14 Dec 2011

ಗಡ್ಡದ ರಾಮಕೃಷ್ಣ

ಜೈ ಜೈ ವಿಠ್ಠಲ ಪಾಂಡುರಂಗ ...
ಜಯ ಹರಿ ವಿಠಲ ಪಾಂಡುರಂಗ...
ವಿಠ್ಠಲ ವಿಠ್ಠಲ ಪಾಂಡುರಂಗ...
 ಅಂಗಳದ ತುದಿಯ ದಣಪೆಯ ಬಳಿ ಹೀಗೆ ಹಾಡಿಕೊಳ್ಳುತ್ತ ಗಡ್ಡದ ರಾಮಕೃಷ್ಣ ತನ್ನ ಒಂದೇ ಹ್ಯಾಂಡಲ್ಲಿನ ವಿಚಿತ್ರ ಸೈಕಲ್ಲನ್ನು ನಿಲ್ಲಿಸುವ ಪ್ರಯತ್ನದಲ್ಲಿದ್ದ. ಅವನಿನ್ನೇನು ಹತ್ತಿರ ಬಂದೇ ಬಿಡುತ್ತಾನೆಂಬ ಭಯದಲ್ಲಿ ಜಗುಲಿ ಕಟ್ಟೆಯಲ್ಲಿ ಕುಳಿತು ಪಕ್ಕದಮನೆ ಪದ್ದಿಯೊಡನೆ "ಎತ್ಗಲ್ಲು" ಆಡುತ್ತಿದ್ದವಳು, ಅವಳನ್ನೂ ಎಳೆದುಕೊಂಡೇ ಒಳಗೋಡಿ ಬಂದೆ.
ಸೀದಾ ಹಿತ್ತಲ ಕಡಿಮಾಡಿನಲ್ಲಿ ಕುಳಿತು ತೆಂಗಿನ ಗರಿಗಳಿಂದ ಕಡ್ಡಿ ಬೇರೆ ಮಾಡುತ್ತಿದ್ದ ಅಜ್ಜನ ಬಳಿ ಓಡಿ ಬಂದು " ಅಜ್ಜ ಅಜ್ಜ ಅಲ್ಲಿ ಅವನು  ಬಂದಿದ್ದಾನಜ್ಜ... ಗಡ್ಡದ ರಾಮಕೃಷ್ಣ ....ನೋಡು .... ಬಾ ಬೇಗ" ಎಂದು ಕೈ ಹಿಡಿದು ಎಳೆದೆ . ನಿಧಾನವಾಗಿ ಅಜ್ಜ ಏಳುತ್ತಿದ್ದರೆ ನನಗೆ ಆತಂಕ ಎಲ್ಲಿ ಅವನ ಡ್ಯಾನ್ಸ್ ತಪ್ಪಿ ಹೋಗುತ್ತೋ ಅಂತ.

ನಿಮಗೆ ಗೊತ್ತಾ ಗಡ್ಡದ ರಾಮಕೃಷ್ಣನ್ನ ಕಂಡರೆ ನಂಗೆ ತುಂಬ ಭಯ ....ಅವನು ಕಳ್ಳ ಅಂತೆ .... ಮಕ್ಕಳನ್ನೆಲ್ಲ ಕದ್ದು ಕರೆದುಕೊಂಡು ಹೋಗಿಬಿಡುತ್ತಾನಂತೆ....ಹಾಗಂತ ಪದ್ದಿಯ ಅಮ್ಮ ಗಂಗತ್ತೆ ,ಹೇಳುತ್ತಿದ್ದರು. ಅವರು ಮಾತ್ರ ಹೇಳಿದರೆ ನಾನು ನಂಬುತ್ತಿರಲಿಲ್ಲ. ಆ ಗಡ್ಡದ ರಾಮಕೃಷ್ಣನೇ ತನ್ನ ಸೈಕಲ್ಲಿಗೊಂದು " ನಾನು ನಾಲ್ಕನೆಯ ಕಳ್ಳ " ಅಂತ ಬೋರ್ಡ್ ಹಾಕ್ಕೊಂಡಿದ್ದ. ಅದಕ್ಕೆ ನಂಗೆ ಭಯ ಆಗ್ತಿತ್ತು ಅವನು ಬಂದರೆ.
ಆದರೆ ಅವನ ಬಗ್ಗೆ ನನಗೆ ತುಂಬ ಕುತೂಹಲ , ನಂಗೇಂತಾನೇ ಅಲ್ಲ ನಮ್ಮೂರಿನ ಎಲ್ಲ ಹುಡುಗರಿಗೂ ಅವನೊಬ್ಬ ಬೇರೆಯದೇ ಲೋಕದಿಂದ ಬಂದ ಜೀವಿಯಂತೆ ಗೋಚರಿಸುತ್ತಿದ್ದ. ಎಲ್ಲಕ್ಕಿಂತ ಇಷ್ಟವಾಗುತ್ತಿದ್ದುದು ಅವನ ವಿಚಿತ್ರ ಸೈಕಲ್ . ಅದಕ್ಕೆ ಒಂದೇ ಹ್ಯಾಂಡಲ್ ಇತ್ತು  .  ಕಬ್ಬಿಣದ ಸೀಟು. ಸೀಟಿನ ಮೇಲೊಂದು ಮಾಡಿನಂತಹ ಕಮಾನು. ಅದಕ್ಕೆ ಬಣ್ಣ ಬಣ್ಣದ ಕಾಗದದ ಅಲಂಕಾರ . ಆ ಸೈಕಲ್ ನೋಡಿದಾಗಲೆಲ್ಲ ನನಗೆ ನನ್ನಪ್ಪನ ಬಳಿಯೂ ಇಂತಹದ್ದೇ ಸೈಕಲ್ ಇರಬೇಕಿತ್ತು ಅನ್ನಿಸುತ್ತಿತ್ತು!  ಅವನ ಸೈಕಲ್ ಎಷ್ಟು ವಿಚಿತ್ರವಾಗಿತ್ತೋ ಅದಕ್ಕಿಂತಲೂ ವಿಚಿತ್ರವಾಗಿರುತ್ತಿತ್ತು ಅವನ ವೇಷಭೂಷಣಗಳು.
ಸೊಂಟಕ್ಕೆ ಕಂಬಳಿಯಂತಹದ್ದೊಂದು  ತುಂಡು , ಮೇಲ್ಭಾಗಕ್ಕೆ ವಿಧ ವಿಧ ರುದ್ರಾಕ್ಷಿ ಸರಗಳು , ಎದೆಯಿಂದ ಹೊಟ್ಟೆಯವರೆಗೂ ಇದ್ದ ಪೊದೆ ಪೊದೆ ಕಪ್ಪು ಬಿಳಿ ಕೂದಲು , ಉದ್ದನೆಯ ಗಡ್ಡ , ತಲೆಯ ಮೇಲೆ ನಮ್ಮ ಕನ್ನಡ ಪಠ್ಯಪುಸ್ತಕದಲ್ಲಿದ್ದ ಋಷಿಗಿದ್ದಂತಹುದೇ ಜಠೆ , ಕಾಲಿನಲ್ಲಿ ಅಗಲವಾದ ಯಕ್ಷಗಾನದವರು ಕಟ್ಟಿಕೊಳ್ಳುವಂತಹ ಗೆಜ್ಜೆ , ಒಂದು ಕೈಯಲ್ಲಿ ಏನೋ ಗಂಟು , ಇನ್ನೊಂದು ಕೈಯಲ್ಲಿ ಹರಿಕಥೆ ದಾಸರು ಹಿಡಿಯುವಂತಹ ಮರದ ತಾಳ .......ಚಂದ ಮಾಮ , ಬಾಲಮಿತ್ರದ ಕಥೆಗಳ ಯಾವುದೋ ಪಾತ್ರವೊಂದು ಮನೆ ಬಾಗಿಲಿಗೆ ಬಂದು ನಿಂತಂತೆ ಭಾಸವಾಗುತ್ತಿತ್ತು.
ಅಜ್ಜನ ಕೈ ಹಿಡಿದು ನಡುಮನೆಯವರೆಗೆ ಬಂದವಳು , ಜಗುಲಿಗೆ ಕರೆದೊಯ್ಯುತ್ತಿದ್ದ ಅವರ ಕೈ ಕೊಸರಿಕೊಂಡು ಅಲ್ಲೆ ಇದ್ದ ಕಂಭದ ಮರೆಯಲ್ಲಿ ಅವಿತು ಹೊರಗಿಣುಕಿದೆ. ಜಗುಲಿಯಲ್ಲಿ  ಗಡ್ಡದ ರಾಮಕೃಷ್ಣ ತನ್ನ ಗಂಟು ಬದಿಗಿಟ್ಟು ಕುಣಿಯಲು ಪ್ರಾರಂಭಿಸಿದ್ದ.
ಜೈ ಜೈ ವಿಠ್ಠಲ ಪಾಂಡುರಂಗ ...
ಜಯ ಹರಿ ವಿಠಲ ಪಾಂಡುರಂಗ...
ವಿಠ್ಠಲ ವಿಠ್ಠಲ ಪಾಂಡುರಂಗ...
ಜಯ ಹರಿ ವಿಠಲ ಪಾಂಡುರಂಗ
ಅವನು ಹಾರುತ್ತಾ ಕುಣಿಯುವಾಗ ಅವನ ಕಾಲಿನ ಗೆಜ್ಜೆ , ಕೈಯಲ್ಲಿನ ತಾಳದ ಶಬ್ದಕ್ಕೆ ನನಗೂ ಕುಣಿಯಬೇಕೆನ್ನಿಸುತ್ತಿತ್ತು. ಐದು ನಿಮಿಷ ಹೀಗೇ ಕುಣಿದ ಅವ ನಂತರ ತನ್ನ ಗಂಟು ಬಿಚ್ಚಿದ . ಅಜ್ಜ  ಕೊಟ್ಟ ಸೇರು ಗೋಟಡಕೆ ಅವನ ಜೋಳಿಗೆ ಸೇರಿತು .  ಅಲ್ಲಿಂದ ಇನ್ನೊಂದು ಪುಟ್ಟ ಗಂಟು ತೆಗೆದ ಅವನು ಅದನ್ನು  ಅಲ್ಲೇ ನಿಂತಿದ್ದ ನನ್ನ ಅಮ್ಮನಿಗೆ   " ನೀವು ಕಳೆದ ಬಾರಿ ಬಂದಾಗ ಕೇಳಿದ್ದಿರಲ್ಲ ರಂಗೋಲಿ , ತೆಗೆದುಕೊಳ್ಳಿ ಅಮ್ಮ " ಎಂದು ಕೊಟ್ಟ .
ಗಡ್ಡದ ರಾಮಕೃಷ್ಣ ನನಗೆ ವಿಚಿತ್ರವೆನ್ನಿಸುತ್ತಿದ್ದುದು ಇಂತಹುದಕ್ಕೆ . ಮನೆಗೆ ಬೇಕಾದಷ್ಟು ಭಿಕ್ಷುಕರು , ದೇವರ ಪಟ ಹಿಡಿದು ಬೇಡುವವರು , ಹಾಡುವವರು ಬರುತ್ತಿದ್ದರು . ಎಲ್ಲರೂ ಭಿಕ್ಷೆ ತೆಗೆದುಕೊಂಡು ಹೋಗುತ್ತಿದ್ದರು . ಆದರೆ ಇವನೊಬ್ಬ ಹೀಗೆ ಕುಣಿದು ತನ್ನ ಬಳಿ ಇದ್ದುದನ್ನೂ ಕೊಟ್ಟು ಹೋಗುತ್ತಿದ್ದ.

ಅವನು ನಮ್ಮ ಮನೆಯ ಅಂಗಳದಿಂದ ದೂರ ಹೋಗುವವರೆಗೂ ಅವನನ್ನು ಎಚ್ಚರಿಕೆಯಿಂದ ಗಮನಿಸಿ ನಂತರ ಹೊರಬಂದೆವು , ನಾನು ಮತ್ತು ಪದ್ದಿ.
" ಅಬ್ಬ ಸಧ್ಯ ನಾವು ರಸ್ತೆಯಲ್ಲಿ ಆಡಲು ಹೋಗಲಿಲ್ಲ ಇವತ್ತು ಅಲ್ಲವೇನೇ , ಮನು , ವಿನು ,ನೀತ ಎಲ್ಲ ಅಲ್ಲಿ ಕೆರೆ ಏರಿಯ ಹತ್ತಿರ ಅಡ್ತಾ ಇದ್ದಾರೆ . ಆ ರಾಮಕೃಷ್ಣ ಯಾರನ್ನಾದರೂ ಕದ್ದು ಬಿಟ್ಟರೆ ! " ಭಯದಿಂದ ಕಣ್ಣರಳಿಸಿದಳು ಪದ್ದಿ.
ನನಗೂ  ತುಂಬ ಭಯವಾಯ್ತು. ಯಾವಾಗಲೂ ಹೀಗೆ , ಇವ ಬಂದು ಹೋದ ದಿನವೆಲ್ಲ ನಾವು ಊರಿನ ಎಲ್ಲ ಹುಡುಗರೂ ಸುರಕ್ಷಿತವಾಗಿದ್ದರೋ ಇಲ್ಲವೋ ಎಂದು ನೋಡುತ್ತಿದ್ದೆವು , ಎಂದೂ ಯಾರಿಗೂ ಏನೂ ಆಗಿರಲಿಲ್ಲ. ಇಂದೂ ಏನೂ ಆಗೊಲ್ಲ ಬಿಡು ಎಂದರೂ ಒಳಗೊಳಗೇ ನನಗೆ ಭಯವಿತ್ತು.
ನಮ್ಮ ಮನೆಯಲ್ಲಿ ಇದನ್ನು ಹೇಳಿದರೆ ಅಪ್ಪ , ಅಮ್ಮ, ಅಜ್ಜ ಎಲ್ಲ ನಕ್ಕು ಬಿಡುತ್ತಿದ್ದರು . ಅವನು ಇಷ್ಟು ಬಾರಿ ನಮ್ಮೂರಿಗೆ ಬಂದಿದ್ದಾನಲ್ಲ! ಯಾರನ್ನಾದರೂ ಕದ್ದಿದ್ದಾನ ?  ಹಾಗೆಲ್ಲ ಏನೂ ಆಗಲ್ಲ ಎಂದು ಬಿಡುತ್ತಿದ್ದರು.

ಆದ್ದರಿಂದಲೇ ನಾವು  ಯಾವಾಗಲೂ ಪದ್ದಿಯ ಮನೆಗೆ ಹೋಗಿ ಅವರಮ್ಮನ ಬಳಿ ಅವನ ಬಗ್ಗೆ ನೂರೆಂಟು ಪ್ರಶ್ನೆ ಕೇಳುತ್ತಿದ್ದೆವು . ಅವರು ,ಅವನು ಘೋರ ಕಳ್ಳನೆಂದು ತಮ್ಮ ತೋಟದಲ್ಲೇ ಎಷ್ಟೋ ಬಾರಿ ಕದ್ದಿದ್ದಾನೆಂದೂ ಹೇಳುತ್ತಿದ್ದರು. ಅಲ್ಲದೆ ಅವರ ತವರೂರಿನಲ್ಲಿ ಸುಮಾರು ಚಿಕ್ಕ ಮಕ್ಕಳು ಇವನು ಬಂದು ಹೋದ ಮೇಲೆ ಕಾಣೆಯಾಗುತ್ತಿದ್ದರೆಂದೂ , ಹಾಗಾಗಿ ನಾವ್ಯಾರೂ  ರಸ್ತೆಯ ಬಳಿ ಆಡಲು ಹೋಗಲೇ ಬಾರದೆಂದೂ ಹೇಳುತ್ತಿದ್ದರು. ನಾವು ನಾಲ್ಕು ದಿನ ಭಯ ಮಿಶ್ರಿತ ಆತಂಕದಲ್ಲಿ ಮನೆಯೊಳಗೇ ಆಡುತ್ತಿದ್ದೆವು.

 ಇಂದೂ ಹಾಗೇ ಅವಳ ಮನೆ ಕಡೆ ಓಡಿದೆವು. ಅವಳ ಮನೆ ಬಾಗಿಲು ಮುಚ್ಚಿತ್ತು. ತಳ್ಳಿದರೂ ತೆಗೆಯಲಿಲ್ಲ
"ಒಳಗಿನಿಂದ ಚಿಲಕ ಹಾಕಿದೆ , ಅಮ್ಮ ಸ್ನಾನಕ್ಕೆ ಹೋಗಿರಬೇಕು , ನಾವು ಹಿತ್ತಿಲ ಬಾಗಿಲಿಂದ ಹೋಗೋಣ ಬಾ "...ಎಂದ ಪದ್ದಿಯ ಜೊತೆಗೆ  ಅವರ ಕೊಟ್ಟಿಗೆಯನ್ನು ಬಳಸಿ ಹಿತ್ತಿಲ ಬಾಗಿಲಿಂದ ಒಳ ಹೋದೆವು.
ಪದ್ದಿಯ ಅಜ್ಜಿಯ ಕೋಣೆಯಿಂದ ಗುಸು ಗುಸು ಶಬ್ದ ಕೇಳಿಸಿದಂತಾಗಿ ಇಬ್ಬರೂ ಅಲ್ಲಿ ಹಣುಕಿದೆವು. ಕೋಣೆಯಲ್ಲಿ ಪದ್ದಿಯ ಅಪ್ಪ ಅಮ್ಮ ಇಬ್ಬರೂ ಅಜ್ಜಿಯ ಪೆಟ್ಟಿಗೆಯ ಬೀಗವನ್ನು ಒಡೆಯುತ್ತಿದ್ದರು.
ಪದ್ದಿಯ ಅಜ್ಜಿ ಗೌರಜ್ಜಿ ಅಂತ ನಾನು ಅವರನ್ನು ಕರಿಯೋದು , ತುಂಬ ಒಳ್ಳೆಯವರು ....ನಂಗೆ ಪದ್ದಿಗೆ ಅವರು ತುಂಬ ಇಷ್ಟ. ಆದರೆ ಪದ್ದಿಯ ಅಮ್ಮನಿಗೆ ಮಾತ್ರ ಅವರನ್ನು ಕಂಡರಾಗುತ್ತಿರಲಿಲ್ಲ ನಾವು ಅವರ ಕೋಣೆಗೆ ಹೋಗಿ ಮಾತನಾಡುತ್ತ ಕುಳಿತರೆ ಗಂಗತ್ತೆ ಹೊರಗಿನಿಂದಲೇ ಕೂಗಿ ಪದ್ದಿಯನ್ನು ಕರೆಯುತ್ತಿದ್ದರು , ಅಲ್ಲೇನ್ರೆ ನಿಮಗೆ ಹರಟೇ ? ಹೊರಗೆ ಅಂಗಳದಲ್ಲಿ ಆಡಿ ಹೋಗಿ ಎಂದು ಕಳಿಸಿಬಿಡುತ್ತಿದ್ದರು.
ಅಜ್ಜಿಯ ರೂಮಿನಲ್ಲಿ ಒಂದು ಕಬ್ಬಿಣದ ಪೆಟ್ಟಿಗೆಯಿತ್ತು ಅದಕ್ಕೆ ಯಾವಾಗಲೂ ಬೀಗ ಹಾಕಿರುತ್ತಿತ್ತು . ಅದರಲ್ಲೇನಿದೆ ಅಜ್ಜಿ ? ಪದ್ದಿ ಅವರನ್ನು ಕೇಳುತ್ತಿದ್ದಳು. ಅದಕ್ಕೆ ಅಜ್ಜಿ ನನ್ನ ಜೀವವೇ ಅದರಲ್ಲಿದೆ ಎಂದು ನಗುತ್ತಿದ್ದರು.  ನಾನು ನೋಡುತ್ತೇನೆ ತೋರಿಸು ಅಜ್ಜಿ ಎನ್ನುತ್ತಿದ್ದ ಪದ್ದಿಗೆ - ಅದರಲ್ಲಿರೋದೆಲ್ಲ ನಿಂಗೆ ಮತ್ತು ನನ್ನ ಮಗಳು ಮಂಗಳಂಗೇ ... ಆದರೆ ಈಗ ಮಾತ್ರ ತೆಗೆಯಲ್ಲ .... ನಾನು ಹೋದ ಮೇಲೆ ನೀನು ನೋಡು ಆಯ್ತಾ? ಎಂದುಬಿಡುತ್ತಿದ್ದರು.
ಇಂದು  ಬೆಳಿಗ್ಗೆ ಲಕ್ಷ್ಮಿ ಬಸ್ಸಿಗೆ ಗೌರಜ್ಜಿ ಅವರ ಮಗಳ ಮನೆಗೆ ಹೋಗಿದ್ದನ್ನು ನಾನು ನೋಡಿದ್ದೆ. ಈಗ ನೋಡಿದರೆ ಇವರು ಆ ಅಜ್ಜಿಯ ಪೆಟ್ಟಿಗೆ ಒಡೆಯುತ್ತಿದ್ದರು ... ಇವರು ಕಳ್ಳರಾ? ನಾನು ನಿಧಾನವಾಗಿ ಪದ್ದಿಯ ಕೈ ಬಿಡಿಸಿಕೊಂಡು ಮನೆಗೆ ಓಡಿಬಂದೆ.

ಅದಾಗಿ  ತಿಂಗಳಾಗಿರಬಹುದು, ಆ ದಿನ ಪದ್ದಿಯ ಅಜ್ಜಿ ವಾಪಾಸ್ ಬಂದ ದಿನ ಅವರ ಮನೆಯಲ್ಲೇನೊ ಗಲಾಟೆ ಕೇಳುತ್ತಿತ್ತು. ರಾತ್ರಿ ಮಲಗಿದ್ದಾಗ  ಅಪ್ಪನ ಬಳಿ , ಅಮ್ಮ,ಪದ್ದಿಯಮನೆ ಸುದ್ದಿ ಹೇಳುತ್ತಿದ್ದುದು ನಿದ್ದೆ ಬಂದಂತೆ ಮಲಗಿದ್ದ ನನಗೆ ಕೇಳಿಸುತ್ತಿತ್ತು. ಅಮ್ಮ ಹೇಳುತ್ತಿದುದರಲ್ಲಿ ನನಗೆ ಅರ್ಥ ಆಗಿದ್ದು ಇಷ್ಟು - ಅದೇನೋ ಪದ್ದಿಯ ಅಜ್ಜಿಯ ಕಾಸಿನ ಸರ ಕಾಣೆಯಾಗಿದೆಯಂತೆ , ಅದನ್ನು ಪದ್ದಿಯ ಅಮ್ಮನೇ ತೆಗೆದಿದ್ದಾರೆ ಎಂದು ಅಜ್ಜಿ ಕೂಗಾಡುತ್ತಿದ್ದರಂತೆ. ಸ್ವಲ್ಪ ಹೊತ್ತಿನಲ್ಲೇ ಗೌರಜ್ಜಿಗೆ ಹಾರ್ಟ್ ಅಟ್ಯಾಕ್ ಆಗಿ ಕುಸಿದು ಬಿದ್ದರಂತೆ ... ಆಸ್ಪತ್ರೆಗೆ ಸೇರಿಸಿದ್ದಾರಂತೆ ..ಉಳಿಯೋದು ಕಷ್ಟ ಅಂತೆ.
ನನಗೆ ಒಂದು ರೀತಿಯ ಭಯವಾಯ್ತು . ನಿಧಾನವಾಗಿ ಕಣ್ತೆತೆರೆದು , ಅಮ್ಮ ನಿಜಾನಾ ಕೇಳಿದೆ ...  ಅದೆಲ್ಲ ನಿಂಗ್ಯಾಕೆ ತಲೆಹರಟೆ ಸುಮ್ಮನೆ ಮಲಗು ಅಂತ ಅಮ್ಮ ಗದರಿದರು.
ಆದರೆ ನನಗ್ಯಾಕೋ ಅಜ್ಜಿಯ ಪೆಟ್ಟಿಗೆಯ ಬೀಗ ಒಡೆಯುತ್ತಿದ್ದ  ಗಂಗತ್ತೆ , ಶೀಪು ಮಾವ ಕಣ್ಮುಂದೆ ಬಂದು ಇನ್ನೂ ಭಯವಾಗಿ ಅಮ್ಮನನ್ನು ಗಟ್ಟಿಯಾಗಿ ಅಪ್ಪಿ ಮಲಗಿದೆ.

ಮರುದಿನ ನಾನು ಸ್ಕೂಲಿಂದ ಬರುವಾಗ ಪದ್ದಿಯ ಮನೆಯ ಬಳಿ  ತುಂಬ ಜನರಿದ್ದರು . ದಾರಿಯಲ್ಲೇ ಇದ್ದ ಅಮ್ಮ ನನ್ನನ್ನು ಬೇಗ ಮನೆಗೆ  ಕರೆದೊಯ್ದಳು. ಗೌರಜ್ಜಿ ಹೋಗಿಬಿಟ್ಟರು ಪುಟ್ಟ ಎಂದ ಅಮ್ಮನ ಕಣ್ಣಲ್ಲಿ ನೀರಿತ್ತು.
ಮರುದಿನ ನಮ್ಮ ಮನೆಗೆ   ಗೌರಜ್ಜಿ ಮಗಳು ಮಂಗಳತ್ತೆ ಬಂದಿದ್ದಳು.... ಅಳುತ್ತಿದ್ದ ಅವಳು ಏನೇನೋ ಹೇಳುತ್ತಿದ್ದಳು , ಅವಳು ಹೇಳಿದ್ದೆಲ್ಲ ನನಗರ್ಥವಾಗಲಿಲ್ಲವಾದರೂ
" ಕೊನೆಗೂ ಕಾಟ ಕೊಟ್ಟು ನನ್ನಮ್ಮನನ್ನು ಗಂಗತ್ತಿಗೆ ಸಾಯಿಸಿಬಿಟ್ಟರು" ಎಂದದ್ದು ಮಾತ್ರ ಭಯ ಹುಟ್ಟಿಸಿತ್ತು.

ನಾನು ಆಮೇಲೆ ಆಟ ಆಡೋದಿಕ್ಕೂ ಪದ್ದಿಯ ಮನೆ ಕಡೆ ಹೋಗಲಿಲ್ಲ. ಹದಿನೈದಿಪ್ಪತ್ತು ದಿನದ ನಂತರ ಒಂದು ದಿನ ಪದ್ದಿ , ಗಂಗತ್ತೆ ಇಬ್ಬರೂ ನಮ್ಮನೆಗೆ ಬಂದರು . ಯಾಕೆ ಪುಟ್ಟೀ ಆಡಲು ಮನೆ ಕಡೇ ಬರಲೇ ಇಲ್ಲ ನಗುತ್ತಾ ಕೇಳಿದ ಗಂಗತ್ತೆಗೆ ಎನು ಹೇಳಬೇಕೆಂದೇ ನನಗೆ ತಿಳಿಯಲಿಲ್ಲ. ಪದ್ದಿಯೂ ಏನೂ ಆಗದವಳಂತೆ ಖುಷಿಯಾಗಿದ್ದುದನ್ನು ಕಂಡು ನನಗಾಶ್ಚರ್ಯವಾಗಿತ್ತು.

ನಿಮಗೆ ಗೊತ್ತಾ ಈ ಬಾರಿ ಗಡ್ಡದ ರಾಮಕೃಷ್ಣ ಬಂದಾಗ ನನಗ್ಯಾಕೋ ಭಯವೇ ಆಗಲಿಲ್ಲ . ಆರಾಮಾಗಿ ಜಗುಲಿಗೇ ಬಂದು ಅವನ ಸೈಕಲ್ ಅನ್ನೂ ಅವನ ಕುಣಿತವನ್ನೂ ಕಣ್ತುಂಬ ನೋಡಿದೆ. ಅವನು ಹೊರಡುವಾಗ ಟಾಟ ಮಾಡಿದೆ. ಅವನೂ ಖುಷಿಯಿಂದ ಟಾಟ ಮಾಡಿ ತನ್ನ ಒಂಟಿ ಹ್ಯಾಂಡಲ್ ಸೈಕಲ್ ಹತ್ತಿ ದೂರದಲ್ಲಿ ಮರೆಯಾದ.

6 comments:

  1. good narration suma nice to read
    you made me to remember gaddada ramakrishna again after a long period

    ReplyDelete
  2. ಬಾಲ್ಯದ ಒಡನಾಟ, ಹೆದರಿಕೆಗಳು ಇವೆಲ್ಲವನ್ನು ನೆನಪಿಸಿಕೊಂಡಾಗ ಮಜಾ ಇರತ್ತೆ, ಅಲ್ಲವೆ? ನಮ್ಮೊಡನೆ ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು.

    ReplyDelete
  3. ಅಬ್ಬಾ!! ತುಂಬಾ ಚೆನ್ನಾಗಿದೆ. ಒಳ್ಳೆಯ ಬಿಗಿಯಾದ ಸುಂದರವಾದ ನಿರೂಪಣೆ:-) ಗಂಗತ್ತೆಯಂತವರನ್ನೇ ನಂಬುತ್ತಾ ಗಡ್ಡದ ರಾಮಣ್ಣನಂತವರನ್ನ ಸಂಶಯದಿಂದ ನೋಡುವ ಕಾಲ ಇನ್ನೂ ಹೋಗಿಲ್ಲವೆಂಬುದು ವಿಪರ್ಯಾಸವೇ ಸರಿ ಅಲ್ಲವೇ..

    ReplyDelete
  4. ತುಂಬಾ ಇಷ್ಟ ಆತು ಸುಮಾ :) ಇಂಥೋರು ತುಂಬಾ ಜನ ಇದ್ದೊ ನಮ್ಮ ಸುತ್ತ ಮುತ್ತ...

    ReplyDelete
  5. sundara kathe... maastiyavara kathashailiyante majavaagide.

    ReplyDelete