಿಯಾದದ್ದು ತಮ್ಮಿಬ್ಬರ ಮಮತೆ ......   ಮತ್ತೊಮ್ಮೆ ನರಳಿದ ಧ್ವನಿ ಕೇಳಿ ಸೀತಮ್ಮ ತಮ್ಮ ನೆನಪಿನಂಗಳದಿಂದ ಹೊರಬಂದರು.

ಉಸಿರಾಡಲು ತೊಂದರೆ ಪಡುತ್ತಿದ್ದವರನ್ನು ನೋಡಿ ಗಾಭರಿಯಾದ ಸೀತಮ್ಮ ಮಗನನ್ನು ಕೂಗಿದರು...ಮಕ್ಕಳು ಮೊಮ್ಮಕ್ಕಳೆಲ್ಲ ಓಡಿ ಬಂದರು ...ಎಲ್ಲರೂ ನೋಡುತ್ತಿದ್ದಂತೆ ಒಮ್ಮೆ ಕಣ್ಬಿಟ್ಟ ರಾಮಯ್ಯ ಸುತ್ತಲೂ ದೃಷ್ಟಿ ಹರಿಸಿ ಎಲ್ಲರನ್ನೂ ನೋಡಿದರು...ನಂತರ ಅವರ ಕಣ್ಣು ಮುಚ್ಚಿತು. ಉಸಿರಾಟ ನಿಂತಿತು.

ಆಗಷ್ಟೇ ಗಂಡ ಮತ್ತು ಎದೆಯೆತ್ತರ ಬೆಳೆದ ಮಗನೊಡನೆ ಆಟೋ ಇಳಿದು ಹೊರಬಾಗಿಲು ಪ್ರವೇಶಿಸಿದ ಆಶಾಳಿಗೆ ಅಪ್ಪನ ಕೋಣೆಯಿಂದ ಕೇಳಿಬರುತ್ತಿದ್ದ ಅಮ್ಮನ ಅಳು ಸ್ವಾಗತಿಸಿತು.



13 comments:

  1. ಕಟ್ಟುಪಾಡುಗಳಿಗಿಂತಾ ಮನೆಯ ಸ್ಥಿತಿ ಮತ್ತು ಜವಾಬ್ದಾರಿ ವಹಿಸಿದ ಅಣ್ಣನ ಬಗ್ಗೆ ಪ್ರೀತಿಯ ತಂಗಿ ತಿಳಿದುಕೊಳ್ಳದೇ ಹೋದಳಲ್ಲಾ ಎನ್ನುವ ಕೊರಗು ಒಂದೆಡೆ..ಪ್ರೀತಿಯ ಕಿರಿಮಗಳನ್ನು ನೋಡಲಾಗದೇ ಕೊನೆಯುಸಿರೆಳೆವರಲ್ಲಾ ಎಂಬ ಗಂಡನ ಬಗೆಗಿನ ಆಕೆಯ ಕಾಳಜಿ..ಪ್ರೀತಿ...ಎಲ್ಲಾ ತಾಕಲಾಟಗಳ ಸಮರ್ಥ ಪ್ರಸ್ತಾವನೆ ಆಅಗಿದೆ ಸುಮಾ ನಿಮ್ಮ ಕಥೆಯಲ್ಲಿ... ಚನ್ನಾಗಿದೆ. ಕಥೆ..ಎಲ್ಲಾದ್ರೂ ಪತ್ರಿಕೆಗೆ ಕಳುಹಿಸಿ..ಶುಭವಾಗಲಿ...

    ReplyDelete
  2. tumba touching story re,

    inthaha kathegalu kanmare agtaa ive

    bareyuttiri

    ReplyDelete
  3. nice. suma idu eega bahala havyakara maneluinter caste marriage bhoota hokkide.............

    ReplyDelete
  4. ತುಂಬ ಕುಶಲತೆಯಿಂದ ಕತೆ ಹೆಣೆದಿದ್ದೀರಿ. ಮನ ಮಿಡಿಯುವ ಕತೆ.

    ReplyDelete
  5. kathe haneda reeti tumba ishtavaayitu.. bareyuttiri

    ReplyDelete
  6. hmmm...sad.
    ಏನು ಹೇಳಬೇಕೋ ತಿಳಿತಿಲ್ಲ ಸುಮಕ್ಕ. ಕಥೆ ನಿರೂಪಣೆ ಇಷ್ಟ ಆಯ್ತು. ಚನಾಗಿ ಬರದ್ದೆ.

    ReplyDelete
  7. ಒಳ್ಳೆಯ ಕಥೆಗಾರ್ತಿ ನೀವು. ಮನ ಮುಟ್ಟುವ ಕಥೆ...

    ಬಿಡುವು ಮಾಡಿಕೊಂಡು ನನ್ನ ಬ್ಲಾಗುಗಳಿಗೂ ಬನ್ನಿರಿ:
    www.badari-poems.blogspot.com
    www.badari-notes.blogspot.com
    www.badaripoems.wordpress.com

    Face book Profile : Badarinath Palavalli

    ನಿಮ್ಮ ಓದಿಗೆ ನನ್ನ ಕವನಗಳು ಕಾದಿವೆ ಮತ್ತು ನಿಮ್ಮ ಅಭಿಪ್ರಾಯದ ಕಾಮೆಂಟುಗಳು ನನಗೆ ದಾರಿ ದೀಪ.

    ReplyDelete
  8. ಸುಮ ಮೇಡಮ್,
    ಕತೆ ಮನವನ್ನು ಕಲಕುತ್ತದೆ. ಸಂಸಾರದೊಳಗಿನ ತಾಕಲಾಟಗಳ ವಿಚಾರವನ್ನು ಸೊಗಸಾಗಿ ನಿರೂಪಿಸಿದ್ದೀರಿ...

    ReplyDelete
  9. Very Touching indeed suma...

    Beautifully you have narrated the story...

    Keep writing.

    ReplyDelete
  10. ಒಂದು ಮಾರ್ಮಿಕ ಕಥೆ. ಚೆನ್ನಾಗಿದೆ...

    ReplyDelete
  11. ಕಥೆ ತುಂಬಾ ಸಮರ್ಥಕವಾಗಿ ಹೆಣೆದಿದ್ದಿರಾ...

    ReplyDelete
  12. ಉತ್ತಮ ಭಾವಪೂರ್ಣ ಕಥೆ. ಆಕಸ್ಮಿಕವಾಗಿ ಬಂದ ನನಗೆ ನಿಮ್ಮ ಬ್ಲಾಗ್ ತುಂಬಾ ಹಿಡಿಸಿದೆ. ಧನ್ಯವಾದ.

    ReplyDelete