04-Feb-2014

ದರ್ಜಿ ಹಕ್ಕಿಯ ಬುದ್ಧಿವಂತಿಕೆ

ಕೆಲ ವರ್ಷಗಳ ಹಿಂದಿನ ಘಟನೆಯಿದು. ಅದು ನನ್ನ ಅಜ್ಜನ(ಅಮ್ಮನ ತಂದೆ) ಮನೆ . ಮನೆಯಂಗಳದಲ್ಲಿ ಅಜ್ಜ , ಮಾವ  ಇಷ್ಟಪಟ್ಟು ಬೆಳೆಸಿರುವ ತರಹೇವಾರು ಮರಗಿಡಗಳಿವೆ.   ಮನೆಯ  ಸೂರಿನಂಚಿಗೆ ಹೊಂದಿಕೊಂಡಂತೆ  ದಟ್ಟವಾಗಿ ಹಬ್ಬಿರುವ ಸುಂದರವಾದ ಹೂವಿನ ಬಳ್ಳಿಯೊಂದಿದೆ.  ಆ  ಬಳ್ಳಿಯಲ್ಲಿ ಕುಳಿತು  ಒಂದು ಜೋಡಿ   ಪುಟ್ಟ ಹಕ್ಕಿಗಳು ಚಿಲಿಪಿಲಿಗುಟ್ಟುತ್ತಿದ್ದವು. ಹೂವಿನ ಮಕರಂದ ಹೀರಲು ಬಂದಿರಬಹುದೆಂದುಕೊಂಡಿದ್ದೆ. ಆದರೆ ಅಲ್ಲಿ ಅವು ಗೂಡು ಕಟ್ಟಿ ಮೊಟ್ಟೆಯಿಟ್ಟಿದ್ದಾವೆಂದು ತಿಳಿದಾಗ ತುಂಬಾ ಆಶ್ಚರ್ಯವಾಗಿತ್ತು
ಯಾರಾದರೂ ಗೂಡಿನ ಬಳಿ ಹೋದರೆ ಅವೆರಡೂ ಹಕ್ಕಿಗಳು ಪುರ್ರೆಂದುಹಾರಿ ಅಂಗಳದ ದಾಸವಾಳ ಗಿಡದಲ್ಲಿ ಕುಳಿತು ಜೋರಾಗಿ ಕಿರುಚಾಡುತ್ತಿದ್ದವು. ಮಾವನ ಮಕ್ಕಳು ದಿನಾ ಬೆಳಿಗ್ಗೆ ಎದ್ದೊಡನೆ ಈ ಹಕ್ಕಿ ಗೂಡಿನ ಬಳಿ ಬಂದು ನೋಡುತ್ತಿದ್ದರು. ಆದರೆ ಮಾವ ಅದನ್ನು ಯಾವ ಕಾರಣಕ್ಕೂ ಮುಟ್ಟಬಾರದೆಂದು ಹೆದರಿಸಿದ್ದರಿಂದ ಮುಟ್ಟುತ್ತಿರಲಿಲ್ಲ.

ಅವುಗಳ ಪುಟ್ಟ ತೊಟ್ಟಿಲಿನಂತಹ ಗೂಡು ಇರುವ ಜಾಗದ ಕೆಳಗೆ ಮನೆಯ ನಾಯಿ ಚೆನ್ನ ಮಲಗುವ ಜಾಗ ಬೇರೆ . ಹಕ್ಕಿಗಳು ಅಲ್ಲಿ ಶಬ್ದ ಮಾಡಿದಂತೆಲ್ಲ ಚೆನ್ನ ಅವುಗಳೆಡೆಗೆ ನೋಡುತ್ತಾ ಬೊಗಳುತ್ತಿತ್ತು . ಅದರ ದೊಡ್ಡ ಧ್ವನಿಯ ಬೊಗಳುವಿಕೆಗೆ ಚಿಕ್ಕಾಸಿನ ಬೆಲೆಯನ್ನೂ ಕೊಡದೆ ಆ ಹಕ್ಕಿ ಜೋಡಿ ತಮ್ಮ ಸಂತಾನದ ಪೋಷಣೆಯಲ್ಲಿ ನಿರತವಾಗಿದ್ದವು.

ಮಾವನ ಸಣ್ಣ ಮಕ್ಕಳು ಓಡಾಡುವ , ಆಟವಾಡುವ ಜಾಗದ ಅಷ್ಟು ಹತ್ತಿರದಲ್ಲಿ ಆ ಹಕ್ಕಿಗಳು ಗೂಡು ಕಟ್ಟಿದ್ದಾದರೂ ಹೇಗೆ ?  
ಸಾಮಾನ್ಯವಾಗಿ ಹಕ್ಕಿಗಳು , ಮಾನವರ ಕೈಗೆ ಸಿಕ್ಕದಂತೆ , ಅವರ ಗಮನಕ್ಕೆ ಬಾರದಂತಹ ಜಾಗದಲ್ಲಿ ಗೂಡು ಕಟ್ಟುತ್ತವೆ ಎಂಬುದು ನನ್ನ ನಂಬಿಕೆಯಾಗಿತ್ತು. ಆದರೆ ಈ ಹಕ್ಕಿಗೆಲ್ಲೋ ಬುದ್ಧಿ ಸ್ವಲ್ಪ ಕಡಿಮೆಯಿರಬೇಕು ಎಂದು ತೀರ್ಮಾನಿಸಿ ಸುಮ್ಮನಾಗಿದ್ದೆ.
ಆದರೆ ಇತ್ತೀಚೆಗೆ " ಪಕ್ಷಿ-ನೋಟ " ಅಂಕಣಕ್ಕಾಗಿ ದರ್ಜಿ ಹಕ್ಕಿಯ ಬಗ್ಗೆ ಓದುತ್ತಿದ್ದಾಗ ನನಗೆ ಆ ಹಕ್ಕಿಗಳ ವರ್ತನೆಗೆ ಕಾರಣ ತಿಳಿಯಿತು.

ವಿಜಯಕರ್ನಾಟಕದ ಸಾಪ್ತಾಹಿಕದಲ್ಲಿ ಮಕ್ಕಳಿಗಾಗಿ ನಾನು ಬರೆಯುವ ಪುಟ್ಟ ಅಂಕಣ
ಈ ದರ್ಜಿ ಹಕ್ಕಿಗಳು ಪುಟ್ಟ ಗಾತ್ರದ ಹಕ್ಕಿಗಳು. ಸಾಮಾನ್ಯವಾಗಿ ಮಾನವರ ವಾಸಸ್ಥಾನದ  ಹತ್ತಿರವೇ ತಮ್ಮ ವಿಶಿಷ್ಟವಾದ ಗೂಡನ್ನು ಕಟ್ಟುತ್ತವೆ. ಗಿಡಮರಗಳ ದೊಡ್ಡದಾದ ಎಲೆಯೊಂದನ್ನು ತೊಟ್ಟಿಲಿನಾಕಾರದಲ್ಲಿ ಬಾಗಿಸಿ , ಗಿಡಮರಗಳ ನಾರು , ಜೇಡರಬಲೆಗಳನ್ನು ಬಳಸಿ  ಜೋಡಿಸುತ್ತದೆ. ಆ ಎಲೆಯ ತೊಟ್ಟಿಲಿನೊಳಗೆ ನಾರು , ಒಣಕಡ್ಡಿಗಳನ್ನು ಬಳಸಿ ಪುಟ್ಟ ಕಪ್ ಆಕಾರದ ಗೂಡು ನಿರ್ಮಿಸುತ್ತದೆ. ಅದು ನಿರ್ಮಿಸುವ ಇಂತಹ ಸುಂದರ ಗೂಡು ಹೊಲೆದಂತೆ ಕಾಣುವುದರಿಂದ ಅದಕ್ಕೆ ದರ್ಜಿ ಹಕ್ಕಿ ಎಂದು ಹೆಸರು.

ದರ್ಜಿ ಹಕ್ಕಿಯ ತೊಟ್ಟಿಲಿನಾಕಾರ ಗೂಡು.

ಇದರ ಮೊಟ್ಟೆಗಳಿಗೆ ಬಹುದೊಡ್ಡ ಶತ್ರು ಹಾವು. ಅದರಿಂದ ತಪ್ಪಿಸಿಕೊಳ್ಳಲಿಕ್ಕಾಗಿಯೆ ಅವು ಸಾಧ್ಯವಾದಷ್ಟು ಮನೆಗಳಿಗೆ ಸಮೀಪದಲ್ಲಿ ಗೂಡು ಕಟ್ಟುತ್ತವೆ.
ನನಗೀಗ ಅಜ್ಜನ ಮನೆಯಲ್ಲಿ ಗೂಡು ಕಟ್ಟಿದ್ದ ಆ ಹಕ್ಕಿಗಳು ಹೇಗಿದ್ದವೆಂಬ ನೆನಪಿಲ್ಲದಿದ್ದರೂ , ಅವುಗಳ ವರ್ತನೆಯಿಂದಾಗಿ ಬಹುಶಃ ಅವು ದರ್ಜಿ ಹಕ್ಕಿಗಳೇ ಇರಬೇಕೆಂದು ತೀರ್ಮಾನಿಸಿದ್ದೇನೆ.  ಅದೆಷ್ಟು ಬುದ್ಧಿವಂತಿಕೆಯಿಂದ ಅವುಗಳು ಆ ಸ್ಥಳವನ್ನು ಆಯ್ಕೆ ಮಾಡಿಕೊಂಡಿದ್ದವೆಂಬುದು ಈಗ ಅರ್ಥವಾಗುತ್ತಿದೆ. ಮನೆಯ ಬಳಿ ಅದೂ ನಾಯಿ ಮಲಗುವ ಜಾಗದ ಸಮೀಪದಲ್ಲಿ ಹಾವು ಬರಲಾರದು , ಬಂದರೂ ನಾಯಿ ಅಥವಾ ಮನೆ ಜನಗಳು ಅದನ್ನು ಓಡಿಸುತ್ತಾರೆ ...ಹೇಗಿದೆ ಆ ಪುಟ್ಟ ಹಕ್ಕಿಯ ಬುದ್ಧಿವಂತಿಕೆ ?

ಪ್ರಕೃತಿಯೆಂಬ ಮಹಾತಾಯಿಯೆ ಹೀಗೆ ಅದೆಷ್ಟೆ ಚಿಕ್ಕ ಜೀವಿಯಾದರೂ ಅವು ಬಾಳಿ ಬದುಕುವುದಕ್ಕೆ , ತಮ್ಮ ಸಂತತಿಯನ್ನು ಮುಂದುವರೆಸಲಿಕ್ಕೆ  ಅವಶ್ಯಕವಾದ ಜ್ಞಾನವನ್ನು ಖಂಡಿತಾ ಕೊಟ್ಟಿರುತ್ತಾಳೆ . ನಾವು ಮನುಷ್ಯರು ನಮಗೆ ಮಾತ್ರ ಬುದ್ಧಿಯಿರೋದು ಎಂಬ ಹಮ್ಮಿನಲ್ಲಿ ನಮ್ಮ ಮೂಗಿನ ನೇರಕ್ಕೆ ಎಲ್ಲವನ್ನೂ ನೋಡುತ್ತೇವಷ್ಟೆ .

2 comments:

 1. ಅರೆರೆ ದರ್ಜೀ ಹಕ್ಕಿ ಏನು ನಿನ್ನ ಐಡೀರಿಯಾ ಅಂತೀನಿ.

  ReplyDelete
 2. ® ಲೇಖನಗಳನ್ನೂ ನೋಡಿ ತುಂಬಾ ಸಂತೋಷವಾಯಿತು.
  visit my site

  http://spn3187.blogspot.in/

  Also say Your Friends
  Find me

  ReplyDelete