20 Mar 2013

ಚಿತ್ತಾಲರ ಕತೆಗಳು

ಯಶವಂತ ಚಿತ್ತಾಲರು ಕನ್ನಡ ಸಾಹಿತ್ಯಲೋಕ ಕಂಡ ಅತ್ಯದ್ಭುತ ಕತೆಗಾರ. ಅವರ ಕತೆಗಳಲ್ಲಿನ ನೇಟಿವಿಟಿ ,  ಆಳವಾದ ಪಾತ್ರಚಿತ್ರಣ , ಗಹನವಾದ ಕಥಾವಸ್ತು ಓದುವಾಗ ಒಂದು ವಿಶಿಷ್ಟ ಅನುಭವ ನೀಡುತ್ತವೆ, ನಂತರವೂ ಬಹುಕಾಲ ಕಾಡುತ್ತವೆ. ತಮ್ಮ ಕತೆಗಳ ಪಾತ್ರಗಳ ಮುಖಾಂತರ ಅವರು ನಡೆಸುವ ಮಾನವನ ಮನದಾಳದ ಮೂಲಭೂತ ಗುಣಗಳ ವಿಶ್ಲೇಷಣೆ ಓದುಗರನ್ನು ಚಿಂತನೆಗೆ ಹಚ್ಚುತ್ತದೆ.

  ಚಿತ್ತಾಲರ ಹೆಚ್ಚಿನ ಕತೆಗಳಲ್ಲಿ ಒಂದು ವಿಧದ ನಿಗೂಢತೆಯಿರುತ್ತದೆ . ಆ ನಿಗೂಢತೆ ಕತೆಯಲ್ಲೆ ಇರಬಹುದು ಅಥವಾ ಪಾತ್ರಗಳ ಮನಸ್ಥಿತಿಯಲ್ಲಿರಬಹುದು .ಅವರ ಕೆಲವು ಕತೆಗಳನ್ನು ಓದುತ್ತ ಸಾಗಿದಂತೆ ನಮ್ಮೊಳಗಿನ ಯಾವುದೋ ಕೊಳಕೊಂದು ಅಲ್ಲಿನ ಪಾತ್ರಗಳ ಸ್ವಮಿಮರ್ಶೆಯ ಸಾಲುಗಳಲ್ಲಿ ಹೊರಬಂದಂತೆನ್ನಿಸಿಬಿಡುತ್ತದೆ  . 

ಇತ್ತೀಚೆಗೆ ನಾನು ಓದಿದ ಅವರ " ಅಪಘಾತ " ಎಂಬ ಸಣ್ಣ ಕತೆ ನನಗೆ ತುಂಬ ಇಷ್ಟವಾಯ್ತು. ನಿಜಕ್ಕೂ ಅದೊಂದು ಮಾದರಿ ಸಣ್ಣಕತೆ.

ಅದೊಂದು ಕೂಡು ಕುಟುಂಬ . ಒಬ್ಬಳು ವಯಸ್ಸಾದ ತಾಯಿ ; ಸುರೇಶ , ಸುಭಾಷ , ಸುಧಾಕರ ಎಂಬ ಒಂದೇ ಅಕ್ಷರದಿಂದ ಪ್ರಾರಂಭವಾಗುವ ಹೆಸರನ್ನುಳ್ಳ ಆಕೆಯ ಮಕ್ಕಳು ಮತ್ತವರ ಹೆಂಡತಿಯರು ಎಲ್ಲರೂ ಒಳ್ಳೆಯ ರೀತಿಯಲ್ಲಿ , ಅನ್ಯೋನ್ಯವಾಗಿದ್ದಾರೆ. ಒಂದು ದಿನ ಮೂರು ಗಂಡು ಮಕ್ಕಳೂ ಕೆಲಸದಿಂದ ಇನ್ನೇನು ವಾಪಾಸ್ ಬರುವ ಹೊತ್ತು ,   ಬಸುರಿಯಾದ ಕಿರೀ ಸೊಸೆಯನ್ನು ಹೆರಿಗೆಗೆಂದು ಅವಳಣ್ಣ ಕರೆದೊಯ್ಯಲು ಬಂದಿದ್ದಾನೆ , ಆಗ " ಎಸ್.ವಿ.ಕುಲಕರ್ಣಿ" ಟ್ರೈನ್ ಆಕ್ಸಿಟೆಂಟ್ ನಲ್ಲಿ ಸತ್ತರು ಎಂಬ ಸುದ್ದಿ  ತಿಳಿಯುತ್ತದೆ.  ಮೂರು ಜನರೂ  ಅವರವರ ಆಫೀಸ್ನಲ್ಲಿ ಎಸ್ ವಿ ಕುಲಕರ್ಣಿ ಎಂಬ        ಹೆಸರಿನಿಂದಲೇ  ಗುರುತಿಸಲ್ಪಡುತ್ತಿದ್ದುದರಿಂದ ಅದರಲ್ಲಿ ಸತ್ತವರು ಯಾರು ಎಂಬುದು    ತಿಳಿಯದೇ  ಎಲ್ಲರೂ     ಗೊಂದಲಕ್ಕೊಳಗಾಗುತ್ತಾರೆ.     

ತಾಯಿಗೇನೋ ಎಲ್ಲ ಮಕ್ಕಳೂ ಒಂದೇ ಆದ್ದರಿಂದ ಅದರಲ್ಲಿ ಯಾರೊ ಒಬ್ಬರು ಸತ್ತರು ಎಂಬ ವಾರ್ತೆ ಕೇಳಿ ದುಖಃದಿಂದ  ಮೂರ್ಛಿತಳಾಗುತ್ತಾಳೆ. ಆದರೆ ಸೊಸೆಯಂದಿರಿಗೆ  ಈ ಅನಿಶ್ಚಿತ ಸಾವಿನ ಸುದ್ದಿ ಬಗೆಬಗೆಯ ಭಾವನೆಗಳ ತಾಕಲಾಟಕ್ಕೆ ಕಾರಣವಾಗುತ್ತದೆ. ಸತ್ತವನು ತನ್ನ ಗಂಡನಾಗದಿರಲೆಂಬ ಪ್ರಾರ್ಥನೆ.....ಸತ್ತವನು ತನ್ನ ಗಂಡನಲ್ಲದಿದ್ದರೂ ಉಳಿದಿಬ್ಬರಲ್ಲಿ ಒಬ್ಬನಾಗುವುದರಿಂದ ಹಾಗೆ ಪ್ರಾರ್ಥಿಸುವುದೂ ತಪ್ಪೇನೋ ಎಂಬ ಅಪರಾಧಿಪ್ರಜ್ಞೆ ಮೂವರಲ್ಲೂ ಕಾಡುತ್ತದೆ.

ಮೈದುನರ ಮೇಲೆ ಎಷ್ಟೇ ಪ್ರೀತಿವಾತ್ಸಲ್ಯ ಇದ್ದರೂ ತನ್ನ ಗಂಡ ಸುರಕ್ಷಿತವಾಗಿ ವಾಪಾಸ್ ಬಂದಿದ್ದನ್ನು ಕಂಡು ಸಂತೋಷಿಸಿದ ತನ್ನ ಮನದ ಸ್ವಾರ್ಥಕ್ಕೆ ತಾನೇ ನೊಂದುಕೊಳ್ಳುತ್ತಾಳೆ ಹಿರಿಯಸೊಸೆ.

ಚಿತ್ತಾಲರು ಆ ಮೂವರು ಸೊಸೆಯರ ಮುಖಾಂತರ , ಸ್ವಕೇಂದ್ರಿತ ಮನೋಭಾವ , ಸ್ವಾರ್ಥ, ಮಾನವರ ಮೂಲಗುಣವೆಂಬುದನ್ನು ಸಮರ್ಥವಾಗಿ ನಿರೂಪಿಸುತ್ತಾರೆ.

ಮಳೆಯನ್ನು ಒಂದು ರೂಪಕವಾಗಿ ಕತೆಯುದ್ದಕ್ಕೂ ಬಳಸಿಕೊಂಡಿರುವ ರೀತಿ ಅದ್ಭುತ.  ಪ್ರತೀ ಸನ್ನಿವೇಶದಲ್ಲಿ ಮಳೆಯನ್ನು ಬಳಸಿಕೊಂಡೇ ಕತೆಯ ಭಾವವನ್ನು ನಮ್ಮ ಮನದಾಳಕ್ಕೆ ಇಳಿಸುತ್ತಾರೆ ಚಿತ್ತಾಲರು.

ಚಿತ್ತಾಲರ " ಸಮಗ್ರ ಕತೆಗಳು "  ಓದುವಾಗ ನನಗನ್ನಿಸಿದ್ದನ್ನು ಇಲ್ಲಿ ಅಕ್ಷರರೂಪಕ್ಕಿಳಿಸಿದ್ದೇನೆ .......ನಿಮ್ಮ ಅನಿಸಿಕೆಗಳಿಗೂ ಸ್ವಾಗತ .

                                                                                                                                                                        

6 comments:

  1. ಈ ಕಥೆ ಮನುಷ್ಯನ ಸ್ವಾರ್ಥಗುಣದ ಪ್ರತಿಬಿಂಬ... ಚಿತ್ತಾಲರ ಈ ಪುಸ್ತಕವನ್ನು ಓದಬೇಕೆನಿಸುತ್ತಿದೆ...

    ReplyDelete
  2. ನನ್ನ ನೆಚ್ಚಿನ ಕಥೆಗಾರರಲ್ಲಿ ಚಿತ್ತಾಲರು ಒಬ್ಬರು... ಅವರ "ಕತೆಯಾದಳು ಹುಡುಗಿ" ಸಂಕಲನದ ಮೂಲಕ ಅವರ ಕತೆಗಳನ್ನು ಓದಲು ಶುರು ಮಾಡಿದೆ.. ಅವರ ಒಂದೊಂದು ಕತೆ ಒಂದೊಂದು ರೀತಿಯಲ್ಲಿ ಕಾಡಿದೆ.. ಅವರ ಸಮಗ್ರ ಕತೆಗಳು ಪುಸ್ತಕವನ್ನು ಸಧ್ಯಕ್ಕೆ ಅರ್ಧ ಓದಿದ್ದೇನೆ ..

    ReplyDelete
  3. ಬರೆದದ್ದೇನೋ ಚನ್ನಾಗಿದೆ. ಆದರೆ ಕಥೆ ಪೂರ್ತಿ ಓದಬೇಕೆನಿಸುತ್ತಿದೆ...
    ಧನ್ಯವಾದ.... ಖಂಡಿತ ೋದಿ ನೋಡುತ್ತೇನೆ......

    ನೀವೂ ಬರೆಯುತ್ತಿರಿ......

    ReplyDelete
  4. ಪ್ರೀತಿಯ ಸುಧಾ ಮೇಡಮ್..

    ನನಗೆ ಚಿತ್ತಾಲರ ಕಥೆಗಳಿಗಿಂತ ಅವರ ಬಿಡಿಬರಹಗಳು ಹೆಚ್ಚು ಇಷ್ಟವಾಗುತ್ತವೆ ಮತ್ತು ಕಾಡುತ್ತವೆ. ಅದರೊಳಗೆ ಅವರ ಕತೆಗಳ ಎಳೆಗಳು ಕಾಣಿಸಿಕೊಳ್ಳುವುದರಿಂದ ಲೇಕಕ-ಕಥೆ-ಓದುಗ..ಹೀಗೆ ತ್ರಿಕೋನೀಯ ಸಂವಾದವೊಂದನ್ನು ಅವರ ಬಿಡಿ ಬರಹಗಳು ಸೃಷ್ಟಿಸುತ್ತವೆ.

    2009ರಲ್ಲಿರಬೇಕು...ಚಿತ್ತಾಲರ 'ಅಂತಃಕರಣ' ಎಂಬ ಬರಹಗಳ ಸಂಕಲನ ಕ್ರೈಸ್ಟ್'ನ ಕನ್ನಡ ಸಂಘದಲ್ಲಿ ಬಿಡುಗಡೆಯಾಗಿತ್ತು. ಬಿಡುಗಡೆಗೆ ಚಿತ್ತಾಲರು ಬರಲಿಕ್ಕಾಗಿರಲಿಲ್ಲ-ಆರೋಗ್ಯದ ಕಾರಣಕ್ಕೆ. ಆದರೆ ಪುಟ್ಟ ಟಿಪ್ಪಣಿಯೊಂದನ್ನು ಕಳುಹಿಸಿದ್ದರು. ಅದನ್ನು ಕಾರ್ಯಕ್ರಮದಲ್ಲಿ ಓದಲಾಯಿತು. ಆ ಬರಹ ನಿಜಕ್ಕೂ 'ಅಂತಃಕರಣ'ದಿಂದಲೇ ಕೂಡಿತ್ತು. ಆದರೆ ನನಗೊಂದು ಬೇಸರವಿದೆ-ಚಿತ್ತಾಲರಂಥ ಲೇಖಕರನ್ನು ಜಾತಿ-ಧರ್ಮದ ಬಣ್ಣ ಹಚ್ಚಿ ನೋಡುವುದು, ಅವರು ನಮ್ಮ ಜಾತಿಯವರು ಅಂತ 'ಬ್ರ್ಯಾಂಡ್' ಮಾಡುವುದು ಅಥವಾ ಅವರು ನಮ್ಮ ಜಾತಿಯವರಲ್ಲ ಎಂದು ಹೀಗಳೆಯುವುದು..ಇದೆಲ್ಲಾ ನಡೆಯುತ್ತಿರುತ್ತದೆ. ಹೊಸ ತಲೆಮಾರು ಅದಕ್ಕೆಲ್ಲಾ ಕಿವಿಗೊಡದಿದ್ದರೆ, ಕಿವಿಗೊಟ್ಟರೂ ಆ ಸಂಗತಿಗಳನ್ನು ಮನಸ್ಸಿಗೆ ಬಿಟ್ಟುಕೊಳ್ಳದಿದ್ದರೆ ಒಳಿತು..

    -ಸಹ್ಯಾದ್ರಿ ನಾಗರಾಜ್

    ReplyDelete
  5. ನನ್ನ ಅತ್ಯಂತ ಮೆಚ್ಚುಗೆಯ ಕಥೆಗಾರ ಯಶವಂತ ಚಿತ್ತಾಲರು. ಈ ಬರಹ ನನಗೆ ಮತ್ತೆ ಅವರತ್ತ ಕೊಂಡೊಯಿತು.

    ReplyDelete
  6. nagoo ee kate tumbaa isTa aagittu mattu mumbai dooradarshanadalli e kate marathiyalli adhbutavaagi moodibandittu, aadare adannu chittaalaru baredaddu anta naanu kannada kalita mele gottaagiddu. eega naanu avara barahada fan. avaru bareda ella pustakagaLu nannallive endu heLikoLLalu hemme
    :-)
    malathi akka

    ReplyDelete