21 Jan 2014

ಹಳದಿ ಪಟ್ಟೆಯ ಕಂದು ಸುಂದರಿ ಮತ್ತವಳ ಸಂಸಾರ


ಈ ಹಳದಿ ಪಟ್ಟೆಗಳ ಕಂದು ಸುಂದರಿ  ಅಪಾರ್ಟ್ಮೆಂಟಿನ ಮೆಟ್ಟಿಲುಗಳಿರುವ ಜಾಗದ ಮಾಡಿನ ಮೂಲೆಯಲ್ಲಿ ತುಂಬಾ ದಿನದಿಂದ ಇದ್ದಳು. ಬಹುಶ: ಕಸ ಗುಡಿಸುವವರಾಗಲೀ ಅಥವಾ ಕಟ್ಟಡದ ಉಳಿದ ನಿವಾಸಿಗಳಾಗಲಿ ಇವಳನ್ನು ಗಮನಿಸಿರಲಿಲ್ಲ.


ಸುಮಾರು ದಿನಗಳಿಂದ ಪ್ರತೀ ದಿನ ನಾನಿವಳನ್ನ ಗಮನಿಸುತ್ತಿದ್ದೆ. ನಾನು ನೋಡಿದಾಗಲೆಲ್ಲ ಸ್ಥಬ್ದಳಾಗಿರುತ್ತಿದ್ದ ಇವಳಿಗೆ ಜೀವವಿದೆಯೋ ಇಲ್ಲವೋ ಎಂಬ ಅನುಮಾನ ಬಂದಿತ್ತು. ಹೀಗಿರುವಾಗಲೇ ಒಂದು ದಿನ ಅವಳ ತೆಳುವಾದ ರೇಷ್ಮೆ ನಾರುಗಳ ಮನೆಯಲ್ಲಿ ಅವಳಂತೆಯೆ ಕಾಣುವ ಇನ್ನೂ ನಾಲ್ಕು ಆಕಾರಗಳು ಕಾಣಿಸಿದ್ದವು .


ಅವು ನೋಡಲು ಇವಳಂತೆಯೆ ಕಂಡರೂ , ಇವಳಂತೆ ಜೀವವಿರುವ ಜೀವಿಗಳಾಗಿರಲಿಲ್ಲ. ಆದರೆ ಅವುಗಳೊಳಗೆ ಸಾವಿರಾರು ಪುಟ್ಟ ಜೀವಗಳ ಬೀಜಾಂಕುರವಿತ್ತು. ನಿಜ ಅವುಗಳು ಈ ನಮ್ಮ ಹಳದಿ ಸುಂದರಿಯ ಮೊಟ್ಟೆಗಳಿದ್ದ ಕೋಶಗಳಾಗಿದ್ದವು. ಮೊಟ್ಟೆಗಳನ್ನು ತಿನ್ನುವ ಕೀಟ, ಹುಳು ಹಪ್ಪಟೆಗಳಿಂದ ತನ್ನ ಸಂತಾನವನ್ನು ರಕ್ಷಿಸಿಕೊಳ್ಳಲು ಈ ಹಳದಿ ಸುಂದರಿ ಅವುಗಳನ್ನು ಆಕಾರದಲ್ಲಿ ತನ್ನಂತೆಯೆ ಕಾಣುವ ಚೀಲದಲ್ಲಿಟ್ಟಿದ್ದಳು.

ಈಗ ನಾನು ಪ್ರತೀ ದಿನವೂ ಇವಳ ಸಂಸಾರ ಯಾರ ಕಣ್ಣಿಗೂ ಬೀಳದಿರಲಿ, ಯಾರೂ ಅವಳನ್ನು ಗುಡಿಸಿ ಆಚೆ ಎಸೆಯದಿರಲಿ ಅಂದುಕೊಳ್ಳುತ್ತಲೇ ಮೆಟ್ಟಿಲ ಬಳಿ ಬರುತ್ತಿದ್ದೆ. ಅಲ್ಲಿ ಆಕೆ ಎಂದಿನಂತೆಯೆ ಸ್ಥಬ್ದಳಾಗಿ ಕುಳಿತಿರುತ್ತಿದ್ದಳು.


[ಇವಳ ಬಾಹ್ಯ ಲಕ್ಷಣಗಳನ್ನು ಗಮನಿಸಿದಾಗ  ಬಹುಶಃ Argiope ಪ್ರಜಾತಿಗೆ ಸೇರಿರಬೇಕೆಂದೆನ್ನಿದರೂ , ಈ ಜಾತಿಯ  ಜೇಡಗಳ ಬಲೆಯಲ್ಲಿ ಕಂಡುಬರುವ ಬಿಳಿಯ ಬಣ್ಣದ ಎಳೆಗಳ ಎಕ್ಸ್ ಆಕಾರ ಇವಳ ಬಲೆಯಲ್ಲಿ ನನಗೆ ಕಾಣಿಸಲಿಲ್ಲ. ಅಥವಾ ಎತ್ತರದಲ್ಲಿದ್ದುದರಿಂದ ಅಷ್ಟೆಲ್ಲ ಸೂಕ್ಷ್ಮವಾಗಿ ನೋಡಲು ಸಾಧ್ಯವಾಗದಿದ್ದುದರಿಂದ ಅದು ಕಾಣಿಸದಿರಬಹುದು , ಕ್ಯಾಮರ ಕೂಡ ಅಷ್ಟೆಲ್ಲ ಝೂಮ್ ಮಾಡಲು ಸಾಧ್ಯವಾಗಲಿಲ್ಲ]
ಈ ಜೇಡಗಳು ಮೊಟ್ಟೆಯಿಡುವ ಕ್ರಮ ವಿಶಿಷ್ಟ. ನಾಲ್ಕಾರು ಕೋಶಗಳನ್ನು ತನ್ನ ಬಲೆಯ ಮೂಲೆಯಲ್ಲೆಲ್ಲೋ ಅಂಟಿಸಿರುತ್ತದೆ.  ಒಂದೊಂದು ಕೋಶದೊಳಗೆ  ಐವತ್ತರಿಂದ - ನೂರು ಮೊಟ್ಟೆಗಳಿರುತ್ತವೆ. ಮೊಟ್ಟೆಗಳು ಆ ಕೋಶದೊಳಗೇ ಬೆಳೆದು ಮರಿಗಳಾಗುತ್ತವೆ. ಸ್ವಲ್ಪ ಕಾಲ ಅದರಲ್ಲೆ ಬೆಳೆಯುತ್ತವೆ ನಂತರ ಅದನ್ನೊಡೆದು ಹೊರಬರುತ್ತವೆ. 

ಸುಮಾರು ತಿಂಗಳಾಗಿತ್ತೇನೋ ನಾನವಳ ಸಂಸಾರವನ್ನು ಗಮನಿಸುತ್ತ ...ಇನ್ನೇನು ಸಧ್ಯದಲ್ಲಿ ಆ ಕೋಶಗಳಿಂದ ನೂರಾರು ಮರಿ ಜೇಡಗಳು ಹೊರಬರಬಹುದೆಂಬ ನಿರೀಕ್ಷೆಯಲ್ಲಿದ್ದೆ. ಆದರೆ ಅಷ್ಟರಲ್ಲೆ ಒಂದು ದಿನ ಅದು ಕಸ ಗುಡಿಸುವವರ ಕಣ್ಣಿಗೆ ಬಿದ್ದು ಗುಡಿಸಿ, ಕೆಳಗೆ ಬೀಳಿಸಿದರು .  ಹೋಗಿ  ಕೋಶಗಳನ್ನು ಬಿಡಿಸಿ ನೋಡಿದರೆ ಒಳಗೆ ಬಿಳಿ ಬಿಳಿಯ ನೂರಾರು ಮರಿಜೇಡಗಳು ಹೀಗೆ ಮಿಜಿಗುಡುತ್ತಿದ್ದವು.





ಇಷ್ಟೊಂದು ಮರಿಗಳು ಹೊರಬಂದಿದ್ದರೆ ಕಟ್ಟಡವನ್ನೆಲ್ಲಾ ಬಲೆಯಿಂದಲೇ ತುಂಬಿಸಿಬಿಡುತ್ತಿದ್ದವೆ? ಇಲ್ಲ ಹಾಗೇನಾಗುತ್ತಿರಲಿಲ್ಲ ಈ ಕೆಳವರ್ಗದ ಜೀವಿಗಳಲ್ಲಿ ಅನೇಕ ಜೀವಗಳು ಬೇರೆ ಜೀವಿಗಳ  ಆಹಾರವಾಗಲೆಂದೇ ಹುಟ್ಟುತ್ತವೆ . ಹಾಗಾಗಿ ಈ ಮರಿಗಳು ಹೊರಬರುತ್ತಿದ್ದಂತೆಯೆ ಇದನ್ನು ಹಿಡಿದು ತಿನ್ನಲು , ಹಲ್ಲಿಯೋ , ಜಿರಲೆಯೋ ಕಾದಿರುತ್ತಿತ್ತು.


ಇಷ್ಟು ಮರಿಗಳಲ್ಲಿ ನಾಲ್ಕಾರಾದರೂ ಹೇಗೋ ಬದುಕುಳಿದು ತಮ್ಮ ಸಂತತಿ ಮುಂದುವರೆಸುತ್ತಿದ್ದವು ಆಷ್ಟೆ.  ಆದರೆ ಅವಧಿಗೆ ಮುನ್ನವೇ ಹೊರಬರುವಂತಾದದ್ದರಿಂದ ಇವು ಬದುಕುಳಿಯಬಲ್ಲವೆ?  ಅನುಮಾನ ....ನಾನು ಹೀಗೆ ಯೋಚಿಸುವಾಗಲೇ ಬಂದ ಕಸದ ಗಾಡಿಯವ ಎಲ್ಲ ಕಸದ ಜೊತೆ ಇವುಗಳನ್ನೂ ಸೇರಿಸಿಕೊಂಡು ಹೊರಟೇಹೋದ .

7 comments:

  1. ಸುಮಾ, ಈಗ ಕೀಟಗಳನ್ನ ನೋಡಿದ್ರೆ ಅವುಗಳ ಬಗ್ಗೆ ತಿಳ್ಕೊಳೋಣ ಅನ್ಸತ್ತೆ.
    ಥ್ಯಾಂಕ್ಸ್ ನಿಮಗೆ. ನಿಮ್ಮದೇ ನೆನಪಾಗತ್ತೆ

    ReplyDelete
    Replies
    1. ಧನ್ಯವಾದಗಳು ಸ್ವರ್ಣ . ನಿಮ್ಮ ಈ ಮಾತುಗಳಿಂದ ನಿಜಕ್ಕೂ ದೊಡ್ಡ ಬಹುಮಾನ ಸಿಕ್ಕಷ್ಟು ಖುಷಿಯಾಯ್ತು

      Delete
  2. ಕೆಲವೊಮ್ಮೆ ಪುಟ್ಟ ಕೀಟಗಳ ಜೀವನದ ಗಮನವೇ ಇರುವುದಿಲ್ಲ ಅವುಗಳನ್ನು ಸಾಯಿಸಿಯೇ ಬಿಡುತ್ತೇವೆ. ಜೇಡ ಜಾತಿಯ ಈ ಕೀಟ ನೋಡಿರಲಿಲ್ಲ ಧನ್ಯವಾದಗಳು ಸುಮಕ್ಕ. ನೀವು ಯಾವಾಗ್ಲೂ ಕೀಟಗಳ ಬಗ್ಗೆ ಬಹಳಷ್ಟು ವಿಷಯಗಳನ್ನ ತಿಳಿಸುತ್ತಲೇ ಬಂದಿದ್ದೀರಿ.

    ReplyDelete
    Replies
    1. ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು ಸುಗುಣಾ

      Delete
  3. ಧನ್ಯವಾದಗಳು ಮಾಹಿತಿಗಾಗಿ :) ಬರೀತಾ ಇರಿ :)

    ReplyDelete
  4. ಚೆಂದ ಇದ್ದು ಜೇಡಗಳ ಬಗೆಗಿನ ಮಾಹಿತಿ.. ಆದ್ರೆ ಎಲ್ಲಾ ಸಲ ಇರೋ ತರ ಅದ್ರ ಜೈವಿಕ ಹೆಸ್ರು ಇತ್ಯಾದಿ ಮಾಹಿತಿ ಇದ್ರೆ ಇನ್ನೂ ಚೆನ್ನಾಗಿರ್ತಿತ್ತೇನೋ ಅನುಸ್ತು

    ReplyDelete
    Replies
    1. ಜೇಡ ಅಲ್ದಾ ಅದರ ಬಗ್ಗೆ ಸುಮಾರಿಗೆ ಎಲ್ಲರಿಗೂ ಗೊತ್ತಿರ್ತು ಹೇಳಿ ಅನ್ನಿಸ್ತು.....ಅದಕ್ಕೆ ಹೆಚ್ಚಿನ ಮಾಹಿತಿ ಬರೆಯಲ್ಲೆ ಪ್ರಶಸ್ತಿ .

      Delete